ಉಪಭಾಷೆಗಳು
ಉಪಭಾಷೆಗಳು: ಇತ್ತೀಚೆಗೆ ‘ಉಪಭಾಷೆ’ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ‘ಡಯಲೆಕ್ಟ್’ ಮೂಲತಃ ಗ್ರೀಕ್ ಪದ (dialektos = conversation). ಇದು ಲ್ಯಾಟಿನ್ ಮತ್ತು ಫ್ರೆಂಚ್ ಭಾಷೆಗಳ ಮೂಲಕ ಇಂಗ್ಲಿಷಿಗೆ ಬಂದಿದೆ. 16ನೆಯ ಶತಮಾನದ ಇಂಗ್ಲಿಷ್ ವಿದ್ವಾಂಸರು ಆ ಮಾತನ್ನು ಶಿಷ್ಟೇತರ ಜನ ಅಥವಾ ಅವಿದ್ಯಾವಂತರು ಆಡುವ ಭಾಷಾಪ್ರಭೇದ ಎಂಬರ್ಥದಲ್ಲಿ ಬಳಸಿದ್ದಾರೆ. ಆದರೆ ಶಿಷ್ಟ ಭಾಷೆಯೂ (ಸ್ಟ್ಯಾಂಡರ್ಡ್ ಲ್ಯಾಂಗ್ವೇಜ್) ಒಂದು ಉಪಭಾಷೆಯೇ ಆಗಿದೆ. ‘ಉಪಭಾಷೆ’ ಎಂಬ ಮಾತನ್ನು ಇದೇ ಎಚ್ಚರಿಕೆಯಿಂದಲೇ ತೆಗೆದುಕೊಳ್ಳಬೇಕು. ಉಪಭಾಷೆಯೆಂದಾಗ ಪ್ರಧಾನಭಾಷೆಯೊಂದಿದೆ ಎನ್ನುವ ಅರ್ಥ ಬರುತ್ತದೆ. ಆದರೆ ಒಂದು ಭಾಷಾ ಪ್ರದೇಶದಲ್ಲಿ ಕಂಡುಬರುವ ಆ ಭಾಷೆಯ ಎಲ್ಲ ಪ್ರಭೇದಗಳನ್ನೂ ಉಪಭಾಷೆಯೆಂದೇ ಕರೆಯುವರು. ಒಂದು ಭಾಷೆ ವಿಸ್ತಾರ ಪ್ರದೇಶದಲ್ಲಿ ಹಬ್ಬಿದ್ದರೆ ಅಲ್ಲಿ ಅನಿವಾರ್ಯವಾಗಿ ಉಪಭಾಷೆಗಳು ಏರ್ಪಡುತ್ತವೆ. ಆ ಪ್ರದೇಶದ ಬೇರೆ ಬೇರೆ ಭಾಗಗಳು ಪರ್ವತ, ನದಿ, ದಟ್ಟವಾದ ಕಾಡು ಅಥವಾ ಜೌಗು ಭೂಮಿ ಇತ್ಯಾದಿ ಪ್ರಾಕೃತಿಕ ಕಾರಣಗಳಿಂದ ಬೇರೆ ಬೇರೆಯಾಗಿ ವಿಭಾಗಗೊಂಡಿದ್ದರೆ, ಆಯಾ ವಿಭಾಗಗಳಲ್ಲಿ ವಾಸಿಸುವ ಜನರಿಗೆ ಇತರೆಡೆಯ ವಿಭಾಗಗಳಲ್ಲಿನ ಜನರ ಸಂಪರ್ಕ ತಪ್ಪಿ ಹೋಗಬಹುದು. ಅದರ ಫಲವಾಗಿ ಅವರ ಭಾಷೆಯಲ್ಲಿ ವೈಲಕ್ಷಣ್ಯಗಳು ಹೆಚ್ಚುತ್ತಾ ಹೋಗಿ, ಅವರ ಉಪ ಭಾಷೆಯಲ್ಲಿನ ಪ್ರತ್ಯೇಕತೆ ಕಡಿಮೆಯಾಗುತ್ತ ಹೋಗುತ್ತದೆ. ಒಂದು ಪ್ರದೇಶ ಬೇರೆ ಬೇರೆ ಆಡಳಿತಗಳಿಗೆ ಸೇರಿದ್ದರೆ, ಆಗಲೂ ಆಯಾ ಆಡಳಿತ ಪ್ರದೇಶಗಳಲ್ಲಿ ಪ್ರತ್ಯೇಕ ಉಪಭಾಷೆಗಳಾಗಬಹುದು. ಸುತ್ತ ಮುತ್ತಣ ಬೇರೆ ಬೇರೆ ಭಾಷೆಗಳ ಪ್ರಭಾವದಿಂದ ಉಪಭಾಷೆಗಳು ಏರ್ಪಡಬಹುದು. ಈ ಯಾವುದೇ ಕಾರಣಗಳಿಲ್ಲದೇ ಹೋದರೂ ವಿಸ್ತಾರ ಪ್ರದೇಶದಲ್ಲಿ ಬೇರೆ ಬೇರೆ ಭಾಗದ ಜನ ತಮ್ಮ ತಮ್ಮಲ್ಲೇ ಹೆಚ್ಚಾಗಿ ವ್ಯವಹಾರಗಳನ್ನು ನಡೆಸುವುದರಿಂದ ಅಲ್ಲೂ ಉಪಭಾಷೆಗಳು ಏರ್ಪಡಬಹುದು. ಒಂದು ಭಾಷೆಯಲ್ಲಿ ಉಪಭಾಷೆಗಳು ಏರ್ಪಟ್ಟು, ಆ ಉಪಭಾಷೆಗಳ ಜನರಲ್ಲಿ ವ್ಯವಹಾರ ಕಡಿಮೆ ಯಾದಷ್ಟೂ ಅವುಗಳಲ್ಲಿರುವ ಸಮಾನ ಅಂಶಗಳು ಕಡಿಮೆಯಾಗಿ ಭಿನ್ನತೆ ಹೆಚ್ಚಿ, ಇದೇ ಬಹಳ ಕಾಲ ಮುಂದುವರೆದರೆ ಕ್ರಮೇಣ ಆ ಉಪಭಾಷೆಗಳೇ ಸ್ವತಂತ್ರ ಭಾಷೆಗಳಾಗುತ್ತವೆ. ಒಂದು ಪ್ರದೇಶದಲ್ಲಿ ಬೇರೆ ಬೇರೆ ಭಾಷೆಗಳನ್ನಾಡುವ ಜನ ರಾಜಕೀಯ ಅಥವಾ ಧಾರ್ಮಿಕ ಕಾರಣಗಳಿಂದಾಗಿ ತಮ್ಮ ಭಾಷೆಗಳನ್ನು ಕೈಬಿಟ್ಟು ಬೇರೊಂದು ಭಾಷೆಯನ್ನು ಅಂಗೀಕರಿಸಿದಾಗ, ಆ ಭಾಷೆಗೆ ಆಯಾ ಜನ ಮೂಲ ಭಾಷೆಗಳ ಉಚ್ಚಾರಣೆ, ಪದಗಳನ್ನು ಕೈಬಿಟ್ಟು ಬೇರೊಂದು ಭಾಷೆಯನ್ನು ಅಂಗೀಕರಿಸಿದಾಗ, ಆ ಹೊಸ ಭಾಷೆಗೆ ಆಯಾ ಜನ ಮೂಲ ಭಾಷೆಗಳ ಉಚ್ಚಾರಣೆ, ಪದಗಳು, ವಾಕ್ಯರಚನೆ ಇತ್ಯಾದಿ ಅಂಶಗಳನ್ನು ಸೇರಿಸಬಹುದು. ಈ ಬೇರೆ ಬೇರೆ ಮಿಶ್ರಣಗಳಿಂದಾಗಿ ಆ ಹೊಸ ಭಾಷೆಯಲ್ಲಿ ಉಪಭಾಷೆಗಳು ರಚನೆಗೊಳ್ಳಲು ಸಾಧ್ಯವಾಗುವುದು. ಆದರೆ ಬಸ್ಸು, ರೈಲು, ವಿಮಾನ, ಆಕಾಶವಾಣಿ, ವೃತ್ತಪತ್ರಿಕೆ, ಟೆಲಿವಿಷನ್, ಪುಸ್ತಕ ಮುಂತಾದ ಸಂಪರ್ಕ ಸಾಧನಗಳು ಹೆಚ್ಚಿದಂತೆ ಉಪಭಾಷೆಗಳ ವೈಲಕ್ಷಣ್ಯಗಳು ಕಡಿಮೆಯಾಗುತ್ತ ಕ್ರಮೇಣ ಭಾಷೆಯಲ್ಲಿ ಏಕರೂಪತೆ ಹೆಚ್ಚಬಹುದು. ಇದರಿಂದ ಉಪಭಾಷೆಗಳು ಏರ್ಪಡುವುದು ಸಂಪರ್ಕದ ಕೊರತೆ ಅಥವಾ ಅಭಾವದಿಂದ ಎಂಬುದು ಸ್ಪಷ್ಟ. ಎರಡು ಬೇರೆ ಬೇರೆ ಭಾಷಾವಂಶಗಳಿಗೆ ಸೇರಿದ ಭಾಷೆಗಳನ್ನು ಪ್ರತ್ಯೇಕ ಭಾಷೆಗಳೆಂದು ಕರೆಯುತ್ತೇವೆ. ಆದರೆ ಒಂದೇ ಭಾಷಾವಂಶದ ಎರಡು ಪ್ರತ್ಯೇಕ ಭಾಷೆಗಳಿಗೂ ಒಂದು ಭಾಷೆಯ ಉಪಭಾಷೆಗಳಿಗೂ ಇರುವ ವ್ಯತ್ಯಾಸಗಳನ್ನು ಹೀಗೆ ಹೇಳಬಹುದು. ಪ್ರತಿಯೊಬ್ಬ ವ್ಯಕ್ತಿಯ ಮಾತೂ (ವ್ಯಕ್ತಿ ಭಾಷೆ) ಇನ್ನೊಬ್ಬ ವ್ಯಕ್ತಿಯ ಮಾತಿನಿಂದ ಭಿನ್ನವಾಗಿರುತ್ತದೆ. ಆ ವ್ಯತ್ಯಾಸಗಳು ಎಷ್ಟೇ ಇದ್ದರೂ ಸ್ಥೂಲವಾಗಿ ಹೇಳುವುದಾದರೆ ಒಂದು ಭಾಗದಲ್ಲಿ ವಾಸಿಸುವ ಜನರ ಮಾತುಗಳೆಲ್ಲ ಒಂದೇ ರೀತಿಯಾಗಿ ಕೇಳಿಸುತ್ತವೆ. ಒಬ್ಬ ವ್ಯಕ್ತಿಯ ಮಾತಿನಿಂದ ಆತ ಇಂಥ ಪ್ರದೇಶದವನೆಂದು ಸುಲಭವಾಗಿ ಗುರುತಿಸಬಹುದು, ಎಂದರೆ ಒಂದು ಪ್ರದೇಶದ ಜನರ ವ್ಯಕ್ತಿಭಾಷೆಗಳು ಸದೃಶವಾಗಿರುತ್ತವೆ. ಅವರಲ್ಲಿ ಪರಸ್ಪರ ಅರಿವಿನ ಶೇಕಡಾವಾರು ನೂರಕ್ಕೆ ನೂರು ಅಥವಾ ನೂರಕ್ಕೆ ತೊಂಬತ್ತೈದು ಇರಬಹುದು. ಒಂದು ಪ್ರದೇಶದ ವ್ಯಕ್ತಿಯ ಮತ್ತು ಇನ್ನೊಂದು ಪ್ರದೇಶದ ವ್ಯಕ್ತಿಯ ಪರಸ್ಪರ ಅರಿವಿನ ಶೇಕಡಾವಾರು ಸಂಖ್ಯೆ ಅರವತ್ತಕ್ಕಿಂತ ಮಿಗಿಲಾಗಿದ್ದರೆ ಅವರಿಬ್ಬರೂ ಒಂದೇ ಭಾಷೆಯ ಎರಡು ಉಪಭಾಷೆ ಗಳನ್ನು ಮಾತಾಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ (ಈ ವಿವರಣೆಯನ್ನು ನಿರ್ಣಾಯಕ ಎಂದು ಭಾವಿಸಬಾರದು. ಏಕೆಂದರೆ ಒಂದು ಭಾಷೆಯ ಸಾಮಾನ್ಯ ಉಪಭಾಷೆಗೂ ಭೌತವಿಜ್ಞಾನದಂಥ ತಾಂತ್ರಿಕ ಉಪಭಾಷೆಗೂ ಪರಸ್ಪರ ಅರಿವಿನ ಶೇಕಡಾವಾರು ಸಂಖ್ಯೆ ಐದಕ್ಕಿಂತ ಹೆಚ್ಚಿರಲಾರದು). ಒಂದು ಉಪಭಾಷಾಪ್ರದೇಶದ ವ್ಯಕ್ತಿಭಾಷೆ, ಇನ್ನೊಂದು ಉಪಭಾಷಾಪ್ರದೇಶದ ವ್ಯಕ್ತಿಭಾಷೆಗಳಿಗಿಂತ ಹೆಚ್ಚು ಸದೃಶವಾಗಿರುತ್ತವೆ. ಒಂದು ಉಪಭಾಷೆಗೂ ಇನ್ನೊಂದು ಉಪಭಾಷೆಗೂ ಉಚ್ಚಾರಣೆ ಪದಗಳಲ್ಲಿ, ವ್ಯಾಕರಣದಲ್ಲಿ ಕೂಡ ವ್ಯತ್ಯಾಸಗಳಿರ ಬಹುದು ಹಾಗೂ ಭಾಷೆಯನ್ನು ವಿಶ್ಲೇಷಿಸಿ ನೋಡಿದಾಗ ಅದು ಅನೇಕ ಉಪಭಾಷೆಗಳ ಮೊತ್ತವೆಂದು ಗೊತ್ತಾಗುತ್ತದೆ. ಹಾಗೆಯೇ ಒಂದೊಂದು ಉಪಭಾಷೆಯ ಸದೃಶ ವ್ಯಕ್ತಿಭಾಷೆಗಳ ಮೊತ್ತವೆಂದೂ ತಿಳಿದುಬರುತ್ತದೆ. ಆದರೆ ಭಾಷೆಯೆಂದರೆ ಕೆಲವರ ಪ್ರಕಾರ ಬರೆಹದ ಭಾಷೆ ಅಥವಾ ಶಿಷ್ಟಭಾಷೆ. ಈ ಪಂಗಡದವರು ಉಪಭಾಷೆಗಳನ್ನು ಬರಹದ ಭಾಷೆಯ ಅಥವಾ ಶಿಷ್ಟಭಾಷೆಯ ವಿಕೃತಿಗಳೆಂದು ಪರಿಗಣಿಸುತ್ತಾರೆ, ಬರಹದ ಭಾಷೆಯ ವಿಚಾರ ಇಲ್ಲಿ ಅಪ್ರಸ್ತುತ. ಆದರೆ ಯಾವುದನ್ನು ಶಿಷ್ಟಭಾಷೆಯೆಂದು ಕರೆಯುತ್ತೇವೆಯೋ ಅದು ಒಂದಾನೊಂದು ಕಾಲದಲ್ಲಿ ಇತರ ಉಪಭಾಷೆಗಳಂತೆಯೇ ಇದ್ದು, ವಿಶೇಷ ಕಾರಣಗಳಿಂದಾಗಿ ಉನ್ನತಸ್ಥಾನವನ್ನು ಪಡೆಯುತ್ತವೆ ಎಂಬ ವಿಷಯ ಇತಿಹಾಸದಿಂದ ಸ್ಪಷ್ಟವಾಗುತ್ತದೆ. ಪ್ರಾಚೀನ ಗ್ರೀಸ್ನಲ್ಲಿ ಇದ್ದ ನಾಲ್ಕು ಉಪಭಾಷೆಗಳಲ್ಲಿ ರಾಜಕೀಯ ಕಾರಣಗಳಿಂದಾಗಿ ಅಥೆನ್ಸಿನ ಭಾಷೆ ಪ್ರಬಲವಾಗಿ, ಶಿಷ್ಟಭಾಷೆಯೆನಿಸಿಕೊಂಡಿತು. ಈಗಿನ ಇಟಾಲಿಯನ್ ಭಾಷೆ ಹಿಂದೆ ರೋಮ್ ನಗರದ ಸುತ್ತ ಮುತ್ತ ಆಡುತ್ತಿದ್ದ ಲ್ಯಾಟಿನ್ನಿನ ಒಂದು ಉಪಭಾಷೆಯೇ ಆಗಿತ್ತು. ಇಂಗ್ಲೆಂಡಿನಲ್ಲಿ ಲಂಡನ್ ಮತ್ತು ಆಕ್ಸಫರ್ಡ್ ಇಂಗ್ಲಿಷ್ ಭಾಷೆಯೇ ಶಿಷ್ಟಭಾಷೆಯೆನಿಸಿಕೊಂಡಿದೆ. ಹೀಗೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿಂದಾಗಿ ಒಂದು ಪ್ರದೇಶದ ಭಾಷೆ ಮೇಲ್ಮೆಯನ್ನು ಪಡೆಯುತ್ತದೆ. ಇದರ ಫಲವಾಗಿ ಜನಪ್ರಿಯವಲ್ಲದ ಉಪಭಾಷೆಗಳು ನಾಶವಾದ ನಿದರ್ಶನಗಳೂ ಇವೆ. ಈಗ ಕನ್ನಡ ನಾಡಿನಲ್ಲಿ ಶಿಷ್ಟಭಾಷೆ ಯಾವುದೇ ಆಗಿರಲಿ, ಪ್ರಾಚೀನ ಕರ್ನಾಟಕದಲ್ಲಿ ಈಗಿನ ಗದಗ್, ಕೊಪ್ಪಳ, ಲಕ್ಷ್ಮೇಶ್ವರ, ಐಹೊಳೆ, ಪಟ್ಟದಕಲ್ಲುಗಳ ಸುತ್ತಮುತ್ತಣ ಭಾಗದ ಕನ್ನಡಕ್ಕೆ ವಿಶೇಷ ಪ್ರಾಶಸ್ತ್ಯ ಸಂದಿತ್ತು. ಇದು ಕವಿರಾಜಮಾರ್ಗಕಾರ, ಪಂಪ, ರನ್ನರ ಮಾತುಗಳಿಂದ ಸ್ಪಷ್ಟವಾಗುತ್ತದೆ. ಹೀಗೆ ಆ ಪ್ರದೇಶದ ಕನ್ನಡ ಆ ಕಾಲದ ಶಿಷ್ಟಭಾಷೆಯಾಗಿ ಪರಿಣಮಿಸಲು ಮೇಲೆ ಹೇಳಿದಂತೆ ರಾಜಕೀಯ ಅಥವಾ ಸಾಂಸ್ಕೃತಿಕ ಕಾರಣಗಳಿರಬೇಕು. ಹಾಗೆಯೇ 9-10ನೆಯ ಶತಮಾನಗಳಲ್ಲಿ ಕನ್ನಡದಲ್ಲಿ ಉಪಭಾಷೆಗಳಿದ್ದಿರಬೇಕು ಎಂಬ ಊಹೆಗೆ ಕವಿರಾಜಮಾರ್ಗಕಾರ ಪುಷ್ಟಿ ನೀಡಿದ್ದಾನೆ. ಅವನು ಹೇಳುವ ದಕ್ಷಿಣ, ಉತ್ತರ, ಉತ್ತರೋತ್ತರ ಮಾರ್ಗಗಳು ಆ ಕಾಲದ ಮೂರು ಮುಖ್ಯ ಉಪಭಾಷೆಗಳೇ ಆಗಿವೆ. ಹಾಗೆಯೇ ಪಂಪನೂ ಜನಪದಪರ ನುಡಿಯ ತಂಪನ್ನು ವರ್ಣಿಸುವಲ್ಲಿ ಪಟ್ಟಣಿಗರ ಮತ್ತು ಹಳ್ಳಿಯವರ ನುಡಿಯ ತಂಪನ್ನು ವರ್ಣಿಸುವಲ್ಲಿ, ಪಟ್ಟಣಿಗರ ಮತ್ತು ಹಳ್ಳಿಯವರ ಉಪಭಾಷೆಗಳನ್ನು ಸೂಚಿಸುತ್ತಿದ್ದಾನೆ ಎಂದು ಹೇಳಬಹುದು. ಶಾಸನಗಳೂ ಹಿಂದಿನ ಕನ್ನಡ ಭಾಷೆಯ ಉಪಭಾಷೆಗಳ ಸ್ಥೂಲಚಿತ್ರವನ್ನು ಕಲ್ಪಿಸಿಕೊಳ್ಳಲು ಸಾಮಗ್ರಿಯನ್ನೊದಗಿಸುತ್ತವೆ. ನಾವು ಹೊಸಗನ್ನಡದಲ್ಲಿ ನಾಲ್ಕು ಉಪಭಾಷೆಗಳಿವೆಯೆಂದು ಸ್ಥೂಲವಾಗಿ ಹೇಳುತ್ತೇವೆ (ಮೈಸೂರು, ಮಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ). ಆದರೆ ಉಪಭಾಷೆಗಳ ಸಂಖ್ಯೆ ಇದಕ್ಕಿಂತ ಎಷ್ಟೋ ಹೆಚ್ಚಾಗಿರುವುದರಲ್ಲಿ ಸಂದೇಹವಿಲ್ಲ. ಇದು ಶಾಸ್ತ್ರೀಯ ಪರಿವೀಕ್ಷಣೆಯ ಅನಂತರವೇ ನಿರ್ಧಾರವಾಗಬೇಕಾದ ವಿಷಯ. ಒಂದು ಭಾಷೆಯ ಉಪಭಾಷೆಗಳನ್ನು ಶಾಸ್ತ್ರೀಯವಾಗಿ ಗುರುತಿಸಲು ಕ್ರಮಬದ್ಧ ಪರಿವೀಕ್ಷಣೆ ಅಗತ್ಯ. ಇಂಥ ಪರಿವೀಕ್ಷಣೆಗಳಲ್ಲಿ ನಾಲ್ಕನ್ನು ಮುಖ್ಯವಾಗಿ ಹೇಳಬಹುದು. ಒಂದು - ಜಾರ್ಜಾ ವೆಂಕರ್ ಕೈಗೊಂಡ (1876) ಜರ್ಮನಿಯ ಉಪಭಾಷಾ ಪರಿವೀಕ್ಷಣೆ, ಇಲ್ಲಿ ವೆಂಕರ್ ಪ್ರಶ್ನಾವಳಿಯನ್ನು ದೇಶದ ನಾನಾ ಭಾಗಗಳ ಉಪಾಧ್ಯಾಯರಿಗೆ ಕಳುಹಿಸಿ ಅವರವರ ಉಪಭಾಷೆಗಳಿಗೆ ಆ ಪ್ರಶ್ನಾವಳಿಯನ್ನು ಅನುವಾದಿಸುವಂತೆ ಕೇಳಿಕೊಂಡ. ಎರಡನೆಯದು -ಗಿಲಿಯೆರೊನ್ ಕೈಗೊಂಡ ಫ್ರಾನ್ಸಿನ ಉಪಭಾಷಾ ಪರಿವೀಕ್ಷಣೆ. ಈತ ಎಡ್ಮಂಡ್ ಎಂಬ ಪ್ರಚ್ಛಕನಿಂದ ಉಪಭಾಷಾ ವಿಶ್ಲೇಷಣೆಗೆ ಸಾಮಗ್ರಿಯನ್ನು ಸಂಗ್ರಹಿಸಿದ. ಮೂರನೆಯದು - ಜೇಬರ್ಗ್ ಮತ್ತು ಜೂಡ್ ವಿದ್ವಾಂಸರು ಕೈಗೊಂಡು ಇಟಲಿ ಮತ್ತು ದಕ್ಷಿಣ ಸ್ವಿಟ್ಜರ್ಲೆಂಡಿನ ಉಪಭಾಷಾ ಪರಿವೀಕ್ಷಣೆ. ನಾಲ್ಕನೆಯದು-ಅಮೆರಿಕ ಸಂಯುಕ್ತ ಸಂಸ್ಥಾನಗಳ ನ್ಯೂ ಇಂಗ್ಲೆಂಡ್ ಪ್ರದೇಶದಲ್ಲಿ ಕೈಗೊಂಡ ಉಪಭಾಷಾ ಪರಿವೀಕ್ಷಣೆ. ಇಲ್ಲಿ ಅನೇಕ ಭಾಷಾವಿಜ್ಞಾನಿಗಳು ಮೊದಲೇ ತರಬೇತಿ ಪಡೆದು, ಆ ಪ್ರದೇಶದ ಬೇರೆ ಬೇರೆ ಭಾಗಗಳಿಗೆ ಹೋಗಿ ವಿಷಯ ಸಂಗ್ರಹಿಸಿದರು. ಒಂದೊಂದು ಕೇಂದ್ರದಲ್ಲೂ ಮೂರು ಬಗೆಯ ಭಾಷಾ ಸಾಮಗ್ರಿಯನ್ನು ಸಂಗ್ರಹಿಸಲಾಯಿತು. ಪರಿವೀಕ್ಷಣೆಯಲ್ಲಿ ಸಾಮಗ್ರಿ ಸಂಗ್ರಹ ಒಂದು ಘಟ್ಟ ಮಾತ್ರ. ಸಾಮಗ್ರಿ ಸಂಗ್ರಹದ ಬಳಿಕ, ಒಂದೊಂದು ಅಂಶಕ್ಕೂ (ಉಚ್ಚಾರಣೆ ಅಥವಾ ಪದ ಅಥವಾ ವಾಕ್ಯ ವೈಚಿತ್ರ್ಯ ಅಥವಾ ವ್ಯಾಕರಣಾಂಶ) ಅದರ ವ್ಯಾಪ್ತಿಯನ್ನು ತೋರಿಸುವ ಸೀಮಾ ರೇಖೆಯನ್ನು (ಐಸೊಗ್ಲಾಸ್) ಭೂಪಟದ ಮೇಲೆ ಎಳೆಯಬೇಕು. ಹೀಗೆ ಎಲ್ಲ ಅಂಶಗಳಿಗೂ ಪ್ರತ್ಯೇಕವಾಗಿ ಸೀಮಾರೇಖೆಗಳನ್ನೆಳೆದು, ಆ ಎಲ್ಲ ಸೀಮಾರೇಖೆಗಳನ್ನು ಒಂದು ಭೂಪಟಕ್ಕೆ ವರ್ಗಾಯಿಸಿದಾಗ, ಆ ರೇಖೆಗಳು ನಾನಾ ಮುಖವಾಗಿ ಹರಿದಿರುವುದು ಕಂಡುಬರುತ್ತದೆ. ಆದರೆ ಕೆಲವು ಸ್ಪಷ್ಟ ಸೀಮಾರೇಖೆಗಳು ಒಟ್ಟೊಟ್ಟಿಗೆ ಹರಿದು ಒಂದು ಭಾಗವನ್ನು ಇನ್ನೊಂದು ಭಾಗದಿಂದ ಪ್ರತ್ಯೇಕಿಸುವುದು ಕಂಡುಬರುತ್ತದೆ. ಇಂಥ ಸೀಮಾರೇಖೆಗಳ ಸಮೂಹದ ಸಹಾಯದಿಂದ ಉಪಭಾಷೆಗಳನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತದೆ. ಅಪ್ಪರ್ ಜರ್ಮನ್ ತಂಡ ಪ್ರತ್ಯೇಕಿಸಿರುವ ಉದಾಹರಣೆಯನ್ನು ಇಲ್ಲಿ ಸ್ಮರಿಸಬಹುದು. ಸೀಮಾರೇಖೆಗಳ ಅಧ್ಯಯನ ಇನ್ನೂ ಹಲವು ರೀತಿಗಳಲ್ಲಿ ಉಪಯುಕ್ತವಾಗಿವೆ. ಒಂದು ಪ್ರದೇಶದಲ್ಲಿ ಅನೇಕ ಸೀಮಾರೇಖೆಗಳು ವರ್ತುಲಾಕಾರದಲ್ಲಿ ಸುತ್ತುವರಿದಿದ್ದರೆ, ಅಲ್ಲಿ ಇರುವ ಪ್ರಮುಖ ಕೇಂದ್ರವೊಂದರಲ್ಲಿ ಪದಗಳು ಮತ್ತು ಇತರ ಒಂದು ಪ್ರದೇಶವನ್ನು ಸುತ್ತಮುತ್ತಣ ಪ್ರದೇಶಗಳಿಂದ ಹಬ್ಬುತ್ತಿರುವ ಸೀಮಾರೇಖೆಗಳು ಆಕ್ರಮಿಸುತ್ತಿದ್ದರೆ, ಆ ಪ್ರದೇಶದ ಉಪಭಾಷೆ ಇತರ ಉಪಭಾಷೆಗಳ ಪ್ರಭಾವಕ್ಕೆ ಒಳಗಾಗಿ ದುರ್ಬಲವಾಗುತ್ತದೆ ಎಂದರ್ಥ. ಕೆಲವು ಬಾರಿ ಸೀಮಾರೇಖೆಗಳ ಒಂದು ಗೊಂಚಲು ಪ್ರಸಿದ್ಧ ವಾಹನಮಾರ್ಗಗಳನ್ನು ಅನುಸರಿಸಿರುವುದು ಕಂಡುಬಂದಿದೆ. ಭಾಷೆಯಲ್ಲಿ ಹೊಸ ಅಂಶಗಳು ವಾಹನಮಾರ್ಗಗಳಲ್ಲಿ ಪ್ರಯಾಣಮಾಡಿ, ಅವುಗಳ ಅಕ್ಕಪಕ್ಕದ ಪ್ರದೇಶಗಳಿಗೆ ನಿಧಾನವಾಗಿ ಹಬ್ಬುತ್ತವೆ. ಒಂದು ಭಾಷಾಂಶದ ಸೀಮಾರೇಖೆ ಇನ್ನೊಂದು ಭಾಷಾಂಶ ಪ್ರದೇಶದ ಒಳಕ್ಕೆ ಒತ್ತರಿಸಿ ನಡೆದಿದ್ದರೆ, ಸ್ಪರ್ಧೆಯಲ್ಲಿ ಎರಡನೆಯ ಭಾಷಾಂಶ ಸೋತು ಹಿಂಜರಿಯುತ್ತಿದೆಯೆಂಬುದು ಇದರಿಂದ ತಿಳಿದು ಬರುತ್ತದೆ. ಇಲ್ಲಿಯವರೆಗೆ ಉಪಭಾಷೆಗಳನ್ನು ಭೂಮಿಯ ಮೇಲೆ ಸಮತಲ ರೀತಿಯಲ್ಲಿ ಹರಡಿಕೊಂಡಿರುವಂತೆ ವಿವರಿಸಿದ್ದಾಯಿತು. ಇವನ್ನು ಪ್ರಾದೇಶಿಕ ಅಥವಾ ಭೌಗೋಳಿಕ ಉಪಭಾಷೆಗಳೆಂದು ಕರೆಯಬಹುದು, ಉಪಭಾಷೆಗಳು ಹೀಗೆ ಸಮತಲ ರೀತಿಯಲ್ಲಿ ಅಲ್ಲದೆ, ಲಂಬರೀತಿಯಲ್ಲಿಯೂ ಹರಡಿರುವಂತೆ ಕಲ್ಪಿಸಿಕೊಳ್ಳಬಹುದು. ಇವನ್ನು ಸಾಮಾಜಿಕ ಉಪಭಾಷೆಗಳೆಂದು ಕರೆಯಬಹುದು. ಜನ ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದರೂ ಅವರು ಆರ್ಥಿಕ ಅಥವಾ ಧಾರ್ಮಿಕ ಅಥವಾ ಇತರ ಸಾಮಾಜಿಕ ಕಾರಣಗಳಿಂದ ಬೇರೆ ಬೇರೆ ಗುಂಪುಗಳಾಗಿ ಒಡೆದು ತಮ್ಮ ತಮ್ಮಲ್ಲೇ ಹೆಚ್ಚಾಗಿ ವ್ಯವಹರಿಸುವುದರಿಂದ ಆಯಾ ಗುಂಪಿನವರು ಇತರ ಗುಂಪಿನವರಿಗಿಂತ ಭಿನ್ನ ರೀತಿಯಲ್ಲಿ ಭಾಷೆಯನ್ನು ಬೆಳೆಸಿಕೊಳ್ಳುತ್ತಾರೆ. ಉದಾ: ಒಬ್ಬ ವ್ಯಕ್ತಿ ಮಾತನಾಡುವ ರೀತಿಯಿಂದಲೇ ಅವನನ್ನು ವಿದ್ಯಾವಂತ ಅಥವಾ ಅವಿದ್ಯಾವಂತನೆಂದು, ಪಟ್ಟಣಿಗ ಅಥವಾ ಹಳ್ಳಿಗನೆಂದು ಇತರರು ಗುರುತಿಸಿಬಿಡುತ್ತಾರೆ. ಸಾಮಾಜಿಕ ಉಪಭಾಷೆಗಳಿಗೆ ಸ್ಪಷ್ಟ ನಿದರ್ಶನಗಳು ಈ ವಿದ್ಯಾವಂತರ ಭಾಷೆಗಳು ಬಹುಮಟ್ಟಿಗೆ ಒಂದೇ ಆಗಿರುತ್ತವೆ. ಅವರಾಡುವ ಭಾಷೆ ಶಿಷ್ಟಭಾಷೆಯಾಗಿರುತ್ತದೆ ಅಥವಾ ಶಿಷ್ಟಭಾಷೆಗೆ ಸಮೀಪದ್ದಾಗಿರುತ್ತದೆ (ಉಳಿದವರನ್ನು ಶಿಷ್ಟೇತರ ಭಾಷೆಯೆಂದು ಕರೆಯಬಹುದು). ಹೀಗೆ ಭಾಷೆ ವ್ಯಕ್ತಿಯ ಸಾಮಾಜಿಕ ಸ್ಥಾನಮಾನಗಳನ್ನು ನಿರ್ದೇಶಿಸುವ ಗುರುತಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ-ಭಾಷೆ ಆ ಭಾಷಾಪ್ರದೇಶದ ರಾಜಧಾನಿಯ ಅಥವಾ ಸಾಂಸ್ಕೃತಿಕ ಕೇಂದ್ರದ ವಿದ್ಯಾವಂತರು ಆಡುವ ಮಾತಾಗಿರುತ್ತದೆ. ಉದಾಹರಣೆ; ಕಲ್ಕತ್ತೆಯ ಬಂಗಾಳಿ, ಇರಾನಿನ ಪರ್ಷಿಯನ್, ಕೈರೋದ ಈಜಿಪ್ಷಿಯನ್, ಪ್ಯಾರಿಸ್ಸಿನ ಫ್ರೆಂಚ್, ಲಂಡನ್ನಿನ ಇಂಗ್ಲಿಷ್ ಇತ್ಯಾದಿ. ದೇಶದ ಬೇರೆ ಬೇರೆ ಭಾಗಗಳ ಶಿಷ್ಟಭಾಷೆ ಆಯಾ ಪ್ರಾದೇಶಿಕ ಉಪಭಾಷೆಗಳ ಬಣ್ಣವನ್ನು ಪಡೆದಿದ್ದರೂ ಪರಸ್ಪರ ವ್ಯವಹಾರಕ್ಕೆ ಅದು ಯಾವ ರೀತಿಯಿಂದಲೂ ಅಡ್ಡಿಯಾಗಿರುವುದಿಲ್ಲ, ಬೇರೆ ಬೇರೆ ಭಾಗಗಳ ಶಿಷ್ಟಭಾಷೆ ಆ ನಾಡಿನ ಸಾಂಸ್ಕೃತಿಕ ಅಥವಾ ರಾಜಕೀಯ ಕೇಂದ್ರದ ಶಿಷ್ಟಭಾಷೆಯ ಆಧಾರದ ಮೇಲೆ ರೂಪಿತವಾಗಿರುತ್ತದೆ. ಶಿಷ್ಟಭಾಷೆಯ ಪ್ರಭಾವ ಶಿಷ್ಟೇತರ ಭಾಷೆಯ ಮೇಲೆ ನಿರಂತರ ಆಗುತ್ತಲೇ ಇರುತ್ತದೆ. ಈ ಪ್ರಭಾವ ಬಹುಮಟ್ಟಿಗೆ ಏಕಮುಖವಾದುದು. ಸಾಮಾಜಿಕ ಉಪಭಾಷೆಗಳಲ್ಲಿ, ಅದರಲ್ಲೂ ಭಾರತ ದೇಶದಲ್ಲಿ, ಜಾತ್ಯಾತ್ಮಕ ಉಪಭಾಷೆ ಗಳನ್ನು ಗುರುತಿಸಬಹುದು. ಒಂದೊಂದು ಜಾತಿಯವರೂ ತಮ್ಮ ವೃತ್ತಿಗಳಿಗೆ ಸಂಬಂಧಿಸಿದಂತೆ ಅನೇಕ ವಿಶಿಷ್ಟ ಪದಗಳನ್ನು ಬೆಳೆಸಿಕೊಂಡಿರುತ್ತಾರೆ. ಉದಾಹರಣೆ; ಒಂದು ಊರಿನ ಕುಂಬಾರರು ಮತ್ತು ನೇಯ್ಗೆಯವರು ಆಡುವ ಉಪಭಾಷೆಗಳಲ್ಲಿ ಕೋಶಕ್ಕೆ ಸಂಬಂಧಿಸಿದ ಅನೇಕ ವ್ಯತ್ಯಾಸಗಳಿರುತ್ತವೆ. ತಾಂತ್ರಿಕ ಉಪಭಾಷೆಗಳೂ ಇದೇ ಬಗೆಯವು. ವಕೀಲರು ಅಥವಾ ರಸಾಯನಶಾಸ್ತ್ರಜ್ಞರು ತಮ್ಮ ಪಾರಿಭಾಷಿಕ ಪದಗಳನ್ನು ಬಳಸಿ ಮಾತನಾಡಲಾರಂಭಿಸಿ ದರೆ ಅಲ್ಲಿಯ ಸರ್ವನಾಮ, ಗುಣವಾಚಕ, ಕ್ರಿಯಾಪದ ಇತ್ಯಾದಿಗಳನ್ನು ಬಿಟ್ಟರೆ ಉಳಿದದ್ದು ಇತರರಿಗೆ ಏನೂ ಅರ್ಥವಾಗದಿರಬಹುದು. ಗಂಡಸರ ಮತ್ತು ಹೆಂಗಸರ ಉಪಭಾಷೆಗಳಿಗೆ ಕೆಲವಡೆ ಸ್ಪಷ್ಟ ವ್ಯತ್ಯಾಸಗಳಿರಬಹುದು. ಉದಾ: ಅಮೆರಿಕ ಸಂಯುಕ್ತ ಸಂಸ್ಥಾನ ಕ್ಯಾಲಿಫೋರ್ನಿಯ ಪ್ರಾಂತ್ಯದ ಉತ್ತರ ಭಾಗದಲ್ಲಿ ಆಡುವ ‘ಯನ’ ಭಾಷೆ. ಇಲ್ಲಿ ಪುರುಷಭಾಷೆ ಮತ್ತು ಸ್ತ್ರೀಭಾಷೆಗಳೆಂದು ಸ್ಪಷ್ಟಭೇದಗಳಿವೆ. ಪುರುಷಭಾಷೆಯನ್ನು ಗಂಡಸರು ತಮ್ಮ ತಮ್ಮಲ್ಲಿ ಅಥವಾ ಇತರ ಹೆಂಗಸರೊಡನೆ ಬಳಸುತ್ತಾರೆ. ಹೆಂಗಸರು ಗಂಡಸರೊಡನೆ ಮಾತನಾಡುವಾಗ ಇದೇ ಭಾಷೆಯನ್ನೇ ಬಳಸುತ್ತಾರೆ. ಶಿಷ್ಟಭಾಷೆ ಮತ್ತು ಇತರ ಉಪಭಾಷೆಗಳಲ್ಲದೆ, ಭಾಷೆಯಲ್ಲಿ ಇನ್ನೊಂದು ಸನ್ನಿವೇಶವೂ ಇರುತ್ತದೆ. ಇದನ್ನು ಫರ್ಗೂಸನ್ ಡೈಗ್ಲೊಸಿಯ ಎಂದು ಕರೆದು ಅದನ್ನು ಅರಬ್ಬೀ, ಸ್ವಿಸ್, ಜರ್ಮನ್, ಹೈಟಿಯನ್, ಕ್ರಯೋಲ್ ಮತ್ತು ಗ್ರೀಕ್ ಭಾಷೆಗಳನ್ನು ಮುಖ್ಯ ನಿದರ್ಶನಗಳಾಗಿಟ್ಟು ಕೊಂಡು ವಿವರಿಸಿದ್ದಾನೆ. ಇಲ್ಲಿ ಸೇವಕರಿಗೆ ಸೂಚನೆ ಕೊಡುವಾಗ, ಸ್ನೇಹಿತರೊಡನೆ ಇತರ ಬಂಧುಗಳೊಡನೆ ಮಾತನಾಡುವಾಗ, ಮನೆಯಲ್ಲಿ ಮಾತನಾಡುವಾಗ, ಬಳಸುವ ಭಾಷಾ ಪ್ರಭೇದ ಬೇರೆ, ಆದರೆ ಚರ್ಚು, ಮಸೀದಿಗಳಲ್ಲಿ ಧಾರ್ಮಿಕ ಪ್ರವಚನ ಮಾಡುವಾಗ ಪತ್ರ ವ್ಯವಹಾರಗಳಲ್ಲಿ, ಪಾರ್ಲಿಮೆಂಟಿನಲ್ಲಿ ಭಾಷಣ ಮಾಡುವಾಗ, ಆಕಾಶವಾಣಿಯಲ್ಲಿ ವಾರ್ತೆಯನ್ನು ಪ್ರಸಾರ ಮಾಡುವಾಗ, ವಿಶ್ವವಿದ್ಯಾನಿಲಯಗಳ ಪಾಠ-ಪ್ರವಚನ ಸಂದರ್ಭಗಳಲ್ಲಿ ಬಳಸುವ ಭಾಷಾ ಪ್ರಭೇದ ಬೇರೆ. ಇದೇ ಡೈಗ್ಲೊಸಿಯ ಜನ ಸಾಮಾನ್ಯವಾಗಿ ಮೊದಲ L (low), H(High) ಎಂದು ಕರೆಯೋಣ. L ಮತ್ತು H ಗಳ ಬಳಕೆ ಮತ್ತು ಕಾರ್ಯಗಳು ನಿರ್ದಿಷ್ಟ. ಒಂದನ್ನು ಇನ್ನೊಂದರ ಸನ್ನಿವೇಶದಲ್ಲಿ ಬಳಸಿದರೆ ತೀರಾ ಆಭಾಸವಾಗಿ ಬಿಡುತ್ತದೆ. ಒಬ್ಬ ವ್ಯಕ್ತಿ ಎರಡನ್ನೂ ಪ್ರತ್ಯೇಕವಾಗಿ ಬಳಸುತ್ತ ಹೋಗುತ್ತಾನೆ. L ಸಹಜವಾಗಿ ಕಲಿತದ್ದು, H ಮುಂದೆ ಪ್ರಯತ್ನಪೂರ್ವಕವಾಗಿ ವಿದ್ಯಾಭ್ಯಾಸದ ಮೂಲಕ ರೂಢಿಸಿಕೊಂಡದ್ದು. ಜನ ಒಂದು ಸಾಂಪ್ರದಾಯಿಕ ಭಾಷಣವನ್ನು H ನಲ್ಲಿ ಮಾಡಿ ಅದನ್ನು L ನಲ್ಲಿ ಚರ್ಚಿಸಬಹುದು, ವ್ಯಾಕರಣದ ದೃಷ್ಟಿಯಿಂದ ಹೇಳುವುದಾದರೆ H ಗಿಂತ L ಸರಳವಾದುದು. ಎರಡಕ್ಕೂ ಪದಕೋಶದಲ್ಲಿ ಬಹು ಪ್ರಮಾಣದಲ್ಲಿ ಸಮಾನತೆ ಇದ್ದರೂ H ನಲ್ಲಿ ಪ್ರೌಢೋಕ್ತಿಗಳು ಹಾಗೂ ಪಾರಿಭಾಷಿಕ ಪದಗಳು ಹೆಚ್ಚು. L ನಲ್ಲಿ ಜನಪ್ರಿಯೋಕ್ತಿಗಳು ಹೆಚ್ಚು, ಕೆಲವು ಸಾರಿ ಒಂದೇ ಅರ್ಥದ ಎರಡು ಪದಗಳಿದ್ದು, ಒಂದರ ಬಳಕೆಯಿಂದ ಆ ಮಾತು L ಅಥವಾ H ಆಗಿದೆಯೋ ನಿರ್ಧರಿಸಿ ಬಿಡಬಹುದು. ಅರಬ್ಬೀ ಭಾಷೆಯಲ್ಲಿ ನೋಡು ಎಂಬರ್ಥದಲ್ಲಿ H ಪದ raa; L ಪದ saf, raa ಎಂಬುದನ್ನು ಸಾಮಾನ್ಯ ಸಂಭಾಷಣೆಯಲ್ಲಿ ಬಳಸುವುದೇ ಇಲ್ಲ, saf ಎಂಬುದನ್ನು ಬರೆವಣಿಗೆಯಲ್ಲಿ ಬಳಸುವುದೇ ಇಲ್ಲ. ಗ್ರೀಕ್ನಲ್ಲಿ ಮದ್ಯ ಎಂಬರ್ಥದಲ್ಲಿ H ಪದ inos; L ಪದ Krasi, ಅಚ್ಚಾಗಿರುವ ತಿಂಡಿ ಪಟ್ಟಿಯಲ್ಲಿ inos ಇದ್ದರೂ ಅದನ್ನು ಓದಿಕೊಂಡ ವ್ಯಕ್ತಿ ಮಾಣಿಗೆ Krasi ತರಲು ಹೇಳುತ್ತಾನೆ. ಶಿಷ್ಟ-ಶಿಷ್ಟೇತರ ಭಾಷಾ ಸನ್ನಿವೇಶಕ್ಕೂ ಡೈಗ್ಲೊಸಿಯ ಸನ್ನಿವೇಶಕ್ಕೂ ಮೇಲ್ನೋಟಕ್ಕೆ ಸಾಮ್ಯ ಕಂಡರೂ ಮೂಲತಃ ಅವೆರಡೂ ಬೇರೆ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಊ ಪ್ರಭೇದವನ್ನು ಯಾರೂ ಸಾಮಾನ್ಯ ಸಂಭಾಷಣೆಗಳಲ್ಲಿ ಬಳಸುವುದೇ ಇಲ್ಲ. ಅಕಸ್ಮಾತ್ ಬಳಸಿದರೆ ಅದು ಕೃತಕವೆಂದೂ ಪಾಂಡಿತ್ಯ ಪ್ರದರ್ಶನವೆಂದೂ ಜನ ಭಾವಿಸುತ್ತಾರೆ. ಡೈಗ್ಲೊಸಿಯ ಬಹುಮಟ್ಟಿಗೆ ಎಲ್ಲ ಭಾಷೆಗಳಲ್ಲೂ ಕಂಡುಬರುವ ಸಂಗತಿಯಾಗಿದೆ. ಬರೆಹವಿಲ್ಲ ದಿರುವ ಸಮಾಜದಲ್ಲಿ ಜಾನಪದ ಸಾಹಿತ್ಯದ ಭಾಷೆ ಉಳಿದ ಭಾಷೆಗಳ ಗ್ರಂಥಸ್ಥ ಭಾಷೆಯ ಸ್ಥಾನದಲ್ಲಿ ನಿಲ್ಲಬಹುದು.