ಉಣ್ಣಾಯಿ ವಾರಿಯರ್

(ಉಣ್ಣಾಯಿ ವಾರ್ಯರ್ ಇಂದ ಪುನರ್ನಿರ್ದೇಶಿತ)

ಉಣ್ಣಾಯಿ ವಾರಿಯರ್ ಅಭಿನಯ ಸಾಹಿತ್ಯ ಮತ್ತು ಸಂಗೀತಗುಣಗಳನ್ನೆಲ್ಲ ಒಳಗೊಂಡಂತೆ ಕಥಕ್ಕಳಿ ಸಾಹಿತ್ಯರಚನೆ ಮಾಡಿದವರಲ್ಲಿ ಅಗ್ರಗಣ್ಯರು. ಕೋಟ್ಟಯತ್ತು ತಂಬರಾನ್ ಅವರ ಬಳಿಕ ಮಲೆಯಾಳಂನಲ್ಲಿ ಕಥಕ್ಕಳಿ ಸಾಹಿತ್ಯ ವಿಪುಲವಾಗಿ ಬೆಳೆಯಿತಾದರೂ ಕೆಲವು ಕೃತಿಗಳು ಅಭಿನಯ ಯೋಗ್ಯವಾಗಿದ್ದರೂ ಸಾಹಿತ್ಯಗುಣಕ್ಕೆ ಎರವಾಗಿದ್ದವು. ಅಂಥ ಕೊರೆಯನ್ನು ತುಂಬಿಸಿದ ಕೀರ್ತಿ ವಾರಿಯರ್‍ರಿಗೆ ಸೇರಬೇಕು. ಇವರು ಬರೆದ ನಳಚರಿತಂ ಸರ್ವೋತ್ಕೃಷ್ಟ ಕೃತಿಯೆಂದು ಮನ್ನಣೆಗಳಿಸಿದೆ. ವಾರ್ಯರ್ ಇನ್ನೂ ಅನೇಕ ಕವಿತೆಗಳನ್ನು ರಚಿಸಿದ್ದರೂ ನಳಚರಿತಂನಿಂದ ಇವರ ಹೆಸರು ಮಲೆಯಾಳ ಕವಿಗಳ ಅಗ್ರಪಂಕ್ತಿಯಲ್ಲಿ ಸೇರಿಹೋಯಿತು.

ಉಣ್ಣಾಯಿ ವಾರಿಯರ್
Portrait of Unnayi Warrier

ಇವರ ಕಾಲದ ಬಗೆಗೆ ಕೆಲವಾರು ತೊಡಕುಗಳಿವೆ. 17ನೆಯ ಶತಮಾನದ ಕೊನೆಯಲ್ಲಿ, ಇಲ್ಲವೇ 18ನೆಯ ಶತಮಾನದ ಆರಂಭದಲ್ಲಿ ಇವರು ಜೀವಿಸಿದ್ದಿರಬಹುದೆಂದು ಸಾಹಿತ್ಯಚರಿತ್ರ ಕಾರರಾದ ಪಿ.ಕೆ. ಪರಮೇಶ್ವರನ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ. ಹಿಂದಿನ ಕೊಚ್ಚಿ ಸಂಸ್ಥಾನದಲ್ಲಿದ್ದ ಎಂಬ ಊರು ಉಣ್ಣಾಯಿ ವಾರ್ಯರ ಜನ್ಮಸ್ಥಳ. ಕುಂಜನ್ ನಂಬಿಯಾರ್ ಮೊದಲಾದ ಸರಸಕವಿಗಳ ಒಡನಾಡಿತನದಿಂದ ಇವರಲ್ಲಿ ಕವಿತಾಶಕ್ತಿ ಪ್ರಬುದ್ಧಮಾನವಾಗಿ ಬೆಳೆದು ಬಂದಿತು. ವಾರ್ಯರ್ ನಾಟಕಗಳನ್ನೇನಾದರೂ ಬರೆದಿದ್ದರೆ ಪಾಶ್ಚಾತ್ಯ ನಾಟಕಗಳಿಗೆ ಸರಿಸಮನಾದ ನಾಟಕಗಳು ಮಲೆಯಾಳ ಭಾಷೆಗೆ ಲಭಿಸುತ್ತಿದ್ದವು ಎಂದು ಅಭಿಪ್ರಾಯಪಡುವ ವಿಮರ್ಶಕರೂ ಇದ್ದಾರೆ.

ಸಾಹಿತ್ಯ ರಚನೆ

ಬದಲಾಯಿಸಿ

ಆಟ್ಟಕ್ಕಥೆಗಳ ನಡುವಿನಲ್ಲಿ ನಳಚರಿತಂನಂತೆ ಜೀವನಸ್ಪರ್ಶಿಯಾದ ಮತ್ತೊಂದು ಕೃತಿ ಮಲೆಯಾಳ ಭಾಷೆಗೆ ಲಭ್ಯವಾಗಿಲ್ಲ. ದಮಯಂತಿಯನ್ನು ತೊರೆದು ನಳ ಕಾಡಿನಲ್ಲಿ ಅಲೆದಾಡುತ್ತಿರುವಾಗ ಅವನ ಮನಸ್ಸಿನಲ್ಲಿ ಉಂಟಾಗುವ ತುಮುಲವೇ ಮೊದಲಾದ ಸನ್ನಿವೇಶಗಳಲ್ಲಿ ಕವಿ ತನ್ನ ಸಾಮರ್ಥ್ಯವೆಲ್ಲವನ್ನೂ ಅತ್ಯಮೋಘವಾಗಿ ವ್ಯಯಿಸಿರುವುದು ಕಂಡುಬರುತ್ತದೆ. ಕಥಕ್ಕಳಿಯ ಪೋಷಕನಾಗಿದ್ದ ಕಾರ್ತಿಕ ತಿರುನಾಳ್ ಮಹಾರಾಜನ ಆಶ್ರಯದಲ್ಲಿದ್ದ ಉಣ್ಣಾಯಿ ವಾರ್ಯರ ಪ್ರಭಾವ ಅಮಿತವಾಗಿತ್ತು. ಮಹಾರಾಜನೇ ಆಟ್ಟಕ್ಕಥೆಗಳನ್ನು ರಚಿಸುವಷ್ಟರಮಟ್ಟಿಗೆ ಈ ಪ್ರಭಾವ ವರ್ಧಿಸಿತೆನ್ನಬಹುದು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ