ಈಥೇನ್ ನಿಷ್ಪನ್ನಗಳು
ಈಥೈಲ್ ಅಕ್ರಿಲೇಟ್ (Ethyl acrylate)
ಬದಲಾಯಿಸಿಇದರ ರಾಸಾಯನಿಕ ಸೂತ್ರ C5H8O2.[೧][೨] ರಚನಾಸೂತ್ರ CH2=CH.CO.O.CH2.CH3. ನಿರ್ವರ್ಣ ದ್ರವ 0o ಸೆಂ.ಗ್ರೇ. ನಲ್ಲಿ. ಸಾಂದ್ರತೆ 0.9283. ಕುದಿಯುವ ಬಿಂದು 101o ಸೆಂ.ಗ್ರೇ. ನೀರಿನಲ್ಲಿ ಅದ್ರಾವ್ಯ. ಅನೇಕ ಸಾವಯವ ಲೀನಕಾರಿಗಳೊಡನೆ ಬೆರೆಯುವುದು. ಎಥಿಲೀನ್ ಕ್ಲೋರೊಹೈಡ್ರಿನನ್ನು ಸೋಡಿಯಂ ಸಯನೈಡಿನೊಡನೆ ಸೇರಿಸಿದಾಗ ಬೀಟಾ ಹೈಡ್ರಾಕ್ಸಿ ಪ್ರೋಪಿಯೊ ನೈಟ್ರೀಲ್ ಉಂಟಾಗುವುದು. ಇದಕ್ಕೆ ಈಥೈಲ್ ಆಲ್ಕೊಹಾಲ್ ಮತ್ತು ಸಲ್ಫ್ಯೂರಿಕ್ ಆಮ್ಲಗಳನ್ನು ಕೂಡಿಸಿ ಕಾಯಿಸಿದರೆ ಈಥೈಲ್ ಅಕ್ರಿಲೇಟ್ ಉತ್ಪತ್ತಿಯಾಗುತ್ತದೆ. ಸಂಯೋಜಿತ ಅಂಟುಗಳ ತಯಾರಿಕೆಯಲ್ಲಿ ಇದರ ಪಾತ್ರವಿದೆ.
ಈಥೇನ್‍ಅಯೊಡೊ ಅಸಿಟೇಟ್ (Ethyl iodoacetate)
ಬದಲಾಯಿಸಿಅಯೊಡೊ ಅಸಿಟಿಕ್ ಎಸ್ಟರ್ ಎಂದೂ ಕರೆಯಬಹುದಾದ ಸಾವಯವ ವಸ್ತು. ಅಣುಸೂತ್ರ I.CH2.CO.O.CH2.CH3 ಇದೊಂದು ಬಣ್ಣವಿಲ್ಲದ ದ್ರವ. ಸಾಂದ್ರತೆ 1.8173. ಕುದಿಯುವ ಬಿಂದು 178o — 180o ಸೆಂ.ಗ್ರೇ. ನೀರಿನಲ್ಲಿ ಅದ್ರಾವ್ಯ. ಆಲ್ಕೊಹಾಲ್ ಈಥರಿನೊಡನೆ ಸರಾಗವಾಗಿ ಬೆರೆಯುತ್ತದೆ. ಆಲ್ಕೊಹಾಲ್ ದ್ರಾವಣದಲ್ಲಿ ಕ್ಲೋರೊ ಅಸಿಟಿಕ್ ಎಸ್ಟರ್ I.CH2.CO.O.CH2.CH3 ಮತ್ತು ಪೊಟ್ಯಾಸಿಯಂ ಅಯೊಡೈಡನ್ನು (KI) ಬಿಸಿಮಾಡಿ ಇದನ್ನು ತಯಾರಿಸುತ್ತಾರೆ. ಇದರ ಆವಿ ತಗುಲಿದಾಗ ಕಣ್ಣಿನ ಒಳಪೊರೆ ಉದ್ರಿಕ್ತವಾಗಿ ಕಣ್ಣೀರು ಹರಿದು ತ್ರಾಸವಾಗುತ್ತದೆ. ಆದ್ದರಿಂದ ಅಶ್ರುವಾಯು ಷೆಲ್ ಮತ್ತು ಗ್ರೇನೇಡುಗಳಲ್ಲಿ ಇದು ವಿಶೇಷವಾಗಿ ಬಳಕೆಯಲ್ಲಿದೆ.
ಈಥೈಲ್ ಅಸಿಟೇಟ್ (Ethyl acetate)
ಬದಲಾಯಿಸಿಇದು ಅಸಿಟಿಕ್ ಆಮ್ಲದ ಈಥೈಲ್‍ಎಸ್ಟರು. ಇದರ ರಾಸಾಯನಿಕ ಸೂತ್ರ CH3COOC2H5. ಬಣ್ಣವಿಲ್ಲದ, ತಟಸ್ಥ ಸ್ಥಿತಿಯ, ಬಾಷ್ಪಶೀಲ (ವಾಲಟೈಲ್), ಸುಲಭವಾಗಿ ಉರಿಹೊತ್ತಿಕೊಳ್ಳುವ ದ್ರವ. ಕರಗುವ ಬಿಂದು -83೦ ಸೆಂ.ಗ್ರೇ.; ಕುದಿಯುವ ಬಿಂದು 77೦ ಡಿಗ್ರಿ ಸೆಂ.ಗ್ರೇ. ಹಣ್ಣಿನ ವಾಸನೆಯೇ ಇದರ ವೈಲಕ್ಷಣ್ಯ. ಹತ್ತುಭಾಗ ನೀರಿನಲ್ಲಿ ಒಂದು ಭಾಗದಷ್ಟು ಮಾತ್ರ ಈ ದ್ರವ ಲೀನಗೊಳ್ಳುತ್ತದೆ. ನೀರನ್ನು ಹೀರುವ ಗುಣವಿದ್ದು ಜಲವಿಶ್ಲೇಷಣೆಗೆ ಬಲುಬೇಗ ಒಳಗಾಗುವುದರಿಂದ ಇದನ್ನು ಸೀಸೆಗಳಲ್ಲಿ ಭದ್ರವಾಗಿ ಮುಚ್ಚಿಟ್ಟು ತಣ್ಣಗಿರುವ ಜಾಗದಲ್ಲಿಡುವರು. ಈಥೈಲ್ ಆಲ್ಕೊಹಾಲನ್ನು ಅಸಿಟಿಕ್ ಆಮ್ಲ, ಅಸಿಟಿಕ್ ಆನ್‍ಹೈಡ್ರೈಡ್ ಅಥವಾ ಕೀಟೋನುಗಳೊಡನೆ ವರ್ತಿಸುವುದರಿಂದ ಈಥೈಲ್ ಅಸಿಟೇಟನ್ನು ಹೆಚ್ಚಿನ ಪ್ರಮಾಣದಲ್ಲಿ ತಯಾರಿಸಬಹುದು. ಅಸಿಟಾಲ್ಡಿಹೈಡಿನಿಂದ ಟಿಷೆಂಕೊ ಕ್ರಿಯೆಯ ಮೂಲಕವೂ ಇದನ್ನು ಪಡೆಯಬಹುದು. ನೈಟ್ರೊಸೆಲ್ಯುಲೋಸ್ ಮುಂತಾದ ಮೆರುಗೆಣ್ಣೆಗಳ ಲೀನಕಾರೀ ದ್ರವವಾಗಿ ಇದರ ಉಪಯೋಗ ಹೆಚ್ಚು.[೩] ಕೃತಕ ರುಚಿಕಾರಕ ಸುವಾಸನೆಗಳ ತಯಾರಿಕೆಯಲ್ಲಿ, ಅಸಿಟೇಟ್ ರೇಯಾನ್ ತಯಾರಿಕೆಯಲ್ಲಿ, ಹೊಗೆ ಆಡದ ಪುಡಿ ತಯಾರಿಕೆಯಲ್ಲಿ, ಕೃತಕ ಚರ್ಮದ ತಯಾರಿಕೆಯಲ್ಲಿ ಮತ್ತು ಛಾಯಾಗ್ರಹಣಕ್ಕೆ ಬೇಕಾದ ಫೊಟೊಫಿಲ್ಮಿನ ತಯಾರಿಕೆಯಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುವರು.
ಈಥೈಲ್ ಕ್ಲೋರೈಡ್ (Chloroethane)
ಬದಲಾಯಿಸಿಇದನ್ನು ಮಾನೊಕ್ಲೋರೊ ಈಥೇನ್ ಎಂದೂ ಕರೆಯಬಹುದು. ಇದರ ಅಣುಸೂತ್ರ CH3.CH2.Cl. ಬಣ್ಣವಿಲ್ಲದ ದ್ರವ. ಈಥರಿನಂಥ ಮಧುರ ಮಾಸನೆ ಇದೆ. ಹಸುರಂಚಿನ ಜ್ವಾಲೆಯಿಂದ ಉರಿಯುವುದು ಇದರ ವೈಶಿಷ್ಟ್ಯ. 0o ಸೆಂ. ಗ್ರೇ. ಉಷ್ಣತೆಯಲ್ಲಿ ಸಾಂದ್ರತೆ 0.9214. 12.5o ಸೆಂ. ಗ್ರೇ. ಉಷ್ಣತೆಯಲ್ಲಿ ಕುದಿಯುವುದು. ನೀರಿನಲ್ಲಿ ಅಲ್ಪ ದ್ರಾವ್ಯ. ಆಲ್ಕೊಹಾಲ್ ಮತ್ತು ಈಥರಿನಲ್ಲಿ ಲೀನವಾಗುವುದು. ನಿರ್ಜಲ ಸತುವಿನ ಕ್ಲೋರೈಡಿನ ಸಂಪರ್ಕದಲ್ಲಿ ಬಿಸಿಯಾದ ಈಥೈಲ್ ಆಲ್ಕೊಹಾಲಿಗೆ ಹೈಡ್ರೊಜನ್ ಕ್ಲೋರೈಡ್ ಅನಿಲ ಹಾಯಿಸಿದರೆ ಇದು ದೊರೆಯುವುದು.
100o ಸೆಂ. ಗ್ರೇ. ಉಷ್ಣತೆಯಲ್ಲಿ ಅಮೋನಿಯದೊಡನೆ ವರ್ತಿಸಿ ಈಥೈಲ್ ಅಮೀನ್ ಹೈಡ್ರೊಕ್ಲೋರೈಡ್ ಕೊಡುವುದು. ಪೊಟ್ಯಾಸಿಯಂ ಹೈಡ್ರಾಕ್ಸೈಡಿನೊಡನೆ ಕಾಯಿಸಿದಾಗ ಈಥೈಲ್ ಆಲ್ಕೊಹಾಲ್ ಉತ್ಪತ್ತಿ ಮಾಡುತ್ತದೆ. ಒಟ್ಟಿನಲ್ಲಿ ಆಲ್ಕೈಲ್ ಹ್ಯಾಲೈಡುಗಳ ಸಾರ್ವತ್ರಿಕ ಗುಣಲಕ್ಷಣಗಳನ್ನು ಪ್ರದರ್ಶಿಸುವುದು. ಲೋಹದ ಕ್ಲೋರೈಡುಗಳೊಡನೆ ವರ್ತಿಸಿ ಹರಳು ರೂಪದ ವಸ್ತುಗಳನ್ನು ಉಂಟುಮಾಡುವುದು. ಈಥೈಲ್ ಸೆಲ್ಯುಲೋಸ್ ಪ್ಲಾಸ್ಟಿಕ್ ಮತ್ತು ಪ್ರಸಿದ್ಧ ಪ್ರತ್ಯಾಘಾತವಾದ (ಆಂಟಿನಾಕ್) ಟೆಟ್ರ ಈಥೈಲ್ ಲೆಡ್ ತಯಾರಿಕೆಯಲ್ಲಿ ಈಥೈಲ್ ಕ್ಲೋರೈಡಿನ ಬಳಕೆ ಅನಿವಾರ್ಯ.
ಇದು ಕಡಿಮೆ ಉಷ್ಣತೆಯಲ್ಲಿ ಆವಿಯಾಗುವುದರಿಂದ ಸ್ಥಳೀಯ ವೇದನಾಪಹಾರಿಯಾಗಿ (ಲೋಕಲ್ ಅನೇಸ್ತೆಟಿಕ್) ಕಾರ್ಯನಿರ್ವಹಿಸಬಲ್ಲುದು. ದೇಹದ ನಿರ್ದಿಷ್ಟ ಭಾಗಕ್ಕೆ ಇದನ್ನು ಸಿಂಪಡಿಸಿದಾಗ ಆ ಭಾಗದಿಂದ ಉಷ್ಣ ಹೀರಿಕೊಂಡು ಆವಿಯಾಗಿ ಅದನ್ನು ತಾತ್ಕಾಲಿಕವಾಗಿ ಜಡಗೊಳಿಸುವುದು. ಈ ಅಲ್ಪಾವಧಿಯಲ್ಲಿ ಸಣ್ಣ ಶಸ್ತ್ರಕ್ರಿಯೆಗಳನ್ನು ಮಾಡಬಹುದು. ಇದೇ ಈಥೈಲ್ ಕ್ಲೋರೈಡಿನ ಮುಖ್ಯ ವೈದ್ಯಕೀಯ ಉಪಯೋಗ. ಶೈತ್ಯಕಾರಕವಾಗಿಯೂ ಬಳಸುವುದುಂಟು.
ಈಥೈಲ್ ಫಾರ್ಮೇಟ್ (Ethyl formate)
ಬದಲಾಯಿಸಿಇದರ ರಚನಾಸೂತ್ರ H.CO.O.CH2.CH3. ಪೀಚ್ ಹಣ್ಣಿನ ವಾಸನೆ ಹೊಂದಿರುವ, ಬಣ್ಣವಿಲ್ಲದ ದ್ರವ. 20o ಸೆಂ.ಗ್ರೇ. ಉಷ್ಣತೆಯಲ್ಲಿ ಇದರ ಸಾಂದ್ರತೆ 0.9168. 54.3o ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುತ್ತದೆ. ನೀರಿನಲ್ಲಿ ಅದ್ರಾವ್ಯ. ಆಲ್ಕೊಹಾಲ್, ಈಥರ್ ಮತ್ತು ಬೆಂಜೀನುಗಳಲ್ಲಿ ಬೆರೆಯುತ್ತದೆ. ಕೊಂಚ ಪ್ರಬಲ ಸಲ್ಫ್ಯೂರಿಕ್ ಆಮ್ಲದ ಸಂಪರ್ಕದಲ್ಲಿ ಈಥೈಲ್ ಆಲ್ಕೊಹಾಲ್ ಮತ್ತು ಫಾರ್ಮಿಕ್ ಆಮ್ಲಗಳನ್ನು ಕುದಿಸಿದರೆ ಈ ಎಸ್ಟರ್ ಬಟ್ಟಿ ಇಳಿಯುವುದು. ಬಂದ ದ್ರವಕ್ಕೆ ನೀರು ಸೇರಿಸಿದಾಗ ಎಸ್ಟರು ಬೇರ್ಪಡುವುದು. ಅದನ್ನು ಪ್ರತ್ಯೇಕಿಸಿ ಪುನಃ ಕುದಿಸಿ ಶುದ್ಧಿಗೊಳಿಸಬಹುದು. ಒಣಗಿದ ಹಣ್ಣುಗಳು, ಹೊಗೆಸೊಪ್ಪು ಮತ್ತು ಆಹಾರ ಪದಾರ್ಥಗಳನ್ನು ಕೀಟಗಳಿಂದ ರಕ್ಷಿಸಲು ಇದು ಸಹಾಯಕ. ಆನ್ಯೂರಿನ್ (ಜೀವಾತು-ಬಿ1) ತಯಾರಿಕೆಯಲ್ಲೂ ಇದರ ಉಪಯೋಗವಿದೆ.
ಈಥೈಲ್ ಲ್ಯಾಕ್ಟೇಟ್ (Ethyl lactate)
ಬದಲಾಯಿಸಿರಾಸಾಯನಿಕ ಸೂತ್ರ C5H10O3. ರಚನಾ ಸೂತ್ರ ಕೆಳಕಂಡಂತಿದೆ —
CO.O.CH2.CH3 | CHOH | CH3
ವಾಸನೆ ಮಧುರ. ನಿರ್ವರ್ಣ ದ್ರವ. ಇದರ ಸಾಂದ್ರತೆ 19o ಸೆಂ.ಗ್ರೇ. ಉಷ್ಣತೆಯಲ್ಲಿ 1.0308. 154o ಸೆಂ.ಗ್ರೇ. ಉಷ್ಣತೆಯಲ್ಲಿ ಕುದಿಯುವುದು. ನೀರು ಮತ್ತು ಸಾವಯವ ಲೀನಕಾರಿಗಳಲ್ಲಿ ದ್ರಾವ್ಯ. dI - ಲ್ಯಾಕ್ಟಿಕ್ ಆಮ್ಲ ಈಥೈಲ್ ಆಲ್ಕೊಹಾಲ್ ಮತ್ತು ಬೆಂಜೀನುಗಳ ಮಿಶ್ರಣವನ್ನು ನಿರ್ಜಲಕಾರಿಯೊಂದರ ಸಂಪರ್ಕದಲ್ಲಿ ಕಾಯಿಸಿದರೆ ಈಥೈಲ್ ಲ್ಯಾಕ್ಟೇಟ್ ಬಟ್ಟಿ ಇಳಿಯುವುದು. ಜಲಶೋಷಣೆಗಾಗಿ ಪ್ರಬಲ ಸಲ್ಫ್ಯೂರಿಕ್ ಆಮ್ಲ ಅಥವಾ ಬೆಂಜೀನ್ ಸಲ್ಫಾನಿಕ್ ಆಮ್ಲವನ್ನು ಬಳಸುವುದು ವಾಡಿಕೆ. ಸೆಲ್ಯುಲೋಸ್ ನೈಟ್ರೇಟ್ ಮತ್ತು ಅಸಿಟೇಟುಗಳಿಗೂ ಅನೇಕ ಲ್ಯಾಕರ್ ಮತ್ತು ಅಂಟುಗಳಿಗೂ ಇದು ಉತ್ತಮ ಲೀನಕಾರಿ ಎನಿಸಿಕೊಂಡಿದೆ.[೪][೫]
ಈಥೈಲ್ ಸಿಲಿಕೇಟ್ (Tetraethyl orthosilicate)
ಬದಲಾಯಿಸಿಸಿಲಿಕಾನ್ ಎಸ್ಟರ್ ಎಂದೂ ಹೆಸರುಳ್ಳ ಈ ಸಂಯುಕ್ತದ ಅಣುಸೂತ್ರ Si(OC2H5)4. ಪ್ಯಾರಾಫಿನ್ ಎಣ್ಣೆಯನ್ನು ಹೋಲುವ ಹಿತಕರವಾದ ವಾಸನೆಯುಳ್ಳ ದ್ರವ. ಘನೀಭವಿಸುವ ಬಿಂದು — 77o ಸೆಂ.ಗ್ರೇ.; ಕುದಿಡಿಯುವ ಬಿಂದು 168o ಸೆಂ.ಗ್ರೇ. ಈಥೈಲ್ ಆಲ್ಕೊಹಾಲ್ ಸಿಲಿಕಾನ್ ಟೆಟ್ರಕ್ಲೋರೈಡಿನೊಡನೆ ವರ್ತಿಸಿದಾಗ ಇದು ಉತ್ತತ್ತಿಯಾಗುತ್ತದೆ. ಪೆಟ್ರೋಲ್, ಆಲ್ಕೊಹಾಲ್, ಬೆಂಜೀನ್ ಮುಂತಾದ ಸಾವಯವ ಲೀನಕಾರಿಗಳೊಡನೆ ಸರಾಗವಾಗಿ ಬೆರೆಯುವುದು. ನೀರಿನೊಡನೆ ಬೆರೆಯುವುದಿಲ್ಲ. ಆದರೆ ನೀರಿನ ಸಂಪರ್ಕದಲ್ಲಿ ವಿಭಜನೆ ಹೊಂದಿ ಈಥೈಲ್ ಆಲ್ಕೊಹಾಲ್ ಮತ್ತು ಸಿಲಿಟಿಕ್ ಆಮ್ಲಗಳನ್ನು ಕೊಡುವುದು. ಸಿಲಿಟಿಕ್ ಆಮ್ಲ ಕ್ರಮೇಣ ನಿರ್ಜಲಗೊಂಡು ಗಟ್ಟಿಯಾದ ಸಿಲಿಕಾನ್ ಡೈ ಆಕ್ಸೈಡ್ ಆಗುವುದು. ಈ ವಿಶಿಷ್ಟ ಗುಣವಿರುವುದರಿಂದ, ಕಲ್ಲುಕಟ್ಟಡಕ್ಕೆ ನೀರು ಕೆಂದದಂತೆ ಮಾಡಲು, ನಿಖರಾಕೃತಿಯನ್ನು ಅಚ್ಚು ಹೊಯ್ಯಲು (ಪ್ರಿಸಿಷನ್ ಕ್ಯಾಸ್ಟಿಂಗ್) ಮತ್ತು ಸಂದುಗಾರೆಯಾಗಿ ಈಥೈಲ್ ಸಿಲಿಕೇಟ್ ಉಪಯೋಗವಾಗುತ್ತಿದೆ.
ಉಲ್ಲೇಖಗಳು
ಬದಲಾಯಿಸಿ- ↑ Merck Index, 11th Edition, 3715.
- ↑ Ethyl acrylate Datasheet at Inchem.org
- ↑ Riemenschneider, Wilhelm; Bolt, Hermann M. "Esters, Organic". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a09_565.pub2.
{{cite encyclopedia}}
: Cite has empty unknown parameter:|authors=
(help) - ↑ Stoye, Dieter (2000). "Solvents". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a24_437.
{{cite encyclopedia}}
: Cite has empty unknown parameter:|authors=
(help) - ↑ "Industrial Solvents Handbook" by Ernest W. Flick. 5th Edition. William Andrew Inc., 1998. ISBN 0-8155-1413-1, ISBN 978-0-8155-1413-8