ಇಂಗ್ಲಿಷ್ ಸಾಹಿತ್ಯ ವಿಮರ್ಶೆ

ಸೃಜನಾತ್ಮಕ ಸಾಹಿತ್ಯ ರಚಿತವಾದ ಅನಂತರ ಅದರ ಲಕ್ಷಣ, ಸ್ವರೂಪಗಳನ್ನು ವಿವರಿಸುವ ವಿಮರ್ಶೆ ಬೆಳೆದು ಬರುತ್ತದೆ ಎಂಬ ವಿಷಯ ಎಲ್ಲಾ ಸಾಹಿತ್ಯಕ್ಕೂ ಅನ್ವಯಿಸುವ ಮಾತು. ಆದರೆ ವಿಮರ್ಶನ ಗ್ರಂಥಗಳು ಸ್ಪಷ್ಟವಾಗಿ ರಚನೆಗೊಳ್ಳುವ ಮೊದಲಿಗೂ ರೂಪುಗೊಂಡ ಸೃಜನಾತ್ಮಕ ಸಾಹಿತ್ಯದಲ್ಲಿ ವಿಮರ್ಶೆಯ ರೇಕುಗಳನ್ನು ಕಂಡಲ್ಲಿ ಆಶ್ಚರ್ಯಪಡಬೇಕಾದುದಿಲ್ಲ. ಇಂಗ್ಲಿಷ್ ಸಾಹಿತ್ಯದ ಅರುಣೋದಯ ಕಾಲದಲ್ಲಿ ಫ್ರೆಂಚ್ ಮತ್ತು ಇಟಾಲಿಯನ್ ಸಾಹಿತ್ಯದಿಂದ ವಸ್ತುವನ್ನು ಆಯ್ಕೆ ಮಾಡುವಲ್ಲಿ, ತನ್ನ ಕಥನ ಕವನಗಳಲ್ಲಿ ಸಾಧಿಸಿರುವ ಸ್ಪಷ್ಟ ಪಾತ್ರಸೃಷ್ಟಿ, ಭಾಷೆಯ ಔಚಿತ್ಯ, ಸಾವಯವ ಪ್ರಮಾಣ-ಮುಂತಾದ ಅನೇಕ ವಿಷಯಗಳಲ್ಲಿ ಚಾಸರ್ ಮಹಾಕವಿ ವಿಮರ್ಶಕನಿಗೆ ಅಗತ್ಯವಾದ ಪ್ರೌಢ ವಿವೇಚನೆಯನ್ನು ತೋರಿಸಿದ್ದಾನೆ. ಆದರೆ ಇಂಗ್ಲಿಷ್ ವಿಮರ್ಶೆ ಪ್ರಾರಂಭವಾದದ್ದು ಹೊಸ ಹುಟ್ಟಿನ ರಿನೇಸಾನ್ಸ್ ಕಾಲದಿಂದ ಎನ್ನುವುದು ನಿಜ.

ಹೊಸ ಹುಟ್ಟಿನ ಯುಗ-ಎಲಿಜಬೆತ್ ಕಾಲದ ವಿಮರ್ಶೆ

ಬದಲಾಯಿಸಿ
  • ಹೊಸ ಹುಟ್ಟಿನ ಯುರೋಪಿಯನ್ ಸಾಹಿತ್ಯದಿಂದ ಪ್ರಭಾವಿತವಾದ ೧೫ ಮತ್ತು ೧೬ನೆಯ ಶತಮಾನದ ಇಂಗ್ಲೆಂಡಿನ ಎಲಿಜಬೆತ್ ಯುಗದಲ್ಲಿ, ಇಂಗ್ಲಿಷ್ ಅಭಿಜಾತ ಸಾಹಿತ್ಯ ಸೃಷ್ಟಿಗೆ ಹೇಗೆ ಮಾದರಿ, ಸ್ಫೂರ್ತಿ ಒದಗಿಸಿತೋ ಹಾಗೆಯೇ ಇಂಗ್ಲಿಷ್ ವಿಮರ್ಶಾ ಪರಂಪರೆಗೂ ಅದು ಪ್ರೇರಣೆ ನೀಡಿತು. ಜಾನ್ಸನ್ ನ ಕಾಲದವರೆಗೂ ಅಭಿಜಾತ ಸಾಹಿತ್ಯದ ಸೂತ್ರ, ಸಿದ್ಧಾಂತಗಳೇ ಇಂಗ್ಲಿಷ್ ವಿಮರ್ಶೆಯ ಮೇಲೆ ಮಹತ್ತರವಾದ ಪ್ರಭಾವ ಬೀರಿದವು.
  • ಸಿಡ್ನಿ, ಸ್ಪೆನ್ಸರ್, ಜಾಪ್ಮನ್, ಮಾರ್ಲೊ ಮುಂತಾದ ಪ್ರತಿಭಾನ್ವಿತ ಕವಿಗಳು ಅಭಿಜಾತ ಸಾಹಿತ್ಯದಲ್ಲಿ ಗುರುತಿಸಿದ ಮುಖ್ಯ ಗುಣಗಳೆಂದರೆ ಅಲ್ಲಿನ ಸ್ವಾತಂತ್ರ್ಯ, ಸಮೃದ್ಧಿ ಹಾಗೂ ಭಾಷೆಯ ಔಚಿತ್ಯ. ಈ ಅಂಶಗಳನ್ನು ಅಂದಿನ ವಿಮರ್ಶಕರು ಮಾತ್ರ ಸರಿಯಾಗಿ ಗ್ರಹಿಸ ಲಿಲ್ಲ. ಎಲಿಜಬೆತ್ ಕಾಲದ ಮೊಟ್ಟಮೊದಲ ವಿಮರ್ಶಾಗ್ರಂಥಗಳೆಂದು ಹೇಳಬಹುದಾದ ಕೃತಿಗಳಲ್ಲಿ ಸಾಹಿತ್ಯ ಚಿಂತನೆಗಿಂತಲೂ ಮಿಗಿಲಾಗಿ, ಕಾವ್ಯವಸ್ತುವಿನ ಮೇಲೆ ಆಧಾರಿತವಾದ ವಿಂಗಡಣೆ, ವಿಭಜನೆ, ಛಂದಸ್ಸಿನ ಸ್ವರೂಪ-ಇವುಗಳನ್ನು ಕುರಿತ ಚರ್ಚೆಯ ಮಂಜು ದಟ್ಟವಾಗಿ ಹರಡಿದೆ. *ಮಧ್ಯೆ ಆಗಾಗ ಅತ್ಯಂತ ಕಲ್ಪನಾಮಯವಾದ, ನವಿರಾದ ತಾತ್ತ್ವಿಕ ಚಿಂತನೆ, ವಿಚಾರ ಮಂಥನಗಳೂ ಕಾಣಸಿಗುತ್ತವೆ. ಇವೆಲ್ಲ ಅಭಿಜಾತ ಸಾಹಿತ್ಯದ ಪ್ರೇರಣೆಯಿಂದ ಹೊಮ್ಮಿದ ಅಂಶಗಳಾದರೂ ಪ್ಲೇಟೊ, ಅರಿಸ್ಟಾಟಲ್ ರಲ್ಲಿ ಕಾಣುವ ವಿಚಾರವೈಶಾಲ್ಯ, ಗಾಢಚಿಂತನೆಗಳು ಇಲ್ಲಿ ವಿರಳ. ಶಾಶ್ವತಕೀರ್ತಿ ದೊರಕಿಸಿಕೊಂಡ ಇಂಗ್ಲಿಷ್ ವಿಮರ್ಶಾಗ್ರಂಥವೆಂದರೆ-ಫಿಲಿಪ್ ಸಿಡ್ನಿಯ ಅಪಾಲಜಿ ಫಾರ್ ಪೊಯಟ್ರಿ (ಕಾವ್ಯಕ್ಕೊಂದು ಸಮರ್ಥನೆ).
  • ವಿಚಾರದ ಸ್ವೋಪಜ್ಞತೆಗಿಂತ ಹೆಚ್ಚಾಗಿ ಈ ಗ್ರಂಥದಲ್ಲಿ, ಲೇಖಕನ ನವಿರಾದ ತಾತ್ತ್ವಿಕಚಿಂತನೆ, ಕಾವ್ಯವನ್ನು ಕುರಿತ ಉತ್ಕರ್ಷ, ಸುಸಂಸ್ಕೃತ ಅಭಿರುಚಿ, ತನ್ನ ಉತ್ಕೃಷ್ಟ ವ್ಯಕ್ತಿತ್ವಕ್ಕೆ ಅನುಗುಣವಾದ ಸರಳ ಮನೋಧರ್ಮ-ಇವುಗಳನ್ನೇ ಕಾಣುತ್ತೇವೆ. ಮಾರ್ಲೊ, ಷೇಕ್ಸ್ಪಿಯರ್ ಮೊದಲಾದವರ ಕೃತಿಗಳು ಅರಳುವುದಕ್ಕೆ ಮುಂಚೆ ಸಿಡ್ನಿ ತನ್ನ ಗ್ರಂಥ ಬರೆದವನಾದ್ದರಿಂದ ಅವನಿಗೆ ತನ್ನ ಕಾಲದ ಜನಪ್ರಿಯ ರಂಗಭೂಮಿಯ ಬಗ್ಗೆ ಅಷ್ಟೇನೂ ಗೌರವವಿರಲಿಲ್ಲ.
  • ಪ್ಲೇಟೊ, ಅರಿಸ್ಟಾಟಲರ ನಡುವೆ ಉಂಟಾದ ಜಿಜ್ಞಾಸೆಯನ್ನೇ ಹೋಲು ವ ವಿಚಾರ ಸಮುದಾಯ ಇಂಗ್ಲಿಷ್ ವಿಮರ್ಶೆಯಲ್ಲಿ ಮೊದಲು ಅಭಿವ್ಯಕ್ತಿ ಪಡೆದುದು ಸಿಡ್ನಿಯ ಗ್ರಂಥದಲ್ಲಿ. ಸಿಡ್ನಿ ಕಾವ್ಯದ ಬಗೆಗೆ ಮಾತನಾಡುತ್ತ ಚಿತ್ರ, ಇದರ ಗುರಿ ಉಪದೇಶ ಮತ್ತು ಆನಂದ ಎಂದ. ಕಾವ್ಯವು ಆನಂದವನ್ನು ಕೊಡುತ್ತದೆ. ಧಾರ್ಮಿಕ ಬದುಕಿಗೆ ಪ್ರಚೋದನೆಯನ್ನೂ ನೀಡು ತ್ತದೆ. ತತ್ತ್ವಶಾಸ್ತ್ರ, ಅಮೂರ್ತ ಇತಿಹಾಸವು ನಿರ್ದಿಷ್ಟ ವ್ಯಕ್ತಿಗಳ ಸುತ್ತ ಹೆಣೆದುಕೊಳ್ಳುತ್ತದೆ.
  • ಕವಿಯೂ ಮೂರ್ತ, ಅಮೂರ್ತಗಳನ್ನು ಒಂದುಗೂಡಿಸುತ್ತಾನೆ. ಸದ್ಗುಣವನ್ನು ಅತ್ಯಂತ ಪರಿಣಾಮಕಾರಿಯಾಗಿ ಬಿತ್ತಬಲ್ಲ ಕಾವ್ಯವು ಬೇರಿಲ್ಲ, ಶಾಸ್ತ್ರಗಳನ್ನು ಮೀರಿಸಿದ್ದು; ಇದು ಅವನ ಕಾವ್ಯ ಸಮ ರ್ಥನೆ. ಬೆನ್ ಜಾನ್ಸನ್ ನ ಡಿಸ್ಕವರೀಸ್ ಎಂಬ ಗ್ರಂಥದಲ್ಲಿ ಅವನ ಶಿಷ್ಟ ಅಭಿರುಚಿ, ಸಂಪ್ರದಾಯಶೀಲತೆಗಳನ್ನು ಕಾಣಬಹುದು.
  • ಅಭಿಜಾತ ಸಾಹಿತ್ಯದಿಂದಲೇ ಎತ್ತಿಕೊಂಡಂತೆ ಕಾಣುವ, ಅವನ ಹಲವು ತಪ್ಪು ಒಪ್ಪ್ಪುಗಳಿಂದ ತುಂಬಿದ ಕಾವ್ಯಸೂತ್ರಗಳಿಗೆ ಅವನ ವೈದೃಶ್ಯಪೂರ್ಣ ವ್ಯಕ್ತಿತ್ವವೇ ಅಚ್ಚುಕಟ್ಟಾದ ಸಮಗ್ರೀಕರಣ ನೀಡುತ್ತದೆ. ಅಭಿಜಾತಸಾಹಿತ್ಯಸೂತ್ರಗಳನ್ನು ಮೊಟ್ಟಮೊದಲು ತನ್ನ ಸೂತ್ರ ಹಾಗೂ ಪ್ರಯೋಗಗಳಲ್ಲಿ ಕಾರ್ಯಪ್ರವೃತ್ತಗೊಳಿಸಿದವ ಬೆನ್ಜಾನ್ಸನ್.

೧೬ನೆಯ ಶತಮಾನದ ಕಾವ್ಯ

ಬದಲಾಯಿಸಿ
  • ಎಲಿಜಬೆತ್ ಯುಗದ ನಾಟಕ ಪ್ರಪಂಚಕ್ಕೆ ಷೇಕ್ಸ್ಪಿಯರ್ ಇರುವಂತೆ ಆ ಯುಗದ ಕಾವ್ಯಲೋಕಕ್ಕೆ ಎಡ್ಮಂಡ್ ಸ್ಪೆನ್ಸರ್. ಕವಿಗಳ ಕವಿ ಎಂದು ಕೀರ್ತಿಶಾಲಿಯಾಗಿರುವ ಸ್ಪೆನ್ಸರ್ ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಘಟನೆಗಳನ್ನು ರೂಪಕವಾಗಿ ಫೇರಿ ಕ್ವೀನ್ ಎಂಬ ತನ್ನ ಸುದೀರ್ಘವಾದ ಕಾವ್ಯದಲ್ಲಿ ಚಿತ್ರಿಸಿದ್ದಾನೆ. ಮಧ್ಯಯುಗದ ಆದರ್ಶವೀರರ ಕಥೆಗಳ ಮಾದರಿಯ ಮೇಲೆ ರಚಿತವಾಗಿರುವ ಈ ಕಾವ್ಯ ಶ್ರೀಮಂತ ಯುವಕರಿಗೆ ಒಳ್ಳೆಯ ನಡತೆಯ ಶಿಕ್ಷಣವೀಯುವ ಉದ್ದೇಶವುಳ್ಳದ್ದೆಂದು ಸ್ಪೆನ್ಸರನೇ ಹೇಳಿದ್ದಾನೆ.
  • ಅದ್ಭುತ ಘಟನೆಗಳು ನೀತಿಬೋಧಕವಾದ ಸಾಂಕೇತಿಕ ಪ್ರಸಂಗಗಳು, ಸಮಕಾಲೀನ ಘಟನೆಗಳ ಮತ್ತು ವ್ಯಕ್ತಿಗಳ ಪರೋಕ್ಷ ಚಿತ್ರಗಳು ಸುಂದರ ವರ್ಣನೆಗಳು ಸುಮಧುರ ಛಂದೋವಿಲಾಸ ಮುಂತಾದ ಅನೇಕ ಗುಣಗಳಿಂದ ಶೋಭಿಸುವ ಈ ಕಾವ್ಯ ಇಂಗ್ಲಿಷ್ ಕಾವ್ಯಗಳಿಗೆ ಗುರುವಿನಂತಿದೆ. ದಿ ಷೆಪಡ್ರ್ಸ್ ಕ್ಯಾಲೆಂಡರ್ ಎಂಬ ಗೊಲ್ಲಗೀತೆಗಳ ವರ್ಗಕ್ಕೆ ಸೇರಿದ ಕವನವನ್ನೂ ಇನ್ನೂ ಆನೇಕ ಸಣ್ಣಪುಟ್ಟ ಕವನಗಳನ್ನೂ ಸ್ಪೆನ್ಸರ್ ರಚಿಸಿದ್ದಾನೆ. ಏನೇ ಬರೆಯಲಿ ಅವನ ವರ್ಣನಾವ್ಯೆಖರಿ ಮತ್ತು ನಾದಮಧುರತೆ ಎಲ್ಲೆಲ್ಲೂ ಎದ್ದು ಕಾಣುತ್ತವೆ.
  • ನುರಿತ ಚಿತ್ರಕಾರನಂತೆ ಪದಗಳ ಪ್ರಯೋಗದಿಂದ ಚೆಲುವಿನ ಕೃತಿಗಳನ್ನು ಈತ ಸೃಷ್ಟಿಸಿದ್ದಾನೆ. ಅವನ ಫೇರಿ ಕ್ವೀನ್ ಕವನದ ಛಂದಸ್ಸು ಅನೇಕ ಇಂಗ್ಲಿಷ್ ಕವಿಗಳಿಗೆ ಅಭಿವ್ಯಕ್ತಿ ಮಾಧ್ಯಮವನ್ನೊದಗಿಸಿದೆ. ಇಂಗ್ಲಿಷ್ ಸಾನೆಟ್ ಗಳ ಚರಿತ್ರೆಯಲ್ಲೂ ಸ್ಪೆನ್ಸರನಿಗೆ ಹಿರಿಯ ಸ್ಥಾನವಿದೆ. ಅವನ ಸಮಕಾಲೀನನಾಗಿದ್ದ ಸರ್ ಫಿಲಿಪ್ ಸಿಡ್ನಿಯೂ ಪ್ರಸಿದ್ಧ ಸಾನೆಟ್ಟುಗಳನ್ನಲ್ಲದೆ ಇತರ ಬಗೆಯ ಭಾವಗೀತೆಗಳನ್ನೂ ಆರ್ಕೇಡಿಯ ಎಂಬ ರಮ್ಯಕಥೆಯನ್ನೂ ಅಪಾಲಜಿ ಫಾರ್ ಪೊಯಸಿ ಎಂಬ ಕಾವ್ಯಸಮರ್ಥನಾತ್ಮಕವಾದ ಪ್ರಬಂಧವನ್ನೂ ಬರೆದಿದ್ದಾನೆ. ಲಾಡ್ಜ್, ನ್ಯಾಷ್, ಮಾರ್ಲೊ ಇವರೆಲ್ಲರೂ ಹಲಕೆಲವು ಒಳ್ಳೆಯ ಭಾವಗೀತೆಗಳನ್ನು ರಚಿಸಿದ್ದಾರೆ.

೧೭ನೆಯ ಶತಮಾನ-ಡ್ರೈಡನ್ ಯುಗ

ಬದಲಾಯಿಸಿ
  • ೧೭ನೆಯ ಶತಮಾನದಲ್ಲಿ ಬೆಳೆದ ನಿಯೋಕ್ಲಾಸಿಕಲ್ ಸಂಪ್ರದಾಯಕ್ಕೆ ಮೂಲಸ್ಫೂರ್ತಿ ಇಟಲಿಯ ಸಾಹಿತ್ಯ. ಆದರೆ ನಿಯೋಕ್ಲಾಸಿಕಲ್ ಪಂಥದ ಪ್ರಭಾವ ಯುರೋಪಿನಲ್ಲಿ ವ್ಯಾಪಕವಾಗಿ ಪ್ರಸಾರವಾಗಲು ಮುಖ್ಯ ಕಾರಣರಾದವರು ಕಾರ್ನಿಲ್, ಬ್ವಾಲೋ, ರ್ಯಾಸಿನ್ , ಲಾ ಬೋಸು ಮೊದಲಾದ ಫ್ರೆಂಚ್ ಸಾಹಿತಿಗಳು. ಇವರ ಪ್ರಭಾವ ಇಂಗ್ಲಿಷ್ ಸಾಹಿತ್ಯದ ಮೇಲೂ ಮೈಚಾಚಿ ಹರಡಿತು.
  • ನಿಯೋಕ್ಲಾಸಿಕಲ್ ಪಂಥವನ್ನು ಇಂಗ್ಲೆಂಡಿನಲ್ಲಿ ಪ್ರಚಲಿತಗೊಳಿಸಿ, ಇಂಗ್ಲಿಷ್ ಸಾಹಿತ್ಯ ವಿಮರ್ಶಾಪರಂಪರೆಯನ್ನು ಹೊಸಹಾದಿಗೆ ಹಚ್ಚಿದವರಲ್ಲಿ ಡ್ರೈಡನ್ ನ ಪಾತ್ರ ಅತ್ಯಂತ ಮುಖ್ಯ. ಸಮಕಾಲೀನ ಫ್ರೆಂಚ್ ಸಾಹಿತ್ಯದ ವಿದ್ಯಮಾನಗಳನ್ನು ಆತ ಚೆನ್ನಾಗಿ ತಿಳಿದಿದ್ದ. ಸ್ವಲ್ಪಮಟ್ಟಿಗೆ ಫ್ರೆಂಚ್ ಸಾಹಿತಿಗಳ ದೃಷ್ಟಿಯನ್ನು ಸಮರ್ಥಿಸುತ್ತಿದ್ದ. ಆದರೂ ಆತ ಸಂಪೂರ್ಣವಾಗಿ ಫ್ರೆಂಚ್ ಪ್ರಭಾವಕ್ಕೆ ಸೋಲಲಿಲ್ಲ. ಫ್ರೆಂಚ್ ವಿಮರ್ಶಕ ಬ್ವಾಲೋ ತನ್ನ ಹಿಂದಿನ ಸಾಹಿತಿಗಳನ್ನು ಕುರಿತು ಅವಹೇಳನ ಮಾಡಿದ ಹಾಗೆ ಡ್ರೈಡನ್ ತಪ್ಪು ದಾರಿ ಹಿಡಿಯಲಿಲ್ಲ.
  • ಫ್ರೆಂಚ್ ನಾಟಕಕಾರರನ್ನು ಮೆಚ್ಚಿಕೊಂಡರೂ ತನ್ನ ಪೂರ್ವಜರಾದ ಬೆನ್ ಜಾನ್ಸನ್, ಷೇಕ್ಸ್ಪಿಯರ್ ಮೊದಲಾದವರ ಘನವಾದ ಸಾಧನೆಗಳನ್ನು ಆತ ಮೆಚ್ಚಿಕೊಂಡ. ಉತ್ತಮ ಸಾಹಿತ್ಯ ಕೇವಲ ನೀತಿನಿಯಮಗಳ ಕಠಿಣ ಅನುಸರಣೆಯಿಂದ ಸೃಷ್ಟಿಯಾಗಲಾರದು, ಸಾಹಿತಿಗೆ ಮಿತಿಮೀರಿದ ಪೂರ್ವಗ್ರಹ ಸಲ್ಲದು-ಎಂಬ ವಿಚಾರವನ್ನು ಡ್ರೈಡನ್ ತನ್ನ ಜೀವನದುದ್ದಕ್ಕೂ ಅರಿಯುತ್ತ ಬಂದ. ತನ್ನ ನಾಟಕಗಳಿಗೆ ಆತ ಜೋಡಿಸಿರುವ ಪೀಠಿಕೆಗಳು, ಅರ್ಪಣೆಗಳು, ಹಿನ್ನುಡಿಗಳು ಅವನ ಸೂಕ್ಷ್ಮ ವಿಚಾರದೃಷ್ಟಿ, ಬೌದ್ಧಿಕ ಪ್ರಾಮಾಣಿಕತೆಗಳಿಗೆ ಸಾಕ್ಷ್ಷಿಯಾಗಿವೆ.
  • ಹಿಂದೆಂದೂ ಯಾವ ಇಂಗ್ಲಿಷ್ ಲೇಖನದಲ್ಲೂ ಕಾಣದ ಉಕ್ತಿಯ ಸರಳತೆ, ಸಂಭಾಷಣರೂಪದ ಆತ್ಮೀಯತೆ, ಮಾತಿನ ಕಸುವುಗಳನ್ನು ಡ್ರೈಡನ್ನನ ರೂಪಕ ಕಾವ್ಯ ಕುರಿತ ಪ್ರಬಂಧ (ಎಸ್ಸೇ ಆನ್ ಡ್ರಮ್ಯಾಟಿಕ್ ಪೊಯಟ್ರಿ), ಕಟ್ಟು ಕಥನಗಳಿಗೆ ಬರೆದ ಪೀಠಿಕೆ (ಪ್ರಿಫೇಸ್ ಟು ದ ಫೇಬಲ್ಸ್)-ಮುಂತಾದ ರಚನೆಗಳಲ್ಲಿ ಕಾಣುತ್ತೇವೆ. ತುಲನಾತ್ಮಕ ವಿಮರ್ಶಾವಿಧಾನವನ್ನು ರೂಪಿಸಿದ ಖ್ಯಾತಿ ಡ್ರೈಡನ್ ಗೆ ಸಲ್ಲಬೇಕು.
  • ಎರಡು ಸಾಹಿತ್ಯಕೃತಿಗಳು ಅಥವಾ ಇಬ್ಬರು ಸಾಹಿತಿಗಳ ನಡುವೆ ಕಾಣಬಹುದಾದ ಗುಣಲಕ್ಷಣಗಳ ಹೋಲಿಕೆ ವ್ಯತ್ಯಾಸಗಳನ್ನು ವಿವೇಚಿಸಿ, ಸಲ್ಲಬೇಕಾದ ಸ್ಥಾನವನ್ನು ಖಚಿತವಾಗಿ ನಿರ್ಧರಿಸಬೇಕೆನ್ನುವ ವಿಧಾನವನ್ನು ಎಲಿಜಬೆತ್ ಯುಗದ ವಿಮರ್ಶೆಯಲ್ಲಿ ಅಲ್ಲಲ್ಲಿ ಕಂಡರೂ ಅದಕ್ಕೊಂದು ವೈಜ್ಞಾನಿಕ ದೃಷ್ಟಿ, ವ್ಯವಸ್ಥೆ ನೀಡಿದವನು ಡ್ರೈಡನ್.
  • ಆ ಕಾಲದಲ್ಲಿ ಈ ರೀತಿಯ ತುಲನಾತ್ಮಕ ವಿಧಾನದಿಂದ ತಪ್ಪುಗಳಾಗಲಿಲ್ಲವೆಂದಲ್ಲ. ಡ್ರೈಡನ್ ಸಹ ಅಲ್ಲಲ್ಲಿ ತಪ್ಪು ಮಾಡುತ್ತಾನೆ: ಆದರೆ ಆತ ನೀಡಿರುವ ಹೊರೇಸ್, ಜೂವಿನಲ್, ಹೋಮರ್, ವರ್ಜಿಲ್, ಷೇಕ್ಸಪಿಯರ್, ಬೆನ್ ಜಾನ್ಸನ್, ಕಾರ್ನಿಲ್-ಇವರನ್ನು ಕುರಿತ ವಿವೇಚನಾಯುಕ್ತ ವಿಶ್ಲೇಷಣೆ ಇಂಗ್ಲಿಷ್ ವಿಮರ್ಶೆಯಲ್ಲಿ ಹೊಸ ಅಧ್ಯಾಯ ತೆರೆದು ತೋರಿಸಿತು.

೧೮ನೆಯ ಶತಮಾನ-ಪೋಪ್, ಜಾನ್ಸನ್

ಬದಲಾಯಿಸಿ
  • ೧೭ ಹಾಗೂ ೧೮ನೆಯ ಶತಮಾನದ ತಾತ್ತ್ವಿಕರು, ದಾರ್ಶನಿಕರು, ಪ್ರಕೃತಿಯನ್ನು ಕುರಿತ ಹಲವು ಸರಳ ವಿಶ್ಲೇಷಣೆಗಳನ್ನು ನೀಡಿದರು. ಪ್ರಕೃತಿಸೃಷ್ಟಿಗೊಂದು ನಿಶ್ಚಿತ ಸ್ವರೂಪವಿದೆಯೆಂದೂ ಅದನ್ನು ಅನುಲಕ್ಷಿಸುವ ಮಾನವವಿವೇಚನೆಗೆ ಸುಲಭಗ್ರಾಹ್ಯವೆಂದೂ ಅವರು ಸೂಚಿಸಿದರು. ಈ ವಿಚಾರ ಪರಂಪರೆ ಅಂದಿನ ವಿಮರ್ಶಾ ಸಾಹಿತ್ಯದ ಮೇಲೂ ಪ್ರಭಾವ ಬೀರಿತು. ಪ್ರಕೃತಿನಿಯಮವನ್ನು ಜೀವನಕ್ಕೆ ಯಥೋಚಿತವಾಗಿ ಅಳವಡಿಸಿಕೊಳ್ಳುವಂತೆ ಸಾಹಿತ್ಯದ ಮೂಲಸೂತ್ರಗಳನ್ನು ಬಳಸಿಕೊಳ್ಳಬೇಕೆಂದರು.
  • ಈ ಪ್ರವೃತ್ತ್ತಿಯ ಮೂರು ಮುಖಗಳನ್ನು ಇಂಗ್ಲಿಷ್ ವಿಮರ್ಶೆಯಲ್ಲಿ ನಾವು ಡ್ರೈಡನ್, ಪೋಪ್ ಹಾಗೂ ಜಾನ್ಸನ್ರ ವಿಮರ್ಶಾಕೃತಿಗಳಲ್ಲಿ ಕಾಣುತ್ತೇವೆ. ನಿಯೋಕ್ಲಾಸಿಕಲ್ ತತ್ತ್ವವನ್ನು ಸ್ವಲ್ಪ ಕಠಿಣವಾಗಿ ವಿಧಿಸಿದವನೆಂದರೆ ಪೋಪ್. ಈ ಯುಗದ ಮೊದಲ ಭಾಗದಲ್ಲಿ ಬಂದ ಡ್ರೈಡನ್ನನಿಗೆ, ಕೊನೆ ಯಲ್ಲಿ ಬಂದ ಜಾನ್ಸನ್ನನಿಗೆ, ಪೋಪನ ಸೂತ್ರಾಂಧತೆ ಸುಲಭ ಸ್ವೀಕೃತವೆನಿಸಲಿಲ್ಲ.
  • ಸಂಕುಚಿತವಾದ ಸೂತ್ರಗಳನ್ನೇ ಪಟ್ಟುಹಿಡಿದು ಸಾಧಿಸಿದ ಆ ಯುಗದಲ್ಲೂ ಷೇಕ್ಸ್ಪಿಯರ್ನ ಅಸಾಧಾರಣ ಪ್ರತಿಭೆಯನ್ನು ಚರ್ಚಿಸುವಾಗ ಜಾನ್ಸನ್ ತಾನು ನಂಬಿ ಕೈಹಿಡಿದ ಶುಷ್ಕ ಸೂತ್ರಗಳನ್ನು ಬಿಟ್ಟು ಕೊಡ ಬೇಕಾಯಿತು. ಇದಕ್ಕೆ ಅವನ ಗಾಢ ಲೌಕಿಕಜ್ಞಾನ, ವಿಚಾರಶೀಲತೆಗಳೇ ನೆರವಾ ದವು. ಆದರೆ ಮೂಲತಃ ಅಭಿಜಾತ ಸೂತ್ರಗಳಿಗೆ ಕಟ್ಟುಬಿದ್ದ ಜಾನ್ಸನ್ನನ ಗುಣದೋಷಗಳೆರಡನ್ನೂ ಆತ ತನ್ನ ಗ್ರಂಥಗಳಲ್ಲಿ, ಮುಖ್ಯವಾಗಿ ಕವಿಗಳ ಜೀವನಚರಿತ್ರೆಗಳನ್ನೊಳಗೊಂಡ ಲೈಪ್ಸ್ ಆಫ್ ಪೊಯಟ್ಸ್ ಹಾಗೂ ಷೇಕ್ಸ್ಪಿಯರ್ನನ್ನು ಕುರಿತ ಪೀಠಿಕೆಗಳಾದ ಪ್ರಿಫೇಸಸ್ ಟು ಷೇಕ್ಸ್ಪಿಯರ್ ಎಂಬ ಗ್ರಂಥಗಳಲ್ಲೂ ಕಾಣಬಹುದು.
  • ಕ್ರಮೇಣ 18ನೆಯ ಶತಮಾನದ ಉತ್ತರಾರ್ಧದಲ್ಲಿ ಬೆಳೆದ, ಇತಿಹಾಸವಾದ (ಹಿಸ್ಟೋರಿಸಿಸಂ)ವೆಂದು ಪ್ರಸಿದ್ಧವಾದ ಹೊಸ ತತ್ತ್ವಗಳು ಆ ಕಾಲದಲ್ಲಿ ರೂಢಮೂಲವಾಗಿದ್ದ ಅಭಿಪ್ರಾಯಗಳನ್ನು ವಿರೋಧಿಸುವುದರಲ್ಲಿ ಯಶಸ್ವಿಯಾದುವು. ಯಾವ ಸೂತ್ರವೂ ಎಲ್ಲ ಕಾಲಕ್ಕೂ ಅನ್ವಯಿಸು ವಂಥದಲ್ಲ. ಪ್ರತಿ ಯುಗದಲ್ಲೂ ಕಾಣುವ ಬದಲಾವಣೆಗಳು ಹೊಸ ಹೊಸ ಮೌಲ್ಯಗಳಿಗೆ ಎಡೆ ಮಾಡಿಕೊಡುತ್ತವೆ. ಹಾಗೆಯೇ ಸಾಹಿತ್ಯಸೂತ್ರಗಳೂ ಕಾಲಕಾಲಕ್ಕೆ ಬದಲಾಯಿಸುತ್ತವೆ.
  • ಅರಿಸ್ಟಾಟಲ್, ಹೊರೇಸ್ ರ ಸೂತ್ರಗಳು ಗ್ರೀಕ್, ಲ್ಯಾಟಿನ್ ಸಾಹಿತ್ಯದ ವಾಖ್ಯಾನಕ್ಕೆ ಮಾತ್ರ ಪ್ರಸ್ತುತವಾದವು-ಎಂದು ಮುಂತಾಗಿ ಬೆಳೆದ ಇತಿಹಾಸವಾದದ ವಿಚಾರಗಳು ೧೮ನೆಯ ಶತಮಾನದ ಅಭಿಜಾತ ಸಾಹಿತ್ಯ ಸೂತ್ರಗಳ ಕಟ್ಟನ್ನು ಸಡಿಲಿಸಿದುವು. ಕ್ರಮೇಣ ಗ್ರೀಕ್, ರೋಮನ್ ಸಾಹಿತ್ಯಗಳಲ್ಲಿ ಆಸಕ್ತಿ ಕ್ಷೀಣವಾಗದಿದ್ದರೂ ಜಾಗತಿಕ ಸಾಹಿತ್ಯದ ಹಲವು ಹೊಸ ಕ್ಷಿತಿಜಗಳತ್ತ ಗಮನ ಹೊರಳಿತು. ಐಸ್ಲೆಂಡ್ ಹಾಗೂ ವೆಲ್ಷ್ ಸಾಹಿತ್ಯದಿಂದ ಉದ್ಧಾಮ ಪಂಡಿತ ಥಾಮಸ್ ಗ್ರೇ ಭಾಷಾಂತರಗಳನ್ನು ಮಾಡಿದ.
  • ಗ್ರೀನ್ಲೆಂಡ್, ಲ್ಯಾಪ್ಲೆಂಡ್ ಹಾಗೂ ದಕ್ಷಿಣ ಅಮೆರಿಕಗಳ ಕಾವ್ಯಗಳನ್ನು ಬಿಷಪ್ ಪರ್ಸಿ ತರ್ಜುಮೆ ಮಾಡಿದ. ವಿಲಿಯಂ ಜೋನ್ಸ್ ಭಾರತೀಯ ಕಾವ್ಯಗಳನ್ನು ಇಂಗ್ಲಿಷ್ ಜನಕ್ಕೆ ಪರಿಚಯ ಮಾಡಿಸಿದ. ಆದ್ದರಿಂದಲೇ ೧೭೫೭ರಲ್ಲಿ ಗ್ರೇ ತನ್ನ ಪ್ರೋಗ್ರೆಸ್ ಆಫ್ ಪೊಯಸಿಯಲ್ಲಿ ಕಾವ್ಯದೇವತೆ ಇಂದು ಎರಡು ಧ್ರುವಗಳ ನಡುವೆ ತನ್ನ ಅಧಿಕಾರ ನಡೆಸುತ್ತಿದ್ದಾಳೆಂದು ಘೋಷಿಸಿದ.

೧೯ನೆಯ ಶತಮಾನ-ರೊಮ್ಯಾಂಟಿಕ್ ಯುಗ

ಬದಲಾಯಿಸಿ

೧೯ನೇ ಶತಮಾನದ ಪೂರ್ವಾರ್ಧದಲ್ಲಿ

ಬದಲಾಯಿಸಿ
  • ೧೭ನೆಯ ಹಾಗೂ ೧೮ನೆಯ ಶತಮಾನಗಳಲ್ಲಿ ಅರಿಸ್ಟಾಟಲನ ಸೂತ್ರಗಳನ್ನು ಅನುಸರಿಸಿದ ವಿಮರ್ಶಕರೆಲ್ಲ ಕಾವ್ಯವು ಜೀವನದ ಪ್ರತಿಬಿಂಬ ಅಥವಾ ಅನುಕರಣೆ ಎಂದೇ ವಾದಿಸಿದರೂ ೧೮ನೆಯ ಶತಮಾನದ ಕೊನೆಯಲ್ಲಿ ಅದಕ್ಕೆ ವಿರುದ್ಧವಾದ ವಿಚಾರಗಳೂ ಹುಟ್ಟಿಕೊಂಡುವು. ಕವಿ ಕೇವ ಲ ಪ್ರಕೃತಿಯನ್ನು ಅನುಕರಿಸುವುದಿಲ್ಲ, ತಾನು ಕಂಡ ಕನಸನ್ನು ಕಲ್ಪನೆಯ ಮೂಲಕ ಪ್ರತಿರೂಪಿಸುತ್ತಾನೆಂಬ ರೊಮ್ಯಾಂಟಿಕ್ ವಿಚಾರದ ಬೀಜಾಂಕುರ ಎಡ್ಮಂಡ್ ಬರ್ಕ್ ೧೭೫೬ರಲ್ಲಿ ಬರೆದ ಇನ್ಕ್ವೈರಿ ಇನ್ ಟು ದಿ ಸಬ್ಲೈಮ್ ಅಂಡ್ ಬ್ಯೂಟಿಫುಲ್ ಎನ್ನುವ ಪ್ರಬಂಧದಲ್ಲಿದೆ.
  • ಅದೇ ಕಾಲದ ಸುಮಾರಿನಲ್ಲಿ ಜರ್ಮನಿಯ ತತ್ತ್ವಶಾಸ್ತ್ರಜ್ಞ ಇಮ್ಯಾನ್ಯುಅಲ್ ಕಾಂಟ್ ಮನುಷ್ಯನ ಮನಸ್ಸು ಚೇತನಸ್ವರೂಪವಾದುದು, ಬಹಿರಂಗದ ಅನುಭವವನ್ನು ಕೇವಲ ಯಾಂತ್ರಿಕವಾಗಿ ಅದು ಹಿಡಿದಿಟ್ಟುಕೊಳ್ಳುವುದಿಲ್ಲ.ಇಂದ್ರಿಯಾನುಭವಕ್ಕೆ ಸಿಲುಕುವ ಬಾಹ್ಯಪ್ರಪಂಚಕ್ಕೆ ಅದು ರೂಪ ಕೊಡುತ್ತದೆ-ಎಂದು ಹೇಳಿದ.

ಪಾಶ್ಚಾತ್ಯ ಕವಿಗಳ ಪ್ರಭಾವ

ಬದಲಾಯಿಸಿ
  • ಈ ಹೊಸ ವಿಚಾರಧಾರೆಯಿಂದ ವರ್ಡ್ಸ್ ವರ್ತ್, ಕೋಲ್ರಿಜ್, ಡಿಕ್ವೆನ್ಸಿ, ಷೆಲ್ಲಿ-ಮೊದಲಾದ ರೊಮ್ಯಾಂಟಿಕ್ ಸಾಹಿತಿಗಳೆಲ್ಲರೂ ಪ್ರಭಾವಿತರಾದರು. ವರ್ಡ್ಸ್ ವರ್ತ್ ತನ್ನ ಲಿರಿಕಲ್ ಬ್ಯಾಲಡ್ಸ್ ಎಂಬ ಕಾವ್ಯಸಂಗ್ರಹಕ್ಕೆ ಬರೆದ (೧೭೯೮) ಪೀಠಿಕೆಯಲ್ಲಿ (ಪ್ರಿಫೇಸ್) ಕವಿಯ ಚೇತನ ವಿಭಾವನೆಗಳನ್ನೇ ಕುರಿತು ಸುದೀರ್ಘವಾಗಿ ವಿವೇಚಿಸಿದ. ಕೋಲ್ರಿಜ್ ಕವಿ ಬಯಾಗ್ರಾಫಿಯ ಲಿಟರೇರಿಯ ಎಂಬ ಗಾಢ ತಾತ್ತ್ವಿಕ ಗ್ರಂಥದ ಮೂಲಕ ಮುಂದಿನ ವಿಮರ್ಶೆಯ ಪರಂಪರೆಯ ಮೇಲೆ ಅತ್ಯಂತ ಹೆಚ್ಚಿನ ಪರಿಣಾಮ ಬೀರಿದ.
  • ಗ್ರಂಥದ ದೋಷಗಳೇನೇ ಇರಲಿ, ಅದು ಅತ್ಯಂತ ಪ್ರಭಾವಶಾಲಿ ಕವಿಯೊಬ್ಬನ ಅದ್ಭುತ ಕಲ್ಪನೆಯ ತತ್ತ್ವಚಿಂತನೆಯ ಫಲಶೃತಿ. ವಡ್ರ್ಸ್ ವರ್ತ್ ಮಾನವ ವಿಭಾವನೆಯನ್ನು (ಇಮ್ಯಾಜಿನೇಷನ್) ಅವರ್ಣನೀಯ ದೈವಿಕ ಶಕ್ತಿ ಎಂದು ಕರೆದು, ಮಾತಿನ ಗೊಂದಲವೆಬ್ಬಿಸಿದ. ಆದರೆ ಕೋಲ್ರಿಜ್ ಅದೇ ಮಾತಿಗೆ ತಾತ್ತ್ವಿಕವಾದ ಅರ್ಥ ವಿವರಣೆ ಕೊಟ್ಟು ವಿಭಾವನೆ ಮತ್ತು ಕಲ್ಪನೆಗಳೆನ್ನುವ (ಫ್ಯಾನ್ಸಿ) ಪದಗಳನ್ನು ಪಾರಿಭಾಷಿಕ ಶಬ್ದಗಳನ್ನಾಗಿ ಬಳಸಿದ.
  • ವಿಭಾವನೆ ಹೆಚ್ಚು ಉದಾತ್ತವಾದ ಶಕ್ತಿ, ಕಲ್ಪನೆ ಅನುಭವಗಳನ್ನು ಸಂಘಟಿಸಿ ಸಮಗ್ರೀಕರಣ ಮಾಡಿ ಅದಕ್ಕೊಂದು ಹೊಸ ವ್ಯವಸ್ಥೆ, ವ್ಯವಧಾನ ನೀಡುತ್ತದೆಂದು ವಿವರಿಸಿದ. ಅಮೂರ್ತ ಭಾವನೆಗಳು, ಅನಿಸಿಕೆಗಳು, ಕಾಲದೇಶಗಳ ವ್ಯವಸ್ಥೆಯಿಂದಾಚೆ ನಿಂತ ಸ್ಮೃತಿಯ ಒಂದು ವಿಧಾನ; ಮನಸ್ಸು ಗ್ರಹಿಸಿದ ಅನಿಸಿಕೆಗಳನ್ನು ಕಲ್ಪನೆ ಸಂಗ್ರಹಿಸುತ್ತದೆ, ಪರಿಷ್ಕರಿಸುತ್ತದೆ. ವಿಭಾವನೆ ಇದಕ್ಕಿಂತ ಮುಂದೆ ಹೋಗಿ ಬುದ್ಧಿವಿವೇಚನೆಗಳ ನೆರವಿನಿಂದ ಯಥಾರ್ಥತೆ ಯನ್ನೇ ಹೊಸದಾಗಿ ಕಲ್ಪಿಸುತ್ತದೆ ಎಂದು ಸ್ವಾರಸ್ಯವಾದ ವಿವರಣೆ ನೀಡಿದ.
  • ಕೋಲ್ರಿಜ್ ನ ಅಭಿಪ್ರಾಯಗಳನ್ನು ೨೦ನೆಯ ಶತಮಾನದ ವಿಮರ್ಶಕರು ಕಟುವಾಗಿ ಟೀಕಿಸಿದ್ದರೂ ಅವನ ವಿಚಾರಗಳು ಸಾಹಿತ್ಯ ವಿಮರ್ಶೆಯಲ್ಲಿ ಹೊಸ ಬೆಳಕು ಮೂಡಿಸಿದುವೆನ್ನುವುದು ನಿಜ. ಷೆಲ್ಲಿ ತನ್ನ ಡಿಫೆನ್ಸ್ ಆಫ್ ಪೊಯಟ್ರಿ ಎಂಬ ದೀರ್ಘ ಪ್ರಬಂಧದಲ್ಲಿ ಕಾವ್ಯದ ಆದರ್ಶಗಳನ್ನು ಸೂತ್ರೀಕರಿಸಿದ್ದಾನೆ. ಉದಾತ್ತ ನೀತಿ ಸಾಧಿಸುವುದರಲ್ಲಿ ಪ್ರೇಮ ಸಾರ್ಥಕ್ಯ ಪಡೆಯುತ್ತದೆ. ಅಂಥ ಪ್ರೇಮವನ್ನು ಕುರಿತು ಹಾಡುವುದರ ಮೂಲಕ ಕವಿ ನೀತಿಯ ಮಾರ್ಗದತ್ತ ನಮ್ಮನ್ನು ಕೊಂಡೊಯ್ಯುತ್ತಾನೆ. ತನ್ನ ವಿಭಾವನೆಯ ಮೂಲಕ ನಮ್ಮ ಸಂವೇದನೆ ಕೆರಳಿಸುವ ದ್ರಷ್ಟಾರನಾಗುತ್ತಾನೆ. *ಆದ್ದರಿಂದ ವಿಭಾವನೆಯನ್ನು ಉದ್ದೀಪನಗೊಳಿ ಸುವ ಎಲ್ಲ ಸಾಹಿತ್ಯದಲ್ಲೂ ಕಾವ್ಯದ ಜೀವಾಳವಿದ್ದೇ ಇದೆ. ಶೈಲಿಯ ಇಂಥ ವಿಚಾರ ಪರಂಪರೆ ರೊಮ್ಯಾಂಟಿಕ್ ಯುಗದ ವಿಮರ್ಶಾಸಂಪ್ರದಾಯದ ಮೇಲೆ ಹೆಚ್ಚಿನ ಪ್ರಭಾವ ಬೀರಿತು. ಬಿಡಿಬಿಡಿಯಾದ ಸಾಹಿತ್ಯ ಕೃತಿಗಳನ್ನೂ ಬೇರೆ ಬೇರೆ ಸಾಹಿತಿಗಳನ್ನೂ ಕುರಿತು ವಿವೇಚಿಸುವಾಗ ಕಾವ್ಯದ ಆದರ್ಶಗಳನ್ನು ಹಿನ್ನೆಲೆಯಾಗಿ ಕಲ್ಪಿಸಿಕೊಳ್ಳುವ ರೊಮ್ಯಾಂಟಿಕ್ ವಿಧಾನವು ಹ್ಯಾಜ್ಲಿಟ್, ಲ್ಯಾಂಬ್ ಮೊದಲಾದವರ ಲೇಖನಗಳಲ್ಲಿ ಕಾಣಸಿಗುತ್ತದೆ.

೧೯ನೆಯ ಶತಮಾನದ ಉತ್ತರಾರ್ಧದಲ್ಲಿ

ಬದಲಾಯಿಸಿ
  • ೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಇಂಗ್ಲೆಂಡಿನಲ್ಲಿ ಜ್ಞಾನ, ತಿಳಿವಳಿಕೆ, ಶಿಕ್ಷಣ, ಸಂಸ್ಕೃತಿಗಳು ಅತ್ಯಂತ ವಿಸ್ತಾರವಾಗಿ ಹಬ್ಬಿದಾಗ, ಇಂಗ್ಲಿಷ್ ವಿಮರ್ಶಕರು ಯುರೋಪಿನ ಸಾಹಿತ್ಯದತ್ತ ಕಣ್ಣು ಹೊರಳಿಸಿ, ತಮ್ಮ ಕೃಷಿರಂಗವನ್ನು ವಿಸ್ತಾರ ಮಾಡಿಕೊಂಡರು. ಜರ್ಮನಿಯ ಸಾಹಿತ್ಯದಲ್ಲಿ ಇಂಗ್ಲಿಷ್ ಸಾಹಿತಿಗಳು ಹೆಚ್ಚಿನ ಆಸಕ್ತಿ ಬೆಳೆಸಿಕೊಂಡ ಕಾಲ ಅದು. ವಿಮರ್ಶೆಗೆ ವಿಶಾಲವಾದ ಕಾರ್ಯರಂಗ ದೊರೆತಾಗ, ತುಲನಾತ್ಮಕ ವಿಮರ್ಶೆ ಬೆಳೆಯಲು ಹೆಚ್ಚು ನೆರವು ಸಿಕ್ಕಹಾಗಾಯಿತು.
  • ಹೊಸಯುಗದ ಪ್ರತಿನಿಧಿಯಾದ ಮ್ಯಾಥ್ಯು ಆರ್ನಾಲ್ಡ್ ಲೋಕೋತ್ತರವಾದ ವಿಚಾರಗಳ ಚಿಂತನ ಮಂಥನಗಳನ್ನು ಅರ್ಥಮಾಡಿಕೊಂಡು ನಿರ್ವಿಕಾರವಾದ ರೀತಿಯಲ್ಲಿ ಪ್ರಸಾರ ಮಾಡುವುದೇ ವಿಮರ್ಶೆಯ ಉದ್ದೇಶವೆಂದುದು ಈ ಅರ್ಥದಲ್ಲೇ. ಆಚಾರ, ವ್ಯವಹಾರಗಳಲ್ಲಿ ನೈತಿಕಮಟ್ಟ ಕುಗ್ಗಿ, ನಂಬಿಕೆಗಳು ಅಪಮೌಲ್ಯಗೊಳ್ಳುತ್ತಿದ್ದ ಆ ಕಾಲದಲ್ಲಿ ಆರ್ನಾಲ್ಡ್ ಉತ್ತಮ ಸಾಹಿತ್ಯ, ಸಂಸ್ಕೃತಿ, ಔಪಚಾರಿಕ ಮೌಲ್ಯಗಳು ಅನೀತಿಯ ವಿರುದ್ಧ ಹೋರಾಡಲು ಸಾಧನಗಳಾಗಿ ಪರಿಣಮಿಸಿವೆಯೆಂದು ಭಾವಿಸಿದ. ಆದ್ದರಿಂದ ಕಾವ್ಯಕ್ಕೆ ಒಂದು ಉದಾತ್ತ ಉದ್ದೇಶವಿರಬೇಕೆಂದು ಭಾವಿಸಿದ. *ಇದಕ್ಕೆ ವಿರುದ್ಧವಾಗಿ ಕಾವ್ಯಕ್ಕೂ ಜೀವನಕ್ಕೂ ಸಂಬಂಧವಿಲ್ಲ. ಕಾವ್ಯದ (ಕಲೆ) ಮೂಲಕ ಜೀವನವನ್ನು ಹಸನುಗೊಳಿಸುವ ಪ್ರಯತ್ನ ನಿರರ್ಥಕ. ಕಲಾಕೃತಿಗಳಿಂದ ಪ್ರೇರಿತವಾಗುವ ಆನಂದ ಒಂದು ಸೌಂದರ್ಯ ಮೌಲ್ಯ. ಆದ್ದರಿಂದ ಜೀವನಕ್ಕಾಗಿ ಕಲೆಯಲ್ಲ, ಕಲೆಗಾಗಿ ಕಲೆ ಎಂಬ ಹೊಸ ಸೌಂದರ್ಯತತ್ತ್ವ ಹುಟ್ಟಿಕೊಂಡಿತು. ಜರ್ಮನಿಯ ಕಾಂಟ್, ಅಮೆರಿಕದ ಪೋಪ್ ಮೊದಲಾದವರು ಪ್ರತಿಪಾದಿಸಿದ ತತ್ತ್ವಗಳನ್ನು ಇಂಗ್ಲೆಂಡಿನಲ್ಲಿ ವಾಲ್ಟರ್ ಪೇಟರ್ ಸಮರ್ಥಿಸಿ ತನ್ನ ಕಾಲದ ಸಾಹಿತ್ಯ ಚಿಂತನೆಯನ್ನು ಗಾಢವಾಗಿ ಪ್ರಚೋದಿಸಿದ.
  • ಒಂದು ಕಲಾಕೃತಿ ನಮ್ಮ ಕಲ್ಪನೆಯನ್ನು ಹೇಗೆ ಕೆರಳಿಸಿ, ತಿಳಿಸುತ್ತದೆ ಎಂಬುದನ್ನು ಬಣ್ಣಿಸುವಾಗ ಮನಸ್ಸಿನ ಪದರ ಪದರಗಳಲ್ಲಿನ ಅನಿಸಿಕೆಯನ್ನು ಚಿತ್ರಯುಕ್ತಶೈಲಿಯಲ್ಲಿ ಬಣ್ಣಿಸುವ ಹೊಸದೊಂದು ಪಂಥವೇ ಪೇಟರನ ಲೇಖನಗಳ ಮೂಲಕ ನಿರ್ಮಿತವಾಯಿತು. ಈ ಪಂಥದ ಉತ್ಕೃಷ್ಟ ಅಭಿವ್ಯಕ್ತಿ ಅಪ್ರಿಸಿಯೇಷನ್ಸ್ ಹಾಗೂ ದಿ ರೆನೇಸಾನ್ಸ್ ಎಂಬ ಗ್ರಂಥಗಳಲ್ಲಿದೆ.
  • ಪೇಟರನ ಸೌಂದರ್ಯತತ್ತ್ವಗಳನ್ನು ತಪ್ಪಾಗಿ ಗ್ರಹಿಸಿದ ಆಸ್ಕರ್ ವೈಲ್ಡ್ ಕಲೆಗಾಗಿ ಕಲೆ ಎಂಬ ತತ್ತ್ವವನ್ನು ಅತಿಯಾಗಿ ಉತ್ಪ್ರೇಕ್ಷಿಸಿ, ನಗೆಪಾಟಲಿಗೀಡುಮಾಡಿದ. ಇಂಗ್ಲೆಂಡಿನಲ್ಲಿ ಗೊಂದಲಕ್ಕೀಡಾದ ಈ ತತ್ತ್ವಕ್ಕೆ ತರ್ಕದ, ದರ್ಶನದ ಬುನಾದಿ ಕಲ್ಪಿಸಿ ಅದನ್ನು ಸೌಂದರ್ಯಶಾಸ್ತ್ರ ವನ್ನಾಗಿ (ಈಸ್ತೆಟಿಕ್ಸ್) ರೂಪಿಸಿದ ಕೀರ್ತಿ ಈ ಶತಮಾನದ ಇಟಲಿಯ ಮಹಾಸಾಹಿತಿ ಬೆನೆಡಿಟ್ಟೊ ಕ್ರೋಚೆಗೆ ಸಲ್ಲುತ್ತದೆ.

೨೦ನೆಯ ಶತಮಾನ - ಆಧುನಿಕ ವಿಮರ್ಶೆ

ಬದಲಾಯಿಸಿ
  • ಅತ್ಯಂತ ಸಂಕೀರ್ಣವಾದ ಆಧುನಿಕ ಯುಗದಲ್ಲಿ ಒಟ್ಟಾರೆ ಜೀವನವೇ ಅವ್ಯವಸ್ಥೆಗೊಳಗಾಗಿ, ಹಳೆಯ ಮೌಲ್ಯಗಳು ನಶಿಸಿ, ಸಾಹಿತ್ಯ, ಸಂಸ್ಕೃತಿಗಳು ವಿಷಮ ಸನ್ನಿವೇಶಗಳನ್ನು ಎದುರಿಸುತ್ತಿವೆ. ಆದ್ದರಿಂದ ಸಾಹಿತಿ, ವಿಮರ್ಶಕ ಇಬ್ಬರೂ ಅನುಭವ ಹಾಗೂ ಅಭಿವ್ಯಕ್ತಿಯ ಉದ್ದಗಲಗಳನ್ನು ಹಿಗ್ಗಿಸಿಕೊಂಡು ಬೌದ್ಧಿಕಮಟ್ಟವನ್ನು ಹೆಚ್ಚಿಸಿಕೊಳ್ಳಲು ಅನಿವಾರ್ಯವಾಗಿದೆ. ಹೊಸ ಪ್ರಯೋಗಗಳು, ಪ್ರಕಾರಗಳು ರೂಪ ತಾಳುತ್ತಿರುವ ಈ ಕಾಲದಲ್ಲಿ ನಿಶ್ಚಿತವಾದ ಸಂವೇದನೆ ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ.
  • ಮೂಲಭೂತ ಸಮಸ್ಯೆಗಳಿಗೆ ಹೊಸ ಪರಿಹಾರ, ಸಮಾಧಾನಗಳನ್ನು ಕುರಿತು ಶೋಧಿಸುವುದು ವಿಮರ್ಶಕನ ಕರ್ತವ್ಯವಾಗುತ್ತದೆ. ಸಾರ್ವಕಾಲಿಕವಾದ ಮೌಲ್ಯಗಳನ್ನು ರಕ್ಷಿಸುವ ದೃಷ್ಟಿಯಿಂದ ವಿಮರ್ಶೆಗೆ ಕೈ ಹಚ್ಚಿದವರಲ್ಲಿ ಟಿ.ಎಸ್.ಎಲಿಯಟ್, ಐ.ಎ. ರಿಚಡ್ರ್ಸ್ ಮೊದಲಾದವರು ಈ ಯುಗದ ಮಾನವೀಯತೆಯ ಪ್ರತಿನಿಧಿಗಳು. ಮುಖ್ಯವಾಗಿ ಇವರು ರೊಮ್ಯಾಂಟಿಕ್ ತತ್ತ್ವದ ದೋಷಗಳನ್ನು ಎತ್ತಿ ತೋರಿಸಿ, ಬುದ್ಧಿಜೀವಿ ಮಾನವ ಅರ್ಥಪೂರ್ಣ ಜೀವನದ ಮೌಲ್ಯಗಳನ್ನು ಸಾರ್ಥಕಗೊಳಿಸಿಕೊಳ್ಳಬಲ್ಲ ಎಂದು ನಂಬಿದವರು.
  • ಈ ಯುಗದ ಚಿಂತನೆಯ ಮೇಲೆ ಅತ್ಯಂತ ಗಾಢ ವರ್ಚಸ್ಸು ಬೀರಿದ ಫ್ರಾಯ್ಡ್ ಮನಶ್ಶಾಸ್ತ್ರತತ್ತ್ವಗಳನ್ನು ಹಲವು ವಿಮರ್ಶಕರು ಮನಗಂಡಿದ್ದಾರೆ. ಸಾಹಿತ್ಯದ ಕೃತಿಗಳನ್ನು ಅರ್ಥೈಸಲು ಇವರು ಮನಶ್ಶಾಸ್ತ್ರದ ತಂತ್ರಪರಿಕರಗಳನ್ನು ಬಳಸುವ ಪ್ರಯತ್ನ ಮಾಡಿದ್ದಾರೆ. ಇವರಲ್ಲಿ ರಾಬರ್ಟ್ ಗ್ರೇವ್ಸ್, ಹರ್ಬರ್ಟ್ ರೀಡ್, ಐ.ಎ. ರಿಚಡ್ರ್ಸ್, ವಿಲಿಯಮ್ ಎಂಪ್ಸನ್ ಮೊದಲಾದವರಿದ್ದಾರೆ. ಇವರ ಗ್ರಂಥಗಳಲ್ಲಿ ಹಳೆಯ ಕವಿಗಳು, ಕೃತಿಗಳನ್ನು ಹೊಸ ಅರಿವಿನ ಬೆಳಕಿನಲ್ಲಿ ಕಾಣುವ ಪ್ರಯತ್ನವೂ ಸೇರಿದೆ.
  • ಆರ್ಕಿಟೈಪಲ್ ಪಂಥ ಇದರ ಒಂದು ಮುಖ. ಸಮಾಜಶಾಸ್ತ್ರದ ತತ್ತ್ವಗಳನ್ನು ಅನುಸರಿಸಿ ಸಾಹಿತ್ಯಕೃತಿಗಳನ್ನು ಅನುಸರಿಸಿ ಅವಲೋಕಿ ಸುವ ಪ್ರಯತ್ನವೂ ನಡೆದಿದೆ. ಮಾರ್ಕ್ಸ್, ಎಂಗೆಲ್ಸ್ ಮೊದಲಾದವರ ತಾರ್ಕಿಕ ತತ್ತ್ವಗಳ ಹಿನ್ನೆಲೆಯಲ್ಲಿ ವಿಮರ್ಶೆಯನ್ನು ಬೆಳೆಸಿದವರಲ್ಲಿ ಮುಖ್ಯ ರಾದವರೆಂದರೆ ಸ್ಪ್ಲೆಂಡರ್, ಡೇ ಲೂಇಸ್, ಕಾಲ್ಡ್ ವೆಲ್. ಮಾಕ್ರ್ಸ್ವಾದದ ಪ್ರಭಾವ ಕುಗ್ಗಿದಮೇಲೂ ಸಮಾಜಶಾಸ್ತ್ರದ ತತ್ತ್ವದ ಪಾತಳಿಯ ಮೇಲೆ ರಚಿತವಾದ ವಿಮರ್ಶೆಯನ್ನು ಎಲ್.ಸಿ.ನೈಟ್, ವಿಲಿಯಮ್ಸ್ ಮೊದಲಾದವರು ಮುಂದುವರಿಸಿದರು.
  • ಸೃಜನ ಸಾಹಿತ್ಯವು ಬೆಳೆದಂತೆ ಸಾಹಿತ್ಯ ಮೀಮಾಂಸೆ ವಿಮರ್ಶೆಗಳೂ ಬೆಳೆವಣಿಗೆಗೊಂಡು ೨೦ನೆಯ ಶತಮಾನದ ಸಾಹಿತ್ಯ ಮೀಮಾಂಸೆ, ವಿಮರ್ಶೆಗಳೂ ಬೆಳೆದವು. ಮಾಕಿರ್್ಸಸ್್ಟ ವಿಮರ್ಶೆಯೂ ವಿಮರ್ಶಕರ ಗಮನವನ್ನು ಸೆಳೆಯಿತು. ೧೯೦೮ರಲ್ಲಿ ಅರ್ಥರ್ ಸೀಮನ್ಸ್ ನ ದಿ ಸಿಂಬಲಿಸ್ಟ್ ಮೂವ್ಮೆಂಟ್ ಇನ್ ಲಿಟರೇಚರ್ ಪ್ರಕಟವಾಯಿತು. ಸಂಕೇತದ ಸಾಧ್ಯತೆಯತ್ತ ಯೇಟ್ಸ್ ಮತ್ತು ಎಲಿಯಟ್ರ ಗಮನವನ್ನು ಸೆಳೆದ ಕೃತಿ ಇದು.
  • ೧೯ನೆಯ ಶತಮಾನದ ಕಡೆಯ ಭಾಗ ಮತ್ತು ೨೦ನೆಯ ಶತಮಾನದ ಪ್ರಾರಂಭದ ದಶಕಗಳಲ್ಲಿ ಎ.ಸಿ. ಬ್ರ್ಯಾಡ್ಲೆ , ಡಬ್ಲ್ಯು.ಪಿ.ಕೆರ್, ಎಚ್.ಗ್ರಿಯರ್ಸನ್ ಮೊದಲಾದ ಪ್ರಾಧ್ಯಾಪಕರು ವಿಮರ್ಶೆಯ ಕ್ಷೇತ್ರವನ್ನು ಪ್ರಥಮಬಾರಿಗೆ ಪ್ರವೇಶಿಸಿದರು. ಬ್ರ್ಯಾಡ್ಲೆಯ ಉಪನ್ಯಾಸ ಗಳ ಪ್ರಸಿದ್ಧ ಸಂಗ್ರಹ, ಷೇಕ್ಸ್ಪಿಯರ್ನ ಟ್ರಾಜಿಡಿ ೧೯೦೪ರಲ್ಲಿ ಪ್ರಕಟವಾಯಿತು. ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯದ ಗಂಭೀರ ಅಧ್ಯಯನ ಪ್ರಾರಂಭವಾದ ಕಾಲ ಇದು. ಈ ಕಾಲದಿಂದ ಸಾಹಿತ್ಯ ವಿಮರ್ಶೆಯಲ್ಲಿ ಕಾಲೇಜು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರುಗಳ ಪಾತ್ರ ಪ್ರಮುಖವಾಯಿತು.
  • ಸೃಜನಶೀಲ ಬರಹಗಾರರೂ ಈ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಮರ್ಶೆ ಬರೆಯಲು ಪ್ರಾರಂಭಿಸಿದರು. ಇವರು ಹೆನ್ರಿ ಜೇಮ್ಸ್ ನ ಪ್ರಮುಖ ಕಾದಂಬರಿಯನ್ನು ಕುರಿತು ಬರೆಯುತ್ತ, ಸಾಹಿತ್ಯಕೃತಿಯ ಸಾವಯವ ಸ್ವರೂಪವನ್ನು ಒತ್ತಿ ಹೇಳಿದರು. ಮುಂದೆ ಇದು ತತ್ತ್ವ ವಿಮರ್ಶೆಯ ಮುಖ್ಯ ತತ್ತ್ವ್ವಗಳಲ್ಲಿ ಒಂದಾಯಿತು. ೨೦ನೆಯ ಶತಮಾನದ ಪೂರ್ವಾರ್ಧದಲ್ಲಿ ಟಿ.ಎಸ್. ಎಲಿಯಟ್ ಮತ್ತು ಐ.ಎ. ರಿಚಡ್ರ್ಸ್ ಇವರ ಹೆಸರು ಬಹು ಪ್ರಸಿದ್ಧವಾಗಿದ್ದಿತ್ತು.
  • ಇವರು ತತ್ತ್ವ ವಿಮರ್ಶೆಯ ಉದ್ಘಾಟಕರು. ಎಲಿಯೆಟ್ನ ಟ್ರೆಡಿಷನ್ ಅಂಡ್ ಇಂಡಿವಿಜ್ಯುಯಲ್ ಟ್ಯಾಲೆಂಟ್ (೧೯೧೯) ಸಾಹಿತ್ಯ ವಿಮರ್ಶೆಯಲ್ಲಿ ಹೆಗ್ಗುರುತಾಯಿತು. ಆದರೆ ಅವನು ಈ ಲೇಖನದಲ್ಲಿ ವ್ಯಕ್ತಪಡಿಸಿದ ಹಲವು ಅಭಿಪ್ರಾಯಗಳ್ನು ಮುಂದೆ ಸ್ವಲ್ಪಮಟ್ಟಿಗೆ ಬದಲಾಯಿಸಿದ ಎನ್ನುವುದನ್ನು ಗಮನಿಸಬೇಕು. ತತ್ತ್ವ ವಿಮರ್ಶೆಯ ಬಹು ದೊಡ್ಡ ಸಾಧನೆ ಎಂದರೆ ಕೃತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿದ್ದು, ಕೃತಿಕಾರನ ವ್ಯಕ್ತಿತ್ವ ಮತ್ತು ಜೀವನಗಳಿಗೆ ದೊರೆಯುತ್ತಿದ್ದ ಪ್ರಾಧಾನ್ಯವನ್ನು ನಿರಾಕರಿಸಿ ಕೃತಿಯನ್ನು ಅಲ್ಲಿ ವ್ಯಾಖ್ಯಾನಕ್ಕೆ ಆಧಾರವನ್ನಾಗಿ ಮಾಡಿದ್ದು.
  • ಇದನ್ನನುಸರಿಸಿ ಎಕ್ಸ್ಪ್ಲಿಕೇಷನ್ (ಕೃತಿಯ ಸೂಕ್ಷ್ಮವಾದ ವಿವರವಾದ ಅಧ್ಯಯನ) ವಿಧಾನವು ಮುಖ್ಯವಾಯಿತು. ಕೃತಿಯ ಸಾವಯವ ಸ್ವರೂಪಕ್ಕೆ ಪ್ರಾಧಾನ್ಯ ದೊರೆತು, ಸಾಹಿತ್ಯ ಕೃಷಿಯ ಬೇರೆಬೇರೆ ಅಂತರ್ಗತ ಅಂಶಗಳನ್ನು (ಘಟನೆ, ಕಥಾವಸ್ತು, ಪಾತ್ರ, ಶೈಲಿ, ಪ್ರತಿಮೆಗಳು ಇತ್ಯಾದಿ) ಪ್ರತ್ಯೇಕ ಪ್ರತ್ಯೇಕವಾಗಿ ಪರಾಮರ್ಶಿಸುವ ಬದಲು ಇಡೀ ಕೃತಿ ನೀಡುವ ಅನುಭವ, ಈ ಅನುಭವದ ಸಂವಹನದ ವಿಧಾನ ಇವುಗಳಿಗೆ ಪ್ರಾಧಾನ್ಯ ದೊರೆಯಿತು. ಕೃತಿಯ ರೂಪದ (ಫಾರಂ) ಗ್ರಹಿಕೆ ಮುಖ್ಯವಾಯಿತು.
  • ವಿಲ್ಸನ್, ನೈಟ್, ವಿಲಿಯಂ ಎಮ್ಸನ್, [[ಎಫ್.ಆರ್.ಲೀವಿಸ್ ಮೊದಲಾದವರು ಈ ಪಂಥದ ಪ್ರಮುಖ ವಿಮರ್ಶಕರು.ಜಾನ್ ಮಿಡ್ಲ್ಟನ್ ಮರಿ, ಡಿ.ಎಚ್.ಲಾರೆನ್ಸ್ ಮೊದಲಾದವರನ್ನು ನವ ರೊಮ್ಯಾಂಟಿಕ್ ಗುಂಪಿನವರು ಎಂದು ಗುರುತಿಸುತ್ತಾರೆ. ಮಿಡ್ಲ್ಟನ್ಮರಿ ಶ್ರೇಷ್ಠ ಕಾವ್ಯವೆಲ್ಲ ತರ್ಕವನ್ನು ಮೀರಿದ ಸತ್ಯದ ಅನಾವರಣ ಎಂಬ ಕಲ್ಪನೆಯನ್ನು ಸ್ವೀಕರಿಸಿದ.
  • ಕಲೆಗಾಗಿ ಕಲೆ ಎಂಬುದೇ ತನ್ನ ಭಾವನೆ ಎಂದು ಹೇಳಿದ ಎಕಿನ್ಸ್ (ಎಂದರೆ ಬದುಕಿಗೂ ಕಲೆಗೂ ಸಂಬಂಧವಿಲ್ಲ ಎಂದು, ಕಾದಂಬರಿಯು, ಒಂದು ಜೀವಂತ ಕ್ಷಣದಲ್ಲಿ ಮನುಷ್ಯನಿಗೂ ವಿಶ್ವಕ್ಕೂ ಇರುವ ಸಂಬಂಧದ ನಿರೂಪಣೆ ಎಂದ) ಕಲಾವಿದನನ್ನು ನಂಬಬೇಡ, ಕಥೆಯನ್ನು ನಂಬು ಎನ್ನುವ ಪ್ರಸಿದ್ಧ ಉಕ್ತಿಯನ್ನು ನೀಡಿದವನು ಇವನು. ಮಿತ್ ಕ್ರಿಟಿಸಿಸಂ ಈ ಶತಮಾನದ ವಿಶಿಷ್ಟ ಕೊಡುಗೆ. ಆರ್ಕಿಟೈಪ್ಸ್ ಗಳನ್ನು ಗುರುತಿಸುವ ಪ್ರಯತ್ನವೂ ಈ ಕಾಲದಲ್ಲಿ ನಡೆಯಿತು. ಫ್ರಾಯ್ಡ್, ಯೂಂಗ್ ನ ಮನಶ್ಶಾಸ್ತ್ರದ ಆವಿಷ್ಕರಣಗಳು ಈ ಪ್ರಯತ್ನಕ್ಕೆ ಪ್ರೇರಿತ. *ಅಧಾರ ಮಾಡ್ ಬಾಡ್ಕಿನ್,ನಾರ್ಥ್ರಾಫ್ ಫ್ರೈ, ಲೆಸ್ಲಿ ಫೀಲ್ಡರ್, ಕ್ಲಾಡ್ ಲೆವಿಸ್ಟ್ರಾಸ್ ಮೊದಲಾದವರು ಈ ಪಂಥವನ್ನು ಬೆಳೆಸಿದ್ದಾರೆ. ಈ ವಿಮರ್ಶಕರು ಮತ್ತು ಡಿ.ಡಬ್ಲ್ಯು. ಹಾರ್ಡಿಂಗ್, ಲೈಯೊನೆಟ್ ಟ್ರಿಲಿಂಗ್, ನಾರ್ಮನ್ ಬ್ರೌನ್ ಮೊದಲಾದವರು ಮನೋವಿಜ್ಞಾನ ವಿಮರ್ಶೆಯನ್ನು ಬೆಳೆಸಿದರು. ಮಾರ್ಕ್ಸಿಸ್ಟ್ ಪಂಥ ಇಂಗ್ಲೆಂಡಿನಲ್ಲಿ ವಿಶೇಷವಾಗಿ ಬೆಳೆಯಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಈ ಪಂಥದ ಪ್ರಭಾವವಿರುವ ಸಾಂಸ್ಕೃತಿಕ ವಿಶ್ಲೇಷಣೆ ಗರಿಗೆದರಿದೆ. ಸಂಸ್ಕೃತಿಯ ಭಾಗವಾಗಿ ಸಾಹಿತ್ಯದ ಅಧ್ಯಯನ ಬೆಳೆಯುತ್ತ ಬಂದಿದೆ. *ಕಳೆದ ಅರ್ಧ ಶತಮಾನದಲ್ಲಿ ಭಾಷಾವಿಜ್ಞಾನದ ಅಧ್ಯಯನವೂ ಸಾಹಿತ್ಯ ವಿಮರ್ಶೆಯ ಮೇಲೆ ಪ್ರಭಾವ ಬೀರಿದೆ. [[ಎಂ.ಎ.ಕೆ.ಹ್ಯಾಲಿಡೆ ಅಂಥವರು ಭಾಷಾವಿಜ್ಞಾನವನ್ನು ಸಾಹಿತ್ಯ ವಿಮರ್ಶೆಗೆ ಬಳಸಿಕೊಂಡೇ, ಸ್ಟ್ರಕ್ಚರಲಿಸಂ ಒಂದು ಮುಖ್ಯ ಬೆಳೆವಣಿಗೆ. ಅನಂತರ, ಇತ್ತೀಚೆಗೆ (೨೦೦೪) ತೀರಿಕೊಂಡ ಜೆಲಿಸ್ ಡೆವೀಡ್, ಡಿಕನ್ಸ್ಟ್ರನ್ ಪಂಥವನ್ನು ಪ್ರಾರಂಭಿಸಿದ. ಇದುವರೆಗೆ ಕೃತಿಯ ಪಠ್ಯ (ಟೆಕ್ಟ್ಸ)ವನ್ನು ವಿಶ್ಲೇಷಿಸುವುದು ಸಾಹಿತ್ಯ ವಿಮರ್ಶೆಯ ವಿಧಾನವಾಗಿತ್ತು.
  • ಈಗ ದಿ ಸ್ಟೆಬಿಲಿಟಿ ಆಫ್ ದಿ ಟೆಕ್ಟ್ಸ (ಪಠ್ಯ ಒಂದೇ ಸಮನೆ ಉಳಿಯುವುದು) ಪ್ರಶ್ನೆಯಾಗಿದೆ ಸ್ಟ್ಯಾನ್ಲಿಫಿಷ್ ಎನ್ನುವ ವಿಮರ್ಶಕನ ಒಂದು ಪುಸ್ತಕದ ಹೆಸರೇ, ‘ಈಸ್ ದೇರ್ ಎ ಟೆಕ್ಟ್ಸ ಇನ್ ದಿಸ್ ಕ್ಲಾಸ್?’ ಇಂಗ್ಲಿಷ್ ಸಾಹಿತ್ಯ ವಿಮರ್ಶೆಯು ಮೊದಲಿನಿಂದ ಇತರ ಭಾಷೆಗಳ ಸಾಹಿ ತ್ಯ ವಿಮರ್ಶೆಯ ಪ್ರಭಾವಕ್ಕೆ ಒಳಗಾಗಿದೆ. ಪ್ರಾಚೀನ ಗ್ರೀಸ್, ಫ್ರಾನ್ಸ್, ಜರ್ಮನಿ, ರಷ್ಯ ಮುಂತಾದ ದೇಶಗಳ ಸಾಹಿತ್ಯ ವಿಮರ್ಶೆಗಳೂ ಪ್ರಭಾವ ಬೀರಿವೆ. ಆದರೆ ಕಳೆದ ಅರ್ಧ ಶತಮಾನದಲ್ಲಿ ಅಮೆರಿಕ, ಇಂಗ್ಲೆಂಡ್ಗಳ ಸಾಹಿತ್ಯ ವಿಮರ್ಶೆಗಳು ಹೆಣೆದುಕೊಂಡಿವೆ. ಅಲ್ಲದೆ ಡೆರಿಡನಂಥ ಇಂಗ್ಲಿಷೇತರರ ಪ್ರಭಾವವೂ ಗಮನಾರ್ಹವಾಗಿದೆ. ಅಮೆರಿಕ ಮತ್ತು ಯುರೋಪಿನ ಸಾಹಿತ್ಯ ವಿಮರ್ಶೆಗಳ ಪರಿಚಯವಿಲ್ಲದೆ ಇಂಗ್ಲಿಷ್ ಸಾಹಿತ್ಯ ವಿಮರ್ಶೆಯನ್ನು ಅಧ್ಯಯನ ಮಾಡುವುದು ಸಾಧ್ಯವಿಲ್ಲ.
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: