ಆಪರೇಷನ್ ಒಪೇರಾ
ಆಪರೇಷನ್ ಒಪೆರಾ (ಆಪರೇಷನ್ ಬ್ಯಾಬಿಲೋನ್ ಎಂದೂ ಹೆಸರಿದೆ), ನಿರ್ಮಾಣ ಹಂತದಲ್ಲಿದ್ದ ಇರಾಕಿನ ಪರಮಾಣು ಸ್ಥಾವರದ ಮೇಲೆ ಇಸ್ರೇಲಿ ವಾಯುಪಡೆಗಳು ನಡೆಸಿದ ಅನಿರೀಕ್ಷಿತ ವಾಯುದಾಳಿ ಕಾರ್ಯಾಚರಣೆಯಾಗಿದೆ. ೭ನೇ ಜೂನ್ ೧೯೮೧ರಂದು ಈ ದಾಳಿ ನಡೆಯಿತು. ಅಣ್ವಸ್ತ್ರಗಳನ್ನು ತಯಾರಿಸಲು ಇರಾಕ್ ಈ ಪರಮಾಣು ಸ್ಥಾವರವನ್ನು ಬಳಸುತ್ತಿದೆ ಎಂದು ಕಂಡುಬಂದಿದ್ದು ಈ ದಾಳಿಗೆ ಮುಖ್ಯ ಕಾರಣ. ಇಸ್ರೇಲ್ ವಾಯುದಾಳಿ ನಡೆಸುವ ಮುನ್ನ, ೩೦ನೇ ಸೆಪ್ಟೆಂಬರ್ ೧೯೮೦ರಂದು ಇರಾನ್ ದೇಶವು ಈ ಪರಮಾಣು ಸ್ಥಾವರದ ಮೇಲೆ ವಾಯುದಾಳಿಯನ್ನು ನಡೆಸಿತ್ತು, ಆದರೆ ಸ್ಥಾವರಕ್ಕೆ ಹೆಚ್ಚಿನ ಹಾನಿಯೇನೂ ಆಗಿರಲಿಲ್ಲ.
ಆಪರೇಶನ್ ಒಪೇರಾ | |
---|---|
Type | ಸೈನಿಕ(ವಾಯುದಾಳಿ) |
Location | ಬಾಗ್ದಾದ್, ಇರಾಕ್ |
Planned by | ಮೆನಚೆಮ್ ಬೆಗಿನ್ |
Commanded by | ಝೀವ್ ರಾಝ್ |
Target | ಒಸಿರಾಕ್ ಪರಮಾಣು ಸ್ಥಾವರ |
Date | ಇಸ್ರೇಲಿ ವಾಯುಸೇನೆ ೩.೫೫ರ ಮಧ್ಯಾನ್ನ (ಸ್ಥಳೀಯ ಸಮಯ) |
Outcome | ಯಶಸ್ವಿ |
Casualties | ೧೦ ಇರಾಕಿ ಸೈನಿಕರು ಮತ್ತು ಒಬ್ಬ ಫ್ರೆಂಚ್ ವಿಜ್ಞಾನಿ |
ಹಿನ್ನೆಲೆ
ಬದಲಾಯಿಸಿ1960 ರ ದಶಕದಲ್ಲಿಯೇ ಇರಾಕ್ ತನ್ನ ಪರಮಾಣು ಕಾರ್ಯಕ್ರಮವನ್ನು ಪ್ರಾರಂಭಿಸಿತ್ತು. ಆದರೆ ೧೯೭೦ರ ಆರಂಭದವರೆಗೆ ಅದರಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿರಲಿಲ್ಲ. 1970 ರ ದಶಕದ ಮಧ್ಯಭಾಗದಲ್ಲಿ ಪರಮಾಣು ರಿಯಾಕ್ಟರ್ ಒಂದನ್ನು ಖರೀದಿಸುವ ಮೂಲಕ ಅದನ್ನು ವಿಸ್ತರಿಸಲು ಪ್ರಯತ್ನಿಸಿತು[೧]. ಈ ದಿಸೆಯಲ್ಲಿ ಗ್ಯಾಸ್ ಕೂಲ್ಡ್ ಗ್ರ್ಯಾಫೈಟ್ ಮಾಡರೇಟೆಡ್ ಪ್ಲುಟೋನಿಯಂ ಉತ್ಪಾದನಾ ರಿಯಾಕ್ಟರ್ ಮತ್ತು ಮರು ಸಂಸ್ಕರಣಾ ಘಟಕವನ್ನು ಫ್ರಾನ್ಸಿನಿಂದ ಖರೀದಿಸಲು ಪ್ರಯತ್ನಿಸಿತು. ಆದರೆ ಫ್ರೆಂಚ್ ಸರ್ಕಾರ ಈ ಪ್ರಸ್ತಾಪವನ್ನು ತಿರಸ್ಕರಿಸಿತು. ನಂತರ ಇಟಲಿಯ ಕಡೆ ಮುಖ ಮಾಡಿದ ಇರಾಕ್, ಇಟಲಿ ದೇಶದಿಂದ ಸಿರೆನ್ ರಿಯಾಕ್ಟರನ್ನು ಖರೀದಿಸಲು ಪ್ರಯತ್ನಿಸಿತು. ಆದರೆ ಇಲ್ಲಿಯೂ ವಿಫಲವಾದ ಇರಾಕ್, ಮತ್ತೆ ಪುನಃ ಫ್ರೆಂಚ್ ಸರ್ಕಾರದ ಕಡೆ ಮುಖ ಮಾಡಿತು. ಈ ಸಲ ಒಸಿರಿಸ್ ವರ್ಗದ, ಸಂಶೋಧನಾ ರಿಯಾಕ್ಟರನ್ನು ತನಗೆ ಮಾರಾಟ ಮಾಡುವಂತೆ ಮನವೊಲಿಸಿತು. ಈ ಪ್ರಸ್ತಾಪಕ್ಕೆ ಒಪ್ಪಿದ ಫ್ರಾನ್ಸ್, ಶಾಂತಿಯುತ ಬಳಕೆಗೆ ಮತ್ತು ಪರಮಾಣು ಸಂಬಂಧಿ ಸಂಶೋಧನೆಗೆ ಮಾತ್ರ ಬಳಸಬೇಕು ಎಂಬ ನಿಯಮಗಳನ್ನು ವಿಧಿಸಿ, ಒಸಿರಿಸ್ ವರ್ಗದ ಪರಮಾಣು ರಿಯಾಕ್ಟರನ್ನು ಇರಾಕಿಗೆ ಮಾರಾಟ ಮಾಡಲು ಒಪ್ಪಿಕೊಂಡಿತು[೨]. 1976 ರಲ್ಲಿ ಅಂತಿಮಗೊಳಿಸಲಾದ ಈ ಒಪ್ಪಂದದ ಪ್ರಕಾರ ಫ್ರಾನ್ಸ್, ಇರಾಕಿಗೆ ಐಸಿಸ್ ಮಾದರಿಯ ರಿಯಾಕ್ಟರ್, ೯೩%ರಷ್ಟು ಪುಷ್ಟೀಕರಿಸಿದ, ೭೩ ಕಿಲೋಗ್ರಾಂಗಳಷ್ಟು ಯುರೇನಿಯಂ ಅನ್ನು ಪೂರೈಸಿತು. ಒಟ್ಟು 300 ಮಿಲಿಯನ್ ವೆಚ್ಚದ ಈ ಒಪ್ಪಂದದಲ್ಲಿ, ತಾಂತ್ರಿಕ ಉಪಕರಣಗಳ ಜೊತೆಗೆ ಫ್ರಾನ್ಸ್, ಇರಾಕಿ ವಿಜ್ಞಾನಿಗಳಿಗೆ ಮತ್ತು ಸ್ಥಾವರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ಸಹ ನೀಡಬೇಕಿತ್ತು. ನವೆಂಬರ್ 1975 ರಲ್ಲಿ, ಎರಡೂ ದೇಶಗಳು ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದವು[೩].
40 ಮೆಗಾವ್ಯಾಟ್ ಲೈಟ್-ವಾಟರ್ ನ್ಯೂಕ್ಲಿಯರ್ ರಿಯಾಕ್ಟರ್ ನಿರ್ಮಾಣವು 1979 ರಲ್ಲಿ ಬಾಗ್ದಾದ್ ಬಳಿಯ ಅಲ್ ತುವೈಥಾ ನ್ಯೂಕ್ಲಿಯರ್ ಸೆಂಟರ್‌ನಲ್ಲಿ ಪ್ರಾರಂಭವಾಯಿತು. ಮುಖ್ಯ ರಿಯಾಕ್ಟರ್ ಅನ್ನು ಫ್ರಾನ್ಸ್, ಒಸಿರಾಕ್ (ಒಸಿರಿಸ್ ಹೆಸರಿನ ಮೊದಲ ಎರಡು ಶಬ್ಧ+ಇರಾಕ್ ಹೆಸರಿನ ಕೊನೆಯ ಎರಡು ಶಬ್ಧ) ಎಂದು ಹೆಸರಿಸಿತು. ಇರಾಕ್, ಮುಖ್ಯ ರಿಯಾಕ್ಟರನ್ನು ತಮ್ಮುಜ್ 1 ಎಂದೂ, ಇನ್ನೊಂದು ಚಿಕ್ಕ ರಿಯಾಕ್ಟರನ್ನು ತಮ್ಮುಜ್ 2 ಎಂದು ಹೆಸರಿಸಿತು. (ತಮ್ಮುಜ್ ಎಂಬುದು ಬೆಬಿಲೋನಿಯನ್ ಕ್ಯಾಲೆಂಡರ್‌ನಲ್ಲಿ ಬರುವ ೪ನೇ ತಿಂಗಳಾದ ಆರಾ ದಮೂಜು ದ ಅಧಿದೇವತೆಯ ಹೆಸರಾಗಿದೆ.) ಜುಲೈ 1980 ರಲ್ಲಿ, ಇರಾಕ್ ಫ್ರಾನ್ಸ್‌ನಿಂದ ಸರಿಸುಮಾರು 12.5 ಕಿಲೋಗ್ರಾಂಗಳಷ್ಟು ಪುಷ್ಟೀಕರಿಸಿದ ಯುರೇನಿಯಂ ಅನ್ನು ಮೊದಲ ಶಿಪ್‌ಮೆಂಟಿನಲ್ಲಿ ಪಡೆದುಕೊಂಡಿತು. (ಒಟ್ಟು ೭೩ ಕಿಲೋಗ್ರಾಂಗಳಷ್ಟು ಯುರೇನಿಯಂ ಅನ್ನು ೬ ಹಂತಗಳಲ್ಲಿ ಪೂರೈಸಬೇಕಿತ್ತು.)[೪]
ಇರಾಕಿನ ಪರಮಾಣು ಯೋಜನೆಯ ಬಗ್ಗೆ ಇಸ್ರೇಲಿಗೆ ಮೊದಲಿನಿಂದಲೂ ಅನುಮಾನವಿತ್ತು. ಹೀಗಾಗಿ ಇರಾಕಿನ ಪರಮಾಣು ಯೋಜನೆಯನ್ನು ಮೂಲದಲ್ಲೇ ವಿಫಲಗೊಳಿಸಲು, ತಮ್ಮ ಗುಪ್ತಚರ ಎಜನ್ಸಿ ಮೊಸ್ಸಾದ್ ಮೂಲಕ ಪ್ರಯತ್ನಿಸುತ್ತಿದ್ದರು. ಪರಮಾಣು ಸಂಶೋಧನಾ ರಿಯಾಕ್ಟರ್‌ಗಾಗಿ ಫ್ರಾನ್ಸ್ ಇರಾಕಿಗೆ ಮಾರುತಿದ್ದ ಯುರೇನಿಯಮ್, 93% ರಷ್ಟು ಪುಷ್ಟೀಕರಿಸಲಾಗಿತ್ತು. ಅಣ್ವಸ್ತ್ರವನ್ನು ತಯಾರಿಸಲು ಇಷ್ಟು ಶುದ್ಧತೆ ಸಾಕಷ್ಟಾಯಿತು. ವಿದ್ಯುಚ್ಚಕ್ತಿ ಉತ್ಪಾದನೆಗೆ ಯುರೇನಿಯಮನ್ನು ಕೇವಲ ೩% ದಷ್ಟು ಪುಷ್ಟೀಕರಿಸಿದರೆ ಸಾಕು. ತರಬೇತಿ ಮತ್ತು ಪ್ರಾಯೋಗಿಕ ಉದ್ದೇಶಗಳ ಕಾರಣಕ್ಕೆ ೯೭% ಶುದ್ಧತೆಯ ಯುರೇನಿಯಮನ್ನು ಮಾರಲಾಗುತ್ತಿದೆ ಎಂದು ಫ್ರಾನ್ಸ್ ಹೇಳಿಕೊಂಡಿತು. ಇರಾಕಿನ ಪರಮಾಣು ಯೋಜನೆಯ ಬಗ್ಗೆ ಇಸ್ರೇಲಿಗೆ ಅನುಮಾನ ಬರಲು ಇದೇ ಕಾರಣ.
೬ನೇ ಎಪ್ರಿಲ್ ೧೯೭೯ರಂದು ಫ್ರಾನ್ಸಿನ ಲಾ ಸೆಯ್ನೆ ಸರ್ ಮೆರ್ ಬಂದರಿನಲ್ಲಿ ಸಾಗಾಣಿಕೆಗೆ ತಯಾರಾಗಿ ನಿಂತಿದ್ದ ಪರಮಾಣು ರಿಯಾಕ್ಟರ್ ಮೇಲೆ ೭ ಮಂದಿ ಇಸ್ರೇಲಿ ಕಮಂಡೋಗಳ ತಂಡ ದಾಳಿ ಮಾಡಿ, ಪರಮಾಣು ರಿಯಾಕ್ಟರನ್ನು ತಣ್ಣಗಿರಿಸುವ ಸಾಧನವನ್ನು ಸ್ಫೋಟಿಸಿದರು[೫]. ಮರುವರ್ಷ, ಅಂದರೆ ಜೂನ್ ೧೪ ೧೯೮೦ರಂದು, ಇರಾಕಿ ಪರಮಾಣು ರಿಯಾಕ್ಟರ್ ಯೋಜನೆಯ ಮುಖ್ಯಸ್ಥರಾಗಿದ್ದ ಈಜಿಪ್ಟ್ ಮೂಲದ ಪರಮಾಣು ವಿಜ್ಞಾನಿ ಯಾಹ್ಯಾ ಅಲ್ ಮಷಾದ್‌ರನ್ನು, ಅವರು ಉಳಿದುಕೊಂಡಿದ್ದ ಪ್ಯಾರೀಸಿನ ಹೋಟೆಲ್‌ನಲ್ಲಿ ಮೊಸಾದ್ ಏಜೆಂಟರುಗಳು ಹತ್ಯೆ ಮಾಡಿದರು[೬].
ದಾಳಿಯಿಂದ ರಿಯಾಕ್ಟರಿಗೆ ಆದ ಹಾನಿಯನ್ನು ಸರಿಪಡಿಸಿದ ನಂತರ, ಪರಮಾಣು ರಿಯಾಕ್ಟರ್ ಮತ್ತು ಉತ್ಕೃಷ್ಟ ಮಟ್ಟಕ್ಕೆ ವರ್ಧಿಸಲಾದ ಯುರೇನಿಯಂ ಇಂಧನವನ್ನು ಇರಾಕಿಗೆ ಹಸ್ತಾಂತರಿಸಲಾಯಿತು.
ದಾಳಿ ಪೂರ್ವದಲ್ಲಿ
ಬದಲಾಯಿಸಿಇಸ್ರೇಲ್ನಲ್ಲಿ, ಇರಾಕಿನ ಪರಮಾಣು ರಿಯಾಕ್ಟರನ್ನು ನಿಷ್ಕ್ರಿಯಗೊಳಿಸುವ ಕುರಿತ ಚರ್ಚೆಗಳು ಯಿಝಾಕ್ ರಾಬಿನ್ ಅವರ ಮೊದಲ ಅಧಿಕಾರಾವಧಿಯಲ್ಲಿಯೇ (1974-1977) ಆರಂಭವಾಗಿತ್ತು. 1977 ರಲ್ಲಿ ಮೆನಾಚೆಮ್ ಬೆಗಿನ್ ಅವರು ಪ್ರಧಾನಿಯಾದ ನಂತರ ಈ ಸಿದ್ಧತೆಗಳು ಮತ್ತಷ್ಟು ತೀವ್ರಗೊಂಡವು. ಮಿಲಿಟರಿ ಕಾರ್ಯಾಚರಣೆಯ ಯೋಜನೆ ಅಲ್ಲದೆ, ರಾಜತಾಂತ್ರಿಕ ಮಾರ್ಗದಲ್ಲಿ ಸಹ ಇರಾಕನ್ನು ಕಟ್ಟಿಹಾಕಲು ಇಸ್ರೇಲ್ ಪ್ರಯತ್ನಿಸುತ್ತಿತ್ತು.
ರಾಜತಾಂತ್ರಿಕ ಮಾರ್ಗಗಳು
ಬದಲಾಯಿಸಿಇಸ್ರೇಲ್ನ ವಿದೇಶಾಂಗ ಸಚಿವ ಮೋಶೆ ದಯಾನ್ ಫ್ರಾನ್ಸ್, ಯುನೈಟೆಡ್ ಸ್ಟೇಟ್ಸ್ ಮತ್ತು ಇಟಲಿಯೊಂದಿಗೆ ಹಲವು ಸುತ್ತಿನ ರಾಜತಾಂತ್ರಿಕ ಮಾತುಕತೆಗಳನ್ನು ನಡೆಸಿದರು. ಆದರೆ ಈ ಮಾತುಕತೆಗಳು ವಿಫಲವಾದವು. ಇರಾಕಿನ ಪರಮಾಣು ಕಾರ್ಯಕ್ರಮಕ್ಕೆ ಸಹಾಯ ಮಾಡುವುದನ್ನು ನಿಲ್ಲಿಸುವಂತೆ ಫ್ರೆಂಚ್ ಅಧ್ಯಕ್ಷರುಗಳಾದ ವ್ಯಾಲೆರಿ ಗಿಸ್ಕಾರ್ಡ್ ಮತ್ತು ಫ್ರಾಂಕೋಯಿಸ್ ಮಿಟರ್ರಾಂಡ್ ಅವರನ್ನು ಮನವೊಲಿಸಲು ಇಸ್ರೇಲ್ ಪ್ರಯತ್ನಿಸಿತು. ರಾಜತಾಂತ್ರಿಕ ಕ್ರಮಗಳು ಫಲಪ್ರದವಲ್ಲವೆಂದೂ, ತೀರ್ಮಾನವನ್ನು ತೆಗೆದುಕೊಳ್ಳಲು ದೀರ್ಘಕಾಲ ತೆಗೆದುಕೊಳ್ಳಬಹುದು ಮತ್ತು ಭವಿಷ್ಯದಲ್ಲಿ ಇರಾಕಿನ ಪರಮಾಣು ಕಾರ್ಯಕ್ರಮಗಳು ಮತ್ತಷ್ಟು ಬಲಿಷ್ಠ ಮತ್ತು ಮಾರಕವಾಗಬಹುದು ಎಂದು ಇಸ್ರೇಲಿಗೆ ಮನವರಿಕೆಯಾಯಿತು. ಇರಾಕಿಗೆ ಪಾಠ ಕಲಿಸಲು ಮಿಲಿಟರಿ ಕಾರ್ಯಾಚರಣೆಯೇ ಸೂಕ್ತ ಎಂದು ಇಸ್ರೇಲಿ ಪ್ರಧಾನಿ ಬೆಗಿನ್ ತೀರ್ಮಾನಿಸಿದರು.[೭]
ಆಂತರಿಕ ಚರ್ಚೆ
ಬದಲಾಯಿಸಿಮಿಲಿಟರಿ ಕಾರ್ಯಾಚರಣೆಯ ನಿರ್ಧಾರವು ಬೆಗಿನ್ ಸರ್ಕಾರದ ಮಂತ್ರಿಮಂಡಲದ ಸದಸ್ಯರ ನಡುವೆ ತೀವ್ರ ಚರ್ಚೆಗೆ ಕಾರಣವಾಯಿತು.[೮] ಕ್ಯಾಬಿನೆಟ್ ಸದಸ್ಯ ಏರಿಯಲ್ ಶರೋನ್ ಮಿಲಿಟರಿ ಕಾರ್ಯಾಚರಣೆಯ ಪರವಾಗಿದ್ದರೆ, ವಿದೇಶಾಂಗ ಸಚಿವ ಮೋಶೆ ದಯಾನ್, ರಕ್ಷಣಾಮಂತ್ರಿ ಎಜರ್ ವೈಜ್ಮನ್ ಮತ್ತು ಉಪ ಪ್ರಧಾನಮಂತ್ರಿ ಯಿಗೆಲ್ ಯಾಡಿನ್ ಕಾರ್ಯಾಚರಣೆಯನ್ನು ವಿರೋಧಿಸಿದವರಲ್ಲಿ ಪ್ರಮುಖರು.[೯] ಈ ಕಾರ್ಯಾಚರಣೆಯು ಇಸ್ರೇಲ್-ಈಜಿಪ್ಟ್ ಶಾಂತಿ ಪ್ರಕ್ರಿಯೆಯನ್ನು ಹಳಿ ತಪ್ಪಿಸುತ್ತದೆ, ಈ ಪ್ರದೇಶದಲ್ಲಿ ಇಸ್ರೇಲ್‌ನ ಬಗ್ಗೆ ಅರಬ್ ದೇಶಗಳಿಗೆ ಇರುವ ಆಕ್ರೋಶ ಮತ್ತಷ್ಟು ಹೆಚ್ಚುತ್ತದೆ ಅಲ್ಲದೆ ಇಸ್ರೇಲ್-ಫ್ರೆಂಚ್ ಸಂಬಂಧಗಳಿಗೂ ಹಾನಿಯಾಗಬಹುದು ಎಂಬುದು ಕಾರ್ಯಾಚರಣೆಯನ್ನು ವಿರೋಧಿಸಿದವರ ಆತಂಕವಾಗಿತ್ತು.[೧೦] ಪರಮಾಣು ಶಸ್ತ್ರಾಸ್ತ್ರಕ್ಕೆ ಅಗತ್ಯವಾದ ವಸ್ತುಗಳನ್ನು ತಯಾರಿಸಲು ಇರಾಕಿಗರಿಗೆ ಐದರಿಂದ ಹತ್ತು ವರ್ಷಗಳು ಬೇಕಾಗುವುದು, ಅಷ್ಟರಲ್ಲಿ ನಾವು ರಾಜತಾಂತ್ರಿಕ ಮಾರ್ಗದ ಮೂಲಕ ಇರಾಕನ್ನು ಕಟ್ಟಿಹಾಕಬಹುದು ಎಂದು ರಾಜಕಾರಿಣಿ, ಗುಪ್ತಚರ ಅಧಿಕಾರಿ ಯೆಹೋಶುವಾ ಸಗುಯ್ ವಾದಿಸಿದರು.[೧೧] ಆದರೆ ಪರಮಾಣು ಸ್ಥಾವರದ ದುರುಪಯೋಗದ ಬಗ್ಗೆ ಸ್ಪಷ್ಟ ಅಂದಾಜು ಹೊಂದಿದ್ದ ಪ್ರಧಾನಿ ಮೆನಾಚೆಮ್ ಬೆಗಿನ್, ಮಿಲಿಟರಿ ಕಾರ್ಯಾಚರಣೆಯ ಪರವಾಗಿ ಇದ್ದರು. ಅಕ್ಟೋಬರ್ 1980 ರಲ್ಲಿ, ಯೋಜನೆಯನ್ನು ಇಸ್ರೇಲಿ ಕ್ಯಾಬಿನೆಟ್‌ನಲ್ಲಿ ಮತಕ್ಕೆ ಹಾಕಲಾಯಿತು. ಈ ಸಂದರ್ಭದಲ್ಲಿ ಮೋಶೆ ದಯಾನ್ ಹಾಜರಿರಲಿಲ್ಲ. ಆದರೂ ಉಪಸ್ಥಿತರಿದ್ದ ಸದಸ್ಯರಲ್ಲಿ 10/6 ಮತ ಚಲಾವಣೆ ಆಗುವ ಮೂಲಕ ಕಾರ್ಯಾಚರಣೆಗೆ ಅಂತಿಮವಾಗಿ ಒಪ್ಪಿಗೆ ಸೂಚಿಸಲಾಯಿತು.[೧೨]
ಯೋಜನೆ
ಬದಲಾಯಿಸಿವಾಯುದಾಳಿಯನ್ನು ನಡೆಸಲು, ಪರಮಾಣು ಸ್ಥಾವರದ ವಿನ್ಯಾಸದ ಅಗತ್ಯವಿತ್ತು. ಇದನ್ನು ಇರಾನ್ ಪೂರೈಸಿತು. ಎಂಟು ತಿಂಗಳ ಹಿಂದೆ, ಇರಾನ್-ಇರಾಕ್ ಯುದ್ಧದ ಸಮಯದಲ್ಲಿ ಇರಾನ್ ಈ ಪರಮಾಣು ಸ್ಥಾವರದ ಮೇಲೆ ದಾಳಿ ನಡೆಸಿತ್ತು ಮತ್ತು ಈ ಸಮಯದಲ್ಲಿ, ಇರಾನೀ ವಿಚಕ್ಷಣಾ ವಿಮಾನವೊಂದು ಈ ಸ್ಥಾವರದ ಛಾಯಾಚಿತ್ರಗಳನ್ನು ತೆಗೆದಿತ್ತು. ಇದೇ ಛಾಯಾಚಿತ್ರಗಳನ್ನು ಇಸ್ರೇಲಿಗೆ ಪೂರೈಸಲಾಯಿತು. ಇವುಗಳ ಸಹಾಯದಿಂದ ವಾಯುದಾಳಿಯನ್ನು ಮತ್ತಷ್ಟು ನಿಖರವಾಗಿ ಯೋಜಿಸಲು ಸಹಾಯಕವಾಯಿತು[೧೩].
ತರಬೇತಿ
ಬದಲಾಯಿಸಿವಾಯುದಾಳಿಯ ಯೋಜನೆಗಳು ಅಂತಿಮ ಹಂತವನ್ನು ತಲುಪಿದ ಕೂಡಲೇ ಇಸ್ರೇಲೀ ಪೈಲೆಟ್ಟುಗಳ ವಾಯುದಾಳಿ ತರಬೇತಿ ಮತ್ತಷ್ಟು ವೇಗ ಪಡೆಯಿತು. ಇಸ್ರೇಲಿ ವಾಯುಸೇನೆಯ ಪೈಲಟ್‌ಗಳಿಗೆ ವಾಯುದಾಳಿಯ ತರಬೇತಿ ನೀಡುವ ಸಲುವಾಗಿ ಇರಾಕಿ ರಿಯಾಕ್ಟರ್‌ನ ಪೂರ್ಣ ಪ್ರಮಾಣದ ನಕಲು ಮಾದರಿಯೊಂದನ್ನು ನಿರ್ಮಿಸಲಾಯಿತು. ತರಬೇತಿಯ ಸಂದರ್ಭದಲ್ಲಿ ಮೂವರು ಇಸ್ರೇಲಿ ಪೈಲಟ್‌ಗಳು ಅಪಘಾತಗಳಲ್ಲಿ ಸಾವಿಗೀಡಾದರು. ಎ -4 ಸ್ಕೈಹಾಕ್ ವಿಮಾನವನ್ನು ಬಳಸಿಕೊಂಡು ಮೆಡಿಟರೇನಿಯನ್ ಸಮುದ್ರದ ಮೇಲೆ ಅಭ್ಯಾಸಗಳನ್ನು ಪ್ರಾರಂಭಿಸಲಾಯಿತು. ತಾಲೀಮಿನ ಜೊತೆಗೆ, ಇಸ್ರೇಲೀ ವಾಯುಸೇನೆಯ ಎಫ್ ೪ ಫ್ಯಾಂಟಮ್ ವಿಮಾನದ ಮೂಲಕ, ದಕ್ಷಿಣ ಮತ್ತು ಪಶ್ಚಿಮ ಇರಾಕಿನ ಭೂಪ್ರದೇಶಗಳ ಮೇಲೆ ವಿಚಕ್ಷಣ ಕಾರ್ಯಗಳನ್ನು ನಡೆಸಲಾಯಿತು ಮತ್ತು ಇರಾಕ್-ಸೌದಿ ಅರೇಬಿಯಾದ ಗಡಿಯಲ್ಲಿ ಅಳವಡಿಸಲಾದ ರಾಡಾರ್‌ಗಳಲ್ಲಿನ ಕೆಲವು ಲೋಪದೋಷಗಳನ್ನು ಪತ್ತೆಹಚ್ಚಿತು. ವಿಚಕ್ಷಣೆಯ ಸಮಯದಲ್ಲಿ ಇರಾಕೀ ವಾಯುಪಡೆಯ ಪ್ರತಿರೋಧವನ್ನು ಸಹ ಎದುರಿಸಬೇಕಾಯಿತು[೧೪]. ಸರಿಸುಮಾರು ಇದೇ ಸಮಯದಲ್ಲಿ, ಈ ಹಿಂದೆ ಅಮೇರಿಕಾದೊಂದಿಗೆ ಮಾಡಿಕೊಂಡ ಮಿಲಿಟರಿ ವ್ಯಾಪಾರ ಒಪ್ಪಂದದ ಅನ್ವಯ ಎಫ್ ೧೬ ಫೈಟಿಂಗ್ ಫಾಲ್ಕನ್ ಯುದ್ಧವಿಮಾನವನ್ನು ನಿಗದಿತ ಸಮಯಕ್ಕಿಂತ ಮೊದಲೇ ಪಡೆದುಕೊಂಡಿತು.(ಅಸಲಿಗೆ, ಈ ವಿಮಾನದ ಮೊದಲ ಬ್ಯಾಚನ್ನು ಮೂಲತಃ ಇರಾನ್‌ಗೆ ಮೀಸಲಿಡಲಾಗಿತ್ತು, ಆದರೆ 1979ರ ಇರಾನಿನ ಕ್ರಾಂತಿಯ ಕಾರಣದಿಂದಾಗಿ ಈ ವಿಮಾನಗಳನ್ನು ಖರೀದಿಸಲು ಇರಾನ್ ವಿಫಲವಾಯಿತು. ಈ ಕಾರಣದಿಂದ, ಇಸ್ರೇಲಿ ವಾಯುಪಡೆಯು ಈ ವಿಮಾನವನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಪಡೆಯಿತು.)[೧೫]
ತಯಾರಿ
ಬದಲಾಯಿಸಿಜೂನ್ 1981 ರಂದು ಒಸಿರಾಕ್ ರಿಯಾಕ್ಟರಿಗೆ ಇಂಧನವನ್ನು ತುಂಬಿ ಕಾರ್ಯನಿರ್ವಹಣೆ ಆರಂಭಿಸುವ ಮಾಹಿತಿಯು, ಇಸ್ರೇಲಿ ಬೇಹುಗಾರಿಕಾ ಸಂಸ್ಥೆಯಾದ ಮೊಸಾದ್ ಮೂಲಕ ಅಕ್ಟೋಬರ್ 1980ರಲ್ಲಿ ತಿಳಿದುಬಂತು. ಇದೇ ಸಮಯದಲ್ಲಿ ಅಮೇರಿಕಾವು ಪೂರೈಸಿದ, ಮಿಲಿಟರಿ ಬೇಹುಗಾರಿಕಾ ಉಪಗ್ರಹ ಕೆಹೆಚ್ -11 ಕೆನ್ನೆನ್‌ನಿಂದ ತೆಗೆದ ಫೋಟೋಗಳಿಂದ ಈ ವಿಷಯ ಸ್ಪಷ್ಟವಾಯಿತು. ಪರಮಾಣು ಸ್ಥಾವರವು ಇಂಧನ ತುಂಬಿಕೊಂಡು ಕಾರ್ಯಾರಂಭ ಮಾಡುವ ಮೊದಲು ಸ್ಥಾವರವನ್ನು ನಾಶ ಮಾಡಬೇಕಿತ್ತು. ಇಂಧನ ತುಂಬಿದ ಸ್ಥಾವರದ ಮೇಲೆ ದಾಳಿಯಾದರೆ ಸ್ಥಾವರದಿಂದ ವಿಕಿರಣ ಸೋರಿಕೆಯಾಗಿ, ಅದರಿಂದ ಸಹಸ್ರಾರು ಅಮಾಯಕ ಜೀವಗಳು ಬಲಿಯಾಗುವ ಸಂಭವವಿತ್ತು.[೧೬]
ಇಸ್ರೇಲಿ ಮಿಲಿಟರಿ ನೆಲೆಗಳು ಮತ್ತು ಇರಾಕಿನ ರಿಯಾಕ್ಟರ್ ಕೇಂದ್ರದ ನಡುವಿನ ಅಂತರವು ಬಹಳ ದೀರ್ಘವಾಗಿತ್ತು (ಸುಮಾರು ೧೬೦೦ ಕಿಮೀ.). ಅಲ್ಲದೆ, ಇಸ್ರೇಲಿ ವಿಮಾನಗಳು ಜೋರ್ಡಾನ್ ಅಥವಾ ಸೌದಿ ವಾಯುಪ್ರದೇಶವನ್ನು ಬಳಸಿ, ಆ ದೇಶಗಳ ಮಿಲಿಟರಿ ರಾಡಾರ್‌ಗಳಿಗೆ ತಿಳಿಯದಂತೆ ಹಾರಬೇಕಿತ್ತು. ಈ ಕಾರಣದಿಂದ ಸೇನಾ ವಿಮಾನಗಳಿಗೆ ಹಾರಾಟದ ಮಧ್ಯೆ ಇಂಧನ ತುಂಬುವಿಕೆ ಅಸಾಧ್ಯವಾದುದರಿಂದ, ದಾಳಿಯಲ್ಲಿ ಪಾಲ್ಗೊಳ್ಳುವ ವಿಮಾನಗಳಿಗೆ ಬಾಹ್ಯ ಇಂಧನ ಟ್ಯಾಂಕುಗಳನ್ನು ಅಳವಡಿಸಬೇಕಾಯಿತು.
ವಾಯುದಾಳಿ ನಡೆಸುವ ತಂಡದಲ್ಲಿ ಒಟ್ಟು ೮ ಎಫ್ ೧೬ಎ (ದಾಳಿ ನಡೆಸಲು) ಮತ್ತು ೬ ಎಫ್ ೧೫ಎ(ದಾಳಿ ವಿಮಾನಗಳಿಗೆ ಬೆಂಬಲ ನೀಡಲು) ಯುದ್ಧವಿಮಾನಗಳನ್ನು ನಿಯೋಜಿಸಲಾಯಿತು. ಪ್ರತಿಯೊಂದು ಎಫ್ ೧೬ಎ ವಿಮಾನದಲ್ಲಿ ೨೦೦೦ ಪೌಂಡ್ ತೂಕದ, ಎರಡು ಅನಿರ್ದೇಶಿತ ಮಾರ್ಕ್-೮೪ ಸ್ಫೋಟಕವನ್ನು ಅಳವಡಿಸಲಾಗಿತ್ತು. ಎಫ್ ೧೬ಎ ವಿಮಾನದ ಪೈಲೆಟ್‌ಗಳು ಜೀವ್ ರಝ್, ಅಮೋಸ್ ಯಾಡ್ಲಿನ್, ಡಾಬ್ಬಿ ಯಾಫ್, ಹೆಗೈ ಕಾಟ್ಜ್, ಅಮೀರ್ ನಚುಮಿ, ಇಫ್ಟಾಚ್ ಸ್ಪೆಕ್ಟರ್, ರೆಲಿಕ್ ಶಫೀರ್ ಮತ್ತು ಇಲಾನ್ ರಮನ್. ಜೀವ್ ರಝ್ ದಾಳಿಯ ಮುಂದಾಳತ್ವ ವಹಿಸಿದ್ದರು[೧೭].
ಸ್ಥಾವರದ ಮೇಲೆ ದಾಳಿ
ಬದಲಾಯಿಸಿ೭ನೇ ಜೂನ್ 1981, 15:55(ಸ್ಥಳೀಯ ಸಮಯ)ರ ಸಂಜೆ (12:55 GMT) ಇಸ್ರೇಲಿ ವಿಮಾನಗಳು ಎಟ್ಜಿಯಾನ್ ಏರ್‌ಬೇಸ್‌ನಿಂದ ಹೊರಟವು. ಜೋರ್ಡಾನ್ ಮತ್ತು ಸೌದಿ ದೇಶಗಳ ವಾಯುಪ್ರದೇಶದಲ್ಲಿ ಹಾರುವಾಗ ಯಾವುದೇ ಪ್ರತಿರೋಧ ಕಂಡುಬರಲಿಲ್ಲ. ಆದರೂ ರಾಡಾರ್‌ಗಳ ಕಣ್ಣಿಗೆ ಬೀಳದೆ ಇರಲು ಮುಂಜಾಗರೂಕತಾ ಕ್ರಮವಾಗಿ, ಇಸ್ರೇಲಿ ಪೈಲಟ್‌ಗಳು ಜೋರ್ಡಾನ್ ವಾಯುಪ್ರದೇಶದಲ್ಲಿದ್ದಾಗ ಸೌದಿ-ಉಚ್ಚಾರಣಾ ಅರೇಬಿಕ್ ಭಾಷೆಯಲ್ಲಿಯೂ ಮತ್ತು ಸೌದಿ ಅರೇಬಿಯಾದ ಮೇಲೆ ಹಾರುವಾಗ, ಅವರು ಜೋರ್ಡಾನಿಯರಂತೆ ನಟಿಸಬೇಕಾಯಿತು. ದಾಳಿ ನಡೆಸಬೇಕಾದ ಪರಮಾಣು ಸ್ಥಾವರ ಏರ್‌ಬೇಸ್‌ನಿಂದ ಸುಮಾರು ೧೬೦೦ ಕಿಮಿ ದೂರದಲ್ಲಿ ಇದ್ದುದರಿಂದ, ವಿಮಾನಗಳಿಗೆ ಬಾಹ್ಯ ಇಂಧನ ಟ್ಯಾಂಕ್‌ಗಳನ್ನು ಅಳವಡಿಸಲಾಯಿತು. ನಂತರ, ಹಾರಾಟದ ನಡುವೆ ಖಾಲಿಯಾದ ಈ ಟ್ಯಾಂಕುಗಳನ್ನು ಸೌದಿ ಮರುಭೂಮಿಯಲ್ಲಿ ವಿಸರ್ಜಿಸಲಾಯಿತು[೧೮].
ಸಾಗುತ್ತಾ ಅಕಾಬಾ ಕೊಲ್ಲಿಯನ್ನು ದಾಟುವ ಸಂದರ್ಭದಲ್ಲಿ ಜೋರ್ಡಾನ್ ರಾಜ ಹುಸೇನ್‌ನ ವಿಹಾರ ನೌಕೆಯ ಮೇಲೆ ಹಾರಿದ್ದು ಪೈಲೆಟ್‌ಗಳ ಗಮನಕ್ಕೆ ಬರಲಿಲ್ಲ. ತನ್ನ ರಜೆಯ ಸಮಯವನ್ನು ಕಳೆಯುವ ಸಲುವಾಗಿ ಜೋರ್ಡಾನ್ ರಾಜ ಕೊಲ್ಲಿಯಲ್ಲಿ ವಿಹಾರಕ್ಕೆ ಬಂದಿದ್ದ. ಇಸ್ರೇಲೀ ವಿಮಾನಗಳು ತನ್ನ ಹಡಗಿನ ಮೇಲೆ ಹಾರುವುದನ್ನು ರಾಜ ಹುಸೇನ್ ಗಮನಿಸಿದನು. ವಿಮಾನಗಳ ಅಡಿಭಾಗದಲ್ಲಿ ಇಸ್ರೇಲೀ ವಾಯುಪಡೆಯ ಚಿಹ್ನೆ, ಅಳವಡಿಸಲಾಗಿದ್ದ ಶಸ್ತ್ರಾಸ್ತ್ರಗಳು ಮತ್ತು ಅವು ಹಾರಿದ ದಿಕ್ಕನ್ನು ಗಮನಿಸಿದ ಹುಸೇನ್‌ಗೆ, ಇವು ಇರಾಕಿನ ಮೇಲೆ ದಾಳಿಯೆಸಗಲು ಹೊರಟಿವೆ ಎಂಬುದು ಖಾತ್ರಿಯಾಯಿತು. ತಕ್ಷಣ ತನ್ನ ಸರಕಾರದ ಅಧಿಕಾರಿಗಳನ್ನು ಸಂಪರ್ಕಿಸಿ, ಇರಾಕಿಗೆ ಎಚ್ಚರಿಕೆ ಸಂದೇಶ ಕಳುಹಿಸುವಂತೆ ಸೂಚಿಸಿದರು[೧೯]. ಆದರೆ ಸಂವಹನ ಸಾಧನಗಳ ತಾಂತ್ರಿಕ ಸಮಸ್ಯೆಯಿಂದಾಗಿ ಸಂದೇಶವನ್ನು ಕಳುಹಿಸುವಲ್ಲಿ ಜೋರ್ಡಾನ್ ವಿಫಲವಾಯಿತು. ಮತ್ತು ಯಾವುದೇ ಅಡೆತಡೆ ಇಲ್ಲದೆ, ಇಸ್ರೇಲಿ ವಿಮಾನಗಳು ಇರಾಕಿ ವಾಯುಪ್ರದೇಶವನ್ನು ಪ್ರವೇಶಿಸಿದವು.
ಇರಾಕಿನ ವಾಯುಪ್ರದೇಶವನ್ನು ತಲುಪಿದ ನಂತರ ವಿಮಾನಗಳ ತಂಡ ವಿವಿಧ ದಿಕ್ಕಿಗೆ ಚದುರಿಹೋದವು. ಎರಡು ಎಫ್ -15 ವಿಮಾನಗಳು, ಎಫ್ -16 ವಿಮಾನಗಳ ಸ್ಕ್ವಾಡ್ರನ್‌ಗೆ ಬೆಂಗಾವಲಾಗಿ ಹೊರಟವು, ಉಳಿದ ಎಫ್ -15ಗಳು ತಂಡದಿಂದ ಬೇರೆಯಾಗಿ ಹಾರಿಹೋದವು.(ಒಂದುವೇಳೆ ದಾಳಿ ಸಂದರ್ಭದಲ್ಲಿ ಅನಿರೀಕ್ಷಿತ ತೊಂದರೆ ಏನಾದರೂ ಎದುರಾದರೆ, ತಕ್ಷಣದ ಪರ್ಯಾಯ ವ್ಯವಸ್ಥೆಗಾಗಿ ಇವುಗಳನ್ನು ಬಳಸಿಕೊಳ್ಳಬಹುದಾಗಿತ್ತು.)
ಒಸಿರಾಕ್ ರಿಯಾಕ್ಟರ್ ಸಂಕೀರ್ಣದಿಂದ 20 ಕಿಮೀ (12 ಮೈಲಿ) ದೂರ ಇರುವಾಗ, ಎಫ್ ೧೬ ವಿಮಾನಗಳ ತಂಡ ಮಿಂಚಿನ ವೇಗದಲ್ಲಿ ೨೧೦೦ ಮೀ ಎತ್ತರಕ್ಕೆ ಚಿಮ್ಮಿದವು. ನಿಗದಿತ ಎತ್ತರ ತಲುಪಿದ ತಕ್ಷಣ, ಪುನಃ ೩೫° ಕೋನದಲ್ಲಿ, ಘಂಟೆಗೆ ೧೧೦೦ ಕಿಮಿ ವೇಗದಲ್ಲಿ ಅಣು ಸ್ಥಾವರವನ್ನು ಗುರಿಯಾಗಿಸಿ, ಭೂಮಿಯ ಕಡೆ ಮುಖಮಾಡಿ ಹಿಂದಕ್ಕೆ ಹಾರಿದವು. ೧೧೦೦ ಮೀ (3,600 ಅಡಿ) ಎತ್ತರದಲ್ಲಿ ಇರುವಾಗ, ಎಫ್ -16 ಗಳು ಮಾರ್ಕ್ 84 (ಪ್ರತಿ ವಿಮಾನವು ಎರಡು ಬಾಂಬುಗಳನ್ನು ಹೊಂದಿತ್ತು) ಬಾಂಬ್‌ಗಳನ್ನು 5 ಸೆಕೆಂಡುಗಳ ಅಂತರದಲ್ಲಿ ಬೀಳಿಸಿದವು. ಹೀಗೆ ಬಿದ್ದ ಹದಿನಾರು ಬಾಂಬ್‌ಗಳಲ್ಲಿ ಕನಿಷ್ಠ ಎಂಟು ಬಾಂಬುಗಳು, ಒಸಿರಾಕ್ ಅಣು ಸ್ಥಾವರವನ್ನು ನೆಲಸಮ ಮಾಡುವಲ್ಲಿ ಯಶಸ್ವಿಯಾದವು. ಸ್ಥಾವರವು ನೆಲಸಮವಾಗಿದ್ದನ್ನು ಖಚಿತಪಡಿಸಿಕೊಂಡ ಇಸ್ರೇಲಿ ಪೈಲೆಟ್‌ಗಳು ತಕ್ಷಣವೇ, ತಕ್ಷಣ ತಮ್ಮ ವಿಮಾನಗಳನ್ನು ಎತ್ತರಕ್ಕೆ ಕೊಂಡೊಯ್ದರು ಮತ್ತು ತಮ್ಮ ದೇಶದೆಡೆಗೆ ಹಾರಿದರು. ಕೇವಲ ಎರಡೇ ನಿಮಿಷಗಳಲ್ಲಿ ದಾಳಿಯ ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಮುಗಿಸಲಾಯಿತು. ಬೇಸ್‌ಗೆ ಹಿಂದಿರುಗುತ್ತಿದ್ದಾಗ, ದಾಳಿ ಯಶಸ್ವಿಯಾಗಿದ್ದನ್ನು ಸಾಂಕೇತಿಕವಾಗಿ ತಿಳಿಸಲು ಇಸ್ರೇಲಿ ಪೈಲಟ್‌ಗಳು ತಮ್ಮ ಸಂಪರ್ಕ ಸಾಧನಗಳ ಮೂಲಕ, ಬೈಬಲಿನ ಜೋಶುವಾ 10:12 ಸಾಲನ್ನು ವಾಚಿಸಿದರು[೨೦]. (ಇಸ್ರೇಲಿ ವಿಮಾನಗಳು ಬರುವ ಅರ್ಧ ಘಂಟೆಯ ಮೊದಲು, ವಿಮಾನ ವಿರೋಧಿ ರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸುವ ಇರಾಕಿ ಸೈನಿಕರ ತಂಡ ಮಧ್ಯಾಹ್ನ ಊಟದ ವಿರಾಮದ ಸಲುವಾಗಿ, ರಾಡಾರ್‌ಗಳನ್ನು ಆಫ್ ಮಾಡಿ ಹೊರಗೆ ತೆರಳಿದ್ದರು ಎಂದು ತನಿಖೆಯ ನಂತರ ತಿಳಿದುಬಂತು.)
ಅಂತರರಾಷ್ಟ್ರೀಯ ಸಮುದಾಯದ ಪ್ರತಿಕ್ರಿಯೆ
ಬದಲಾಯಿಸಿಇರಾಕೀ ಪರಮಾಣು ಸ್ಥಾವರದ ಮೇಲೆ ದಾಳಿಯಾದದ್ದು ತಿಳಿದು ಬರುತ್ತಿದ್ದಂತೆ, ವಿಶ್ವದ ಹಲವು ದೇಶಗಳ ಪ್ರತಿನಿಧಿಗಳು ಈ ದಾಳಿಯನ್ನು ಕಟುವಾಗಿ ಟೀಕಿಸಿದರು.
- ವಿಶ್ವಸಂಸ್ಥೆ
ದಾಳಿಯ ಕುರಿತಂತೆ ವಿಶ್ವಸಂಸ್ಥೆಯಲ್ಲಿ ನಡೆದ ಇರಾಕ್ ಮತ್ತು ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯ ಎಂಟು ಸಭೆಗಳು ಮತ್ತು ಹೇಳಿಕೆಗಳ ನಂತರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು, 19 ಜೂನ್ 1981 ರಂದು ಒಂದು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು(ಸೆಕ್ಯುರಿಟಿ ಕೌನ್ಸಿಲ್ ರೆಸಲ್ಯೂಶನ್ 487)[೨೧]. ಅಮೇರಿಕ ದೇಶವು ಮತಕ್ಕೆ ಹಾಕಿದ, ಆ ನಿರ್ಣಯದಲ್ಲಿ ದಾಳಿಯನ್ನು ವಿರೋಧಿಸಲಾಯಿತು ಮತ್ತು ಈ ದಾಳಿಯು ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ನಡವಳಿಕೆಯ ನಿಯಮಗಳ ಸ್ಪಷ್ಟ ಉಲ್ಲಂಘನೆ ಎಂದು ತೀವ್ರವಾಗಿ ಖಂಡಿಸಿತು. ಭವಿಷ್ಯದಲ್ಲಿ ಈ ರೀತಿಯ ದಾಳಿಗಳನ್ನು ನಡೆಸದಂತೆ ಎಚ್ಚರಿಕೆ ನೀಡಲಾಯಿತು. ಜೊತೆಗೆ, ತಾಂತ್ರಿಕ ಮತ್ತು ಪರಮಾಣು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಸ್ಥಾಪಿಸುವ ಇರಾಕ್‌ನ ಹಕ್ಕನ್ನು ಭದ್ರತಾ ಮಂಡಳಿಯು ಎತ್ತಿ ಹಿಡಿಯಿತು. ಇದರ ಜೊತೆಗೆ, ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕುವಂತೆ ವಿಶ್ವಸಂಸ್ಥೆಯು ಒತ್ತಡ ಹೇರಿತು. ದಾಳಿಯಿಂದ ಆದ ಹಾನಿಗೆ ತಕ್ಕ ಪರಿಹಾರ ಪಡೆಯಲು ಇರಾಕ್ ಅರ್ಹವಾಗಿದೆ ಎಂದೂ ವಿಶ್ವಸಂಸ್ಥೆಯು ತಿಳಿಸಿತು. ಇಸ್ರೇಲ್ ಜೊತೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನವು ಮಾಡಿಕೊಂಡಿದ್ದ ಮಿಲಿಟರಿ ವ್ಯಾಪಾರಿ ಒಪ್ಪಂದದ ಪ್ರಕಾರ, ಇಸ್ರೇಲಿಗೆ ತಲುಪಿಸಬೇಕಿದ್ದ ೪ ಎಫ್-೧೬ ಯುದ್ಧವಿಮಾನಗಳಿಗೆ ಅಮೇರಿಕಾವು ಎರಡು ತಿಂಗಳ ಮಟ್ಟಿಗೆ ತಡೆಯೊಡ್ಡಿತು[೨೨][೨೩].
ಅಸಲಿಗೆ ಅಮೇರಿಕಾದ ಈ ಕ್ರಮವು ಕೇವಲ ತೋರಿಕೆಗೆ ಮಾತ್ರ ಆಗಿತ್ತು. ಎರಡು ತಿಂಗಳ ನಂತರ ಎಫ್-೧೬ ವಿಮಾನಗಳನ್ನು ಒಪ್ಪಂದದ ಪ್ರಕಾರ ಅಮೇರಿಕಾ ಇಸ್ರೇಲಿಗೆ ಹಸ್ತಾಂತರಿತು[೨೪].
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸಹ ಇಸ್ರೇಲಿನ ವಾಯುದಾಳಿಯನ್ನು ಖಂಡಿಸಲಾಯಿತು. 1981 ರ ನವೆಂಬರ್ 13 ರಂದು ನಡೆದ ಈ ಸಭೆಯಲ್ಲಿ ಇಸ್ರೇಲಿಗೆ ಛೀಮಾರಿ ಹಾಕಲಾಯಿತು. ವಾಯುದಾಳಿಯಿಂದ ಉಂಟಾದ ಹಾನಿಯನ್ನು ತುಂಬಿಕೊಡುವ ಸಲುವಾಗಿ, ಸೂಕ್ತ ಪರಿಹಾರವನ್ನು ಇಸ್ರೇಲ್ ಇರಾಕಿಗೆ ಪಾವತಿಸಬೇಕೆಂದು ಒತ್ತಾಯಿಸಿತು ಮತ್ತು ಭವಿಷ್ಯದಲ್ಲಿ ಇಂತಹ ಕ್ರಮಗಳನ್ನು ತೆಗೆದುಕೊಳ್ಳದಂತೆ ಇಸ್ರೇಲಿಗೆ ಎಚ್ಚರಿಸಲಾಯಿತು.
- ಇರಾಕ್
ಇರಾಕಿನ ಪ್ರತಿನಿಧಿ "ಇಸ್ರೇಲ್, ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ಮುಚ್ಚಿಡುವುದು ಮಾತ್ರವಲ್ಲ, ಅರಬ್ ರಾಷ್ಟ್ರಗಳು ವೈಜ್ಞಾನಿಕ ಅಥವಾ ತಾಂತ್ರಿಕ ಜ್ಞಾನವನ್ನು ಪಡೆಯುವುದನ್ನು ತಡೆಯುವುದೇ ಈ ದಾಳಿಯ ಮುಖ್ಯ ಉದ್ದೇಶವಾಗಿದೆ" ಎಂದು ಹೇಳಿದರು.
- ಸಿರಿಯಾ
ಅಮೇರಿಕ ಸಹ ಈ ದಾಳಿಯಲ್ಲಿ ಕೈಜೋಡಿಸಿದೆ ಎಂದು ಸಿರಿಯಾ ಆರೋಪಿಸಿತು. ಇಸ್ರೇಲ್‌ನೊಂದಿಗಿನ ಮೈತ್ರಿಯ ಭಾಗವಾಗಿ ಅಮೇರಿಕಾವು ದಾಳಿಗೆ ಸಹಾಯಕವಾಗುವಂತೆ ವಿನಾಶಕಾರಿ ಆಯುಧಗಳನ್ನು ಇಸ್ರೇಲಿಗೆ ಒದಗಿಸಿದೆ. ಹಾಗಾಗಿ ಇಸ್ರೇಲಿನ ಜೊತೆಗೇ ಅಮೇರಿಕಾವನ್ನು ಸಹ ಖಂಡಿಸಬೇಕು ಎಂದು ಸಿರಿಯಾ ಹೇಳಿತು.
- ಫ್ರಾನ್ಸ್
ವೈಜ್ಞಾನಿಕ ಸಂಶೋಧನೆಯ ಏಕೈಕ ಉದ್ದೇಶಕ್ಕಾಗಿಯೇ ಪರಮಾಣು ಸ್ಥಾವರವನ್ನು ನಿರ್ಮಿಸಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಮತ್ತು ಇರಾಕ್ ನಡುವೆ ನಡೆದ ಒಪ್ಪಂದದಲ್ಲಿ ಮಿಲಿಟರಿ ಬಳಕೆಯ ಉದ್ದೇಶಗಳು ಸೇರಿರಲಿಲ್ಲ ಎಂದು ಫ್ರಾನ್ಸಿನ ಪ್ರತಿನಿಧಿ ತಿಳಿಸಿದರು.
- ಯುಕೆ
ಪರಮಾಣು ಶಸ್ತ್ರಾಸ್ತ್ರಗಳಿಗೆ ಪೂರಕವಾಗುವಂತೆ ಪರಮಾಣು ಸ್ಥಾವರವನ್ನು ಬಳಸಿಕೊಳ್ಳುವ ಸಾಮರ್ಥ್ಯ ಇರಾಕ್‌ಗೆ ಇದೆ ಎಂದು ತಾನು ಭಾವಿಸುವುದಿಲ್ಲ ಎಂದು ಯುನೈಟೆಡ್ ಕಿಂಗ್‌ಡಮ್ ಹೇಳಿತು.
- ಅಂತರರಾಷ್ಟ್ರೀಯ ಅಣುಶಕ್ತಿ ಪ್ರಾಧಿಕಾರ
ಐಎಇಎ ಮಹಾನಿರ್ದೇಶಕರು ಬಾಗ್ದಾದ್ ಬಳಿಯ ಪರಮಾಣು ಸಂಶೋಧನಾ ರಿಯಾಕ್ಟರ್‌ಗಳ ಪರಿಶೀಲನೆಯ ಸಂದರ್ಭದಲ್ಲಿ, ಸುರಕ್ಷತಾ ಒಪ್ಪಂದವನ್ನು ಮೀರುವ ಯಾವುದೇ ರೀತಿಯ ಅಂಶಗಳು ಕಂಡುಬಂದಿಲ್ಲ ಎಂದು ತಿಳಿಸಿದರು.
ಉಲ್ಲೇಖಗಳು
ಬದಲಾಯಿಸಿ- ↑ "Iraqi Nuclear History". stanford.edu. Nikhil Basutkar. Retrieved 23 August 2020.
- ↑ "Nuclear weapon". www.britannica.com/. britannica. Retrieved 20 August 2020.
- ↑ "Iraqi-French nuclear deal worries Israel". www.csmonitor.com. The Christian Science Monitor. Retrieved 21 August 2020.
- ↑ "The iraqi Nuclear program:Progress despite setbacks" (PDF). nsarchive2.gwu.edu. The George Washington University. Retrieved 21 August 2020.
- ↑ "Iraqi-French nuclear deal worries Israel". www.csmonitor.com. The Christian Science Monitor. Retrieved 21 August 2020.
- ↑ "Killing the Killers". newsweek.com. News week. Retrieved 21 August 2020.
- ↑ Mueller, Karl P. (2007). Striking First: Preemptive and Preventive Attack in U.S. National Security Policy. RAND Corporation. p. 215. Retrieved 23 June 2011.
- ↑ Dan, Uri. Ariel Sharon: An Intimate Portrait. Palgrave Macmillan, 2007. p. 81.
- ↑ Mueller, Karl P. (2007). Striking First: Preemptive and Preventive Attack in U.S. National Security Policy. RAND Corporation. p. 215. Retrieved 23 June 2011.
- ↑ Feldman, Shai. Nuclear Weapons and Arms Control in the Middle East. MIT Press, 1997. p. 110.
- ↑ Joseph Cirincione (19 January 2006). "No Military Options". Proliferation Analysis. Carnegie Endowment for International Peace. Archived from the original on 4 ಮಾರ್ಚ್ 2016. Retrieved 1 December 2010.
- ↑ Mueller, Karl P. (2007). Striking First: Preemptive and Preventive Attack in U.S. National Security Policy. RAND Corporation. p. 215. Retrieved 23 June 2011.
- ↑ "TARGET: SADDAM'S REACTOR". www.angelfire.com/. angelfire. Retrieved 22 August 2020.
- ↑ "TARGET: SADDAM'S REACTOR". www.angelfire.com/. angelfire. Retrieved 22 August 2020.
- ↑ "TARGET: SADDAM'S REACTOR". www.angelfire.com/. angelfire. Retrieved 22 August 2020.
- ↑ "Osirak Redux? Assessing Israeli Capabilities to Destroy Iranian Nuclear Facilities". International Security. 02 April 2007. Retrieved 22 August 2020.
{{cite journal}}
: Check date values in:|date=
(help) - ↑ Ben-Ami, Tzahi. "Operation Opera" (PDF) (in Hebrew). Archived from the original (PDF) on 23 July 2011. Retrieved 24 August 2020.
{{cite web}}
: CS1 maint: unrecognized language (link) - ↑ Rafael Eitan, 2003. "The Raid on the Reactor from the Point of View of the Chief of Staff," Israel’s Strike Against the Iraqi Nuclear Reactor 7 June 1981
- ↑ Rafael Eitan, 2003. "The Raid on the Reactor from the Point of View of the Chief of Staff," Israel’s Strike Against the Iraqi Nuclear Reactor 7 June 1981
- ↑ "ISRAELI JETS DESTROY IRAQI ATOMIC REACTOR; ATTACK CONDEMNED BY U.S. AND ARAB NATIONS". nytimes.com. The New York Times. Retrieved 23 August 2020.
- ↑ "Resolution 487 (S/RES/487 (1981) 19 June 1981)". web.archive.org. web archive. Archived from the original on 21 ಜೂನ್ 2011. Retrieved 23 August 2020.
{{cite web}}
: CS1 maint: bot: original URL status unknown (link) - ↑ Clausen, Peter A. Nonproliferation and the National Interest: America's Response to the Spread of Nuclear Weapons. Longman, 1992. p. 178.
- ↑ "Resolution 487 (S/RES/487 (1981) 19 June 1981)". web.archive.org. web archive. Archived from the original on 21 ಜೂನ್ 2011. Retrieved 23 August 2020.
{{cite web}}
: CS1 maint: bot: original URL status unknown (link) - ↑ Kreiger, David. The challenge of abolishing nuclear weapons. Transaction Publishers, 2009. p. 161.