ಆದೇಶ ಸಂಧಿ
ಸಂಧಿಗಳಲ್ಲಿ
ಆದೇಶ ಸಂಧಿಕಾರ್ಯ
ಆದೇಶ ಸಂಧಿಯು ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.
- ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
- ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮ ಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
- ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ'. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
- ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ಪ್ರಕೃತಿ ಭಾವ ಅಥವಾ ವಿಸಂಧಿ.
ವ್ಯಂಜನ ಸಂಧಿ ನಿಯಮ
ಎರಡು ವಿಧ :
- ಸ್ವರ+ವ್ಯಂಜನ. ಉದಾಹರಣೆಗೆ, ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ
- ವ್ಯಂಜನ + ವ್ಯಂಜನ. ಉದಾಹರಣೆಗೆ,ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.yyuuu
ಕನ್ನಡ ವ್ಯಂಜನ ಸಂಧಿ ಲಕ್ಷಣ
ವ್ಯಂಜನ ವರ್ಣಗಳಿಗೆ ಬರುವ ಆದೇಶ ವರ್ಣಗಳ ಕ್ರಿಯೆಯನ್ನು ‘ವ್ಯಂಜನ ಸಂಧಿಕಾರ್ಯ’ವೆನ್ನಬಹುದು.
- ವ್ಯಂಜನ ಸಂಧಿ ನಿಯಮ - ಸ್ವರ ಮತ್ತು ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ವ್ಯಂಜನ ಸಂಧಿಯಾಗುತ್ತದೆ. ಅಥವಾ ಎರಡೂ ವ್ಯಂಜನಗಳು ಒಂದರ ಮುಂದೆ ಒಂದು ಬಂದು ಸಂಧಿಯಾದರೆ ಅದು ವ್ಯಂಜನ ಸಂಧಿಯಾಗುತ್ತದೆ. ಉದಾ: ಸುಖ+ಪಡು=ಸುಖಬಡು (ಅ+ಪ) =ಸ್ವರ+ವ್ಯಂಜನ. ಕಣ್+ಪನಿ=ಕಂಬನಿ(ಣ್+ಪ್)=ವ್ಯಂಜನ+ವ್ಯಂಜನ.
- ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ ಬೇರೊಂದು ಅಕ್ಷರವು ಬರುವುದೇ ‘ಆದೇಶ ಸಂಧಿ’ಯೆನಿಸುವುದು. ಆದೇಶ ಸಂಧಿಯಲ್ಲಿ ಈ ಕೆಳಗಿನ ವಿಭಾಗ ಕ್ರಮ ಮಾಡಬಹುದು.
- ಉತ್ತರ ಪದದ ಆದಿಯಲ್ಲಿ ಕ, ತ, ಪ, ವ್ಯಂಜನಗಳಿಗೆ ಕ್ರಮವಾಗಿ ಗ, ದ, ಬ ವ್ಯಂಜನಗಳು ಆದೇಶವಾಗಿ ಬರುವುವು. ಉದಾ: ಹಳ+ಕನ್ನಡ = ಹಳಗನ್ನಡ = ‘ಕ’ಕಾರಕ್ಕೆ ‘ಗ’ಕಾರ ಆದೇಶ; ಬಾಯ್+ತೆರೆ = ಬಾಯ್ದೆರೆ = ‘ತ’ಕಾರಕ್ಕೆ ‘ದ’ಕಾರ ಆದೇಶ; ಕಣ್+ಪೊಲಂ = ಕಣ್ಬೊಲಂ = ‘ಪ’ಕಾರಕ್ಕೆ ‘ಬ’ಕಾರ ಆದೇಶ; ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಕಳೆಗೂಡಿ, ತಲೆಗಟ್ಟು, ಬೆಸೆಕೋಲ್, ಒಳಕಯ್, ಎಳೆಗರು, ಮೆಗೆಲಸ, ಮೈದೊಳೆ, ಸುಖಬಡು, ಮೆರೆದಪ್ಪು, ಬೆಂಬತ್ತು
- ಉತ್ತರಪದ ಆದಿಯಲ್ಲಿರುವ ಪ, ಬ, ಮ ವ್ಯಂಜನಗಳಿಗೆ ‘ವ’ ಕಾರವು ಆದೇಶವಾಗಿ ಬರುವುದು. ಉದಾ: ಕೆನೆ+ಪಾಲು = ಕೆನೆವಾಲು = ‘ಪ’ಕಾರಕ್ಕೆ ‘ವ’ಕಾರ ಆದೇಶ; ತಲೆ+ಬಾಗು = ತಲೆವಾಗು = ‘ಬ’ಕಾರಕ್ಕೆ ‘ವ’ಕಾರ ಆದೇಶ; ಎಲೆ+ಮನೆ = ಎಲೆವನೆ = ‘ಮ’ಕಾರಕ್ಕೆ ‘ವ’ಕಾರ ಆದೇಶ. ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಮೆಲ್ವಾಸು, ಬೆವರ್ವನಿ, ಎಳವಳ್ಳಿ, ನೀರ್ವೊನಲ್, ಎಳವರೆ, ಬೆಮರ್ವನಿ, ಬೇರ್ವೆರಸಿ, ನೆಲೆವನೆ, ಕೆನೆವಾಲ್, ಕೈವಿಡಿ, ಪೊರವೀಡು
- ಪೂರ್ವಪದದ ಅಂತ್ಯದಲ್ಲಿ ಯ, ಲ, ಗಳ ಹೊರತು ಬೇರೆ ವ್ಯಂಜನಗಳಿದ್ದಾಗ ಉತ್ತರಪದದ ಆದ್ಯಕ್ಷರವಾದ ‘ಸ’ ಕಾರಕ್ಕೆ ಸಾಮಾನ್ಯವಾಗಿ ಚ, ಛ, ಜ ಗಳು ಆದೇಶ. ಉದಾ: ಇನ್+ಸರ = ಇನ್+ಚರ = ಇಂಚರ; ಮುನ್+ಸೆರಂಗು = ಮುನ್+ಜೆರಂಗು = ಮುಂಜೆರಗು; ಇರ್+ಸಾಸಿರ = ಇರ್+ಛಾಸಿರ = ಇರ್ಛಾಸಿರ. ಅಭ್ಯಾಸಕ್ಕಾಗಿ ಈ ಪದಗಳನ್ನು ಗಮನಿಸಬಹುದು - ಬಾಯ್ಸವಿ, ಬೆಳ್ಸರಿ, ಕಣ್ಜೋಲಂ, ನುಣ್ಚರ, ಮುಂಜೊಡರ್, ತಣ್ಜೊಡರ್, ಮುಂಜೂರ್, ಪೊಂಜುರಿಗೆ
ಸ್ವರದ ಮುಂದೆ ಸ್ವರ ಬಂದರೆ ಲೋಪಸಂಧಿ, ಆಗಮಸಂಧಿ ಆಗುವಂತೆ ಸ್ವರದ ಮುಂದೆ ವ್ಯಂಜನ ಬಂದಾಗ ಅಥವಾ ವ್ಯಂಜನದ ಮುಂದೆ ವ್ಯಂಜನ ಬಂದಾಗ ಏನೇನು ಸಂಧಿಕಾರ್ಯಕ್ಕೆ ಉದಾಹರಣೆಗಳು.
- ಮಳೆ + ಕಾಲ = ಮಳೆಗಾಲ (ಮಳೆ + ಗ್ಆಲ)
- ಚಳಿ + ಕಾಲ = ಚಳಿಗಾಲ (ಚಳಿ +ಗ್ಆಲ)
- ಬೆಟ್ಟ + ತಾವರೆ = ಬೆಟ್ಟದಾವರೆ (ಬೆಟ್ಟ + ದ್ಆವರೆ)
- ಕಣ್ + ಕೆಟ್ಟು = ಕಂಗೆಟ್ಟು (ಕಂ + ಗ್ಎಟ್ಟು)
- ಕಣ್ + ಪನಿ = ಕಂಬನಿ (ಕಂ + ಬ್ಅನಿ)
ಮೇಲಿನ ಉದಾಹರಣೆಗಳಲ್ಲಿರುವ, ಮಳೆ + ಕಾಲ ಎಂಬೆರಡು ಶಬ್ದಗಳಲ್ಲಿ ೨ ನೆಯ ಪದ [ಉತ್ತರಪದ] ದ ಮೊದಲನೆಯ ಕ ಕಾರಕ್ಕೆ ಗ ಕಾರ ಬಂದಿದೆ. ಚಳಿಗಾಲ ಎಂಬಲ್ಲಿಯೂ ಇದರಂತೆಯೇ ಕಕಾರಕ್ಕೆ ಗಕಾರ ಬಂದಿದೆ. ಬೆಟ್ಟ + ತಾವರೆ ಎಂಬೆರಡು ಪದಗಳಲ್ಲಿ ೨ ನೆಯ ಪದದ ಮೊದಲಕ್ಷರವಾದ ತ ಕಾರಕ್ಕೆ ದ ಕಾರ ಬಂದಿದೆ. [ಅಂದರೆ ತ್ ಎಂಬ ವ್ಯಂಜನಕ್ಕೆ ದ್ ಎಂಬ ವ್ಯಂಜನ ಬಂದಿದೆ] ಕಣ್ + ಪನಿ ಎಂಬಲ್ಲಿ ಪ ಕಾರಕ್ಕೆ ಬ ಕಾರ ಬಂದಿದೆ. ಹೀಗೆ ಸಂಧಿ ಯಾಗುವಾಗ ಒಂದು ಅಕ್ಷರದ ಸ್ಥಳದಲ್ಲಿ ಬೇರೊಂದು ಅಕ್ಷರ ಬರುವುದೇ ಆದೇಶವೆನಿಸುವುದು. ಕನ್ನಡ ಸಂಧಿಗಳಲ್ಲಿ ಈ ಆದೇಶವಾಗುವಿಕೆಯು ಉತ್ತರ ಪದದ ಆದಿಯಲ್ಲಿರುವ ವ್ಯಂಜನಕ್ಕೆ ಮಾತ್ರ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಟ್ಟಿರಬೇಕು.
ಉದಾಹರಣೆಗಳು
ಸಂಧಿಯಾಗುವಾಗ ಒಂದು ಅಕ್ಷರದ ಸ್ಥಾನದಲ್ಲಿ (ಸ್ಥಳದಲ್ಲಿ) ಬೇರೊಂದು ಅಕ್ಷರವು ಬರುವುದೇ ಆದೇಶಸಂಧಿಯೆನಿಸುವುದು. ಎಲ್ಲೆಲ್ಲಿ ಈ ಆದೇಶಸಂಧಿಯಾಗುವುದು? ಯಾವ ಅಕ್ಷರಕ್ಕೆ ಯಾವ ಅಕ್ಷರ ಆದೇಶವಾಗಿ ಬರವುದು?
ಒಂದು
ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಕ ತ ಪ" ವ್ಯಂಜನಗಳಿಗೆ ಕ್ರಮವಾಗಿ "ಗ ದ ಬ" ವ್ಯಂಜನಗಳು ಆದೇಶವಾಗಿ ಬರುವುವು. ಉದಾಹರಣೆಗೆ :
- ಹುಲ್ಲು + ಕಾವಲು = ಹುಲ್ಲು + ಗ್ ಆವಲು = ಹುಲ್ಲುಗಾವಲು (ಕಕಾರಕ್ಕೆ ಗಕಾರಾದೇಶ)
- ಹಳ + ಕನ್ನಡ = ಹಳ + ಗ್ ಅನ್ನಡ = ಹಳಗನ್ನಡ (ಕಕಾರಕ್ಕೆ ಗಕಾರಾದೇಶ)
- ಕಳೆ + ಕೂಡಿ = ಕಳೆ + ಗ್ ಊಡಿ = ಕಳೆಗೂಡಿ (ಕಕಾರಕ್ಕೆ ಗಕಾರಾದೇಶ)
- ಎಳೆ + ಕರು = ಎಳೆ + ಗ್ ಅರು = ಎಳೆಗರು (ಕಕಾರಕ್ಕೆ ಗಕಾರಾದೇಶ)
- ಮನೆ + ಕೆಲಸ = ಮನೆ + ಗ್ ಎಲಸ = ಮನೆಗೆಲಸ (ಕಕಾರಕ್ಕೆ ಗಕಾರಾದೇಶ)
- ಮೈ + ತೊಳೆ = ಮೈ + ದ್ ಒಳೆ = ಮೈದೊಳೆ (ತಕಾರಕ್ಕೆ ದಕಾರಾದೇಶ)
- ಮೇರೆ + ತಪ್ಪು = ಮೇರೆ + ದ್ ಅಪ್ಪು = ಮೇರೆದಪ್ಪು (ತಕಾರಕ್ಕೆ ದಕಾರಾದೇಶ)
- ಕಣ್ + ಪನಿ = ಕಣ್ + ಬ್ ಅನಿ = ಕಂಬನಿ (ಪಕಾರಕ್ಕೆ ಬಕಾರಾದೇಶ)
- ಬೆನ್ + ಪತ್ತು = ಬೆನ್ + ಬ್ ಅತ್ತು = (ಬೆಂಬತ್ತು) (ಪಕಾರಕ್ಕೆ ಬಕಾರಾದೇಶ)
ಕೆಲವು ಕಡೆ ಈ ಆದೇಶಗಳು ಬಾರದೆ ಇರುವುದೂ ಉಂಟು. ಇಂತಹವುಗಳು ಪ್ರಕೃತಿ ಭಾವಗಳು
- ಮನೆ + ಕಟ್ಟು = ಮನೆಕಟ್ಟು
- ತಲೆ + ಕಟ್ಟು = ತಲೆಕಟ್ಟು
ಎರಡು
ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಪ ಬ ಮ" ವ್ಯಂಜನಗಳಿಗೆ "ವ" ಕಾರವು ಆದೇಶವಾಗಿ ಬರುವುದು. ಉದಾಹರಣೆಗೆ :
- ನೀರ್ + ಪೊನಲ್ = ನೀರ್ + ವ್ ಒನಲ್ = ನೀರ್ವೊನಲ್ (ಪಕಾರಕ್ಕೆ ವಕಾರಾದೇಶ)
- ಎಳ + ಪೆರೆ = ಎಳ + ವ್ ಎರೆ = ಎಳವರೆ (ಪಕಾರಕ್ಕೆ ವಕಾರಾದೇಶ)
- ಬೆಮರ್ + ಪನಿ = ಬೆಮರ್ + ವ್ ಅನಿ = ಬೆಮರ್ವನಿ (ಪಕಾರಕ್ಕೆ ವಕಾರಾದೇಶ)
- ಬೇರ್ + ಬೆರಸಿ = ಬೇರ್ + ವ್ ಎರಸಿ = ಬೇರ್ವೆರಸಿ (ಬಕಾರಕ್ಕೆ ವಕಾರಾದೇಶ)
- ಕಡು + ಬೆಳ್ಪು = ಕಡು + ವ್ ಎಳ್ಪು = ಕಡುವೆಳ್ಪು (ಬಕಾರಕ್ಕೆ ವಕಾರಾದೇಶ)
- ಎಳ + ಬಳ್ಳಿ = ಎಳ + ವ್ ಅಳ್ಳಿ = ಎಳವಳ್ಳಿ (ಬಕಾರಕ್ಕೆ ವಕಾರಾದೇಶ)
- ಮೆಲ್ + ಮಾತು = ಮೆಲ್ + ವ್ ಆತು = ಮೆಲ್ವಾತು (ಮಕಾರಕ್ಕೆ ವಕಾರಾದೇಶ)
- ನೆಲೆ + ಮನೆ = ನೆಲೆ + ವ್ ಅನೆ = ನೆಲೆವನೆ (ಮಕಾರಕ್ಕೆ ವಕಾರಾದೇಶ)
ಇದರ ಹಾಗೆ…….ಕಿಸುವಣ್, ಎಸರ್ವೊಯ್ದು, ಚೆಲ್ವೆಳಕು, ಕೆನೆವಾಲ್, ಕೈವಿಡಿ, ನೆರೆವೀದಿ, ಪೊರೆವೀಡು ಇತ್ಯಾದಿಗಳಲ್ಲಿ ವಕಾರಾದೇಶ ಬಂದಿರುವುದನ್ನು ಗಮನಿಸಿರಿ. ಈ ಆದೇಶವು ಕೆಲವು ಕಡೆ ಬರುವುದಿಲ್ಲ. ಅದಕ್ಕೆ ಉದಾಹರಣೆ :
- ಕಣ್ + ಬೇಟ = ಕಣ್ಬೇಟ (ಕಣ್ವೇಟ ಆಗುವುದಿಲ್ಲ)
- ಕಿಳ್ + ಪೊಡೆ = ಕಿಳ್ಪೊಡೆ (ಕಿಳ್ವೊಡೆ ಆಗುವುದಿಲ್ಲ)
- ಪಾಳ್ + ಮನೆ = ಪಾಳ್ಮನೆ (ಪಾಳ್ವನೆ ಆಗುವುದಿಲ್ಲ)
ಮೂರು
ಸಮಾಸದಲ್ಲಿ ಉತ್ತರಪದದ ಆದಿಯಲ್ಲಿರುವ "ಸ"ಕಾರಕ್ಕೆ "ಚ ಜ ಛ" ಕಾರವೂ ಆದೇಶವಾಗಿ ಬರುವುದುಂಟು. ಆದರೆ ಪೂರ್ವಪದದ ಕೊನೆಯಲ್ಲಿ ಯ್, ಲ್ ಗಳು ಇರಬಾರದು. ಉದಾಹರಣೆಗೆ :
- ಸಕಾರಕ್ಕೆ ಚಕಾರ ಬರುವುದಕ್ಕೆ - ಇನ್ + ಸರ = ಇನ್ + ಚ್ ಅರ = ಇಂಚರ, ನುಣ್ + ಸರ = ನುಣ್ + ಚ್ ಅರ = ನುಣ್ಚರ
- ಸಕಾರಕ್ಕೆ ಜಕಾರ ಬರುವುದಕ್ಕೆ - ಮುನ್ + ಸೆರಂಗು = ಮುನ್ + ಜ್ ಎರಂಗು = ಮುಂಜೆರಂಗು, ಮುನ್ + ಸೊಡರ್ = ಮುನ್ + ಜ್ ಒಡರ್ = ಮುಂಜೊಡರ್, ತಣ್ + ಸೊಡರ್ = ತಣ್ + ಜ್ ಒಡರ್ = ತಣ್ಜೊಡರ್
- ಸಕಾರಕ್ಕೆ ಛಕಾರ ಬರುವುದಕ್ಕೆ - ಇರ್ + ಸಾಸಿರ = ಇರ್ + ಛ್ ಆಸಿರ = ಇರ್ಚ್ಛಾಸಿರ, ಪದಿನೆಣ್ + ಸಾಸಿರ = ಪದಿನೆಣ್ + ಛ್ ಆಸಿರ = ಪದಿನೆಣ್ಛಾಸಿರ, ನೂರ್ + ಸಾಸಿರ = ನೂರ್ + ಛ್ ಆಸಿರ = ನೂರ್ಛಾಸಿರ
ಕೆಲವು ಕಡೆ ಈ ಸಕಾರಕ್ಕೆ ಯಾವ ಆದೇಶಗಳೂ ಬಾರದಿರುವುದುಂಟು.
- ಬಾಯ್ + ಸವಿ = ಬಾಯ್ಸವಿ, ಬೆಳ್ಸರಿ, ಕಣ್ಸೋಲ, ಕಣ್ಸ್ವಿ, ಮೆಲ್ಸರ, ಮೆಯ್ಸವಿ, ಬಲ್ಸೋನೆ.
ನಾಲ್ಕು
- ‘ಕಾ’ ಎಂಬುದು ‘ರಕ್ಷಣೆ ಮಾಡು’ ಎಂಬರ್ಥದಲ್ಲಿ ಏಕಾಕ್ಷರಧಾತು. ಹೊಸಗನ್ನಡದಲ್ಲಿ ‘ಕಾ’ ಧಾತು ‘ಕಾಯ್’ ಆಗುವುದೆಂದು ಕೆಲವರು ಒಪ್ಪುತ್ತಾರೆ.
- ಮೀ ಎಂಬುದೂ ಕೂಡ ಸ್ನಾನಮಾಡು ಎಂಬರ್ಥದ ಕನ್ನಡ ಏಕಾಕ್ಷರ ಧಾತು.
- ಮೇ ಎಂಬುದೂ ಕೂಡ ಪಶುಗಳ ಆಹಾರ ಭಕ್ಷಣೆಯ ಅರ್ಥದಲ್ಲಿ ಏಕಾಕ್ಷರ ಧಾತುವಾಗಿದೆ.
- ಆ ಶಬ್ದವೆಂದರೆ, ಕೆಲವು ಕಡೆ ಅವನು, ಅವಳು, ಅದು ಎಂಬ ಸರ್ವನಾಮಗಳಿಗೆ ಆ ಎಂಬುದು ಆದೇಶವಾಗಿ ಬರುವುದು. ಹಾಗೆ ಆದೇಶವಾಗಿ ಬಂದ ಆಕಾರವೇ ಆ ಶಬ್ದವೆನಿಸುವುದು. ಉದಾ.:-ಅವನು+ಗಂಡಸು= ಆ ಗಂಡಸು; ಅವಳು+ಹೆಂಗಸು=ಆ ಹೆಂಗಸು; ಅದು+ಕಲ್ಲು= ಆ ಕಲ್ಲು ಇದರಂತೆ ಕೆಲವು ಕಡೆ – ಇವನು+ಗಂಡಸು=ಈ ಗಂಡಸು; ಇವಳು+ಹೆಂಗಸು=ಈ ಹೆಂಗಸು; ಇದು+ಕಲ್ಲು=ಈ ಕಲ್ಲು – ಇತ್ಯಾದಿ ಕಡೆಗಳಲ್ಲಿ ಇವನು, ಇವಳು, ಇದು ಎಂಬುದಕ್ಕೆ ಈ ಆದೇಶವಾಗಿ ಬಂದರೆ ಇದನ್ನು ಈ ಶಬ್ದವೆನ್ನುವರು
- ಎರಡು ಪದಗಳಲ್ಲಿ ಮೊದಲನೆಯ ಪದ ಪೂರ್ವಪದ; ಎರಡನೆಯ ಪದ ಉತ್ತರಪದ. ಸಮಾಸದಲ್ಲಿ ಹೀಗೆ ಹೇಳುವುದು ವಾಡಿಕೆ. ಮಳೆಯ + ಕಾಲ-ಎಂಬೆರಡು ಪದಗಳಲ್ಲಿ ಮಳೆಯ ಎಂಬುದು ಪೂರ್ವಪದ; ಕಾಲ ಎಂಬುದು ಉತ್ತರ ಪದ ಹೀಗೆ ತಿಳಿಯಬೇಕು
- ಸಮಾಸ ಎಂದರೇನು? ಎಂಬುದನ್ನು ಮುಂದೆ ಸಮಾಸ ಪ್ರಕರಣ ಎಂಬ ಹೆಸರಿನ ಭಾಗದಲ್ಲಿ ವಿವರಿಸಿದೆ. ಆಗ ಸ್ಪಷ್ಟವಾಗಿ ತಿಳಿದುಬರುವುದು. ಈಗ ಸಂಧಿಕಾರ್ಯಗಳನ್ನಷ್ಟು ಗಮನಿಸಿದರೆ ಸಾಕು. ಇಲ್ಲಿ ಹುಲ್ಲು + ಕಾವಲು-ಎಂಬಲ್ಲಿ ಹುಲ್ಲು + ಕ್ + ಆವಲು = ಹುಲ್ಲುಗ್ ಆವಲು = ಹುಲ್ಲುಗಾವಲು ಎಂದು ಕ್ ವ್ಯಂಜನಕ್ಕೆ ಗ್ ವ್ಯಂಜನ ಬಂದಿದೆ ಎಂದು ತಿಳಿಯಬೇಕು. ಇದರಂತೆ ಉಳಿದವುಗಳನ್ನೂ ತಿಳಿಯಬೇಕು.
- ಪ ಬ ಮ ವ್ಯಂಜನಗಳಿಗೆ ಎಂದರೆ ಪ್, ಬ್, ಮ್ಗಳಿಗೆ ಎಂದೂ, ವಕಾರವೆಂದರೆ ವ್ ಎಂಬ ವ್ಯಂಜನವೆಂದೂ ತಿಳಿಯಬೇಕು. ಉಚ್ಚಾರಣೆಯ ಸೌಲಭ್ಯ ದೃಷ್ಟಿಯಿಂದ ಪ ಬ ಮ ವ-ಇತ್ಯಾದಿ ಬರೆದಿದೆ. ಆದೇಶ ಬರುವುದು ಕೇವಲ ವ್ಯಂಜನಾಕ್ಷರಕ್ಕೇ ಎಂದು ಎಲ್ಲ ಕಡೆಗೂ ತಿಳಿಯಬೇಕು.
ಚರ್ಚೆ
- ಸಂಧಿಯಾಗುವಾಗ ಸ್ವರದ ಮುಂದೆ ಕ,ಚ,ಟ,ತ,ಪ ಗಳು ಬಂದಾಗ ,ಅದೇ ವರ್ಗದ ಮೂರನೇ ವ್ಯಂಜನಗಳು ಅಂದರೆ ಗ,ಜ ,ಡ ದ,ಬ ಗಳು ಆದೇಶವಾಗಿ ಬರುತ್ತವೆ. ಉದಾ:- ಮಳೆ+ಕಾಲ=ಮಳೆಗಾಲ., ಬೆಟ್ಟ+ತಾವರೆ=ಬೆಟ್ಟದಾವರೆ., ಅಡಿ+ಪವಳ=ಅಡಿಬವಳ.
- ನಿಯಮವು ಕನ್ನಡದಲ್ಲಿ ಬರುವ ಹಲವು ವ್ಯಂಜನದ ಆದೇಶಗಳನ್ನು ವಿವರಿಸುವುದಿಲ್ಲ. ಅವನ್ನು ವಿವರಿಸಲು ಯಾವ ಸಂಧಿನಿಯಮವನ್ನು ಹಲವು ವ್ಯಾಕರಣದ ಹೊತ್ತಗೆಗಳು ಹೇಳುವುದಿಲ್ಲ. ## ಹೆರ್ + ದಾರಿ = ಹೆದ್ದಾರಿ
- ಬೆಲೆ + ಪೆಣ್ಣು(ಹೆಣ್ಣು) = ಬೆಲೆವೆಣ್ಣು
- ಮುಂದು + ಪರಿ( ಹರಿ ) = ಮುಂದುವರಿ
- ಮುಂದು + ಪರೆ( ಹರೆ ) = ಮುಂದುವರೆ
- ತಣ್ + ನೀರು = ತಣ್ಣೀರು
- ಕಣ್ + ನೀರು = ಕಣ್ಣೀರು
- ಭೂ + ತಾಯಿ = ಭೂದಾಯಿ ಅಲ್ಲ ಏಕೆ?
- ಒರ್ + ಕೊರಲು = ಒಕ್ಕೊರಲು
- ಒರ್ + ಕೂಟ = ಒಕ್ಕೂಟ
- ಒರ್ + ಕೂಡು = ಒಗ್ಗೂಡು
- ಹೆರ್ + ಪಾವು(ಹಾವು) = ಹೆಬ್ಬಾವು
- ಕಿಸು + ಪೊೞಲು(ಹೊಳಲು) = ಕಿಸುವೊಳಲು
- ಮೂರ್ + ಕಣ್ಣ = ಮುಕ್ಕಣ
- ತಣ್ + ಗಾಳಿ = ತಂಗಾಳಿ; ಇಲ್ಲಿ 'ಣ್' ಕಾರಕ್ಕೆ 'ಞ್' ಕಾರ ಆದೇಶ
ಕನ್ನಡದಲ್ಲಿ ಹೆಚ್ಚು ಸರತಿ ಬರಿ ರೂಢಿಯಿಂದ ಸಂಧಿ/ಒರೆಗೂಡಿಕೆಗಳನ್ನು ಅರಿಯಲು ಆಗುವುದು. ಈ ಮೇಲಿನ ನಿಯಮಗಳಂತೆ ಎಲ್ಲ ಕನ್ನಡ ಸಂಧಿಪದಗಳನ್ನು ಬಿಡಿಸಲು ಆಗದು.
ಉಲ್ಲೇಖ
- ಆದೇಶ ಸಂಧಿಯ ಉದಾಹರಣೆಗಳು Thekannadanews.com Archived 2022-02-06 ವೇಬ್ಯಾಕ್ ಮೆಷಿನ್ ನಲ್ಲಿ.