ಲೋಪಸಂಧಿ ಎಂದರೇನು ?

ಬದಲಾಯಿಸಿ

ಎಯ್ದೆ ಪೋಪವು ಲೋಪವು []. ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬಾರದಿದ್ದಲ್ಲಿ ‘ಲೋಪಸಂಧಿ’ಯಾಗುತ್ತದೆ. ಉದಾ: ನೀರಿಲ್ಲ(‘ಉ’ಕಾರ ಲೋಪ)ಅವನೂರು('ಅ’ ಕಾರ ಲೋಪ) ಬೇರೊಬ್ಬ(‘ಎ’ ಕಾರ ಲೋಪ) ಅಭ್ಯಾಸಕ್ಕೆ : ಹಳಗನ್ನಡ - ನೆಲದಿಂದುಣ್ಬಂ, ಚಲದಾಣ್ಮಂ, ಇಂದ್ರಂಗೈರಾವತಂ, ಪೊಲದಲ್ಲಿರ್ದಂ. ಹೊಸಗನ್ನಡ - ಊರಲ್ಲಿ, ದೇವರಿಂದ, ಬಲ್ಲೆನೆಂದ, ಏನಾದುದು, ಇವನಿಗಾನು, ಮಾತೆಲ್ಲಂ.

  • ಕೇಸಿರಾಜನು ಶಬ್ದಮಣಿದರ್ಪಣಂ ಗಂಥದ ಸೂತ್ರ 62 ರಲ್ಲಿ ನಾಮರೂಢಿಯಳಿಯದ ಪಕ್ಷಂ ಎಂದಿದ್ದಾನೆ. ಎಂದರೆ, ‘ಸಂಧಿಮಾಡುವಾಗ ಅರ್ಥ ಕೆಡಬಾರದು’ ಎಂಬುದು ನಿಯಮ. ಉದಾ: ತಂದೆ+ಇಲ್ಲ=ತಂದಿಲ್ಲ. ಗುರು+ಅನ್ನು=ಗುರನ್ನು, ಮಡು+ಇದು=ಮಡಿದು, ಮುದಿ+ಅಪ್ಪ=ಮುದಪ, ಬಾಳು+ಅನ್ನು=ಬಾಳನ್ನು ಎಂಬುದು ಭಿನ್ನಾರ್ಥ / ಸಂಧಿದೋಷ.

ಸ್ವರ ಲೋಪ ಸಂಧಿ

ಬದಲಾಯಿಸಿ

ಲೋಪ ಸಂಧಿಯನ್ನು ಸ್ವರಲೋಪ ಸಂಧಿಯೆನ್ನುವರು. ಸ್ವರಸಂಧಿ ಎಂದರೆ ಸ್ವರದ ಮುಂದೆ ಸ್ವರವು ಬಂದು ಸಂಧಿಯಾದರೆ ಸ್ವರಸಂಧಿ. ಎಂದರೆ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲನೆಯ ಅಕ್ಷರ ಸಂಧಿಸಿದಾಗ ಸಂಧಿ ಆಗುವುದು. ಇದನ್ನು ಸಂಧಿಕಾರ್ಯವೆನ್ನುವರು. ಉದಾ:

  • ಮಾತು+ಇಲ್ಲ=ಮಾತುವಿಲ್ಲ- ಮಾತಿಲ್ಲ (ಸಂಧಿ ವಿಕಲ್ಪ) ಉ+ಇ (ಸಂಧಿಪದ ಸಂದರ್ಭ)
  • ಮರ+ಅನ್ನು = ಮರವನ್ನು. ಅ+ಅ(ಸಂಧಿಪದ ಸಂದರ್ಭ)

ಲೋಪ ಸಂಧಿಕಾರ್ಯ

ಬದಲಾಯಿಸಿ

ಲೋಪ ಸಂಧಿ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ - ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ - ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ - ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ - ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ - ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ.
ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.:
ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಉ' ಕಾರ ಲೋಪವಾಗಿದೆ.
ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ 'ಇ'ಕಾರ ಲೋಪವಾಗಿದೆ ಅಂದರೆ ಮಾಯವಾಗಿದೆ.
ಗಮನಿಸಿರಿ
ಇಲ್ಲಿ "ಅರ್ಥವು ಕೆಡದಿದ್ದ ಪಕ್ಷದಲ್ಲಿ" ಎಂದು ಹೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
  • ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
  • ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.
ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವುದು.
ಹಾಗೆ
  • ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವುದು.
  • "ಬಾಲನ್ನು = ಬಾಲು + ಅನ್ನು" ಎಂದೇ ರೂಢಿ.

ಉಲ್ಲೇಖ

ಬದಲಾಯಿಸಿ
  1. ಕೇಶಿರಾಜನ ಶಬ್ದಮಣಿದರ್ಪಣಂ
"https://kn.wikipedia.org/w/index.php?title=ಲೋಪಸಂಧಿ&oldid=1167999" ಇಂದ ಪಡೆಯಲ್ಪಟ್ಟಿದೆ