ಅಸಿಟೋನ್ ಒಂದು ಔದ್ಯಮಿಕ ದ್ರಾವಣ. ಆಲಿಫ್ಯಾಟಿಕ್ ಕೀಟೋನುಗಳಲ್ಲಿ ಇದು ಮೊದಲನೆಯದು. ಇದರ ಸೂತ್ರ CH3COCH3.[] ಎರಡು ಮಿಥೈಲ್ ಗುಂಪುಗಳು ಕಾರ್ಬನಿಲ್ ಅಥವಾ ಕೀಟೋ ಗುಂಪಿಗೆ ಸೇರಿವೆ. ದೊಡ್ಡ ಮಟ್ಟದಲ್ಲಿ ಹಿತ್ತಾಳೆ ಅಥವಾ ತಾಮ್ರದ ವೇಗವರ್ಧಕಗಳನ್ನು ಬಳಸಿಕೊಂಡು ಐಸೋಪ್ರೊಪೈಲ್ ಮದ್ಯಸಾರದಿಂದ ತಯಾರಿಸುತ್ತಾರೆ. ಮೆಕ್ಕೆ ಜೋಳದಂತಹ ಪಿಷ್ಟ ಇರುವಂತಹ ವಸ್ತುಗಳು ಇದರ ಉತ್ಪಾದನೆಯ ಕಚ್ಚಾವಸ್ತುಗಳು. ಕಟ್ಟಿಗೆ, ಸೆಲ್ಯುಲೋಸು ಮತ್ತು ಸಕ್ಕರೆ ಇವುಗಳ ವಿಧ್ವಂಸಕ ಭಟ್ಟಿಯಿಂದ ಉತ್ಪತ್ತಿಯಾಗುವ ಸಂಯುಕ್ತಗಳಲ್ಲಿ ಇದೂ ಒಂದು. ಅಶುದ್ಧ ವುಡ್‌ಸ್ಪಿರಿಟ್ ಎಂಬ ಮಿಥೈಲ್ ಆಲ್ಕೋಹಾಲಿನಲ್ಲಿ ಇದು ಇದೆ.

ಅಸಿಟೋನ್‌ನ ರಚನಾಸೂತ್ರ

ಮಾನವ ದೇಹದಲ್ಲಿ

ಬದಲಾಯಿಸಿ

ಅಸಿಟೋನ್ ಸಾಮಾನ್ಯ ಚಯಾಪಚಯ ಪ್ರಕ್ರಿಯೆಗಳ ಮೂಲಕ ಮಾನವ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದು ರಕ್ತದಲ್ಲಿ ಮತ್ತು ಸಾಮಾನ್ಯ ಮೂತ್ರದಲ್ಲಿ ಲೇಶ ಮಾತ್ರ ಇರುವುದೆಂದು ತಿಳಿದಿದೆ. ಸಿಹಿ ಮೂತ್ರ ರೋಗದಿಂದ (ಡಯಾಬಿಟೀಸ್ ಮೆಲಿಟಸ್) ನರಳುವವರ ಮೂತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಸಿಟೋನು ಇರುವುದು. ಗರ್ಭಿಣಿ ಮಹಿಳೆಯರು, ಬಾಣಂತಿಯರು ಹಾಗೂ ಮಕ್ಕಳಲ್ಲಿ ಅಸಿಟೋನ್ ಹೆಚ್ಚು ಮಟ್ಟದಲ್ಲಿರುತ್ತದೆ. ಹದಗೆಟ್ಟ ಮೆಟಬಾಲಿಸಂನಲ್ಲಿ ಉತ್ಪತ್ತಿಯಾದ ಸಂಯುಕ್ತಗಳು ಸಂಪೂರ್ಣವಾಗಿ ಉತ್ಕರ್ಷಣ ಹೊಂದದೆ ಕೀಟೋನು ಉತ್ಪತ್ತಿಯಾಗಿ ರಕ್ತ ಮತ್ತು ಮೂತ್ರಗಳಲ್ಲಿ ಶೇಖರವಾಗುವುವು. ಹೀಗೆ ಕೀಟೋನು ಶೇಖರವಾಗುವ ಸ್ಥಿತಿಗೆ ಕೀಟೋನೂರಿಯ ಎಂದು ಹೇಳುವರು. ಇವುಗಳಲ್ಲಿ ಅಸಿಟೊ ಅಸಿಟಿಕ್ ಆಮ್ಲ, β- ಹೈಡ್ರಾಕ್ಸಿ ಬ್ಯೂಟರಿಕ್ ಆಮ್ಲ ಮುಂತಾದವುಗಳು ಇರುವುವು.

ತಯಾರಿಕೆ

ಬದಲಾಯಿಸಿ

ಭಿನ್ನಾಂಕ ಬಟ್ಟಿಯಿಂದ (ಫ್ರಾಕ್ಷನಲ್ ಡಿಸ್ಟಿಲೇಷನ್) ವುಡ್‌ಸ್ಪಿರಿಟ್‌ನಿಂದ ಅಸಿಟೋನನ್ನು ಹೆಚ್ಚು ಪ್ರಮಾಣಗಳಲ್ಲಿ ಪಡೆಯಬಹುದು. ಕ್ಯಾಲ್ಸಿಯಂ ಅಸಿಟೇಟಿನ ಶುಷ್ಕ ಬಟ್ಟಿಯಿಂದಲೂ ಅಸಿಟೋನನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯುವರು. ಒತ್ತರಿಸಿದ ಬೇರಿಯಂ ಕಾರ್ಬನೇಟ್ ಮತ್ತು ಪ್ಯೂಮೀಸ್ ಕಲ್ಲು ಇವುಗಳ ಮಿಶ್ರಣವಿರುವ ತಿರುಗುವ ಕಬ್ಬಿಣದ ಉರುಳೆಯನ್ನು (ಸಿಲಿಂಡರ್) ೫೦೦-೬೦೦ ಸೆ. ಉಷ್ಣತೆಯಲ್ಲಿ ಕಾಯಿಸಿ ಇದರ ಮೂಲಕ ಅಸಿಟಿಕ್ ಆಮ್ಲದ ಆವಿಯನ್ನು ಹಾಯಿಸಿದಾಗ ಅಸಿಟೋನು, ನೀರು ಉಂಟಾಗುವುವು. ಅಸಿಟೋನು, ನೀರು ಮತ್ತು ಉಳಿದ ಅಸಿಟಿಕ್ ಆಮ್ಲ ಇವುಗಳ ಆವಿಯನ್ನು ತಂಪು ಮಾಡುವ ಪಾತ್ರೆಯಲ್ಲಿ ಹಾಯಿಸಿದರೆ ಅಸಿಟಿಕ್ ಆಮ್ಲ, ನೀರು ತಂಪಾಗಿ ಶೇಖರವಾಗುವುವು. ಇನ್ನೂ ಆವಿ ರೂಪದಲ್ಲಿರುವ ಅಸಿಟೋನ್ ಅನ್ನು ಇನ್ನೊಂದು ಪಾತ್ರೆಗೆ ಹಾಯಿಸಿ ತಂಪು ಮಾಡಿದರೆ ಅಸಿಟೋನ್ ದ್ರವ ಉಂಟಾಗುವುದು. ಸೋಡಿಯಂ ಬೈಸಲ್ಫೈಟನ್ನು ಬಳಸಿ ಅಸಿಟೋನನ್ನು ಶುದ್ಧೀಕರಿಸಬಹುದು. ಉತ್ತರ ಅಮೆರಿಕದಲ್ಲಿ ಬೆಂಜ಼ೀನು ಮಾತ್ರ ಪ್ರೊಪಿಲೀನ್ ಇವುಗಳಿಂದ ೬೦%ರಷ್ಟು ಫಿನಾಲನ್ನು ತಯಾರಿಸುವಾಗ ೩೦%ರಷ್ಟು ಉಪಸಂಯುಕ್ತವಾಗಿ ಅಸಿಟೋನ್ ಉತ್ಪತ್ತಿಯಾಗುವುದು. ಫಾಸ್‌ಫಾರಿಕ್ ಆಮ್ಲದ ಸಂಪರ್ಕದಲ್ಲಿ ಬೆಂಜ಼ೀನು ಮತ್ತು ಪ್ರೊಪಿಲೀನ್ ಸಂಯೋಜಿಸಿ ಕ್ಯುಮೀನ್ ಬರುವುದು. ಇದನ್ನು ಉತ್ಕರ್ಷಿಸಿ ದುರ್ಬಲ ಗಂಧಕಾಮ್ಲದ ಸಂಪರ್ಕದಲ್ಲಿ ಕೆಳಗಿನ ಉಷ್ಣತೆಯ ಮಟ್ಟದಲ್ಲಿ ಬೆಚ್ಚಗೆ ಮಾಡಿದಾಗ ಫಿನಾಲ್ ಮತ್ತು ಅಸಿಟೋನ್ ಉತ್ಪತ್ತಿಯಾಗುವುವು.

 

ಕಟ್ಟಿಗೆಯ ವಿಧ್ವಂಸಕ ಬಟ್ಟಿಯಿಂದ ಬರುವ ಪೈರೊಲಿಗ್ನಿಯಸ್ ಆಮ್ಲದಲ್ಲಿ ೦.೫%ರಷ್ಟು ಅಸಿಟೋನು ಇರುವುದು. ಮೊದಲು ಅಸಿಟಿಕ್ ಆಮ್ಲವನ್ನು ಬೇರ್ಪಡಿಸಿ ಅಸಿಟೋನು ಮತ್ತು ಮೀಥೈಲ್ ಆಲ್ಕೋಹಾಲ್ ಇವುಗಳನ್ನು ಭಿನ್ನಾಂಕ ಬಟ್ಟಿಯಿಂದ ಬೇರ್ಪಡಿಸುವರು. ೧೯೧೪-೧೮ರ ಮಹಾಯುದ್ಧದ ಸಮಯದಲ್ಲಿ ಮುಸುಕಿನಜೋಳ ಆಲೂಗಡ್ಡೆ ಇವುಗಳನ್ನು, ಫರ್ನ್‌ಬ್ಯಾಕ್ ಬ್ಯಾಸಿಲನ್ ಸಹಾಯದಿಂದ ೩೦-೩೫ ಸೆ. ಉಷ್ಣತೆಯಲ್ಲಿ ಅನೆರೋಬಿಕ್ ರೀತಿಯಲ್ಲಿ (ಆಕ್ಸಿಜನ್ನಿನ ಸಹಾಯವಿಲ್ಲದೆ ಹುಳಿ ಹಿಡಿಯುವುದು) ಹುಳಿ ಹಿಡಿಸಿದಾಗ n-ಬ್ಯೂಟೈಲ್ ಆಲ್ಕೋಹಾಲ್, ಈಥೈಲ್ ಆಲ್ಕೋಹಾಲ್ ಮತ್ತು ಅಸಿಟೋನು ಇವುಗಳು ಕ್ರಮವಾಗಿ ೬:೧:೩ರ ಪ್ರಮಾಣದಲ್ಲಿ ಉತ್ಪತ್ತಿಯಾದುವು.

೧೯೧೧ರಲ್ಲಿ ವೈಜ಼್‍ಮನ್ ಎಂಬಾತ ಕಂಡುಹಿಡಿದ ವಿಧಾನದಿಂದ ಭಾರತದಲ್ಲಿ ಸಿ ಅಸಿಟೊ ಬ್ಯೂಟೈಲಿಕಮ್‌ನಿಂದ ಕಾಟೆಬೆಲ್ಲವನ್ನು ಹುಳಿ ಹಿಡಿಸಿ n-ಬ್ಯೂಟೈಲ್ ಆಲ್ಕೋಹಾಲ್ ಮತ್ತು ಅಸಿಟೋನು ಇವುಗಳನ್ನು ಉತ್ಪತ್ತಿಮಾಡಿ ಬೇರ್ಪಡಿಸುವರು. ೪೦೦ ಸೆ. ನಲ್ಲಿ ಸತುವಿನ ಆಕ್ಸೈಡ್‌ನ ಮೇಲೆ ಅಸಿಟಿಲೀನ್ ಮತ್ತು ನೀರಾವಿಗಳನ್ನು ಹಾಯಿಸಿದಾಗ ಅಸಿಟೋನು ಉಂಟಾಗುವುದು. ಮರ್ಕ್ಯೂರಿಕ್ ಲವಣಗಳ ಸಂಪರ್ಕದಲ್ಲಿ ಮೀಥೈಲ್ ಅಸಿಟಿಲೀನ್ ನೀರಿನೊಡನೆ ವರ್ತಿಸಿ ಅಸಿಟೋನನ್ನು ಕೊಡುವುದು.

ಗುಣಗಳು

ಬದಲಾಯಿಸಿ

ಇದು ಬಣ್ಣರಹಿತ, ಜ್ವಲನಶೀಲ ದ್ರಾವಣ. ಇದು ತೈಲ, ಸೆಲ್ಯುಲೋಸ್, ಕೊಬ್ಬು, ಅಂಟುಗಳು ಮುಂತಾದ ಹಲವಾರು ವಸ್ತುಗಳಲ್ಲಿ ಕರಗುತ್ತದೆ. ಇದು ಹಣ್ಣಿನ ವಾಸನೆಯುಳ್ಳ ಸುಡುವ ದ್ರಾವಣವಾಗಿದೆ.

೫೬.೧ ಸೆ. ಉಷ್ಣತೆಯಲ್ಲಿ ಕುದಿಯುವ ಬಣ್ಣರಹಿತ ದ್ರವ. ಸ್ವಲ್ಪ ಆರೊಮ್ಯಾಟಿಕ್ ವಾಸನೆಯನ್ನು ಹೊಂದಿರುವುದು. ನೀರು, ಆಲ್ಕೋಹಾಲ್ ಮತ್ತು ಈಥರ್ ಇವುಗಳಲ್ಲಿ ಎಲ್ಲ ಪ್ರಮಾಣಗಳಲ್ಲಿಯೂ ವಿಲೀನವಾಗುವುದು. ಇದರ ಸಾಪೇಕ್ಷ ಸಾಂದ್ರತೆ ೦.೭೯೧೫. ೧೦% ಮೀಥೈಲ್ ಆಲ್ಕೋಹಾಲಿನಲ್ಲಿ ಇದು ನಿಯತವಾಗಿ ಕುದಿಯುವ ಮಿಶ್ರಣ (ಕಾನ್ಸ್ಟೆಂಟ್ ಬಾಯ್‌ಲಿಂಗ್ ಮಿಕ್‌ಶ್ಚರ್). ಇದನ್ನು ಮೀಥೈಲ್ ಆಲ್ಕೋಹಾಲಿನಿಂದ ಬೇರ್ಪಡಿಸುವುದು ಸ್ವಲ್ಪ ಕಷ್ಟ. ಅಸಿಟೋನು ಹೈಡ್ರೊಜನ್ ಸಯನೈಡಿನೊಡನೆ ವರ್ತಿಸಿ ಅಸಿಟೋನ್ ಸಯನೊ ಹೈಡ್ರಿನ್‌ನನ್ನು ಕೊಡುವುದು. ಅದೇ ರೀತಿ ಸೋಡಿಯಂ ಬೈಸಲ್ಫೇಟ್ ಉಂಟಾಗುವುದು. ಸೋಡಿಯಂ ಹೈಡ್ರಾಕ್ಸೈಡ್ ದ್ರಾವಣದಲ್ಲಿ ಅಸಿಟೋನು ಕ್ಲೋರಿನ್‌ನೊಡನೆ ವರ್ತಿಸಿ ಕ್ಲೋರೊಫಾರಂಗಳನ್ನು ಕೊಡುವುದು. ಇದೇ ರೀತಿ ಬ್ರೋಮೊಫಾರಂ ಮತ್ತು ಅಯಡೊಫಾರಂಗಳನ್ನು ತಯಾರಿಸಬಹುದು. ಅಸಿಟೋನನ್ನು ಪ್ಲಾಟಿನಂ ಮತ್ತು ಹೈಡ್ರೋಜನ್ ಸಮಪರ್ಕದಲ್ಲಿ ಅಪಕರ್ಷಿಸಿದಾಗ ಐಸ್‌ಪ್ರೊಪೈಲ್ ಆಲ್ಕೋಹಾಲ್ ಉಂಟಾಗುವುದು. ಆದರೆ ಸೋಡಿಯಂ ಅಮಾಲ್ಗಮ್ಮಿನ ಸಂಪರ್ಕದಲ್ಲಿ ಪಿನಕಾಲ್ ಉಂಟಾಗುವುದು.

 

ಆಲ್ಡಿಹೈಡು ಆಲ್ಕೋಹಾಲಿನೊಡನೆ ವರ್ತಿಸುವ ಹಾಗೆ ಅಸಿಟೋನು ವರ್ತಿಸುವುದಿಲ್ಲ. ಆದರೆ ಥಯೊ ಆಲ್ಕೋಹಾಲಿನೊಡನೆ ವರ್ತಿಸಿ ಥಯೊಕಿಟಾಲ್ ಕೊಡುವುದು.

 

ಹೈಡ್ರಾಕ್ಸಿಲಮೀನ್, ಫಿನೈಲ ಹೈಡ್ರಜೀ಼ನ್ ಇವುಗಳೊಡನೆ ಅಸಿಟೋನ್ ವರ್ತಿಸಿ ಕ್ರಮವಾಗಿ ಅಸಿಟೋನಾಕ್ಸಿಮ್ ಮತ್ತು ಅಸಿಟೋನ್ ಫಿನೈಲ್ ಹೈಡ್ರಜೋನ್ ಘನ ಸಂಯುಕ್ತಗಳನ್ನು ಕೊಡುವುದು. ಈ ಘನಸಂಯುಕ್ತಗಳಿಗೆ ನಿರ್ದಿಷ್ಟ ಕರಗುವ ಬಿಂದುಗಳಿರುವುದರಿMದ ಅಸಿಟೋನನ್ನು ಗುರುತಿಸಬಹುದು. ಆಲ್ಡಿಹೈಡಿನ ಹಾಗೆ ಇದು ಪೊಲಿಮರೈಜ್ (ಸಂಘಟಿತ ಅಣುಗಳಿಂದ ದೊಡ್ಡ ಅಣುವಾಗುವ ಸ್ಥಿತಿಗೆ ಪೊಲಿಮರೈಜೇಷನ್ ಎಂದು ಹೆಸರು) ಆಗುವುದಿಲ್ಲ. ಆಲ್ಡಿಹೈಡನ್ನು ಉತ್ಕರ್ಷಿಸಿದಾಗ ಆಲ್ಡಿಹೈಡು ಛಿದ್ರವಾಗದೆ ಸಮಾನ ಇಂಗಾಲದ ಪರಮಾಣುಗಳುಳ್ಳ ಆಮ್ಲ ಉತ್ಪತ್ತಿಯಾಗುವುದು. ಆದರೆ ಕಿಟೋನ್‌ಗಳು ಉತ್ಕರ್ಷಿಸಿದಾಗ ಛಿದ್ರವಾಗಿ ಕಡಿಮೆ ಸಂಖ್ಯೆಯ ಇಂಗಾಲದ ಪರಮಾಣುಗಳುಳ್ಳ ಆಮ್ಲ ಉಂಟಾಗುವುದು. ಅಲ್ಯೂಮಿನಿಯಮ್ ಟರ್ಷರಿ ಬ್ಯೂಟಾಕ್ಸೈಡ್, ಸೆಕೆಂಡರಿ ಆಲ್ಕೋಹಾಲ್ ಮತ್ತು ಅತ್ಯಧಿಕ ಪ್ರಮಾಣದಲ್ಲಿ ಅಸಿಟೊನ್ ಇವುಗಳ ಮಿಶ್ರಣವನ್ನು ಕಾಯಿಸಿದಾಗ ಆಲ್ಕೋಹಾಲ್ ಉತ್ಕರ್ಷಣ ಹೊಂದಿ ಕೀಟೋನ್ ಆಗುವುದು. ಸೆಕೆಂಡರಿ ಆಲ್ಕೊಹಾಲಿನ ಎರಡು ಹೈಡ್ರೋಜನ್ನಿನ ಪರಮಾಣುಗಳು ಅಸಿಟೋನ್‌ನನ್ನು ಕೂಡಿಕೊಂಡು ಐಸೊಪ್ರೊಪೈಲ್ ಆಲ್ಕೋಹಾಲಾಗಿ ಪರಿವರ್ತಿತವಾಗುವುದು. ಇದಕ್ಕೆ ಅದನ್ನು ಕಂಡುಹಿಡಿದ (೧೯೩೭) ವಿಜ್ಞಾನಿಯ ಹೆಸರಿನಿಂದ ಓಪೆನಾಯರ್ (Oppenauer) ರಾಸಾಯನಿಕ ಕ್ರಿಯೆಯೆಂದು ಹೇಳುತ್ತಾರೆ.

 
Oppenauer oxidation reaction scheme

ಸೆಕೆಂಡರಿ ಆಲ್ಕೋಹಾಲಿನ ಅಣುಗಳ ಇಂಗಾಲಗಳು ಅಪರ್ಯಾಪ್ತ ಅಥವಾ ಅಪೂರ್ತವಾಗಿದ್ದರೂ ತೊಂದರೆ ಇಲ್ಲದೆ ಆಲ್ಕೋಹಾಲನ್ನು ಉತ್ಕರ್ಷಿಸಿ ಕೀಟೋನನ್ನು ಪಡೆಯಬಹುದು. ಶುಷ್ಕ ಹೈಡ್ರೊಜನ್ ಸಂಪರ್ಕದಲ್ಲಿ ಎರಡು ಅಸಿಟೊನ್ ಅಣುಗಳು ವರ್ತಿಸಿ ಮೆಸಿಟೈಲ್ ಆಕ್ಸೈಡ್‌ನ್ನು ಕೊಡುವುವು. ಇದು ಸಂಯುಕ್ತ ಆಕ್ಸೈಡ್ ಅಲ್ಲ; ಹಾಗೆಂದು ತಪ್ಪಾಗಿ ಕರೆಯುವರು. ಸರಿಯಾದ ಹೆಸರು α, β ಅಪರ್ಯಾಪ್ತ ಕೀಟೋನ್.

 

೧೩೧ ಸೆ. ಉಷ್ಣತೆಯಲ್ಲಿ ಕುದಿಯುವ ಈ ಬಣ್ಣರಹಿತ ಆಕ್ಸೈಡಿಗೆ ಪೆಪರ್‌ಮಿಂಟಿನ ವಾಸನೆ ಇದೆ. ಮೂರು ಅಸಿಟೋನು ಅಣುಗಳು ಕೂಡಿ ಫೋರಾನ್ ಎಂಬ ಸಂಯುಕ್ತ ವಸ್ತುವನ್ನು ಕೊಡುವುದು. ಈ ಸಂಯುಕ್ತ ವಸ್ತು ಮತ್ತು ಕ್ಯಾಂಪರ್ ಇವುಗಳಲ್ಲಿ ಸಂಘಟಿತ ಮೂಲವಸ್ತುಗಳ ಪರಮಾಣುಗಳ ಪ್ರಮಾಣ [ಎಂಪಿರಿಕಲ್ ಫಾರ‍್ಮುಲ] ಒಂದೇ ಆಗಿರುವುದರಿಂದ (CamPHOR+acetONE=PHORONE) ಫೋರೋನ್ ಎಂದು ಕರೆಯುವರು.[] ಬೇರಿಯಮ್ ಹೈಡ್ರಾಕ್ಸೈಡಿನ ಸಂಪರ್ಕದಲ್ಲಿ ಅಸಿಟೋನನ್ನು ಕಾಯಿಸಿದಾಗ ಎರಡು ಅಸಿಟೋನ್ ಅಣುಗಳು ಕೂಡಿ ೧೬೬ ಸೆ. ಉಷ್ಣತೆಯಲ್ಲಿ ಕುದಿಯುವ ಡೈ ಅಸಿಟೋನ್ ಆಲ್ಕೋಹಾಲ್ ಉಂಟಾಗುವುದು.

 

ಷಿಫ್ಸ್ ದ್ರಾವಣ (Schiff's solution), ಫೆಲಿಂಗ್ ದ್ರಾವಣ (Fehling solution) ಮತ್ತು ಟಾಲ್ಲೆನ್ ದ್ರಾವಣಗಳೊಡನೆ (Tollen's solution) ಅಸಿಟೊನ್ ವರ್ತಿಸುವುದಿಲ್ಲ. ಸೋಡಿಯಂ ನೈಟ್ರೋಪ್ರಸ್ಸೈಡಿನೊಡನೆ ವರ್ತಿಸಿ ಮಾಸಲು ಊದಾ ಬಣ್ಣವನ್ನು ಕೊಡುವುದು.

ಉಪಯೋಗಗಳು

ಬದಲಾಯಿಸಿ

ಇದು ಮುಖ್ಯವಾಗಿ ದ್ರಾವಕವಾಗಿ ಉಪಯೋಗದಲ್ಲಿದೆ.[] ಔಷಧ ಉದ್ಯಮಗಳಲ್ಲಿ ವ್ಯಾಪಕ ಬಳಕೆಯಲ್ಲಿದೆ.

ಅಯನೋನ್ ಪರಿಮಳ ವಸ್ತುವಿನ ತಯಾರಿಕೆಯಲ್ಲಿ ಇದನ್ನು ಬಳಸುವರು. ನಿದ್ರೆ ಬರಿಸುವ ಸಲ್ಫೋನಾಲ್ ಸಂಯುಕ್ತದ ತಯಾರಿಕೆಯಲ್ಲಿಯೂ ಉಪಯೋಗಿಸುವರು. ಕಾರ್ಡೈಟ್ ಎಂಬ ಹೊಗೆ ಆಡದ ಸಿಡಿಮದ್ದಿನ ತಯಾರಿಕೆಯಲ್ಲಿ,[] ಛಿದ್ರವಾಗದ ಪ್ಲಾಸ್ಟಿಕ್ ಆದ ಮಿಥೈಲ್ ಮಿಥಾ ಅಕ್ರಿಲೇಟ್ ಪ್ಲಾಸ್ಟಿಕ್‌ನ (ಪ್ಲೆಕ್ಸಿಗ್ಲಾಸ್) ತಯಾರಿಕೆಯಲ್ಲಿ ಉಪಯೋಗಿಸುವರು. ಪ್ರಯಾಣ ಕಾಲದಲ್ಲಿ ಉಂಟಾಗುವ ದೈಹಿಕ ಆಯಾಸವನ್ನು (ಮೋಷನ್ ಸಿಕ್‌ನೆಸ್) ತಡೆಯಲು ಉಪಯೋಗಿಸುವ ಕ್ಲೋರೋಟೋನ್ ತಯಾರಿಕೆಯಲ್ಲಿ ಸಹ ಉಪಯೋಗಿಸುವರು.

ಸೆಲುಲಾಯ್ಡ್ ಪ್ಲಾಸ್ಟಿಕ್‌ನಲ್ಲಿ, ಕೃತಕ ರೇಷ್ಮೆ ತಯಾರಿಕೆಯಲ್ಲಿ ವಿಲೀನಗೊಳಿಸುವ ದ್ರವವಾಗಿ (ಸಾಲ್‌ವೆಂಟ್) ಅಸಿಟೋನನ್ನು ಉಪಯೋಗಿಸುವರು.

ಅಸಿಟಿಲೀನ್ ಆಸ್ಫೋಟಕ ಸಂಯುಕ್ತವನ್ನು ಉರುಳೆಗಳಲ್ಲಿ ಸಾಗಿಸಲು ಅಸಿಟೋನನ್ನು ದ್ರಾವ್ಯವಾಗಿ ಉಪಯೋಗಿಸುವರು.[] ಕೃತಕ ನೀಲಿ ತಯಾರಿಕೆಯಲ್ಲಿ ಇದನ್ನು ಬಳಸುವರು. ಉಸಿರು ಕಟ್ಟಿದಾಗ (Dyspnoea) ಇದನ್ನು ಆಗಾಗ ಬಳಸುವರು.

ಉಲ್ಲೇಖಗಳು

ಬದಲಾಯಿಸಿ
  1. Allen, P.W.; Bowen, H.J.M.; Sutton, L.E.; Bastiansen, O. (1952). "The molecular structure of acetone". Transactions of the Faraday Society. 48: 991. doi:10.1039/TF9524800991.
  2. Sowa, John R. (2005). Catalysis of organic reactions. Boca Raton: Taylor & Francis. p. 363. ISBN 978-0-8247-2729-1. OCLC 67767141.
  3. Stylianos Sifniades, Alan B. Levy, "Acetone" in Ullmann's Encyclopedia of Industrial Chemistry, Wiley-VCH, Weinheim, 2005.
  4. Wittcoff, M.M.; Green, H.A. (2003). Organic chemistry principles and industrial practice (1. ed., 1. reprint. ed.). Weinheim: Wiley-VCH. p. 4. ISBN 3-527-30289-1.
  5. History – Acetylene dissolved in acetone Archived 2015-09-15 ವೇಬ್ಯಾಕ್ ಮೆಷಿನ್ ನಲ್ಲಿ.. Aga.com. Retrieved on 2012-11-26


ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಸಿಟೋನ್&oldid=1148062" ಇಂದ ಪಡೆಯಲ್ಪಟ್ಟಿದೆ