ಅಷ್ಟಾದಶ ಪುರಾಣಗಳು

(ಅಷ್ಟಾದಶಪುರಾಣಗಳು ಇಂದ ಪುನರ್ನಿರ್ದೇಶಿತ)

ಭಾರತೀಯ ಸಂಸ್ಕೃತಿಯಲ್ಲಿ ವೇದವಾಙ್ಮಯ ಸೂರ್ಯಮಂಡಲವೆನ್ನಿಸಿದರೆ ಪುರಾಣಗಳು ಗ್ರಹನಕ್ಷತ್ರಗಳೆನ್ನಿಸಿವೆ. ನಾಲ್ಕು ವೇದಗಳಾದ ಬಳಿಕ ಬರುವ ಪುರಾಣ ಸಮುದಾಯ ಐದನೆಯ ವೇದವೆಂದು ಖ್ಯಾತಿವೆತ್ತಿದೆ. ಪುರಾಣ ಜನತಾವೇದ; ವೇದಗಣದಂತೆಯೇ ಪ್ರಾಚೀನ ಪರಂಪರೆಗಳ ಕರಂಡಕ ಮತ್ತು ಪವಿತ್ರ. ಅದರ ವಸ್ತುವೂ ರೀತಿಯೂ ಮಹಾಭಾರತ ಮತ್ತು ಸ್ಮೃತಿಗ್ರಂಥಗಳ ವಸ್ತು, ರೀತಿಗಳನ್ನು ಹೋಲುತ್ತವೆ. ಹಿಂದೂಧರ್ಮದ ಸರ್ವಮುಖಗಳನ್ನೂ ಪ್ರತಿಬಿಂಬಿಸುವ ಹೆಗ್ಗನ್ನಡಿಯೆಂದರೆ ಪುರಾಣಸ್ತೋಮವೇ. ಪುರಾಣಸಂಹಿತೆಗಳಲ್ಲಿ ಹಲವು ವಿಶ್ವಕೋಶಗಳೇ ಆಗಿವೆ; ಅವುಗಳಲ್ಲಿ ಸನಾತನ ಮತಧರ್ಮದ ತತ್ತ್ವಗಳಿವೆ. ತತ್ತ್ವಜ್ಞಾನದ ವಿವಿಧ ವಿವರಣೆಗಳಿವೆ. ಐತಿಹಾಸಿಕ ಸಾಮಗ್ರಿಗಳಿವೆ. ವೈಯಕ್ತಿಕ ಜೀವನದ ಆಚಾರ ನಿಯಮಗಳಿವೆ. ಸಾಮಾಜಿಕ ಹಾಗೂ ರಾಜಕೀಯ ನೀತಿಗಳಿವೆ. ಅಷ್ಟಾದಶವೆಂದು ಪ್ರಸಿದ್ಧವಾದ ಮಹಾಪುರಾಣಗಳಲ್ಲಿರುವ ಶ್ಲೋಕಗಳ ಮೊತ್ತ ನಾಲ್ಕು ಲಕ್ಷಗಳಷ್ಟೆಂದು ಭಾಗವತ ಮಹಾಪುರಾಣದ ಹೇಳಿಕೆ.

ಪುರಾಣಪದದ ವ್ಯುತ್ಪತ್ತಿ

ಬದಲಾಯಿಸಿ
  • ಪುರಾ (ಹಿಂದೆ) ನವಂ (ಹೊಸದು) ಎಂದು ಪುರಾಣಪದದ ವ್ಯುತ್ಪತ್ತಿಯನ್ನು ಹೇಳುವುದೊಂದು ಚಮತ್ಕಾರ. ಪುರಾ (ಹಿಂದಕ್ಕೆ) ನೀಯತೇ (ಒಯ್ಯಲ್ಪಡುತ್ತದೆ) ಎಂಬುದಿನ್ನೊಂದು ನಿರುಕ್ತಿ. ಬ್ರಾಹ್ಮಣ ಗ್ರಂಥಗಳಲ್ಲಿ ಬಳಸಲಾಗಿರುವ ಪುರಾಣವೆಂಬ ಪದಕ್ಕೆ ಕೇವಲ ಹಳೆಯ ಕತೆ ಎಂದಿಷ್ಟೇ ಅರ್ಥ. ಅದು ಇತಿಹಾಸ ಮತ್ತು ನಾರಾಶಂಸಿಗಳ ಸಾಲಿಗೆ ಸೇರಿದ್ದು. ಬಾಯಿಂದ ಬಾಯಿಗೆ ಹರಿದುಬಂದ ಹಳಗತೆಯ ರೂಪದಲ್ಲಿದ್ದ ಪುರಾಣವಸ್ತು ಕೆಲ ಅಂಶಗಳಲ್ಲಿ ವೇದವಾಙ್ಮಯಕ್ಕೂ ಹಿಂದಿನದೆಂದು ಹೇಳುತ್ತಾರೆ.
  • ಆದರೆ ನಮಗೆ ಈಗ ಸಿಗುವ ಪುರಾಣಕೃತಿಗಳು ಸ್ವರೂಪತಃ ವೇದೋತ್ತರಕಾಲೀನ. ಇವು ವಿಶಿಷ್ಟಕೃತಿಗಳೆಂಬ ಸೂಚನೆಯನ್ನು ಛಾಂದೋಗ್ಯೋಪನಿಷತ್ತು ಕೊಟ್ಟಿದೆ. ಇವುಗಳ ಸ್ಪಷ್ಟೋಲ್ಲೇಖ ಸೂತ್ರವಾಙ್ಮಯದಲ್ಲಿದೆ. ಮಹಾಪುರಾಣ, ಉಪಪುರಾಣಗಳೆರಡರಲ್ಲೂ ಕಂಡುಬರುವ ಐದು ಲಕ್ಷಣಗಳನ್ನು ಪ್ರ.ಶ. 5ನೆಯ ಶತಮಾನದಲ್ಲಿದ್ದ ಅಮರಸಿಂಹನೆಂಬ ಕೋಶಕಾರ ಹೇಳಿರುವುದು ಸುಪ್ರಸಿದ್ಧ:
  1. ಸರ್ಗ ಅಥವಾ ಆದಿಸೃಷ್ಟಿಯ ವಿವರಗಳು.
  2. ಪ್ರತಿಸರ್ಗ ಅಥವಾ ಪ್ರಳಯ ಮತ್ತು ಪುನಃ ಆದಿಸೃಷ್ಟಿಯ ಅನಂತರ ಮಾಡಲಾದ ಸೃಷ್ಟಿಸಂತಾನದ ವಿವರಗಳು.
  3. ವಂಶ ಅಥವಾ ದಿವ್ಯಕುಲ ವಿವರಣೆ
  4. ಮನ್ವಂತರ ಅಥವಾ ಹದಿನಾಲ್ಕು ಮನುಗಳ ಕಾಲಾವಧಿಯ ವಿಚಾರ.
  5. ವಂಶಾನುಚರಿತ ಅಥವಾ ರಾಜಮಹಾರಾಜರುಗಳ ವಂಶವೃಕ್ಷಗಳು. ವಂಶಾನುಚರಿತಕ್ಕೆ ಬದಲಾಗಿ ಭೂಮ್ಯಾದಿಗಳ ಸಂಸ್ಥಾನ ಅಥವಾ ಜಾಗತಿಕ ಭೂಗೋಳ ವಿಜ್ಞಾನವನ್ನು ಐದನೆಯ ಲಕ್ಷಣವೆಂದು ಕೆಲವೆಡೆ ಹೇಳಿದೆ.

ಪ್ರತಿಯೊಂದು ಪುರಾಣದಲ್ಲೂ ಪಂಚಲಕ್ಷಣಗಳಿವೆಯೆಂದು ಹೇಳಬರುವಂತಿಲ್ಲ. ಕೆಲ ಪುರಾಣಗಳಲ್ಲಿ ಇವುಗಳಲ್ಲಿನ ಕೆಲ ಲಕ್ಷಣಗಳಿಲ್ಲ. ಪುರಾಣದ ಮುಖ್ಯ ಗುರಿ ಸಾಮಾನ್ಯವಾಗಿ ಮತ ಧರ್ಮದ ಉಪದೇಶ ಎಂದರೂ ಪೂರ್ಣ ಸರಿಯಾಗದು. ಶುದ್ಧವಾಗಿ ಧಾರ್ಮಿಕವೆನ್ನಿಸುವ ವ್ರತ, ನಿಯಮ, ಉಪವಾಸ, ತಪಸ್ಸು, ಶ್ರಾದ್ಧ, ದಾನ-ಮುಂತಾದ ಸನಾತನ ವಿಷಯಗಳು ಪುರಾಣದಲ್ಲಿರುವುದು ನಿಜ. ಆದರೆ ಇವೂ ಮತಪಂಥಗಳ ವಿಚಾರಗಳೂ ಅನಂತರ ಅದರಲ್ಲಿ ಬಂದು ಸೇರಿಕೊಂಡು ಪಂಚಲಕ್ಷಣಸೀಮೆಯನ್ನು ಅದು ಉಲ್ಲಂಘಿಸುವಂತೆ ಮಾಡಿದೆ. ಇದರ ಫಲವಾಗಿ ಮಹಾ ಪುರಾಣದ ಲಕ್ಷಣಗಳು ಐದರಿಂದ ಹತ್ತಕ್ಕೇರಿದುವು.

  1. ವೃತ್ತಿ ಅಥವಾ ಜೀವನೋಪಾಯ.
  2. ರಕ್ಷೆ ದಿವ್ಯಾವತಾರಗಳು.
  3. ಮುಕ್ತಿ ಅಥವಾ ಸಂಸಾರಚಕ್ರದಿಂದ ಕೊನೆಯದಾಗಿ ಬಿಡುಗಡೆ ಹೊಂದುವುದು.
  4. ಹೇತು ಅಥವಾ ಅವ್ಯಕ್ತಜೀವ ವಿಚಾರ.
  5. ಬ್ರಹ್ಮವಿಚಾರ ಇಲ್ಲವೆ ಅಪಾಶ್ರಯ ಎಂಬೀ ಐದು ವಿಷಯಗಳನ್ನು ಹಿಂದೆ ಹೇಳಿದ ಐದಕ್ಕೆ ಸೇರಿಸಿದರೆ ದಶಲಕ್ಷಣಗಳಾಗುತ್ತವೆ.

ಇನ್ನೊಂದು ಪಾಠದ ಪ್ರಕಾರ ಸರ್ಗ, ವಿಸರ್ಗ, ವೃತ್ತಿ, ರಕ್ಷೆ, ಅಂತರ, ವಂಶ, ವಂಶಾನುಚರಿತ, ಸಂಸ್ಥೆ, ಹೇತು ಮತ್ತು ಅಪಾಶ್ರಯಗಳು ದಶಲಕ್ಷಣಗಳು. ಬ್ರಹ್ಮನ ಐಶ್ವರ್ಯವರ್ಣನೆ, ವಿಷ್ಣುವಿನ ಮಾಹಾತ್ಮ್ಯದ ವಿವರಣೆ, ಸೂರ್ಯ, ರುದ್ರಾದಿಗಳ ಶಕ್ತಿ ವೈಭವದ ಉಲ್ಲೇಖ, ಸೃಷ್ಟಿಸ್ಥಿತಿಲಯಗಳ ನಿರೂಪಣೆ ಮತ್ತು ಚತುರ್ವಿಧ ಪುರಾಷಾರ್ಥಗಳ ಪ್ರತಿಪಾದನೆ ಇವು ಪುರಾಣಪ್ರಪಂಚಕ್ಕೆ ಸೇರುತ್ತವೆಯೆಂದು ಹೇಳಿ ಮತ್ಸ್ಯಪುರಾಣ ಪುರಾಣ ವಿಷಯಗಳ ವೈವಿಧ್ಯವನ್ನು ಹೆಚ್ಚಿಸಿದೆ. ಆದರೆ ಇಷ್ಟಕ್ಕೂ ಪುರಾಣದ ವಿಷಯ ವ್ಯಾಪ್ತಿ ಮುಗಿಯಿತೆನ್ನಲಾಗದು. ಭಾರತ ಮಹಾಭಾರತವಾಗಿ ಬೆಳೆದಂತೆ ಪ್ರತಿಯೊಂದು ಪುರಾಣವೂ ಕಾಲಕಾಲಕ್ಕೆ ಹೊಸ ಹೊಸ ವಿಷಯಗಳನ್ನೊಳಗೊಳ್ಳುತ್ತ, ಹಳೆಯ ವಿಷಯಗಳನ್ನು ಇಟ್ಟುಕೊಳ್ಳುತ್ತ ಅಥವಾ ಕಳೆದುಕೊಳ್ಳುತ್ತ, ಇಲ್ಲವೆ ಬದಲು ಮಾಡಿಕೊಳ್ಳುತ್ತ, ತಿದ್ದಿಕೊಳ್ಳುತ್ತ ಬೆಳೆದುಬಂದ ಗ್ರಂಥವಾಗಿದೆ. ಒಟ್ಟಿನಲ್ಲಿ ಪುರಾಣ ವೆಂದರೆ ಹಳಗತೆ, ಐತಿಹ್ಯ, ಪರಂಪರೆಯ ಇತಿಹಾಸ ಮುಂತಾದವನ್ನೊಳಗೊಂಡ ಕಥನ ಕವನ. ಪುರಾತನವಾದರೂ ಅತಿಪ್ರಾಚೀನವಲ್ಲದ ಮತ್ತು ಸಾಂಪ್ರದಾಯಿಕ ಹಾಗೂ ಈಚಿನ ಸನಾತನ ಸಂಸ್ಕೃತಿಯ ಪರಂಪರೆಯೇ ಪುರಾಣ. ಹದಿನೆಂಟು ಪುರಾಣಗಳ ಹೆಸರನ್ನು ಜ್ಞಾಪಕದಲ್ಲಿಟ್ಟುಕೊಳ್ಳಲು ಈ ಶ್ಲೋಕ ನೆರವಾಗುತ್ತದೆ:

  • ಮಧ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಂ|
  • ಅನಾಪಲಿಂಗಕೂಸ್ಕಾನಿ ಪುರಾಣಾನಿ ಪ್ರಚಕ್ಷ್ಯತ್ರೇ||

ಅಂದರೆ: ಮಕಾರಾದಿಯಾಗಿ ಎರಡು 1) ಮತ್ಸ್ಯ ಮತ್ತು 2) ಮಾರ್ಕಂಡೇಯ ಭಕಾರಾದಿಯಾಗಿ ಎರಡು- 3) ಭವಿಷ್ಯ ಮತ್ತು 4) ಭಾಗವತ; ಬ್ರಕಾರಾದಿಯಾಗಿ ಮೂರು- 5) ಬ್ರಹ್ಮಾಂಡ, 6) ಬ್ರಹ್ಮವೈವರ್ತ, ಮತ್ತು 7) ಬ್ರಾಹ್ಮ; ವಕಾರಾದಿಯಾಗಿ ನಾಲ್ಕು- 8) ವಾಮನ, 9) ವರಾಹ, 10) ವಿಷ್ಣು ಮತ್ತು 11) ವಾಯು; 13) ಅಗ್ನಿ, 13) ನಾರದ, 14) ಪದ್ಮ, 15) ಲಿಂಗ, 16) ಗರುಡ, 17) ಕೂರ್ಮ, 18) ಸ್ಕಂದ. ಸಾಂಪ್ರದಾಯಿಕ ಗಣನೆಯ ಮೇರೆಗೆ ಬ್ರಾಹ್ಮ, ವೈಷ್ಣವ, ವಾಯವ್ಯ, ಭಾಗವತ, ನಾರದೀಯ, ಮಾರ್ಕಂಡೇಯ, ಆಗ್ನೇಯ, ಭವಿಷ್ಯ, ಬ್ರಹ್ಮವೈವರ್ತ, ಮತ್ಸ್ಯ, ವರಾಹ, ಲೈಂಗ, ಸ್ಕಾಂದ, ವಾಮನ, ಕೌರ್ಮ, ಗಾರುಡ ಮತ್ತು ಬ್ರಹ್ಮಾಂಡಗಳೆಂಬುವೇ 18 ಮಹಾಪುರಾಣಗಳು. ಈ ಪಟ್ಟಿಯಲ್ಲಿ ವಾಯವ್ಯಕ್ಕೆ ಬದಲಾಗಿ ದೇವೀಭಾಗವತವನ್ನೂ ಸೇರಿಸಿದ ಪಾಠಾಂತರಗಳಿವೆ. ಆದರಿವು ವಾಸ್ತವಿಕವಾಗಿ ಉಪಪುರಾಣಗಳು. ಹರಿವಂಶವನ್ನೂ ಅಷ್ಟಾದಶಪುರಾಣಗಳ ಜೊತೆಗೆ ಸೇರಿಸುವವರಿದ್ದಾರೆ. ಅದು ಅಷ್ಟೇನೂ ಉಚಿತವಲ್ಲ. ವಿಷ್ಣುಭಕ್ತರ ದೃಷ್ಟಿಕೋನವನ್ನು ಹಿಡಿದು ವಿಷ್ಣು, ನಾರದ, ಭಾಗವತ, ಗರುಡ, ಪದ್ಮ, ವರಾಹ ಪುರಾಣಗಳನ್ನು ಸಾತ್ವಿಕ ಮಹಾಪುರಾಣಗಳೆಂದೂ ಬ್ರಹ್ಮಾಂಡ, ಬ್ರಹ್ಮವೈವರ್ತ, ಮಾರ್ಕಂಡೇಯ, ಬ್ರಹ್ಮ, ವಾಮನ, ಭವಿಷ್ಯ ಪುರಾಣಗಳನ್ನು ರಾಜಸ ಮಹಾಪುರಾಣಗಳೆಂದು ಮತ್ಸ್ಯ, ಕೂರ್ಮ, ಲಿಂಗ, ಶಿವ, ಅಗ್ನಿ, ಸ್ಕಂದ ಪುರಾಣಗಳನ್ನು ತಾಮಸ ಮಹಾಪುರಾಣಗಳೆಂದೂ ಪದ್ಮಮಹಾಪುರಾಣದಲ್ಲಿ ವರ್ಗೀಕರಿಸಲಾಗಿದೆ. ಸ್ಕಂದಪುರಾಣದ ಪ್ರಕಾರ ಅಷ್ಟಾದಶ ಪುರಾಣಗಳಲ್ಲಿ 10 ಶಿವಮಾಹಾತ್ಮ್ಯವನ್ನೂ 4 ಬ್ರಹ್ಮಮಾಹಾತ್ಮ್ಯವನ್ನೂ ಬಣ್ಣಿಸುತ್ತವೆ. ಉಳಿದೆರಡೆರಡು ಹರಿ, ದೇವಿಯರ ಮಾಹಾತ್ಮ್ಯವನ್ನು ಪ್ರತಿಪಾದಿಸುತ್ತವೆ. ಮತ್ಸ್ಯಪುರಾಣದ ಮೇರೆಗೆ ಅಗ್ನಿ ಸ್ತೋತ್ರ ಪ್ರಧಾನ ಪುರಾಣಗಳು ರಾಜಸ; ಸರಸ್ವತಿ, ಪಿತೃಸ್ತವನ ಪ್ರಧಾನ ಪುರಾಣಗಳು ಸಂಕೀರ್ಣ. ಪಂಚಲಕ್ಷಣದ ಮಾನದಂಡದಂತೆ ವಾಯು, ಬ್ರಹ್ಮಾಂಡ, ಮತ್ಸ್ಯ, ವಿಷ್ಣು, ಮಹಾಪುರಾಣಗಳು ಪ್ರಾಚೀನ; ವಸ್ತುಭೇದವನ್ನು ನಿಕಷವನ್ನಾಗಿ ತೆಗೆದು ಕೊಂಡರೆ 18 ಮಹಾಪುರಾಣಗಳು 6 ಗುಂಪುಗಳಲ್ಲಿ ವಿಭಕ್ತವಾಗುತ್ತವೆ : 1. ಗರುಡ, ಅಗ್ನಿ, ನಾರದ ಮಹಾಪುರಾಣಗಳು ಪ್ರಥಮತಃ ವಾಙ್ಮಯ ವಿಶ್ವಕೋಶಗಳು. ಪೌರಾಣಿಕ ವಿಷಯಗಳೊಡನೆ ವೈದ್ಯ, ವ್ಯಾಕರಣ, ನಾಟ್ಯ, ಸಂಗೀತ, ಜ್ಯೋತಿಶ್ಯಾಸ್ತ್ರ ಮುಂತಾದುವುಗಳಿಗೆ ಸಂಬಂಧಿಸಿದ ವಿಷಯಗಳನ್ನೂ ಒಳಗೊಂಡಿವೆ. 2. ಪದ್ಮ, ಸ್ಕಂದ, ಭವಿಷ್ಯ ಪುರಾಣಗಳಲ್ಲಿ ತೀರ್ಥ, ವ್ರತಾದಿಗಳ ವರ್ಣನೆಗೆ ಪ್ರಾಶಸ್ತ್ಯವಿದೆ. ಈ ಗುಂಪಿನ ಮೂಲ ಪೌರಾಣಿಕ ವಿಷಯಗಳು ಗುರುತು ಸಿಗದಷ್ಟು ಬದಲಾಗಿ ಹೋಗಿವೆ. ಇದಕ್ಕೆ ಉತ್ತರೋತ್ತರ ಪರಿಷ್ಕರಣಗಳೇ ಕಾರಣವಾಗಿರಬೇಕು. 3. ಬ್ರಹ್ಮ, ಭಾಗವತ, ಬ್ರಹ್ಮವೈವರ್ತ ಪುರಾಣಗಳಲ್ಲಿ ಮೂಲವಿಷಯದ ಆದ್ಯಂತಗಳಲ್ಲಿ ಎರಡು ಸಲ ಹೊಸ ವಿಷಯಗಳನ್ನು ಸೇರಿಸಿದಂತೆ ತೋರುತ್ತದೆ. 4. ಇರುವ ಬ್ರಹ್ಮಾಂಡ ಮತ್ತು ಕಳೆದು ಹೋದ ವಾಯುಪುರಾಣಗಳು ಚತುರ್ಥವರ್ಗ. ಈ ವರ್ಗಕ್ಕೆ ಐತಿಹಾಸಿಕ ಲಕ್ಷಣವಿದೆ. ಈಗ ಹಸ್ತಪ್ರತಿಯಲ್ಲಿರುವುದು ವಾಯುಪುರಾಣದ ಎರಡನೆಯ ಭಾಗದ ಅಂಶವೆಂದೂ ಇದರ ತಿರುಳು ಲುಪ್ತವಾಗಿದೆಯೆಂದೂ ಉಪಲಬ್ಧ ವಾಯುಪುರಾಣವನ್ನು ಬ್ರಹ್ಮಾಂಡಪುರಾಣದಲ್ಲಿ ಲೀನಮಾಡಬಹುದೆಂದೂ ಕೆಲವರ ಮತ. 5. ಮತಪಂಥಗಳ ಪ್ರಚಾರಕ್ಕೆ ಅಗ್ರಪ್ರಾಶಸ್ತ್ಯವನ್ನೀಯುವ ಲಿಂಗ, ವಾಮನ, ಮಾರ್ಕಂಡೇಯಗಳದ್ದು ಪಂಚಮವರ್ಗ. ಲಿಂಗಪುರಾಣ ಲಿಂಗಪೂಜೆಯನ್ನೂ ವಾಮನಪುರಾಣ ಶೈವವ್ರತಗಳನ್ನೂ ಮಾರ್ಕಂಡೇಯಪುರಾಣ ದೇವೀ ಮಾಹಾತ್ಮ್ಯವನ್ನೂ ಎತ್ತಿ ಹಿಡಿದಿವೆ. 6. ಮೂಲರೂಪವನ್ನು ಗುರುತಿಸಲು ಅಸಾಧ್ಯವಾಗುವಷ್ಟು ಪರಿಷ್ಕರಣ ಹೊಂದಿದ ವರಾಹ, ಕೂರ್ಮ, ಮತ್ಸ್ಯಪುರಾಣಗಳು ಬಹಳ ಹಳೆಯವೆಂದು ತೋರುತ್ತದೆ. ವಿಷ್ಣುವಿನ ವರಾಹಾವತಾರ ಒಂದನೆಯದರ ಅರೆವಾಸಿಯಷ್ಟನ್ನೂ ಮತ್ಸ್ಯಾವತಾರ ಎರಡನೆಯದರ ಅರ್ಧದಷ್ಟನ್ನೂ ಕೂರ್ಮಾವತಾರ ಎರಡನೆಯದರ ಒಂದನೆಯ ಎಂಟರಷ್ಟನ್ನೂ ಹೇಳಿವೆ.

ಪುರಾಣಗಳ ಹೇಳಿಕೆಗಳಂತೆ ಪುರಾಣಗಳ ಹುಟ್ಟು ವಿವಿಧ

ಬದಲಾಯಿಸಿ
  • ವೇದಗಳನ್ನು ವಿಭಜಿಸಿ ತನ್ನ ನಾಲ್ವರು ಶಿಷ್ಯರಿಗೆ ಹಂಚಿಕೊಟ್ಟ ಮೇಲೆ ವೇದವ್ಯಾಸಋಷಿ ಕತೆ, ಜೀವನವೃತ್ತಾಂತ, ಗೀತ ಮುಂತಾದವುಗಳಿಂದ ಕೂಡಿದ ಪುರಾಣ ಸಂಹಿತೆಯನ್ನು ಮಾಡಿ, ಅದನ್ನು ತನ್ನ ಐದನೆಯ ಶಿಷ್ಯನಾದ ಲೋಮಹರ್ಷಣ ಸೂತನಿಗೆ ಕಲಿಸಿದ. ಆತ ಅದನ್ನು ಆರುಪಾಠಗಳನ್ನಾಗಿ ಮಾಡಿ ಆರುಜನ ಶಿಷ್ಯರಿಗೆ ಹೇಳಿಕೊಟ್ಟ. ಅವರಲ್ಲಿ ಮೂವರು ಮಿಕ್ಕ ಪುರಾಣಾಂಶಗಳನ್ನು ಕಲೆಹಾಕಿದರು-ಎಂಬುದು ವಿಷ್ಣುಪುರಾಣದ ಹೇಳಿಕೆ.
  • ಲೋಮಹರ್ಷಣನ ಷಟ್ಸಂಹಿತೆ, ಕಾಶ್ಯಪಸಂಹಿತೆ, ಸಾರ್ವಣಿಕ ಸಂಹಿತೆ ಮತ್ತು ಶಪಾಯನ ಸಂಹಿತೆ ಎಂಬೀ ನಾಲ್ಕನ್ನು ಮೂಲಸಂಹಿತೆಗಳೆಂಬುದು ಸಂಪ್ರದಾಯ. ಈ ಯಾವ ಸಂಹಿತೆಯೂ ಈಗ ಸಿಕ್ಕಿಲ್ಲ. ಸೂತಪುತ್ರ ಉಗ್ರಶ್ರವಸ್ಸನೂ ತನ್ನ ತಂದೆಯಿಂದ ಪುರಾಣಸಂಹಿತೆಯನ್ನು ಕಲಿತನಂತೆ. ವೇದಸಾಕ್ಷಾತ್ಕಾರಕ್ಕೂ ಮೊದಲು ಬ್ರಹ್ಮ ಪುರಾಣಗಳನ್ನು ಸಂಕಲಿಸಿ ಸೂತರ ಕೈಗಿತ್ತನೆಂದೂ ಸೂತರ ಮೂಲಪುರುಷ ಮೊಟ್ಟಮೊದಲು ಬ್ರಹ್ಮ ಮಾಡಿದ ಯಜ್ಞದಲ್ಲಿ ಯೋಗಬಲದಿಂದ ಹುಟ್ಟಿದ ಪುಜ್ಯ ಬ್ರಾಹ್ಮಣನೆಂದೂ ವಾಯುಪುರಾಣದ ಹೇಳಿಕೆ.
  • ಹೀಗೆ ವಿಷ್ಣುಪುರಾಣದಲ್ಲಿ ನಾಲ್ಕಾಗಿ ವಾಯುಪುರಾಣದಲ್ಲಿ ಹತ್ತಾಗಿ, ಪುರಾಣಸಂಖ್ಯೆ ಕೊನೆಯಲ್ಲಿ ಹದಿನೆಂಟಕ್ಕೇರಿ ಅಲ್ಲೇ ನಿಂತಿತು. ಅಗ್ನಿ, ವಾಯು, ಸೂರ್ಯ ಪುರಾಣಗಳು ಋಕ್. ಯಜಸ್, ಸಾಮವೇದಗಳ ಶಾಖೆಗಳೆಂದೂ ಪುರಾಣಗಳೆಲ್ಲವೂ ಹಾಗೆಯೇ ಬೇರೆ ಬೇರೆ ವೇದಗಳ ಶಾಖೆಗಳಾಗಿಯೇ ಉದಯಿಸಿದುವೆಂದೂ ಕೆಲವರ ಮತ.

ಪುರಾಣಗಳ ಬೆಳೆವಣಿಗೆಯನ್ನು 3 ಹಂತಗಳಾಗಿ ವಿಂಗಡಿಸಬಹುದು

ಬದಲಾಯಿಸಿ
  • ವೇದವಾಙ್ಮಯದಲ್ಲಿಯ ಇತಿಹಾಸ, ಗಾಥೆ, ನಾರಾಶಂಸಿ, ವಂಶ, ಆಖ್ಯಾನ ಮುಂತಾದ ಹಳಗತೆಗಳನ್ನಾಧರಿಸಿ ಸೂತ ಸಂಕಲಿಸಿದ ಹಂತ ಮೊದಲನೆಯದು. ಪುರಾಣಗಳ ಇತಿಹಾಸದಲ್ಲಿ ಭಾರತ ಯುದ್ಧವೊಂದು ಗಡಿಗೆರೆ. ಅಂದಿನಿಂದ ಮುಂದಿನ ನಾಲ್ಕು ತಲೆಮಾರುಗಳವರೆಗಿನ ಅರಸರ ಉಲ್ಲೇಖವನ್ನು ಭೂತಕಾಲೀನವೆಂದೂ ಅನಂತರದ ರಾಜರ ಉಲ್ಲೇಖವನ್ನು ಭವಿಷ್ಯಕಾಲೀನವೆಂದೂ ಪರಿಗಣಿಸುವ ರೂಢಿ ಪುರಾಣಗಳಲ್ಲಿ ನೆಲೆನಿಂತಿತು. ಅನಂತರ ಉಪನಿಷತ್ ಯುಗ ಎರಡನೆಯ ಸೋಪಾನ.
  • ಸೃಷ್ಟಿ ವಿಷಯವೂ ಸಾಂಖ್ಯ ಔಪನಿಷದಿಕ ತತ್ತ್ವಪ್ರಣಾಲಿಗಳೂ ಮನ್ವಂತರ ವಿವರಣೆಯೊಂದಿಗೇ ಪುರಾಣವನ್ನು ಸೇರಿಕೊಂಡಿದ್ದು ಈ ಮೆಟ್ಟಲಲ್ಲಿ. ಸೂತ್ರವಾಙ್ಮಯದ ಯುಗ ಪುರಾಣಪರಿವೃದ್ಧಿಯ ಮೂರನೆಯ ಕಾಲಮಾನ. ಆಪಸ್ತಂಬಸೂತ್ರದಲ್ಲಿ ಹೇಳಿದೆ. ವದತೋವ್ಯಾಘಾತವುಳ್ಳ ಭವಿಷ್ಯತ್ಪುರಾಣವೆಂಬ ತಲೆಬರಹದಿಂದ ಪುರಾಣವೆಂಬ ಪದದ ಮೂಲಾರ್ಥ ಮಾಯಾವಾಗಿ ಅದೊಂದು ವಿಶಿಷ್ಟವರ್ಗದ ಗ್ರಂಥಗಳ ಹೆಸರೆನಿಸಿದ್ದು ಸ್ಪಷ್ಟವಾಗುತ್ತದೆ. ಈ ಹಂತದ ಪುರಾಣಗಳೇ ಬಹುಶಃ ಪಂಚಲಕ್ಷಣಗಳ ಅನ್ವಯಕ್ಕೆ ಎಡೆಗೊಟ್ಟಿರಬೇಕು.
  • ಈ ಸಂದರ್ಭದಲ್ಲೇ ಅವುಗಳಲ್ಲಿ ಭಕ್ತಿಗೂ ಭೂ ವಿವರಣೆಗೂ ಸಂಬಂಧಿಸಿದ ವಿಷಯಗಳು ಸೇರಿಕೊಳ್ಳಲಾರಂಭಿಸಿರಬೇಕು. ವರ್ಣ, ಆಶ್ರಮ, ಶ್ರಾದ್ಧ, ದಾನ, ದೀಕ್ಷೆ, ವ್ರತ, ತೀರ್ಥಯಾತ್ರೆ-ಮುಂತಾದ ಮತ ಧಾರ್ಮಿಕ ವಿಷಯಗಳು ಅವನ್ನು ಹೊಕ್ಕಿರಬೇಕು. ಅಂದರೆ ಪ್ರ.ಶ. ಸು. 4ನೆಯ ಶತಮಾನದಷ್ಟು ಹೊತ್ತಿಗೆ ಉಪಲಬ್ಧ ಪುರಾಣಗಳ ರೂಪರಚನೆ ನಿರ್ದಿಷ್ಟವಾಗಿ ಖಚಿತಗೊಂಡು ಪುರಾಣಸಾಹಿತ್ಯದ ವಿಶಿಷ್ಟಶೈಲಿಯ ಮಾದರಿ ಬೆಳಕಿಗೆ ಬಂತೆನ್ನಬಹುದು. ಆಮೇಲೆ ಪ್ರತಿ ತಲೆಮಾರೂ ಪುರಾಣಗಳಿಗೆ ವಿವಿಧ ವಿಷಯಗಳನ್ನು ಸೇರಿಸುತ್ತ ಬಂದಿತು.
  • ಪುರಾಣಗಳ ಪ್ರಕಾರ ಸೃಷ್ಟಿಯಿರುವುದು ಬ್ರಹ್ಮನ ಹಗಲಿನಲ್ಲಿ. ಆತನ ಹಗಲಿಗೆ 14 ಮನ್ವಂತರಗಳು ಅಥವಾ 423 ಕೋಟಿ ಮಾನುಷ ವರ್ಷಗಳು. ಸಾವಿರ ದೇವ ಯುಗದಳಕ್ಕೆ ಸಮಾನ. ಅದೊಂದು ಕಲ್ಪ. ಒಂದೊಂದು ಮನ್ವಂತರಕ್ಕೆ 30 ಕೋಟಿ, 67 ಲಕ್ಷ, 20 ಸಾವಿರ ವರ್ಷಗಳು. ಇಂಥ 14 ಮನ್ವಂತರಗಳೂ 15 ಸಂಧಿಕಾಲಗಳೂ ಬ್ರಹ್ಮನ ಒಂದು ಹಗಲಿಗೆ ಸಮಾನ. ಮನುಷ್ಯರ ಚತುರ್ಯುಗ ಚಕ್ರವೊಂದಕ್ಕೆ ಒಂದು ದೇವ ಅಥವಾ ಮಹಾಯುಗ.
  • ಒಂದು ಮಹಾಯುಗಕ್ಕೆ 43 ಲಕ್ಷ, 20 ಸಾವಿರ ವರ್ಷಗಳು. ಕಲ್ಪಾಂತದಲ್ಲಿ ಮಹಾಪ್ರಳಯ. ಅನಂತರ ಮತ್ತೊಂದು ಕಲ್ಪ ಬ್ರಹ್ಮನ ರಾತ್ರಿ. ಆಗ ವಿಶ್ವವಿಲ್ಲ. ಒಂದೊಂದು ಮನ್ವಂತರ ಮುಗಿದ ಕೂಡಲೆ ಕೆಳವರ್ಗದ ಪ್ರಾಣಿಗಳ ಮತ್ತು ಕೆಳಲೋಕಗಳ ನಾಶವುಂಟಾಗುತ್ತದೆ. ಈ ಅಲ್ಪ ಪ್ರಳಯದಲ್ಲಿ ಋಷಿ. ದೇವತೆಗಳೂ ವಿಶ್ವದ ಮೂಲದ್ರವವೂ ನಾಶ ಹೊಂದದು. ಪ್ರತಿಸರ್ಗವೆಂಬ ನೈಮಿತ್ತಿಕಮಹಾಪ್ರಳಯ ಕಲ್ಪಕ್ಕೊಂದು; ಆಗ ಸರ್ವನಾಶ. ಮೂಲದ್ರವ್ಯವಾದ ಪ್ರಕೃತಿ ನಷ್ಟಹೊಂದುವ ಈ ಮಹಾಪ್ರಳಯವೊಂದು ಪ್ರಾಕೃತಪ್ರಳಯ.
  • ಇದರಲ್ಲಿ ಸೃಷ್ಟಿಕರ್ತನಾದ ಬ್ರಹ್ಮ ಪರಬ್ರಹ್ಮಲೀನನಾಗುವನು. ಸಂಧಿಕಾಲರಹಿತವಾದ ಒಂದೊಂದು ಮನ್ವಂತರ 71 ಚತುರ್ಯುಗ ಚಕ್ರಗಳಿಗೆ ಸಮವೆಂದು ಮಾಡಿದ್ದು ಅನಂತರದ ವ್ಯವಸ್ಥೆ. ಕೃತ, ತ್ರೇತ, ದ್ವಾಪರ, ಕಲಿ ಎಂಬ ನಾಲ್ಕು ಯುಗಗಳ ವರ್ಷಸಂಖ್ಯೆ 4:3:2:1 ಎಂಬ ಇಳಿತಾಯದ ಪ್ರಮಾಣದಲ್ಲಿ ನಿಷ್ಕೃಷ್ಟವಾದದ್ದೂ ಆಮೇಲಿನ ಕಲ್ಪನೆಯಿಂದಲೇ. ಭಾರತದ ಕುರುಕ್ಷೇತ್ರ ಕದನ ದ್ವಾಪರಾಂತ್ಯದಲ್ಲಿ ನಡೆಯಿತು. ಅನಂತರ ಕಲಿಯುಗಾರಂಭ.
  • ಕೃತದಲ್ಲಿ 7ನೆಯವನಾದ ವೈವಸ್ವತ ಮನುವಿನಿಂದ ಹಿಡಿದು 40 ತಲೆಮಾರುಗಳು ಅಳಿದ ಬಳಿಕ ಹೈಹಯರ ನಾಶದಿಂದ ಆ ಯುಗ ಕೊನೆಗೊಂಡಿತೆಂದೂ ತ್ರೇತೆಯಲ್ಲಿ ಸಗರ ಚಕ್ರವರ್ತಿಯ ಆಳ್ವಿಕೆಯಿಂದ ಆರಂಭಿಸಿ 25 ತಲೆಮಾರುಗಳು ಅದನ್ನು ನಡೆಸಿಕೊಂಡು ಹೋದುವೆಂದೂ ದ್ವಾಪರದಲ್ಲಿ ಚಂದ್ರವಂಶದ 30 ತಲೆಮಾರುಗಳ ಅರಸರು ಆಳಿ ಅಳಿದರೆಂದೂ ಪುರಾಣಗಳಲ್ಲಿ ಹೇಳಿದೆ. ಕುರುಕ್ಷೇತ್ರ ಕದನದ ಕಾಲ ಪ್ರ.ಶ.ಪು. 1400 ಎಂದು ಇತಿಹಾಸಜ್ಞರ ಮತ.
  • ಅದಕ್ಕೆ 1800 ವರ್ಷಗಳ ಹಿಂದೆ ಅಥವಾ ಪ್ರ.ಶ.ಪು. 3200ರಲ್ಲಿ-ಮಹಾಪ್ರವಾಹದ ಉತ್ತರಕಾಲದಲ್ಲಿ-ಭಾರತದ ಪಾರಂಪರಿಕ ಚರಿತ್ರೆಯ ಕಾಲ ಆರಂಭಿಸಿತೆನ್ನಬಹುದು. ಪುರಾಣದ ಭೂಗೋಳವಿಜ್ಞಾನ ಬಹಳ ಸ್ವಾರಸ್ಯವಾಗಿದೆ. ಮೇರುಪರ್ವತ ಭೂಲೋಕದ ಮಧ್ಯಸ್ಥಳ. ಸುತ್ತಲೂ ಉಪ್ಪುನೀರಿನ, ಕಬ್ಬಿನ ಹಾಲಿನ, ಹೆಂಡದ, ತುಪ್ಪದ, ಮೊಸರಿನ, ಹಾಲಿನ ಮತ್ತು ಶುದ್ಧವಾದ ನೀರಿನ ಏಳು ಕಡಲುಗಳಿವೆ.
  • ಅವುಗಳಲ್ಲಿ ಒಂದೊಂದರಿಂದ ಪ್ರತ್ಯೇಕವಾಗಿ ಸುತ್ತುವರಿಯಲ್ಪಟ್ಟ ಜಂಬು, ಪ್ಲಕ್ಷ (ಗೋವೇದಕ) ಶಾಲ್ಮಲ, ಕುಶ, ಕ್ರೌಂಚ, ಶಾಕ ಮತ್ತು ಮುಷ್ಕರ ಎಂಬ ಹೆಸರಿನ ಏಳು ದ್ವೀಪರೂಪದ ಖಂಡಗಳಿವೆ. ಭಾರತ ಜಂಬೂದ್ವೀಪದ ಒಂದು ವರ್ಷ ಅಥವಾ ದೇಶ. ಇಂದ್ರದ್ವೀಪ, ಕಶೇರುಮತ್, ಠಾಮ್ರವರ್ಣ, ಗಭಸ್ತಿಮತ್, ನಾಗದ್ವೀಪ, ಸೌಮ್ಯ, ಗಾಂಧರ್ವ, ವಾರುಣ, ಕುಮಾರಕ-ಎಂಬೀ ಒಂಬತ್ತು ಪುರಾಣ ಭಾರತದ ಪ್ರಾಂತರಾಜ್ಯಗಳು.

ಅಷ್ಟಾದಶ ಪುರಾಣಗಳು

ಬದಲಾಯಿಸಿ
  • CE= = ಕ್ರಿ.ಶ. ; c = ಶತಮಾನ
ಕ್ರಮ ಸಂಖ್ಯೆ ಪುರಾಣದ ಹೆಸರು ಶ್ಲೋಕಗಳ ಸಂಖ್ಯೆ ಕಾಲ
೦೧ ಮತ್ಸ್ಯ ಪುರಾಣ ೧೪೦೦೦ ಕ್ರಿ.ಶ. 550-650 ನಡುವೆ; (c.200–500 CE)
೦೨ ಮಾರ್ಕಂಡೇಯ ಪುರಾಣ 0೯೦೦೦ c. 250 CE, (c. 550 CE ರ ದೇವಿ ಮಹಾತ್ಮ್ಯ ಬಿಟ್ಟು )
೦೩ ಭಾಗವತ ಪುರಾಣ ೧೮೦೦೦ 800 - 1000CE.
೦೪ ಭವಿಷ್ಯ ಪುರಾಣ ೧೪೫೦೦ ಐದನೇ ಶತಮಾನ- CE
೦೫ ಬ್ರಹ್ಮ ಪುರಾಣ ೧೦೦೦೦ ಕ್ರಿ.ಶ. 13ನೆಯ ಶತಮಾನ
೦೬ ಬ್ರಹ್ಮಾಂಡ ಪುರಾಣ ೧೨೦೦೦ 1000 CE
೦೭ ಬ್ರಹ್ಮವೈವರ್ತ ಪುರಾಣ ೧೮೦೦೦ ಕ್ರಿ.ಶ.15 ನೇ or 16 ನೇ ಶತಮಾನ
೦೮ ವಿಷ್ಣು ಪುರಾಣ ೨೩೦೦೦ ಕ್ರಿ.ಶ. 3ನೆಯ ಶತಮಾನ
೦೯ ವರಾಹ ಪುರಾಣ ೨೪೦೦೦ ಕ್ರಿ.ಶ. 8ನೆಯ ಶತಮಾನ
೧೦ ವಾಮನ ಪುರಾಣ ೧೦೦೦೦ ಸುಮಾರು 16ನೆಯ ಶತಮಾನ
೧೧ ವಾಯು ಪುರಾಣ ೨೪೦೦೦ ಕ್ರಿ.ಶ. 4ನೆಯ ಶತಮಾನದ
ಶತಮಾನ ಅಗ್ನಿ ಪುರಾಣ ೧೦೫೦೦ 800 - 1100 CE.
೧೩ ನಾರದ ಪುರಾಣ ೨೫೦೦೦ ಕ್ರಿ.ಶ.1600 ಅಥವಾ 1700
೧೪ ಪದ್ಮ ಪುರಾಣ ೫೫೦೦೦ ಸು. ಕ್ರಿ.ಶ. 12ನೆಯ ಶತಮಾನ
೧೫ ಲಿಂಗ ಪುರಾಣ ೧೧೦೦೦ ಪ್ರಾಯಶಃ. ಕ್ರಿ.ಶ. 8ನೆಯ ಶತಮಾನ
೧೬ ಗರುಡ ಪುರಾಣ ೧೯೦೦೦ ಕ್ರಿ.ಶ. 10ನೆಯ ಶತಮಾನ
೧೭ ಕೂರ್ಮ ಪುರಾಣ ೧೭೦೦೦ ಕ್ರಿ.ಶ. 650ಕ್ಕೂ ಈಚಿನದು
೧೮ ಸ್ಕಂದ ಪುರಾಣ ೮೦೧೦೦ ಕಾಲ 7ನೆಯ ಶತಮಾನ.
  • ಅಷ್ಟಾದಶ ಮಹಾಪುರಾಣಗಳ ಎಲ್ಲ ಪಟ್ಟಿಗಳಲ್ಲೂ ಹತ್ತು ಸಾವಿರ ಶ್ಲೋಕಗಳುಳ್ಳವೆಂದು ಹೆಸರಾದರೂ ನಿಜವಾಗಿ ಸುಮಾರು 7-8 ಸಾವಿರ ಶ್ಲೋಕಗಳನ್ನಷ್ಟೇ ಉಳ್ಳ ಇದು ಆದಿಪುರಾಣವೆಂದು ಹೆಸರಾಗಿದೆ. ಉಪೋದ್ಘಾತದಲ್ಲಿ ಲೋಮಹರ್ಷಣ ಸೂತನ ನೈಮಿಷಾರಣ್ಯಕ್ಕೆ ಹೋದಾಗ ಅಲ್ಲಿದ್ದ ಋಷಿಗಳು ಪ್ರಪಂಚದ ಆದ್ಯಂತಗಳನ್ನು ವಿವರಿಸಲು ಕೇಳಿಕೊಳ್ಳಲಾಗಿ ಸೂತಪುರಾಣಿಕ ಮಾನವಕುಲದ ಮೂಲಪಿತಾಮಹರಲ್ಲಿ ಒಬ್ಬನಾದ ದಕ್ಷನಿಗೆ ಒಮ್ಮೆ ಸೃಷ್ಟಿಕರ್ತನಾದ ಬ್ರಹ್ಮ ಹೇಳಿದ ಬ್ರಹ್ಮಪುರಾಣವನ್ನು ಹೇಳಲು ಒಪ್ಪುತ್ತಾನೆ.
  • ಅವನ ಪುರಾಣ ಪ್ರವಚನದಲ್ಲಿ ಎಲ್ಲ ಪುರಾಣಗಳಿಗೂ ಹೆಚ್ಚು ಕಡಿಮೆ ಸಾಧಾರಣವೆನ್ನಿಸುವ ವಿಶ್ವಸೃಷ್ಟಿ, ಆದಿಮಾನವನಾದ ಮನು ಮತ್ತು ಅವನ ವಂಶಜರ ಹುಟ್ಟು, ದೇವತೆಗಳ ಉತ್ಪತ್ತಿ, ಗಂಧರ್ವಾದಿಗಳ ಉದಯ, ಸೂರ್ಯ, ಚಂದ್ರವಂಶಜರ ರಾಜ ಮಹಾರಾಜರ ಪೀಳಿಗೆಯ ವೃತ್ತಾಂತ, ಭೂವಿಭಾಗ, ಸ್ವರ್ಗ, ನರಕಗಳ ವಿವರ ಬರುತ್ತವೆ. ಪುರಾಣದ ಬಹ್ವಂಶ ತೀರ್ಥ ಮಾಹಾತ್ಮ್ಯವನ್ನು ಹೇಳುತ್ತದೆ. ಒರಿಸ್ಸದ ದೇವಾಲಯ ಮತ್ತು ಸುತ್ತಮುತ್ತಲಿನ ತೀರ್ಥಕ್ಷೇತ್ರಗಳು ಗಣ್ಯವಾಗಿ ವರ್ಣಿಸಲ್ಪಟ್ಟಿವೆ.
  • ಆದಿತ್ಯೋತ್ಪತ್ತಿ, ಶಿವಪ್ರಿಯವನ, ಉಮಾಜನನ, ಉಮಾವಿವಾಹ, ಶಿವಸ್ತೋತ್ರ, ಕಂಡುಮಹರ್ಷಿಯ ಸ್ತ್ರೀಲೋಲುಪತೆ, ವಿರಾಗ, ಕೃಷ್ಣಲೀಲೆ, ಶ್ರಾದ್ಧನಿಯಮ, ಧಾರ್ಮಿಕ ಜೀವನದ ನೀತಿ, ವರ್ಣಾಶ್ರಮ ಧರ್ಮ, ಸ್ವರ್ಗ, ನರಕ, ವಿಷ್ಣುಪುಜಾದಿಗಳು-ಇವು ಇದರ ಸಾರ. ಯುಗ, ಪ್ರಲಯ, ಸಾಂಖ್ಯಯೋಗ, ಮೋಕ್ಷೋಪಾಯಗಳ ವಿವೇಚನೆಯೂ ಕೊನೆಯಲ್ಲಿವೆ. ಪ್ರಸ್ತುತ ಪುರಾಣದಲ್ಲಿ ಅತ್ಯಲ್ಪಭಾಗ ಪ್ರಾಚೀನ; ತೀರ್ಥಮಾಹಾತ್ಮ್ಯವಂತೂ ಪ್ರ.ಶ. 13ನೆಯ ಶತಮಾನಕ್ಕಿಂತ ಹಿಂದಿನದೆನ್ನಿಸದು.
  • ಇದಕ್ಕೆ ಸುಪ್ರಸಿದ್ಧವಾದ ಎರಡು ಪಾಠ ಸಂಪ್ರದಾಯಗಳಿವೆ. ಅವುಗಳಲ್ಲಿ ಆದಿ, ಭೂಮಿ, ಬ್ರಹ್ಮ, ಪಾತಾಳ, ಸೃಷ್ಟಿ, ಉತ್ತರಖಂಡಗಳೆಂಬ ಆರು ಭಾಗಗಳುಳ್ಳದ್ದು ಹೆಚ್ಚು ಅರ್ವಾಚೀನ; ಸೃಷ್ಟಿ, ಭೂಮಿ, ಸ್ವರ್ಗ, ಪಾತಾಳ, ಉತ್ತರ ಖಂಡಗಳೆಂಬ ಐದು ಭಾಗಗಳಿರುವ ಬಂಗಾಲಿ ಹಸ್ತಪ್ರತಿಯ ಪಾಠಸಂಪ್ರದಾಯ ಹೆಚ್ಚು ಪ್ರಾಚೀನ. ಈ ಖಂಡಗಳೆಲ್ಲವೂ ಬಹುಶಃ ಬೇರೆ ಬೇರೆ ಕಾಲಾವಧಿಗಳಲ್ಲಿ ಬರೆದ ಪ್ರತ್ಯೇಕ ಕೃತಿಗಳು. ಅನಂತರ ಯಾರೋ ಅವೆಲ್ಲವನ್ನೂ ಸಂಕಲಿಸಿ ಪದ್ಮಪುರಾಣವೆಂಬ ಹೆಸರನ್ನು ಕೊಟ್ಟಿರಬೇಕು.
  • ಏಕೆಂದರೆ, ಅತ್ಯಂತ ಅರ್ವಾಚೀನವೆನ್ನಬಹುದಾದ ಭಾಗವತ ಪುರಾಣದಲ್ಲಿರುವ ಕೆಲ ಅಂಶಗಳಿಗೂ ಇತ್ತೀಚಿನವೆನ್ನಿಸುವ ಅಂಶಗಳಿದರಲ್ಲಿವೆ. ಸೃಷ್ಟಿಕ್ರಮ, ಸೂರ್ಯ ವಂಶದ ರಾಜರ ಅನುಚರಿತ, ಶ್ರಾದ್ಧವಿಚಾರ, ಚಂದ್ರವಂಶದ ರಾಜರ ವೃತ್ತಾಂತ, ದೇವಾಸುರಸಮರ, ಪುಷ್ಕರಸರಸ್ಸಿನ ವರ್ಣನೆ, ದುರ್ಗಾರಾಧನೆಯ ವ್ರತ ಮತ್ತು ಹಬ್ಬಗಳು, ಸೃಷ್ಟಿಯ ಪುನರ್ ವಿವರಣೆ, ವಿಷ್ಣು ಅಸುರಾಂತಕನಾದುದು, ಸ್ಕಂದನಜನನ ಮತ್ತು ಸ್ಕಂದವಿವಾಹ, ಸೋಮಶರ್ಮ ಪ್ರಹ್ಲಾದನಾಗಿ ಹುಟ್ಟಿದ ಕತೆ; ಪವಿತ್ರಸ್ಥಳಗಳಲ್ಲದೆ ತಂದೆ, ಗುರು, ಅಥವಾ ಹೆಂಡತಿಯರು ತೀರ್ಥ ಸ್ವರೂಪ ವಾದುದರ ನಿದರ್ಶನ; ದೇವಲೋಕದ ವರ್ಣನೆ, ಶಕುಂತಲಾವೃತ್ತಾಂತ, ಊರ್ವಶೀ ಪುರೂರವರ ಕಥೆ, ವರ್ಣಾಶ್ರಮಧರ್ಮ, ವಿಷ್ಣುಪೂಜೆ ನಾಗಲೋಕದ ವಿಸ್ತಾರ, ರಾಮೋಪಾಖ್ಯಾನ, ಋಷ್ಯಶೃಂಗಚರಿತ ತೀರ್ಥಮಾಹಾತ್ಮ್ಯ, ರಾಧಾಕೃಷ್ಣ ಲೀಲೆ, ಸಾಲಿಗ್ರಾಮಪಾವಿತ್ರ್ಯ, ವಿಷ್ಣುವ್ರತ, ವಿಷ್ಣುನಿಯಮ, ವಿಷ್ಣೋತ್ಸವಗಳು, ಭಗವದ್ಗೀತಾಪ್ರಾಶಸ್ತ್ಯ, ವಿಷ್ಣುಸಹಸ್ರನಾಮ ಮೊದಲಾದ ವಿಷಯಗಳಲ್ಲದೆ, ಉತ್ತರ ಖಂಡದ ಬಳಿಕ ಬರುವ ಕ್ರಿಯಾಯೋಗಸಾರವೆಂಬ ಅನುಬಂಧ ವಿಷ್ಣುವಿನ ನಿಜವಾದ ಆರಾಧನೆಗೆ ಧ್ಯಾನಯೋಗಕ್ಕಿಂತ ಕರ್ಮಯೋಗವೇ ಹೆಚ್ಚು ಪ್ರಶಸ್ತವೆಂದು ಬೋಧಿಸಿದೆ. ಇದರ ಪಂಚಖಂಡಗಳ ಒಟ್ಟು ಶ್ಲೋಕಸಂಖ್ಯೆ 48,452. ಇದರ ಇಂದಿನ ರೂಪದ ಕಾಲ ಸು. ಕ್ರಿ.ಶ. 12ನೆಯ ಶತಮಾನವೆನ್ನಬಹುದು.
  • ವಿಷ್ಣು ಪ್ರಾಧಾನ್ಯ ನಿರೂಪಣೆ ಇದರ ಉದ್ದೇಶ. ಇದರ ಆರು ಖಂಡಗಳಲ್ಲಿ ವಸಿಷ್ಠನ ಮೊಮ್ಮಗನಾದ ಪರಾಶರನು ತನ್ನ ಶಿಷ್ಯನಾದ ಮೈತ್ರೇಯನಿಗೆ ಸೃಷ್ಟ್ಯಾದಿ ವಿವಿಧ ವಿಷಯಗಳನ್ನು ತಿಳಿಸುತ್ತಾನೆ. ಮೊದಲು ವಿಷ್ಣು ಸ್ತುತಿ ಬರುತ್ತದೆ. ಆಮೇಲೆ ಸರ್ವಸಾಧಾರಣವಾದ ಪೌರಾಣಿಕ ರೀತಿಯ ಸೃಷ್ಟಿ ವಿವರಣೆ, ಸಾಂಖ್ಯತತ್ತ್ವ ವಿಚಾರ, ವಿವಿಧ ದೇವದಾನವ ಕಥೆಗಳು, ಹಳೆಯ ರಾಜರ ಮತ್ತು ಋಷಿಗಳ ವೃತ್ತಾಂತಗಳು ಬರುತ್ತವೆ. ಸಮುದ್ರ ಮಥನ, ,ಲಕ್ಷ್ಮೀಯ ಉದಯ, ಧ್ರುವೋಪಾಖ್ಯಾನ, ಪ್ರಹ್ಲಾದನ ಕತೆ ಮೊದಲಾದುವು ಕತೆಗಳಲ್ಲಿ ಗಣ್ಯ.
  • ಎರಡನೆಯ ಖಂಡದ ಮೊದಲ ಅಧ್ಯಾಯಗಳಲ್ಲಿ ಭೂವಿವರಣೆಯ ಕಲ್ಪನಾವಿಲಾಸ ಕಾವ್ಯಮಯವಾಗಿ ಬಂದಿವೆ. ನಾಗ, ನಾಕ, ನರಕ ಲೋಕಗಳ ವೈಚಿತ್ರ್ಯವನ್ನೂ ಇಲ್ಲಿ ಕಾಣಬಹುದು. ಕಲ್ಪನಾಭೃಂಗದ ಬೆನ್ನೇರಿ ಗುಹ್ಯ, ನಕ್ಷತ್ರ, ಗ್ರಹಲೋಕಗಳಿಗೂ ಹೋಗಬಹುದು. ಒಂದು ತಾತ್ತ್ವಿಕ ಸಂವಾದಕ್ಕೆ ಉಪೋದ್ಘಾತರೂಪ ವಾಗಿ ಜಡಭರತಮುನಿಯ ಕತೆ, ಋಭು ಮತ್ತು ನಿಠಾಪುರ ಕತೆ ಬಂದಿದೆ. ಮೂರನೆಯ ಖಂಡದಲ್ಲಿ ಮನು, ಮನ್ವಂತರಗಳ ವಿವರಗಳೂ ಚತುರ್ವೇದ ವಿಚಾರವೂ ಅಷ್ಟಾದಶಪುರಾಣಗಳ ಮತ್ತು ವಿವಿಧ ಶಾಸ್ತ್ರಗಳ ಉಲ್ಲೇಖ ತುಂಬಿದೆ.
  • ಇಷ್ಟಲ್ಲದೆ ಯಮ, ಯಮದೂತರ ಒಂದು ಸುಂದರ ಸಂವಾದ, ವರ್ಣಾಶ್ರಮಧರ್ಮ, ಶ್ರಾದ್ಧಕರ್ಮ, ಜೈನ, ಬೌದ್ಧಮತ ವಿಡಂಬನೆಗಳು ಯಥೇಚ್ಛವಾಗಿವೆ. ನಾಲ್ಕನೆಯ ಖಂಡದಲ್ಲಿ ಪ್ರಸಿದ್ಧ ಪ್ರಾಚೀನ ರಾಜರ ವಂಶಾವಳಿ, ದಕ್ಷ, ಇಳೆ, ಇಕ್ಷ್ವಾಕು, ರೈವತ, ರೇವತಿ, ಯೌವನಾಶ್ವ, ಮಾಂಧಾತೃ, ಸೌಭರಿ, ಪುರೂರವ, ಊರ್ವಶಿ, ಯಯಾತಿ, ರಾಮ, ಪಾಂಡವ, ಕೃಷ್ಣ-ಮುಂತಾದವರ ಕಥೆಗಳು ಮತ್ತು ಮುಂದಿನ ಮಗಧರಾಜರಾದ ಶೈಶುನಾಗ, ನಂದ, ಮೌರ್ಯ, ಸುಂಗ, ಕಾಣ್ವಾಯನ, ಆಂಧಭೃತ್ಯ, ಮ್ಲೇಚ್ಛ, ಕಲ್ಕಿಗಳ ವೃತ್ತಾಂತಗಳು ನಿವೃತವಾಗಿವೆ.
  • ಐದನೆಯ ಖಂಡದಲ್ಲಿ ಕೃಷ್ಣನ ಜೀವನೇತಿಹಾಸ ವಿಸ್ತಾರವಾಗಿ ವರ್ಣಿತವಾಗಿದೆ. ಕೊನೆಯ ಖಂಡ ಕೃತ, ತ್ರೇತ, ದ್ವಾಪರ, ಕಲಿಯುಗಗಳ ಹಾಗೂ ಪ್ರಳಯದ ವಿವರಗಳಿಂದಲೂ ಸಂಸಾರಚಕ್ರದ ಕ್ಲೇಶಗಳಿಂ ದಲೂ ಮುಕ್ತಿಯ ಪ್ರಾಶಸ್ತ್ಯದಿಂದಲೂ ಅದಕ್ಕೆ ಅಗತ್ಯವಾದ ಯೋಗದ ವಿವರಣೆಯಿಂದಲೂ ಇಡೀ ಪುರಾಣದ ವಿಷಯಗಳ ಪುನಃಸ್ಮರಣೆ ಮತ್ತು ವಿಷ್ಣುಸ್ತುತಿಗಳಿಂದಲೂ ಕೂಡಿದೆ. ಪುರಾಣದ ಶ್ಲೋಕ ಸಂಖ್ಯೆ 23,000 ಎಂಬ ಹೇಳಿಕೆಯಿದ್ದರೂ ಸದ್ಯ ಕಂಡುಬರುವುದು 7,000 ಶ್ಲೋಕಗಳು ಮಾತ್ರ. ಕಾಲ ಪ್ರ.ಶ. 3ನೆಯ ಶತಮಾನ ಎನ್ನುತ್ತಾರೆ.
  • ವಿಷ್ಣುಪುರಾಣದ ಸೃಷ್ಟಿಕ್ರಮದ ವಿವರಣೆ ಹೆಚ್ಚು ಸ್ಥೂಲವಾಗಿ ಹೀಗಿದೆ: ವಿಷ್ಣು ಮೊದಲು ಪುರುಷನಾದ. ಅವ್ಯಕ್ತ ವ್ಯಕ್ತ ಮತ್ತು ಕಾಲಗಳು ಅವನ ಆಮೇಲಿನ ಮೂರು ಆವಿರ್ಭಾವಗಳು. ಅವ್ಯಕ್ತ, ಪ್ರಕೃತಿ ಅಥವಾ ಪ್ರಧಾನ ಎಂಬುದು ಸದಸದಾತ್ಮಕ ಮತ್ತು ತ್ರಿಗುಣಯುಕ್ತ. ಪುರುಷ, ಪ್ರಕೃತಿಗಳನ್ನು ಸೃಷ್ಟಿಕಾಲದಲ್ಲಿ ಕೂಡಿಸುವ ಮತ್ತು ಲಯಕಾಲದಲ್ಲಿ ಬಿಡಿಸುವ ಕಾಲದ ಅಸ್ತಿತ್ವ ವಾಸ್ತವಿಕ ಮತ್ತು ಅನಾದಿ. ಬ್ರಹ್ಮನುವಿಷ್ಣುವಿನ ವ್ಯಕ್ತರೂಪ. ಮೂಲಕಾರಣನಾದ ವಿಷ್ಣು ಶುದ್ಧ ಅಸ್ತಿತ್ವದ ರೂಪದಲ್ಲಿರುವುದರಿಂದ ವಾಸುದೇವ ಎನ್ನಿಸುತ್ತಾನೆ.
  • ಎಲ್ಲವೂ ವಿಷ್ಣುವೇ, ಎಲ್ಲದಕ್ಕೂ ಅವನೇ ಒಡೆಯ. ಸೃಷ್ಟಿಕಾಲದಲ್ಲಿ ಕೋಭ್ಯರೆನ್ನಿಸುವ ಪುರುಷ ಪ್ರಕೃತಿಗಳೂ ಸ್ವಸಂಕಲ್ಪದಿಂದ ಆಗ ಅವರಲ್ಲಿ ಹೋಗುವ ಕ್ಷೋಭನೂ ಅವನೇ ಆಗಿದ್ದಾನೆ. ಪ್ರಕೃತಿಯಿಂದ ಮಹತ್ತು ಹುಟ್ಟಿ ಆವೃತವಾಗುತ್ತದೆ. ಆವರಣ ಬಲದಿಂದ ಅದು ಸಾತ್ತ್ವಿಕ, ರಾಜಸ, ತಾಮಸ ಎಂದು ಮೂರು ವಿಧವಾಗಿ ವಿಂಗಡಗೊಳ್ಳುತ್ತದೆ. ತ್ರಿವಿಧವಾದ ಈ ಮಹತ್ತತ್ತ್ವದಿಂದ ವೈಕಾರಿಕ, ತೈಜಸ ಭೂತಾದಿ ಎಂಬ ಮೂರು ಬಗೆಯ ಅಹಂಕಾರಗಳು ಉದಯಿಸುತ್ತವೆ.
  • ಮಹತ್ತಿನಿಂದ ಆವೃತವಾದ ಭೂತಾದ್ಯಹಂಕಾರದಿಂದ ಶಬ್ದತನ್ಮಾತ್ರವೂ ಅದರಿಂದ ಆಕಾಶವೂ ಜನಿಸುತ್ತವೆ. ಭೂತಾದಿಯಿಂದ ಆವೃತವಾಗಿ ಆ ಮೂಲಕ ಶಬ್ದತನ್ಮಾತ್ರದಿಂದ ಭಿನ್ನವಾದ ಆಕಾಶ ಸ್ಪರ್ಶತನ್ಮಾತ್ರವನ್ನೂ ಅದು ವಾಯುವನ್ನೂ ಹೊಡೆಯುತ್ತವೆ. ಇದೇ ಮೇರೆಗೆ ವಾಯುವಿನಿಂದ ರೂಪ (ಬಣ್ಣ) ತನ್ಮಾತ್ರ, ಅದರಿಂದ ಜ್ಯೋತಿಯಿ (ಕಾವು, ಬೆಳಕು), ಜ್ಯೋತಿಯಿಂದ ರಸತನ್ಮಾತ್ರ, ಅದರಿಂದ ಜಲ, ಜಲದಿಂದ ಗಂಧತನ್ಮಾತ್ರ, ಗಂಧತನ್ಮಾತ್ರದಿಂದ ಭೂಮಿ (ಮಣ್ಣು) ಉಂಟಾದುವು.
  • ತೈಜಸಾಹಂಕಾರದಿಂದ ಕರ್ಮ, ಜ್ಞಾನೇಂದ್ರಿಯಗಳ ದಶಕವೂ ವೈಕಾರಿಕಾಹಂಕಾರದಿಂದ ಮನಸ್ಸೂ (ಮನ+ಬುದ್ಧಿ+ಅಹಂಕಾರ+ಚಿತ್ತ) ಉದಯಿಸುತ್ತವೆ. ಜಗತ್ತನ್ನು ಹೊರಗಿನಿಂದ ಜಲ, ಅಗ್ನಿ, ವಾಯು, ಆಕಾರ, ಭೂತಾದಿ ಮಹದವ್ಯಕ್ತಗಳು ಅನುಕ್ರಮವಾಗಿ ಸುತ್ತುವರಿದಿವೆ. ಜಗತ್ತು ಅಥವಾ ಪ್ರಪಂಚವೆಂದರೆ ತೈಜಸಾಹಂಕಾರದಿಂದ ಹುಟ್ಟಿದ ದಶೇಂದ್ರಿಯ, ಮನ, ಪಂಚತನ್ಮಾತ್ರ, ಅಹಂಕಾರ ಮತ್ತು ಮಹತ್ತುಗಳ ಏಕೀಕೃತವೂ ಸಮನ್ವಿತವೂ ಆದ ಚರಾಚರಾತ್ಮಕ ಮೊಟ್ಟೆ. ಈ ಮೊಟ್ಟೆಯ ವಿಕಸಿತರೂಪವೇ ವಿಷ್ಣುವಿನ ಶರೀರವೆನ್ನಿಸುವ ಬ್ರಹ್ಮ. ಬ್ರಹ್ಮ-ವಿಷ್ಣು-ರುದ್ರಾತ್ಮಕನಾಗಿ ವಿಷ್ಣು ವಿಶ್ವದ ಸೃಷ್ಟಿ, ಸ್ಥಿತಿ, ಲಯಗಳನ್ನು ನಡೆಸುತ್ತಾನೆ. ಅಂದರೆ ಆತ ಆದಿಕಾರಣನಾದ ಪರಬ್ರಹ್ಮ. ಈ ಬಗೆಯ ಸಾಂಖ್ಯವಿಚಾರಗಳು ವಿಷ್ಣುಪುರಾಣದಲ್ಲಿವೆ.
  • ಶ್ಲೋಕ ಸಂಖ್ಯೆ 24,000 ಎಂಬ ಹೇಳಿಕೆಯಿದ್ದರೂ ಮುದ್ರಿತಪ್ರತಿಯ ಸಂಖ್ಯೆ 12,000 ಮಾತ್ರ. ಇದು ಬಹುಶಃ ಪುರಾಣದ ಒಂದನೆಯ ಖಂಡದಷ್ಟೇ ಆಗಿರಬೇಕು. ಅನುಕ್ರಮಣಿಕೆಗಳ ಕಾಲದಲ್ಲಿ ದೇವಾದಿ ಮಾಹಾತ್ಮ್ಯಗಳು ಇದಕ್ಕೆ ಸೇರಿದ್ದವೆಂದು ತೋರುತ್ತದೆ. ಇದು ಎಲ್ಲ ಪುರಾಣಗಳಿಗಿಂತ ಹೆಚ್ಚು ಪ್ರಾಚೀನವೆಂದು ನಂಬಲಾಗಿದೆ. ವಾಯು ಬ್ರಹ್ಮಾಂಡಗಳೆರಡೂ ವಾಯುಪ್ರೋಕ್ತ ಪುರಾಣಗಳಾದುದರಿಂದ ಇವು ಮೊದಲು ಒಂದೇ ಕೃತಿಯಾಗಿದ್ದುವೆಂದು ಪಾರ್ಗಿಟರ್ನ ಮತ. ಮಹಾಭಾರತ, ಹರಿವಂಶಗಳು ವಾಯುಪುರಾಣವನ್ನು ಉಲ್ಲೇಖಿಸುತ್ತವೆ, ಶ್ಲೋಕಗಳನ್ನು ಉದ್ಧರಿಸುತ್ತವೆ. ಕ್ರಿ.ಶ. 4ನೆಯ ಶತಮಾನದ ಗುಪ್ತಚಕ್ರವರ್ತಿಗಳ ಆಳ್ವಿಕೆ ಇಲ್ಲಿ ವರ್ಣಿತವಾಗಿದೆ.
  • ಆದುದರಿಂದ ಪ್ರಾಚೀನತಮವಾದ ಮೂಲವಾಯು ಪುರಾಣದ ಕಾಲ ಯಾವುದೇ ಆದರೂ ಅದರ ಇಂದಿನ ರೂಪದ ಬಹುಭಾಗ ಪ್ರ.ಶ. ಸು. 5ನೆಯ ಶತಮಾನದ್ದೆಂದು ವಿಂಟರ್ನಿಟ್ಜನ ಅಭಿಪ್ರಾಯ. ಜನತ್ಸೃಷ್ಟಿ ವಂಶವೃಕ್ಷ ಮುಂತಾದ ಪ್ರಾಚೀನ ಪೌರಾಣಿಕ ವಿಷಯಗಳೂ ಶಿವೋತ್ಕರ್ಷವನ್ನು ಸಾಧಿಸುವ ಕತೆಗಳೂ ಜಗತ್ಪ್ರಳಯವೂ ಯೋಗಮಾರ್ಗ ಪ್ರಶಂಸೆಯೂ ಶಿವಪುರ ವರ್ಣನ, ವಿಷ್ಣುಪ್ರಭಾವ, ಶ್ರಾದ್ಧ, ಗೀತಾಲಂಕಾರ, ಗಯಾ ಮಾಹಾತ್ಮ್ಯಗಳೂ ಈ ಪುರಾಣದ ಮುಖ್ಯಾಂಶಗಳು. ಇದಕ್ಕೆ ಸೇರಿದವೆಂದು ಹೇಳಲಾಗುವ ಇನ್ನೂ ಎಷ್ಟೋ ಸ್ತೋತ್ರಗಳೂ ಮಾಹಾತ್ಮ್ಯಗಳೂ ಕರ್ಮವಿಧಿಗ್ರಂಥಗಳೂ ದೊರಕುತ್ತವೆ. ಪ್ರಸ್ತುತ ವಾಯುಪುರಾಣದಲ್ಲಿರುವ ಪ್ರಾಚೀನ ಭಾಗಗಳ ಕಾಲ ಪ್ರ.ಶ. 200 ಅಥವಾ ಅದಕ್ಕೂ ಹಿಂದೆ ಹೋಗಬಹುದು.
  • ವಾಯುಪುರಾಣ ದೇವರಲ್ಲಿಯ ಸೃಷ್ಟಿಮಾಡುವ ಪ್ರವೃತ್ತಿಯ ಮೂಲಕಾರಣವನ್ನು ಅಪ್ರಮೇಯವೆನ್ನುತ್ತದೆಯಲ್ಲದೆ, ಅದನ್ನು ಬ್ರಹ್ಮ, ಪ್ರಧಾನ, ಪ್ರಕೃತಿ, ಪ್ರಕೃತಿ-ಪ್ರಸೂತಿ, ಆತ್ಮ, ಗುಹ, ಯೋನಿ, ಚಕ್ಷುಸ್, ಕ್ಷೇತ್ರ, ಅಮೃತ, ಅಕ್ಷರ, ಶುಕ್ರ, ತಪಸ್, ಸತ್ಯ ಅಥವಾ ಅತಿಪ್ರಕಾಶ ಎಂದೂ ಕರೆಯುತ್ತದೆ, ಅದು ಲೋಕಪಿತಾಮಹನಾದ ಎರಡನೆಯ ಪುರುಷನನ್ನು ಸುತ್ತುವರಿದಿರುತ್ತದೆ. ಕಾಲಸಂಪರ್ಕ ಮತ್ತು ರಜಃ ಪ್ರಾಧಾನ್ಯಗಳಿಂದ ಕ್ಷೇತ್ರಜ್ಞನಿಗೆ ಸಂಬಂಧಿಸಿದ ಎಂಟು ಪರಿವರ್ತನಗಳಾಗುತ್ತವೆ.
  • ಪ್ರಕೃತಿ ಮೂಲತಃ ಇಂದ್ರಿಯಗ್ರಾಹ್ಯ ಗುಣಗಳುಳ್ಳದ್ದಲ್ಲ; ಸತ್ತ್ವಾದಿಗುಣತ್ರಯದಿಂದ ಕೂಡಿದ್ದು; ಕಾಲಾತೀತ ಮತ್ತು ಅಜ್ಞೇಯ. ತನ್ನ ಮೂಲಸ್ವರೂಪ ವಾದ ಗುಣತ್ರಯ ಸಾಮ್ಯಾವಸ್ಥೆಯಲ್ಲದ್ದು ತಮೊರೂಪದಿಂದ ಎಲ್ಲವನ್ನೂ ಆವರಿಸಿತ್ತು. ಸೃಷ್ಟಿಕಾಲದಲ್ಲಿ ಅದಕ್ಕೆ ಕ್ಷೇತ್ರಜ್ಞ ಸಂಪರ್ಕವುಂಟಾಗಿ ಅದರಿಂದ ಮಹತ್ತತ್ತ್ವ ಹುಟ್ಟಿತು. ಈ ಮಹತ್ತನ್ನು ಮನಸ್, ಮತಿ, ಬ್ರಹ್ಮ, ಪುರ್, ಬುದ್ಧಿ, ಖ್ಯಾತಿ, ಈಶ್ವರ, ಚಿತಿ, ಪ್ರಜ್ಞೆ, ಸ್ಮೃತಿ, ಸಂವಿತ್, ವಿಪುರ ಎಂಬ ಹೆಸರುಗಳಿಂದ ಕರೆಯುತ್ತಾರೆ.
  • ಸತ್ತ್ವಪ್ರಧಾನವೂ ಶುದ್ಧಾಸ್ತಿತ್ವ ಸ್ವರೂಪವುಳ್ಳದ್ದೂ ಆದ ಮಹತ್ತು ಸೃಜಿಸುವ ಇಚ್ಛೆಯುಂಟಾದಾಗ ಧರ್ಮಾಧರ್ಮಾದಿ ಪದಾರ್ಥಗಳನ್ನು ನಿರ್ಮಿಸುತ್ತದೆ. ಇಡೀ ವಿಶ್ವದ ಚರಾಚರಗಳೆಲ್ಲವೂ ಮಹತ್ತ್ವದ ಪರಿಣಾಮಗಳು. ಕ್ಷೇತ್ರ, ಕ್ಷೇತ್ರಜ್ಞರಲ್ಲಿ ಅದೇ ಜ್ಞಾತೃ. ಕ್ಷೇತ್ರಜ್ಞನೇ ಬ್ರಹ್ಮ, ಹಿರಣ್ಯ ಗರ್ಭ. ಗುಣತ್ರಯದ ಸಹಕಾರದಿಂದಾಗಿ ಮೊಟ್ಟೆಯಿಂದ ಆತ ಹುಟ್ಟಿದವ. ಪ್ರತಿ ಪ್ರಳಯದಲ್ಲೂ ಬ್ರಹ್ಮನ ಶರೀರ ನಾಶವಾಗುತ್ತದೆ. ಮೊಟ್ಟೆಯ ರೂಪದ ಬ್ರಹ್ಮಾಂಡ ಜಲ, ಪ್ರಕಾಶ, ಉಷ್ಣತೆ, ವಾಯು, ಆಕಾಶ, ಭೂತಾದಿ, ಮಹತ್ ಮತ್ತು ಅವ್ಯಕ್ತಗಳಿಂದ ಆವೃತವಾಗಿದೆ.
  • ವಾಯು ಮತ್ತು ಬ್ರಹ್ಮಾಂಡ ಪುರಾಣಗಳ ಪ್ರಕಾರ ಸೃಷ್ಟಿಯ ಆ ಆದಿಕಾಲದಲ್ಲಿ ಬ್ರಹ್ಮ ಸಾತ್ತ್ವಿಕ, ರಾಜಸ, ಸಾತ್ತ್ವಿಕ ರಾಜಸ, ಮತ್ತು ತಾಮಸಿಕ ಎಂಬ ನಾಲ್ಕು ಬಗೆಗಳ ಮನುಷ್ಯರನ್ನು ತನ್ನ ಬಾಯಿ, ಎದೆ, ತೊಡೆ ಮತ್ತು ಪಾದಗಳಿಂದ ಹುಟ್ಟಿಸಿದನೆಂದೂ ಅವರೆಲ್ಲರೂ ಮೇಲು-ಕೀಳೆಂಬ ಭೇದವಿಲ್ಲದೆ ಸಮಾನರಾಗಿ ಬಾಳುತ್ತಿದ್ದರೆಂದೂ ಅವರಲ್ಲಾಗ ವರ್ಣಾಶ್ರಮ ಭೇದಗಳಿರಲಿಲ್ಲವೆಂದೂ ಚಳಿಬಿಸಿಲುಗಳ ಅಂಜಿಕೆಯಿಲ್ಲದೆ, ಮನೆ-ಮಠಗಳನ್ನಾಶ್ರಯಿಸದೆ ದಿವ್ಯ ಜೀವನ ನಡೆಸುತ್ತಿದ್ದರೆಂದೂ ತಿಳಿಯುತ್ತದೆ.
  • ತಮ್ಮ ದಿವ್ಯತೆಯನ್ನವರು ಕಳೆದುಕೊಂಡು ಮರ್ತ್ಯರಾದಾಗ ತಮ್ಮ ಕರ್ಮಕ್ಕೆ ತಕ್ಕಂತೆ ಮುಂದೆ ಜನ್ಮಗಳನ್ನು ಪಡೆದು, ಹಿಂದಿನದಕ್ಕೆ ವ್ಯತಿರಿಕ್ತವಾದ ಸ್ಥಿತಿಗಿಳಿದರು. ವರ್ಣ ಜಾತಿಗಳ ಮತ್ತು ರಾಜಾಧಿಕಾರದ ಅಗತ್ಯವುಂಟಾಗಲು ಮಾನವರು ಭ್ರಮಿಷ್ಠರಾಗಿ, ಪಾಪಮಾಡಿ, ದಿನೇ ದಿನೇ ಅಧಃಪತನ ಹೊಂದುತ್ತ ಹೋದುದೇ ಕಾರಣವೆಂದು ಉಕ್ತಪುರಾಣಗಳ ಮತ.
  • ಕೃತಯುಗದಿಂದ ಕಲಿಯುಗದವರೆಗೆ ಧರ್ಮ ಕ್ಷೀಣವಾಗುತ್ತ ಹೋದ ಹಾಗೆ ಅದನ್ನು ಅರ್ಜಿಸುವ ವಿಧಾನಗಳ ಬಿಗಿಯೂ ಕಡಿಮೆಯಾಗುತ್ತದೆ, ರಾಜಾಧಿಕಾರ ದೇವಾಧಿಕಾರಕ್ಕೆ ಸರಿದೊರೆಯಾಗುತ್ತದೆ; ಪ್ರಭು ಪ್ರಜೆಗಳಿಬ್ಬರೂ ಪರಸ್ಪರರ ಬಗ್ಗೆ ಮಾಡಬೇಕಾದ ಕರ್ತವ್ಯಗಳನ್ನು ಮಾಡದಿದ್ದರೆ ದಂಡನೀಯವಾಗುತ್ತಾರೆ-ಎಂಬೀ ಅಂಶಗಳನ್ನೂ ವಿಷ್ಣು ಭಾಗವತ, ಮಾರ್ಕಂಡೇಯ ಪುರಾಣಗಳಂತೆಯೇ ಇವೂ ಪ್ರತಿಪಾದಿಸಿವೆ. ಸರ್ವರೂ ಧರ್ಮಾಧೀನರೆಂಬ ಸ್ಮೃತಿಪರಂಪರೆಗಿದು ಸಮ್ಮತ.
  • ವಿಷ್ಣು ಮಹಾಪುರಾಣದಂತೆಯೇ ಭಾಗವತವೂ ವಿಷ್ಣುವಿನ ಮೇಲ್ಮೆಯನ್ನು ಹೇಳ ಹೊರಟದ್ದು. ಇದರಷ್ಟು ಸುಪ್ರಸಿದ್ಧವಾದ ಮಹಾಪುರಾಣವಿನ್ನೊಂದಿಲ್ಲ. ಯುರೋಪಿನಲ್ಲಿ ಸಂಪಾದಿಸಿ ಅನುವಾದಿಸಲಾದ ಮೊಟ್ಟ ಮೊದಲ ಪುರಾಣವಿದು. ಆದರೆ ಇದು ಅರ್ವಾಚೀನ ಗ್ರಂಥ. ವಿಷ್ಣುಪುರಾಣವನ್ನು ಬಹಳವಾಗಿ ಅವಲಂಬಿಸಿದೆ. ಹೀಗಿದ್ದರೂ ಈ ಪುರಾಣ ಪ್ರಾಚೀನಾಂಶಗಳನ್ನು ಬಹಳಮಟ್ಟಿಗೆ ಬಳಸಿಕೊಂಡಿದೆ. ಪುರಾಣ ಸಾಹಿತ್ಯದಲ್ಲಿ ಇದೊಂದೇ ಏಕಸೂತ್ರತೆ, ಸಾಹಿತ್ಯಸೌಂದರ್ಯಗಳಿಂದ ಕೂಡಿರುವ ಕೃತಿ. ಇದರ ಸ್ಕಂಧಗಳು (ಅಥವಾ ಖಂಡ) 12. ಶ್ಲೋಕಗಳ ಮೊತ್ತ 18000. *ಅಲ್ಪಸ್ವಲ್ಪ ಭಿನ್ನವಾದರೂ ಇದರ ಸೃಷ್ಟಿಕಥೆಗಳು ಪುರಾಣವನ್ನೇ ಹೆಚ್ಚಾಗಿ ಹೋಲುತ್ತವೆ. ವಿಷ್ಣುವಿನ ವರಾಹಾವತಾರದ ಕಥೆ ವಿಸ್ತಾರವಾಗಿ ಬಂದಿದೆ. ಮೂರನೆಯ ಸ್ಕಂಧದ ಕೊನೆಯಲ್ಲಿ ವಿಷ್ಣುವಿನ ಅವತಾರವೆಂದು ಹೇಳಲಾದ ಸಾಂಖ್ಯದರ್ಶನದ ಮೂಲಾಚಾರ್ಯನೆನ್ನಿಸಿರುವ ಕಪಿಲಮುನಿಯ ಬಾಯಿಯಿಂದ ಯೋಗಶಾಸ್ತ್ರವನ್ನು ಸುದೀರ್ಘವಾಗಿ ಹೇಳಿಸಲಾಗಿದೆ. ಪ್ರ.ಶ. 12ನೆಯ ಶತಮಾನದಲ್ಲಿದ್ದ ಜಯದೇವನ ಗೀತಗೋವಿಂದದಲ್ಲಿರುವಂತೆ ಇಲ್ಲಿ ಗೌತಮಬುದ್ಧ ವಿಷ್ಣುವಿನ ಬೌದ್ಧಾವತಾರವಾಗಿದ್ದಾನೆ.
  • ಹಿಂದಿನ ಪರಂಪರೆಯಂತೆ ತುಲಸೀಪತಿಯಾದ ಜಲಂಧರನ ಸಂಹಾರಕ್ಕಾಗಿ ಆಕಾಶ, ಪಾತಾಳಗಳನ್ನೊಂದು ಮಾಡುವಂತೆ ನಗ್ನಮೂರ್ತಿಯಾಗಿ ತುಲಸಿಯೆದುರು ನಿಂತ ವಿಷ್ಣವಿನದು ಬೌದ್ಧಾವತಾರ. ಭಾಗವತದಲ್ಲಿ ವಿಷ್ಣು ಪ್ರಭಾವವನ್ನು ಹೇಳುವ ಧ್ರುವ, ಪ್ರಹ್ಲಾದಾದಿ ವಿಷ್ಣುಭಕ್ತರ ಕಥೆಗಳೂ ಭಗವದ್ಗೀತೆಯ ಕೆಲಶ್ಲೋಕಗಳೂ ಶಕುಂತಲೋಪಾಖ್ಯಾನವೂ ಬಂದಿರುತ್ತವೆ. ಅಲ್ಲದೆ, ಹರಿವಂಶ, ವಿಷ್ಣು ಪುರಾಣಗಳಲ್ಲಿರುವುದ ಕ್ಕಿಂತಲೂ ಹೆಚ್ಚು ವಿವರಗಳಿಂದ ಕೃಷ್ಣಚರಿತಾಮೃತ ಇದರ ಹತ್ತನೆಯ ಸ್ಕಂಧದಲ್ಲಿ ಬಂದಿದೆ.
  • ಇದರಲ್ಲಿರುವ ಕೃಷ್ಣ ಗೋಪಿಯರ ಪ್ರೇಮದೃಶ್ಯಗಳು ಜನಪ್ರಿಯವಾಗಿವೆ. ಯಾದವರ ನಾಶವೂ ಕೃಷ್ಣನ ನಿರ್ಯಾಣವೂ ಕಲಿಯುಗದ ಭವಿಷ್ಯವೂ ಪ್ರಳಯವೂ ಕೊನೆಯ ಭಾಗಗಳಲ್ಲಿ ಬಂದಿವೆ. ಭಾಗವತದ ಹೇಳಿಕೆಯಂತೆ ರಾಜನಿಲ್ಲದ ರಾಜ್ಯ ಅರಾಜಕ. ರಾಜನಲ್ಲಿ ವಿಷ್ಣುವಿನ ಅಂಶವಿದೆ. ಅವನ ಶಕ್ತಿ ಅತಿಮಾನುಷ. ಪ್ರಜೆಗಳು ಅವನಿಗೆ ವಿಧೇಯರಾಗಿರಬೇಕು. ಅವರು ತೆರುವ ಕರಕಂದಾಯಗಳಿಗೆ ಪ್ರತಿಯಾಗಿ ಆತ ಅವರ ವಿತ್ತಜೀವಿತಗಳನ್ನು ಕಾಪಾಡಬೇಕು.
  • ದುರಾಡಳಿತವೆಸಗಿದ ವೇಣರಾಜ ಋಷಿಶಾಪದಿಂದ ಸತ್ತ. ಅವನಾದ ಬಳಿಕ ಪಟ್ಟಕ್ಕೆ ಬಂದ ಪೃಥು ಯೋಗ್ಯವಾಗಿ ರಾಜ್ಯಭಾರ ಮಾಡಿ, ಸ್ವಧರ್ಮಶಿಕ್ಷಣವನ್ನು ಪ್ರಜೆಗಳಿಗೀಯದೆ ಅವರಿಂದ ತೆರಿಗೆ ವಸೂಲು ಮಾಡುವ ಅರಸ ಅವರ ಪಾಪಗಳಿಗೆ ಬಾಧ್ಯನಾಗಿ ತನ್ನ ಮಹತ್ತ್ವವನ್ನು ಕಳೆದುಕೊಳ್ಳುವನೆಂದು ಸಾರಿದ ಈ ಅಂಶವನ್ನೂ ಭಾಗವತ ಉಲ್ಲೇಖಿಸಿದೆ.
  • ಉಪಲಬ್ಧವಾಗಿರುವ ಕೆಲವೇ ಶ್ಲೋಕಗಳನ್ನುಳಿದು ಮಿಕ್ಕ ಇಡೀ ಬೃಹನ್ನಾರದೀಯ ಉಪಪುರಾಣವನ್ನು ಗರ್ಭೀಕರಿಸಿಕೊಂಡಿದೆ. 25000 ಶ್ಲೋಕಗಳಿದ್ದು ವೆಂದೂ ನಾರದ ಧರ್ಮವಿಧಿಗಳನ್ನೂ, ಬೃಹತ್ ಕಲ್ಪವನ್ನೂ ಅದರಲ್ಲಿ ಹೇಳಿದ್ದನೆಂದೂ ಮತ್ಸ್ಯಪುರಾಣ ನಿರ್ದೇಶಿಸುತ್ತದೆ. ಪ್ರಸ್ತುತ ಪುರಾಣದಲ್ಲಿ ಕೇವಲ 3,600 ಶ್ಲೋಕಗಳಿವೆ. ಬೃಹತ್ಕಲ್ಪದ ಪ್ರಸ್ತಾವವಿಲ್ಲ. ಇದರಲ್ಲಿ ನಾರದ ವಕ್ತಾರನಲ್ಲ, ಶ್ರೋತಾರ. ವೈಷ್ಣವಮತಾಚಾರ ಗಣ್ಯವಾಗಿರುವ ಇದರಲ್ಲಿ ನಾರದ ಸನತ್ಕುಮಾರರ ಸಂವಾದವೊಂದರ ಮೂಲಕ ವಿಷ್ಣುವಿನ ಭಕ್ತಿ, ವ್ರತ, ಉತ್ಸವಗಳನ್ನು ವಿವರಿಸಲಾಗಿದೆ. *ತಾಂತ್ರಿಕರನ್ನೂ ಬೌದ್ಧರನ್ನೂ ಇಲ್ಲಿ ಪಾಷಂಡ ರೆಂದು ಕರೆಯಲಾಗಿದೆ. ಪಾಪ ಹಾಗೂ ಪಾಪಿಗಳಿಗೆ ಸಿಗುವ ನರಕಶಿಕ್ಷೆಗಳ ವರ್ಣನೆಯಲ್ಲದೆ ವರ್ಣಾಶ್ರಮಧರ್ಮ, ಶ್ರಾದ್ಧಕಲ್ಪ, ಪ್ರಾಯಶ್ಚಿತ್ತ, ಸಂಸಾರ, ಕ್ಲೇಶ, ಮೋಕ್ಷ, ಯೋಗ, ವಿಷ್ಣುಭಕ್ತಿ ಪ್ರಶಂಸೆಗಳಿಂದ ತುಂಬಿದ ಇದರ ರಚನಾ ಕಾಲ 750-900ರ ನಡುವೆ ಎನ್ನಬಹುದು. ಪೂರ್ವೋತ್ತರ ಭಾಗಗಳೆಂದು ವಿಭಕ್ತವಾಗಿರುವ ನಾರದೀಯರ ಪೂರ್ವಭಾಗದ 4 ಉಪಪರ್ವಗಳಲ್ಲಿ ಮೊದಲನೆಯದು ಸಂಪೂರ್ಣವಾಗಿ ಬೃಹನ್ನಾರದೀಯ.
  • ಸನತ್ಕುಮಾರ ನಾರದನಿಗೆ 3ನೆಯ ಉಪ ವಿಭಾಗದಲ್ಲಿ ಉಪದೇಶಿಸಿದರೆ, 1, 2, 4ನೆಯ ಉಪವಿಭಾಗಗಳಲ್ಲಿ ಸನಕ, ಸನಂದನ, ಸನಾತನರು ವಿವಿಧ ವಿಷಯಗಳನ್ನು ವಿವರಿಸಿದ್ದಾರೆ. ಈ ಪುರಾಣದ ಪ್ರಕಾರ ನಾರಾಯಣ ವಿಶ್ವದ ಮೂಲಸತ್ಯ, ಆದಿಕಾರಣ. ಅವನು ಬ್ರಹ್ಮ, ವಿಷ್ಣು, ರುದ್ರರನ್ನು ಸೃಷ್ಟಿ, ಸ್ಥಿತಿ, ಲಯಗಳ ನಿರ್ವಹಣಕ್ಕಾಗಿ ತನ್ನ ಅಂಶದಿಂದ ಹುಟ್ಟಿಸುತ್ತಾನೆ. ನಾರಾಯಣನೂ ಮಹಾವಿಷ್ಣುವೂ ಅಭಿನ್ನರು. ಈತನ ಸೃಷ್ಟಿಶಕ್ತಿ ಸದಸದಾತ್ಮಕ, ವಿದ್ಯಾವಿದ್ಯಾತ್ಮಕ. ಮಹಾವಿಷ್ಣುವೂ ವಿಶ್ವವೂ ಭಿನ್ನವೆಂದು ತೋರುವುದು ಮಾನವರ ಅವಿದ್ಯೆಯ ದೆಸೆಯಿಂದ. *ಜ್ಞಾತೃಜ್ಞೇಯಗಳಲ್ಲಿಯ ಭೇದವಳಿದು ಅವೆರಡರ ಏಕತತ್ತ್ವ ಗೋಚರವಾಗುವುದು ವಿದ್ಯಾಬಲದಿಂದ. ಅಥವಾ ಅದೇ ವಿದ್ಯೆ. ಹರಿಯೂ ಅವನ ಶಕ್ತಿಯೂ ವಿಶ್ವವ್ಯಾಪ್ತಿಗಳು, ಅವಿನಾಭಾವಿಗಳು. ಶಕ್ತಿಯದು ವ್ಯಕ್ತಾವ್ಯಕ್ತ ಸ್ವರೂಪ. ಪ್ರಕೃತಿ, ಪುರುಷ, ಕಾಲಗಳು ಅದರ ಪ್ರಥಮಾವಿರ್ಭಾವಗಳು. ಪುರುಷಸಾನ್ನಿಧ್ಯದಿಂದ ಕ್ಷುಬ್ಧವಾದ ಪ್ರಕೃತಿ ಮಹತ್ತನ್ನೂ ಮಹತ್ತು ಆಮೇಲೆ ಬುದ್ಧಿಯನ್ನೂ ಬುದ್ಧಿ ಅಹಂಕಾರವನ್ನೂ ಪಡೆಯುತ್ತವೆ.
  • ವಾಸುದೇವ ಅಥವಾ ಮಹಾವಿಷ್ಣು ಜ್ಞಾನಗಮ್ಯ ಇಲ್ಲದೆ ಕರ್ಮಗಮ್ಯ. ಅವನನ್ನು ಹೊಂದಿದಾಗಲೇ ಕ್ಲೇಶತ್ರಯ ನಷ್ಟವಾಗುತ್ತದೆ. ಯೋಗವೆಂದರೆ ಬ್ರಹ್ಮನಲ್ಲಿ ಲಯಹೊಂದುವುದು. ಮನಸ್ಸನ್ನು ವಿಷಯಗಳಿಂದ ಹಿಂದಿರುಗಿಸಿ, ಆತ್ಮನಲ್ಲಿ ಲೀನಗೊಳಿಸಿ, ಬ್ರಹ್ಮನಲ್ಲಿ ಕೊನೆಯದಾಗಿ ಲಯವಾಗುವುದು. ಇದು ಜೀವಿ ಗಳಿಸಬಹುದಾದ ವ್ಯಕ್ತಿಯ ಲಕ್ಷಣ. ಈ ಎಲ್ಲವಕ್ಕೂ ಭಕ್ತಿ ಅಥವಾ ಶ್ರದ್ಧೆ ಅತ್ಯಾವಶ್ಯಕ.
  • ಹಳೆಯ ಮಹಾಪುರಾಣಗಳಲ್ಲೊಂದು. ಪ್ರ.ಶ.ಪು. 2ನೆಯ ಶತಮಾನದ ಆದಿಭಾಗದಲ್ಲಿ ಇದರ ಪ್ರಾಚೀನವೆನ್ನಿಸುವ ಮೂಲಭಾಗದ ರಚನೆಯಾಯಿತು. ಪ್ರಸ್ತುತ ಪುರಾಣದಲ್ಲಿ ಅರ್ವಾಚೀನ ಅಂಶಗಳೆಷ್ಟೋ ಇವೆ. ಏಕಸೂತ್ರತೆ ಇಲ್ಲವೇ ಇಲ್ಲ. ಮಾರ್ಕಂಡೇಯ ಮುನಿ ನಿತ್ಯತರುಣ. ಆತ ತನ್ನ ಶಿಷ್ಯನಾದ ಕ್ರೌಷ್ಟುಕಿಗೆ ವಿಶ್ವಸೃಷ್ಟಿ, ಯುಗಮಾನ, ವಂಶಾವಳಿ-ಮುಂತಾದ ಶುದ್ಧ ಪೌರಾಣಿಕಾಂಶಗಳನ್ನು ಅರುಹುವ ಭಾಗವನ್ನು ಪ್ರಾಚೀನವೆನ್ನಬಹುದು. ವಿಷ್ಣು, ಶಿವರಿಗಿಲ್ಲಿ ಪ್ರಧಾನ್ಯವಿಲ್ಲ. ಇಂದ್ರ, ಬ್ರಹ್ಮ, ಅಗ್ನಿ, ಸೂರ್ಯಾದಿ ವೈದಿಕ ದೇವತೆಗಳಿಗಿಲ್ಲಿ ಅಗ್ರಸ್ಥಾನ.
  • ವ್ಯಾಸಶಿಷ್ಯನಾದ ಜೈಮಿನಿ ಮಹಾಭಾರತದಲ್ಲಿಯ ನಾಲ್ಕು ಸಮಸ್ಯೆಗಳಿಗೆ ಉತ್ತರ ಪಡೆಯುತ್ತಾನೆ. ದ್ರೌಪದಿ ಪಂಚಪಾಂಡವರ ಪತ್ನಿಯಾದುದು ಹೇಗೆಂಬುದು ಮೊದಲ ಪ್ರಶ್ನೆ. ಅವಳ ಪಂಚಪುತ್ರರು ಕೌಮಾರ ದಶೆಯಲ್ಲೇ ಹತರಾದುದೇಕೆಂದು ಕೊನೆಯ ಪ್ರಶ್ನೆ. ಕೊನೆಯ ಪ್ರಶ್ನೆಯನ್ನು ಉತ್ತರಿಸುವ ಸಂದರ್ಭದಲ್ಲಿ, ಹರಿಶ್ಚಂದ್ರನನ್ನು ಕ್ರೂರವಾಗಿ ನಡೆಸಿಕೊಂಡ ಬಗ್ಗೆ ಐವರು ವಿಶ್ವೇದೇವರು ವಿಶ್ವಾಮಿತ್ರನನ್ನು ತಪ್ಪಿತಸ್ಥನೆಂದಾಗ ಆತ ಅವರನ್ನು ಮನುಷ್ಯರಾಗಿ ಜನಿಸಿರಿ ಎಂದು ಶಪಿಸಿದನೆಂದೂ ಶಾಪವಿಮೋಚನೆ ಬೇಗ ಆಗಲೆಂದು ಕೌಮಾರದಶೆಯಲ್ಲೇ ಸಾಯುವಂತೆ ಆತ ಅವರಿಗೆ ಅನುಗ್ರಹಿಸಿದನೆಂದೂ ಹೇಳುವ ಪ್ರಕರಣ ಹರಿಶ್ಚಂದ್ರ ರಾಜನ ಹೃದಯವಿದ್ರಾವಕ ಕಥೆಗೆಡೆಮಾಡಿಕೊಡುತ್ತದೆ.
  • ಆಮೇಲೆ ತಂದೆಮಕ್ಕಳ ಸಂವಾದವೊಂದು ಬರುತ್ತದೆ. ಮಹಾಭಾರತದಲ್ಲಿ ಬರುವ ಮೇಧಾವಿ ಮತ್ತು ಅವನ ತಂದೆ-ಇವರಿಬ್ಬರ ಸಂವಾದವನ್ನೇ ಇಲ್ಲಿ ಮತ್ತೂ ವಿಸ್ತರಿಸಿ ಹೇಳಲಾಗಿದೆ. ಅಲ್ಲಿಯ ಮೇಧಾವಿ ಇಲ್ಲಿ ಜಡ ಎನ್ನಿಸಿಕೊಂಡ ವಿವೇಕಿಯಾದ ಮಗನಾಗಿದ್ದಾನೆ. ಬ್ರಾಹ್ಮಣ್ಯದ ಪವಿತ್ರಜೀವನದ ಆದರ್ಶವನ್ನು ತನ್ನೆದುರಿಟ್ಟ ತಂದೆಗೆ ಅದನ್ನು ಖಂಡಿಸಿ, ಸಂಸಾರದಿಂದ ಮುಕ್ತಿ ಹೊಂದುವುದೊಂದೇ ಪರಮಧರ್ಮ-ಎಂದು ಈತ ಬೋಧಿಸುವ ಸಂದರ್ಭದಲ್ಲಿ ಅತ್ಯಂತ ಹೃದಯಂಗಮವಾದ ವಿಪಶ್ಮಿನ್ ಮಹಾರಾಜನ ಕಥೆ ಬಂದಿವೆ.
  • ಇದರಲ್ಲಿ ಪಾಪಿಗಳಿಗೆ ವಿಧಿಸುವ ವಿವಿಧ ಶಿಕ್ಷೆಗಳ ವರ್ಣನೆಯಿದೆ. ಆ ಬಳಿಕೆ ಅಷ್ಟೇನೂ ಸ್ವಾರಸ್ಯವಿಲ್ಲದ ಅನಸೂಯಾ ವೃತ್ತಾಂತವೂ ಶುದ್ಧವಾದ ನೀತಿಕಥೆಗಳೂ ಗೃಹಸ್ಥಧರ್ಮ, ಶ್ರಾದ್ಧ ಉತ್ಸವ, ಯೋಗ ಮುಂತಾದ ವಿಷಯಗಳೂ ಪ್ರ.ಶ. 6ನೆಯ ಶತಮಾನದೊಳಗೇ ಪ್ರಕ್ಷಿಪ್ತವಾಗಿ ರಬಹುದಾದ ದೇವೀಮಾಹಾತ್ಮ್ಯವೂ ವಿವೃತವಾಗಿವೆ. ಜ್ಞಾನದ ಮೂಲಕ ಅಜ್ಞಾನ ಅಳಿಯುವುದನ್ನು ಯೋಗವೆನ್ನಲಾಗಿದೆ. ಬಂಧ ವಿಮೋಚನೆ ಎಂದರೆ ಇದರ ಪ್ರಕಾರ ಬ್ರಹ್ಮನಲ್ಲಿ ಒಂದಾಗುವುದು ಮತ್ತು ಪ್ರಕೃತಿಯ ಗುಣತ್ರಯದಿಂದ ಪ್ರತ್ಯೇಕವಾಗುವುದು.
  • ಚಿತ್ತವೃತ್ತಿನಿರೋಧವನ್ನೇ ಯೋಗವೆಂದು ಲಕ್ಷಣಿಸಿಲ್ಲ. ವಾಸುದೇವನಿಲ್ಲಿ ಪರಬ್ರಹ್ಮ. ಅವನ ಸರ್ಜನೇಚ್ಛೆ ಕಾಲದಿಂದ ಪ್ರಧಾನ-ಪುರುಷರನ್ನು ತನ್ನೊಳಗಿಂದ ಪ್ರತ್ಯೇಕಿಸಿ ತೆಗೆದು ಒಂದುಗೂಡಿಸಿದ್ದರಿಂದ ಮಹತ್ತೂ ಮಹತ್ತಿನಿಂದ ಅಹಂಕಾರವೂ ಅಹಂಕಾರದಿಂದ ಸತ್ತ್ವ, ರಜಸ್, ತಮಸ್ಸುಗಳೂ ಉದಯಿಸಿದವು. ಅನಂತರ ತಮಸ್ಸಿನಿಂದ ಪಂಚತನ್ಮಾತ್ರ, ಪಂಚಭೂತಗಳೂ ರಜಸ್ಸಿನಿಂದ ದಶೇಂದ್ರಿಯಗಳು, ಬುದ್ಧಿಯೂ ಹುಟ್ಟಿದುವು.
  • ವಾಸುದೇವ ಸರ್ವಾಂತರ್ಯಾಮಿ ಮತ್ತು ಸರ್ವಾತೀತ. ಸರ್ವದುಃಖಗಳೂ ಸಂಗಜನ್ಯ, ಸಂಗತ್ಯಾಗದಿಂದ ಮಹತ್ತ್ವವಳಿದಾಗ ನಿಜ ಸುಖ ಹಸ್ತಗತವಾಗುತ್ತದೆ. ಮೋಕ್ಷಾನುಕೂಲವಾದುದೇ ನಿಜವಾದ ಜ್ಞಾನ. ಮಿಕ್ಕಿದ್ದೆಲ್ಲ ಅಜ್ಞಾನ. ವಿಷ್ಣು ಪುರಾಣದಂತೆ ಮಾರ್ಕಂಡೇಯ ಪುರಾಣವೂ ಪ್ರಜೆಗಳನ್ನು ಚೆನ್ನಾಗಿ ಪಾಲಿಸುವ ಅರಸನಿಗೆ ಅವರ ಪುಣ್ಯಭಾಗ ಸಲ್ಲುವುದೆನ್ನುತ್ತದೆ. ದುಷ್ಟದಮನ, ಶಿಷ್ಟಪಾಲನಗಳಲ್ಲಿ ನಿತ್ಯನಿರತನಾದ ದೊರೆಗೆ ಶಿಷ್ಟಾರ್ಜಿತ ಪುಣ್ಯದ ಆರನೆಯ ಒಂದು ಅಂಶ ಲಭಿಸುತ್ತದೆ.
  • ಶಿಷ್ಟರನ್ನು ರಕ್ಷಿಸದಿದ್ದಲ್ಲಿ ದುಷ್ಟರ ಎಲ್ಲ ಪಾಪಗಳೂ ಅವನಿಗಂಟಿಕೊಳ್ಳುತ್ತವೆ ಎಂಬ ಅಂಶವನ್ನು ಮರುತ್ತರಾಯನಿಗೆ ಅವನ ಅಜ್ಜಿ ಹೇಳುವ ಸಂದರ್ಭ ಸ್ವಾರಸ್ಯವಾಗಿದೆ. ಕ್ಷತ್ರಿಯನಾದ ಮನುಷ್ಯ ಸಪ್ತದುರ್ವಸನಗಳನ್ನು ಬಿಟ್ಟು, ಅನುಕ್ರಮವಾಗಿ ಮೊದಲು ತನ್ನನ್ನು, ಆಮೇಲೆ ತನ್ನ ಮಂತ್ರಿಗಳ ನ್ನು, ಬಳಿಕ ತನ್ನ ಸೇವಕ ಅಥವಾ ನೌಕರರನ್ನು, ಅನಂತರ ತನ್ನ ಪ್ರಜೆಗಳನ್ನು ಮತ್ತು ಕೊನೆಯಲ್ಲಿ ತನ್ನ ಹಗೆಗಳನ್ನು ನಿಯಂತ್ರಿಸಿದರೆ ಮಾತ್ರ ಯಶಸ್ವಿಯಾಗಬಲ್ಲನೆಂದು ರಾಣಿಯಾದ ಮದಾಲಸೆ ತನ್ನ ಮಗನಿಗಿಲ್ಲಿ ಉಪದೇಶಿಸುವುದು ಬಹಳ ಮಾರ್ಮಿಕವಾದ ರಾಜಶಿಕ್ಷಣಸೂತ್ರ. ಇದರ ಆಧುನಿಕ ಸ್ವರೂಪದ ಕಾಲ ಪ್ರ.ಶ. 8ನೆಯ ಶತಮಾನ. ಶ್ಲೋಕ ಸಂಖ್ಯೆ 9000.
  • ಪ್ರ.ಶ. 7ನೆಯ ಶತಮಾನಕ್ಕಿಂತ ಈಚಿನದು. ಇದರ ಅಲಂಕಾರಶಾಸ್ತ್ರ ವಿಭಾಗ ಪ್ರ.ಶ. 900ರ ಬಳಿಕ ಇದರಲ್ಲಿ ಕ್ರಮಶಃ ಪ್ರಕ್ಷಿಪ್ತವಾದುದು ವಸಿಷ್ಮನಿಗೆ ಅಗ್ನಿ ಹೇಳಿದ್ದರಿಂದ ಪುರಾಣಕ್ಕೆ ಈ ಹೆಸರು. ಪುರಾಣಗಳ ವಿಶ್ವಕೋಶ ಸ್ವರೂಪಕ್ಕಿದು ಪರಮಾದರ್ಶ. ಇದರಲ್ಲಿ ವಿಷ್ಣುವಿನ ಅವತಾರಗಳು ಉಕ್ತವಾಗಿವೆ. ರಾಮಕೃಷ್ಣರ ಕತೆಗಳನ್ನು ರಾಮಾಯಣ, ಮಹಾಭಾರತ, ಹರಿವಂಶಗಳಲ್ಲಿರುವಂತೆಯೇ ಹೇಳಲಾಗಿದೆ. ದ್ವಾದಶಸಹಸೀ ಸ್ತೋತ್ರವಿಲ್ಲಿದೆ. ಹೀಗಿದ್ದರೂ ಅಗ್ನಿಪುರಾಣ ಒಟ್ಟಿನಲ್ಲಿ ಶಿವನಿಗೇ ಹೆಚ್ಚಿನ ಗುರುತ್ವವನ್ನು ಕೊಟ್ಟಿದೆ.
  • ಲಿಂಗ, ದುರ್ಗಾರಾಧನೆಗಳ ಯೋಗಮಾರ್ಗಬೋಧನವಲ್ಲದೆ, ತಾಂತ್ರಿಕಕೃತ್ಯ, ಮೂರ್ತಿಶಿಲ್ಪ, ವಿಗ್ರಹಪ್ರತಿಷ್ಠೆ, ಗಣೇಶಪೂಜೆ, ಸೂರ್ಯೋಪಾಸನೆ, ಮರಣ, ಪುನರ್ಜನ್ಮ, ಯೋಗ, ಗೀತಾತತ್ತ್ವ, ಯಮಗೀತೆ ಮುಂತಾದ ವಿಷಯಗಳ ಜೊತೆಗೇ ಪೌರಾಣಿಕ ವಿಷಯಗಳಾದ ಸೃಷ್ಟಿವಿಚಾರ, ವಂಶಾನುಚರಿತ, ಭೂವಿವರಣೆಗಳೂ ಅಗ್ನಿಪುರಾಣಾಂತರ್ಗತ. ಭೂಗೋಲಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಶಶಾಸ್ತ್ರ, ವಿವಾಹಧರ್ಮ, ಉತ್ತರಕ್ರಿಯೆ, ಶಕುನಶಾಸ್ತ್ರ, ವಾಸ್ತುಶಿಲ್ಪ, ಜೀವನಾಚಾರ, ರಾಜನೀತಿ, ಯುದ್ಧಕಲೆ, ಯಾಜ್ಞವಲ್ಕಸ್ಮೃತಿಗನು ಗುಣವಾದ ಧರ್ಮ ವಿವರಣೆ, ವೈದ್ಯಶಾಸ್ತ್ರ, ಛಂದಶಾಶಸ್ತ್ರ, ಅಲಂಕಾರಶಾಸ್ತ್ರ, ವ್ಯಾಕರಣಶಾಸ್ತ್ರ ಮತ್ತು ಶಬ್ದಕೋಶಗಳ ವಿಷಯಗಳಿಗೆ ಬೇರೆ ಬೇರೆ ವಿಭಾಗಗಳು ಮೀಸಲಾಗಿವೆ.
  • ಈ ಪುರಾಣದ ಹೊರಗಿರುವ ಎಷ್ಟೋ ಮಾಹಾತ್ಮ್ಯಗಳನ್ನೂ ಅಗ್ನಿಪುರಾಣೋಕ್ತವೆನ್ನುವ ರೂಢಿಯಿದೆ. ಶ್ಲೋಕಸಂಖ್ಯೆ ಸುಮಾರು 15400 ಎಂಬುದು ರೂಢಿ. 11500ಕ್ಕಂತೂ ಕಡಿಮೆ ಇಲ್ಲ. ಪ್ರಸ್ತುತ ಮಹಾಪುರಾಣಾಂತರ್ಗತವಾದ ಅಲಂಕಾರ ಶಾಸ್ತ್ರಾಂಶಗಳು ಹೀಗಿವೆ : ಶಾಸ್ತ್ರ-ಕಾವ್ಯಗಳೆಂದು ವಾಙ್ಮಯವೆರಡು ವಿಧ. ಶಾಸ್ತ್ರ ಶಬ್ದಪ್ರಧಾನ ಮತ್ತು ಇತಿಹಾಸನಿಷ್ಠ. ವೇದ ಅಥವಾ ಲೋಕಮೂಲವಾದುದು ಕಾವ್ಯ. ಅದು ಅಭಿಧಾಪ್ರಧಾನ, ಸ್ಫುಟಾಲಂಕಾರಯುಕ್ತ, ಸಗುಣ ಮತ್ತು ನಿರ್ದುಷ್ಟ. ರಸಸಿದ್ಧಿಯುಳ್ಳ ನಾದದಲ್ಲಿ ಅದರ ಹುಟ್ಟು.
  • ಗದ್ಯ, ಪದ್ಯ ಮಿಶ್ರ ಎಂದು ತ್ರಿವಿಧ. ಪಾದವಿಲ್ಲದ ಪದಸಂತತಿ ಗದ್ಯ. ಚತುಷ್ಪಾದವುಳ್ಳದ್ದು ಪದ್ಯ. ಅದರ ಛಂದಸ್ಸು ವೃತ್ತ, ಜಾತಿ ಎಂದು ದ್ವಿವಿಧ. ಧ್ವನಿ, ವರ್ಣ, ಪದ, ವಾಕ್ಯಗಳು ವಾಙ್ಮಯದ ಚತುರಂಗಗಳು. ಇಷ್ಟವಾದ ಅರ್ಥವನ್ನು ವ್ಯವಚ್ಛೇದಿಸಿ ಹೇಳುವ ಪದಾವಳಿಯೇ ವಾಕ್ಯ. ಮಿಶ್ರಕಾವ್ಯಗಳಲ್ಲಿ ಚಂಪುಕಾವ್ಯ ಶ್ರವ್ಯ, ನಾಟಕ (ರೂಪಕ) ಕಾವ್ಯದೃಶ್ಯ. ಚೂರ್ಣಕ, ಉತ್ಕಲಿಕೆ ಮತ್ತು ವೃತ್ತಗಂಧಿ ಎಂಬ ಹೆಸರಿನವು ಗದ್ಯಪ್ರಕಾರಗಳು.
  • ಆಖ್ಯಾಯಿಕೆ, ಕಥೆ, ಖಂಡಕಥೆ, ಪರಿಕಥೆ ಮತ್ತು ಕಥಾನಿಕೆ ಎಂಬೀ ಐದು ಗದ್ಯಕಾವ್ಯದ ಮಾದರಿಗಳು. ಮಹಾಕಾವ್ಯ, ಕಲಾಪ, ಪರ್ಯಾಬಂಧ, ವಿಶೇಷಕ, ಕುಲಕ, ಮುಕ್ತಕ, ಕೋಷ ಎಂಬೀ ಏಳು ಪದಕಾವ್ಯದ ಮಾದರಿಗಳು. ಪ್ರಕರಣ, ಡಿಮ, ಈಹಾಮೃಗ, ಸಮವಕಾರ, ಪ್ರಹಸನ, ವ್ಯಾಯೋಗ, ಭಾಣ, ವೀಥಿ, ಅಂಕ, ಕ್ರೋಟಕ, ನಾಟಕ, ಸಟ್ಟಕ, ಶಿಲ್ಪಕ, ಕರ್ಣೆ, ಏಕ, ದುರ್ಮಲ್ಲಿಕೆ, ಪ್ರಸ್ಥಾನ, ಭಾಣಿಕೆ, ಆಭಾಣಿ, ಗೋಷ್ಠಿ, ಹಲ್ಲೀಶಕ, ಕಾವ್ಯ, ಶ್ರೀಗದಿತ, ನಾಟ್ಯರಾಸಕ, ರಾಸಕ, ಉಲ್ಲಾಪ್ಯಕ, ಪ್ರೇಕ್ಷಣ-ಎಂದು ನಾಟಕ 27 ವಿಧ. ನಾಟಕದ ಪೂರ್ವಭಾಗ ಪೂರ್ವರಂಗ. ಅದರ ಅಂಗಗಳು 32. ಉತ್ತರ ಭಾಗದ ಅಂಗಗಳಾದ ನಾಂದಿ, ಸೂತ್ರಧಾರ, ನಟಿ, ಆಮುಖ, ವಸ್ತು, ಅರ್ಥಪ್ರಕೃತಿ, ಕಾರ್ಯಾವಸ್ಥೆ, ಸಂಧಿಗಳು-ಇವು ಅನಂತರ ಬರುತ್ತವೆ.
  • ಆಮೇಲೆ ರಸನಿಷ್ಪತ್ತಿ ವಿಚಾರ : ಪರಬ್ರಹ್ಮನಿಗಿರುವ ಪ್ರಕೃತಿಸಹಜವಾದ ಆನಂದ ಆಗೀಗ ಆವಿರ್ಭವಿಸುತ್ತದೆ. ಅಂಥ ಆನಂದಾಭಿವ್ಯಕ್ತಿಯೊಂದು ಚೈತನ್ಯಚಮತ್ಕಾರ. ಅದೇ ರಸ. ಅಹಂಕಾರ ರಸದ ಪ್ರಥಮ ಪರಿಣಾಮ. ಅದರಿಂದ ಅಭಿಮಾನದ ವಿಕಾಸ. ಮೂರು ಲೋಕಗಳೂ ಅಭಿಮಾನದಲ್ಲಿ ಸಮಾಪ್ತ. ಅಭಿಮಾನದಿಂದ ರತಿ ಅಥವಾ ರಾಗ ಹುಟ್ಟುತ್ತದೆ. ಅದು ಪರಿಪುಷ್ಪವಾದಾಗ ಶೃಂಗಾರವೆನ್ನಿಸುತ್ತದೆ. ಶೃಂಗಾರಾದಿ ನವರಸಗಳು ಈ ಆದಿಶೃಂಗಾರದ ಪ್ರಭೇದಗಳು. ಅವು ತಮ್ಮ ತಮ್ಮ ಸ್ಥಾಯಿಗಳಿಂದ ವ್ಯಕ್ತವಾಗುತ್ತವೆ.
  • ಅವುಗಳಲ್ಲಿ ಶೃಂಗಾರ, ವೀರ, ರೌದ್ರ, ಬೀಭತ್ಸಗಳು ಮೂಲಭೂತವಾದಂಥವು. ಅವುಗಳಿಂದ ಅನುಕ್ರಮವಾಗಿ ಹಾಸ್ಯ, ಅದ್ಭುತ, ಕರುಣ, ಭಯಾನಕ, ಈ ರಸಗಳು ನಿಷ್ಪನ್ನವಾಗುತ್ತವೆ. ರಸವಿಲ್ಲದ ಮಾತು ತ್ಯಾಗವಿಲ್ಲದ ಐಶ್ವರ್ಯದಂತೆ ವ್ಯರ್ಥ. ಕವಿ ಶೃಂಗಾರಿಯಾದರೆ ಜಗತ್ತೆಲ್ಲ ರಸಮಯ; ಆತ ರಾಗರಹಿತನಾದರೆ ಪ್ರಪಂಚವೆಲ್ಲ ನೀರಸವಾದೀತು. ಭಾವವಿಲ್ಲದ ರಸವಿಲ್ಲ, ರಸವಿಲ್ಲದ ಭಾವವಿಲ್ಲ. ಸ್ಥಾಯಿಗಳ ಮೂಲಕ ಭಾವಗಳು ರಸಿಕ ರಸಗಳನ್ನು ಭಾವಿಸುವಂತೆ ಮಾಡುತ್ತವೆ.
  • ರಸಗಳು ರಸಿಕನಿಂದ ಭಾವ್ಯ. ಸ್ಥಾಯಿಗಳು ಒಂಬತ್ತು. ಅನುಭಾವಗಳು ಎಂಟು. ಅನುಭಾವಗಳು ವ್ಯಭಿಚಾರಶೀಲ, ನಿರ್ವೇದಾದಿ, ಉನ್ಮಾದಾಂತವಾದ ಸಂಚಾರೀಭಾವಗಳು ಕೂಡ ವ್ಯಭಿಚಾರಿಗಳೇ. ಪ್ರಿಯರಲ್ಲಿ ಉಂಟಾಗುವ ಸುಖಾನುಭವ ರತಿ. ಹರ್ಷಾದಿಗಳಿಂದ ಮನಸ್ಸು ಅರಳುವುದು ಹಾಸ. ಯಮಾದಿಗಳನ್ನು ನೋಡುವುದರಿಂದ ಉಂಟಾಗುವ ಚಿತ್ತವೈಕ್ಲವ್ಯ ಭಯ. ನಿಂದ್ಯ, ದುರ್ಭಗಪದಾರ್ಥಗಳಲ್ಲಿ ನಮಗುಂಟಾಗುವುದು ಜುಗುಪ್ಸಾಭಾವ. ಪದಾರ್ಥಗಳ ಅತಿಶಯವನ್ನು ಕಂಡು ಚಿತ್ತವಿಸ್ಮೃತಿಯುಂಟಾಗುವುದು ವಿಸ್ಮಯ.
  • ಇಷ್ಟವಾದ ವ್ಯಕ್ತಿ, ವಸ್ತುಗಳು ನಾಶದಿಂದ ಮನೋವೈಕ್ಲವ್ಯವುಂಟಾದರದು ಶೋಕ. ಪ್ರತಿಕೂಲಕಾರಿಗಳ ಬಗ್ಗೆ ತೀಕ್ಷ್ಣಭಾವ ವೇಳುವುದು ಕ್ರೋಧ ಪುರುಷಾರ್ಥ ಸಮಾಪ್ತಿಗಾಗಿ ಹೊರಟವರಲ್ಲಿ ಉದಯವಾಗುವುದು ಉತ್ಸಾಹಭಾವ. ವಿಭಾವಗಳೆರಡು. ನಾಯಕರ ಮಾದರಿಗಳು ನಾಲ್ಕು. ಅವರಲ್ಲಿಯ ಒಂದೊಂದು ಮಾದರಿಯಲ್ಲಿ ಅನುಕೂಲಾದಿ ಒಳಭೇದಗಳು ನಾಲ್ಕು. ನಾಯಕನ ಅನುಯಾಯಿಗಳದ್ದು ಮೂರು ಮಾದರಿ. ನಾಯಿಕೆಯರದು 3-4 ನಮೂನೆ.
  • ವ್ಯಭಿಚಾರಶೀಲವುಳ್ಳ ವಿಶಿಷ್ಟ ಅನುಭಾವಗಳೆನ್ನಿಸುವ ಆರಂಭ ಅಥವಾ ವ್ಯಾಪಾರಗಳು ಮಾನಸ, ವಾಚಿಕ, ಬೌದ್ಧಿಕ ಮತ್ತು ಶಾರೀರಿಕ ಎಂಬುದಾಗಿ ನಾಲ್ಕು ವಿಧ. ಪುರುಷನ ಮಾನಸಾರಂಭಗಳು ಎಂಟು. ಸ್ತ್ರೀಯವು ಹನ್ನೆರಡು. ಸ್ತ್ರೀಪುರುಷರ ವಾಗಾರಂಭಗಳು 12. ರೀತಿ, ವೃತ್ತಿ, ಪ್ರವೃತ್ತಿಗಳು ಬೌದ್ಧಿಕ ಆರಂಭಗಳು. ವೈದಭಾರ್್ಯದಿ ರೀತಿಗಳು ನಾಲ್ಕು. ಭಾರತ್ಯಾದಿ ವೃತ್ತಿಗಳು ನಾಲ್ಕು. ಪ್ರವೃತ್ತಿಗಳು ಹಲವು. ಅಂಗ, ಪ್ರತ್ಯಂಗಗಳ ಕರ್ಮಗಳೂ ಚೇಷ್ಟಾವಿಶೇಷಗಳೂ ಶರೀರಾರಂಭಗಳು.
  • ಅಂಗಗಳು 6, ಪ್ರತ್ಯಂಗಗಳು 8, ಅಂಗ, ಪ್ರತ್ಯಂಗ ಚೇಷ್ಟೆಗಳು 12. ಚೇಷ್ಟಾವಿಶೇಷಗಳು ಸ್ತ್ರೀಗೆ ಮಾತ್ರ. ಅಂಗಪ್ರತ್ಯಂಗಕರ್ಮಗಳು ಸ್ತ್ರೀಪುರುಷರಿಗೆ ಸಾಧಾರಣ. ಅಭಿನಯಗಳು ನಾಲ್ಕು : ಸ್ತಂಭಾದಿ ಸಾತ್ತಿವಕ, ವಾಗಾರಂಭರೂಪದ ವಾಚಿಕ, ಶರೀರಾರಂಭರೂಪದ ಆಂಗಿಕ, ಬುದ್ಧ್ಯಾರಂಭ ರೂಪದ ಆಹಾರ್ಯ.
  • ಶಬ್ದಾಲಂಕಾರವರ್ಗಗಳು 9 : ಛಾಯೆ, ಮುದ್ರೆ, ಉಕ್ತಿ, ಯುಕ್ತಿ, ಗುಂಫನೆ, ವಾಕೋವಾಕ್ಯ, ಅನುಪ್ರಾಸ ಯಮಕಗಳು, ಚಿತ್ರ, ಸಮಸ್ಯೆ ಎಂದು ಅರ್ಥಾಲಂಕಾರವರ್ಗಗಳು 8 : ಸ್ವರೂಪ, ಸಾದೃಶ್ಯ, ಉತ್ಪ್ರೇಕ್ಷೆ, ಅತಿಶಯ, ವಿಭಾವನೆ, ವಿರೋಧ, ಹೇತು, ಸಮ-ಎಂಬ ತತ್ತ್ವಗಳನ್ನವು ಆಧರಿಸಿವೆ. ಸಮವೆಂಬ ತತ್ತ್ವದ 6 ಉಪವಿಭಾಗಗಳು ಉಭಯಾಲಂಕಾರವರ್ಗಗಳೆನ್ನಿಸುತ್ತವೆ : ಪ್ರಶಸ್ತಿ, ಕಾಂತಿ, ಔಚಿತ್ಯ, ಸಂಕ್ಷೇಪ, ಯಾವದರ್ಥತೆ, ಅಭಿವ್ಯಕ್ತಿ-ಎಂದು.
  • ಸಾಮಾನ್ಯ ಮತ್ತು ವೈಶೇಷಿಕ ಎಂದು ಕಾವ್ಯಗುಣಗಳ ವರ್ಷಗಳೆರಡು. ಸಾಮಾನ್ಯ ಶಬ್ದಗುಣಗಳು ಆರು. ಸಾಮಾನ್ಯ ಅರ್ಥಗುಣಗಳು ಆರು ಮತ್ತು ಉಭಯಗುಣಗಳು ಆರು. ವೈಶೇಷಿಕ ಗುಣಗಳು ಆಯಾ ಕೃತಿಗೆ ವಿಶಿಷ್ಟ. ದೋಷಗಳು ಮೂರು ಮುಖ್ಯ ಆಶ್ರಯಗಳನ್ನಾಧರಿಸಿವೆ. ವಕ್ತೃ, ವಾಚಕ, ವಾಚ್ಯ-ಎಂದು. ಅಗ್ನಿಪುರಾಣ ತನ್ನ ಅಲಂಕಾರ ವಿಭಾಗದಲ್ಲಿ ಹೆಚ್ಚಾಗಿ ಭರತ, ಭಾಮಹ, ದಂಡಿಗಳ ಗ್ರಂಥಗಳನ್ನಾಧರಿಸಿದೆ. ಇದರ ಪ್ರಕಾರ ಆಕ್ಷೇಪ ವ್ಯಾಪಾರದಲ್ಲಿ ಧ್ವನಿ ಅಡಕವಾಗುತ್ತದೆ.
  • ಸಮವೆಂಬ ಅರ್ಥಾಲಂಕಾರದ ಕೊನೆಯ ಪ್ರಭೇದವಾದ ಪ್ರಕಟತ್ವವೆಂಬ ಉಭಯಾಲಂಕಾರ ವನ್ನು ಅಭಿವ್ಯಕ್ತಿ ಎಂದು ಕರೆದು ಶ್ರುತಿ, ಆಕ್ಷೇಪಗಳು ಅಭಿವ್ಯಕ್ತಿಯ ಉಪವಿಭಾಗಗಳೆಂದು ಸಾರುತ್ತದೆ. ಇದರ ಪರಿಭಾಷೆಯಂತೆ ಶ್ರುತಿಯಲ್ಲಿ ಅಭಿಧಾ, ಲಕ್ಷಣಾ ವ್ಯಾಪಾರಗಳು ಅಡಕವಾಗುತ್ತವೆ : ಆಕ್ಷೇಪವೆಂದರೆ ಧ್ವನಿ ಅಥವಾ ವ್ಯಂಜನಾವ್ಯಾಪಾರ. ಈ ದೃಷ್ಟಿಯಿಂದ ಅಲಂಕಾರ ವ್ಯಾಪಕವೂ ಧ್ವನಿವ್ಯಾಪ್ಯವೂ ಆಗುತ್ತದೆ. ಧ್ವನಿ ಅಲಂಕಾರದ ಜಾತಿಗೆ ಸೇರಿದ ಒಂದು ಅಂಗ ಎನ್ನಿಸುತ್ತದೆ. ವಿವಿಧ ಅಲಂಕರಣವ್ಯಾಪಾರಗಳಲ್ಲಿ ಧ್ವನನ ವ್ಯಾಪಾರವೂ ಒಂದೆಂದಾಗುತ್ತದೆ.
  • ಮುಂದಾಗುವುದನ್ನು ಹೇಳ ಹೊರಟದ್ದು, ಉಪಲಬ್ಧ ಪ್ರತಿ ಆಪಸ್ತಂಬೀಯ ಧರ್ಮಶಾಸ್ತ್ರ ಹೇಳಿದ ಹಳೆಯ ಭವಿಷ್ಯ ಪುರಾಣವಲ್ಲ. ಇದರಲ್ಲಿಯ ಸೃಷ್ಟಿವಿವರಣೆ ಮನುಸ್ಮೃತಿಯಿಂದ ಬಳಸಿಕೊಂಡಿದೆ. ಬಹುಭಾಗ ಬ್ರಾಹ್ಮಣರ ವೈದಿಕಕರ್ಮಗಳನ್ನೂ ಹಬ್ಬ ಹರಿದಿನಗಳನ್ನೂ ವಿವರಿಸುತ್ತದೆ. ಕೆಲವೇ ಕತೆಗಳಿವೆ. ನಾಗಪಂಚಮಿಯ ವರ್ಣನೆ ಹಾವುಗಳ ಕತೆಗಳಿಗೆ ಅವಕಾಶವಿತ್ತಿದೆ. ಈ ಪುರಾಣದಲ್ಲಿ ಜರತುಷ್ಟ್ರಮತದ ಸೂರ್ಯ, ಅಗ್ನಿಗಳ ಉಪಾಸನೆಗೆ ಸಂಬಂಧಿಸಿದ ಶಾಕದ್ವೀಪಸ್ಥ ಸೂರ್ಯಾರಾಧನೆಯ ವಿಷಯ ಬಂದಿದೆ.
  • ಶಾಕದ್ವೀಪದ ನಿವಾಸಿಗಳು ಸಿಥಿಯನ್ನರಾಗಿರಬಹುದೆಂದು ಊಹಿಸಲಾಗಿದೆ. ಭವಿಷ್ಯಪುರಾಣ ತನ್ನ ಬಾಯಿ, ತೋಳು, ತೊಡೆ, ಪಾದಗಳಿಂದ ಬ್ರಹ್ಮ ಇಡೀ ಸೃಷ್ಟಿಯನ್ನು ಕಾಪಾಡುವ ಸಲುವಾಗಿ ಬ್ರಾಹ್ಮಣಾದಿ ನಾಲ್ಕು ಜಾತಿಗಳನ್ನು ನಿರ್ಮಿಸಿದನೆಂದೂ ಅವುಗಳ ಉದ್ಯೋಗಗಳನ್ನು ಆಯಾ ಜಾತಿಗಳ ಸ್ವಭಾವ ಸಹಜ ಗುಣಗಳಿಗೂ ಕೃತ್ಯಗಳಿಗೂ ಅನುಗುಣವಾಗಿ ವಿಂಗಡಿಸಿ ನಿರ್ದೇಶಿಸಿದನೆಂದೂ ಹೇಳುತ್ತದೆ. ಇದರ ಮುಖ್ಯ ದೇವತೆ ಶಿವ.
  • ಪರಂಪರೆಯ ಪ್ರಕಾರ ಶ್ಲೋಕಸಂಖ್ಯೆ 14500 ಎಂದಿದ್ದರೂ ವಾಸ್ತವಿಕವಾಗಿರುವುದು 7,000 ಭವಿಷ್ಯೋತ್ತರ ಪುರಾಣ ಇದರ ಅಂಗವೆಂದು ತಿಳಿದು ಅದರ 7,000 ಶ್ಲೋಕಗಳನ್ನೂ ಸೇರಿಸಿದರೆ ಒಟ್ಟು 14,000 ಶ್ಲೋಕಗಳಾಗುತ್ತವೆ. ಪ್ರಸ್ತುತ ಪುರಾಣ ಸಾಂಬಪುರಾಣದಿಂದ ಕೆಲ ಅಧ್ಯಾಯಗಳನ್ನು ತೆಗೆದುಕೊಂಡಿರುವುದರಿಂದ ಇದರ ಕಾಲ ಪ್ರ.ಶ. 600-950ರ ನಡುವೆ ಎನ್ನಬಹುದು. ಆಪಸ್ತಂಬ ಧರ್ಮಸೂತ್ರ. ಈ ಪುರಾಣವನ್ನು ಹೆಸರಿಸಿರುವುದರಿಂದ ಇದರ ಮೂಲ ರೂಪದ ಕಾಲ ಪ್ರ.ಶ.ಪು. 3ನೆಯ ಶತಮಾನ ಎನ್ನಬಹುದು.
  • ಇದನ್ನು ಬ್ರಹ್ಮಕೈವರ್ತಪುರಾಣವೆಂದೂ ಹೇಳುತ್ತಾರೆ. ದಕ್ಷಿಣ ಭಾರತದಲ್ಲಿ ಇದರ ಎರಡನೆಯ ಹೆಸರು ಪ್ರಸಿದ್ಧ. ಇದು ಬ್ರಹ್ಮಖಂಡ ಕೃಷ್ಣಾತ್ಮಕನಾದ ಬ್ರಹ್ಮನ ಉತ್ಪತ್ತಿಯನ್ನು ಹೇಳುತ್ತದೆ. ನಾರದನ ಬಗೆಗೆ ಅನೇಕ ಕಥೆಗಳು ಬಂದಿವೆ. 16ನೆಯ ಅಧ್ಯಾಯದಲ್ಲಿ ವೈದ್ಯಕೀಯ ವಿಷಯದ ಪ್ರಸ್ತಾಪವಿದೆ. ಪ್ರಕೃತಿ ಖಂಡದಲ್ಲಿ ಜಗತ್ತಿನ ಮೂಲದ್ರವ್ಯವಾದ ಪ್ರಕೃತಿ ದುರ್ಗೆ, ಲಕ್ಷ್ಮಿ, ಸರಸ್ವತಿ, ಸಾವಿತ್ರಿ, ರಾಧೆ-ಎಂಬ ಐದು ಅವತಾರಗಳನ್ನು ಕೃಷ್ಣನ ಅಪ್ಪಣೆಯ ಮೇರೆಗೆ ತಾಳಿದ ಸಂಗತಿಯಿದೆ.
  • ಗಣೇಶಖಂಡ ಅತಿ ಪ್ರಾಚೀನ ಕಾಲದಲ್ಲಿ ಅಜ್ಞಾತನಾಗಿದ್ದ ಮತ್ತು ಅರ್ವಾಚೀನಕಾಲದಲ್ಲಿ ಅತಿ ಜನಪ್ರಿಯನಾದ ಗಜಮುಖ ಗಣಪನ ಕಥೆಗಳನ್ನು ಹೇಳಿದೆ. ಒಂದು ವಿಚಿತ್ರರೀತಿಯಿಂದ ಗಣೇಶನನ್ನಿಲ್ಲಿ ಕೃಷ್ಣನ ಒಂದು ಅವತಾರವೆಂದು ಹೇಳಲಾಗಿದೆ. ಕೊನೆಯದಾದ ಕೃಷ್ಣಜನ್ಮಖಂಡ ಕೃಷ್ಣನ ಹುಟ್ಟಿನಿಂದ ಹಿಡಿದು ಅವನ ಇಡೀ ಜೀವನ ವೃತ್ತಾಂತವನ್ನು ತಿಳಿಸುತ್ತದೆ. ಅವನು ಮಾಡಿದ ಯುದ್ಧಗಳ ಹಾಗೂ ಗೋಪಿಯರೊಡನೆ ನಡೆಸಿದ ಪ್ರಣಯ ಪ್ರಕರಣಗಳ ವಿವರಗಳಿಲ್ಲಿವೆ. ಇಡೀ ಪುರಾಣದ ಮುಖ್ಯೋದ್ದೇಶ ಕೃಷ್ಣ ರಾಧೆಯರ ವಿಲಾಸವನ್ನು ಬಣ್ಣಿಸುವುದರಲ್ಲಿ ಮುಗಿಯುತ್ತದೆ.
  • ಇಲ್ಲಿ ಇರುವುದು ಹರಿಸರ್ವೋತ್ತಮವಾದವಲ್ಲ, ಕೃಷ್ಣಸರ್ವೋತ್ತಮವಾದ. ಒಟ್ಟಿನಲ್ಲಿ ಅಷ್ಟು ಉತ್ತಮ ಸಾಹಿತ್ಯವೆನ್ನಿಸದ ಈ ಪುರಾಣದಲ್ಲಿ ಅನೇಕ ಮಾಹಾತ್ಮ್ಯಗಳು ತುಂಬಿಕೊಂಡಿವೆ. ಬ್ರಹ್ಮವೈವರ್ತಪುರಾಣವನ್ನು ಸಾವರ್ಣಿ ನಾರದನಿಗೆ ಹೇಳಿದನೆಂದೂ ಶ್ಲೋಕಸಂಖ್ಯೆ 18,000 ಎಂದೂ ಪ್ರಸಿದ್ಧಿ. ಆದರೆ ವಾಸ್ತವಿಕವಾಗಿ ಶ್ಲೋಕಗಳು ಇನ್ನೂ ಹೆಚ್ಚಾಗಿವೆ. ಬ್ರಹ್ಮ, ಗರುಡ ಪುರಾಣಗಳಂತೆಯೇ ಇದೂ ಮೂಲಸ್ವರೂಪವನ್ನು ಕಳೆದುಕೊಂಡು ಅರ್ವಾಚೀನ ಕಾಲದಲ್ಲಿ ಪುನಾರಚಿತವಾದ ಪುರಾಣ.
  • ಕೃಷ್ಣ ರಾಧೆಯರ ನಿತ್ಯದಾಂಪತ್ಯವನ್ನೂ ಕೃಷ್ಣನ ಪರಬ್ರಹ್ಮತ್ವವನ್ನೂ ಪ್ರ.ಶ. 12ನೆಯ ಶತಮಾನದಲ್ಲಿದ್ದ ನಿಂಬಾರ್ಕ ಮೊಟ್ಟಮೊದಲಬಾರಿಗೆ ಹೇಳಿರುವುದರಿಂದ ಇದರ ಕಾಲ ಅದರಿಂದ ಇತ್ತೀಚಿನದೆನ್ನಬಹುದು. ರಾಧೆಯನ್ನು ಕೃಷ್ಣಶಕ್ತಿಯೆಂದು ಆರಾಧಿಸುವ ರಾಧಾವಲ್ಲಭೀಯ ಪಂಥವಂತೂ ಪ್ರ.ಶ. 16ನೆಯ ಶತಮಾನದಲ್ಲಿ ಉದಯವಾದದ್ದು. ಆದ್ದರಿಂದ ಪ್ರಸ್ತುತ ಪುರಾಣದ ಕಾಲ 16ನೆಯ ಶತಮಾನಕ್ಕೆ ಸಮೀಪವರ್ತಿಯಾಗಿರುವುದು ಸುಲಭೋಹ್ಯ.

ಶಿವನ ವಿವಿಧ ರೂಪಗಳ-ಹೆಚ್ಚಾಗಿ ಲಿಂಗರೂಪದ - ಪೂಜೆಯನ್ನು ಮುಖ್ಯವಾಗಿ ವಿವರಿಸುತ್ತದೆ. ದೇವದಾರುವನಕ್ಕೊಮ್ಮೆ ಶಿವ ಹೋದಾಗ ಅವನನ್ನು ಕಂಡು ಅಲ್ಲಿದ್ದ ಋಷಿಪತ್ನಿಯರು ಮರುಳಾದರು. ಆಗ ಲಿಂಗವಾಗೆಂದು ಶಿವನಿಗೆ ಋಷಿಗಳು ಶಾಪಕೊಟ್ಟರು. ಶಿವನಿಗಿಲ್ಲಿ 28 ಅವತಾರಗಳನ್ನು ಹೇಳಲಾಗಿದೆ. ತಂತ್ರಗಳ ಪ್ರಭಾವ ಈ ಪುರಾಣದ ಮೇಲೆ ಬಿದ್ದಿರುವುದನ್ನು ಕೆಲವೆಡೆ ಕಾಣಬಹುದು.

  • ಒಟ್ಟಿನಲ್ಲಿ ಇದು ಅಷ್ಟೇನೂ ಪ್ರಾಚೀನ ಪುರಾಣವಲ್ಲ. ಪ್ರ.ಶ. 8ನೆಯ ಶತಮಾನಕ್ಕೂ ಈಚಿನದು. ಶ್ಲೋಕಸಂಖ್ಯೆ 11000. ಬಲ್ಲಾಳಸೇನನ ಪ್ರಕಾರ ಮತ್ಸ್ಯಪುರಾಣದಲ್ಲಿರುವ ಗಾತ್ರವನ್ನು ಹೆಚ್ಚಿಸಲಾಯಿತು. ಇದರಲ್ಲಿ ಕಥನವಸ್ತುಗಳಿಲ್ಲ, ಕರ್ಮಕಾಂಡದ ಅಂಶಗಳು ತುಂಬಿಕೊಂಡಿವೆ.
  • ವಿಷ್ಣು ವರಾಹಾವತಾರವನ್ನು ತಾಳಿ ಭೂದೇವಿಯನ್ನು ಉದ್ಧರಿಸುವ ಅಂಶವನ್ನು ಹೇಳುತ್ತದೆ. ಇದರಲ್ಲಿ ಸೃಷ್ಟಿಕ್ರಮ, ವಂಶ ವೃಕ್ಷಗಳ ವಿಷಯಗಳು ಬಂದಿದ್ದರೂ ಒಟ್ಟಿನಲ್ಲಿ ಇದು ವಿಷ್ಣುವಿನ ಸ್ತೋತ್ರ, ಪ್ರಾರ್ಥನೆ, ಪೂಜೆ ಪುರಸ್ಕಾರಗಳ ಬಗೆಯನ್ನು ಹೇಳಲು ಮೀಸಲಾದ ಪುರಾಣ. ಹೀಗಿದ್ದರೂ ಇದರಲ್ಲಿ ಶಿವ, ದುರ್ಗೆಯರ ಕಥೆಗಳಿವೆ. ಮಾತೃದೇವತೆಗಳ ಹಾಗೂ ಇತರ ಸ್ತ್ರೀದೇವತೆಗಳ ವಿಸ್ತಾರವನ್ನು ಅನೇಕ ಅಧ್ಯಾಯಗಳಲ್ಲಿ ವಿಶದಪಡಿಸಲಾಗಿದೆ. ಗಣೇಶೋತ್ಪತ್ತಿ, ಗಣೇಶಸ್ತೋತ್ರಗಳೂ ಇಲ್ಲಿವೆ.
  • ಇಷ್ಟೇ ಅಲ್ಲ, ಶ್ರಾದ್ಧ, ಪ್ರಾಯಶ್ಚಿತ್ತ, ದೇವತಾಮೂರ್ತಿ ಪ್ರತಿಷ್ಠೆ, ಮಥುರಾಮಾಹಾತ್ಮ್ಯಗಳೂ, ನಚಿಕೇತ ವೃತ್ತಾಂತ. ಸ್ವರ್ಗ, ನರಕವರ್ಣನೆ ಮುಂತಾದವೂ ಪುರಾಣಕಕ್ಷೆಯಲ್ಲಿ ಬಂದಿವೆ. ಶ್ಲೋಕಸಂಖ್ಯೆ 24000ವೆಂದು ಪ್ರಸಿದ್ಧಿಯಿದ್ದರೂ ವಾಸ್ತವಿಕವಾಗಿ ಇದರಲ್ಲಿ 10000ಕ್ಕಿಂತ ಬಹಳ ಹೆಚ್ಚಾಗಿಲ್ಲ. ಕ್ರಿ.ಶ. 8ನೆಯ ಶತಮಾನದಲ್ಲಿದ್ದ ಇದರ ಮೂಲ ಸ್ವರೂಪ ಅನುಪಲಬ್ಧ. ಸದ್ಯದ ಸ್ವರೂಪದ ಕಾಲ ಪ್ರ.ಶ. 12ನೆಯ ಶತಮಾನದ ಆದಿಭಾಗವೆನ್ನಬಹುದು. ಇದು ಮೂಲದ ಕೆಲ ಅಧ್ಯಾಯಗಳನ್ನೊಳಗೊಂಡಿದೆ.
  • ಸ್ಕಂದಪ್ರೋಕ್ತವಾದುದು. ಶೈವತತ್ತ್ವಗಳಿದರಲ್ಲಿವೆ. ಈ ಹೆಸರಿನ ಪ್ರಾಚೀನಪುರಾಣವೀಗ ಅನುಪಲಬ್ಧ. ಸ್ಕಂದಪುರಾಣದ ಸಂಹಿತೆಗಳೆಂದೂ ಖಂಡಗಳೆಂದೂ ಹೇಳಿಕೊಳ್ಳುವ ಅನೇಕ ಕೃತಿಗಳಿದ್ದರೂ ಸ್ಕಂದಪುರಾಣವೆಂಬ ಹೆಸರುಳ್ಳ ಉಪಲಬ್ಧ ಪ್ರಾಚೀನಪ್ರತಿಯಲ್ಲಿ ಅವುಗಳಲ್ಲಾವುದೂ ಅಡಕವಾಗಿಲ್ಲ. ಇದರ ಪ್ರಾಚೀನ ಮೂಲದಲ್ಲಿ 81800 ಶ್ಲೋಕಗಳಿದ್ದುವೆಂದು ಹೇಳಿಕೆ. ಅದರ ಅಭಾವದಲ್ಲಿ ಅದಕ್ಕೀ ಉಪಲಬ್ಧ ಪ್ರತಿ ಎಲ್ಲ ಅಂಶಗಳಲ್ಲೂ ಸರಿಯಾಗಿ ಹೊಂದುತ್ತದೆಂದು ಹೇಳಲು ಸಾಧ್ಯವಿಲ್ಲ.
  • ಸ್ಕಂದಪುರಾಣಕ್ಕೆ ಸೇರಿದುವೆಂದು ಹೇಳಿಕೊಳ್ಳುವ ಎಲ್ಲ ಕೃತಿಗಳ ಶ್ಲೋಕಗಳನ್ನೂ ಸೇರಿಸಿದರೆ 81800ಕ್ಕೂ ಹೆಚ್ಚು ಶ್ಲೋಕಗಳಾಗುತ್ತವೆ. ಉಪಲಬ್ಧ ಪ್ರತಿಯಲ್ಲಿ ಶಿವ, ಅಂಧಕಾಸುರರ ಯುದ್ಧಗಳೂ ನರಕ, ಸಂಸಾರ, ಯೋಗಗಳ ವಿವರಗಳೂ ಬಂದಿದ್ದರೂ ಪುರಾಣ ಪಂಚಲಕ್ಷಣಗಳು ಕಂಡುಬರುವುದಿಲ್ಲ. ಇದಕ್ಕೆ ಆರು ಸಂಹಿತೆಗಳು : ಸನತ್ಕುಮಾರೀಯ, ಸೂತ, ಬ್ರಾಹ್ಮೀ, ವೈಷ್ಣವೀ, ಶಾಂಕರೀ, ಸೌರಿ ಸಂಹಿತೆಗಳೆಂದು. ಸನತ್ಕುಮಾರೀಯಸಂಹಿತೆ ಕಾಶಿಯ ಪವಿತ್ರಸ್ಥಳಗಳು ಮತ್ತು ಇತರ ಶೈವಕಥೆಗಳನ್ನು ಹೇಳುತ್ತದೆ.
  • ಸೂತಸಂಹಿತೆಯಲ್ಲಿ ಶಿವಪೂಜೆ, ಯೋಗ, ವರ್ಣಾಶ್ರಮಧರ್ಮ, ಮೋಕ್ಷೋಪಾಯ, ವೈದಿಕಕರ್ಮ. ಧ್ಯಾನಯಜ್ಞ, ಜ್ಞಾನಯಜ್ಞ ಮತ್ತು ಶಿವಭಕ್ತಿಗಳನ್ನು ಪ್ರತಿಪಾದಿಸಲಾಗಿದೆ. ಶೈವ, ಬ್ರಹ್ಮಗೀತೆ, ವೇದಾಂತಪರವಾದ ಸೂತಗೀತೆಗಳೂ ಇವೆ. ಸೌರಸಂಹಿತೆಯಲ್ಲಿ ಸೃಷ್ಟಿಯ ವಿವರಗಳನ್ನು ಸೂರ್ಯ ಯಾಜ್ಞವಲ್ಕ್ಯನಿಗೆ ಹೇಳಿದ ಬಗೆಯಿದೆ. ಶಾಂಕರ ಸಂಹಿತೆಯನ್ನು ಅಗಸ್ತ್ಯಸಂಹಿತೆಯೆಂದೂ ಹೇಳುತ್ತಾರೆ. ಏಕೆಂದರೆ ಅದನ್ನು ಸ್ಕಂದ ಅಗಸ್ತ್ಯನಿಗೆ ಹೇಳಿದನೆಂದು ನಂಬಿಕೆ.
  • ರಾಮಾವತಾರಿ ಯಾದ ವಿಷ್ಣುವಿನ ಆರಾಧನೆಯನ್ನು ಹೇಳುವ ಅಗಸ್ತ್ಯಸಂಹಿತೆ ಇದೇಯೋ ಬೇರೆಯೋ ಎಂಬುದು ಸಂಶಯಾಸ್ಪದ. ಕಾಶಿಪಟ್ಟಣದ ಮತ್ತು ಅದರ ಸುತ್ತಮುತ್ತಲಿನ ಶಿವದೇವಾಲಯಗಳ ವಿಸ್ತಾರವನ್ನು ಹೇಳುವ ಸುಪ್ರಸಿದ್ಧ ಕಾಶೀಖಂಡವಿಲ್ಲಿದೆ. ಇಲ್ಲೇ ಗಂಗಾಸಹಸ್ರನಾಮವೂ ಬಂದಿದೆ. ಕಾಶೀಖಂಡವೊಂದರ ಶ್ಲೋಕಸಂಖ್ಯೆಯೇ 15,000. ಉತ್ಕಲಖಂಡವನ್ನೂ ಸ್ಕಂದಪುರಾಣದ ಭಾಗವೆಂದು ಹೇಳುವುದುಂಟು. ಕಾಲ 7ನೆಯ ಶತಮಾನ.

ವಿಷ್ಣುವಿನ ವಾಮನಾವತಾರ ಇದರ ಆರಂಭ ವಸ್ತು. ಪುರಾಣ ಪಂಚಲಕ್ಷಣಸಂಪನ್ನವಾಗಿಲ್ಲ. ಹಲವಾರು ಅಧ್ಯಾಯಗಳು ವಿಷ್ಣುವಿನ ಅವತಾರಗಳನ್ನು ವಿವರಿಸುತ್ತವೆ. ಒಂದೆಡೆ ಲಿಂಗಪೂಜೆಯೂ ಮತ್ತೊಂದೆಡೆ ಉಮಾಶಿವರ ವಿವಾಹ, ಗಣೇಶ, ಸ್ಕಂದರ ಉತ್ಪತ್ತಿ ಮುಂತಾದ ಸಂಗತಿಗಳೂ ಬಿತ್ತರಿಸಲ್ಪಟ್ಟಿವೆ. ಶ್ಲೋಕಸಂಖ್ಯೆ ಸುಮಾರು 7,000; ಇದರಲ್ಲಿ 10,000 ಶ್ಲೋಕಗಳಿದ್ದುವೆಂದು ಹಳೆಯ ಪ್ರಸಿದ್ಧಿ, ಕಾಲ ಸುಮಾರು 16ನೆಯ ಶತಮಾನ. ಪಂಚಲಕ್ಷಣಗಳಿಂದ ಕೂಡಿದ್ದಾಗಿರಬಹುದಾದ ಇದರ ಪ್ರಾಚೀನ ಮೂಲ ಎಲ್ಲಿಯೂ ಸಿಕ್ಕಿಲ್ಲ. ಉಪಲಬ್ಧ ಪ್ರತಿ ವಿಷ್ಣು ಶಿವರಿಗೆ ಸಮಾನಪ್ರಾಧಾನ್ಯವನ್ನೀಯುತ್ತದೆ.

  • ಇದರಲ್ಲಿ ಬ್ರಾಹ್ಮೀ, ಭಾಗವತೀ, ಸೌರೀ ಮತ್ತು ವೈಷ್ಣವೀ ಎಂಬ ನಾಲ್ಕು ಸಂಹಿತೆಗಳಿವೆ ಎಂದು ಪುರಾಣವೇ ಹೇಳಿದರೂ ಲಭ್ಯವಾಗಿರುವುದು ಮೊದಲನೆಯ ಸಂಹಿತೆಯೊಂದೇ. ಸಮುದ್ರಮಥನ ಸಂದರ್ಭದಲ್ಲಿ ಮಂದರಗಿರಿಯನ್ನು ಹೊತ್ತ ವಿಷ್ಣುವಿನ ಕೂರ್ಮಾವತಾರದ ಸ್ತೋತ್ರದೊಂದಿಗೆ ಪ್ರಸ್ತುತ ಪುರಾಣ ಆರಂಭವಾಗುತ್ತದೆ. ಆಗ ಕಡಲಿಂದೆದ್ದು ಬಂದ ಲಕ್ಷ್ಮಿ ವಿಷ್ಣುಪತ್ನಿಯಾಗುತ್ತಾಳೆ.
  • ಇಂದ್ರದ್ಯುಮ್ನನೆಂಬ ದೊರೆ ಬ್ರಾಹ್ಮಣನಾಗಿ ಜನಿಸಿ, ಲಕ್ಷ್ಮಿಯಿಂದ ಉಪದೇಶಪಡೆದು, ಸರ್ವಚರಾಚರಗಳ ಸರ್ಗ, ಸ್ಥಿತಿ, ಪ್ರಲಯ ಕಾರಣನೆಂದು ಆರಾಧಿಸಿ, ಕೂರ್ಮಾವತಾರದ ಮೂಲಕ ಕೂರ್ಮಪುರಾಣವನ್ನು ಅರಿತುಕೊಳ್ಳುತ್ತಾನೆ. ಹರಸರ್ವೋತ್ತಮತ್ವವನ್ನೂ ತ್ರಿಮೂರ್ತಿಗಳ ಐಕ್ಯವನ್ನೂ ಪ್ರಸ್ತುತಪುರಾಣ ಪ್ರತಿಪಾದಿಸುತ್ತದೆ. ಹರನ ಶಕ್ತಿಯ 8,000 ಹೆಸರುಗಳಿಲ್ಲಿ ಬಂದಿವೆ.
  • ಹರಿಹರರೊಂದು, ಲಕ್ಷ್ಮೀ ಪಾರ್ವತಿಯರೊಂದು ಎಂದು ಹೇಳಿದರೂ ವಿಷ್ಣುವಿನ ಅವತಾರವೆನ್ನಿಸಿದ ಕೃಷ್ಣ ತನ್ನ ಪತ್ನಿಯಾದ ಜಾಂಬವತಿಯಲ್ಲಿ ಮಗನನ್ನು ಪಡೆಯಬೇಕಾದರೆ ಕಠಿನ ತಪವನ್ನೆಸಗಿ, ಶಿವಾನುಗ್ರಹವನ್ನು ಪಡೆಯಬೇಕಾಯಿತು-ಎಂದು ಹೇಳಿರುವುದು ಹರ ಪಕ್ಷಪಾತಕ್ಕೆ ಪ್ರಮಾಣ. ಕೂರ್ಮಪುರಾಣ ಪಂಚಲಕ್ಷಣಗಳಿಂದ ಕೂಡಿದೆ. ವಿಷ್ಣುವಿನ ಕೆಲ ಅವತಾರಗಳನ್ನಿಲ್ಲಿ ಹೇಳಿದರೂ ಒಂದು ಇಡೀ ಅಧ್ಯಾಯ ಶಿವಾವತಾರಗಳ ವರ್ಣನೆಗೇ ಮುಡಿಪಾಗಿದೆ.
  • ಕಾಶೀ ಪ್ರಯಾಗ ಮಾಹಾತ್ಮ್ಯಗಳಲ್ಲದೆ, ಭಗವದ್ಗೀತೆಗೆ ಸರಿದೊರೆಯಾದ ಈಶ್ವರಗೀತೆಯೂ ಬಂದಿರುವುದು ಈ ಪುರಾಣದ ವೈಶಿಷ್ಟ್ಯ. ಅನಂತರ ವ್ಯಾಸಗೀತೆ, ಪ್ರಾಯಶ್ಚಿತ ವಿಧಿ, ಪಾತಿವ್ರತ್ಯಪ್ರಶಂಸೆ ಮುಂತಾದ ವಿಷಯಗಳು ಬರುತ್ತವೆ. ರಾಮಾಯಣದಲ್ಲಿಲ್ಲದ ಸೀತಾವೃತ್ತಾಂತವೊಂದಿಲ್ಲಿ ಪಾತಿವ್ರತ್ಯ ಮಾಹಾತ್ಮ್ಯವನ್ನು ನಿದರ್ಶಿಸುತ್ತದೆ. ಇಲ್ಲಿ ರಾವಣನ ಕೈಯಿಂದ ಸೀತೆಯನ್ನು ಅಗ್ನಿಯೇ ಬಿಡಿಸಿ ಕಾಪಾಡುತ್ತಾನೆ.
  • ಇದರಲ್ಲಿ 17,000, ಶ್ಲೋಕಗಳಿದ್ದ ವೆಂದು ಪ್ರಸಿದ್ಧಿ; 6,000 ಶ್ಲೋಕಗಳನ್ನು ಮಾತ್ರ ಉಪಲಬ್ಧ ಪ್ರತಿಯಲ್ಲಿ ಕಾಣಬಹುದು. ಇದರ ಏಳನೆಯ ಅಧ್ಯಾಯದಲ್ಲಿ ಬರುವ ಸೃಷ್ಟಿ ವಿವರಣೆ ವ್ಯಾಹತವಾಗಿರುವುದರಿಂದ ಒಂದಕ್ಕಿಂತ ಹೆಚ್ಚು ಪೌರಾಣಿಕರ ಕೈವಾಡದಿಂದ ಇದು ರಚಿತವಾಯಿತೆಂಬುದನ್ನು ನಿರ್ಧರಿಸ ಬಹುದು.
  • ಮಹಾಭಾರತದ ಸೃಷ್ಟಿ ವಿವರಣೆಯನ್ನು ಪ್ರಸ್ತುತ ಪುರಾಣ ಸ್ಪಷ್ಟವಾಗಿ ಅನುಸರಿಸಿರುವುದರಿಂದಲೂ ಮತ್ಸ್ಯಪುರಾಣಕ್ಕೆ ಗೊತ್ತಿಲ್ಲದಿದ್ದ ಮಹಾಪುರಾಣಗಳ ಹದಿನೆಂಟನ್ನಿದು ಉಲ್ಲೇಖಿಸುವುದರಿಂದಲೂ ಇದರ ಪ್ರಸ್ತುತರೂಪದ ಕಾಲ ಕ್ರಿ.ಶ. 650ಕ್ಕೂ ಈಚಿನದೆನ್ನಬಹುದು. ಕೂರ್ಮಪುರಾಣದ ಪ್ರಕಾರ ದೇವರು ಅವ್ಯಕ್ತ, ಅಜ್ಞೇಯ, ನಿತ್ಯ, ಜಗತ್ಕಾರಣ, ಸದಸದಾತ್ಮಕ, ಪ್ರಕೃತಿಯಿಂದ ಅಭಿನ್ನ, ಸರ್ವನಿರ್ದೇಶಕ, ಗುಣತ್ರಯದ ಸಾಮ್ಯಾವಸ್ಥೆಯಲ್ಲದವ ಪರಬ್ರಹ್ಮ, ಪುರುಷಗರ್ಭ.
  • ಇದು ಅವನ ಪ್ರಾಕೃತಪ್ರಲಯ ಸ್ಥಿತಿ. ಇಲ್ಲಿಂದ ಮುಂದೆ ಅವನು ಪ್ರಕೃತಿ, ಪುರುಷರಲ್ಲಿ ದೇವತ್ವಪ್ರಕಟಣೆಗಾಗಿ ಪ್ರವೇಶಿಸಿದಾಗ ಜಗತ್ಸೃಷ್ಟಿಗಾರಂಭ. ದೇವರು ಪ್ರಕೃತಿಯಾಗಿ ನಡೆದುಕೊಳ್ಳುವುದೆಂದರೆ ಸಂಕೋಚ ವಿಕಾಸಶೀಲನಾಗುವುದೆಂದರ್ಥ. ಪ್ರಧಾನ ಪುರುಷಾತ್ಮಕವಾದ ಮಹತ್ ಕಾರಣವೆಂಬುದು ಅವನ ಆದ್ಯಸೃಷ್ಟಿ.
  • ಅದರಿಂದ ಮಹತ್, ಆತ್ಮ, ಮತಿ, ಬ್ರಹ್ಮ, ಪ್ರಬುದ್ಧಿ, ಖ್ಯಾತಿ, ಈಶ್ವರ, ಪ್ರಜ್ಞೆ, ಧೃತಿ, ಸ್ಮೃತಿ, ಅಥವಾ ಸಂವಿತ್ ಎಂಬ ಪದಾರ್ಥ ಹುಟ್ಟುತ್ತದೆ. ಹೀಗೆ ವಿವಿಧ ನಾಮಗಳುಳ್ಳ ಈ ಮಹತ್ತಿನಿಂದ ವೈಕಾರಿಕ, ತೈಜಸ ಮತ್ತು ಭೂತಾದಿ ಎಂಬ ಅಹಂಕಾರತ್ರಯ ಉದಯಿಸುತ್ತದೆ. ಈ ತ್ರಿವಿಧಾಹಂಕಾರಕ್ಕೆ ಅಭಿಮಾನ, ಕರ್ತ, ಮಂತ, ಆತ್ಮ, ಎಂಬ ಹೆಸರುಗಳಿವೆ.
  • ಸಲಕ್ಷಣವಾದ ಪ್ರಾಚೀನ ಮಹಾಪುರಾಣ. ಮತ್ಸ್ಯಾವತಾರ ತಾಳಿ ವಿಷ್ಣು ಮನುವನ್ನು ಪ್ರಲಯಪ್ರವಾಹದಿಂದ ಉದ್ಧರಿಸುವ ವೃತ್ತಾಂತದಿಂದ ಪುರಾಣಾರಂಭ. ಮನುವಿನ ಹಡಗನ್ನು ಮತ್ಸ್ಯ ಎಳೆದೊಯ್ಯುವಾಗ ಅವನಿಗೂ ಮನುವಿಗೂ ನಡೆದ ಸಂವಾದವೇ ಮತ್ಸ್ಯಪುರಾಣ. ಸೃಷ್ಟಿ, ವಂಶವೃಕ್ಷ, ಶ್ರಾದ್ಧ, ಭೂ, ಖಗೋಲಗಳ ವಿಷಯ, ಆಂಧ್ರಾದಿ ವಿವಿಧ ದೇಶಗಳ ಅರಸರ ಆಳಿಕೆ. ಯಯಾತಿ ವೃತ್ತಾಂತ, ಸಾವಿತ್ರಿಯ ಕಥೆ ಮತ್ತು ವಿಷ್ಣುವಿನ ಅವತಾರಗಳು ಪ್ರಸ್ತುತ ಪುರಾಣದ ವಸ್ತು ಪ್ರಪಂಚದಲ್ಲಿ ಗಣ್ಯ.
  • ಯಯಾತಿ ವೃತ್ತಾಂತ ಮುಂತಾದುವು ಮಹಾಭಾರತ ಹರಿವಂಶಗಳಲ್ಲಿರುವಂತೆಯೇ ಇವೆ. ವಿವಿಧವ್ರತಗಳು, ಪ್ರಯೋಗಮಾಹಾತ್ಮ್ಯ, ವಾರಾಣಸೀಮಾಹಾತ್ಮ್ಯ, ನರ್ಮದಾಮಾಹಾತ್ಮ್ಯ, ರಾಜಧರ್ಮ, ಶಕುನಶಾಸ್ತ್ರ, ಗೃಹಾರಂಭಕರ್ಮ, ವಿಗ್ರಹಪ್ರತಿಷ್ಠೆ, ದೇವಾಲಯ, ಅರಮನೆಗಳ ರಚನೆ, ಷೋಡಶದಾನ ಮುಂತಾದ ವಿಷಯಗಳು ಇದರಲ್ಲಿ ಆಮೇಲಾದ ಪ್ರಕ್ಷೇಪಗಳು. ವೈಷ್ಣವ, ಶೈವ ಸಮಪ್ರಾಧಾನ್ಯವನ್ನಿದರಲ್ಲಿ ಕಾಣಬಹುದು. ಶ್ಲೋಕಸಂಖ್ಯೆ 15,000; ಪ್ರಸ್ತುತರೂಪದ ಕಾಲ ಕ್ರಿ.ಶ. 550-650 ನಡುವೆ.
  • ಈ ಪುರಾಣ ತನ್ನ ಅಲಭ್ಯವಾದ ಮೂಲಸ್ವರೂಪದಲ್ಲಿ ವಾಯು, ಬ್ರಹ್ಮಾಂಡ ಪುರಾಣಗಳಷ್ಟೇ ಪ್ರಾಚೀನ. ವಿಷ್ಣು ಹಾಗೂ ಪದ್ಮ ಪುರಾಣಗಳಿಗೂ ಇದಕ್ಕೂ ಸಾಧಾರಣವೆನ್ನಿಸುವ ಎಷ್ಟೋ ಅಧ್ಯಾಯಗಳಿವೆ. ಮೂಲದ ದೃಷ್ಟಿಯಿಂದ ಇದರ ಪ್ರಸ್ತುತ ರೂಪ ಉಕ್ತಪುರಾಣಗಳಿಗೆ ಋಣಿಯೋ ಅವೇ ಇದಕ್ಕೆ ಋಣಿಯೋ ಗೊತ್ತಿಲ್ಲ. ಕೂರ್ಮ, ಲಿಂಗ ಪುರಾಣಗಳಂತೆ ಇದು ಮತಾಚಾರಮಯವಾಗಿಲ್ಲ.
  • ಬ್ರಹ್ಮಪುರಾಣವನ್ನು ಮೊದಲು ನೆನೆದು, ಅನಂತರ ವೇದಗಳನ್ನು ತನ್ನ ಬಾಯಿಯಿಂದ ಹೊರಗೆಡಹಿದ ಎನ್ನುತ್ತದೆ ಮತ್ಸ್ಯಮಹಾಪುರಾಣ. ಇದರ ಪ್ರಕಾರ ಸರ್ವಚರಾಚರಗಳ ರಕ್ಷಣೆಗಾಗಿ ದಂಡನೆಯನ್ನು ಕೈಗೊಳ್ಳಲೆಂದು ಸ್ವಯಂಭುವಾದ ಬ್ರಹ್ಮ ದೇವತೆಗಳ ಅಂಶಗಳಿಂದ ರಾಜನನ್ನು ಸೃಜಿಸಿದ. ಆದುದರಿಂದ ರಾಜನನ್ನು ಯಾರೂ ಎದುರು ನಿಂತು ನೋಡಲಾರರು. ಆತ ಮಾನವರಲ್ಲಿ ಸೂರ್ಯ. ಆತ ದುಷ್ಟನಾದರೆ ಪ್ರಜೆಗಳೆಲ್ಲರೂ ದುಷ್ಟರಾಗುತ್ತಾರೆ.
  • ಹೆಚ್ಚುಕಡಿಮೆಗೆಡೆಗೊಡದಂತೆ ದೊರೆ ದಂಡಶಕ್ತಿಯನ್ನು ನಿರ್ಭಯದಿಂದ ಬಳಸಿದರೆ ಮಾತ್ರ ಪ್ರಜೆಗಳು ದುರ್ಮಾರ್ಗಿಗಳಾಗುವುದಿಲ್ಲ. ಧರ್ಮರೂಪದ ದಂಡಶಕ್ತಿ ಯಿರುವುದು ಬಲಿಷ್ಠರು ದುರ್ಬಲರನ್ನು ಶೋಷಿಸದಂತೆ ನೋಡಿಕೊಳ್ಳಲೆಂದು. ಇಡೀ ರಾಜ್ಯಕ್ಕೆ ರಾಜನು ನಿಯಮಿಸುವ ನೌಕರರೇ ಆಧಾರ. ಧರ್ಮಜ್ಞರ ಸಲಹೆಯಂತೆಯೇ ಆತ ಆಡಳಿತ ನಡೆಸಬೇಕು-ಎಂಬುದು ಪ್ರಸ್ತುತಪುರಾಣದ ರಾಜಧರ್ಮದ ಮುಖ್ಯಾಂಶ.
  • ಗರುಡ ಮಹಾಪುರಾಣವೊಂದು ಸಂಪೂರ್ಣ ವೈಷ್ಣವಪುರಾಣ. ಗರುಡನಿಗಿದನ್ನು ಮೊದಲು ವಿಷ್ಣು ಹೇಳಿದನೆಂದೂ ಆ ಬಳಿಕ ಗರುಡ ಇದನ್ನು ಕಶ್ಯಪಮುನಿಗೆ ಹೇಳಿದನೆಂದೂ ಆದುದರಿಂದ ಇದಕ್ಕೀ ನಾಮಧೇಯ ಬಂದಿತೆಂದೂ ಉಲ್ಲೇಖಿಸಲಾಗಿದೆ. ಸೃಷ್ಟಿಕ್ರಮ, ಯುಗಚಕ್ರ, ವಂಶಾವಳಿ ಮುಂತಾದ ಪೌರಾಣಿಕ ವಿಷಯಗಳೊಟ್ಟಿಗೇ ವಿಷ್ಣುಪೂಜೆ, ವೈಷ್ಣವ ಧರ್ಮಕರ್ಮ, ಪವಿತ್ರಸ್ಥಳ, ಪಂಚಬ್ರಹ್ಮದೇವತಾರ್ಚನೆ ಮುಂತಾದ ವಿಷಯಗಳೂ ಇದರಲ್ಲಿವೆ. ಕೆಲಮಟ್ಟಿಗಿದು ಅಗ್ನಿಪುರಾಣದಂತೆಯೇ ವಿಶ್ವಕೋಶ ಲಕ್ಷಣವುಳ್ಳದ್ದು.
  • ಇದರಲ್ಲಿ ರಾಮಾಯಣ, ಮಹಾಭಾರತ, ಹರಿವಂಶಗಳ ಕತೆಗಳಲ್ಲದೆ, ಸೃಷ್ಟಿವಿವರಣೆ, ಖಗೋಲವಿಚಾರ, ಜ್ಯೋತಿಶಾಸ್ತ್ರದ ಅಂಶ, ಶಕುನಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ರತ್ನಪರೀಕ್ಷೆ, ರಾಜನೀತಿ, ಯಾಜ್ಞವಲ್ಕ್ಯ ಸ್ಮೃತಿಗನುಗುಣವಾದ ಧರ್ಮವಿವೇಕ ಮೊದಲಾದ ನಾನಾ ಜ್ಞಾನಾಂಗಗಳು ತುಂಬಿಕೊಂಡಿದೆ. ಈ ಪುರಾಣದ ಉತ್ತರಖಂಡವನ್ನು ಎರಡನೆಯ ಭಾಗ ಅಥವಾ ಪ್ರೇತಕಲ್ಪ ಎನ್ನುತ್ತಾರೆ.
  • ಪ್ರೇತಕಲ್ಪದಲ್ಲಿ ಸತ್ತಮೇಲೆ ಜೀವಾತ್ಮನಿಗೊದಗುವ ಗತಿ, ಕರ್ಮ,ಪುನರ್ಜನ್ಮ, ಮೋಕ್ಷ, ಸಂಸಾರಬೀಜವಾಗಿರುವ ಆಸೆ, ಮರಣಶಕುನ ಯಮಲೋಕಮಾರ್ಗ, ಪ್ರೇತಗಳ ಗತಿ, ನರಕಹಿಂಸೆ, ಸ್ವಪ್ನ, ಅಪಶಕುನಗಳನ್ನುಂಟು ಮಾಡುವ ಪ್ರೇತಗಳು, ಮರಣಪೂರ್ವದ ಕರ್ಮ, ಸಾಯುತ್ತಿರುವ ಮತ್ತು ಸತ್ತವರ ಬಗ್ಗೆ ಮಾಡತಕ್ಕ ಕರ್ಮ, ಉತ್ತರಕ್ರಿಯೆ, ಪಿತೃಪೂಜೆ, ಸತೀವಿಧಿ, ಗಯಾಮಾಹಾತ್ಮ್ಯ ಇತ್ಯಾದಿ ವಿವಿಧ ವಿಷಯಗಳ ವಿವರಗಳಿವೆ.
  • ಈ ಪುರಾಣದ ಪ್ರಾಚೀನ ಮೂಲದ ಕಾಲ ಪ್ರ.ಶ. 3-4ನೆಯ ಶತಮಾನವಾಗಿರಬಹುದಾದರೂ ಸದ್ಯದ ರೂಪದ ಅವಧಿ ಕ್ರಿ.ಶ. 10ನೆಯ ಶತಮಾನಕ್ಕಿಂತ ಹಿಂದಿನದಲ್ಲವೆಂದು ತರ್ಕಿಸಲಾಗಿದೆ. ಬ್ರಹ್ಮನ ಬಾಯಿಗಳಿಂದ ಹೊರಬಿದ್ದ ವೇದಗಳಲ್ಲಿ ಹೇಳಿದ ಕರ್ಮಗಳನ್ನು ಮಾಡಲಾರದವ ಸ್ಮೃತಿ ಹೇಳಿದ ಕರ್ಮಗಳನ್ನಾದರೂ ಮಾಡಬೇಕು. ಅದೂ ಆಗದವ ನಡೆದುಬಂದ ಸದಾಚಾರವನ್ನು ಹಿಡಿಯಬೇಕು. ರಾಜನಿಲ್ಲದ ರಾಜ್ಯದಲ್ಲಿ ಇರಬಾರದು. ರಾಜ ವಿಷ್ಣುವಿನ ಮಾನಸಪುತ್ರ. ಆತ ಪ್ರಜೆಗಳನ್ನು ಮಕ್ಕಳಂತೆ ಪಾಲಿಸಬೇಕು.
  • ಅವನ ಆಳಿಕೆ ಸತ್ಯ, ನ್ಯಾಯಬದ್ಧವಾಗಿರಬೇಕು. ಇಂಥ ಶೀಲವುಳ್ಳ ದೊರೆ ಜಗತ್ತಿಗೆ ಭೂಷಣಪ್ರಾಯ, ದುರ್ಬಲನಿಗಿರುವ ಮಹಾಬಲ-ಎಂದು ಮುಂತಾಗಿ ಗರುಡಮಹಾಪುರಾಣ ಬೋಧಿಸುತ್ತದೆ. ಗರುಡ ಪುರಾಣದ ಸಾರವನ್ನು ಮಿಕ್ಕ ಪುರಾಣಗಳ ಅಂಶದೊಂದಿಗೆ ಸಾರೋದ್ಧಾರ ಎಂಬ ಹೆಸರಿನಲ್ಲಿ ನೌನಿಧಿರಾಮನೆಂಬಾತ ಸಂಗ್ರಹಿಸಿರುವುದಿಲ್ಲಿ ಸ್ಮರಣೀಯ.
  • ವಾಯು ಮಹಾಪುರಾಣದ ಹಳೆಯ ಪಾಠವೆಂದು ಅನುಮಾನಿಸಲಾಗಿದೆ. ಏಕೆಂದರೆ ಇದನ್ನು ವಾಯವೀಯ ಬ್ರಹ್ಮಾಂಡ ಎಂದು ಕರೆದಿದೆ, ಕೂರ್ಮಮಹಾಪುರಾಣ. ಮತ್ಸ್ಯಪುರಾಣದ ಪ್ರಕಾರ ಇದನ್ನು ಹೇಳಿದವನು ಬ್ರಹ್ಮ. ಈ ಹೆಸರಿನ 12,200 ಶ್ಲೋಕಗಳುಳ್ಳ ಪ್ರಾಚೀನಮಹಾಪುರಾಣ ಕಳೆದುಹೋಗಿರಬೇಕು. ಏಕೆಂದರೆ ಉಪಲಬ್ಧ ಪ್ರತಿಯಲ್ಲಿ ಕೇವಲ ಮಾಹಾತ್ಮ್ಯಗಳೂ ಸ್ತೋತ್ರಗಳೂ ಉಪಾಖ್ಯಾನಗಳೂ ಇವೆ. ಪಾರ್ಗಿಟರ್ಗೆ ದೊರೆತ ಇದರ ಹಸ್ತಪ್ರತಿಯೊಂದರಲ್ಲಿಯ ಪೂರ್ವಾರ್ಧ ವಾಯುಪುರಾಣಕ್ಕೆ ಸಂಪೂರ್ಣ ಸಮವಾಗಿದೆ.
  • ಉತ್ತರಾರ್ಧದಲ್ಲಿ ಲಲಿತಾದೇವಿಯ ಆರಾಧನೆಯನ್ನೂ ತಾಂತ್ರಿಕಕೃತ್ಯ ವಿಧಾನಗಳಿಗನುಗುಣವಾಗಿ ವಿವರಿಸಲಾಗಿದೆ. ಬಲಿದ್ವೀಪದಲ್ಲಿ ಸ್ಥಳೀಯ ಶಿವಭಕ್ತರಿಗೆ ಬ್ರಹ್ಮಾಂಡ ಮಹಾಪುರಾಣವೊಂದೇ ಮಹಾಧರ್ಮಗ್ರಂಥವಾಗಿದೆ. ಅಧ್ಯಾತ್ಮರಾಮಾಯಣವನ್ನು ಇದರ ಅಂಗವೆಂದು ಗಣಿಸುತ್ತಾರೆ. ಇದರಲ್ಲಿ ಅದ್ವೈತತತ್ತ್ವಗಳ ಮತ್ತು ರಾಮಭಕ್ತಿಯ ಉಪದೇಶವಿದೆ. ಅಧ್ಯಾತ್ಮರಾಮಾಯಣವಿಡೀ ಉಮಾಶಿವರ ಸಂವಾದದ ರೂಪದಲ್ಲಿದೆ.
  • ಇದರಲ್ಲಿ ಆದಿಯಿಂದ ಅಂತ್ಯದವರೆಗೆ ರಾಮ ಪರಮಾತ್ಮನಾದ ವಿಷ್ಣು, ಅಪಹೃತೆಯಾದ ಸೀತೆ ಮಾಯೆ. ಅಗ್ನಿಪ್ರವೇಶದ ಬಳಿಕ ಬರುವ ಸೀತೆ ವಿಷ್ಣುಪತ್ನಿಯಾದ ಲಕ್ಷ್ಮೀದೇವಿ ಅಥವಾ ಪ್ರಕೃತಿ. ಪ್ರಸ್ತುತ ಪುರಾಣದಲ್ಲಿ ಬರುವ ರಾಮಹೃದಯ ಮತ್ತು ರಾಮಗೀತೆಗಳನ್ನು ರಾಮಭಕ್ತರೆಲ್ಲರೂ ಕಲಿತು ಪಠಿಸುತ್ತಾರೆ. ಇದೇ ಪುರಾಣದ ಭಾಗವೆಂದು ಹೇಳಲಾಗುವ ನಚಿಕೇತೋಪಾಖ್ಯಾನ ಸುಂದರವಾಗಿರುವ ಪ್ರಾಚೀನ ನಚಿಕೇತಕಥೆಯ ಒಂದು ವಿಕೃತರೂಪ.
  • ಇದರ ಪ್ರಾಚೀನಮೂಲ ವಾಯುಪುರಾಣದ ಪ್ರಾಚೀನಮೂಲರೂಪ ದಷ್ಟೇ ಹಳೆಯದಾಗಿರಬಹುದಾದರೂ ಮರಾಠಿಕವಿ ಏಕನಾಥನ ಹೇಳಿಕೆಯ ಪ್ರಕಾರ ಇದರ ಪ್ರಸ್ತುತ ರೂಪದ ಕಾಲ ಹೆಚ್ಚು ಕಡಿಮೆ ವಾಯುಪುರಾಣದ ಆಧುನಿಕರೂಪದ ಕಾಲಕ್ಕೆ ಸರಿಸಮವಾದೀತು ಎಂದು ಊಹಿಸಬಹುದು. ಬ್ರಹ್ಮಾಂಡವೆಂಬ ಪದ ಪರಂಪರಾಗತ.
  • ಬ್ರಾಹ್ಮಣ ಮತ್ತು ಉಪನಿಷತ್ತುಗಳಲ್ಲಿ ವಿಶ್ವದ ಹುಟ್ಟು ಚಿನ್ನದ ಮೊಟ್ಟೆಯಿಂದ ಎನ್ನಲಾಗಿದೆ. ಬ್ರಹ್ಮ ಅಥವಾ ಬ್ರಹ್ಮರೂಪಿಯಾದ ವಿಷ್ಣು ಇಡೀ ವಿಶ್ವವನ್ನು ಗರ್ಭೀಕರಿಸಿಕೊಂಡಿದ್ದ ಚಿನ್ನದ ಮೊಟ್ಟೆಯಲ್ಲಿ ವಾಸಿಸಿದ್ದನೆಂದೂ ಅವನ ಇಚ್ಛೆಯಂತೆ ಅದರಿಂದ ವಿಶ್ವ ಆವಿರ್ಭವಿಸಿತೆಂದೂ ಮನುಸ್ಮೃತಿ ಮತ್ತು ವಿಷ್ಣು ಹಾಗೂ ವಾಯು ಪುರಾಣಗಳು ವರ್ಣಿಸಿರುವುದನ್ನಿಲ್ಲಿ ಸ್ಮರಣೀಯ.

ಉಲ್ಲೇಖ

ಬದಲಾಯಿಸಿ
  1. "ಕಾಲಸೂಚಿ". Archived from the original on 2021-07-28. Retrieved 2018-10-26.
  2. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಷ್ಟಾದಶಪುರಾಣಗಳು