ಅಮೌಖಿಕ ಸಂವಹನ
ಅಮೌಖಿಕ ಸಂವಹನ ವನ್ನು (NVC) ಸಾಮಾನ್ಯವಾಗಿ ಶಬ್ದರಹಿತ ಸಂದೇಶಗಳನ್ನು ಕಳಿಸುವ ಮತ್ತು ಬರಮಾಡಿಕೊಳ್ಳುವ ಸಂವಹನದ ಪ್ರಕ್ರಿಯೆಯೆಂದು ಅರ್ಥೈಸಲಾಗುತ್ತದೆ. ಅರ್ಥಾತ್, ಭಾಷೆಯೊಂದೇ ಸಂವಹನದ ಮಾಧ್ಯಮವಾಗಿರದೆ, ಇತರ ಮೂಲಗಳೂ ಇವೆ. ಅಮೌಖಿಕ ಸಂವಹನವನ್ನು ಸಂಜ್ಞೆಗಳು ಮತ್ತು ಸ್ಪರ್ಶ (Haptic communication), ದೈಹಿಕ ಭಾಷೆ ಅಥವಾ ನಿಲುವು, ಮುಖಭಾವ ಮತ್ತು ಕಣ್ಣು ಸಂಪರ್ಕಗಳ ಮೂಲಕ ವ್ಯಕ್ತಪಡಿಸಬಹುದು. ಅಮೌಖಿಕ ಸಂವಹನವನ್ನು ಉಡುಪುಗಳು, ಕೇಶವಿನ್ಯಾಸಗಳು ಅಥವಾ ವಾಸ್ತುಶಿಲ್ಪ, ಸಂಕೇತಗಳು ಮತ್ತು ಮಾಹಿತಿಚಿತ್ರಲೇಖನಗಳಂತಹ ವಸ್ತುಸಂವಹನಗಳ ಮೂಲಕವೂ ಕೂಡ ವ್ಯಕ್ತಗೊಳಿಸಬಹುದು. ಅಮೌಖಿಕ ಅಂಶಗಳನ್ನು ಹೊಂದಿರುವ ಮಾತನ್ನು paralanguage-ಭಾಷಾಸದೃಶವೆನ್ನಲಾಗುತ್ತದೆ, ಮತ್ತು ಇದು ಧ್ವನಿಯ ಗುಣಮಟ್ಟ, ಭಾವನೆ ಮತ್ತು ಮಾತಿನ ಶೈಲಿಗಳು ಮಾತ್ರವಲ್ಲದೆ, ಲಯಬದ್ಧತೆ, ದನಿಯ ಏರಿಳಿತ ಮತ್ತು ಅವಧಾರಣೆ ನೀಡುವಿಕೆಗಳಂತಹ ಕಾವ್ಯವ್ಯಾಕರಣದ ಲಕ್ಷಣಗಳನ್ನೂ ಒಳಗೊಂಡಿವೆ. ನೃತ್ಯವನ್ನೂ ಕೂಡ ಒಂದು ರೀತಿಯ ಅಮೌಖಿಕ ಸಂವಹನವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ, ಬರಹರೂಪದ ಪಠ್ಯವು ಸಹ ಬರವಣಿಗೆ ಶೈಲಿ, ಪದಗಳ ಜೋಡಣೆ ಅಥವಾ ಎಮೋಟಿಕಾನ್‌ಗಳೇ(ಭಾವನೆಗಳನ್ನು ಸ್ಫುರಿಸುವ ಸಂಜ್ಞಾರೂಪಗಳು)ಮುಂತಾದ ಅಮೌಖಿಕ ಅಂಶಗಳನ್ನು ಒಳಗೊಂಡಿರುತ್ತದೆ. ಆದರೆ, ಅಮೌಖಿಕ ಸಂವಹನದ ಹೆಚ್ಚಿನ ಭಾಗವು ಪರಸ್ಪರ ಪ್ರತಿಕ್ರಿಯೆಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, ಇದನ್ನು ಮೂರು ಮುಖ್ಯ ಭಾಗಗಳಾಗಿ ವಿಂಗಡಿಸಿದೆ: ಸಂವಹನವುಂಟಾಗುವ ಸ್ಥಳದ ಪರಿಸರ, ಸಂವಹನಕಾರರ ದೈಹಿಕ ಲಕ್ಷಣಗಳು, ಮತ್ತು ಪರಸ್ಪರ ಪ್ರತಿಕ್ರಿಯಿಸುವ ವೇಳೆಯಲ್ಲಿ ಸಂವಹನಕಾರರ ನಡವಳಿಕೆಗಳು.[೧]
ಮೌಖಿಕ ಸಂವಹನಕ್ಕೆ ವಿರುದ್ಧವಾಗಿ ವಾಚಿಕ ಸಂವಹನ
ಬದಲಾಯಿಸಿಈ ಕ್ಷೇತ್ರದ ಪರಿಣತರು "ಮೌಖಿಕ" ಎಂಬ ಪದವನ್ನು ಸಾಮಾನ್ಯವಾಗಿ "ಪದಗಳ ಅಥವಾ ಪದಗಳಿಗೆ ಸಂಬಂಧಿಸಿದ" ಎನ್ನುವ ಸ್ಪಷ್ಟಾರ್ಥದಲ್ಲಿ ಮಾತ್ರ ಬಳಸುವರೇ ವಿನಾ "ಮೌಖಿಕ ಸಂವಹನ" ಎಂಬ ಪದವನ್ನು ವಾಚಿಕ ಅಥವಾ ಮಾತಿನ ಸಂವಹನಕ್ಕೆ ಸಮಾನಾರ್ಥಕ ರೂಪದಲ್ಲಿ ಬಳಸುವುದಿಲ್ಲ. ಹೀಗಾಗಿ ಪದಗಳೆಂದು ಪರಿಗಣಿಸಲ್ಪಡದ ಆಡುದನಿಗಳು, ಉದಾಹರಣೆಗೆ ಗುರುಗುಟ್ಟುವಿಕೆ, ಹಾಡೊಂದರ ಪದರಹಿತ ಸ್ವರಚಿಹ್ನೆಯೊಂದರ ಗುನುಗುವಿಕೆ, ಮುಂತಾದವು ಅಮೌಖಿಕವಾಗಿವೆ. ಸಂಜ್ಞಾ ಭಾಷೆಗಳು ಮತ್ತು ಬರಹಗಳನ್ನು ಸಾಮಾನ್ಯವಾಗಿ ಮೌಖಿಕ ಸಂವಹನದ ವಿಧಗಳಾಗಿ ಪರಿಗಣಿಸಲಾಗುತ್ತದೆ, ಏಕೆಂದರೆ ಇವೆರಡರಲ್ಲಿಯೂ ಪದಗಳನ್ನು ಬಳಸಲಾಗುತ್ತದೆ - ಆದರೆ ಮಾತಿನಂತೆಯೆ ಇವೆರಡರಲ್ಲಿಯೂ ಭಾಷಾಸದೃಶ ಅಂಶಗಳಿರಬಹುದು ಮತ್ತು ಇವು ಆಗಾಗ ಅಮೌಖಿಕ ಸಂದೇಶಗಳ ಜತೆಜತೆಗೇ ಕಾಣಬರಬಹುದು. ಅಮೌಖಿಕ ಸಂವಹನವು ಯಾವುದೇ ರೀತಿಯಲ್ಲಾದರೂ ನಡೆಯಬಹುದು < “ನಾವು ಮಾತನಾಡುವಾಗ (ಇಲ್ಲವೇ ಆಲಿಸುವಾಗ), ನಮ್ಮ ಗಮನವು ದೈಹಿಕ ಭಾಷೆಗಿಂತ ಹೆಚ್ಚಾಗಿ ಪದಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ ನಮ್ಮ ತೀರ್ಮಾನವು ಇವೆರಡನ್ನೂ ಒಳಗೊಂಡಿರುತ್ತದೆ. ಒಂದು ಪ್ರೇಕ್ಷಕವರ್ಗವು ಮೌಖಿಕ ಮತ್ತು ಅಮೌಖಿಕ ಸಂಕೇತಗಳೆರಡನ್ನೂ ಒಮ್ಮೆಲೇ ಪರಿಷ್ಕರಿಸುತ್ತಿರುತ್ತದೆ. ದೈಹಿಕ ಚಲನೆಗಳು ಸಾಮಾನ್ಯವಾಗಿ ತಮ್ಮಿಂದ ತಾವಾಗಿಯೇ ಧನಾತ್ಮಕ ಅಥವಾ ಋಣಾತ್ಮಕವಾಗಿರುವುದಿಲ್ಲ; ಆದರೆ ಸಂದರ್ಭ ಮತ್ತು ಸಂದೇಶಗಳು ಅವುಗಳ ಅರ್ಥೈಸುವಿಕೆಯನ್ನು ನಿರ್ಧರಿಸುತ್ತವೆ.”
ಇತಿಹಾಸ
ಬದಲಾಯಿಸಿಅಮೌಖಿಕ ಸಂವಹನದ ಪ್ರಪ್ರಥಮ ವೈಜ್ಞಾನಿಕ ಅಧ್ಯಯನವೆಂದರೆ ಚಾರ್ಲ್ಸ್ ಡಾರ್ವಿನ್ನ ಕೃತಿಯಾದ ದ ಎಕ್ಸ್‌ಪ್ರೆಶನ್ ಆಫ್ ದ ಎಮೋಶನ್ಸ್ ಇನ್ ಮ್ಯಾನ್ ಎಂಡ್ ಅನಿಮಲ್ಸ್ (1872). ಅವರು, ಎಲ್ಲಾ ಸಸ್ತನಿಗಳೂ ತಮ್ಮ ಭಾವನೆಗಳನ್ನು ಹೆಚ್ಚಿನಮಟ್ಟಿಗೆ ಖಾತ್ರಿಯಾಗಿ ತಮ್ಮ ಮುಖಗಳಲ್ಲಿಯೇ ವ್ಯಕ್ತಪಡಿಸುತ್ತವೆಂದು ವಾದಿಸಿದರು. ಇಂದಿನ ಅಧ್ಯಯನಗಳು ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿವೆ, ಇವುಗಳಲ್ಲಿ ಕೆಲವೆಂದರೆ, ಭಾಷಾಶಾಸ್ತ್ರ, ಸಂಕೇತಶಾಸ್ತ್ರ ಮತ್ತು ಸಾಮಾಜಿಕ ಮನಶ್ಯಾಸ್ತ್ರ.
ಕ್ರಮರಾಹಿತ್ಯ
ಬದಲಾಯಿಸಿಹೆಚ್ಚಿನ ಅಮೌಖಿಕ ಸಂವಹನವು ಕ್ರಮರಹಿತ ಸಂಕೇತಗಳನ್ನು ಆಧರಿಸಿದೆ, ಮತ್ತು ಇದು ಒಂದು ಸಂಸ್ಕೃತಿಯಿಂದ ಇನ್ನೊಂದಕ್ಕೆ ವಿಭಿನ್ನವಾಗಿರುತ್ತದೆಯಾದರೂ, ಇದರ ಹೆಚ್ಚಿನ ಭಾಗವು ಕೆಲಮಟ್ಟಿಗೆ ಲಾಂಛನರೀತಿಯದಾಗಿದ್ದು ಪ್ರಾಯಶಃ ಸಾರ್ವತ್ರಿಕವಾಗಿ ಒಂದೇ ರೀತಿಯಲ್ಲಿ ಅರ್ಥೈಸಲ್ಪಡುತ್ತದೆ. ಪಾಲ್ ಎಕ್‌ಮ್ಯಾನ್ನ 1960ರ ದಶಕದ ಮುಖದ ಭಾವನೆಗಳ ಪ್ರಭಾವಶಾಲೀ ಅಧ್ಯಯನವು ಕೋಪ, ಹೇಸಿಗೆ, ಭೀತಿ, ಸಂತಸ, ದುಃಖ ಮತ್ತು ಅಚ್ಚರಿಗಳ ಅಭಿವ್ಯಕ್ತಿಗಳು ಸಾರ್ವತ್ರಿಕವಾಗಿವೆ ಎಂದು ನಿರ್ಣಯಿಸಿತು.
ಉಡುಪು ಮತ್ತು ದೈಹಿಕ ಲಕ್ಷಣಗಳು
ಬದಲಾಯಿಸಿಮೈಕಟ್ಟು, ಎತ್ತರ, ತೂಕ, ಕೂದಲು, ಚರ್ಮದ ಬಣ್ಣ, ಲಿಂಗ, ವಾಸನೆ ಮತ್ತು ಉಡುಪುಗಳೇ ಮೊದಲಾದ ಅಂಶಗಳು ಪರಸ್ಪರ ಒಡನಾಟದ ವೇಳೆಯಲ್ಲಿ ಅಮೌಖಿಕವಾದ ಸಂದೇಶಗಳನ್ನು ಕಳುಹಿಸುತ್ತವೆ. ಉದಾಹರಣೆಗೆ, ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆಸಲಾದ ಅಧ್ಯಯನವೊಂದರಲ್ಲಿ[೨], ಡಿಸ್ಕೋತೆಕ್‌ಗಳಲ್ಲಿ ಭಾಗವಹಿಸುತ್ತಿದ್ದ ಮಹಿಳೆಯರ ಉಡುಗೆಗಳಿಂದ ತಿಳಿದುಬಂದಿದ್ದೇನೆಂದರೆ, ಕೆಲವೊಂದು ಮಹಿಳೆಯರ ಗುಂಪುಗಳಲ್ಲಿ (ವಿಶೇಷವಾಗಿ ತಮ್ಮ ಜೊತೆಗಾರನಿಲ್ಲದೆ ಆ ಸ್ಥಳಕ್ಕೆ ಭೇಟಿ ನೀಡಿದ್ದ ಮಹಿಳೆಯರು) ಲೈಂಗಿಕ ಚಟುವಟಿಕೆ ಮತ್ತು ಲೈಂಗಿಕ ಹಾರ್ಮೋನುಗಳ ಉತ್ತೇಜನಕ್ಕೆ ಕಾರಣವಾಗುವ ಅಂಶಗಳು ಉಡುಪಿನ ಕೆಲವೊಂದು ರೀತಿಗಳಿಗೆ, ವಿಶೇಷವಾಗಿ ಹೆಚ್ಚು ದೇಹಪ್ರದರ್ಶನ ಮಾಡುವಂತಹ ಉಡುಪುಗಳು ಮತ್ತು ಪಾರದರ್ಶಕವಾಗಿರುವಂತಹ ಉಡುಪುಗಳಿಗೆ (ಉದಾ.ತೋಳುಗಳ ಬಳಿ) ಸಹಸಂಬಂಧವನ್ನು ಹೊಂದಿರುತ್ತವೆ. ಆದ್ದರಿಂದ, ಕೆಲವು ಮಟ್ಟಿಗೆ, ಉಡುಗೆತೊಡಿಗೆಗಳು ಪ್ರಣಯಾಸಕ್ತಿಯ ಬಗ್ಗೆ ಸಂಕೇತವನ್ನು ಕಳುಹಿಸುತ್ತವೆ. ದೇಹದ ಎತ್ತರದ ಬಗೆಗಿನ ಅಧ್ಯಯನದಿಂದ ತಿಳಿದುಬಂದಿರುವ ಸಾಮಾನ್ಯ ವಿಷಯವೆಂದರೆ ಎತ್ತರ ನಿಲುವುಳ್ಳ ಜನರನ್ನು ಸಾಮಾನ್ಯವಾಗಿ ಹೆಚ್ಚು ಪ್ರಭಾವಶಾಲಿಗಳೆಂದು ಪರಿಗಣಿಸಲಾಗುತ್ತದೆ. ಮೆಲಾಮೆಡ್ ಮತ್ತು ಬೋಜಿಯೋನ್‌ಲೋಸ್ (1992) ಯುಕೆಯ ಮ್ಯಾನೇಜರುಗಳ ಮಾದರಿಯೊಂದನ್ನು ಅಧ್ಯಯನ ಮಾಡಿ ಯಾರಿಗೆ ಬಡ್ತಿ ನೀಡಬೇಕೆಂಬುದನ್ನು ನಿರ್ಧರಿಸುವಲ್ಲಿ ಎತ್ತರವು ಪ್ರಮುಖ ಅಂಶವಾಗಿತ್ತೆಂದು ಕಂಡುಹಿಡಿದರು. ಸಾಧಾರಣವಾಗಿ ಜನರು ತಾವು ಹೆಚ್ಚು ಎತ್ತರವಾಗಿ ಕಾಣಲು ಪ್ರಯತ್ನಿಸುತ್ತಾರೆ, ಉದಾಹರಣೆಗೆ, ತಮ್ಮ ಮಾತು ಹೆಚ್ಚು ಪರಿಣಾಮ ಬೀರಬೇಕೆಂದಿದ್ದಾಗ ವೇದಿಕೆಯೊಂದರ ಮೇಲೆ ನಿಂತು ಮಾತನಾಡುವುದು.
ದೈಹಿಕ ಪರಿಸರ
ಬದಲಾಯಿಸಿನಮ್ಮ ಸುತ್ತಮುತ್ತಲಿನ ಪರಿಸರದ ಅಂಶಗಳಾದ ಪೀಠೋಪಕರಣಗಳು, ವಾಸ್ತುಶಿಲ್ಪ ವಿನ್ಯಾಸ, ಒಳಾಂಗಣ ಅಲಂಕರಣ, ಬೆಳಕಿನ ಅನುಕೂಲ, ಬಣ್ಣಗಳು, ತಾಪಮಾನ, ಸದ್ದು ಮತ್ತು ಸಂಗೀತಗಳು ಕೂಡ ಭೇಟಿಯೊಂದರ ವೇಳೆಯಲ್ಲಿ ಸಂವಹನಕಾರರ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತವೆ. ಪೀಠೋಪಕರಣಗಳನ್ನು ಕೂಡ ತಮ್ಮಿಂದ ತಾವೇ ಅಮೌಖಿಕ ಸಂದೇಶವನ್ನಾಗಿ ಪರಿಗಣಿಸಬಹುದಾಗಿದೆ.[೧]
ಪ್ರಾಕ್ಸೆಮಿಕ್ಸ್: ಸಂವಹನದಲ್ಲಿ ಭೌತಿಕ ಸ್ಥಳಾವಕಾಶ
ಬದಲಾಯಿಸಿಪ್ರಾಕ್ಸೆಮಿಕ್ಸ್ ಎಂಬುದು ಜನರು ತಮ್ಮ ಸುತ್ತಮುತ್ತಲ ಭೌತಿಕ ಸ್ಥಳಾವಕಾಶವನ್ನು ಯಾವ ರೀತಿ ಬಳಸುತ್ತಾರೆ ಮತ್ತು ಗ್ರಹಿಸುತ್ತಾರೆ ಎನ್ನುವುದರ ಅಧ್ಯಯನವಾಗಿದೆ. ಸಂದೇಶವನ್ನು ಕಳುಹಿಸುವ ವ್ಯಕ್ತಿ ಮತ್ತು ಸಂದೇಶವನ್ನು ಸ್ವೀಕರಿಸುವ ವ್ಯಕ್ತಿಯ ನಡುವಿನ ಸ್ಥಳಾವಕಾಶವು ಸಂದೇಶದ ಗ್ರಹಿಕೆಯ ಮೇಲೆ ಪ್ರಭಾವ ಬೀರುತ್ತದೆ. ಸ್ಥಳಾವಕಾಶದ ಗ್ರಹಿಕೆ ಮತ್ತು ಬಳಕೆಯು ವಿವಿಧ ಸಂಸ್ಕೃತಿಗಳಲ್ಲಿ ಗಮನಾರ್ಹವಾಗಿ ವಿಭಿನ್ನವಾಗಿದೆ[೩] ಮತ್ತು ಸಂಸ್ಕೃತಿಗಳೊಳಗೇ ವಿವಿಧ ಸಂದರ್ಭಗಳಲ್ಲಿ ಬೇರೆಬೇರೆ ರೀತಿಯಲ್ಲಿ ನಡೆಯುತ್ತದೆ. ಅಮೌಖಿಕ ಸಂವಹನದ ಸ್ಥಳಾವಕಾಶವನ್ನು ನಾಲ್ಕು ಪ್ರಮುಖ ಭಾಗಗಳಾಗಿ ವಿಂಗಡಿಸಬಹುದು: ನಿಕಟ, ಸಾಮಾಜಿಕ, ವೈಯುಕ್ತಿಕ ಮತ್ತು ಸಾರ್ವಜನಿಕ ಸ್ಥಳಾವಕಾಶಗಳು. ಟೆರಿಟೋರಿಯಾಲಿಟಿ (ಪ್ರಾದೇಶಿಕತೆ) ಎಂಬ ಪದವನ್ನು ಇಂದಿಗೂ ಪ್ರಾಕ್ಸೆಮಿಕ್ಸ್‌ನ ಅಧ್ಯಯನದಲ್ಲಿ ವೈಯುಕ್ತಿಕ ಸ್ಥಳಾವಕಾಶದ ಬಗೆಗಿನ ಮಾನವ ನಡವಳಿಕೆಯನ್ನು ವಿವರಿಸಲು ಬಳಸಲಾಗುತ್ತದೆ.[೪] ಹಾರ್ಗೀ ಮತ್ತು ಡಿಕ್ಸನ್ (2004, ಪು. 69) ಈ ರೀತಿಯ 4 ಪ್ರದೇಶಗಳನ್ನು ಗುರುತಿಸುತ್ತಾರೆ:
- ಪ್ರಾಥಮಿಕ ಕ್ಷೇತ್ರ: ಇದು ಒಬ್ಬ ವ್ಯಕ್ತಿಯ ಬಳಕೆಗಾಗಿ ಮಾತ್ರ ವಿಶೇಷವಾಗಿ ಮೀಸಲಾಗಿರುವ ಪ್ರದೇಶಕ್ಕೆ ಅನ್ವಯಿಸುತ್ತದೆ. ಉದಾಹರಣೆಗೆ, ಮಾಲೀಕನ ಅನುಮತಿಯಿಲ್ಲದೆ ಯಾರೂ ಪ್ರವೇಶಿಸಲಾಗದ ಒಂದು ಮನೆ.
- ಅನುಷಂಗಿಕ ಕ್ಷೇತ್ರ: ಹಿಂದಿನ ವಿಭಾಗದಂತಿಲ್ಲದ ಇದರಲ್ಲಿ ಯಾವುದೇ ಸ್ವಾಧೀನದ "ಹಕ್ಕು" ಇಲ್ಲ, ಆದರೂ ಜನರಿಗೆ ಒಂದು ವಿಶೇಷ ಸ್ಥಳದ ಕೆಲಮಟ್ಟಿಗಿನ ಒಡೆತನವಾದರೂ ಇದೆಯೆಂಬ ಭಾವನೆಯಿರುವುದು. ಉದಾಹರಣೆಗೆ, ಒಬ್ಬ ವ್ಯಕ್ತಿ ಟ್ರೇನಿನಲ್ಲಿ ಪ್ರತಿದಿನವೂ ಒಂದೇ ಜಾಗದಲ್ಲಿ ಕೂರುತ್ತಿರಬಹುದು, ಮತ್ತು ಆ ಜಾಗವನ್ನು ಇನ್ನಾರಾದರೂ ಆಕ್ರಮಿಸಿದಾಗ ಬಾಧೆಗೊಳಗಾಗಬಹುದು.
- ಸಾರ್ವಜನಿಕ ಕ್ಷೇತ್ರ: ಇದು ಎಲ್ಲ ಜನರಿಗೂ ಲಭ್ಯವಿರುವ ಕ್ಷೇತ್ರವನ್ನು ಸೂಚಿಸುತ್ತದೆ, ಆದರೆ ಇದು ಒಂದು ಕಾಲಘಟ್ಟದವರೆಗೆ ಮಾತ್ರವಾಗಿರುತ್ತದೆ, ಉದಾಹರಣೆಗೆ ಪಾರ್ಕಿಂಗ್ ಸ್ಥಳ ಅಥವಾ ಲೈಬ್ರರಿಯ ಕೂರುವ ಸ್ಥಳ. ಇಂತಹ ಸ್ಥಳಗಳಲ್ಲಿ ಜನರಿಗೆ ಸೀಮಿತ ಒಡೆತನವಿದ್ದರೂ ಕೂಡ ಅವರು ಆಗಾಗ್ಗೆ ಈ ಅವಕಾಶವನ್ನು ಮೀರುತ್ತಲೆ ಇರುತ್ತಾರೆ. ಉದಾಹರಣೆಗೆ, ಯಾರಾದರು ತಮ್ಮ ಪಾರ್ಕಿಂಗ್ ಸ್ಥಳಕ್ಕಾಗಿ ಕಾಯುತ್ತಿದ್ದಾಗ ಆ ಜಾಗದಲ್ಲಿರುವ ಜನರು ಜಾಗವನ್ನು ತೆರವು ಮಾಡಿಕೊಡಲು ಹೆಚ್ಚು ಸಮಯವನ್ನು ವ್ಯಯಿಸುತ್ತಾರೆನ್ನುವುದು ತಿಳಿದುಬಂದಿದೆ.
- ಸಂವಹನ ಕ್ಷೇತ್ರ: ಈ ಕ್ಷೇತ್ರವನ್ನು ಇತರರು ಪರಸ್ಪರ ಸಂವಹನ ನಡೆಸುತ್ತಿರುವಾಗ ರೂಪಿಸಿಕೊಳ್ಳುತ್ತಾರೆ. ಉದಾಹರಣೆಗೆ, ಫುಟ್‌ಪಾತ್‌ನಲ್ಲಿ ಒಂದು ಗುಂಪು ಒಟ್ಟಾಗಿ ಸಂಭಾಷಿಸುತ್ತಿರುವಾಗ, ಇತರರು ಆ ಗುಂಪಿಗೆ ಅಡ್ಡಿಮಾಡುವುದರ ಬದಲಾಗಿ ಅದನ್ನು ಬಳಸಿಕೊಂಡು ಓಡಾಡುತ್ತಾರೆ.
ಕ್ರೋನೆಮಿಕ್ಸ್: ಸಂವಹನದಲ್ಲಿ ಸಮಯ
ಬದಲಾಯಿಸಿಕ್ರೋನೆಮಿಕ್ಸ್ ಎಂಬುದು ಅಮೌಖಿಕ ಸಂವಹನದಲ್ಲಿ ಸಮಯದ ಬಳಕೆಯ ಅಧ್ಯಯನವಾಗಿದೆ. ನಾವು ಸಮಯವನ್ನು ಗ್ರಹಿಸುವ ರೀತಿ, ನಮ್ಮ ಸಮಯವನ್ನು ವ್ಯವಸ್ಥಿತಗೊಳಿಸುವ ರೀತಿ ಮತ್ತು ಸಮಯಕ್ಕೆ ಪ್ರತಿಕ್ರಿಯಿಸುವ ರೀತಿಗಳು ಬಹಳ ಬಲಿಷ್ಠವಾದ ಸಂವಹನ ಸಾಧನವಾಗಿದೆ, ಮತ್ತು ಸಂವಹನಕ್ಕೆ ವೇದಿಕೆಯನ್ನು ಕಲ್ಪಿಸಿಕೊಡುವಲ್ಲಿ ಸಹಕಾರಿಯಾಗಿದೆ. ಸಮಯದ ಗ್ರಹಿಕೆಗಳು ಕಾಲನಿಷ್ಠೆ ಮತ್ತು ಕಾಯುವ ತಾಳ್ಮೆ,ಮಾತಿನ ವೇಗ ಮತ್ತು ಜನರು ಎಷ್ಟು ಸಮಯದವರೆಗೆ ಕೇಳಲು ಸಿದ್ಧರಿರುವರೆಂಬುದನ್ನು ಒಳಗೊಂಡಿವೆ. ಕ್ರಿಯೆಯೊಂದರ ನಡೆಯುವ ಸಮಯ ಮತ್ತು ಪುನರಾವರ್ತನೆ ಮತ್ತು ಜತೆಜತೆಗೇ ಪ್ರತಿಕ್ರಿಯೆಯೊಂದರೊಳಗಿನ ಸಂವಹನಗಳ ಗತಿ ಮತ್ತು ಲಯಬದ್ಧತೆಗಳು ಅಮೌಖಿಕ ಸಂದೇಶಗಳ ವ್ಯಾಖ್ಯಾನಕ್ಕೆ ನೆರವಾಗುತ್ತದೆ. ಗುಡಿಕುನ್‌ಸ್ಟ್ ಮತ್ತು ಟಿಂಗ್-ಟೂಮಿ (1988) ಎರಡು ಪ್ರಮುಖ ಸಮಯದ ಮಾದರಿಗಳನ್ನು ಗುರುತಿಸಿದನು: ಮೋನೋಕ್ರೋನಿಕ್ ಸಮಯ ಮೋನೋಕ್ರೋನಿಕ್ ಸಮಯವೆಂದರೆ ಕೆಲಸಗಳನ್ನು ಒಂದರ ನಂತರ ಇನ್ನೊಂದರಂತೆ ಮಾಡಲಾಗುವುದು ಮತ್ತು ಸಮಯವನ್ನು ನಿಖರವಾದ, ಸಣ್ಣ ಘಟಕಗಳನ್ನಾಗಿ ಭಾಗಮಾಡಲಾಗುವುದೆಂದು ಅರ್ಥ. ಈ ವ್ಯವಸ್ಥೆಯೊಳಗೆ ಸಮಯವನ್ನು ಅನುಸೂಚಿತಗೊಳಿಸಲಾಗುವುದು, ವ್ಯವಸ್ಥಿತಗೊಳಿಸಲಾಗುವುದು ಮತ್ತು ನಿರ್ವಹಿಸಲಾಗುವುದು. ಯುನೈಟೆಡ್ ಸ್ಟೇಟ್ಸ್ ಅನ್ನು ಒಂದು ಮಾನೋಕ್ರೊಮ್ಯಾಟಿಕ್ ಸಮಾಜವೆಂದು ಪರಿಗಣಿಸಲಾಗುತ್ತದೆ. ಸಮಯದ ಈ ಗ್ರಹಿಕೆಯು ಔದ್ಯಮಿಕ ಕ್ರಾಂತಿಯನ್ನು ಆಧರಿಸಿದ್ದು, ಅಲ್ಲಿ "ಫ್ಯಾಕ್ಟರಿ ಜೀವನದಲ್ಲಿ ಕಾರ್ಮಿಕಬಲವು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ, ಆ ಜಾಗದಲ್ಲಿ ಲಭ್ಯವಿರುವುದು ಅವಶ್ಯಕವಾಗಿದ್ದಿತು." (ಗೆರೆರೊ, ಡಿವಿಟೋ ಮತ್ತು ಹೆಶ್ತ್, 1999, ಪು. 238). ಅಮೆರಿಕನ್ನರಿಗೆ ಸಮಯವು ಪೋಲುಮಾಡಬಾರದ ಇಲ್ಲವೆ ಲಘುವಾಗಿ ತೆಗೆದುಕೊಳ್ಳಬಾರದಾದ ಅತ್ಯಮೂಲ್ಯ ಸಂಪನ್ಮೂಲವಾಗಿದೆ. "ನಾವು ಸಮಯವನ್ನು ಕೊಳ್ಳುತ್ತೇವೆ, ಸಮಯವನ್ನು ಉಳಿಸುತ್ತೇವೆ, ಸಮಯವನ್ನು ವ್ಯಯಿಸುತ್ತೇವೆ ಮತ್ತು ಸಮಯ ಮಾಡಿಕೊಳ್ಳುತ್ತೇವೆ. ನಮ್ಮ ಸಮಯವನ್ನು ವರ್ಷಗಳು, ತಿಂಗಳುಗಳು, ದಿನಗಳು, ಗಂಟೆಗಳು, ನಿಮಿಷಗಳು, ಸೆಕೆಂಡುಗಳು ಮತ್ತು ಮಿಲಿಸೆಕೆಂಡುಗಳನ್ನಾಗಿ ಕೂಡ ವಿಭಾಗಿಸಬಹುದು. ನಾವು ಸಮಯವನ್ನು ನಮ್ಮ ದೈನಂದಿನ ಜೀವನ ಮತ್ತು ಭವಿಷ್ಯದ ಯೋಜನೆಗಳನ್ನ್ನುರೂಪಿಸುವುದಕ್ಕಾಗಿ ಬಳಸಿಕೊಳ್ಳುತ್ತೇವೆ. ನಮಗೆ ನಾವು ನಡೆದುಕೊಳ್ಳಲೇಬೇಕಾದ ನಿರ್ಧಾರಿತ ಕೆಲಸಗಳಿವೆ; ನಿಖರವಾದ ಸಮಯಕ್ಕೆ ನಡೆಯಬೇಕಾದ ಭೇಟಿಗಳಿವೆ, ನಿಗದಿಯಾದ ಸಮಯಕ್ಕೆ ಆರಂಭವಾಗಿ ಮುಗಿಯುವ ತರಗತಿಗಳಿವೆ, ಮತ್ತು ನಮ್ಮ ಮೆಚ್ಚಿನ ಟಿ.ವಿ. ಶೋಗಳೂ ಸಹ ಒಂದು ಸರಿಯಾದ ಸಮಯಕ್ಕೆ ಆರಂಭವಾಗಿ ಸರಿಯಾದ ಸಮಯಕ್ಕೇ ಮುಗಿಯುತ್ತವೆ.” ಸಂವಹನ ಪಂಡಿತರಾದ ಎಡ್ವರ್ಡ್ ಟಿ. ಹಾಲ್ ಔದ್ಯಮಿಕ ಪ್ರಪಂಚದಲ್ಲಿ ಸಮಯದ ಬಗ್ಗೆ ಅಮೆರಿಕನ್ ದೃಷ್ಟಿಕೋನದ ಬಗ್ಗೆ ಈ ರೀತಿಯಾಗಿ ಬರೆದಿದ್ದಾರೆ, "ವೇಳಾಸೂಚಿಯು ಪವಿತ್ರವಾದದ್ದು." ಹಾಲ್‌ರ ಪ್ರಕಾರ ಅಮೆರಿಕನ್ ಸಂಸ್ಕೃತಿಯಂತಹ ಮಾನೋ ಕ್ರೊಮ್ಯಾಟಿಕ್ ಸಂಸ್ಕೃತಿಗಳಲ್ಲಿ, " ಸಮಯವು ಮೂರ್ತರೂಪದ್ದಾಗಿದೆ" ಮತ್ತು ಇದನ್ನು "ಸಮಯವೇ ಧನ" ಅಥವಾ "ಸಮಯವನ್ನು ಪೋಲುಮಾಡಲಾಗುತ್ತದೆ" ಎಂದು ಮುಂತಾಗಿ ಹೇಳುವುದರ ಮೂಲಕ ಒಂದು ಸರಕಿನಂತೆ ಕಾಣಲಾಗುತ್ತದೆ. ಈ ದೃಷ್ತಿಕೋನದ ಪರಿಣಾವೇನೆಂದರೆ, ಅಮೆರಿಕನ್ನರು ಮತ್ತು ಜರ್ಮನ್ ಮತ್ತು ಸ್ವಿಸ್ ನಂತಹ ಇತರ ಮೋನೋಕ್ರೊಮ್ಯಾಟಿಕ್ ಸಂಸ್ಕೃತಿಗಳಲ್ಲಿ ವೇಳಾಸೂಚಿಗೆ, ಕೆಲಸಗಳಿಗೆ ಮತ್ತು "ಕೆಲಸವನ್ನು ಮುಗಿಸುವುದಕ್ಕೆ" ಸರ್ವೋತ್ಖೃಷ್ಟ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಈ ಸಂಸ್ಕೃತಿಗಳು ವ್ಯವಸ್ಥಿತವಾದ ವೇಳಾಸುಚಿಗಳಿಗೆ ಬದ್ಧವಾಗಿರುತ್ತವೆ ಮತ್ತು ಈ ರೀತಿಯ ಸಮಯದ ಗ್ರಹಿಕೆಗಳಿಗೆ ಯಾರು ಬದ್ಧರಾಗಿಲ್ಲವೋ ಅವರನ್ನು ಅಗೌರವ ತೋರಿಸುತ್ತಿದ್ದಾರೆಂಬಂತೆ ಭಾವಿಸಲಾಗುತ್ತದೆ. ಜರ್ಮನಿ, ಕೆನಡಾ, ಸ್ವಿಜರ್ಲ್ಯಾಂಡ್, ಯುನೈಟೆಡ್ ಸ್ಟೇಟ್ಸ್ ಮತ್ತು ಸ್ಕ್ಯಾಂಡಿನೇವಿಯಾಗಳು ಮೋನೋಕ್ರೊಮ್ಯಾಟಿಕ್ ಸಂಸ್ಕೃತಿಗಳ ದೇಶಗಳಾಗಿವೆ. [edit] ಪಾಲಿಕ್ರೋನಿಕ್ ಸಮಯ ಮುಖ್ಯ ಲೇಖನ: ಪಾಲಿಕ್ರಾನಿಸಿಟಿ ಪಾಲಿಕ್ರಾನಿಕ್ ಸಮಯ ವ್ಯವಸ್ಥೆಯಲ್ಲಿ ಹಲವಾರಿ ಕೆಲಸಕಾರ್ಯಗಳನ್ನು ಒಟ್ಟಿಗೇ ಮಾಡಬಹುದಾಗಿದ್ದು, ಸಮಯದ ವೇಳಾಸೂಚಿಯ ರಚನೆಯ ಬಗ್ಗೆ ಅಷ್ಟೇನೂ ದೃಢವಲ್ಲದ ನೀತಿಯನ್ನು ಅನುಸರಿಸಲಾಗುತ್ತದೆ. ಅಮೆರಿಕನ್ ಮತ್ತು ಹೆಚ್ಚಿನ ಉತ್ತರ ಹಾಗೂ ಪಶ್ಚಿಮ ಯುರೋಪಿಯನ್ ಸಂಸ್ಕೃತಿಗಳಂತಲ್ಲದೆ, ಲ್ಯಾಟಿನ್ ಅಮೆರಿಕನ್ ಮತ್ತು ಅರೇಬಿಕ್ ಸಂಸ್ಕೃತಿಗಳು ಪಾಲಿಕ್ರೋನಿಕ್ ಸಮಯವ್ಯವಸ್ಥೆಯನ್ನು ಬಳಸುತ್ತವೆ.
ಈ ಸಂಸ್ಕೃತಿಗಳು ಪ್ರತಿಯೊಂದು ಘಳಿಗೆಯ ಲೆಕ್ಕಾಚಾರವನ್ನೂ ನಿಖರವಾಗಿ ಮಾಡುವುದರ ಬಗ್ಗೆ ಕಡಿಮೆ ಗಮನ ಹರಿಸುವಂಥವಾಗಿವೆ. ರೇಮಂಡ್ ಕೊಹೆನ್‌ರ ಪ್ರಕಾರ ಪಾಲಿಕ್ರೋನಿಕ್ ಸಂಸ್ಕೃತಿಗಳು ಮಾಡಬೇಕಿರುವ ಕೆಲಸಗಳಿಗಿಂತ ಹೆಚ್ಚಾಗಿ ತಮ್ಮ ಸಂಪ್ರದಾಯಗಳಲ್ಲಿಯೇ ಮುಳುಗಿಹೋಗಿರುತ್ತವೆ - ಮತ್ತು ಇದು ಮಾನೋಕ್ರೊಮ್ಯಾಟಿಕ್ ಸಮಸ್ಥಾನಿಕರಿಗೆ ಹೋಲಿಸಿದರೆ ಕಂಡುಬರುವ ಪ್ರಮುಖ ವ್ಯತ್ಯಾಸವಾಗಿದೆ. ಹೆನ್‌ರ ಪ್ರಕಾರ "ಸಾಂಪ್ರದಾಯಿಕ ಸಮಾಜಗಳಿಗೆ ಸಮಯದ ಕೊರತೆಯೇ ಇರುವುದಿಲ್ಲ. ಗಡಿಯಾರದ ಕಟ್ಟಳೆಯಿಲ್ಲದ ವಿಭಾಗಗಳಿಗೆ ಋತುಚಕ್ರಗಳನ್ನು ಆಧರಿಸಿದ ಸಂಸ್ಕೃತಿಗಳಲ್ಲಿ, ಬದಲಾಗದ ವಿನ್ಯಾಸವುಳ್ಳ ಗ್ರಾಮೀಣ ಜೀವನದಲ್ಲಿ, ಮತ್ತು ಧಾರ್ಮಿಕ ಆಚರಣೆಗಳಿಂದ ತುಂಬಿರುವ ಕ್ಯಾಲೆಂಡರ್‌ನಲ್ಲಿ ಬಹಳ ಕಡಿಮೆ ಪ್ರಾಮುಖ್ಯತೆ ದೊರಕುತ್ತದೆ" (ಕೊಹೆನ್, 1997, ಪು. 34).
ಇದರ ಬದಲಾಗಿ, ಅವರ ಸಂಸ್ಕೃತಿಗಳು ಗಡಿಯಾರವನ್ನು ನೋಡುವುದರ ಬದಲು ಸಂಬಂಧಗಳ ಬಗ್ಗೆ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ತಮ್ಮ ಕುಟುಂಬ ಮತ್ತು ಮಿತ್ರರೊಂದಿಗಿದ್ದಾಗ ಯಾವುದೇ ಕಾರ್ಯಕ್ರಮಕ್ಕೆ "ತಡ"ವಾಗಿ ಹೋಗುವುದರ ಬಗ್ಗೆ ಇವರಿಗೆ ಯಾವುದೇ ತೊಮ್ದರೆಯಿಲ್ಲ, ಏಕೆಮ್ದರೆ ಇವರಿಗೆ ಸಂಬಂಧಗಳೇ ಬಹಳ ಮುಖ್ಯವಾಗಿರುತ್ತವೆ. ಪರಿಣಾಮವಾಗಿ, ಪಾಲಿಕ್ರೋನಿಕ್ ಸಂಸ್ಕೃತಿಗಳಲ್ಲಿ ಸಮಯದ ವಿಧ್ಯುಕ್ತ ಗ್ರಹಿಕೆಯು ಬಹಳ ಕಡಿಮೆಯಿರುತ್ತದೆ. ಅವರನ್ನು ನಿಖರವಾದ ಕ್ಯಾಲೆಂಡರುಗಳು ಮತ್ತು ವೇಳಾಸೂಚಿಗಳು ಆಳುವುದಿಲ್ಲ. ಅಲ್ಲದೆ, “ಪಾಲಿಕ್ರೋನಿಕ್ ಸಮಯ ವ್ಯವಸ್ಥೆಯನ್ನು ಅಧರಿಸಿರುವ ಸಂಸ್ಕೃತಿಗಳು ಒಂದೇ ವೇಳೆಗೆ ಹಲವಾರು ಭೇಟಿಗಳನ್ನು, ಕೆಲಸಕಾರ್ಯಗಳನ್ನು ನಿಗದಿಪಡಿಸುವುದರಿಂದಾಗಿ ಒಂದು ವೇಳಾಸೂಚಿಯ ಪ್ರಕಾರ ನಡೆಯುವುದು ಅಸಾಧ್ಯ ಕೆಲಸ.” ಸೌದಿ ಅರೇಬಿಯಾ, ಈಜಿಪ್ಟ್, ಮೆಕ್ಸಿಕೋ, ಫಿಲಿಪೈನ್ಸ್, ಭಾರತ ಮತ್ತು ಆಫ್ರಿಕಾದ ಹಲವಾರು ರಾಷ್ಟ್ರಗಳು ಪಾಲಿಕ್ರಾನಿಕ್ ಸಂಸ್ಕೃತಿಗಳಾಗಿವೆ.
ಚಲನೆ ಮತ್ತು ದೇಹದ ಭಂಗಿ
ಬದಲಾಯಿಸಿಕೈನೆಸಿಕ್ಸ್
ಬದಲಾಯಿಸಿಈ ಪದವನ್ನು ಮೊದಲ ಬಾರಿಗೆ (1952ರಲ್ಲಿ) ಜನರು ತಮ್ಮ ನಿಲುವು, ಸಂಜ್ಞೆ, ಭಂಗಿ ಮತ್ತು ಚಲನೆಗಳ ಮೂಲಕ ಯಾವ ರೀತಿ ಸಂವಹನ ನಡೆಸುವರೆಂದು ಅಧ್ಯಯನ ಮಾಡಲೆಳಸಿದ ರೇ ಬರ್ಡ್‌ವ್ಹಿಸ್ಟೆಲ್ ಎಂಬ ಮಾನವಶಾಸ್ತ್ರಜ್ಞರೊಬ್ಬರು ಬಳಸಿದರು. ಬರ್ಡ್‌ವ್ಹಿಸ್ಟೆಲ್‌ನ ಅಧ್ಯಯನದ ಕೆಲಭಾಗವು ಸಾಮಾಜಿಕ ಸನ್ನಿವೇಶಗಳಲ್ಲಿ ಜನರು ಭಾಗಿಯಾಗಿರುವುದನ್ನು ಚಿತ್ರೀಕರಿಸುವುದು ಮತ್ತು ಸಾಮಾನ್ಯವಾಗಿ ಸುಲಭವಾಗಿ ಕಂಡುಬರದ ಹಲವಾರು ಸ್ತರದ ಸಂವಹನಗಳನ್ನು ತೋರಿಸುವ ಸಲುವಾಗಿ ಅವನ್ನು ವಿಶ್ಲೇಷಿಸುವುದನ್ನು ಒಳಗೊಂಡಿದ್ದಿತು. ಈ ಅಧ್ಯಯನಕ್ಕೆ ಮಾರ್ಗರೆಟ್ ಮೀಡ್ ಮತ್ತು ಗ್ರೆಗರಿ ಬೇಟ್‌ಸನ್ ಮೊದಲಾದ ಹಲವಾರು ಮಾನವಶಾಸ್ತ್ರಜ್ಞರು ಸೇರಿಕೊಂಡರು.
ಶಾರೀರಿಕ ನಿಲುವು
ಬದಲಾಯಿಸಿಶಾರೀರಿಕ ನಿಲುವನ್ನು ಭಾಗವಹಿಸುವವರ ಗಮನದ ಮಟ್ಟ ಮತ್ತು ತೊಡಗಿಕೊಂಡಿರುವುದರ ಬಗ್ಗ್ರೆ, ಸಂವಹನಕಾರರ ಸ್ಥಾನಮಾನಗಳ ಭಿನ್ನತೆಗಳ ಬಗ್ಗೆ, ಹಾಗೂ ತಾನು ಸಂವಹನ ಮಾಡುತ್ತಿರುವವರೊಂದಿಗೆ ಒಬ್ಬ ವ್ಯಕ್ತಿಯ ಅಕ್ಕರೆಯ ಮಟ್ಟದ ಬಗ್ಗೆ ನಿರ್ಣಯಕ್ಕೆ ಬರಲು ಬಳಸಲಾಗುತ್ತದೆ.[೫] ಪರಸ್ಪರ ಸಂಬಂಧಗಳ ಮೇಲೆ ದೈಹಿಕ ನಿಲುವಿನ ಪರಿಣಾಮವನ್ನು ಅಭ್ಯಸಿಸುವ ಅಧ್ಯಯನಗಳ ಪ್ರಕಾರ, ಒಬ್ಬ ವ್ಯಕ್ತಿಯ ಎಡಭಾಗವು ಇನ್ನೊಬ್ಬ ವ್ಯಕ್ತಿಯ ಬಲಭಾಗಕ್ಕೆ ಸಮಾನಂತರವಾಗಿರುವಂತಹ ರೀತಿಯ ಪ್ರತಿಬಿಂಬಿತವಾಗಿ ಸರ್ವಸಮವಾಗಿರುವ ಶಾರೀರಿಕ ನಿಲುವುಗಳು ಸಂವಹನಕಾರರಲ್ಲಿ ಅನುಕೂಲಕರವಾದ, ಧನಾತ್ಮಕ ಮಾತುಕತೆಗೆ ಅವಕಾಶ ಮಾಡಿಕೊಡುತ್ತವೆಂದೂ, ಮುಂದಕ್ಕೆ ಬಗ್ಗುವ ವ್ಯಕ್ತಿ ಅಥವಾ ಹಿಂಭಾಗಕ್ಕೆ ಬಗ್ಗುವುದನ್ನು ಕಡಿಮೆಮಾಡುವ ವ್ಯಕ್ತಿಯು ಸಂವಹನದಲ್ಲಿ ಧನಾತ್ಮಕ ಮನೋಭಾವವನ್ನು ತೋರುವಂತೆ ಕಂಡುಬರುವುದಾಗಿಯೂ ಸೂಚಿಸುತ್ತವೆ.[೬] ದೇಹದ ಬಾಗುವಿಕೆಯ ದಿಕ್ಕು, ದೇಹದ ನಿಲುವು, ಭುಜದ ಸ್ಥಾನ ಮತ್ತು ದೇಹದ ಮುಕ್ತಭಾವಗಳಂತಹ ಸೂಚಕಗಳಿಂದ ಶಾರೀರಿಕ ನಿಲುವನ್ನು ಗ್ರಹಿಸಲಾಗುತ್ತದೆ.
ಸನ್ನೆ
ಬದಲಾಯಿಸಿಸನ್ನೆಯು ಅರ್ಥವನ್ನು ವ್ಯಕ್ತಪಡಿಸುವ ಇಂಗಿತವನ್ನು ಹೊಂದಿರುವ ಧ್ವನಿರಹಿತ ದೈಹಿಕ ಚಲನೆಯಾಗಿದೆ. ಇದನ್ನು ಕೈಗಳು, ಭುಜಗಳು ಇಲ್ಲವೇ ಇಡೀ ದೇಹವನ್ನು ಬಳಸಿಯೂ ವ್ಯಕ್ತಪಡಿಸಬಹುದು, ಮತ್ತು ಇದು ತಲೆ, ಮುಖ ಮತ್ತು ಕಣ್ಣುಗಳ ಚಲನೆಗಳಾದ ಕಣ್ಣು ಮಿಟೂಕಿಸುವಿಕೆ, ತಲೆದೂಗುವಿಕೆ, ಕಣ್ಣು ತಿರುಗಿಸುವಿಕೆ ಮುಂತಾದ ಚಲನೆಗಳನ್ನೂ ಕೂಡ ಒಳಗೊಂಡಿದೆ. ಭಾಷೆ ಮತ್ತು ಸನ್ನೆಗಳ, ಅಥವಾ ಮೌಖಿಕ ಮತ್ತು ಅಮೌಖಿಕ ಸಂವಹನಗಳ ನಡುವಿನ ಎಲ್ಲೆಯನ್ನು ಗುರುತಿಸುವುದು ಬಹಳ ಕಷ್ಟಸಾಧ್ಯವಾದ ಕೆಲಸ.
ಸನ್ನೆಗಳ ಬಗೆಗಿನ ಅಧ್ಯಯನವು ಇನ್ನೂ ಶೈಶವಾವಸ್ಥೆಯಲ್ಲಿರುವುದಾದರೂ, ಸನ್ನೆಗಳ ಕೆಲವು ಹಿರಿಯ ವಿಭಾಗಗಳನ್ನು ಅಧ್ಯಯನಕಾರರು ಗುರುತಿಸಿದ್ದಾರೆ. ಇವುಗಳಲ್ಲಿ ಅತ್ಯಂತ ಪರಿಚಿತವಾದುವೆಂದರೆ ಲಾಂಛನಗಳು ಅಥವಾ ಉಲ್ಲೇಖಿಸಬಹುದಾದ ಸನ್ನೆಗಳು. ಇವು ಸಾಂಪ್ರದಾಯಿಕವಾದ, ಸಂಸ್ಕೃತಿ-ನಿರ್ದಿಷ್ಟ ಸನ್ನೆಗಳಾಗಿದ್ದು, ಇವನ್ನು ಪದಗಳಿಗೆ ಬದಲಾಗಿ ಬಳಸಬಹುದಾಗಿದೆ; ಉದಾಹರಣೆಗೆ ಯುಎಸ್‌ನಲ್ಲಿ ಕೈಬೀಸುವುದನ್ನು "ಹೆಲೋ" ಅಥವಾ "ಶುಭ ವಿದಾಯ" ಹೇಳಲು ಬಳಸಲಾಗುತ್ತದೆ. ಒಂದು ಲಾಂಛನರೀತಿಯ ಸನ್ನೆಯು ವಿವಿಧ ಸಾಂಸ್ಕೃತಿಕ ಸಂದರ್ಭಗಳಲ್ಲಿ ವಿಭಿನ್ನ ಮಹತ್ವವನ್ನು ಪಡೆದುಕೊಳ್ಳಬಹುದು, ಮತ್ತು ಈ ವಿಭಿನ್ನತೆಯು ಶ್ಲಾಘನೀಯ ರೀತಿಯದರಿಂದ ಆರಂಭವಾಗಿ ಅವಮಾನಕರ ರೀತಿಯವರೆಗೂ ಹೋಗಬಹುದು ಸನ್ನೆಗಳ ಪಟ್ಟಿಯ ಪುಟವು ಒಂದು ಕೈ, ಎರಡು ಕೈಗಳು ಮತ್ತಿತರ ದೇಹದ ಭಾಗಗಳಿಂದ ಮಾಡಲಾಗುವ ಲಾಂಛನರೂಪದ ಸನ್ನೆಗಳು, ಹಾಗೂ ದೈಹಿಕ ಮತ್ತು ಮೌಖಿಕ ಸನ್ನೆಗಳ ಬಗ್ಗೆ ಚರ್ಚಿಸುತ್ತದೆ. ಸನ್ನೆಗಳ ಇನ್ನೊಂದು ಸ್ಥೂಲವಾದ ವರ್ಗವು ನಾವು ಮಾತನಾಡುವಾಗ ಅಪ್ರಯತ್ನಪೂರ್ವಕವಾಗಿ ಬಳಸುವ ಸನ್ನೆಗಳನ್ನು ಒಳಗೊಂಡಿದೆ. ಈ ಸನ್ನೆಗಳು ಮಾತಿನೊಡನೆ ನಿಕಟವಾದ ಅನ್ಯೋನ್ಯತೆಯ ಸಂಬಂಧವನ್ನು ಹೊಂದಿವೆ. ”ಬೀಟ್ ಸನ್ನೆ’ಗಳೆಂದು ಕರೆಯಲಾಗುವ ಸನ್ನೆಗಳನ್ನು ಮಾತಿನೊಡನೆ ಸಂಯೋಗವಿರುವಂತೆ ಬಳಸಲಾಗುತ್ತದೆ ಮತ್ತು ಕೆಲವೊಂದು ಪದಗಳು ಮತ್ತು ನುಡಿಗಟ್ಟುಗಳನ್ನು ಒತ್ತಿಹೇಳುವ ಸಲುವಾಗಿ ಮಾತಿನ ಲಯಬದ್ಧತೆಯ ಸಮಯದೊಂದಿಗೆ ಹೊಂದಿಕೊಂಡು ಹೋಗಲು ಉಪಯೋಗಿಸಲಾಗುತ್ತದೆ. ಈ ರೀತಿಯ ಸನ್ನೆಗಳು ಮಾತು ಮತ್ತು ಯೋಚನಾ ವಿಧಾನಗಳಿಗೆ ಸಮಗ್ರವಾದ ಸಂಪರ್ಕವನ್ನು ಹೊಂದಿರುತ್ತವೆ.[10] ನಾವು ಮಾತನಾಡುವಾಗ ಬಳಸುವ ಇತರ ಅಪ್ರಯತ್ನಿತ ಸನ್ನೆಗಳು ಹೆಚ್ಚು ವಿಷಯಪೂರ್ಣವಾಗಿರುತ್ತವೆ ಮತ್ತು ಇವು ಪ್ರಾಯಶಃ ಜತೆಗೆ ನಡೆಯುವ ಮಾತಿನ ಅರ್ಥವನ್ನು ಪ್ರತಿಧ್ವನಿಸಬಹುದು ಇಲ್ಲವೇ ವಿಸ್ತರಿಸಬಹುದು.ಉದಾಹರಣೆಗೆ, ಎಸೆಯುವ ಕ್ರಿಯೆಯನ್ನು ವ್ಯಕ್ತಗೊಳಿಸುವ ಸನ್ನೆಯೊಂದು "ಅವನು ಚೆಂಡನ್ನು ನೇರವಾಗಿ ಕಿಟಕಿಗೇ ಬೀಸಿ ಒಗೆದನು" ಎಂಬ ಮಾತಿನ ಜತೆಗೆ ಮೇಳೈಸಬಹುದು.
ಸನ್ನೆಯ ಭಾಷೆಗಳಾದ ಅಮೆರಿಕನ್ ಸೈನ್ ಲ್ಯಾಂಗ್ವೇಜ್ ಮತ್ತು ಅದರ ಸ್ಥಳೀಯ ಸೋದರ ಭಾಷೆಗಳು ತಮ್ಮ ಕಾರ್ಯನಿರ್ವಹಣಾ ಪದ್ಧತಿಯಲ್ಲಿ ಸನ್ನೆಗಳನ್ನು ಬಳಸುವ ಸಂಪೂರ್ಣ ಸ್ವಾಭಾವಿಕ ಭಾಷೆಗಳಂತೆಯೇ ಕೆಲಸ ಮಾಡುತ್ತವೆ. ಇವನ್ನು ಒಂದು ಅಕ್ಷರವನ್ನು ಪ್ರಸ್ತುತಪಡಿಸಲು ಲಾಂಛನರೂಪದ ಸನ್ನೆಗಳ ಸಮೂಹವನ್ನು ಬಳಸುವ ಬೆರಳ ಕಾಗುಣಿತ(ಫಿಂಗರ್ ಸ್ಪೆಲ್ಲಿಂಗ್)ದೊಂದಿಗೆ ಹೋಲಿಸಿ ಗೊಂದಲಪಟ್ಟುಕೊಳ್ಳಬಾರದು.
ಸನ್ನೆಗಳನ್ನು ಮಾತಿಗೆ ಹೊರತಾದ ಇಲ್ಲವೇ ಮಾತಿಗೆ ಸಂಬಂಧಿಸಿದ ಸನ್ನೆಗಳು ಎಂದೂ ವಿಭಾಗಿಸಬಹುದು. ಮಾತಿಗೆ ಹೊರತಾದ ಸನ್ನೆಗಳು ಸಾಂಸ್ಕೃತಿಕವಾಗಿ ಒಪ್ಪಿತವಾದ ವ್ಯಾಖ್ಯಾನಗಳನ್ನು ಅವಲಂಬಿಸಿವೆ ಮತ್ತು ನೇರವಾದ ಮೌಖಿಕ ಅನುವಾದವನ್ನು ಹೊಂದಿರುತ್ತವೆ.[೭] ಹೆಲೊ ಎಂದು ಸೂಚಿಸುವ ಕೈಬೀಸುವಿಕೆ ಮತ್ತು ಶಾಂತಿಯ ಸನ್ನೆಗಳು ಮಾತನ್ನು ಹೊರತುಪಡಿಸಿದ ಸನ್ನೆಗಳಿಗೆ ಉದಾಹರಣೆಗಳಾಗಿವೆ. ಮಾತಿಗೆ ಸಂಬಂಧಿಸಿದ ಸನ್ನೆಗಳನ್ನು ಮೌಖಿಕ ನುಡಿಗೆ ಸಮಾನಾಂತರವಾಗಿ ಬಳಸಲಾಗುತ್ತದೆ; ಈ ರೀತಿಯ ಅಮೌಖಿಕ ಸಂವಹನವನ್ನು ನೀಡಲಾಗುತ್ತಿರುವ ಸಂದೇಶವನ್ನು ಒತ್ತಿಹೇಳಲು ಬಳಸಲಾಗುತ್ತದೆ. ಮಾತಿಗೆ ಸಂಬಂಧಿಸಿದ ಸನ್ನೆಗಳ ಉದ್ದೇಶವು ಮೌಖಿಕವಾದ ಸಂದೇಶವೊಂದಕ್ಕೆ ಪೂರಕ ಮಾಹಿತಿಯನ್ನು ನೀಡುವುದಾಗಿರುತ್ತದೆ, ಉದಾಹರಣೆಗೆ ಚರ್ಚೆಯ ವಸ್ತುವಿನೆಡೆಗೆ ಬೆರಳುಮಾಡಿ ತೋರುವುದು.
ಮುದ್ರಾ (ಸಂಸ್ಕೃತ)ದಂತಹ ಸನ್ನೆಗಳು ತಮ್ಮ ಸಂಪ್ರದಾಯದಲ್ಲಿ ಬೇರೂರಿರುವ ಅಂಶಗಳ ವೈಶಿಷ್ಟ್ಯತೆಗಳ ಒಳಗುಟ್ಟುಗಳ ಸೂಕ್ಷ್ಮಾಭಿರುಚಿಯ ಮಾಹಿತಿ ಪಡೆಯಲು ದೀಕ್ಷೆ ಪಡೆದಿರುವವರಿಗೆ ಲಭ್ಯವಿರುವಂತಹವು.
ಹ್ಯಾಪ್ಟಿಕ್ಸ್: ಸಂವಹನದಲ್ಲಿ ಸ್ಪರ್ಶ
ಬದಲಾಯಿಸಿಹ್ಯಾಪ್ಟಿಕ್ ಸಂವಹನವೆಂದರೆ ಜನರು ಮತ್ತು ಇತರ ಪ್ರಾಣಿಗಳು ಸ್ಪರ್ಶದ ಮೂಲಕ ಸಂವಹನ ನಡೆಸುವುದರ ವಿಧಾನ. ಸ್ಪರ್ಶವು ಮನುಷ್ಯವರ್ಗಕ್ಕೆ ಅತ್ಯಂತ ಮುಖ್ಯವಾದ ಇಂದ್ರಿಯವಾಗಿದೆ; ಮೇಲ್ಮೈಗಳು ಮತ್ತು ರಚನಾಗುಣದ ಬಗ್ಗೆ ಮಾಹಿತಿ ನೀಡುವುದಷ್ಟೇ ಅಲ್ಲ, ಇದು ಪರಸ್ಪರ ವೈಯುಕ್ತಿಕ ಸಂಬಂಧಗಳಲ್ಲಿ ಅಮೌಖಿಕ ಸಂವಹನದ ಒಂದು ಘಟಕವೂ ಆಗಿದೆ, ಮತ್ತು ದೈಹಿಕ ಆಪ್ತತೆಯನ್ನು ವ್ಯಕ್ತಪಡಿಸುವಲ್ಲಿ ಅತ್ಯಂತ ಪ್ರಮುಖ ಸಾಧನವೂ ಆಗಿದೆ. ಇದು ಲೈಂಗಿಕವೂ ಆಗಿರಬಹುದು (ಚುಂಬಿಸುವುದು) ಇಲ್ಲವೇ ನಿಷ್ಕಾಮವಾಗಿರಬಹುದು (ಅಪ್ಪಿಕೊಳ್ಳುವುದು ಇಲ್ಲವೇ ಕಚಗುಳಿಯಿಡುವುದು). ಭ್ರೂಣಾವಸ್ಥೆಯಲ್ಲಿರುವಾಗಲೇ ಮೊದಲು ಸ್ಪರ್ಶದ ಅರಿವು ಉಂಟಾಗುತ್ತದೆ. ಮಗುವಿನ ಸ್ಪರ್ಶೇಂದ್ರಿಯಗಳ ಬೆಳವಣಿಗೆ ಮತ್ತು ಅದು ದೃಷ್ಟಿ ಸಾಮರ್ಥ್ಯವೇ ಮೊದಲಾದ ಇತರ ಇಂದ್ರಿಯಗಳ ಬೆಳವಣಿಗೆಗೆ ಹೇಗೆ ಸಂಬಂಧಪಟ್ಟಿದೆಯೆಂಬುದು ಹಲವಾರು ಸಂಶೋಧನೆಗಳ ವಿಷಯವಾಗಿದೆ. ಮಕ್ಕಳು ದೃಷ್ಟಿ ಮತ್ತು ಶ್ರವಣಸಾಮರ್ಥ್ಯಗಳನ್ನು ಹೊಂದಿದ್ದರೂ ಕೂಡ ಸ್ಪರ್ಶಜ್ಞಾನವಿಲ್ಲದೇ ಹೋದಲ್ಲಿ ಬದುಕಲು ಬಹಳ ಕಷ್ಟಪಡುವುದನ್ನು ಗಮನಿಸಲಾಗಿದೆ. ದೃಷ್ಟಿ ಮತ್ತು ಶ್ರವಣಸಾಮರ್ಥ್ಯವಿಲ್ಲದಾಗಲೂ ಕೂಡ ಸ್ಪರ್ಶದ ಮೂಲಕ ಅರಿತುಕೊಳ್ಳುವ ಸಾಮರ್ಥ್ಯವಿರುವ ಮಕ್ಕಳು ಹೆಚ್ಚು ತೊಂದರೆಗೊಳಗಾಗದೇ ಜೀವಿಸುವುದನ್ನು ಕಾಣಲಾಗಿದೆ. ಸ್ಪರ್ಶವನ್ನು ಮೂಲ ಇಂದ್ರಿಯವೆಂದು ಪರಿಗಣಿಸಬಹುದು, ಏಕೆಂದರೆ ಹೆಚ್ಚಿನ ಜೀವಿಗಳು ಸ್ಪರ್ಶಕ್ಕೆ ಪ್ರತಿಕ್ರಿಯಿಸುತ್ತವೆ, ಮತ್ತು ಇವುಗಳಲ್ಲಿ ಒಂದು ಉಪವರ್ಗ ಮಾತ್ರ ದೃಷ್ಟಿ ಮತ್ತು ಶ್ರವಣಶಕ್ತಿಯನ್ನು ಹೊಂದಿವೆ. [ಆಧಾರಗಳ ಅವಶ್ಯಕತೆಯಿದೆ] ಚಿಂಪಾಂಜಿಗಳಲ್ಲಿ ಸ್ಪರ್ಶಜ್ಞಾನವು ಅತ್ಯುತ್ತಮವಾಗಿ ಬೆಳವಣಿಗೆಯಾಗಿದೆ. ಬಾಲ್ಯಾವಸ್ಥೆಯಲ್ಲಿ ಅವುಗಳ ದೃಷ್ಟಿ ಮತ್ತು ಶ್ರವಣಸಾಮರ್ಥ್ಯಗಳು ಬಲು ಕಡಿಮೆಯಾಗಿರುತ್ತದೆಯಾದರೂ ಅವು ತಮ್ಮ ತಾಯಿಯನ್ನು ಗಟ್ಟಿಯಾಗಿ ಅವುಚಿಕೊಳ್ಳುತ್ತವೆ. ಹ್ಯಾರಿ ಹಾರ್ಲೋವ್ ರಿಸಸ್ ಮಂಗಗಳ ಮೇಲೆ ಒಂದು ವಿವಾದಾಸ್ಪದ ಅಧ್ಯಯನವನ್ನು ನಡೆಸಿದರು. ಇದರಲ್ಲಿ ಸ್ಪರ್ಶಸಂಬಂಧೀ ಉತ್ತೇಜನ ನೀಡಿದ ಮತ್ತು ಹಿತಕರವಾಗಿದ್ದ ಉಣಿಸುವ ಸಲಕರಣೆಯಾಗಿದ್ದ ಮೆತ್ತಗಿನ ಟೆರಿಬಟ್ಟೆಯಿಂದ ಸುತ್ತಲ್ಪಟ್ಟ "ಟೆರಿ ಬಟ್ಟೆಯ ತಾಯಿ"ಯೊಂದಿಗೆ ಬೆಳೆಸಲಾದ ಮಂಗಗಳು ಬರೆ ಒಂದು ತಂತಿಯ ಉಣಿಸುವ ಸಲಕರಣೆಯೊಡನೆ ಬೆಳೆಸಲಾದ ಮಂಗಗಳೊಂದಿಗೆ ಹೋಲಿಸಿದಾಗ ವಯಸ್ಕರಾದ ನಂತರ ಭಾವನಾತ್ಮಕವಾಗಿ ಹೆಚ್ಚು ದೃಢವಾಗಿರುವುದು ಕಂಡುಬಂದಿತು.(ಹಾರ್ಲೋವ್,1958) ಸ್ಪರ್ಶವನ್ನು ವಿವಿಧ ದೇಶಗಳಲ್ಲಿ ಬೇರೆಬೇರೆ ರೀತಿ ಗ್ರಹಿಸಲಾಗುತ್ತದೆ. ಸಾಮಾಜಿಕವಾಗಿ ಒಪ್ಪಿಗೆಯಾಗುವ ಸ್ಪರ್ಶದ ಮಟ್ಟವು ಒಂದು ಸಂಸ್ಕೃತಿಯಿಂದ ಇನ್ನೊಂದಕ್ಕೆ ಬದಲಾಗುತ್ತದೆ. ಥಾಯ್ ಸಂಸ್ಕೃತಿಯಲ್ಲಿ ಯಾರದಾದರೂ ತಲೆಯನ್ನು ಸ್ಪರ್ಶಿಸುವುದನ್ನು ಅಗೌರವವೆಂದು ಭಾವಿಸಲಾಗುತ್ತದೆ. ರೆಮ್‌ಲ್ಯಾಂಡ್ ಮತ್ತು ಜೋನ್ಸ್ (1995) ಸಂವಹನ ನಡೆಸುತ್ತಿರುವ ಜನರ ಗುಂಪುಗಳನ್ನು ಅಧ್ಯಯನ ಮಾಡಿದಾಗ ಇಂಗ್ಲೆಂಡ್ (8%), ಫ್ರ್ಯಾನ್ಸ್ (5%) ಮತ್ತು ನೆದರ್ಲ್ಯಾಂಡ್ಸ್ (4%)ಗಳನ್ನು ಇಟಾಲಿಯನ್ (14%) ಮತ್ತು ಗ್ರೀಕ್ (12.5%)ಜನರ ಮಾದರಿಗಳಿಗೆ ಹೋಲಿಸಿದಾಗ ಸ್ಪರ್ಶಿಸುವಿಕೆ ಬಹಳ ಕಡಿಮೆಯಿರುವುದು ಕಂಡುಬಂದಿತು.[ಆಧಾರಗಳ ಅವಶ್ಯಕತೆಯಿದೆ] ದೈಹಿಕ ನಿಂದೆಯ ಉಲ್ಲೇಖ ಮಾಡುವುದಾದಲ್ಲಿ, ಹೊಡೆಯುವುದು, ತಳ್ಳುವುದು, ಎಳೆದಾಡುವುದು, ಚಿವುಟುವುದು, ಒದೆಯುವುದು, ಕತ್ತುಹಿಸುಕುವುದು ಮೊದಲಾದವು ಸ್ಪರ್ಶವಿಧಾನಗಳಾಗಿವೆ. "ನಾನು ಆತ/ಆಕೆಯನ್ನು ಎಂದೂ ಮುಟ್ಟಲಿಲ್ಲ" ಅಥವಾ "ಅವನನ್ನು/ಆಕೆಯನ್ನು ಮುಟ್ಟೀಯ ಜೋಕೆ" ಎಂಬಂತಹ ವಾಕ್ಯಗಳಲ್ಲಿ ಸ್ಪರ್ಶವು ದೈಹಿಕ ನಿಂದೆ ಇಲ್ಲವೇ ಲೈಂಗಿಕ ಸ್ಪರ್ಶದ ಅರ್ಥವನ್ನು ಹೊಂದಿರುವ ಸೌಮ್ಯೋಕ್ತಿಯಾಗಿ ಕೆಲಸ ಮಾಡುತ್ತದೆ. ಆಂಗ್ಲಭಾಷೆಯಲ್ಲಿ 'ಟಚ್ ಒನ್‌ಸೆಲ್ಫ್ (ತನ್ನನ್ನು ತಾನೇ ಸ್ಪರ್ಶಿಸಿಕೊಳ್ಳುವುದು)' ಎಂಬುದು ಹಸ್ತಮೈಥುನದ ಅರ್ಥವಿರುವ ಸೌಮ್ಯೋಕ್ತಿಯಾಗಿದೆ. ಸ್ಪರ್ಶ ಎಂಬ ಪದವು ಹಲವಾರು ರೂಪಕ ಬಳಕೆಗಳನ್ನು ಹೊಂದಿದೆ. ಭಾವನಾತ್ಮಕವಾಗಿ ಒಬ್ಬರನ್ನು ಸ್ಪರ್ಶಿಸುವುದು ಎಂದರೆ ಒಂದು ಕ್ರಿಯೆ ಅಥವಾ ವಸ್ತುವಿನಿಂದ ಉಂಟಾಗುವ ಭಾವನಾತ್ಮಕ ಪ್ರತಿಕ್ರಿಯೆಗೆ ಅನ್ವಯವಾಗುವಂಥದು "ನಿನ್ನ ಪತ್ರ ನನ್ನನ್ನು ತಟ್ಟಿತು" ಎಂದರೆ ಪತ್ರದ ಓದುಗನು ಅದನ್ನು ಓದುವಾಗ ತೀವ್ರವಾದ ಭಾವನೆಗಳಿಗೊಳಗಾದನೆಂದು ಅರ್ಥ. ಇದನ್ನು ವ್ಯಂಗ್ಯಾತ್ಮಕ ಅರ್ಥದಲ್ಲಿ ಬಳಸಿಲ್ಲವಾದಲ್ಲಿ ಸಾಮಾನ್ಯವಾಗಿ ಇದರಲ್ಲಿ ಕೋಪ, ಅಸಹ್ಯ ಇಲ್ಲವೇ ಭಾವನಾತ್ಮಕ ತಿರಸ್ಕಾರದ ಇತರ ಭಾವಗಳನ್ನು ಒಳಗೊಳ್ಳಲಾಗಿರುವುದಿಲ್ಲ. ಸ್ಟೋಲ್ಟ್‌ಜೆ (2003) ಈ ಪ್ರಮುಖವಾದ ಸಂವಹನ ಕೌಶಲ್ಯದ ’ಸ್ಪರ್ಶಸಾಮರ್ಥ್ಯ’ವನ್ನು ಅಮೆರಿಕನ್ನರು ಹೇಗೆ ಕಳೆದುಕೊಳ್ಳುತ್ತಿದ್ದಾರೆನ್ನುವುದರ ಬಗ್ಗೆ ಬರೆದನು. ಯುನಿವರ್ಸಿಟಿ ಆಫ್ ಮಯಾಮಿ ಸ್ಕೂಲ್ ಆಫ್ ಮೆಡಿಸಿನ್, ಮತ್ತು ಟಚ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗಳು ನಡೆಸಿದ ಅಧ್ಯಯನವೊಂದರ ಸಮಯದಲ್ಲಿ ಆಟದ ಮೈದಾನದಲ್ಲಿ ಅಮೆರಿಕನ್ ಮಕ್ಕಳು ಫ್ರೆಂಚ್ ಮಕ್ಕಳಿಗಿಂತ ಹೆಚ್ಚು ಜಗಳಗಂಟರಾಗಿದ್ದುದು ಕಂಡುಬಂದಿತು. ಫ್ರೆಂಚ್ ಮಹಿಳೆಯರು ತಮ್ಮ ಮಕ್ಕಳನ್ನು ಹೆಚ್ಚು ಸ್ಪರ್ಶಿಸುತ್ತಿದ್ದುದನ್ನು ಗಮನಿಸಲಾಯಿತು.
ಪ್ಯಾರಾಲ್ಯಾಂಗ್ವೇಜ್: ದನಿಯ ಅಮೌಖಿಕ ಸೂಚನೆಗಳು
ಬದಲಾಯಿಸಿಪ್ಯಾರಾಲ್ಯಾಂಗ್ವೇಜ್ (ಕೆಲವೊಮ್ಮೆ ವೋಕಲಿಕ್ಸ್ ಎಂದೂ ಕರೆಯಲಾಗುವುದು) ಎಂಬುದು ಧ್ವನಿಯ ಅಮೌಖಿಕ ಸೂಚನೆಗಳ ಅಧ್ಯಯನವಾಗಿದೆ. ಮಾತಿನ ವಿವಿಧ ಶಬ್ದಸಂಬಂಧಿ ಗುಣಲಕ್ಷಣಗಳಾದ ಶಾರೀರ, ಶ್ರುತಿ ಮತ್ತು ಒತ್ತುಗಳನ್ನು ಒಟ್ಟುಸೇರಿಸಿ ಪ್ರೊಸೊಡಿ ಎನ್ನಲಾಗುತ್ತಿದ್ದು, ಇವೆಲ್ಲವೂ ಅಮೌಖಿಕ ಸೂಚನೆಗಳನ್ನು ನೀಡಬಲ್ಲವಾಗಿವೆ. ಪ್ಯಾರಾಲ್ಯಾಂಗ್ವೇಜ್ ಪದಗಳ ಅರ್ಥವನ್ನು ಮಾರ್ಪಡಿಸಬಹುದು. ಭಾಷಾಶಾಸ್ತ್ರಜ್ಞ ಜಾರ್ಜ್ ಎಲ್. ಟ್ರೇಜರ್ ಧ್ವನಿ ರಚನೆ, ಧ್ವನಿಯ ಲಕ್ಷಣಗಳು ಮತ್ತು ಧ್ವನಿಹೊರಡಿಸುವಿಕೆಗಳನ್ನು ಒಳಗೊಂಡ ವರ್ಗೀಕರಣ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದರು.[೮]
- ಸ್ವರಲಕ್ಷಣ ವು ಮಾತನಾಡುತ್ತಿರುವವನ ಮಾತಿನ ಸಂದರ್ಭವಾಗಿದೆ. ಇದು ಸನ್ನಿವೇಶ, ಲಿಂಗ, ಮನಸ್ಥಿತಿ, ವಯೋಮಾನ ಮತ್ತು ಒಬ್ಬ ಮನುಷ್ಯನ ಸಂಸ್ಕೃತಿಗಳನ್ನೊಳಗೊಂಡಿರಬಹುದು.
- ಧ್ವನಿಶಕ್ತಿ, ಮಟ್ಟ, ಗತಿ, ಲಯಬದ್ಧತೆ, ಉಚ್ಚಾರಣೆ, ಅನುರಣನ, ಅನುನಾಸಿಕತೆ ಮತ್ತು ಒತ್ತುಗಳು ಸ್ವರಲಕ್ಷಣ ಗಳಾಗಿವೆ. ಇವು ಪ್ರತಿಯೊಂದು ವ್ಯಕ್ತಿಗೂ ತನ್ನದೇ ಆದ ವಿಶಿಷ್ಟ "ಸ್ವರಮುದ್ರಣ"(ವಾಯ್ಸ್ ಪ್ರಿಂಟ್) ಅನ್ನು ನೀಡುತ್ತವೆ.
- ದ್ಹ್ವನಿಹೊರಡಿಸುವಿಕೆ ಯು ಮೂರು ಉಪವಿಭಾಗಗಳನ್ನೊಳಗೊಂಡಿದೆ: ಕ್ಯಾರೆಕ್ಟರೈಜರ್‌ಗಳು(ಲಕ್ಷಣ), ಕ್ವಾಲಿಫಯರ್‌ಗಳು(ರೀತಿ) ಮತ್ತು ಸೆಗ್ರಿಗೇಟ್‌ಗಳು(ಬೇರ್ಪಡಿಕೆ). ಕ್ಯಾರೆಕ್ಟರೈಜರ್‌ಗಳು ಮಾತನಾಡುವಾಗ ನಾವು ವ್ಯಕ್ತಪಡಿಸುವ ಭಾವನೆಗಳಾಗಿವೆ, ಉದಾಹರಣೆಗೆ ನಗುವುದು, ಅಳುವುದು ಮತ್ತು ಆಕಳಿಸುವುದು. ಸ್ವರದ ಕ್ವಾಲಿಫಯರ್ ಎಂದರೆ ಸಂದೇಶವನ್ನು ತಲುಪಿಸುವ ರೀತಿ - ಉದಾಹರಣೆಗೆ, "ಹೇ, ಅದನ್ನು ನಿಲ್ಲಿಸು
!", ಎಂದು "ಹೇ ಅದನ್ನು ನಿಲ್ಲಿಸು" ಎಂದು ಉಸುರುವುದರ ಬದಲಾಗಿ ಅರಚುವುದು. ಮಾತಿನ ಸೆಗ್ರಿಗೇಟ್‌ಗಳು, ಉದಾಹರಣೆಗೆ "ಹೂಂ"ಗುಟ್ಟುವುದೇ ಮಾತು ಆಡುವವರಿಗೆ ಕೇಳುಗ ತನ್ನ ಮಾತನ್ನು ಕೇಳುತ್ತಿದ್ದಾನೆಂದು ತಿಳಿಸಿಕೊಡುತ್ತವೆ.))
ಅಮೌಖಿಕ ಸಂವಹನದ ಕಾರ್ಯಗಳು
ಬದಲಾಯಿಸಿಆರ್ಗೈಲ್ (1970) [೯] ನ ಕಾಲ್ಪನಿಕ ಸಿದ್ಧಾಂತದ ಪ್ರಕಾರ ಆಡುವ ಭಾಷೆಯನ್ನು ಸಾಮಾನ್ಯವಾಗಿ ಮಾತುಗಾರರಿಗೆ ಹೊರಗಿನ ಸಂದರ್ಭಗಳ ಬಗ್ಗೆ ಮಾಹಿತಿಯನ್ನು ಅರುಹಲು ಉಪಯೋಗಿಸಲಾಗುತ್ತದೆ ಮತ್ತು ಪರಸ್ಪರ ಸಂಬಂಧಗಳನ್ನು ನಿರ್ವಹಿಸುವಲ್ಲಿ ಅಮೌಖಿಕ ಸಂಕೇತಗಳನ್ನು ಬಳಸಲಾಗುತ್ತದೆ. ಇತರರ ಬಗೆಗಿನ ಧೋರಣೆಯನ್ನು ಅರುಹುವಲ್ಲಿ ಮೌಖಿಕವಾಗಿರುವುದಕ್ಕಿಂತ ಅಮೌಖಿಕವಾಗಿರುವುದನ್ನು ಹೆಚ್ಚು ಸುಶಿಷ್ಟ ಇಲ್ಲವೇ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ, ಉದಾಹರಣೆಗೆ ಮುಜುಗರ ಹುಟ್ಟಿಸುವಂತಹ ಸಂದರ್ಭಗಳನ್ನು ತಪ್ಪಿಸಲು[೧೦]. ಆರ್ಗೈಲ್ (1988) ತನ್ನ ಮಾತನ್ನು ಕೊನೆಗೊಳಿಸುತ್ತಾ ಮಾನವ ಸಂವಹನದಲ್ಲಿ ದೈಹಿಕ ನಡವಳಿಕೆಯ ಐದು ಪ್ರಾಥಮಿಕ ಕಾರ್ಯಗಳಿರುವುದಾಗಿ ತಿಳಿಸಿದನು:[೧೧]
- ಭಾವನೆಗಳನ್ನು ವ್ಯಕ್ತಪಡಿಸುವುದು
- ಪರಸ್ಪರ ವೈಯುಕ್ತಿಕ ಧೋರಣೆಗಳನ್ನು ವ್ಯಕ್ತಪಡಿಸುವುದು
- ಮಾತುಗಾರರು ಮತ್ತು ಕೇಳುಗರ ನಡುವಿನ ಮಾತುಕತೆಯಲ್ಲಿ ಸಂವಹನದ ಸೂಚನೆಗಳನ್ನು ನಿರ್ವಹಣೆ ಮಾಡುವಲ್ಲಿ ಮಾತಿನ ಜತೆನೀಡುವುದು
- ಒಬ್ಬರ ವ್ಯಕ್ತಿತ್ವದ ಸ್ವ-ಪ್ರಾತಿನಿಧ್ಯತೆಗಾಗಿ
- ಆಚಾರಗಳು(ಶುಭಾಶಯ ಕೋರುವಿಕೆ)
ವಂಚನೆಯನ್ನು ಮುಚ್ಚಿಡುವುದು
ಬದಲಾಯಿಸಿಅಮೌಖಿಕ ಸಂವಹನದಿಂದ ಸಿಕ್ಕಿಹಾಕಿಕೊಳ್ಳದೆ ಸುಳ್ಳುಹೇಳುವುದು ಸುಲಭಸಾಧ್ಯವಾಗುತ್ತದೆ. ಪರ್ಸ್ ಒಂದನ್ನು ಕದ್ದ ಆರೋಪವಿರುವ ವ್ಯಕ್ತಿಗಳ ಕೃತ್ರಿಮ ಸಂದರ್ಶನಗಳನ್ನು ಕೆಲವು ವ್ಯಕ್ತಿಗಳು ಗಮನಿಸುವಂತೆ ಮಾಡಿದ ಅಧ್ಯಯನವೊಂದರ ಮೂಲಕ ಈ ನಿರ್ಧಾರಕ್ಕೆ ಬರಲಾಯಿತು. ಸಂದರ್ಶನಕ್ಕೊಳಗಾದವರು ಶೇಕಡಾ 50ರಷ್ಟು ಪ್ರಕರಣಗಳಲ್ಲಿ ಸುಳ್ಳು ಹೇಳಿದರು. ವಿಷಯವಸ್ತುಗಳಿಗೆ ಈ ಸಂದರ್ಶನಗಳ ಬರಹರೂಪದ ಲಿಪ್ಯಂತರಗಳು, ಧ್ವನಿಮುದ್ರಿಕೆಗಳು ಇಲ್ಲವೇ ವೀಡಿಯೋ ಮುದ್ರಿಕೆಗಳು ಲಭ್ಯವಿದ್ದವು. ನೋಡುತ್ತಿದ್ದವರಿಗೆ ಹೆಚ್ಚು ಸೂಚನೆಗಳು ದೊರೆತಷ್ಟೂ ಸಂದರ್ಶನದಲ್ಲಿ ಮೂಲತಃ ಸುಳ್ಳುಹೇಳುವವರನ್ನು ಸತ್ಯವಂತರೆಂದುಕೊಳ್ಳುವ ನಿರ್ಣಯಕ್ಕೆ ಬರುತ್ತಿದ್ದ ಸಂಖ್ಯೆಯಲ್ಲಿ ಏರಿಕೆಯುಂಟಾಗುತ್ತಿತ್ತು. ಎಂದರೆ ಸುಳ್ಳುಹೇಳುವುದರಲ್ಲಿ ನಿಷ್ಣಾತರಾಗಿರುವವರು ದನಿಯ ಮಟ್ಟ ಮತ್ತು ಮುಖದ ಭಾವನೆಗಳನ್ನು ಬಳಸಿಕೊಂಡು ತಾವು ಸತ್ಯವಂತರೆಂಬ ಭಾವನೆಯನ್ನು ಮೂಡಿಸುವಲ್ಲಿ ಯಶಸ್ವಿಯಾಗಬಹುದು.[೧೨]
ಮೌಖಿಕ ಮತ್ತು ಅಮೌಖಿಕ ಸಂವಹನಗಳ ನಡುವಿನ ಸಂಬಂಧ
ಬದಲಾಯಿಸಿಮೌಖಿಕ ಮತ್ತು ಅಮೌಖಿಕ ಸಂವಹನಗಳ ತುಲನಾತ್ಮಕ ಪ್ರಾಮುಖ್ಯತೆ
ಬದಲಾಯಿಸಿಒಂದು ಸ್ವಾರಸ್ಯಕರವಾದ ಪ್ರಶ್ನೆಯೆಂದರೆ: ಇಬ್ಬರು ವ್ಯಕ್ತಿಗಳು ಪರಸ್ಪರ ಮುಖತಃ ಸಂವಹನ ನಡೆಸುತ್ತಿರುವಾಗ ಅದರಲ್ಲಿನ ಎಷ್ಟು ಅರ್ಥವು ಮೌಖಿಕವಾಗಿ ಮತ್ತು ಅಮೌಖಿಕವಾಗಿ ಅರುಹಲ್ಪಡುತ್ತದೆ? ಇದರ ಬಗ್ಗೆ ಆಲ್ಬರ್ಟ್ ಮೆಹ್ರಾಬಿಯನ್ ಸಂಶೋಧನೆ ನಡೆಸಿದರು ಮತ್ತು ಎರಡು ಲೇಖನಗಳ ಮೂಲಕ ವರದಿ ಮಾಡಿದರು [೧೩],[೧೪]. ಎರಡನೆಯ ವರದಿಯು ಈ ರೀತಿಯಾಗಿ ಮುಕ್ತಾಯವಾಯಿತು: "ಸೂಚನೆಯ ಪ್ರಕಾರ ಮೌಖಿಕ, ಧ್ವನಿಯ ಮತ್ತು ಮುಖದ ಧೋರಣೆಗಳ ಸಂವಹನದ ಒಟ್ಟು ಪರಿಣಾಮವು ಅವುಗಳ ಸ್ವತಂತ್ರ ಪರಿಣಾಮಗಳ ಒಟ್ಟು ಮೊತ್ತವಾಗಿದೆ - ಮತ್ತು ಅವುಗಳ ಸಹಪ್ರಮಾಣವು ಅನುಕ್ರಮವಾಗಿ .07, .38, ಮತ್ತು .55 ಆಗಿದೆ." ಆಡಿದ ಮಾತು, ದನಿಯ ಮಟ್ಟ ಮತ್ತು ಮುಖದ ಭಾವಗಳ ಸುಳಿವುಗಳು ಒಟ್ಟು ಅರ್ಥಕ್ಕೆ ಅನುಕ್ರಮವಾಗಿ 7%, 38%, ಮತ್ತು 55%ರಷ್ಟು ಅಂಶದಾನವನ್ನು ಮಾಡುತ್ತವೆ ಎಂಬ ಈ ನೀತಿಯನ್ನು ಎಲ್ಲೆಡೆ ಅನುಸರಿಸಲಾಗುತ್ತದೆ. ಇದನ್ನು ಎಲ್ಲಾ ರೀತಿಯ ಜನಪ್ರಿಯ ಪಠ್ಯಕ್ರಮಗಳಲ್ಲಿ ಇದನ್ನು "ವಿಜ್ಞಾನಿಗಳ ಸಂಶೋಧನೆಯ ಪ್ರಕಾರ.." ಎಂದು ಆರಂಭವಾಗುವ ಹೇಳಿಕೆಗಳ ಮುಖಾಂತರ ಪ್ರಸ್ತುತಪಡಿಸಲಾಗುತ್ತದೆ. ಆದರೆ, ನಿಜವಾಗಿ, ಇದು ತೀರಾ ದುರ್ಬಲವಾಗಿದ್ದು, ಆಧಾರರಹಿತವಾಗಿದ್ದಿತು. ಮೊದಲನೆಯದಾಗಿ, ಇದು ಧ್ವನಿಮುದ್ರಿತವಾಗಿರುವ ಒಂಟಿ ಪದಗಳ ಅರ್ಥವನ್ನು ಆಧರಿಸಿದ್ದಿತು, ಅರ್ಥಾತ್ ಬಹಳ ಕೃತ್ರಿಮವಾದ ಸನ್ನಿವೇಶವಾಗಿದ್ದಿತು. ಎರಡನೆಯದಾಗಿ, ಅಂಕಿ ಅಂಶಗಳು ಎರಡು ಅಭಿನ್ನವಾದ ಅಧ್ಯಯನಗಳ ಫಲಿತಾಂಶಗಳನ್ನು ಆಧರಿಸಿರುತ್ತವೆ ಮತ್ತು ಬಹುಶಃ ಇ ಎರಡನ್ನೂ ಒಟ್ಟುಗೂಡಿಸಲಾಗದು. ಮೂರನೆಯದಾಗಿ, ಇದು ಭಾವನೆಗಳ ಧನಾತ್ಮಕ ಸಂವಹನಕ್ಕೆ ಖುಣಾತ್ಮಕ ಸಂವಹನವು ವಿರುದ್ಧವಾಗಿರುವುದಕ್ಕೆ ಮಾತ್ರ ಸಂಬಂಧಿಸಿದೆ. ನಾಲ್ಕನೆಯದಾಗಿ, ಈ ಅಧ್ಯಯನದಲ್ಲಿ ಪುರುಷರು ಪಾಲ್ಗೊಳ್ಳಲಾಗದಿದ್ದುದರಿಂದ ಇದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದಾಗಿದೆ.
ಅಂದಿನಿಂದಲೂ, ಇತರ ಅಧ್ಯಯನಗಳು ಹೆಚ್ಚು ನೈಸರ್ಗಿಕವಾದ ಸಂದರ್ಭಗಳಲ್ಲಿ ಮೌಖಿಕ ಮತ್ತು ಅಮೌಖಿಕ ಸಂಕೇತಗಳ ತುಲನಾತ್ಮಕ ಕೊಡುಗೆಯನ್ನು ವಿಶ್ಲೇಷಿಸಿವೆ. ಆರ್ಗೈಲ್ [೯], ವಸ್ತುಗಳಿಗೆ ತೋರಿಸಲಾದ ವೀಡಿಯೋ ಟೇಪುಗಳನ್ನು ಬಳಸಿಕೊಂಡು ವಿಧೇಯ/ಮೇಲುಗೈ ಧೋರಣೆಗಳ ಸಂವಹನವನ್ನು ವಿಶ್ಲೇಷಿಸಿ, ಅಮೌಖಿಕ ಸೂಚನೆಗಳು ಮೌಖಿಕ ಸೂಚನೆಗಳಿಗಿಂತ 4.3 ಪಟ್ಟು ಹೆಚ್ಚ್ಯು ಪರಿಣಾಮಕಾರಿಯಾಗಿದ್ದುದನ್ನು ಕಂಡುಹಿಡಿದರು. ದೈಹಿಕ ನಿಲುವು ಉನ್ನತ ಸ್ಥಾನಮಾನಗಳನ್ನು ಬಹಳ ಸಮರ್ಥವಾಗಿ ಸಂವಹನ ಮಾಡಿದ್ದು ಇದರ ಅತ್ಯಂತ ಪ್ರಮುಖವಾದ ಪರಿಣಾಮವಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಹ್‌ಸೀ ಎಟ್ ಆಲ್.[೧೫] ನಡೆಸಿದ ಅಧ್ಯಯನವೊಂದರಲ್ಲಿ ವಸ್ತುಗಳು ಒಬ್ಬ ವ್ಯಕ್ತಿಯನ್ನು ಸಂತೋಷ/ದುಃಖಗಳ ಆಯಾಮದಲ್ಲಿ ವಿಮರ್ಶಿಸಬೇಕಾಗಿದ್ದಿತು ಮತ್ತು ಮೂಕೀ ಫಿಲ್ಮೊಂದರಲ್ಲಿ ಕಾಣಿಸಲಾದ ಮುಖದ ಭಾವನೆಗಳಿಗಿಂತ ಕನಿಷ್ಟತಮ ಧ್ವನಿಯ ಏರಿಳಿತವಿಲ್ಲದೇ ಆಡಲಾದ ಪದಗಳ ಪ್ರಭಾವವು ನಾಲ್ಕು ಪಟ್ಟು ಹೆಚ್ಚಾಗಿದ್ದುದನ್ನು ಕಂಡುಹಿಡಿಯಲಾಯಿತು. ಆದ್ದರಿಂದಾಗಿ ಆಡುಮಾತುಗಳ ಮತ್ತು ಮುಖದ ಭಾವನೆಗಳ ತುಲನಾತ್ಮಕ ಪ್ರಾಮುಖ್ಯತೆಗಳು ಭಿನ್ನವಾದ ಸಿದ್ಧತೆಗಳನ್ನು ಬಳಸುವ ಅಧ್ಯಯನಗಳಲ್ಲಿ ಬಹಳವೇ ಭಿನ್ನವಾಗಿ ಕಂಡುಬರಬಹುದು.
ಮೌಖಿಕ ಮತ್ತು ಅಮೌಖಿಕ ಸಂವಹನಗಳ ಹೊಂದಾಣಿಕೆ
ಬದಲಾಯಿಸಿಸಂವಹನ ನಡೆಸುವಾಗ, ಅಮೌಖಿಕ ಸಂದೇಶಗಳು ಮೌಖಿಕ ಸಂದೇಶಗಳೊಂದಿಗೆ ಆರು ರೀತಿಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು: ಘರ್ಷಣೆ, ಪೂರಕಾರ್ಥ ನೀಡುವಿಕೆ, ಬದಲಿಸುವಿಕೆ, ನಿಯಮಿತಗೊಳಿಸುವಿಕೆ ಮತ್ತು ಉಚ್ಚಾರಣಾ ಪ್ರಾಧಾನ್ಯತೆ/ಮಿತಗೊಳಿಸುವಿಕೆ.
ಪುನರಾವರ್ತನೆ
ಬದಲಾಯಿಸಿ"ಪುನರಾವರ್ತನೆ"ಯು ಮೌಖಿಕ ಸಂದೇಶವೊಂದನ್ನು ಬಲಪಡಿಸಲು ಸನ್ನೆಗಳ ಬಳಕೆಯನ್ನು ಒಳಗೊಂದಿರುತ್ತದೆ, ಉದಾಹರಣೆಗೆ ಚರ್ಚೆಯ ವಸ್ತುವನ್ನು ಬೆರಳುಮಾಡಿ ತೋರುವುದು.[೧೬]
ಘರ್ಷಿಸುವಿಕೆ
ಬದಲಾಯಿಸಿಒಂದೇ ಪರಸ್ಪರ ಪ್ರತಿಕ್ರಿಯೆಯೊಳಗಿನ ಮೌಖಿಕ ಮತ್ತು ಅಮೌಖಿಕ ಸಂದೇಶಗಳು ಕೆಲವೊಮ್ಮೆ ವಿರುದ್ಧವಾದ ಅಥವಾ ಭಿನ್ನಾಭಿಪ್ರಾಯದ ಸಂದೇಶಗಳನ್ನು ಕಳುಹಿಸಬಹುದು. ಮಾತುಕತೆಯೊಂದರಲ್ಲಿ ಸತ್ಯದ ಮಾತನ್ನು ವಾಚಿಕರೂಪದಲ್ಲಿ ವ್ಯಕ್ತಪಡಿಸುತ್ತಿರುವ ವ್ಯಕ್ತಿಯೊಬ್ಬರು ಅದೇ ಸಮಯದಲ್ಲಿ ಚಡಪಡಿಸುವುದು ಅಥವಾ ಕಣ್ಸಂಪರ್ಕವನ್ನು ತಪ್ಪಿಸುವುದೇ ಮುಂತಾದ್ದನ್ನು ಮಾಡುತ್ತಿದ್ದಲ್ಲಿ, ಅವರು ಇದನ್ನು ಸ್ವೀಕರಿಸುವ ವ್ಯಕ್ತಿಗೆ ಮಿಶ್ರರೂಪದ ಸಂದೇಶವನ್ನು ಕಳುಹಿಸುತ್ತಿರಬಹುದು. ಭಿನ್ನಾಭಿಪ್ರಾಯದ ಸಂದೇಶಗಳು ಹಲವಾರು ಕಾರಣಗಳಿಂದ ಉದ್ಭವಿಸುವುದಾಗಿದ್ದು, ಇವು ಅನಿಶ್ಚಿತತೆ, ಅಸ್ಥಿರತೆ, ಅಥವಾ ಹತಾಶೆಯ ಭಾವನೆಗಳು ಇದಕ್ಕೆ ಕಾರಣವಾಗಿವೆ.[೧೭] ಮಿಶ್ರಸಂದೇಶಗಳು ಉಂಟಾದಾಗ, ಅಮೌಖಿಕ ಸಂವಹನವು ಸನ್ನಿವೇಶವನ್ನು ಸ್ಪಷ್ಟೀಕರಿಸಲು ಜನರು ಬಳಸುವ ಪ್ರಾಥಮಿಕ ಸಾಧನವಾಗಿ ಉಪಯೋಗಿಸಲ್ಪಡುತ್ತದೆ; ಮಾತುಕತೆಯ ವೇಳೆಯಲ್ಲಿ ಮಿಶ್ರ ಸಂದೇಶಗಳು ಬರುತ್ತಿರುವುದು ಜನರಿಗೆ ಅರಿವಾದಾಗ ದೈಹಿಕ ಚಲನೆ ಮತ್ತು ಸ್ಥಿತಿಗಳ ಮೇಲೆ ಅತಿ ಹೆಚ್ಚು ಪ್ರಾಧಾನ್ಯತೆ ನೀಡಲಾಗುತ್ತದೆ.
ಪೂರಕಾರ್ಥ ನೀಡುವಿಕೆ
ಬದಲಾಯಿಸಿಸಂದೇಶಗಳ ನಿಖರವಾದ ವ್ಯಾಖ್ಯಾನವು ಅಮೌಖಿಕ ಮತ್ತು ಮೌಖಿಕ ಸಂದೇಶಗಳು ಒಂದಕ್ಕೊಂದು ಪೂರಕವಾದಾಗ ಸುಲಭಸಾಧ್ಯವಾಗುತ್ತದೆ. ಅಮೌಖಿಕ ಸೂಚನೆಗಳನ್ನು ಸಂವಹನದ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವಾಗ ಮಾಹಿತಿಯನ್ನು ಬಲಪಡಿಸಲು ಮೌಖಿಕ ಸಂದೇಶಗಳನ್ನು ವಿಸ್ತರಿಸಿ ಹೇಳಲು ಬಳಸಬಹುದು; ಅಮೌಖಿಕ ಸಂಕೇತಗಳು ಮೌಖಿಕ ವಿನಿಮಯವನ್ನು ದೃಢಪಡಿಸಿದಾಗ ಸಂದೇಶಗಳು ಹೆಚ್ಚುಕಾಲ ನೆನಪಿನಲ್ಲಿರುತ್ತವೆಂಬುದನ್ನು ತೋರಿಸಿಕೊಡಲಾಗಿದೆ.[೧೮]
ಬದಲಿಸುವಿಕೆ
ಬದಲಾಯಿಸಿಅಮೌಖಿಕ ನಡವಳಿಕೆಯನ್ನು ಕೆಲವೊಮ್ಮೆ ಸಂದೇಶವೊಂದರ ಸಂವಹನಕ್ಕಾಗಿ ಏಕೈಕ ಮಾರ್ಗವಾಗಿ ಬಳಸಲಾಗುತ್ತದೆ. ಮುಖದ ಭಾವಗಳು, ದೈಹಿಕ ಚಲನಗಳು ಮತ್ತು ದೈಹಿಕ ನಿಲುವುಗಳನ್ನು ನಿರ್ದಿಷ್ಟವಾದ ಭಾವನೆಗಳು ಮತ್ತು ಉದ್ದೇಶಗಳೊಂದಿಗೆ ಜನರು ಭಾವಿಸಲು ಕಲಿತುಕೊಳ್ಳುತ್ತಾರೆ. ಅಮೌಖಿಕ ಸಂಕೇತಗಳನ್ನು ಮೌಖಿಕ ಸಂವಹನವಿಲ್ಲದೆಯೆ ಸಂದೇಶಗಳನ್ನು ರವಾನಿಸಲು ಉಪಯೋಗಿಸಬಹುದು; ಅಮೌಖಿಕ ನಡವಳಿಕೆಯು ಒಂದು ಸಂದೇಶವನ್ನು ಪರಿಣಾಮಕಾರಿಯಾಗಿ ತಿಳಿಸಲು ಅಸಫಲವಾದಾಗ, ಅದರ ಗ್ರಹಿಕೆಯನ್ನ್ನು ವಿಸ್ತರಿಸಲು ಮೌಖಿಕ ವಿಧಾನಗಳನ್ನು ಬಳಸಲಾಗುತ್ತದೆ.[೧೯]
ಕ್ರಮಬದ್ಧಗೊಳಿಸುವಿಕೆ
ಬದಲಾಯಿಸಿಅಮೌಖಿಕ ನಡವಳಿಕೆಯು ನಮ್ಮ ಮಾತುಕತೆಯನ್ನು ಕೂಡ ನಿಯಮಿತಗೊಳಿಸುತ್ತದೆ. ಉದಾಹರಣೆಗೆ, ಯಾರದಾದರೂ ಭುಜವನ್ನು ನಾವು ಸ್ಪರ್ಶಿಸಿದರೆ ನಾವು ಮಾತನಾಡಲು ಬಯಸುತ್ತಿದ್ದೇವೆ ಅಥವಾ ಮಾತಿನಲ್ಲಿ ಮಧ್ಯ ಪ್ರವೇಶಿಸಲು ಬಯಸುತ್ತಿದ್ದೇವೆ ಎಂದು ಸಂಕೇತಿಸಿದಂತಾಗುತ್ತದೆ.[೧೯]
ಉಚ್ಚಾರಣೆಯಲ್ಲಿ ಪ್ರಾಧಾನ್ಯತೆ/ಮಿತಗೊಳಿಸುವಿಕೆ
ಬದಲಾಯಿಸಿಅಮೌಖಿಕ ಸಂಕೇತಗಳನ್ನು ಮೌಖಿಕ ಸಂದೇಶಗಳ ವ್ಯಾಖ್ಯಾನವನ್ನು ಮಾರ್ಪಡಿಸಲು ಬಳಸಲಾಗುತ್ತದೆ. ಕಳುಹಿಸಲಾಗುವ ಸಂದೇಶಕ್ಕೆ ಪ್ರಾಧಾನ್ಯತೆ ನೀಡಲು ಇಲ್ಲವೇ ಅದನ್ನು ವರ್ಧಿಸಲು ಜನರು ಸ್ಪರ್ಶ, ಧ್ವನಿಯ ಮಟ್ಟ, ಮತ್ತು ಸನ್ನೆಗಳು ಮುಂತಾದ ಸಾಧನಗಳನ್ನು ಬಳಸುತ್ತಾರೆ; ಜತೆಗೇ ಅಮೌಖಿಕ ನಡವಳಿಕೆಯನ್ನು ಮೌಖಿಕ ಸಂದೇಶಗಳ ಅಂಶಗಳನ್ನು ಮಿತಗೊಳಿಸಲು ಅಥವಾ ತಗ್ಗಿಸಲು ಕೂಡ ಬಳಸಬಹುದಾಗಿದೆ.[೨೦] ಉದಾಹರಣೆಗೆ,ಮೌಖಿಕವಾಗಿ ಕೋಪವನ್ನು ವ್ಯಕ್ತಪಡಿಸುತ್ತಿರುವ ವ್ಯಕ್ತಿಯೊಬ್ಬನು ತನ್ನ ಮೌಖಿಕ ಸಂದೇಶಕ್ಕೆ ಮುಷ್ಟಿಯನ್ನು ಬಿಗಿಗೊಳಿಸಿ ಆಡಿಸುವುದರ ಮೂಲಕ ಪ್ರಾಧಾನ್ಯತೆಯನ್ನು ನೀಡಬಹುದು.
ನೃತ್ಯ ಮತ್ತು ಅಮೌಖಿಕ ಸಂವಹನ
ಬದಲಾಯಿಸಿನೃತ್ಯವು ಒಂದು ರೀತಿಯ ಅಮೌಖಿಕ ಸಂವಹನವಾಗಿದ್ದು, ಇದಕ್ಕಾಗಿ ಮೆದುಳಿನಲ್ಲಿ ಉಪಯುಕ್ತವಾಗುವ ಅಂತರ್ನಿಹಿತ ಸಹಜಶಕ್ತಿಗಳು ಮಾತುಕತೆ ಮತ್ತು ಬರೆಯುವುದಕ್ಕೆ ಉಪಯುಕ್ತವಾಗುವ ಮೌಖಿಕ ಭಾಷೆಯಲ್ಲಿ ಮತ್ತು ಕಲ್ಪನೆ, ಸೃಜನಶೀಲತೆ ಹಾಗೂ ಜ್ಞಾಪಕಶಕ್ತಿಗಳಿಗೆ ಸಮವಾಗಿರುವುದಾಗಿದೆ. ಸ್ವ-ಅಭಿವ್ಯಕ್ತಿಯ ರೀತಿಗಳಾಗಿರುವ ಈ ಎರಡೂ ಪ್ರಕಾರಗಳು ಶಬ್ದಕೋಶವನ್ನು(ನೃತ್ಯದಲ್ಲಿನ ಹೆಜ್ಜೆಗಳು ಮತ್ತು ಭಾವಭಂಗಿಗಳು), ವ್ಯಾಕರಣವನ್ನು(ಶಬ್ದಕೋಶವನ್ನು ಒಟ್ಟಿಗೂಡಿಸುವ ನಿಯಮಗಳು) ಹಾಗೂ ಅರ್ಥವನ್ನು ಹೊಂದಿರುವವಾಗಿವೆ. ಆದರೆ, ನೃತ್ಯವು ಈ ಅಂಶಗಳನ್ನು ಹೆಚ್ಚಿನಮಟ್ಟಿಗೆ ಕಾವ್ಯವನ್ನು ಹೋಲುವಂತಹ ರೀತಿಯಲ್ಲಿ, ತನ್ನ ಸಂದಿಗ್ಧತೆ ಮತ್ತು ಬಹುವಿಧವಾದ, ಸಾಂಕೇತಿಕವಾದ ಮತ್ತು ಗ್ರಹಿಕೆಗೆ ನಿಲುಕದ ಅರ್ಥಗಳನ್ನು ಒಂದುಗೂಡಿಸುತ್ತದೆ (ನೃತ್ಯಸಂಯೋಜನೆ).
ಅಮೌಖಿಕ ಸಂವಹನದ ಚಿಕಿತ್ಸಕ ಅಧ್ಯಯನಗಳು
ಬದಲಾಯಿಸಿ1977ರಿಂದ 2004ರವರೆಗೆ, ಅಮೌಖಿಕ ಸಂವಹನದ ಗ್ರಹಿಕೆಯ ಮೇಲೆ ಖಾಯಿಲೆಗಳು ಮತ್ತು ಔಷಧಿಗಳ ಪರಿಣಾಮವನ್ನು ಮೂರು ವಿಭಿನ್ನ ವೈದ್ಯಕೀಯ ಸಂಸ್ಥೆಗಳಲ್ಲಿ ವಿವಿಧ ತಂಡಗಳು ಒಂದೇ ಮಾದರಿಯನ್ನು ಬಳಸಿಕೊಂಡು ಅಭ್ಯಸಿಸಿದವು.[೨೧].ಯುನಿವರ್ಸಿಟಿ ಆಫ್ ಪಿಟ್ಸ್‌ಬರ್ಗ್, ಯೇಲ್ ಯುನಿವರ್ಸಿಟಿ ಮತ್ತು ಒಹಾಯೋ ಸ್ಟೇಟ್ ಯುನಿವರ್ಸಿಟಿಗಳ ಸಂಶೋಧಕರು ಸ್ಲಾಟ್ ಮಶೀನುಗಳಲ್ಲಿ ಆಡುತ್ತಿದ್ದು ಹಣಗಳಿಕೆಗಾಗಿ ಕಾದುಕೊಂಡಿದ್ದ ಜೂಜುಕೋರರನ್ನು ಗಮನಿಸುವಂತೆ ಕೆಲವು ವ್ಯಕ್ತಿಗಳನ್ನು ನಿಯಮಿಸಿದರು. ಈ ಹಣಗಳಿಕೆಯ ಮೊತ್ತವನ್ನು ಬಲವರ್ಧನೆಗೆ ಮುನ್ನವೇ ಅಮೌಖಿಕ ಪ್ರಸಾರಣೆಯ ಮೂಲಕ ತಿಳಿದುಕೊಳ್ಳಲಾಗುತ್ತಿತ್ತು. ಈ ವಿಧಾನವನ್ನು ಮನ್ಃಶಾಸ್ತ್ರಜ್ಞ ಡಾ.ರಾಬರ್ಟ್ ಇ. ಮಿಲ್ಲರ್ ಮತ್ತ್ತುಮನೋರೋಗ ಚಿಕಿತ್ಸಕ ಡಾ. ಎ. ಜೇಮ್ಸ್ ಜಿಯಾನ್ನಿನಿಯವರು ನಿರ್ದೇಶಿಸಿದ ಅಧ್ಯಯನಗಳ ಮುಖಾಂತರ ಅಭಿವೃದ್ಧಿಪಡಿಸಲಾಯಿತು. ಈ ಗುಂಪುಗಳ ವರದಿಯ ಪ್ರಕಾರ ಹೆರಾಯಿನ್ ವ್ಯಸನಿಗಳಲ್ಲಿ[೨೨] ಮತ್ತು ಫೆನ್‌ಸೈಕ್ಲಿಡಿನ್‌ನ ದುರುಪಯೋಗ ಮಾಡುವವರಲ್ಲಿ[೨೩] ಗ್ರಹಣಶೀಲತಾ ಸಾಮರ್ಥ್ಯವು ಕಡಿಮೆಯಾಗಿರುವುದು ಕಂಡುಬಂದಿತು ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಕೊಕೇನ್ ವ್ಯಸನಿಗಳಲ್ಲಿ ಗ್ರಹಣಶೀಲತೆ ಹೆಚ್ಚಾಗಿದ್ದು ಕಂಡುಬಂದಿತು. ಗಂಭೀರ ಖಿನ್ನತೆಗೊಳಗಾಗಿರುವ ವ್ಯಕ್ತಿಗಳು[೨೪] ಯೂಥೈಮಿಕ್(ಸಾಮಾನ್ಯ ಮನಸ್ಥಿತಿಯುಳ್ಳ) ವ್ಯಕ್ತಿಗಳಿಗೆ ಹೋಲಿಸಿದಾಗ ಅಮೌಖಿಕ ಸೂಚನೆಗಳನ್ನು ಗ್ರಹಿಸುವಲ್ಲಿ ಕಡಿಮೆ ಸಾಮರ್ಥ್ಯವನ್ನು ತೋರಿಸಿದರು. ಫ್ರೀಟಾಸ್-ಮ್ಯಾಗಲ್‌ಹೇಸ್ ಖಿನ್ನತೆಯ ಚಿಕಿತ್ಸೆಯಲ್ಲಿ ಮುಗುಳ್ನಗೆಯ ಪರಿಣಾಮವನ್ನು ಅಭ್ಯಸಿಸಿದರು ಮತ್ತು ಹೆಚ್ಚು ನಕ್ಕರೆ ಖಿನ್ನತೆಯ ಮನಸ್ಥಿತಿಯು ಕಡಿಮೆಯಾಗುವುದೆಂಬ ನಿರ್ಣಯಕ್ಕೆ ಬಂದರು.[೨೫] ಸ್ಥೂಲಕಾಯದ ಹೆಂಗಸರು[೨೬] ಪ್ರೀ ಮೆನ್ಸ್‌ಟ್ರುವಲ್ ಸಿಂಡ್ರೋಮ್[೨೭] ಅನ್ನು ಹೊಂದಿರುವ ಮಹಿಳೆಯರಲ್ಲೂ ಕೂಡ ಈ ಸೂಚನೆಗಳನ್ನು ಗ್ರಹಿಸುವುದರಲ್ಲಿ ಕಡಿಮೆ ಸಾಮರ್ಥ್ಯ ಕಂಡುಬಂದಿತು. ವ್ಯತಿರಿಕ್ತವಾಗಿ, ಬೈಪೋಲಾರ್ ಡಿಸಾರ್ಡರ್ ಇರುವ ಪುರುಷ್ರಲ್ಲಿ ಈ ಸಾಮರ್ಥ್ಯವು ಹೆಚ್ಚಾಗಿರುವುದು ಕಂಡುಬಂದಿತು.[೨೮]. ಮುಖದ ಭಾವನೆಗಳ ನರಗಳ ಸಂಪೂರ್ಣ ಸ್ತಂಭನವುಂಟಾಗಿದ್ದ ಮಹಿಳೆಯೋರ್ವಳು ಯಾವುದೇ ರೀತಿಯ ಅಮೌಖಿಕವಾದ ಮುಖದ ಸೂಚನೆಗಳನ್ನು ಪ್ರಸಾರಣೆ ಮಾಡಲು ಅಸಮರ್ಥಳಾಗಿದ್ದುದು ಕಂಡುಬಂದಿತು.[೨೯]. ಅಮೌಖಿಕ ಗ್ರಹಣಶೀಲತೆಯ ಮಟ್ಟಗಳ ನಿಖರತೆಯಲ್ಲಿ ಬದಲಾವಣೆಗಳ ಕಾರಣದಿಂದಾಗಿ, ಸಂಶೋಧನಾ ತಂಡದ ಸದಸ್ಯರು ಅಮೌಖಿಕ ಸೂಚನೆಗಳ ಗ್ರಹಿಕೆಗಾಗಿ ಮೆದುಳಿನಲ್ಲಿ ಕಾರ್ಯನಿರತವಾಗಿರುವ ಜೀವರಸಾಯನಿಕ ಭಾಗವೊಂದಿರುವುದಾಗಿ ತರ್ಕಿಸಿದರು. ಕೆಲವೊಂದು ಔಷಧಗಳು ಸಾಮರ್ಥ್ಯವನ್ನು ಹೆಚ್ಚಿಸಿದ್ದು ಇನ್ನು ಕೆಲವು ಔಷಧಿಗಳು ಇದನ್ನು ಕಡಿಮೆ ಮಾಡಿದ್ದರಿಂದ, ನ್ಯೂರೋಟ್ರ್ಯಾನ್ಸ್‌ಮಿಟರ್(ನರಪ್ರಸಾರಕ)ಗಳಾದ ಡೋಪಾಮಿನ್ ಮತ್ತು ಎಂಡಾರ್ಫಿನ್‌ಗಳನ್ನು ಈ ತೊಂದರೆಯ ಮೂಲ ಕಾರಣಗಳಿರಬಹುದೆಂದು ಪರಿಗಣಿಸಲಾಯಿತು. ಆದರೆ, ಲಭ್ಯವಿದ್ದ ದತ್ತಾಂಶಗಳನ್ನು ಆಧರಿಸಿ, ಅನುಸರಿಸಲಾದ ಮಾದರಿಯ ಪ್ರಕಾರ ಪ್ರಾಥಮಿಕ ಕಾರಣ ಮತ್ತು ಪ್ರಾಥಮಿಕ ಪರಿಣಾಮಗಳನ್ನು ವರ್ಗೀಕರಿಸಲು ಸಾಧ್ಯವಾಗಲಿಲ್ಲ[೩೦]. ಪಿಟ್ಸ್‌ಬರ್ಗ್/ಯೇಲ್/ಒಹಾಯೋ ಸ್ಟೇಟ್ ತಂಡಗಳ ಕೆಲಸದ ಒಂದು ಸಹ ಉತ್ಪನ್ನವೆಂದರೆ ಭಿನ್ನಲಿಂಗಕಾಮಿಗಳಲ್ಲಿ ಆಗುವ ನಾನ್-ಡೇಟ್ ಅತ್ಯಾಚಾರಗಳಲ್ಲಿ ಅಮೌಖಿಕ ಮುಖಸೂಚನೆಗಳ ಪಾತ್ರದ ತನಿಖೆ. ವಯಸ್ಕ ಮಹಿಳೆಯರ ಮೇಲೆ ಸರಣಿ ಅತ್ಯಾಚಾರ ನಡೆಸುತ್ತಿದ್ದ್ದ ಪುರುಷರನ್ನು ಅಮೌಖಿಕ ಗ್ರಹಣಶೀಲತಾ ಸಾಮರ್ಥ್ಯದ ಬಗ್ಗೆ ಅಧ್ಯಯನ ನಡೆಸಲಾಯಿತು. ಯಾವುದೇ ಉಪವಿಭಾಗಕ್ಕಿಂತ ಇಂತಹ ಪುರುಷರು ಗಳಿಸಿದ ಅಂಕಗಳು ಅತ್ಯಧಿಕವಾಗಿದ್ದವು.[೩೧] ಅತ್ಯಾಚಾರಕ್ಕೊಳಗಾದವರನ್ನು ನಂತರ ಪರೀಕ್ಷಿಸಲಾಯಿತು. ಇದರ ವರದಿಯ ಪ್ರಕಾರ ಕಡಿಮೆಯೆಂದರು ಎರಡು ಬಾರಿ ಬೇರೆಬೇರೆ ಅಪರಾಧಿಗಳಿಂದ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಲ್ಲಿ ಈ ರೀತಿಯ ಸೂಚನೆಗಳನ್ನು ಪುರುಷರಲ್ಲಾಗಲೀ, ಮಹಿಳೆಯರಲ್ಲಾಗಲೀ ಗ್ರಹಿಸುವುದರಲ್ಲಿ ಗಮನಾರ್ಹ ನ್ಯೂನತೆಯಿದ್ದುದು ತಿಳಿದುಬಂದಿತು.[೩೨] ಇದರ ಫಲಿತಾಂಶವು ಬೇಟೆಗಾರ-ಬಲಿಪಶು ಮಾದರಿಯಲ್ಲಿದ್ದು, ಆತಂಕ ಹುಟ್ಟಿಸುವಂತಿದ್ದಿತು. ಲೇಖಕರ ಪ್ರಕಾರ, ಈ ಪೂರ್ವಭಾವೀ ವಿಚಾರಣಾ ತೀರ್ಮಾನಗಳೇನೇ ಆಗಿರಲಿ, ಅತ್ಯಾಚಾರವೆಸಗುವಾತನ ಜವಾಬ್ದಾರಿಯು ಯಾವುದೇ ರೀತಿಯಲ್ಲಿ ಅಥವಾ ಮಟ್ಟದಲ್ಲಿ ಕಡಿಮೆಯಾಗದು ಎಂದು ಅಭಿಪ್ರಾಯಪಟ್ಟರು. ಈ ತಂಡದ ಕೊನೆಯ ಲಕ್ಷ್ಯವು ಅವರು ಬೋಧಿಸುತ್ತಿದ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದರು. ಒಹಾಯೋ ಸ್ಟೇಟ್ ಯುನಿವರ್ಸಿಟಿ, ಒಹಾಯೋ ಯುನಿವರ್ಸಿಟಿ ಮತ್ತು ನಾರ್ತೀಸ್ಟ್ ಒಹಾಯೋ ಮೆಡಿಕಲ್ ಕಾಲೇಜಿನ ವೈದ್ಯಕೀಯ ವಿದ್ಯಾರ್ಥಿಗಳನ್ನು ಸಂಶೋಧನಾ ವಸ್ತುಗಳಾಗಿರಲು ಆಹ್ವಾನಿಸಲಾಯಿತು. ಫ್ಯಾಮಿಲಿ ಪ್ರ್ಯಾಕ್ಟೀಸ್, ಮನೋರೋಗ ಚಿಕಿತ್ಸೆ, ಪೀಡಿಯಾಟ್ರಿಕ್ಸ್ ಮತ್ತು ಒಬ್‌ಸ್ಟೆಟ್ರಿಕ್ಸ್-ಗೈನೆಕಾಲಜಿಗಳಲ್ಲಿ ಪರಿಣತಿ ಪಡೆಯುವುದರ ಬಗ್ಗೆ ಒಲವು ವ್ಯಕ್ತಪಡಿಸಿದ ವಿದ್ಯಾರ್ಥಿಗಳ ಖಚಿತತೆಯ ಮಟ್ಟವು ಸರ್ಜನ್, ರೇಡಿಯಾಲಜಿಸ್ಟ್ ಇಲ್ಲವೇ ಪ್ಯಾಥಾಲಜಿಸ್ಟ್‌ಗಳಾಗಬೇಕೆಂದು ಬಯಸುತ್ತಿದ್ದ ವಿದ್ಯಾರ್ಥಿಗಳಿಗಿಂತ ಗಮನಾರ್ಹವಾಗಿ ಅಧಿಕವಾಗಿದ್ದು ಕಂಡುಬಂದಿತು. ಇಂಟರ್ನಲ್ ಮೆಡಿಸಿನ್ ಮತ್ತು ಪ್ಲ್ಯಾಸ್ಟಿಕ್ ಸರ್ಜರಿಯ ಅಭ್ಯರ್ಥಿಗಳು ಸರಾಸರಿ ಮಟ್ಟಕ್ಕೆ ಹತ್ತಿರವಿರುವ ಅಂಕಗಳನ್ನು ಗಳಿಸಿದರು.[೩೩]
ಅಮೌಖಿಕ ಸಂವಹನದ ತೊಂದರೆಗಳು
ಬದಲಾಯಿಸಿಅಮೌಖಿಕ ಸಂವಹನವನ್ನು ಕಳುಹಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ಜನರ ಸಾಮರ್ಥ್ಯದಲ್ಲಿ ವಿಭಿನ್ನತೆಯಿರುತ್ತದೆ. ಹೀಗಾಗಿ, ಸರಾಸರಿಯಾಗಿ, ಮಧ್ಯಗಾಮೀ ಮಟ್ಟದಲ್ಲಿ ಅಮೌಖಿಕ ಸಂವಹನದಲ್ಲಿ ಮಹಿಳೆಯರು ಪುರುಷರಿಗಿಂತ ಉತ್ತಮ ಮಟ್ಟದಲ್ಲಿದ್ದಾರೆ [೩೪][೩೫][೩೬][೩೭]. ಅಮೌಖಿಕ ಸಂವಹನವನ್ನು ನಡೆಸುವ ಸಾಮರ್ಥ್ಯ ಮತ್ತು ತಾದಾತ್ಮ್ಯತೆಯನ್ನು ಅನುಭವಿಸುವ ಸಾಮರ್ಥ್ಯಗಳ ಮಾಪನಗಳು ಈ ಎರಡೂ ಸಾಮರ್ಥ್ಯಗಳು ಸ್ವತಂತ್ರವಾಗಿರುವುದಾಗಿ ತೋರಿಸಿಕೊಡುತ್ತವೆ[೩೮].ಅಮೌಖಿಕ ಸಂವಹನ ನಡೆಸಲು ಇತರರಿಗೆ ಹೋಲಿಸಿದಾಗ ಹೆಚ್ಚು ತೊಂದರೆಗಳು ಕಂಡುಬರುವ ವ್ಯಕ್ತಿಗಳಿಗೆ ಇದರಿಂದ ಗಮನಾರ್ಹವಾದ ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು, ವಿಶೇಷವಾಗಿ ಇದು ಪರಸ್ಪರ ವೈಯುಕ್ತಿಕ ಸಂಬಂಧಗಳಿಗೆ ಅನ್ವಯವಾಗುತ್ತದೆ. ಈ ರೀತಿಯ ಜನರಿಗಾಗಿಯೇ ವಿಶೇಷವಾಗಿ ರಚಿಸಲ್ಪಟ್ಟ ಸಂಪನ್ಮೂಲಗಳಿದ್ದು, ಇವು ಇತರರಿಗೆ ಸುಲಭವಾಗಿ ಅರ್ಥವಾಗುವ ಮಾಹಿತಿಯನ್ನು ಇಂತಹ ಜನರು ಗ್ರಹಿಸಲು ಸಹಾಯ ಮಾಡಲು ಪ್ರಯತ್ನಿಸುತ್ತವೆ. ಈ ರೀತಿಯ ಸವಾಲುಗಳನ್ನು ಎದುರಿಸಬಹುದಾದ ನಿರ್ದಿಷ್ಟವಾದ ಗುಂಪುಗಳೆಂದರೆ ಆಸ್ಪರ್ಜರ್ ಸಿಂಡ್ರೋಮ್ ಅನ್ನೂ ಒಳಗೊಂಡಂತೆ ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ಗಳನ್ನು ಹೊಂದಿರುವವರು.
ಅಡಿಟಿಪ್ಪಣಿಗಳು
ಬದಲಾಯಿಸಿ- ↑ ೧.೦ ೧.೧ ನ್ಯಾಪ್ ಎಂಡ್ ಹಾಲ್, 2002, p.7
- ↑ ಗ್ರ್ಯಾಮರ್, ಕಾರ್ಲ್, ರೆನ್ನಿಂಗರ್, ಲೀಆನ್ ಎಂಡ್ ಫಿಶರ್, ಬೆಟ್ಟಿನಾ (2004): Disco clothing, female sexual motivation, and relationship status: is she dressed to impress? Journal of sexual research 41 (1): 66-74.
- ↑ ಸೆಗೆರ್‌ಸ್ಟ್ರೇಲ್ ಎಂಡ್ ಮೋಲ್‌ನಾರ್, 1997, p.235
- ↑ ನ್ಯಾಪ್ ಎಂಡ್ ಹಾಲ್, 2007, p.8
- ↑ ನ್ಯಾಪ್ ಎಂಡ್ ಹಾಲ್, 2007, p.9
- ↑ ಬುಲ್, 1987, pp. 17-25
- ↑ ನ್ಯಾಪ್ ಎಂಡ್ ಹಾಲ್, 2007, p. 9
- ↑ ಫ್ಲಾಯ್ಡ್ ಎಂಡ್ ಗೆರೆರೋ, 2006
- ↑ ೯.೦ ೯.೧ ಆರ್‌ಗೈಲ್, ಮೈಕೆಲ್, ವೆರೋನಿಕಾ ಸಾಲ್ಟರ್, ಹಿಲರಿ ನಿಕಲ್ಸನ್, ಮೇರಿಲಿನ್ ವಿಲಿಯಮ್ಸ್ ಎಂಡ್ ಫಿಲಿಪ್ ಬರ್ಜೆಸ್ (1970): The communication of inferior and superior attitudes by verbal and non-verbal signals. British journal of social and clinical psychology 9: 222-231.
- ↑ ರೋಸೆಂಥಾಲ್, ರಾಬರ್ಟ್ ಎಂಡ್ ಬೆಲ್ಲಾ ಎಂ. ಡಿಪಾಲೋ (1979): Sex differences in accommodation in nonverbal communication. Pp. 68-103 i R. Rosenthal (ed.): Skill in nonverbal communication: Individual differences. Oelgeschlager, Gunn & Hain.
- ↑ ಆರ್‌ಗೈಲ್, 1988, p.5
- ↑ ಬರ್ಗೂನ್, ಜೆ. ಕೆ., ಜೆ. ಪಿ. ಬ್ಲೇರ್ ಎಂಡ್ ಆರ್. ಇ. ಸ್ಟ್ರಾಮ್ (2008): Cognitive biases and nonverbal cue availability in detecting deception. Human communication research 34: 572-599.
- ↑ ಮೆಹ್ರಾಬಿಯನ್, ಆಲ್ಬರ್ಟ್ ಎಂಡ್ ಮೋರ್ಟನ್ ವೀನರ್ (1967): Decoding of inconsistent communications. Journal of personality and social psychology 6(1): 109-114.
- ↑ ಮೆಹ್ರಾಬಿಯನ್, ಆಲ್ಬರ್ಟ್ ಎಂಡ್ ಸೂಸನ್ ಆರ್. ಫೆರಿಸ್ (1967): Inference of attitudes from nonverbal communication in two channels. Journal of consulting psychology 31 (3): 248-252.
- ↑ ಕ್ರಿಸ್ಟೊಫರ್ ಕೆ. ಹ್‌ಸೀ, ಎಲೇಯ್ನ್ ಹ್ಯಾಟ್‌ಫೀಲ್ಡ್ ಎಂಡ್ ಕ್ಲಾಡ್ ಕೆಮ್‌ಟಾಬ್ (1992): Assessments of the emotional states of others: Conscious judgments versus emotional contagion. Journal of social and clinical psychology 14 (2): 119-128.
- ↑ ನ್ಯಾಪ್ ಎಂಡ್ ಹಾಲ್, 2007, p.12
- ↑ ನ್ಯಾಪ್ ಎಂಡ್ ಹಾಲ್, 2007, p.13
- ↑ ನ್ಯಾಪ್ ಎಂಡ್ ಹಾಲ್, 2007, p.14
- ↑ ೧೯.೦ ೧೯.೧ ನ್ಯಾಪ್ ಎಂಡ್ ಹಾಲ್, 2007, p.16
- ↑ ನ್ಯಾಪ್ ಎಂಡ್ ಹಾಲ್, 2007, p.17
- ↑ ಆರ್‌ಇ ಮಿಲ್ಲರ್, ಎಜೆ ಜಿಯಾನ್ನಿನಿ, ಜೆ ಎಂ ಲೆವಿನ್. Nonverbal communication in men with a cooperative conditioning task. Journal of Social Psychology. 103:101-108, 1977
- ↑ ಎಜೆ ಜಿಯಾನ್ನಿನಿ, ಬಿಟಿ ಜೋನ್ಸ್. Decreased reception of nonverbal cues in heroin addicts. Journal of Psychology. 119(5):455-459, 1985.
- ↑ ಎಜೆ ಜಿಯಾನ್ನಿನಿ. ಆರ್‌ಕೆ ಬೋಮನ್, ಜೆಡಿ ಜಿಯಾನ್ನಿನಿ. Perception of nonverbal facial cues in chronic phencyclidine abusers. Perceptual and Motor Skills. 89:72-76, 1999
- ↑ ಎಜೆ ಜಿಯಾನ್ನಿನಿ, ಡಿಜೆ ಫೋಲ್ಟ್ಸ್, ಎಸ್‌ಎಂ ಮೆಲೆಮಿಸ್ ಆರ್‌ಎಚ್ ಲೂಯಿಸೆಲ್. Depressed men's lowered ability to interpret nonverbal cues. Perceptual and Motor Skills. 81:555-559, 1995.
- ↑ ಫ್ರೀಟಾಸ್-ಮಗಲ್ಹೇಸ್, ಎ., ಮತ್ತು ಕ್ಯಾಸ್ಟ್ರೋ, ಇ. (2009). Facial Expression: The Effect of the Smile in the Treatment of Depression. Empirical Study with Portuguese Subjects. In A. Freitas-Magalhães (Ed.), Emotional Expression: The Brain and The Face (127-140). ಪೋರ್ಟೋ: ಯುನಿವರ್ಸಿಟಿ ಫರ್ನಾಂಡೋ ಪೆಸ್ಸೋವಾ ಪ್ರೆಸ್. ISBN 978-989-643-034-4.
- ↑ ಎಜೆ ಜಿಯಾನ್ನಿನಿ, ಎಲ್ ಡಿರುಸ್ಸೋ, ಡಿಜೆ ಫೋಲ್ಟ್ಸ್, ಜಿ ಚೆರಿಮೀಲ್. Nonverbal communication in moderately obese females. A pilot study. Annals of Clinical Psychiatry. 2:111-1115, 1990.
- ↑ ಎಜೆ ಜಿಯಾನ್ನಿನಿ, ಐಎಂ ಸೋರ್ಜರ್, ಡಿಎಂ ಮಾರ್ಟಿನ್, ಎಲ್ ಬೇಟ್ಸ್. Journal of Psychology. 122:591-594, 1988.
- ↑ ಎಜೆ ಜಿಯಾನ್ನಿನಿ, ಡಿಜೆ ಫೋಲ್ಟ್ಸ್, ಎಲ್ ಫೀಲ್ಡರ್. Enhanced encoding of nonverval cues in male bipolars. Journal of Psychology. 124:557-561, 1990.
- ↑ ಎಜೆ ಜಿಯಾನ್ನಿನಿ, ಡಿ ಟ್ಯಾಮ್ಯುಲೋನಿಸ್, ಎಂಸಿ ಜಿಯಾನ್ನಿನಿ, ಆರ್‌ಎಚ್ ಲೂಯಿಸೆಲ್, ಜಿ ಸ್ಪಿರ್ಟೋಸ್,. Defective response to social cues in Mobius syndrome. Journal of Nervous and Mental Disorders. 172174-175, 1984.
- ↑ ಎಜೆ ಜಿಯಾನ್ನಿನಿ. Suggestions for future studies of nonverbal facial cues. Perceptual and Motor Skills. 81:555-558,1995
- ↑ ಎಜೆ ಜಿಯಾನ್ನಿನಿ, ಕೆ ಡಬ್ಲ್ಯೂ ಫೆಲೋಸ್. Enhanced interpretation of nonverbal cues in male rapists. Archives of Sexual Behavior. 15:153-158,1986.
- ↑ ಎಜೆ ಜಿಯಾನ್ನಿನಿ, ಡಬ್ಲ್ಯೂಎ ಪ್ರೈಸ್, ಜೆ ಎಲ್ ನೀಪ್‌ಲ್. Decreased interpretation of nonverbal cues in rape victims. International Journal of Pschiatry in Medicine. 16:389-394,1986.
- ↑ ಎಜೆ ಜಿಯಾನ್ನಿನಿ, ಜೆಡಿ ಜಿಯಾನ್ನಿನಿ, ಆರ್‌ಕೆ ಬೋಮನ್. Measrement of nonverbal receptive abilities in medical students. Perceptual and Motor Skills. 90:1145-1150, 2000
- ↑ ಜುಡಿತ್ ಎ. ಹಾಲ್ (1978): Gender effects in decoding nonverbal cues. Psychological bulletin 85: 845-857.
- ↑ ಜುಡಿತ್ ಎ. ಹಾಲ್ (1984): Nonverbal sex differences. Communication accuracy and expressive style. 207 pp. ಜಾನ್ಸ್ ಹಾಪ್ಕಿನ್ಸ್ ಯುನಿವರ್ಸಿಟಿ ಪ್ರೆಸ್.
- ↑ ಜುಡಿತ್ ಎ. ಹಾಲ್, ಜೇಸನ್ ಡಿ. ಕಾರ್ಟರ್ ಎಂಡ್ ಟೆರೆನ್ಸ್ ಜಿ. ಹೋರ್ಗನ್ (2000): Gender differences in nonverbal communication of emotion. Pp. 97 - 117 i A. H. Fischer (ed.): Gender and emotion: social psychological perspectives. ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್.
- ↑ ಆಗ್ನೆಥಾ ಎಚ್. ಫಿಶರ್ ಎಂಡ್ ಆಂಥೊನಿ ಎಸ್. ಆರ್. ಮ್ಯಾನ್‌ಸ್ಟೆಡ್ (2000): The relation between gender and emotions in different cultures. Pp. 71 - 94 i ಎ. ಎಚ್. ಫಿಶರ್ (ed.): Gender and emotion: social psychological perspectives. ಕೇಂಬ್ರಿಜ್ ಯುನಿವರ್ಸಿಟಿ ಪ್ರೆಸ್.
- ↑ ಜುಡಿತ್ ಎ. ಹಾಲ್ (1979): Gender, gender roles, and nonverbal communication skills. Pp. 32-67 in ಆರ್. ರೋಸೆಂಥಾಲ್ (ed.): Skill in nonverbal communication: Individual differences. ಓಲ್ಗೆಶ್ಲೇಜರ್, ಗನ್ನ್ ಎಂಡ್ ಹೇಯ್ನ್.
ಇವನ್ನೂ ಗಮನಿಸಿ
ಬದಲಾಯಿಸಿ- ಆಲ್ಬರ್ಟ್ ಮೆಹ್ರಾಬಿಯನ್
- ಅಸೆಮಿಕ್ ಬರವಣಿಗೆ
- ನಡವಳಿಕೆ ಸಂವಹನ
- ದೈಹಿಕ ಭಾಷೆ
- ಡೆಸ್ಮಂಡ್ ಮೊರಿಸ್
- ಮಾನಸಿಕ ಮೀಸಲಾತಿಯ ತತ್ವ
- ಮರೆಗುಳಿತನ
- ಅಂತರ್-ಸಾಂಸ್ಕೃತಿಕ ದಕ್ಷತೆ
- ಜೋ ನವಾರ್ರೋ
- ಮೆಟಾಸಂಪರ್ಕ ದಕ್ಷತೆ
- ಸೂಕ್ಷ್ಮ ಅಭಿವ್ಯಕ್ತಿ
- ನರ-ಭಾಷಾವೈಜ್ಞಾನಿಕ ಕ್ರಮವಿಧಿಸುವಿಕೆ
- ವ್ಯವಹಾರ ಕುಶಲತೆಗಳು
- ಕ್ರಮಬದ್ಧ ಗಮನ ಕೇಂದ್ರೀಕರಣ ಸಿದ್ಧಾಂತ
- ಸಂಜ್ಞಾ ವಿಧಾನ ಶಾಸ್ತ್ರ
- ಟ್ವೈಲೈಟ್ ಭಾಷೆ
- ಪ್ರಜ್ಞಾರಹಿತ ಸಂವಹನ
ಆಕರಗಳು
ಬದಲಾಯಿಸಿ- ಆಂಡರ್ಸನ್, ಪೀಟರ್. (2007). Nonverbal Communication: Forms and Functions (2nd ed.) ವೇವ್‌ಲ್ಯಾಂಡ್ ಪ್ರೆಸ್.
- ಆಂಡರ್ಸನ್, ಪೀಟರ್. (2004). The Complete Idiot's Guide to Body Language. ಆಲ್ಫಾ ಪಬ್ಲಿಶಿಂಗ್.
- ಆರ್ಗೈಲ್, ಮೈಕೆಲ್. (1988). Bodily Communication (2nd ed.) ಮ್ಯಾಡಿಸನ್: ಇಂಟರ್ನ್ಯಾಶನಲ್ ಯುನಿವರ್ಸಿಟೀಸ್ ಪ್ರೆಸ್. ISBN 0-762-42739-6
- ಬುಲ್, ಪೀಟರ್ ಇ. (1987). Posture and Gesture (Vol. 16). ಆಕ್ಸ್‌ಫರ್ಡ್: ಪರ್‌ಗ್ಯಾಮೊನ್ ಪ್ರೆಸ್. ISBN 0-7864-0138-9.
- ಬರ್ಗೂನ್, ಜೆ. ಕೆ., ಬುಲ್ಲರ್, ಡಿ. ಬಿ., ಮತ್ತು ವೂಡಾಲ್, ಡಬ್ಲ್ಯೂ. ಜಿ. (1996), Nonverbal communication: The unspoken dialogue (2nd ed.) , ನ್ಯೂಯಾರ್ಕ್: ಮೆಕ್‌ಗ್ರಾ-ಹಿಲ್.
- ಫ್ಲಾಯ್ಡ್, ಕೆ., ಗೆರೆರೋ, ಎಲ್. ಕೆ. (2006), Nonverbal communication in close relationships, ಮಾಹ್‌ವಾಹ್, ನ್ಯೂಜರ್ಸಿ: ಲಾರೆನ್ಸ್ ಅರ್ಲ್‌ಬಾಮ್ ಅಸೋಸಿಯೇಟ್ಸ್
- ಫ್ರೀಟಾಸ್-ಮಗಲ್ಹೇಸ್, ಎ. (2006- The Psychology of Human Smile. ಒಪೋರ್ಟೋ: ಯುನಿವರ್ಸಿಟಿ ಫರ್ನ್ಯಾಂಡೋ ಪೆಸ್ಸೋವಾ ಪ್ರೆಸ್. ISBN 0-7864-0138-9.
- ಗಿವೆನ್ಸ್, ಡಿ.ಬಿ. (2000) Body speak: what are you saying? Successful Meetings (ಅಕ್ಟೋಬರ್) 51
- ಗೆರೆರೋ, ಎಲ್. ಕೆ., ಡಿವೀಟೋ, ಜೆ. ಎ., ಹೆಖ್ಟ್, ಎಮ್. ಎಲ್. ((ಸಂಪಾದಕರು) (1999). The nonverbal communication reader. (2nd ed.), ಲೋನ್ ಗ್ರೋವ್, ಇಲಿನಾಯ್ಸ್: ವೇವ್‌ಲ್ಯಾಂಡ್ ಪ್ರೆಸ್. [೧] Archived 2007-07-05 ವೇಬ್ಯಾಕ್ ಮೆಷಿನ್ ನಲ್ಲಿ.
- ಗುಡಿಕುನ್ಸ್ಟ್, ಡಬ್ಲ್ಯೂ.ಬಿ. ಮತ್ತು ಟಿಂಗ್-ಟೂಮೀ, ಎಸ್. (1988) Culture and Interpersonal Communication. ಕ್ಯಾಲಿಫೋರ್ನಿಯಾ: ಸೇಜ್ ಪಬ್ಲಿಕೇಶನ್ಸ್ ಇನ್‌ಕಾರ್ಪೊರೇಟೆಡ್.
- ಹಾನ್ನಾ, ಜುಡಿತ್ ಎಲ್. (1987). To Dance Is Human: A Theory of Nonverbal Communication. ಚಿಕಾಗೊ: ಯೂನಿವರ್ಸಿಟಿ ಆಫ್ ಚಿಕಾಗೊ ಪ್ರೆಸ್, 1984.
- ಹಾರ್ಗೀ, ಓ. ಮತ್ತು ಡಿಕ್ಸನ್, ಡಿ. (2004) Skilled Interpersonal Communication: Research, Theory and Practice. ಹೋವ್: ರೌಟ್‌ಲೆಡ್ಜ್.
- ನ್ಯಾಪ್, ಮಾರ್ಕ್ ಎಲ್., ಮತ್ತು ಹಾಲ್, ಜುಡಿತ್ ಎ. (2007) Nonverbal Communication in Human Interaction. (5th ed.) ವ್ಯಾಡ್ಸ್‌ವರ್ತ್: ಥಾಮಸ್ ಲರ್ನಿಂಗ್. ISBN 0-762-42739-6
- ಮೆಲಾಮೆಡ್, ಜೆ. ಮತ್ತು ಬೋಜಿಯೋನ್‌ಲೋಸ್, ಎನ್. (1992) Managerial promotion and height. Psychological Reports, 71 pp. 587–593.
- ಓಟ್ಟೆನ್ಹೀಮರ್, ಎಚ್.ಜೆ. (2007), The anthropology of language: an introduction to linguistic anthropology, ಕಾನ್ಸಾಸ್ ಸ್ಟೇಟ್: ಥಾಮ್ಸನ್ ವ್ಯಾಡ್ಸ್‌ವರ್ತ್.
- ಸೆಗೆರ್‌ಸ್ಟ್ರೇಲ್, ಉಲ್ಲಿಕಾ., ಮತ್ತು ಮೋಲ್‌ನಾರ್, ಪೀಟರ್ (ಸಂ.). (1997). Nonverbal Communication: Where Nature Meets Culture. ಮಾಹ್‌ವಾಹ್, ನ್ಯೂಜರ್ಸಿ: ಲಾರೆನ್ಸ್ ಅರ್ಲ್‌ಬಾಮ್ ಅಸೋಸಿಯೇಟ್ಸ್. ISBN 0-762-42739-6
ಬಾಹ್ಯ ಕೊಂಡಿಗಳು
ಬದಲಾಯಿಸಿ- "Credibility, Respect, and Power: Sending the Right Nonverbal Signals" by Debra Stein Archived 2010-05-23 ವೇಬ್ಯಾಕ್ ಮೆಷಿನ್ ನಲ್ಲಿ.
- Advanced Body Language Archived 2009-09-04 ವೇಬ್ಯಾಕ್ ಮೆಷಿನ್ ನಲ್ಲಿ. by ರೋಮನ್ ಸ್ಮಿರ್ನೋವ್, 2008
- Online Nonverbal Library ಈ ವಿಷಯವಾಗಿ 500ಕ್ಕೂ ಹೆಚ್ಚು ಉಚಿತ ಲಭ್ಯ ಲೇಖನಗಳೊಂದಿಗೆ.
- The Nonverbal Dictionary of Gestures, Signs & Body Language Cues by ಡೇವಿಡ್ ಬಿ. ಗಿವೆನ್ಸ್
- "Psychology Today Nonverbal Communication Blog posts" by ಜೋ ನವಾರ್ರೋ
- "NVC Portal - A useful portal providing information on Nonverbal Communication" Archived 2010-05-23 ವೇಬ್ಯಾಕ್ ಮೆಷಿನ್ ನಲ್ಲಿ.