ಎಂಆರ್ಐ ಎಂದರೇನು?

ಚಿತ್ರ:MRI India.jpg
M.R.I Scanning machine

ಕೆಲವೊಂದು ಪರಮಾಣು ಜೀವಕೋಶಗಳು (ಇಲ್ಲಿ ಹೈಡ್ರೋಜನ್ ಪರಮಾಣುವಿನ ಜೀವಕೋಶ ರೂಪಿಸುವ ಪ್ರೋಟಾನ್) ಅಯಸ್ಕಾಂತೀಯ ಕಂಪನ (ವೈಬ್ರೇಟ್) ಅಥವಾ ಅನುರಣನ (ರೆಸೊನೇಟ್) ಆಗುವ ಗುಣಗಳ ಸಹಾಯ ಪಡೆದು ಮಾಡುವ ಚಿತ್ರತೆಗೆಯುವ ತಂತ್ರಜ್ಞಾನವೇ ಎಆರ್ಐ. ಅಯಸ್ಕಾಂತೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಹೈಡ್ರೋಜನ್ ಜೀವಕೋಶಗಳು ಅನುರಣನಗೊಂಡಾಗ, ಅವುಗಳು ರೇಡಿಯೋ ತರಂಗ ಶಕ್ತಿಯನ್ನು ಹೊರಸೂಸುತ್ತವೆ. ಹೊರಸೂಸಿದ ಈ ಶಕ್ತಿಯನ್ನು ಎಂಆರ್ಐ ಯಂತ್ರವು ಗುರುತಿಸುತ್ತದೆ ಮತ್ತು ಅದನ್ನು ಚಿತ್ರ ರೂಪಕ್ಕೆ ಪರಿವರ್ತಿಸುತ್ತದೆ.

ಹೈಡ್ರೋಜನ್ ಜೀವಕೋಶವನ್ನೇ ಬಳಸುವುದೇಕೆಂದರೆ ನೀರಿನ ಅಣುಗಳಲ್ಲಿ (H2O) ಹೈಜ್ರೋಜನ್ ಅಥವಾ ಜಲಜನಕದ ಪರಮಾಣುಗಳಿರುತ್ತವೆ. ಈ ಕಾರಣಕ್ಕೆ ಅವು ದೇಹದ ಎಲ್ಲಾ ಅಂಗಾಂಶಗಳಲ್ಲೂ ಕೂಡ ಲಭ್ಯವಿರುತ್ತವೆ.

ಎಂಆರ್ಐ ಸ್ಕ್ಯಾನಿಂಗ್‌ನಿಂದ ಪಡೆದ ಚಿತ್ರಗಳು ಅತ್ಯಂತ ನಿಖರ ಮತ್ತು ಸವಿವರಾತ್ಮಕವಾಗಿರುತ್ತವೆ. ಈಗಿನ ಎಂಆರ್ಐ ಯಂತ್ರಗಳೊಂದಿಗೆ, ಈ ಚಿತ್ರಗಳನ್ನು 3-D ಪ್ರಾಜೆಕ್ಷನ್‌ಗಳಾಗಿ ಉತ್ಪತ್ತಿ ಮಾಡಬಹುದು. ಒಮ್ಮೆ 3-D ಎಂಆರ್ಐ ಚಿತ್ರಗಳನ್ನು ಪಡೆದ ನಂತರ, ಅವುಗಳನ್ನು ಭಾಗಗಳಾಗಿ ಪ್ರತ್ಯೇಕಿಸಿ ವಿವರವಾಗಿ ಪರಿಶೀಲಿಸಲಾಗುತ್ತದೆ.

ಅಂಗಾಂಶವೊಂದರ ವಿವಿಧ ಭಾಗಗಳಲ್ಲಿ ರಕ್ತದ ಹರಿವು ಮುಂತಾದ ಪ್ರಕ್ರಿಯೆಗಳಿಂದಾಗಿ ಕಾಣಿಸಿಕೊಳ್ಳುವ ಹೈಡ್ರೋಜನ್ ಪರಮಾಣುಗಳ ವ್ಯತ್ಯಾಸಗಳಿಂದಾಗಿ ವಿಭಿನ್ನ ಪ್ರಮಾಣ ಶಕ್ತಿ ಉತ್ಪಾದನೆಯಾಗುತ್ತದೆ. ಈ ಶಕ್ತಿಯ ವ್ಯತ್ಯಾಸಗಳು ಎಂಆರ್ಐ ಮೇಲೆ ಬೂದುಬಣ್ಣದ ಶೇಡ್‌ಗಳಾಗಿ ಕಾಣಿಸುತ್ತವೆ. ಈ ಮೂಲಕ, ಕಡಿಮೆ ರಕ್ತದ ಹರಿವುಳ್ಳ ಅಥವಾ ಹಾನಿಯಾದ (ಹೃದಯಾಘಾತ ವೇಳೆ) ಹೃದಯದ ಅಂಗಾಂಶ ಪ್ರದೇಶಗಳನ್ನು ಗುರುತಿಸುವಲ್ಲಿಯೂ ಎಂಆರ್ಐ ಪ್ರಧಾನ ಪಾತ್ರ ವಹಿಸುತ್ತದೆ.

ಆದರೆ ಹೃದಯದಂತಹ ಸದಾ ಚಲನಶೀಲನಾಗಿರುವ ಅಂಗಗಳ ಚಿತ್ರ ತೆಗೆಯುವಲ್ಲಿ ತಾಂತ್ರಿಕ ಸಮಸ್ಯೆಗಳಿರುತ್ತವೆ. ಮಾಹಿತಿ ಸಂಗ್ರಹದ ವೇಳೆ ಚಲನೆಯಾದಲ್ಲಿ ಅದು ಚಿತ್ರದ ಗುಣಮಟ್ಟದ ಮೇಲೆ ಕೆಟ್ಟ ಪ್ರಭಾವ ಬೀಳುತ್ತದೆ ಮತ್ತು ನೀವು ನೋಡಲು ಇಚ್ಛಿಸುವ ಅಂಗಗಳು ಅತ್ಯಂತ ಸಣ್ಣದಾಗಿದ್ದಲ್ಲಿ (ರಕ್ತನಾಳಗಳಂತೆ) ಚಲನೆಯ ಸಮಸ್ಯೆಯು ತೀವ್ರವಾಗಿರುತ್ತದೆ. ತಂತ್ರಜ್ಞಾನವು ವೇಗವಾಗಿ ಪ್ರಗತಿ ಸಾಧಿಸುತ್ತಿದ್ದು, ಉತ್ಕೃಷ್ಟ ಗುಣಮಟ್ಟದ ಕಾರ್ಡಿಯಾಕ್ ಎಂಆರ್ಐ ನಿರ್ವಹಿಸಬಲ್ಲ ವಾಣಿಜ್ಯಾತ್ಮಕ ಎಂಆರ್ಐ ಯಂತ್ರಗಳು ಕೂಡ ಮಾರುಕಟ್ಟೆಯಲ್ಲಿ ಲಭ್ಯ.


ಎಂಆರ್ಐ ಎಷ್ಟು ಅನುಕೂಲಕರ?

ಅಮೆರಿಕದೆಲ್ಲೆಡೆ ಎಂಆರ್ಐ ಯಂತ್ರಗಳು ಸಾಕಷ್ಟಿದ್ದರೂ, ಕಾರ್ಡಿಯಾಕ್ ಎಂಆರ್ಐ, ತನ್ನ ಸಂಕೀರ್ಣತೆಯಿಂದಾಗಿ ಮ್ತತು ಸಾಕಷ್ಟು ಸಂಶೋಧನಾ ಅವಕಾಶಗಳಿರುವ ವಿಶ್ವವಿದ್ಯಾನಿಲಯ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿವೆ.

ಯಾವುದೇ ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಯ ಅಯೋರ್ಟಾದ ಅಂಗರಚನೆಯನ್ನು ಅರಿತುಕೊಳ್ಳುವಲ್ಲಿ ಎಂಆರ್ಐ ಅತ್ಯಂತ ಪ್ರಯೋಜನಕರ ಎಂದು ಸಾಬೀತಾಗಿದೆ. ಎಂಆರ್ಐ ನೀಡುವ ಸವಿವರವಾದ ಚಿತ್ರಗಳು ಅಯೋರ್ಟಾದ "ಒಡಕು" ಎಲ್ಲಿಂದ ಪ್ರಾರಂಭವಾಗುತ್ತದೆ ಮತ್ತು ಅಂಗವಿಚ್ಛೇದನೆಯ ಪ್ರಮಾಣ ಎಷ್ಟು ಎಂಬುದನ್ನು ತಜ್ಞವೈದ್ಯರಿಗೆ ನಿಖರವಾಗಿ ತಿಳಿಸುತ್ತದೆ. ಮಾತ್ರವಲ್ಲದೆ ಅಪರೂಪದ ಹೃದಯದ ಗೆಡ್ಡೆ (ಟ್ಯೂಮರ್)ಗಳನ್ನು ಕೂಡ ಎಂಆರ್ಐ ಪತ್ತೆ ಹಚ್ಚಬಲ್ಲುದು. ಜನ್ಮಜಾತವಾದ ಸಂಕೀರ್ಣ ಹೃದ್ರೋಗವಿರುವ ಮಕ್ಕಳಲ್ಲಿ, ವಿವಿಧ ತೊಂದರೆಗಳನ್ನು ವಿಂಗಡಿಸುವಲ್ಲಿ ಮತ್ತು ಸಂಭಾವ್ಯ ಶಸ್ತ್ರಕ್ರಿಯಾ ಚಿಕಿತ್ಸೆಗಳನ್ನು ಯೋಜಿಸುವಲ್ಲಿಯೂ ಇದು ಸಹಕಾರಿಯಾಗಿದೆ.