ಹಾಜಿ ಅಬ್ದುಲ್ಲಾ
ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಬಹಾದೂರ್ ಅವರು ಹಾಜಿ ಅಬ್ದುಲ್ಲಾ ಎಂಬ ಹೆಸರಿನಲ್ಲಿ ಪರಿಚಿತರು. ಇವರು ಸ್ಥಾಪಿಸಿದ ಕಾರ್ಪೋರೇಶನ್ ಬ್ಯಾಂಕ್ ಭಾರತ ದೇಶದ ಪ್ರಮುಖ ಬ್ಯಾಂಕುಗಳಲ್ಲೊಂದಾಗಿತ್ತು. ೧೧೩ ವರ್ಷಗಳ ಕಾಲ ಬ್ಯಾಂಕಿಂಗ್ ವ್ಯವಹಾರ ನಡೆಸಿದ ಕಾರ್ಪೋರೇಶನ್ ಬ್ಯಾಂಕ್ ೨೦೨೦ರಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಂಡಿತು.
ಹಾಜಿ ಅಬ್ದುಲ್ಲಾ | |
---|---|
ಉಡುಪಿಯ ಕಾರ್ಪೋರೇಶನ್ ಪಾರಂಪರಿಕ ವಸ್ತುಸಂಗ್ರಹಾಲಯದಲ್ಲಿರುವ ಅಬ್ದುಲ್ಲಾ ಅವರ ಎದೆಮಟ್ಟದ ವಿಗ್ರಹ | |
ವೈಯಕ್ತಿಕ ಮಾಹಿತಿ | |
ಜನನ | ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಉಡುಪಿ |
ಮರಣ | 12 August 1935 ಉಡುಪಿ | (aged 53)
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ಉದ್ಯಮಿ,ಸಮಾಜ ಸೇವಕ |
ಜನನ ಮತ್ತು ಕೌಟುಂಬಿಕ ಹಿನ್ನಲೆ
ಬದಲಾಯಿಸಿಹಾಜಿ ಅಬ್ದುಲ್ಲಾ ಸಾಹೇಬರ ಜನ್ಮ ದಿನಾಂಕದ ನಿಖರ ದಾಖಲೆಗಳಿಲ್ಲ. ಕ್ರಿಸ್ತಶಕ ೧೮೮೨ರಲ್ಲಿ ಜನಿಸಿದರು ಎಂಬ ಊಹಾತ್ಮಕ ದಾಖಲೆಗಳಿವೆ[೧]. ಇವರು ಗುಜಾರಾತ್‍ನ ಜುನಾಘಡದಿಂದ ವಲಸೆ ಬಂದಿದ್ದ ಶ್ರೀಮಂತ ವರ್ತಕ ಕುಟುಂಬಕ್ಕೆ ಸೇರಿದವರು.ಹಾಜೀ ಅಬ್ದುಲ್ಲಾ ಅವರ ಅಜ್ಜ ಹಾಜಿ ಬುಡಾನ್ ಸಾಹೇಬರು ಇಡೀ ಮದ್ರಾಸ್ ಪ್ರಾಂತ್ಯಕ್ಕೆ ಭಾರಿ ದೊಡ್ದ ವರ್ತಕರಾಗಿದ್ದವರು. ಇವರ ಮನೆ ಮಲ್ಪೆಯಲ್ಲಿ ಇದ್ದರೆ ಇವರ ಕಚೇರಿ ಉಡುಪಿಯ ಬಡಗು ಪೇಟೆಯಲ್ಲಿ ಇತ್ತು. ಇವರದ್ದು ರಫ್ತು ಉಧ್ಯಮ. ಉಡುಪಿಯಿಂದ ಗಂಧದ ಎಣ್ಣೆ, ಒಣ ಮೀನು, ಗಂದಸಾಲೆ ಅಕ್ಕಿ, ಹಂಚು, ಮಸಾಲೆ ಪದಾರ್ಥಗಳನ್ನು ತಮ್ಮ ಬೃಹತ್ ಗಾತ್ರದ ಹವಾಯಿ ಹಡಗಿನಲ್ಲಿ ಶ್ರೀಲಂಕ, ಬರ್ಮ ಮತ್ತು ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡಿ ಅಲ್ಲಿಂದ ಪಿಂಗಾಣಿ ಪಾತ್ರೆಗಳು ವಿಲಾಯಿತಿ ಬಟ್ಟೆಗಳು, ಕರ್ಜೂರ ಮುಂತಾದ ವಸ್ತುಗಳನ್ನು ಆಮದು ಮಾಡಿಕೊಂಡು ಉಡುಪಿ ಮಂಗಳೂರು ಮುಂತಾದ ಕಡೆ ಮಾರಾಟ ಮಾಡುವುದಾಗಿತ್ತು. ಹಾಜಿ ಬುಡಾನ್ ಸಾಹೇಬರ ಕಾಲದ ನಂತರ ಅವರ ವ್ಯವಹಾರದ ಜವಾಬ್ಧಾರಿ ಹೊತ್ತದ್ದು ಅವರ ಮಗ, ಹಾಜಿ ಅಬ್ದುಲ್ಲಾರ ತಂದೆ ಹಾಜಿ ಖಾಸಿಮ್ ಸಾಹೇಬರು. ತನ್ನ ತಂದೆ ಹಾಜೀ ಬುಡಾನ್ ಸಾಹೇಬರ ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಿದರು. ಹಾಜಿ ಅಬ್ದುಲ್ಲಾರು ಸುಮಾರು ೧೯ರ ವಯಸ್ಸಿನಲ್ಲೇ ತಂದೆ ಕಾಸಿಮ್ ಸಾಹೇಬರನ್ನ ಕಳೆದುಕೊಂಡರು. ಅಬ್ದುಲ್ಲಾರು ಅಂದಿನ ಮೂರನೇ ಫಾರ್ಮ್ ಅಂದರೆ ಈಗಿನ ೯ನೇ ತರಗತಿವರೆಗಿನ ವಿದ್ಯಾಭ್ಯಾಸದ ಬಳಿಕ ತಮ್ಮ ಕುಟುಂಬದ ವ್ಯಾಪಾರದಲ್ಲಿ ತೊಡಗಿಕೊಂಡರು.
ಔದ್ಯಮಿಕ ಸಾಧನೆ
ಬದಲಾಯಿಸಿಪ್ರಮುಖ ವ್ಯಾಪಾರ ಕೇಂದ್ರವಾಗಿದ್ದ ಉಡುಪಿಯಲ್ಲಿ ೨೦ನೇ ಶತಮಾನದ ಆರಂಭದವರೆಗೆ ಬ್ಯಾಂಕ್ ನ ವ್ಯವಸ್ಥೆ ಇರಲಿಲ್ಲ. ಸ್ಥಳೀಯ ಬ್ಯಾಂಕಿಂಗ್ ಕೆಲವು ಶ್ರೀಮಂತ ಖಾಸಗಿ ವ್ಯಕ್ತಿಗಳ ಕೈಯಲ್ಲಿತ್ತು. ಉಡುಪಿಯಲ್ಲಿ ಆಧುನಿಕ ಬ್ಯಾಂಕ್ ನ ಮೊದಲ ಶಾಖೆ ಪ್ರಾರಂಭವಾಗಿದ್ದು ಬ್ಯಾಂಕ್ ಆಫ್ ಮದ್ರಾಸ್. ಇದು ೧೮೬೮ ರಲ್ಲಿ ಮಂಗಳೂರಿನಲ್ಲಿ ತನ್ನ ಕಚೇರಿ ಪ್ರಾರಭಿಸಿತು.,ಹೆಚ್ಚಾಗಿ ತೋಟ ಉತ್ಪನ್ನಗಳ ರಫ್ತು ವ್ಯವಹರಿಸುವಾಗ ಕೆಲವು ಬ್ರಿಟಿಶ್ ಸಂಸ್ಥೆಗಳ ವ್ಯಾಪಾರ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಈ ಬ್ಯಾಂಕ್ ಸ್ಥಾಪಿತಗೊಂಡಿತ್ತು.ಬ್ಯಾಂಕ್ ನ ಏಜೆಂಟ್ ಹದಿನೈದು ದಿನಕ್ಕೊಮ್ಮೆ ಉಡುಪಿಗೆ ಭೇಟಿ ನೀಡುತ್ತಿದ್ದರು.ಹಣ ಪಾವತಿ ಪೋಸ್ಟಲ್ ಮಾಧ್ಯಮದ ಮೂಲಕ ಮಾತ್ರ ಮಾಡಬೇಕಿತ್ತು. ಈ ಬ್ಯಾಂಕಿನಿಂದ ಸ್ಥಳೀಯ ಉದ್ಯಮಿಗಳಿಗಾಗಲಿ, ಉಡುಪಿಯ ಇತರ ನಾಗರಿಕರಿಗಾಗಲೀ ವಿಶೇಷ ಪ್ರಯೋಜನವಾಗುತ್ತಿರಲಿಲ್ಲ. ಆಗ ಬಾಲ ಗಂಗಾಧರ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರೇರಣೆಗೊಂಡ ಹಾಜಿ ಅಬ್ದಲ್ಲಾರವರು ಕೆಲವು ಸಮಾನ ಮನಸ್ಕರನ್ನು ಜೊತೆಯಾಗಿಸಿಕೊಂಡು ಸ್ಥಳೀಯರಿಗೆ ಉಪಯೋಗವಾಗುವಂಥಹ ಬ್ಯಾಂಕ್ ಅನ್ನು ಸ್ಥಾಪಿಸಬೇಕೆಂದು ಯೋಜಿಸಿದರು. ೧೨ ಮಾರ್ಚ್ ೧೯೦೬ರಂದು ೫೦೦೦/- ರೂಪಾಯಿ ಬಂಡವಾಳದೊಂದಿಗೆ ಕೆನರಾ ಬ್ಯಾಂಕಿಂಗ್ ಕಾರ್ಪೊರೇಷನ್ (ಉಡುಪಿ) ಲಿಮಿಟೆಡ್ ಎಂಬ ಹೆಸರಿನಲ್ಲಿ ಈ ಯೋಜನೆ ಸಾಕಾರಗೊಂಡಿತು.[೨] ಬಳಿಕ ಇದೇ ಬ್ಯಾಂಕು ಕಾರ್ಪೋರೇಶನ್ ಬ್ಯಾಂಕ್ ಎಂಬ ಹೆಸರಿನಲ್ಲಿ ಸುಮಾರು ೨೪೩೨ ಶಾಖೆಗನ್ನು ಹೊಂದುವಷ್ಟು ಬೆಳೆಯಿತು.
ಸಾಮಾಜಿಕ ಕೊಡುಗೆ
ಬದಲಾಯಿಸಿಉಡುಪಿಯ ಬೆಳವಣಿಗೆಗೆ ಶಾಲೆಯೊಂದರ ಅಗತ್ಯವಿದೆ ಎಂಬುದನ್ನು ಮನಗಂಡು ೧೯೦೯ರಲ್ಲಿ ಬನ್ನಂಜೆಯಲ್ಲಿ ತಮಗೆ ಸೇರಿದ್ದ ಒಂದು ಎಕರೆ ಜಾಗವನ್ನು ದಾನವಾಗಿ ನೀಡಿದರು. ಉಡುಪಿಯ ಮುಖ್ಯ ಬೀದಿಯಲ್ಲಿ ಜನರ ಉಪಯೋಗಕ್ಕಾಗಿ ಆಸ್ಪತ್ರೆಯನ್ನು ಸ್ಥಾಪಿಸಿದರರು. ೧೯೧೮ರಲ್ಲಿ ಪ್ರಥಮ ಮಹಾಯುದ್ದದ ಸಮಯದಲ್ಲಿ ಅಕ್ಕಿಯ ಕೊರತೆಯುಂಟಾದಾಗ, ತನ್ನದೇ ಹಡಗಿನಲ್ಲಿ ಬರ್ಮಾದ ರಂಗೂನ್‍ನಿಂದ ಅಕ್ಕಿ ವಿತರಿಸಿದ್ದ ದಾಖಲೆಗಳಿವೆ. ೧೯೨೦ರ ಸುಮಾರಿನಲ್ಲಿ ಉಡುಪಿಯ ಅಷ್ಟ ಮಠಗಳು ಆರ್ಥಿಕ ಸಂಕಷ್ಟದಲ್ಲಿದ್ದಾಗ, ಮಠಗಳಿಗೆ ಅಗತ್ಯವಿದ್ದ ಸಾಮಗ್ರಿಗಳನ್ನು ತಮ್ಮ ಭಂಡಾರದಿಂದಲೇ ನೀಡಿದರು. ಅಷ್ಟಮಠಗಳಲ್ಲೊಂದಾದ ಕೃಷ್ಣಾಪುರ ಮಠವು ಚಿನ್ನದ ಪಲ್ಲಕ್ಕಿಯನ್ನು ನಿರ್ಮಿಸಲು ಬಯಸಿದಾಗ ಒಂದು ಸೇರು ಚಿನ್ನವನ್ನು ನೀಡಿದರು. ಉಡುಪಿಯಲ್ಲಿರುವ ಅಂಜುಮನ್ ಮಸೀದಿಯೂ ಕೂಡ ಹಾಜಿ ಅಬ್ದುಲ್ಲ ಆವರ ಕುಟುಂಬದ ಕೊಡುಗೆ. ಇವಷ್ಟೇ ಅಲ್ಲದೇ, ಇವರಿಂದ ವೈಯುಕ್ತಿಕವಾಗಿ ಸಹಾಯ ಪಡೆದವರು ಹಲವರು.
ಇವರು ಉಡುಪಿ ಲೋಕಲ್ ಬೋರ್ಡಿನ ಸದಸ್ಯರಾಗಿದ್ದರು. ಉಡುಪಿ ಕೋ ಆಪರೇಟಿವ್ ಸೊಸೈಟಿಯನ್ನ ಹುಟ್ಟು ಹಾಕಿದರು. ಕುಂದಾಪುರದ ತಾಲ್ಲೂಕ್ ಬೋರ್ಡಿನ ಹಾಗೂ ಉಡುಪಿ ತಾಲ್ಲೂಕ್ ಬೋರ್ಡಿನ ಅಧ್ಯಕ್ಷರಾಗಿದ್ದರು. ಮದ್ರಾಸ್ ವಿಧಾನ ಸಭೆಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ೧೯೩೫ರಲ್ಲಿ ಉಡುಪಿಯ ನಗರಸಭೆಯ ರಚನೆಗೊಂಡಾಗ ಅದರ ಮೊದಲ ಅಧ್ಯಕ್ಷರಾಗಿ ಆಯ್ಕೆ ಆದರು. ೧೯೩೪ ಫೆಬ್ರಚರಿ ೨೪ರಂದು ಮಹಾತ್ಮಾ ಗಾಂಧೀಜಿಯವರ ಉಡುಪಿಗೆ ಭೇಟಿ ನೀಡಿದಾಗ ಸ್ವಾಗತ ಸಮಿತಿಯ ಅಧ್ಯಕ್ಷತೆಯನ್ನು ಹಾಜಿ ಅಬ್ದುಲ್ಲಾ ಸಾಹೇಬರು ವಹಿಸಿದ್ದರು.[೩]
ಸಂದ ಗೌರವಗಳು
ಬದಲಾಯಿಸಿಉಡುಪಿ ಕೃಷ್ಣ ಮಠ, ಅವರು ಮಠಕ್ಕೆ ಮಾಡಿದ ಸೇವೆಗಳನ್ನ ಪರಿಗಣಿಸಿ “ಹಗಲು ದೀವಟಿಗೆ”ಯ ಮರ್ಯಾದೆ ಕೊಟ್ಟಿತ್ತು. ಅಂದಿನ ಬ್ರಿಟೀಶ್ ಸರ್ಕಾರ ೧೯೦೯ರಲ್ಲಿ ಖಾನ್ ಸಾಹೇಬ್” ಹಾಗೂ ೧೯೨೦ರಲ್ಲಿ “ಖಾನ್ ಬಹದ್ದೂರ್” ಎಂಬ ಬಿರುದನ್ನು ಕೊಟ್ಟಿತ್ತು.[೪]
ಕೊನೆಯ ದಿನಗಳು
ಬದಲಾಯಿಸಿ೧೯೩೫ರ ಆರಂಭದಲ್ಲಿ ಇವರು ಸರಕು ತುಂಬಿಸಿ ಶ್ರೀಲಂಕಾಕ್ಕೆ ಕಳುಹಿಸಿದ ಹಡಗುಗಳು ಚಂಡಮಾರುತಕ್ಕೆ ಸಿಕ್ಕಿ ಮುಳುಗಿದವು, ಅಷ್ಟೇ ಅಲ್ಲದೆ ಇನ್ನೂ ಹಲವು ವ್ಯವಹಾರಗಳಲ್ಲಿ ನಷ್ಟ ಅನುಭವಿಸಿ ಮಾನಸಿಕವಾಗಿ ಕೊರಗಿ ಆನಾರೋಗ್ಯಕ್ಕೆ ಈಡಾಗಿ ಆಗಸ್ಟ್ ೧೧, ೧೯೩೫ರಂದು ಮರಣ ಹೊಂದಿದರು.
ಉಲ್ಲೇಖಗಳು
ಬದಲಾಯಿಸಿ- ↑ https://www.thehindu.com/news/cities/Mangalore/haji-abdulla-saheb-documentary-released/article19952402.ece
- ↑ "ಆರ್ಕೈವ್ ನಕಲು". Archived from the original on 12 ಮೇ 2020. Retrieved 12 ಮೇ 2020.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಸುವರ್ಣ ನ್ಯೂಸ್ ಲೇಖನ
- ↑ http://www.daijiworld.com/news/newsDisplay.aspx?newsID=479100