ಬ್ರಹ್ಮಾನಂದ

(ಸ್ವಾಮಿ ಬ್ರಹ್ಮಾನಂದ ಇಂದ ಪುನರ್ನಿರ್ದೇಶಿತ)

ಶ್ರೀ ರಾಮಕೃಷ್ಣ ಪರಮಹಂಸರ 'ಮಾನಸ ಪುತ್ರ' ರೆಂದು ಕರೆಯಲ್ಪಡುತ್ತಿದ್ದ 'ಸ್ವಾಮಿ ಬ್ರಹ್ಮಾನಂದರು' ರಾಮಕೃಷ್ಣ ಮಹಾಸಂಘದ ಪ್ರಥಮ ಅಧ್ಯಕ್ಷರಾಗಿದ್ದರು.

'ಸ್ವಾಮಿ ಬ್ರಹ್ಮಾನಂದ'

ಜನನ ಹಾಗೂ ಬಾಲ್ಯ

ಬದಲಾಯಿಸಿ

'ಸ್ವಾಮಿ ಬ್ರಹ್ಮಾನಂದ'ರ ಬಾಲ್ಯದ ಹೆಸರು, 'ರಾಖಾಲಚಂದ್ರ ಘೋಷ'. ಕಲಕತ್ತೆಯ ಸಮೀಪದ ಸಿಕ್ರಾ ಗ್ರಾಮದ ಶ್ರೀಮಂತ ಕುಟುಂಬ ಒಂದರಲ್ಲಿ ಜನವರಿ ೧೮೬೩ರಲ್ಲಿ ಇವರು ಜನಿಸಿದರು. ಇವರ ತಂದೆ ಆನಂದ ಮೋಹನ ಘೋಷ, ತಾಯಿ ಕೈಲಾಸಕಾಮಿನಿ.ಮಾಧ್ಯಮಿಕ ಶಾಲೆಯನ್ನು ಕಲೆಯುತ್ತಿದ್ದಾಗ ಮುಂದೆ ಸ್ವಾಮಿ ವಿವೇಕಾನಂದರೆಂದು ಪ್ರಖ್ಯಾತರಾದ ನರೇಂದ್ರದತ್ತನ ಸಂಪರ್ಕ ಇವರಿಗೆ ಒದಗಿ ಬಂತು. ದೂರದ ಸಂಬಂಧಿಯಾದ ನರೇಂದ್ರ ಇವರ ಆಜೀವನ ಸ್ನೇಹಿತನಾದನು.

'ರಾಖಾಲ'ನು ಬಾಲ್ಯದಿಂದಲೂ ಆಧ್ಯಾತ್ಮಿಕ ಜೀವನದ ಕುರಿತಾಗಿ ಆಸಕ್ತನಾಗಿದ್ದನು. ಈ ಭಕ್ತಿಭಾವದ ಪರಿಣಾಮವಾಗಿ ಶಾಲಾಭ್ಯಾಸದ ಕುರಿತಾಗಿ ಅವನ ಆಸಕ್ತಿ ಅಷ್ಟಕ್ಕಷ್ಟೇ. ಇವರ ತಂದೆ, ಸಂಸಾರ ಜೀವನದಲ್ಲಿ ರಾಖಾಲನಿಗೆ ಆಸಕ್ತಿ ಉಂಟಾಗಲಿ ಎಂದು ಬಾಲ್ಯದಲ್ಲೇ ವಿವಾಹವನ್ನು ಏರ್ಪಡಿಸಿದರು. ಆದರೆ ವಿಧಿಯ ವಿಚಿತ್ರವೆಂಬಂತೆ ಈ ಮದುವೆಯು ರಾಖಾಲನು ಆಧ್ಯಾತ್ಮಿಕ ಜೀವನದಲ್ಲಿ ತೊಡಗಿಕೊಳ್ಳಲು ಕಾರಣವಾಗಿ ಪರಿಣಮಿಸಿತು. ರಾಖಾಲನ ವಿವಾಹವಾಗಿದ್ದು ಶ್ರೀರಾಮಕೃಷ್ಣರ ಭಕ್ತರಾದ ಮನಮೋಹನ ಮಿತ್ರರೆಂಬ ಗೃಹಸ್ಥ ಭಕ್ತರ ತಂಗಿ ವಿಶ್ವೇಶ್ವರಿಯೊಂದಿಗೆ. ವಿಶ್ವೇಶ್ವರಿಯ ತಾಯಿ ಶ್ಯಾಮಸುಂದರಿದೇವಿಯೂ ಶ್ರೀರಾಮಕೃಷ್ಣರ ಪರಮ ಭಕ್ತೆಯಾಗಿದ್ದಳು. ಹೀಗೆ ರಾಮಕೃಷ್ಣರ ಸಂಪರ್ಕ ರಾಖಾಲನಿಗೆ ಉಂಟಾಯಿತು. ರಾಮಕೃಷ್ಣರ ಪ್ರೇಮಪೂರ್ವಕ ಮಾರ್ಗದರ್ಶನದಲ್ಲಿ ರಾಖಾಲನ ಆಧ್ಯಾತ್ಮಿಕ ಸಾಧನೆ ಭರದಿಂದ ಸಾಗಿತು. ರಾಖಾಲನಿಗೆ ಅನೇಕ ಆಧ್ಯಾತ್ಮಿಕ ಅನುಭವಗಳೂ ದಿವ್ಯದರ್ಶನಗಳೂ ಆದವು.

ರಾಮಕೃಷ್ಣ ಪರಮಹಂಸರ ತರುವಾಯ

ಬದಲಾಯಿಸಿ

೧೮೮೬ ರಲ್ಲಿ 'ಶ್ರೀರಾಮಕೃಷ್ಣರ ಮಹಾಸಮಾಧಿ'ಯ ನಂತರ ರಾಖಾಲನು ನರೇಂದ್ರನೇ ಮೊದಲಾದ ರಾಮಕೃಷ್ಣರ ನೇರಶಿಷ್ಯರ ಜೊತೆಗೂಡಿ, ಸಂನ್ಯಾಸಾಶ್ರಮವನ್ನು ಸ್ವೀಕರಿಸಿ ಬ್ರಹ್ಮಾನಂದ ನೆಂಬ ಹೆಸರನ್ನು ಪಡೆದನು. ಬ್ರಹ್ಮಾನಂದರು ಹಲವಾರು ವರ್ಷಗಳಕಾಲ ಕಠಿಣವಾದ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುತ್ತ ಪರಿವ್ರಾಜಕ ಸಂನ್ಯಾಸಿಯಾಗಿ ವಾರಣಾಸಿ, ಓಂಕಾರನಾಥ, ಬ್ರಂದಾವನ, ಹರಿದ್ವಾರವೇ ಮೊದಲಾದ ಭಾರತದ ಹಲವಾರು ತೀರ್ಥಕ್ಷೇತ್ರಗಳಿಗೆ ಭೇಟಿ ಇತ್ತರು. ಸ್ವಾಮಿ ವಿವೇಕಾನಂದರು ಅಮೇರಿಕದಲ್ಲಿ ವೇದಾಂತ ಪ್ರಸಾರವನ್ನು ಮಾಡಿ ಭಾರತಕ್ಕೆ ಮರಳುವ ಸ್ವಲ್ಪ ಮುಂಚೆ, ಬ್ರಹ್ಮಾನಂದರು ವರಾಹನಗರದ ಮಠಕ್ಕೆ ಹಿಂದುರುಗಿದರು. ಭಾರತಕ್ಕೆ ಮರಳಿದ ವಿವೇಕಾನಂದರು ರಾಮಕೃಷ್ಣ ಸಂಘವನ್ನು ಸ್ಥಾಪಿಸಿ ಬ್ರಹ್ಮಾನಂದರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದರು. ಇದಾದ ಸ್ವಲ್ಪ ಸಮಯಕ್ಕೇ 'ವಿವೇಕಾನಂದ'ರು ಬ್ರಹ್ಮಲೀನರಾದರು. ಸಂಘದ ಆರಂಭದಲ್ಲೇ ಒದಗಿ ಬಂದ ಈ ಆಘಾತವನ್ನು ಸಹಿಸಿಕೊಂಡು ಅದನ್ನು ಮುಂದುವರೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಬ್ರಹ್ಮಾನಂದರದಾಯಿತು.

ಹೊಸ ಶಾಖೆಗಳು ಸ್ಥಾಪಿಸಲ್ಪಟ್ಟವು

ಬದಲಾಯಿಸಿ

ಅವರ ಆಡಳಿತಾವಧಿಯಲ್ಲಿ ಸಂಘವು ಅನೇಕ ಆರ್ಥಕ ಮುಗ್ಗಟ್ಟುಗಳ ಹೊರತಾಗಿಯೂ ಅನೇಕ ಶಾಖಾಮಠಗಳನ್ನು ಪ್ರಾರಂಭಿಸಿತು. ಅನೇಕರು ಸಂನ್ಯಾಸಿ ಜೀವನದಲ್ಲಿ ಆಕರ್ಷಿತರಾಗಿ ಸಂಘವನ್ನು ಸೇರಿ ಸೇವೆಯಲ್ಲಿ ತೊಡಗಿಕೊಂಡರು. ತಮ್ಮ ಹಿಮಾಲಯ ಸದೃಶ ಆಧ್ಯಾತ್ಮಿಕ ವ್ಯಕ್ತಿತ್ವ ಮತ್ತು ಆಡಳಿತದ ಸಮಸ್ಯೆಗಳನ್ನು ಪರಿಹರಿಸುವ ವಿಶೇಷ ಚಕ್ಯತೆಯ ಬಲದಿಂದ ಅವರು ಸಂಘವನ್ನು ಮುನ್ನೆಡಿಸಿಕೊಂಡು ಹೋದರು. ಅನೇಕ ಆಧ್ಯಾತ್ಮಿಕ ಸಾಧಕರಿಗೆ ಸೂಕ್ತ ಮಾರ್ಗದರ್ಶನವನ್ನು ಮಾಡಿದರು. ಸಂಘದಲ್ಲಿ ಅವರನ್ನು ’ರಾಜಾ ಮಹಾರಾಜ್’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು.

ಬ್ರಹ್ಮಾನಂದ ಮಹರಾಜರ ನಿರ್ವಾಣ

ಬದಲಾಯಿಸಿ

ಅವರು ೧೯೨೨ರ ಎಪ್ರಿಲ್ ೧೦ರಂದು ಬ್ರಹ್ಮಲೀನರಾದರು. ಬೇಲೂರು ಮಠದಲ್ಲಿ ಅವರ 'ಅಂತ್ಯೇಷ್ಟಿ'ಗಳು ನಡೆದ ಸ್ಥಳದಲ್ಲಿ ಈಗ ಒಂದು ದೇವಾಲಯವನ್ನು ನಿರ್ಮಿಸಲಾಗಿದೆ.

'ಬ್ರಹ್ಮಾನಂದರ ಬೋಧನೆಗಳು'

ಬದಲಾಯಿಸಿ
  • ನಿನ್ನ ದೇಹ ಮನಸ್ಸನ್ನು ಪ್ರಾಪಂಚಿಕ ಭೋಗಕ್ಕೆ ಬಲಿ ಕೊಟ್ಟರೆ, ಅದು ಎರಡನ್ನೂ ನಾಶಮಾಡುವದು. ಮನಸ್ಸು ಮತ್ತು ದೇಹಗಳನ್ನು ಭಗವಂತನ ಪ್ರೀತಿ ಮತ್ತು ಅವನ ಕೆಲಸಗಳಿಗೆ ಸಮರ್ಪಿಸಿ. ಆಗ ದೇಹಾರೋಗ್ಯವೂ, ಮನದಾನಂದವೂ ಸತತ ನಿಮ್ಮದಾಗುವವು.
  • ಪೂಜೆ ಮತ್ತು ಕೆಲಸಗಳು ಜೊತೆ ಜೊತೆಯಾಗಿ ಸಾಗಬೇಕು. ಕೆಲಸದ ಕುರಿತು ನಿನಗೆ ಭಯವೇತಕೆ? ಭಗವಂತನಿಗಾಗಿ ಕೆಲಸಗಳನ್ನು ಮಾಡು. ಕೆಲಸವನ್ನು ಭಗವದರ್ಪಿತ ಎಂಬ ಭಾವನೆಯಿಂದ ಮಾಡಿದರೆ, ಕೆಲಸದ ಕುರಿತಾದ ಅನಾಸಕ್ತಿ ಹೊರಟು ಹೋಗುವದು.
  • ಮನಸ್ಸನ್ನು ಸ್ಥಿರಗೊಳಿಸುವ ಮತ್ತು ಪವಿತ್ರಗೊಳಿಸುವ ವಿಧಾನವೆಂದರೆ - ಏಕಾಂತತೆಯ ಸ್ಥಳಕ್ಕೆ ಹೋಗಿ, ಎಲ್ಲ ಆಸೆಗಳನ್ನು ನಿಗ್ರಹಿಸಿಕೊಳ್ಳಿ, ನಿಮ್ಮನ್ನು ಧ್ಯಾನ ಮತ್ತು ಆಧ್ಯಾತ್ಮಿಕ ಚಿಂತನೆಯಲ್ಲಿ ತೊಡಗಿಕೊಳ್ಳಿ.