ಸ್ವಾಮಿ ಪುರುಷೋತ್ತಮಾನಂದ

ಭಾರತೀಯ ಸಾಧು

ಸ್ವಾಮಿ ಪುರುಷೋತ್ತಮಾನಂದ (ಜೂನ್ ೧೪, ೧೯೩೧ - ಫೆಬ್ರುವರಿ ೨೫. ೨೦೦೫) ಅವರು ರಾಮಕೃಷ್ಣಾಶ್ರಮದ ಯತಿಗಳಲ್ಲೊಬ್ಬರು. ಬೆಂಗಳೂರಿನ ಬಸವನಗುಡಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಹೆಚ್ಚಿನ ಕಾಲ ಸೇವೆ ಸಲ್ಲಿಸಿದ ಅವರು ಅಮೋಘ ಶೈಲಿಯ ಗ್ರಂಥಕರ್ತರೂ, ಅದ್ಭುತ ಪ್ರವಚನಕಾರರೂ, ಅಪೂರ್ವ ಗಾಯಕರೂ ಆಗಿದ್ದರು.

ಸ್ವಾಮಿ ಪುರುಷೋತ್ತಮಾನಂದ
ಸ್ವಾಮಿ ಪುರುಷೋತ್ತಮಾನಂದ
ಸ್ವಾಮೀಜಿಯವರ ಸಹಿ
ಜನನಜೂನ್ ೧೪, ೧೯೩೧
ಮೂಡಹಾಡು, ಸಾಲಿಗ್ರಾಮ, ದಕ್ಷಿಣ ಕನ್ನಡ, ಕರ್ನಾಟಕ
ಮರಣಫೆಬ್ರುವರಿ ೨೫, ೨೦೦೫
ಇದಕ್ಕೆ ಖ್ಯಾತರುಭಜನೆ, ಪ್ರವಚನ, ಕೃತಿ ರಚನೆ

ಜೀವನ ಬದಲಾಯಿಸಿ

ಜೂನ್ ೧೪, ೧೯೩೧ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಾಲಿಗ್ರಾಮದ ಬಳಿಯ ಮೂಡಹಾಡು ಎಂಬಲ್ಲಿ ರಾಮಚಂದ್ರ ಬಾಯರಿ ಆಗಿ ಜನಿಸಿದ ಸ್ವಾಮೀಜಿಯವರು ಮೆಟ್ರಿಕ್ಯುಲೇಷನ್ ಮುಗಿಸಿ ಮಲ್ಪೆ ಮತ್ತು ಮಡಿಕೇರಿಗಳಲ್ಲಿ ಅಧ್ಯಾಪನ ನಡೆಸಿದರು. ಸ್ವಾಮೀಜಿ ೧೯೬೦ರ ವರ್ಷದಲ್ಲಿ ರಾಮಕೃಷ್ಣ ಪರಂಪರಗೆ ಬ್ರಹ್ಮಚಾರಿಗಳಾಗಿ ಬೆಂಗಳೂರಿನ ರಾಮಕೃಷ್ಣಾಶ್ರಮವನ್ನು ಪ್ರವೇಶಿಸಿದರು. ಅಂದಿನ ದಿನಗಳಲ್ಲಿ ಬೆಂಗಳೂರು ರಾಮಕೃಷ್ಣಾಶ್ರಮದ ಅಧ್ಯಕ್ಷರೂ, ರಾಮಕೃಷ್ಣ ಆರ್ಡರಿನ ಉಪಾಧ್ಯಕ್ಷರೂ ಆಗಿದ್ದ ಸ್ವಾಮಿ ಯತೀಶ್ವರಾನಂದರು ಅವರ ಗುರುವರ್ಯರಾದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು.

ಸೇವೆ ಬದಲಾಯಿಸಿ

ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿ ಬದಲಾಯಿಸಿ

ಆನಂತರದಲ್ಲಿ ನಡೆದದ್ದು ಸಹಸ್ರಾರು ಕರ್ನಾಟಕದ ಜನರಿಗೆ ಅಧ್ಯಾತ್ಮದ ಸಿಂಚನ . ಸ್ವಾಮಿ ಪುರುಷೋತ್ತಮಾನಂದರು ೧೯೯೩ರ ವರ್ಷದವರೆಗೆ ೩೩ ವರ್ಷಗಳ ಕಾಲ ಬೆಂಗಳೂರಿನ ರಾಮಕೃಷ್ಣಾಶ್ರಮದಲ್ಲಿದ್ದರು. ಅವರು ನಡೆಸಿದ ಚಟುವಟಿಕೆಗಳು ಅನಂತವಾದದ್ದು. ವೈವಿಧ್ಯಪೂರ್ಣವಾದದ್ದು. ವಿವೇಕಾನಂದ ಬಾಲಕ ಸಂಘ, ವಿವೇಕಾನಂದ ಯುವಕ ಸಂಘ ಮುಂತಾದ ಪ್ರಮುಖ ಸಂಯೋಜನೆಗಳ ಮೂಲಕ ಬಾಲಕರು ಮತ್ತು ಯುವಕರಿಗೆ ಅವರು ತೋರಿದ ದಾರಿದೀಪ ಮಹತ್ವಪೂರ್ಣವಾದದ್ದು. ಅಂದಿನ ದಿನಗಳಲ್ಲಿ ಪ್ರತೀ ವಾರ ಸ್ವಾಮಿ ಪುರುಷೋತ್ತಮಾನಂದರ ಪ್ರವಚನಗಳು ಎಂದೆಂದಿಗೂ ಹೌಸ್ ಫುಲ್. ಪ್ರವಚನ ಕೇಳಲಿಕ್ಕೆ ಹೋದವರಿಗೆ ಒಂದು ಭಾಷೆಯನ್ನು ಅಷ್ಟು ಸುಂದರವಾಗಿ, ಪ್ರೀತಿಪೂರ್ವಕವಾಗಿ, ಹೃದಯಪೂರ್ವಕವಾಗಿ ಅನುಭವಿಸಬಹುದು ಎಂಬುದನ್ನು ಮನದಟ್ಟು ಮಾಡಿಕೊಡುತ್ತಿದ್ದರು. ಸಾಮಾನ್ಯವಾಗಿ ಆಧ್ಯಾತ್ಮಿಕ ಪ್ರವಚನಗಳಲ್ಲಿ ಹೆಚ್ಚು ವಯಸ್ಸಾದವರು ಮಾತ್ರ ಬರುತ್ತಾರೆ ಎಂಬುದನ್ನು ಅವರ ಪ್ರವಚನಗಳು ಸುಳ್ಳು ಮಾಡಿದ್ದವು. ಅಂದಿನ ಯುವ ಪೀಳಿಗೆಯನ್ನು ಆಧ್ಯಾತ್ಮಿಕ ಪ್ರವಚನಗಳಿಗೆ ಅವರು ಸೆಳೆದ ರೀತಿ ಅಪೂರ್ವವಾದುದು. ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದ ರೀತಿ, ಕಥಾನಕಗಳನ್ನು ವರ್ಣಿಸುತ್ತಿದ್ದ ರೀತಿ, ಅದರಲ್ಲಿದ್ದ ಪ್ರೀತಿಯ ಇನಿದನಿ, ಭಕ್ತರು ನಮಸ್ಕರಿಸುತ್ತಿದ್ದಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ಪ್ರೀತಿಯಿಂದ ಪ್ರತಿನಮಸ್ಕರಿಸುತ್ತಾ ತೋರುತ್ತಿದ್ದ ಆತ್ಮೀಯ ಭಾವ ಇವೆಲ್ಲಾ ಜನ ಸಮುದಾಯದಲ್ಲಿ ಹೃದ್ಭಾವಗಳನ್ನು ಸೃಷ್ಟಿಸಿದ್ದವು.

ಬೆಂಗಳೂರಿನಿಂದ ಹೊರಗೆ ಬದಲಾಯಿಸಿ

೧೯೯೩ರ ವರ್ಷದಲ್ಲಿ ಸ್ವಾಮಿ ಪುರುಷೋತ್ತಮಾನಂದರು ಬೆಂಗಳೂರನ್ನು ಬಿಡಬೇಕಾಯಿತು. ಅವರಿಗೆ ಬೆಂಗಳೂರಿನ ಆಶ್ರಮ ಬಿಡುವ ಮನಸ್ಸಿರಲಿಲ್ಲ. ಸ್ವಾಮಿ ವಿವೇಕಾನಂದರು ಕೂಡಾ ಒಮ್ಮೆ ಹೇಳುತ್ತಾರೆ “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”. ಈ ಮಾತನ್ನು ಕೂಡಾ ಸ್ವಾಮಿ ಪುರುಷೋತ್ತಮಾನಂದರು ತಮ್ಮ ಪ್ರವಚನದಲ್ಲಿ ಆಗಾಗ ಹೇಳುತ್ತಿದ್ದರು. ಇದು ಸ್ವತಃ ಸ್ವಾಮಿ ಪುರುಷೋತ್ತಮಾನಂದರ ಅನುಭಾವವೂ ಆಗಿತ್ತು. ಅವರನ್ನು, ಬೆಂಗಳೂರಿನ ಆಶ್ರಮಕ್ಕೆ ಬರುತ್ತಿದ್ದ ಜನಸ್ತೋಮದ ಪ್ರೀತಿ ಅತ್ಯಂತ ಆಪ್ತವಾಗಿ ಸುತ್ತುವರಿದಿತ್ತು. ೧೯೯೩ರಿಂದ ೨೦೦೦ದ ವರ್ಷದವರೆಗೆ ಅವರು ಕೊಡಗಿನ ಪೊನ್ನಂಪೇಟೆಯ ರಾಮಕೃಷ್ಣ ಶಾರದಾಶ್ರಮದಲ್ಲಿದ್ದರು. ಕೊಡಗಿನಲ್ಲೂ ಸಹಾ ಅವರು ಅಪಾರವಾದ ಕಾರ್ಯ ನಿರ್ವಹಿಸಿದರು. ನವೆಂಬರ್ ೨೦೦೦ದ ವರ್ಷದಿಂದ ಅವರು ಬೆಳಗಾವಿಯ ರಾಮಕೃಷ್ಣಾಶ್ರಮದಲ್ಲಿದ್ದರು. ಅಲ್ಲಿ ಕೂಡಾ ಅವರ ಸಾಧನೆ ಅಮೋಘವಾದದ್ದು. ಕರ್ನಾಟಕದಲ್ಲಿ ಹಲವಾರು ಸತ್ಸಂಗಗಳು, ರಾಮಕೃಷ್ಣ ಆಶ್ರಮಗಳ ಶಾಖೆಗಳ ಪ್ರಾರಂಭಕ್ಕೆ ಅವರು ಮಹತ್ವಪೂರ್ಣ ಕೊಡುಗೆ ನೀಡಿದರು.

ಪ್ರವಚನಕಾರರಾಗಿ ಬದಲಾಯಿಸಿ

ತಮ್ಮ ಪ್ರವಚನಗಳ ಮೂಲಕ ಶ್ರೀರಾಮಕೃಷ್ಣ ಪರಮಹಂಸರು, ಶಾರದಾ ಮಾತೆ ಮತ್ತು ಸ್ವಾಮಿ ವಿವೇಕಾನಂದರ ಕುರಿತು, ಸ್ವಾಮಿ ಪುರುಷೋತ್ತಮಾನಂದರು ಮೂಡಿಸಿದ ಪರಿಣಾಮ ಅಗಾಧವಾದದ್ದು. ಅವರು ನಿರೂಪಿಸಿ ಮತ್ತು ನಂತರ ಪ್ರಕಟಿಸಿದ ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ವಿವೇಕಾನಂದ ಈ ಮೂರೂ ಗ್ರಂಥಗಳು ಕನ್ನಡ ಜನತೆಗೆ ಕೊಟ್ಟ ಅಪೂರ್ವ ಕೊಡುಗೆ. ಅವರ ಪ್ರವಚನದ ಹಲವಾರು ಕ್ಯಾಸೆಟ್ಟುಗಳು ಲಭ್ಯವಿವೆ.

ಗಾಯಕರಾಗಿ ಬದಲಾಯಿಸಿ

ಅವರು ಹಾಡುತ್ತಿದ್ದ ಭಜನೆಗಳು ಭಕ್ತರನ್ನು ಮಂತ್ರಮುಗ್ಧಗೊಳಿಸುತ್ತಿದ್ದವು. ಅವರ ಕಂಠ ಅಪೂರ್ವವಾದದ್ದು. ಅವರ ಗಾಯನದ ಹಲವಾರು ಕ್ಯಾಸೆಟ್ಟುಗಳು ಲಭ್ಯವಿವೆ. ಸ್ವಾಮೀಜಿಯವರ ಭಜನೆಗಳನ್ನು ಯೂಟ್ಯೂಬ್ ನಲ್ಲಿ ಆಲಿಸಿ:
https://www.youtube.com/watch?v=nfKkeRA76os
https://www.youtube.com/watch?v=-PW48DzhUDE
https://www.youtube.com/watch?v=HJeXzYGx2bs
https://www.youtube.com/watch?v=UuzDV6UX0nE
https://www.youtube.com/watch?v=Wr6baysn0Yg
https://www.youtube.com/watch?v=TDe3R_1RSx8
https://www.youtube.com/watch?v=IgDAUxG_kQ8
https://www.youtube.com/watch?v=z0O8cFd_8hQ
https://www.youtube.com/watch?v=UbUmembQUqc
https://www.youtube.com/watch?v=9qTqAE475Gs
https://www.youtube.com/watch?v=JY_9JCRlpVA

ವಿದಾಯ ಬದಲಾಯಿಸಿ

ಈ ಅಪೂರ್ವ ಸಂತ ಸ್ವಾಮಿ ಪುರುಷೋತ್ತಮಾನಂದರು ಫೆಬ್ರುವರಿ ೨೫, ೨೦೦೫ರ ವರ್ಷದಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ತಮ್ಮ ೭೩ನೆಯ ವಯಸ್ಸಿನಲ್ಲಿ ಇಹ ಜೀವನವನ್ನು ತ್ಯಜಿಸಿ ದಿವ್ಯಲೋಕದತ್ತ ಮುಖ ಮಾಡಿದರು.

ಅಪ್ರತಿಮ ಭಾಷಾ ಪ್ರೌಢಿಮೆ ಬದಲಾಯಿಸಿ

ಸ್ವಾಮಿ ಪುರುಷೋತ್ತಮಾನಂದರ ಶೈಲಿ ಓಜಸ್ಸಿನಿಂದ ಕೂಡಿತ್ತು. ಅವರು ಭಾಷೆಯನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಿದ್ದರು. ನಿದರ್ಶನವಾಗಿ ಅವರ ಕಿರುಹೊತ್ತಗೆಗಳಿಂದ ಕೆಲವು ಮಾತುಗಳನ್ನು ಉದಾಹರಿಸಬಹುದು:

  • ಸೂಕ್ಷ್ಮ ಬುದ್ಧಿಯವನು ಸಣ್ಣಸಣ್ಣ ಸಂಗತಿಗಳಿಂದಲೂ ಸಂತೋಷವನ್ನು ಸವಿಯಬಲ್ಲ. (ಮಿಂಚಿನ ಗೊಂಚಲು)
  • ಮಂದಬುದ್ಧಿಯವನ ಮುಂದೆ ಮಣಗಟ್ಟಲೆ ಚಿನ್ನ ಸುರಿದರೂ ಅವನಿಂದ ಮಹತ್ವದ್ದೇನೂ ನಡೆಯಲಾರದು. (ಮಿಂಚಿನ ಗೊಂಚಲು)
  • ಸರ್ವರೂ ಬಯಸುವುದು ಸಹನಶೀಲನ ಸಖ್ಯವನ್ನೇ ಹೊರತು ಸಿಡಿಮಿಡಿಗೊಳ್ಳುವವನ ಸಹವಾಸವನ್ನಲ್ಲ. (ಸಹನೆಯ ಸಂದೇಶ)
  • ಸಹನೆಗೆ ಸಮನಾದ ತಪಸ್ಸಿಲ್ಲ. ಸಂತೃಪ್ತಿಗೆ ಸಮನಾದ ಸಂತೋಷವಿಲ್ಲ. (ಶೀಲ - ಶಕ್ತಿಯ ಮೂಲ)
  • ಸಕಲ ಸಂಕಟಗಳನ್ನೂ ಸಮಚಿತ್ತದಿಂದ ಸಹಿಸಿದವನನ್ನು ಸಮಸ್ತರೂ ಸನ್ಮಾನಿಸುತ್ತಾರೆ. (ಶೀಲ - ಶಕ್ತಿಯ ಮೂಲ)

ಕೃತಿ ರಚನೆ ಬದಲಾಯಿಸಿ

ಕನ್ನಡದಲ್ಲಿ ಬದಲಾಯಿಸಿ


ಜೀವನ ಚರಿತ್ರೆಗಳು ಬದಲಾಯಿಸಿ

  1. ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ (ಮೂರು ಸಂಪುಟಗಳಲ್ಲಿ: 1. ವೀರಸಂನ್ಯಾಸಿ ವಿವೇಕಾನಂದ 2. ವಿಶ್ವವಿಜೇತ ವಿವೇಕಾನಂದ 3. ವಿಶ್ವಮಾನವ ವಿವೇಕಾನಂದ)
  2. ಯುಗಾವತಾರ ಶ್ರೀ ರಾಮಕೃಷ್ಣ (ಎರಡು ಭಾಗಗಳಲ್ಲಿ)
  3. ಶ್ರೀ ಶಾರದಾದೇವೀ ಜೀವನಗಂಗಾ
  4. ಬ್ರಹ್ಮಾನುಭವಿ (ಸ್ವಾಮಿ ಬ್ರಹ್ಮಾನಂದರ ಜೀವನ ಚರಿತ್ರೆ)
  5. ವೀರ ನರೇಂದ್ರ

ಇತರ ಕೃತಿಗಳು ಬದಲಾಯಿಸಿ

  1. ಶ್ರೀ ಶಾರದಾದೇವೀ ಸಂದೇಶ ಮಂದಾರ
  2. ಮೂವರು ನಾವು ಮತ್ತು ಇತರ ಕಥೆಗಳು
  3. ತಾಯಿ, ನೀನು ಕಂಡದ್ದೆಲ್ಲವೂ ಸತ್ಯ!

ಕಿರುಹೊತ್ತಗೆಗಳು ಬದಲಾಯಿಸಿ

  1. ಕಲ್ಪತರು ಶ್ರೀ ರಾಮಕೃಷ್ಣ
  2. ವಿನಯಮೂರುತಿ ಶ್ರೀ ರಾಮಕೃಷ್ಣ
  3. ಪ್ರಿಯದರ್ಶನ ಶ್ರೀರಾಮ
  4. ವಿಶ್ವಮಾನವನಾಗಿ ವಿವೇಕಾನಂದ
  5. ಶ್ರೀಮಾತಾ ವಚನಮಧು
  6. ಕರ್ನಾಟಕದ ಯುವಜನತೆಗೊಂದು ಕರೆ
  7. ಧೀರತೆಯ ದುಂದುಭಿ
  8. ಕಬೀರ ಬೀರಿದ ಬೆಳಕು
  9. ವಿವೇಕ ವಾಹಿನಿ
  10. ಚಿಂತನ-ಮಂಥನ
  11. ಮಿಂಚಿನ ಗೊಂಚಲು
  12. ಯುವಶಕ್ತಿಯ ರಹಸ್ಯ
  13. ಶೀಲ - ಶಕ್ತಿಯ ಮೂಲ
  14. ಸಹನೆಯ ಸಂದೇಶ
  15. ಶಾಂತಿಯ ಹರಕೆ
  16. ಮೌನ - ಶಾಂತಿ (ಮೂರು ಲೇಖನಗಳು)
  17. ತಪಸ್ಸು - ಯಶಸ್ಸು
  18. ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ
  19. ಬಾಲಕ ಸಂಘ
  20. ಶ್ರೀಗುರು ಮಹಿಮೆ
  21. ಜ್ಯೇಷ್ಠಾಶ್ರಮ - ಗೃಹಸ್ಥಧರ್ಮ
  22. ಹೀಗೊಂದು ಕಥೆ
  23. ಜನ ಮತ್ತು ಧನ (Man and Money ಪುಸ್ತಕದ ಅನುವಾದ: ಮುರಳೀಧರ)
  24. ಸಂಸಾರಿ - ಸಂನ್ಯಾಸಿ
  25. ವಿದ್ಯಾರ್ಥಿಗಾಗಿ (1.ವಿದ್ಯಾರ್ಥಿಗೊಂದು ಪತ್ರ, 2.ಅಧ್ಯಯನದಲ್ಲಿ ಏಕಾಗ್ರತೆ, 3.ವಿದ್ಯೆಯ ವೈಭವ, 4.ಸಮಯಪ್ರಜ್ಞೆ, 5.ಪ್ರಾರ್ಥಿಸಿರಿ! ಅಥವಾ, ಭಾವಿಸಿರಿ!)


ಇಂಗ್ಲಿಷಿನಲ್ಲಿ ಬದಲಾಯಿಸಿ

  1. Letter to a Student ('ವಿದ್ಯಾರ್ಥಿಗೊಂದು ಪತ್ರ' ಕೃತಿಯ ಇಂಗ್ಲಿಷ್ ಅನುವಾದ)
  2. Secret of Concentration('ಅಧ್ಯಯನದಲ್ಲಿ ಏಕಾಗ್ರತೆ' ಕೃತಿಯ ಇಂಗ್ಲಿಷ್ ಅನುವಾದ)
  3. Man and Money
  4. Youth and Vitality
  5. Useful thoughts for youths
  6. Build your personality