ಸ್ಟೀಫನ್ ಬಾನಾಕ್
ಬಾಲ್ಯ, ವಿದ್ಯಾಭ್ಯಾಸ
ಬದಲಾಯಿಸಿಕ್ರ್ಯಾಕೋದಲ್ಲಿ 1892 ಮಾರ್ಚ್ 30 ರಂದು ಜನನ. ಸೋವಿಯೆತ್ ದೇಶದ ಉಕ್ರೇನಿಯನ್ ಒಕ್ಕೂಟದಲ್ಲಿ 1945 ಆಗಸ್ಟ್ 31 ರಂದು ಮರಣ. ತಂದೆ ತಾಯಿಯರಿಂದ ಅಗಸಿತಿಗೆ ಸಾಕುಮಗನಾಗಿ ಕೊಡಲ್ಪಟ್ಟ. ಈ ಬಾಲಪ್ರತಿಭೆ ತನ್ನ ಶಿಕ್ಷಣ ಮಾರ್ಗವನ್ನು ತಾನೇ ದುಡಿದು ಕಂಡುಕೊಳ್ಳುವುದು ಅನಿವಾರ್ಯವಾಯಿತು. ಕ್ರ್ಯಾಕೋದಲ್ಲಿ ಪದವಿ ಪಡೆದು (1910) ಉಕ್ರೇನಿಯದ ಲ್ವೋವ್ ಎನ್ನುವಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪ್ರೌಢಶಿಕ್ಷಣಕ್ಕೆ ದಾಖಲಾದ. ಆದರೆ ಪದವಿ ಗಳಿಸುವ ಮೊದಲೇ ಕ್ರ್ಯಾಕೋವಿಗೆ ಮರಳಿದ (1914). ಅಲ್ಲಿ ಇನ್ನೊಬ್ಬ ಸಮಕಾಲೀನ ಶ್ರೇಷ್ಠ ಗಣಿತವಿದ ಎಚ್. ಸ್ಟೈನಸ್ ಎಂಬಾತನ ಭೇಟಿ ಆಯಿತು (1916). ಈತನ ಸಹಯೋಗದಿಂದ ಬಾನಾಕ್ ಪೂರ್ಣಾವಧಿ ಗಣಿತ ಕ್ರಿಯಾಪಟುವೇ ಆದ.
ಮುಂದಿನ ಜೀವನ, ಸಾಧನೆಗಳು
ಬದಲಾಯಿಸಿಬಾನಾಕ್ ಆ ವೇಳೆಗೆ ಗಣಿತ ಕ್ಷೇತ್ರದಲ್ಲಿ ಸಾಕಷ್ಟು ವ್ಯಾಪ್ತಿಗಳಿಸಿದ್ದ. ಮುಂದಿನ ದಿನಗಳಲ್ಲಿ ಆಳವನ್ನೂ ಸಂಪಾದಿಸಿದ. ಫೂರಿಯರ್ ಶ್ರೇಣಿಯ ಅಭಿಸರಣೆ (convergence) ಕುರಿತು ಸ್ಟೈನಸ್ ಜೊತೆಗಿನ ಸಹಯೋಗದಿಂದ ಈತ ಬರೆದ ಸಂಶೋಧನ ಪ್ರಬಂಧ (1917) ಪ್ರಕಟವಾದಾಗ (1919) ಉನ್ನತ ಗಣಿತ ವಿದ್ವಾಂಸರ ಗಮನ ಸಹಜವಾಗಿ ಇವನತ್ತ ಹರಿಯಿತು. ಅದೇ ವರ್ಷ ಇವನಿಗೆ ಲ್ವೋವ್ ಇನ್‌ಸ್ಟಿಟ್ಯೂಟಿನಲ್ಲಿ ಉಪನ್ಯಾಸಕ ಹುದ್ದೆ ದೊರೆತದ್ದು ಇದರ ಫಲ. ಅಲ್ಲದೇ ಇವನ ಸಾಧನೆ ಸಿದ್ಧಿ ಗಮನಿಸಿ ಡಾಕ್ಟೊರೇಟ್ ಪದವಿಯನ್ನು ಕೂಡ ಪ್ರದಾನಿಸಲಾಯಿತು. 1922ರಲ್ಲಿ ಪ್ರಕಟವಾದ ಈತನ ಸಂಶೋಧನ ನಿಬಂಧ ಫಲನಾತ್ಮಕ ವಿಶ್ಲೇಷಣೆ (ಫಂಕ್ಷನಲ್ ಅನಾಲಿಸಿಸ್) ಎಂಬ ಗಣಿತ ವಿಭಾಗದ ಪ್ರವರ್ತನೆಗೆ ಕಾರಣವಾಯಿತು.[೪]
ಸ್ವತಃ ಉತ್ತಮ ಸಂಶೋಧಕನೂ, ಗುರುವೂ ಆಗಿದ್ದ ಬಾನಾಕ್ ತನ್ನ ಗೆಳೆಯ ಸ್ಟೈನಸನ ಜೊತೆ ಸೇರಿ ಸ್ಟೂಡಿಯಾ ಮ್ಯಾತಮ್ಯಾಟಿಕಾ ಎಂಬ ಸಂಶೋಧನ ಪತ್ರಿಕೆ ಪ್ರಾರಂಭಿಸಿದ. ಎಸ್. ಮಾಝರ್, ಡಬ್ಲ್ಯು. ಆರ್ಲಿಕ್ಝ್, ಜೆ. ಶೌಡರ್ ಮತ್ತು ಎಸ್. ಉಲಮ್ ಎಂಬ ಶ್ರೇಷ್ಠ ಗಣಿತವಿದರು ಬಾನಾಕನ ಶಿಷ್ಯರು. ಈತ ಸ್ವತಃ ಬರೆದು ಪ್ರಕಟಿಸಿದ ಸುಮಾರು ಐವತ್ತು ಸಂಶೋಧನ ಪ್ರಬಂಧಗಳು ಇಂದಿಗೂ ಫಲನಾತ್ಮಕ ವಿಶ್ಲೇಷಣ ಗಣಿತಾಭ್ಯಾಸಿಗಳಿಗೆ ಸ್ಫೂರ್ತಿದಾಯಕವಾಗಿದ್ದು ಹೊಸ ಹೊಸ ಪ್ರಬಂಧಗಳಿಗೆ ಕಾರಣೀಭೂತವಾಗಿವೆ. ಮಾಪನ ಮತ್ತು ಅನುಕಲನ ಸಿದ್ಧಾಂತಕ್ಕೆ (ತೀಯರಿ ಆಫ್ ಮೆಸರ್ ಅಂಡ್ ಇಂಟೆಗ್ರೇಶನ್) ಬಾನಾಕ್ ಮೂಲಭೂತ ಕೊಡುಗೆ ನೀಡಿದ್ದಾನೆ. ಗಣಗಳ ಆದ್ಯುತ್ಯಾತ್ಮಕ ಸಿದ್ಧಾಂತದಲ್ಲಿ (ಆ್ಯಕ್ಸಿಯೊಮ್ಯಾಟಿಕ್ ತೀಯರಿ ಆಫ್ ಸೆಟ್ಸ್) ಇದು ಮಹತ್ತ್ವದ ಪಾತ್ರ ನಿರ್ವಹಿಸುತ್ತದೆ.
1934 ರಿಂದ 1941 ರ ತನಕ ಈತ ಲ್ವೋವಿನಲ್ಲಿ ಗಣಿತ ವಿಭಾಗದ ಡೀನನೂ, ಉಕ್ರೇನಿಯನ್ ಅಕಾಡೆಮಿ ಆಫ್ ಸೈನ್ಸಸಿನ ಗೌರವ ಚುನಾಯಿತ ಸದಸ್ಯನೂ ಆಗಿದ್ದ. ಆದರೆ 1941 ರ ಬೇಸಗೆಯಲ್ಲಿ ಜರ್ಮನ್ ದಂಡು ಲ್ವೋವನ್ನು ಆಕ್ರಮಿಸಿದಾಗ ಈತ ಅವರ ಸೆರೆಯಾಳಾದ. ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಹೇನುಗಳ ಸಂಶೋಧನೆಯಲ್ಲಿ ಕಡ್ಡಾಯವಾಗಿ ದುಡಿಯಲು ಜರ್ಮನ್ ಸಿಪಾಯಿಗಳು ಇವನಿಗೆ ವಿಧಿಸಿದರು. 1944 ರಲ್ಲಿ ಲ್ವೋವ್ ನಗರ ಜರ್ಮನ್ ಆಕ್ರಮಣದಿಂದ ವಿಮೋಚಿತವಾಯಿತು. ಆಗ ಬಾನಾಕನೂ ವಿಮುಕ್ತನಾದ. ಆದರೆ ಅವನ ಆರೋಗ್ಯ ಆ ವೇಳೆಗೆ ತೀರ ಹದಗೆಟ್ಟಿತ್ತು. ಇದರಿಂದ ಚೇತರಿಸಿಕೊಳ್ಳಲಾಗದೆ ಮರುವರ್ಷ ಮೃತನಾದ.
ಉಲ್ಲೇಖಗಳು
ಬದಲಾಯಿಸಿ- ↑ "Stefan Banach - Polish Mathematician". britannica.com. 27 August 2023.
- ↑ "Banach, Stefan ." Complete Dictionary of Scientific Biography. . Encyclopedia.com. 15 Jun. 2024 <https://www.encyclopedia.com>.
- ↑ https://www.daviddarling.info/encyclopedia/B/Banach.html
- ↑ Stefan Banach (1922). "Sur les opérations dans les ensembles abstraits et leur application aux équations integrals (On operations in the abstract sets and their application to integral equations)". Fundamenta Mathematicae (in ಫ್ರೆಂಚ್ and ಪೊಲಿಶ್). 3.
ಹೊರಗಿನ ಕೊಂಡಿಗಳು
ಬದಲಾಯಿಸಿ