ಸುವರ್ಣಾವತಿ ಜಲಾಶಯ
ಸುವರ್ಣಾವತಿ ಜಲಾಶಯ
ಚಾಮರಾಜನಗರ ತಾಲೂಕಿನ ಜೀವನಾಡಿ ಯಾದ ಸುವರ್ಣಾವತಿ ನದಿಯು ಆಗ್ನೇಯ ಭಾಗದ "ಗಜ್ಜಲ ಹಟ್ಟಿ" ಎಂಬಲ್ಲಿ ಹುಟ್ಟುತ್ತದೆ. ಈ ನದಿಗೆ ಚಾಮರಾಜನಗರ ಮತ್ತು ಕೊಯಮತ್ತೂರು ರಸ್ತೆಯ ಹೆದ್ದಾರಿಯಲ್ಲಿ ೧೯೭೭ರಲ್ಲಿ ಜಲಾಶಯವನ್ನು ನಿರ್ಮಿಸಲಾಗಿದೆ. ೨೬ ಮೀ. ಎತ್ತರ, ಉದ್ದ ೧೧೫೮ ಮೀ. ಇದ್ದು, ಈ ಜಲಾಶಯವು ಚಾಮರಾಜನಗರ, ಯಳಂದೂರು ಮತ್ತು ಕೊಳ್ಳೇಗಾಲ ತಾಲೂಕಿನ ಪ್ರದೇಶಗಳಿಗೆ ನೀರೊದಗಿಸುತ್ತದೆ. ಕಾವೇರಿ ಕಣಿವೆಗೆ ಸೇರಿದ ಈ ಜಲಾಶಯದ ನೀರಿನ ಸಾಮರ್ಥ್ಯ ೨೫೮,೭೮ ಕ್ಯೂಸೆಕ್ಸ್ ಇದೆ. ಇದರ ೨ ಕಿ.ಮೀ. ದೂರದಲ್ಲಿ ರಸ್ತೆಯ ಬಲಭಾಗದಲ್ಲಿ ಚಿಕ್ಕಹೊಳೆ ಅಣೆಕಟ್ಟು ಇದ್ದು ಇದು ಮಧ್ಯಮಗಾತ್ರದ ಅಣೆಕಟ್ಟು ಆಗಿದೆ. ಈ ಎರಡೂ ಜಲಾಶಯಗಳು ನಿಸರ್ಗದ ಮಡಿಲಲ್ಲಿದ್ದು, ನೀರಾವರಿ, ಮೀನುಗಾರಿಕೆ, ತೋಟಗಾರಿಕೆಗೆ ಪ್ರೋತ್ಸಾಹವಿದೆ. ಇದು ನೀರಾವರಿ ಇಲಾಖೆಗೆ ಸೇರಿದ್ದು ಪ್ರವಾಸಿಗರಿಗೆ ಉಳಿದುಕೊಳ್ಳಲು ವಸತಿ ಸೌಕರ್ಯವಿದೆ. ಜಿಲ್ಲಾ ಕೇಂದ್ರದಿಂದ ೧೮ ಕಿ.ಮೀ. ದೂರದಲ್ಲಿದೆ.
ಸುವರ್ಣಾವತಿ ಜಲಾಶಯದ ಹಿನ್ನೀರಿನ ಕಾಡಂಚಿನಲ್ಲಿರುವ ಬೂದಿಪಡಗ ಪ್ರಸಿದ್ಧ ವನ್ಯಜೀವಿ ವಿಶ್ರಾಂತಿಧಾಮ, ಮೈಸೂರು ಮಹಾರಾಜರು – ಬ್ರಿಟಿಷರ ಅವಧಿಯಲ್ಲಿ ನಿರ್ಮಿಸಲಾದ ವಸತಿಗೃಹಗಳು ವಿಶಾಲಹುಲ್ಲು ಮೈದಾನ. ಅಮೂಲ್ಯ ವನ್ಯ ಜೀವಿಗಳು, ಬೂದಿಪಡಗದ ವಿಶೇಷಗಳು, ವನ್ಯಜೀವಿ ಛಾಯಾ ಗ್ರಾಹಕರಿಗೆ, ಪ್ರವಾಸಿಗರಿಗೆ ಸಂಶೋಧಕರಿಗೆ ಇದು ಅಚ್ಚುಮೆಚ್ಚಿನ ಪ್ರವಾಸಿ ಸ್ಥಳವಾಗಿದೆ. ಬೂದಿಪಡಗ ಬಿಳಿಗಿರಿರಂಗನ ಬೆಟ್ಟ ವನ್ಯ ಜೀವಿಧಾಮದ ಭಾಗವಾಗಿದೆ..
ಚಾಮರಾಜನಗರದಿಂದ ತಮಿಳುನಾಡಿಗೆ ತೆರಳುವ ಮುಖ್ಯ ರಸ್ತೆಯ ನೀಲಗಿರಿ ಶ್ರೇಣಿಯ ಅಂಚಿನಲ್ಲಿರುವ ಬೇಡಗುಳಿ ಮತ್ತು ಅತ್ತಿಖಾನೆ. ಕರ್ನಾಟಕ – ತಮಿಳುನಾಡಿನ ಸೀಮಾರೇಖೆ. ಚಾಮರಾಜನಗರ ದಿಂದ ೫೦ ಕಿ.ಮೀ. ದೂರ ದಲ್ಲಿರುವ ನಿತ್ಯಹರಿದ್ವರ್ಣದ ವನ್ಯಜೀವಿಧಾಮ. ಬೇಡಗುಳಿ ಪ್ರದೇಶದಲ್ಲಿ ವಾಸಿಸುವ ಗಿರಿಜನರು ಮತ್ತು ಯುರೋಪಿಯನ್ನರ ಕಾಲದ ಕಾಫಿ ತೋಟಗಳು ವಿಶೇಷಗಳು. ಬೇಡಗುಳಿ ಗಿರಿಜನ ಹಾಡಿಗಳು ಅವರ ಹಾಡುಪಾಡು. ಅವರ ಜೀವನ ಶೈಲಿ ಮತ್ತು ಸಂಸ್ಕೃತಿ ಸಂಪ್ರದಾಯಗಳು ಅಧ್ಯಯನ ಯೋಗ್ಯವಾಗಿದೆ. ಸುಂದರ ಗಿರಿಶ್ರೇಣಿಗಳು ಅದ್ಭುತ ಕಣಿವೆಗಳು ಮನೋಹರ ಜಲಪಾತಗಳು ಆಕರ್ಷಕ. ವನ್ಯಜೀವಿಗಳು ಬೇಡಗುಳಿ ಅರಣ್ಯ ಪ್ರದೇಶದ ವಿಶೇಷ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿರುವ ಬೇಡಗುಳಿ ಅತಿಥಿಗೃಹ ನೂರು ವರುಷಗಳಷ್ಟು ಪುರಾತನವಾಗಿದೆ. ವನ್ಯಜೀವಿ ಪ್ರದೇಶವಾಗಿರುವುದರಿಂದ ಪ್ರವೇಶಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯ..