ಸುರೇಶ್ ಪ್ರಭಾಕರ್ ಪ್ರಭು (ಜನನ ೧೧ ಜುಲೈ ೧೯೫೩) ಒಬ್ಬ ಭಾರತೀಯ ರಾಜಕಾರಣಿ ಮತ್ತು ನರೇಂದ್ರ ಮೋದಿ ಸರ್ಕಾರದಲ್ಲಿ ಭಾರತದ ರೇಲ್ವೇ ಸಚಿವರಾಗಿದ್ದರು.[೧] ಅವರು ವೃತ್ತಿಯಿಂದ ಸನದಿ ಲೇಖಾಪಾಲರು ಮತ್ತು ಭಾರತದ ಸನದಿ ಲೇಖಾಪಾಲರ ಸಂಸ್ಥೆಯ ಸದಸ್ಯರು. ೧೯೯೬ ರಿಂದ, ಪ್ರಭು ಶಿವ ಸೇನಾ ಪಕ್ಷದ ಸದಸ್ಯರಾಗಿ ಮಹಾರಾಷ್ಟ್ರದಲ್ಲಿನ ರಾಜಾಪುರ್ ಲೋಕ ಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಅವರು ೯ ನವೆಂಬರ್ ೨೦೧೪ ರಂದು ಶಿವ ಸೇನೆಯನ್ನು ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರಿದರು. ಪ್ರಸ್ತುತ ಅವರು ಭಾರತೀಯ ಸಂಸತ್ತಿನ ಮೇಲ್ಮನೆಯಲ್ಲಿ ಆಂಧ್ರ ಪ್ರದೇಶವನ್ನು ಪ್ರತಿನಿಧಿಸುತ್ತಾರೆ.

ಸುರೇಶ್ ಪ್ರಭು ಮುಂಬಯಿಯ ಶಾರದಾಶ್ರಮ ವಿದ್ಯಾ ಮಂದಿರದಿಂದ ಉತ್ತೀರ್ಣರಾಗಿ, ಬಿ.ಕಾಂ ಆನರ್ಸ್ ಪದವಿಯನ್ನು ಮುಂಬಯಿಯ ಎಮ್.ಎಲ್. ದಹನೂಕರ್ ಕಾಲೇಜಿನಿಂದ ಪಡೆದರು. ಅವರು ಮುಂಬಯಿಯ ನ್ಯೂ ಲಾ ಕಾಲೇಜಿನಿಂದ ಕಾನೂನು ಪದವಿಯನ್ನು ಪಡೆದರು. ಸಿಎ ಪರೀಕ್ಷೆಯಲ್ಲಿ ಅವರು ಅಖಿಲ ಭಾರತ ೧೧ನೇ ರ‍್ಯಾಂಕ್ ಧಾರಕರು.[೨]

ಪ್ರಭು ಹಲವಾರು ಸರ್ಕಾರಿ ಮತ್ತು ಅರೆಸರ್ಕಾರಿ ಸ್ಥಾನಗಳನ್ನು ಅಲಂಕರಿಸಿದ್ದಾರೆ, ಇದರಲ್ಲಿ ಮಹಾರಾಷ್ಟ್ರ ರಾಜ್ಯ ಹಣಕಾಸು ಆಯೋಗ, ಸಾರಸ್ವತ್ ಸಹಕಾರಿ ಬ್ಯಾಂಕ್‍ನ ಅಧ್ಯಕ್ಷತೆ, ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಸದಸ್ಯ, ಇತ್ಯಾದಿಗಳನ್ನು ಒಳಗೊಂಡಿವೆ. ಪ್ರಭು ೧೦೦ ಕ್ಕಿಂತ ಹೆಚ್ಚು ದೇಶಗಳಿಗೆ ಪ್ರಯಾಣಿಸಿದ್ದಾರೆ. ಅವರು ೧೬ ಜಾಗತಿಕ ಸಂಸ್ಥೆಗಳು ಮತ್ತು ೯ ಆಯಕಟ್ಟಿನ ಮಾತುಕತೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಉಲ್ಲೇಖಗಳು ಬದಲಾಯಿಸಿ

  1. Portfolios of the Union Council of Ministers Prime Minister's Office, Government of India
  2. Suresh Prabhu Biodata Archived 2017-02-11 ವೇಬ್ಯಾಕ್ ಮೆಷಿನ್ ನಲ್ಲಿ. India, Accessed on 10 November 2014