ಕಡಂಬಿ ಮಿನಾಕ್ಷಿ (೧೨ ಸೆಪ್ಟೆಂಬರ್ ೧೯೦೫ - ೩ ಮಾರ್ಚ್ ೧೯೪೦) ಇವರು ಒಬ್ಬ ಭಾರತೀಯ ಇತಿಹಾಸಕಾರರು ಹಾಗೂ ಪಲ್ಲವ ರಾಜವಂಶದ ಇತಿಹಾಸದ ಪರಿಣಿತರಾಗಿದ್ದರು. ಅವರು ೧೯೩೬ ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಮೊದಲ ಮಹಿಳೆಯಾಗಿದ್ದಾರೆ.

ಸಿ.ಮೀನಾಕ್ಷಿ

ಆರಂಭಿಕ ಜೀವನ ಮತ್ತು ಶಿಕ್ಷಣ ಬದಲಾಯಿಸಿ

ಮಿನಾಕ್ಷಿಯವರು ೧೯೦೫ ರ ಸೆಪ್ಟೆಂಬರ್ ೧೨ ರಂದು ಮದ್ರಾಸ್ ಹೈಕೋರ್ಟ್‌ನಲ್ಲಿ ಬೆಂಚ್ ಕ್ಲರ್ಕ್ ಆಗಿದ್ದ ಕಾಡಂಬಿ ಬಾಲಕೃಷ್ಣನ್ ಮತ್ತು ಅವರ ಪತ್ನಿ ಮಂಗಳಮ್ಮಾಳ್ ದಂಪತಿಗಳಿಗೆ ಜನಿಸಿದರು. ಮಿನಾಕ್ಷಿ ಚಿಕ್ಕವರಿದ್ದಾಗ ಬಾಲಕೃಷ್ಣನ್ ನಿಧನರಾದರು ಮತ್ತು ಮಂಗಳಮ್ಮಾಳ್ ಕುಟುಂಬವನ್ನು ನೋಡಿಕೊಂಡರು. ಚಿಕ್ಕಂದಿನಿಂದಲೂ ಇತಿಹಾಸದಲ್ಲಿ ಆಸಕ್ತಿ ಹೊಂದಿದ್ದ ಮಿನಾಕ್ಷಿ ಮನ್ನಾರ್ಗುಡಿ, ಪುದುಕ್ಕೊಟ್ಟೈ, ವಿಲ್ಲುಪ್ಪುರಂ ಮತ್ತು ಕಾಂಚೀಪುರಂನಂತಹ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದರು.

ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಮಿನಾಕ್ಷಿ ಮದ್ರಾಸಿನ ಮಹಿಳಾ ಕ್ರಿಶ್ಚಿಯನ್ ಕಾಲೇಜಿಗೆ ಸೇರಿ, ೧೯೨೯ ರಲ್ಲಿ ಪದವಿಯನ್ನು ಪಡೆದರು. ಅವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸ ಬೇಕೆಂದು ಬಯಸಿದ್ದರು ಆದರೆ ಮಹಿಳೆ ಎಂಬ ಕಾರಣಕ್ಕಾಗಿ ಅವರ ಅರ್ಜಿಯನ್ನು ಆರಂಭದಲ್ಲಿಯೇ ತಿರಸ್ಕರಿಸಲಾಯಿತು. ಆದರೆ, ಮಿನಾಕ್ಷಿರವರು ಹಠ ಹಿಡಿದು ಕುಳಿತರು. ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಪ್ರಾಧ್ಯಾಪಕ ಸಿ.ಲಕ್ಷ್ಮೀನಾರಾಯಣರವರು ಮೀನಾಕ್ಷಿಯವರನ್ನು ನೋಡಿಕೊಳ್ಳುವುದಾಗಿ ಲಿಖಿತ ಭರವಸೆ ನೀಡಿದಾಗ ಅಧಿಕಾರಿಗಳು ಸಮ್ಮತಿಸಿದರು. ಮಿನಾಕ್ಷಿರವರು ಅಂತಿಮವಾಗಿ ತಮ್ಮ ಸ್ನಾತಕೋತ್ತರ ಪದವಿಯನ್ನು ೧೯೩೬ ರಲ್ಲಿ ಪೂರ್ಣಗೊಳಿಸಿದರು. ಅವರ ಡಾಕ್ಟರೇಟ್ ಸಂಶೋಧನೆಯ ಪ್ರಬಂಧದ ವಿಷಯ "ಪಲ್ಲವರ ಅಡಿಯಲ್ಲಿ ಆಡಳಿತ ಮತ್ತು ಸಾಮಾಜಿಕ ಜೀವನ" ಎಂಬುದಾಗಿತ್ತು. ಮದ್ರಾಸ್ ವಿಶ್ವವಿದ್ಯಾಲಯವು ೧೯೩೮ ರಲ್ಲಿ ಪ್ರಸಿದ್ಧ ಇತಿಹಾಸಕಾರ ಕೆಎ ನೀಲಕಂಠ ಶಾಸ್ತ್ರಿ ಅವರ ಇತಿಹಾಸ ಸರಣಿಯ ಭಾಗವಾಗಿ ಮೀನಾಕ್ಷಿರವರ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿತು. ಮದ್ರಾಸ್ ದೈನಿಕ ದಿ ಹಿಂದೂ ಈ ಪುಸ್ತಕವನ್ನು "ಅತ್ಯುತ್ತಮ ಯಶಸ್ವಿ ಸಂಶೋಧನೆಯ ತುಣುಕು ಮತ್ತು ಮೌಲ್ಯಯುತವಾದ ಸರಣಿಗಳಲ್ಲಿ ಒಂದಾಗಿದೆ" ಎಂದು ವಿವರಿಸುತ್ತದೆ.

ವೃತ್ತಿ ಮತ್ತು ಸಂಶೋಧನೆ ಬದಲಾಯಿಸಿ

೧೯೩೬ ರಲ್ಲಿ ಡಾಕ್ಟರೇಟ್ ಪಡೆದ ಕೂಡಲೇ ಮಿನಾಕ್ಷಿ ರವರು ಉದ್ಯೋಗ ಹುಡುಕಾಟದಲ್ಲಿ ತೊಡಗಿದರು. ಆರಂಭದಲ್ಲಿ ಆಲ್ ಇಂಡಿಯಾ ರೇಡಿಯೋ ಹಾಗೂ ಇತರ ಸಂಸ್ಥೆಗಳು ಇವರ ಅರ್ಜಿಯನ್ನು ತಿರಸ್ಕರಿಸಿದವು. ಅಂತಿಮವಾಗಿ, ೧೯೩೯ ರಲ್ಲಿ, ಮೈಸೂರು ಸಾಮ್ರಾಜ್ಯದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ಅವರು, ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಮೀನಾಕ್ಷಿರವರಿಗೆ ಸಹಾಯಕ ಪ್ರಾಧ್ಯಾಪಕರ ಉದ್ಯೋಗವನ್ನು ನೀಡಿದರು.

ನಿಧನ ಬದಲಾಯಿಸಿ

ಬೆಂಗಳೂರಿಗೆ ತೆರಳಿದ ಕೆಲವೇ ತಿಂಗಳುಗಳಲ್ಲಿ ಮಿನಾಕ್ಷಿರವರು ಅನಾರೋಗ್ಯಕ್ಕೆತುತ್ತಾದರು ಹಾಗೂ 3ನೇ ಮಾರ್ಚ್ 1940 ರಂದು ತಮ್ಮ 34 ನೇ ವಯಸ್ಸಿನಲ್ಲಿ ನಿಧನರಾದರು. ಆಕೆಯ ನಿಧನಕ್ಕೆ ಸಂತಾಪ ಸೂಚಿಸಿ, ಇತಿಹಾಸಕಾರ ಕೆ.ಎ.ನೀಲಕಂಠ ಶಾಸ್ತ್ರಿ ಅವರು ಜುಲೈ 1941ರಲ್ಲಿ ಅವರ ತಾಯಿಗೆ ಪತ್ರ ಬರೆದರು:

It is cruel she died young. Whenever I think about it, pain engulfs me

ಕೃತಿಗಳು ಬದಲಾಯಿಸಿ

  • C. Minakshi (1938). Administration and social life under the Pallavas. University of Madras.
  • C. Minakshi (1940). Kañchi: an introduction to its architecture. Ministry of Information and Broadcasting, Government of India.
  • C. Minakshi (1941). The historical sculptures of the vaikuṇṭhaperumāḷ temple, Kāñchī. Archaeological Survey of India.

ಉಲ್ಲೇಖಗಳು ಬದಲಾಯಿಸಿ