ಸಿ. ಕೆ. ನಾಗರಾಜರಾವ್ (ಜೂನ್ ೧೨, ೧೯೧೫ - ಏಪ್ರಿಲ್ ೧೦, ೧೯೯೮) ಸಾಹಿತಿ, ರಂಗಭೂಮಿ ಕಲಾವಿದ, ಪತ್ರಕರ್ತ, ಕನ್ನಡದ ಮಹಾನ್ ಕಾರ್ಯಕರ್ತರಾಗಿ ಹೀಗೆ ಬಹುಮುಖಿಯಾಗಿ ದುಡಿದವರಾಗಿದ್ದಾರೆ. ಸಿ. ಕೆ ನಾಗರಾಜರಾವ್ ಅವರು ‘ಪಟ್ಟಮಹಾದೇವಿ ಶಾಂತಲಾದೇವಿ’ ಎಂಬ ಐತಿಹಾಸಿಕ ಕಾದಂಬರಿಗಾಗಿ ಮೊಟ್ಟಮೊದಲ ಬಾರಿಗೆ ಕನ್ನಡ ಸಾಹಿತ್ಯಕ್ಕೆ ಜ್ಞಾನಪೀಠ ಪ್ರತಿಷ್ಠಾನದ ‘ಮೂರ್ತಿದೇವಿ ಪ್ರಶಸ್ತಿ’ ಪಡೆದವರು. ಭಾರತೀಯ ಜನಜೀವನದ ಶಾಶ್ವತ ಮೌಲ್ಯಗಳ ಮಹತ್ವವನ್ನು ಎತ್ತಿಹಿಡಿಯುವ, ಭಾರತೀಯ ಭಾಷೆಗಳಲ್ಲಿ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗುವ ಅತ್ಯುತ್ತಮ ಗ್ರಂಥಕ್ಕೆ ಪ್ರಶಸ್ತಿ ಕೊಡುವ ಉದ್ದೇಶದಿಂದ ಭಾರತೀಯ ಜ್ಞಾನಪೀಠವು ೧೯೮೩ರಿಂದ ಪ್ರಾರಂಭಿಸಿರುವ ಈ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟವರು ನಾಗರಾಜರಾಯರು.

ಸಿ ಕೆ ನಾಗರಾಜ ರಾವ್
CK Nagaraja Rao.jpg
ಜನ್ಮನಾಮಜೂನ್ ೧೨, ೧೯೧೫
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ
ಮರಣಏಪ್ರಿಲ್ ೧೦, ೧೯೯೮
ಹೆಸರುವಾಸಿಯಾದದ್ದುಸಾಹಿತ್ಯ, ಪತ್ರಿಕೋದ್ಯಮ, ರಂಗಭೂಮಿ, ಚಿತ್ರರಂಗ

ಜೀವನಸಂಪಾದಿಸಿ

ಸಿ. ಕೆ. ನಾಗರಾಜರಾವ್ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 1915ರ ಜೂನ್ 12ರಂದು ಜನಿಸಿದರು. ಅವರ ತಂದೆ ಕೃಷ್ಣಮೂರ್ತಿ ರಾವ್ ಮತ್ತು ತಾಯಿ ಪುಟ್ಟಮ್ಮ.ನವರು.

ನಾಗರಾಜರಾವ್ ಅವರು ಪ್ರಾರಂಭಿಕ ಶಿಕ್ಷಣ ಪಡೆದದ್ದು ಚಿಕ್ಕಬಳ್ಳಾಪುರದಲ್ಲಿ. ತಂದೆ ಆಗಾಗ್ಗೆ ವರ್ಗವಾಗುತ್ತಿದ್ದರಿಂದ ಇವರ ವಿದ್ಯೆ ಕೂಡಾ ಚನ್ನಪಟ್ಟಣ, ಚಿತ್ರದುರ್ಗ ಮತ್ತು ಬೆಂಗಳೂರಗಳಲ್ಲಿ ನೆರವೇರಿತು. ಅವರು ಎಸ್.ಎಸ್.ಎಲ್.ಸಿ ಉತ್ತೀರ್ಣರಾದುದು ನ್ಯಾಷನಲ್ ಹೈಸ್ಕೂಲಿನಿಂದ. ಕಾಲೇಜಿಗೆ ಸೇರಿದ್ದು ಸರಕಾರಿ ಇಂಟರ್‌ಮೀಡಿಯೇಟ್ ಕಾಲೇಜು.

ಆದರೆ ಇಂಟರ್ಮೀಡಿಯೆಟ್‌ನಲ್ಲಿ ಉತ್ತೀರ್ಣರಾದರೂ ಓದು ಮುಂದುವರೆಸಲಾಗದೆ ಉದ್ಯೋಗವನ್ನೂ ಹುಡುಕುವಂತಾಯಿತು. ಉದ್ಯೋಗಕ್ಕಾಗಿ ಸೇರಿದ್ದು ಮೈಸೂರು ಪ್ರೀಮಿಯರ್ ಮೆಟಲ್‌ ಕಾರ್ಖಾನೆಯಲ್ಲಿ. ಸಿಬ್ಬಂದಿ ನಿಯಂತ್ರಣ ಇವರ ಕೆಲಸವಾದರೂ ಮೆಟಲ್‌ ಪಾಲಿಷ್‌ ಮಾಡುವ ಕಲೆಯನ್ನೂ ಕರಗತ ಮಾಡಿಕೊಂಡರು.

ಪತ್ರಿಕೋದ್ಯಮದಲ್ಲಿಸಂಪಾದಿಸಿ

ಮುಂದೆ ನಾಗರಾಜರಾಯರು ತಮ್ಮ ಸೋದರಮಾವಂದಿರಾದ ನಿಟ್ಟೂರು ಶ್ರೀನಿವಾಸರಾಯರು ನಡೆಸುತ್ತಿದ್ದ ಸತ್ಯಶೋಧನ ಪ್ರಕಟಣಾಮಂದಿರದಲ್ಲಿ ಐದು ವರ್ಷ ವ್ಯವಸ್ಥಾಪಕರಾಗಿ ದುಡಿದರು. ನಂತರ ಸೇರಿದ್ದು ಇಂಡಿಯನ್‌ ಮ್ಯೂಚುಯಲ್‌ ಲೈಫ್‌ ಅಸೋಸಿಯೇಷನ್‌ ಸಂಸ್ಥೆಗೆ. ಕಾರಣಾಂತರದಿಂದ ಅದೂ ಬಿಡಬೇಕಾಗಿ ಬಂದಿತು. ಇಷ್ಟರಲ್ಲಿ ಮದುವೆಯೂ ಆಗಿದ್ದು ಸಂಸಾರದ ಜವಾಬ್ದಾರಿ ಹೊತ್ತಿದ್ದರಿಂದ ದುಡಿಯಲೇಬೇಕಾದ ಅನಿವಾರ್ಯತೆ ಒದಗಿತು. ಹೀಗಾಗಿ ಪತ್ರಿಕೋದ್ಯಮಕ್ಕೆ ಬಂದರು. ಹಲವಾರು ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಗಳಿಗೆ ಲೇಖನ ಮತ್ತು ವಿಮರ್ಶೆಗಳನ್ನು ಬರೆಯತೊಡಗಿದರು. ಕೆಲಕಾಲ ‘ವಾಣಿ’ ಎಂಬ ಪತ್ರಿಕೆಯ ಸಂಪಾದಕರಾಗಿಯೂ ದುಡಿದು ಕಾರಣಾಂತರದಿಂದ ಅದನ್ನು ಬೇರೆಯವರಿಗೆ ವಹಿಸಬೇಕಾಯಿತು. ಕ್ವಾರ್ಟರ್ಲಿ ಜನರಲ್‌ ಆಫ್‌ ಮಿಥಿಕ್‌ ಸೊಸೈಟಿ ಪತ್ರಿಕೆಗೆ ವಿದ್ವತ್‌ ಪೂರ್ಣ ಲೇಖನಗಳನ್ನೂ ಬರೆಯುತ್ತಿದ್ದುದಲ್ಲದೆ ಆ ಪತ್ರಿಕೆಯ ಸಂಪಾದಕರಾಗಿಯೂ ಮೂರು ವರ್ಷ ದುಡಿದರು.

ರಂಗಭೂಮಿಯಲ್ಲಿಸಂಪಾದಿಸಿ

ನಾಗರಾಜರಾವ್ ಅವರು ೧೭ರ ಹರೆಯದಲ್ಲಿಯೇ ಕೈಲಾಸಂರವರ ‘ಹೋಂ ರೂಲು’ ನಾಟಕದಲ್ಲಿ ವಿಧವೆ ಸುಬ್ಬಮ್ಮನ ಪಾತ್ರವಹಿಸಿ ಶ್ರೇಷ್ಠನಟ ಪ್ರಶಸ್ತಿ ಗಳಿಸಿದರು. ಮಡಿ ಹೆಂಗಸಿನ ಪಾತ್ರಧಾರಿಯಾದ ಇವರ ನಟನಾ ಕೌಶಲವನ್ನು ಕುರಿತು ಜನವಾಣಿ ಪತ್ರಿಕೆ ‘ಪ್ರೇಕ್ಷಕರಿಗೆ ಆನಂದವನ್ನುಂಟುಮಾಡಿತು’ ಎಂದು ಬರೆದರೆ ತಾಯಿನಾಡು ಪತ್ರಿಕೆ ‘ಪ್ರಥಮ ಸ್ಥಾನ ಸಲ್ಲಬೇಕು’ ಎಂದು ಬರೆಯಿತು. ಇಂಟರ್ಮೀಡಿಯಟ್‌ ಓದುತ್ತಿದ್ದಾಗ ಕಾಲೇಜಿನಲ್ಲಿ ನಡೆಸಿದ ಸಣ್ಣ ಕಥಾ ಸ್ಪರ್ಧೆಗೆ ‘ಕಾಡುಮಲ್ಲಿಗೆ’ ಎಂಬ ಕಥೆ ಬರೆದು ಮೊದಲ ಬಹುಮಾನ ಪಡೆದರು. ಈ ಕತೆ ಕಾಲೇಜಿನ ಮ್ಯಾಗಜಿನ್‌ನಲ್ಲೂ ಪ್ರಕಟಗೊಂಡು ಇವರನ್ನು ಕಥೆಗಾರರನ್ನಾಗಿಸಿತು.

ಬಾಲ್ಯದಿಂದಲೂ ನಾಟಕದ ಹುಚ್ಚಿಗೆ ಒಳಗಾಗಿದ್ದ ನಾಗರಾಜರಾಯರು ೧೯೩೬ರಲ್ಲಿ ಸ್ಥಾಪಿಸಿದ್ದು ‘ದಿ ಯುನೈಟೆಡ್‌ ಆರ್ಟಿಸ್ಟ್ಸ್‌’ ಎಂಬ ಸಂಸ್ಥೆ. ಈ ಸಂಸ್ಥೆಯ ಮೂಲಕ ಹೋಂ ರೂಲು, ಆಷಾಢಭೂತಿ, ರಾಜಿಕಬೂಲಿ, ಜಯಶ್ರೀ, ವಾಲ್ಮಿಕಿಯ ಭಾಗ್ಯ, ಗದಾಯುದ್ಧ, ಶಾಮಣ್ಣನ ಸಾಹಸ, ಮುಂತಾದ ನಾಟಕಗಳಲ್ಲಿ ತಾವೂ ಅಭಿನಯಿಸಿ ಹಲವಾರು ಕಲಾವಿದರನ್ನು ಬೆಳಕಿಗೆ ತಂದು, ಹೊರನಾಡಿನಲ್ಲೂ ಪ್ರದರ್ಶಿಸಿದರು. ಹಲವಾರು ನಾಟಕಗಳು ಆಕಾಶವಾಣಿಯಲ್ಲಿಯೂ ಪ್ರಸಾರಗೊಂಡವು.

ಕನ್ನಡ, ಸಂಸ್ಕೃತ, ತೆಲುಗು, ಇಂಗ್ಲಿಷ್‌, ಹಿಂದಿ ಮುಂತಾದ ಭಾಷೆಗಳ ನೂರಾರು ನಾಟಕಗಳಲ್ಲಿ ಅಭಿನಯಿಸಿ, ಸುಮಾರು ನಾಲ್ಕು ದಶಕಗಳ ಕಾಲ ರಂಗಭೂಮಿಗಾಗಿ ದುಡಿದರು. ಎತ್ತರವಾದ ನಿಲುವು, ದೃಢಶರೀರ, ಕಂಚಿನಕಂಠ, ಭಾಷೆಯ ಮೇಲಿನ ಹಿಡಿತ, ಧ್ವನಿಯ ಏರಿಳಿತ ಮುಂತಾದವುಗಳನ್ನು ಕರಾರುವಾಕ್ಕಾಗಿ ಬಳಸುತ್ತಿದ್ದ ಅವರು ರಂಗಭೂಮಿಗೆ ಅಗತ್ಯ ನಟರೆನಿಸಿದ್ದರು. ತಾವು ಬರೆದ ಶೂದ್ರಮುನಿ, ಸಂಪನ್ನ ಸಮಾಜ ಮತ್ತು ಸಂಕೋಲೆಬಸವ ಎಂಬ ಮೂರು ನಾಟಕಗಳನ್ನು ಪ್ರಕಟಿಸಿದರು. ಹಿಂದಿಯಲ್ಲಿ ‘ಏಕಲವ್ಯ’ ನಾಟಕ ಬರೆದರು.

ಚಲನಚಿತ್ರ ಲೋಕದಲ್ಲಿಸಂಪಾದಿಸಿ

ಕಲೆಯ ಹುಚ್ಚಿನಿಂದ ಚಲನಚಿತ್ರರಂಗವನ್ನೂ ಪ್ರವೇಶಿಸಿ ‘ದ್ರೌಪದಿಯ ಮಾನಸಂರಕ್ಷಣಮು’ ಎಂಬ ಚಲನಚಿತ್ರದ ಸಹಾಯಕ ನಿರ್ದೇಶಕರಾಗಿ, ‘ಸಂತಕಾನ್ಹೋಪಾತ್ರ’ ಚಿತ್ರಕ್ಕೆ ಚಿತ್ರಕಥೆ ಮತ್ತು ಗೌರಿ, ಅಪರೂಪದ ಅತಿಥಿಗಳು ಚಿತ್ರಗಳಿಗೆ ಸಂಭಾಷಣೆ ಬರೆದರು. ‘ದೈವಲೀಲೆ’ ಚಿತ್ರವನ್ನು ಆರ್.ವಿ. ಅರಸುಕುಮಾರರೊಡನೆ ನಿರ್ಮಿಸಿ, ಸಿ.ಎನ್‌. ಕೃಷ್ಣಮಾಚಾರ್ ನಿರ್ದೇಶಿಸಿದ್ದು ಒಂದು ಪಾತ್ರವನ್ನೂ ನಿರ್ವಹಿಸಿದರು .

ಬರಹಗಾರರಾಗಿಸಂಪಾದಿಸಿ

ನಾಗಾರಾಜ ರಾವ್ ಅವರು ಶಾಲಾ, ಕಾಲೇಜು ದಿನಗಳಿಂದಲೇ ಬರೆದ ಹಲವಾರು ಕತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು ಕಾಡುಮಲ್ಲಿಗೆ, ಸಂಗಮ, ದೃಷ್ಟಿಮಥನ, ಸಾವಿಲ್ಲದವರು ಮುಂತಾದ ಸಂಕಲನಗಳು ಪ್ರಕಟಗೊಂಡವು. ಹಿಂದಿ ಭಾಷೆಯಿಂದ ಶರಶ್ಚಂದ್ರರ ಪ್ರೇಮಯೋಗಿನಿ, ದರ್ಪಚೂರ್ಣ, ಅರಕ್ಷಣೀಯ, ಕಾಶಿನಾಥ, ವಿಶ್ವೇಶ್ವರಿ ಮತ್ತು ಮಂತ್ರ ದೀಕ್ಷೆ ಎಂಬ ಆರು ಕಾದಂಬರಿಗಳನ್ನು ಅನುವಾದಿಸಿದರು.

ನಾಗರಾಜರಾಯರ ಮತ್ತೊಂದು ಸಂಶೋಧನ ಗ್ರಂಥವೆಂದರೆ ಜೈಮಿನಿ ಭಾರತವನ್ನು ಬರೆದಿರುವ ‘ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲ’ . ಲಕ್ಷ್ಮೀಶನ ಊರು ಸುರಪುರದ ಬಳಿಯ ದೇವಪುರ ಅಲ್ಲ, ಕಡೂರು ತಾಲ್ಲೂಕಿನ ‘ದೇವನೂರು’ ಎಂಬುದನ್ನೂ ಖಚಿತಪಡಿಸಲು ಹಲವಾರು ಸಾಕ್ಷ್ಯಾಧಾರಗಳನ್ನು ಒದಿಗಿಸಿದ್ದಾರೆ.

ಸ್ವತಂತ್ರ ಕಾದಂಬರಿಯ ರಚನೆಯಲ್ಲಿ ತೊಡಗಿದ ನಾಗರಾಜರಾಯರು ರಚಿಸಿದ ಬೃಹತ್‌ ಕಾದಂಬರಿ ಎಂದರೆ ಪಟ್ಟಮಹಾದೇವಿ ಶಾಂತಲಾದೇವಿ. ಈ ಹೊಯ್ಸಳ ಸಾಮ್ರಾಜ್ಯದ ಕತೆ ನೂರ ಐವತ್ತು ವರ್ಷಗಳ ಇತಿಹಾಸವನ್ನೂ ಒಳಗೊಂಡು ಶಾಂತಲೆಯ ನಲವತ್ತು ವರ್ಷಗಳ ಬದುಕಿನ ಚಿತ್ರಣ ಕೊಡುವ ಸುಮಾರು ೧೭೫ ಅಧ್ಯಾಯಗಳ ೨೧೫೦ ಪುಟಗಳನ್ನೊಳಗೊಂಡ ಮೇರುಕೃತಿ. ಇವರು ರಚಿಸಿದ ಇತರ ಕಾದಂಬರಿಗಳೆಂದರೆ ಭಕ್ತಿವಿಜಯದ ಸಣ್ಣಕತೆಯನ್ನಾಧರಿಸಿದ ‘ನಂಬಿದಜೀವ’ ಮತ್ತು ಮಣಿಪುರದ ಇತಿಹಾಸದ ‘ಕುರಂಗ ನಯನಿ’. ಶಾಂತಲ ಕಾದಂಬರಿಯ ಮುಂದುವರೆದ ಭಾಗವಾದ ‘ವೀರಗಂಗ ವಿಷ್ಣುವರ್ಧನ’ ಮತ್ತು ಹೊಯ್ಸಳ ಸಾಮ್ರಾಜ್ಯದ ಸಂಪೂರ್ಣ ಕತೆ ಯನ್ನೂ ಕಟ್ಟಿ ಕೊಡುವ ‘ದಾಯಾದ ದಾವಾನಲ’. ‘ಕುರಂಗನಯನಿ’, ‘ಶ್ರೀಪೃಥ್ವೀವಲ್ಲಭ’ ಕಾದಂಬರಿಗಳು ಓದುಗರಿಂದ ಪ್ರಶಂಸಿಸಲ್ಪಟ್ಟವು.

‘ನನ್ನ ನೆಚ್ಚಿನ ನಾಡೆ’, ‘ತಾತಮಾವನ ಕನಸು’, ‘ಕಾಂಬೋಡಿಯಾ – ಲಾವೋಸ್’, ‘ನಾಯಿಕೊಡೆ’, ‘ಏಕಲವ್ಯ ದರ್ಶನ’ ಮುಂತಾದವು ಸಿ ಕೆ ನಾಗರಾಜರಾವ್ ಅವರ ಅವರ ಇನ್ನಿತರ ಕೃತಿಗಳು.

ಸಂಘ ಸಂಸ್ಥೆಗಳಲ್ಲಿಸಂಪಾದಿಸಿ

ಹೀಗೆ ನಾಟಕ, ಕಥೆ, ಕಾದಂಬರಿ ಮುಂತಾದ ಪ್ರಕಾರಗಳಲ್ಲಿ ದುಡಿದ ನಾಗರಾಜರಾಯರು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಯಾಗಿ, ಕರ್ನಾಟಕ ಲೇಖಕರ ಸಂಘದ ಅಧ್ಯಕ್ಷರಾಗಿ, ಮಿಥಿಕ್‌ ಸೊಸೈಟಿಯ ಕಾರ್ಯದರ್ಶಿಯಾಗಿ, ಆದರ್ಶ ಫಿಲಂ ಇನ್‌ಸ್ಟಿಟ್ಯೂಟ್‌ನ ಸ್ಥಾಪಕ ಸಹಾಯಕ ಪ್ರಾಚಾರ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದರು.

ಪ್ರಶಸ್ತಿ ಗೌರವಗಳುಸಂಪಾದಿಸಿ

ಮಹಾಕವಿ ಲಕ್ಷ್ಮೀಶನ ಸ್ಥಳ ಮತ್ತು ಕಾಲಕೃತಿಗೆ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಟ್ಟಮಹಾದೇವಿ ಶಾಂತಲಾದೇವಿ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಶ್ರೇಷ್ಠ ಸೃಜನಶೀಲ ಕೃತಿ ಪ್ರಶಸ್ತಿ ಮತ್ತು ಭಾರತೀಯ ಜ್ಞಾನಪೀಠ ಪ್ರತಿಷ್ಠಾನದ ‘ಮೂರ್ತಿದೇವಿ’ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಗೌರವಗಳು ಸಿ. ಕೆ. ನಾಗರಾಜರಾವ್ ಅವರನ್ನರಸಿ ಬಂದಿದ್ದವ.

ವಿದಾಯಸಂಪಾದಿಸಿ

ಸಿ. ಕೆ. ನಾಗರಾಜರಾಯರು ೧೯೯೮ರ ಏಪ್ರಿಲ್‌ ೧೦ರಂದು.ಈ ಲೋಕವನ್ನಗಲಿದರು.

ಉಲ್ಲೇಖಸಂಪಾದಿಸಿ

  1. ಕಣಜದಲ್ಲಿನ ಲೇಖನ
  2. ವಿಕಿಪೀಡಿಯ ಇಂಗ್ಲಿಷಿನಲ್ಲಿ