ದಪ್ಪಗಿನ ಅಕ್ಷರ

ಹೊಲೆಗೆಯಂತ್ರ

ಹೊಲಿಗೆಯಂತ್ರ

ಬದಲಾಯಿಸಿ

ಬಟ್ಟೆ,ತೊಗಲು ಮತ್ತು ಇತರ ಹಲವು ಬಗೆಯ ಪದಾರ್ಥಗಳನ್ನು ಹೊಲಿಯಲು ಬಳಸುವ ಯಂತ್ರ ಹೊಲಿಗೆಯಂತ್ರ.ಪ್ರಥಮ ಹೊಲಿಗೆಯಂತ್ರ ಬೆಳಕಿಗೆ ಬಂದು ಇನ್ನೂರು ವರ್ಷಗಳು ಕೂಡ ಕಳೆದಿಲ್ಲ.ಆದರೆ ಇಂದು ಕೈಗಾರಿಕೆಯಲ್ಲಿ ಸುಮಾರು ೨,೦೦೦ ಬಗೆಯ ಹೊಲಿಗೆಯಂತ್ರಗಳು ಬಳಕೆಯಲ್ಲಿವೆ.ಬಟ್ಟೆ ಹರಿದರೂ ಹೊಲಿಗೆ ಬಿಡದಂಥ,ಮಿನಿಟಿಗೆ ೫೦೦೦ಕ್ಕೂ ಹೆಚ್ಚಿನ ಹೊಲಿಗೆಗಳನ್ನು ಹಾಕುವ ಯಂತ್ರಗಳಿವೆ.ಮನೆಗಳಲ್ಲಿ ಬಳಸುವ ಮಾದರಿಯ ಯಂತ್ರ ಮಿನಿಟಿಗೆ ೧,೫೦೦ ಹೊಲಿಗೆಗಳನ್ನು ಹಾಕುತ್ತದೆ.ಉಕ್ಕಿನ ತಂತಿಯನ್ನೇ ದಾರದಂತೆ ಬಳಸುವ ಹೊಲಿಗೆ ಯಂತ್ರಗಳಿವೆ.ಹೊಲಿಗೆ ಯಂತ್ರದಿಂದ ಅಲಂಕರಣ ಕೆಲಸವನ್ನು ಪೂರೈಸಬಹುದು.ಮನೋಹರ ಕಸೂತಿ ಕೆಲಸಗಳೂ ಇದರಲ್ಲಿ ಸುಲಭವಾಗುತ್ತವೆ.

ಇತಿಹಾಸ

ಬದಲಾಯಿಸಿ

ಇಂದಿನ ಹೊಲಿಗೆ ಯಂತ್ರವನ್ನು ಹೋಲುವ ಯಂತ್ರ ಜೋಡಿಸಿ ಮೊಟ್ಟ ಮೊದಲ ಏಕಸ್ವ ಪಡೆದವನು ಥಾಮಸ್ ಸೇಯಿಂಟ್.೧೭೯೦ರಲ್ಲಿ ತಯಾರಾದ ಈ ಹೊಲಿಗೆಯಂತ್ರ ತೊಗಲು ಹೊಲಿಯುವುದಕ್ಕಾಗಿ ರಚಿಸಲ್ಪಟ್ಟಿತು.ದಾರ ನುಸುಳುವುದಕ್ಕಾಗಿ ಚಲಿಸುವ ವೋಚಿದಬ್ಬಳ ತೊಗಲಿನಲ್ಲಿ ತೂತುಮಾಡುವುದು-ಇದು ಸೇಯಿಂಟ್ ರಚಿಸಿದ ಯಂತ್ರದ ಕಾರ್ಯ ವಿಧಾನ.ಅನಂತರ ದಾರ ಹಾಕುವ ಕೆಲಸ.ಇದು ಯಾಂತ್ರಿಕವಾದರೂ ಕೆಲಸ ನಿಧಾನವಾಗಿತ್ತು.ಇದರಲ್ಲಿ ಸರಪಳಿ ಹೋಲಿಗೆ ಮೂಡುತ್ತಿತ್ತು.ಈ ಆವಿಷ್ಕಾರದ ಮೂವತ್ತು ವರ್ಷಗಳ ಅನಂತರ ಫ್ರಾನ್ಸಿನ ಬಾರ್ತಲೆಮ್ಮಿ ಥಿಮೊನಿಯರ್ ಎಂಬ ದರ್ಜಿ ಹೆಚ್ಚಾಗಿ ಮರ ಭಾಗಗಳುಳ್ಳ,ಕೊಕ್ಕೆಯಂಥ ಸೂಜಿಯುಳ್ಳ ಯಂತ್ರ ರಚಿಸಿದೆ.ಇದೂ ಸರಪಳಿ ಹೊಲಿಗೆಯ ಯಂತ್ರ. ದರ್ಜಿಗಳ ಜೀವನಕ್ಕೆ ಇದು ಮುಳುವು ಎಂದು ಜನ ಇವನ ಮೇಲೆ ಕೋಪಗೊಂಡರು.ಥಿಮೋನಿಯರನ ಕಾಲಕ್ಕೆ ನ್ಯೂಯಾರ್ಕ್ ಹಂಟ್ ಎಂಬಾತ ಇಂದಿನ ಜಡೆ ಹೊಲಿಗೆಯನ್ನು ಹೋಲುವ ಹೊಲಿಗೆ ಹಾಕುವ ಯಂತ್ರವನ್ನು ರಚಿಸಿದ.ಇವನ ಸುಧಾರಣೆಯೆಂದರೆ ಸೂಜಿ ಬಟ್ಟೆಯೊಳಕ್ಕೆ ಹೋಗುವ ತುದಿಯಲ್ಲೇ ಕಣ್ಣು ಇದ್ದ ಬಾಗಿದ ಸೂಜಿ.ಇದು ಬಟ್ಟೆಯೊಳಕ್ಕೆ ಹಾಯಿಸಿದ ಒಂದು ದಾರವನ್ನು,ಕೆಳಗಿನಿಂದ ಬಂದ ದಾರ ಹಿಡಿಯಿತು.ಹಿಂದಕ್ಕೂ ಮುಂದಕ್ಕೂ ಓಡಾಡುವ ಒಂದು ಲಾಳಿಯಿಂದ ಎರಡನೆಯ ದಾರ ಬರುವಂತೆ ಹಂಟ್ ಮಾಡಿದ.ಹೊಲಿಗೆಯಂತ್ರದಲ್ಲಿ ಈ ಎರಡು ದಾರಗಳ ಬಳಕೆಯೂ ಒಂದು ಮುಖ್ಯ ಘಟ್ಟವಾಯಿತು.೧೮೪೬ರಲ್ಲಿ ಮೆಸಾಚುಸೆಟ್ಸ್ ನ ಎಲಿಯಾಸ್ ಹೋವೆ ಎಂಬಾತ ಜಡೆಹೊಲಿಗೆಯ ಯಂತ್ರ ತಯಾರಿಸಿದ. ಹಿಡಿಕೆಯುಳ್ಳ ಚಕ್ರವನ್ನು ಕೈಯಿಂದ ತಿರುಗಿಸಿ ಈ ಯಂತ್ರ ಚಲಿಸಬೇಕಿತ್ತು.ಮುಂದೆ,ಹಿಂದೆ,ಮೇಲೆ-ಕೆಳಗೆ ಹೀಗೆ ನಾಲ್ಕು ಚಲನೆಗಳುಳ್ಳ ಯಂತ್ರವನ್ನು ೧೮೫೦ರಲ್ಲಿ ಆಲನ್ ಬೆಂಜಮಿನ್ ವಿಲ್ಸನ್ ಎಂಬವನು ಕಂಡುಹಿಡಿದ. ಹೊಲಿಗೆಯಂತ್ರದಲ್ಲಿ ಕೆಲವು ಮುಖ್ಯ ಸುಧಾರಣೆಗಳನ್ನು ತಂದು ಖ್ಯಾತಿ ಪಡೆದವನು ಐಸಾಕ್ ಮೆರಿಟ್ ಸಿಂಗರ್(೧೮೧೧-೭೫).ಯಂತ್ರದಲ್ಲಿನ ಸೂಜಿ ನೇರವಾಗಿಯೂ ಒಳಗಿನ ದಾರ ಪೂರೈಸುವ ಲಾಳಿ ಅಡ್ದಡ್ದಕ್ಕೂ ಚಲಿಸುವಂತೆ ಇವನು ಮಾಡಿದ.ಬಟ್ಟೆಗೆ ಆಧಾರವಾಗಿ ಒಂದು ಮೇಜಿನಂಥ ಭಾಗ ಹಾಕಿದ್ದು ಇವನ ಯಂತ್ರಗಳಲ್ಲೇ.ಸೂಜಿಯ ಕೆಳಗಿರವ,ಬಟ್ಟೆಯನ್ನು ಮುಂದುಮುಂದಕ್ಕೆ ಚಲಿಸುವ ಹಲ್ಲುಹಲ್ಲಾದ ಭಾಗ,ಬಟ್ಟೆಯನ್ನು ಒತ್ತಿಹಿಡಿಯುವ 'ಪಾದ' ಇವೆಲ್ಲ ಹೊಲಿಗೆಯಂತ್ರದ ಕೆಲಸವನ್ನು ಸರಾಗ ಗೊಳಿಸಿದುವು.ಸಿಂಗರನ ಹೊಲಿಗೆಯಂತ್ರಗಳು ಜನಪ್ರಿಯವಾದುವು.ಹೊಲಿಗೆಯಂತ್ರ ಎಲ್ಲೆಡೆಗಳಿಗೂ ವ್ಯಾಪಿಸಿತು.ಅದುವರೆಗೆ ಕೈಗಳಿಂದಲೇ ನಡೆಯುತ್ತಿದ್ದ ಹೊಲಿಗೆಯಂತ್ರಗಳಿಗೆ ಬದಲಾಗಿ ಮೆಟ್ಟುಸನ್ನೆಗಳು ಇರುವ ಹೊಲಿಗೆಯಂತ್ರಗಳು ಪ್ರಚಾರಕ್ಕೆ ಬಂದುವು.ಇದರಿಂದ ಕೈಗಳೆರಡೂ ಹೊಲಿಗೆಕಾರ್ಯದಲ್ಲಿ ನಿರತವಾಗಿರುವುದು ಸಾಧ್ಯವಾಯಿತು.

ವಿವರಣೆ

ಬದಲಾಯಿಸಿ

ಹೊಲಿಯುವವರ ಎಡಕ್ಕೆ,ಮೇಲಿನಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ಚಲಿಸುವ ಸೂಜಿ ಯೊಂದಿರುತ್ತದೆ.ಬಲಕ್ಕೆ ಸಮತೋಲ ಚಕ್ರವಿದೆ.ಹೊಲಿಗೆಯಂತ್ರವನ್ನು ಕೈಯಿಂದ ನಡೆಸಬಹುದು,ಕಾಲೊತ್ತಿ ನಡೆಸಬಹುದು,ಇಲ್ಲವೆ ವಿದ್ಯುದೀಯವಾಗಿಯೂ ಚಲಿಸಬಹುದು.ಮನೆಗಳಲ್ಲಿ ಉಪಯೋಗಿಸುವ ಹೊಲಿಗೆಯಂತ್ರಗಳ ಸೂಜಿನೇರವಾಗಿರುತ್ತದೆ.ಬಹುಪಾಲು ಹೊಲಿಗೆಯಂತ್ರಗಳಲ್ಲಿ ಎರಡು ದಾರಗಳು ಬೇಕಾಗುತ್ತವೆ.ಉಂಡೆಯಿಂದ ಬರುವ ದಾರ ಸೂಜಿಯ ಕಣ್ಣಿನ ಮೂಲಕ ಹಾಯುತ್ತದೆ.ಇದು ಬಟ್ಟೆಯ ಮೂಲಕ ಹಾಯ್ದು,ಕೆಳಗೆ ಒಂದು ಕುಣಿಕೆ ಉಂಟುಮಾಡುತ್ತದೆ.ಸೂಜಿ ಹಿಂದಕ್ಕೆ,ಎಂದರೆ ಮೇಲಕ್ಕೆ,ಏರುವ ಮೊದಲೇ ಕೆಳಗಡೆ ಇರುವ ಲಾಳಿಯಿಂದ ಬಂದ ದಾರ ಕುಣಿಕೆಯೊಳಗೆ ಹಾಯುತ್ತದೆ.ಹೀಗೆ ಜಡೆ ಹೊಲಿಗೆ ಉಂಟಾಗುತ್ತದೆ.ಕೆಳಗಿನ ಮೆಟ್ಟು ಸನ್ನೆಯನ್ನು ಹೊಲಿಯುವವರ ಎರಡು ಕಾಲುಗಳಿಂದಲೂ ಒತ್ತಿದಾಗ ಅದು ಮೇಲೆ ಕೆಳಗೆ ಆಡುತ್ತದೆ.ಇದು ದೊಡ್ಡದೊಂದು ಗಾಲಿಯನ್ನು ಚಲಿಸುತ್ತದೆ.ಈ ಗಾಲಿಗೆ ಸಂಬಂಧಿಸಲ್ಪಟ್ಟಿರುವ ಸಮತೋಲ ಚಕ್ರ ತಿರುಗಲಾರಂಭಿಸುತ್ತದೆ.ಈ ಚಕ್ರವು ಕ್ಯಾಮ್ ಹಾಗೂ ಸನ್ನೆಗಳ ಒಂದು ಶ್ರೇಣಿಯನ್ನೇ ಚಲಿಸಿದ ಅನಂತರ ಸೂಜಿಯೂ ಚಲಿಸಲ್ಪಡುತ್ತದೆ. ಸಮತೋಲ ಚಕ್ರ ಹಾಗೂ ಸೂಜಿಯನ್ನು ಚಲಿಸುವ ದಂಡಗಳ ಮಧ್ಯೆ ಸಮತಲದಲ್ಲಿ ಒಂದು ದಂಡ ಇರುತ್ತದೆ.ಮತ್ತೊಂದು ಲಂಬದಂಡ ಕೆಳಗಿರುವ ಲಾಳಿಗೆ ಚಲನೆಯನ್ನು ಕೊಡುತ್ತದೆ.ಲಾಳಿಗೆ ಬದಲಾಗಿ ಇಂದಿನ ಹೊಲಿಗೆಯಂತ್ರಗಳಲ್ಲಿ ವರ್ತುಲಾಕಾರದ ಕೊಕ್ಕೆ ಇರುತ್ತದೆ.ಇವುಗಳಲ್ಲಿ ಕೆಳಗಿನ ದಾರವಿರುವ ಬಾಬಿನ್ ಪೆಟ್ಟಿಗೆಯ ಸುತ್ತ ಮೇಲಿನ ದಾರ ಬರುವಂತೆ,ಚಲಿಸುವ ಕೊಕ್ಕೆ ದಾರವನ್ನು ಸೆಳೆಯುತ್ತದೆ.ಅನಂತರ ಎಂದಿನಂತೆ ಎರಡೂ ದಾರಗಳು ಸೇರಿಕೊಂಡು ಜಡಿ ಹೊಲಿಗೆ ಉಂಟುಮಾಡುತ್ತವೆ.ಲಾಳಿ ಇರಲಿ ಅಥವಾ ವರ್ತುಲ ಕೊಕ್ಕೆಯ ಭಾಗವಿರಲಿ,ಮೇಲು ಕೆಳಗಿನ ದಾರಗಳೆರಡೂ ಕೂಡಿ ಒಂದರೊಳಗೊಂಡು ಹೆಣೆದುಕೊಂಡು ಸೂಜಿ ಹಾಗೂ ಬಾಬಿನ್ ಗಳು ತಮ್ಮ ಸ್ಥಾನಗಳಿಗೆ ಮರಳಿದಾಗ ಸನ್ನೆಯೊಂದು ದಾರವನ್ನು ಎಳೆಯುತ್ತದೆ.ಹೊಳಿಗೆ ಭದ್ರಗೊಳ್ಳುತ್ತದೆ.

ಭಾಗಗಳು

ಬದಲಾಯಿಸಿ

ಹೊಲಿಗೆಯಂತ್ರ ಒಂದೆರಡು ಶೋಧಗಳ ಫಲವಲ್ಲ.ಇಂಥ ಒಂದು ಆಧುನಿಕ ಯಂತ್ರದಲ್ಲಿ ನೂರ ಐವತ್ತೇಳು ಭಾಗಗಳಿರುತ್ತವೆ.ಮೊದಲಿಗೆ ಹೊಲಿಯಲು ಸೂಜಿ ಏಕೈಕ ಆಧಾರವಾಗಿದ್ದಿದು.ಇದರ ಆರಂಭವನ್ನು ಗುರುತಿಸುವುದೂ ಕಷ್ಟ.ಮುಳ್ಳು,ಆನೆಯ ದುತ ,ಮರಗಳಿಂದ ಮಾಡಿದ ಸೂಜಿಗಳಿದ್ದುವೆಂಬುದಕ್ಕೆ ಪುರಾವೆ ದೊರೆತಿದೆ.ಶಸ್ತ್ರಚಿಕಿತ್ಸೆ ಬಹಳ ಮುಂದುವರಿದಿದ್ದ ಪ್ರಾಚೀನ ಭಾರತದಲ್ಲಿ ಖ್ಯಾತ ವೈದ್ಯ ಸುಶ್ರುತ ತನ್ನ ಚಿಕಿತ್ಸೆಯಲ್ಲಿ ಚಿಕ್ಕ ಚಿಕ್ಕ ಸೂಜಿಗಳನ್ನು ಬಳಸುತ್ತಿದ್ದ.ಬಂಗಾರ,ಬೆಳ್ಳಿತಾಮ್ರ, ಕಂಚುಗಳ ಸೂಜಿಗಳು ಕ್ರಮೇಣ ಬಳಕೆಗೆ ಬಂದುವು.ಅನಂತರ ಬಂದುದ್ದು ಉಕ್ಕಿನ ಸೂಜಿ.ಸೂಜಿಯ ಕಣ್ಣು ಮನೆಯ ಬದಿಗೇ ಇರುವಂತೆ ಮಾಡಿದ್ದು ಸೂಜಿಯನ್ನು ಹೊಲಿಗೆಯಂತ್ರಕ್ಕೆ ಅಳವಡಿಸುವುದರಲ್ಲಿ ಆದ ಒಂದು ಮುಖ್ಯ ಶೋಧ.

ಆಧುನಿಕತೆ

ಬದಲಾಯಿಸಿ
 
ಆಧುನಿಕ ಹೊಲಿಗೆ ಯಂತ್ರ

ಈಗಿನ ಹೊಲಿಗೆ ಯಂತ್ರಗಳನ್ನು ಒಳಕ್ಕೆ ಮಡಚಿ ಬರಿಯ ಮೇಜಿನಂತೆ ಕಾಣುವಹಾಗೆ ಮಾಡಬಹುದು.ಎಲ್ಲೆಂದರಲ್ಲಿ ಸುಲಭವಾಗಿ ಕೊಂಡೊಯ್ಯ ಬಹುದಾದ ಹೊಲಿಗೆಯಂತ್ರಗಳಿವೆ.ಎಡಕ್ಕೂ ಬಲಕ್ಕೂ ಪರ್ಯಯವಾಗಿ ಜಿಗಿಯುವ ಸೂಜಿಯಿಂದಾಗಿ ಓರೆಯೋರೆ-ಜಿಗ್ ಜಾಗ್-ಹೊಲಿಗೆ ಬೀಳುತ್ತದೆ.ಇಂಥ ಕೆಲವು ಜಿಗ್ ಜಾಗ್ ಯಂತ್ರಗಳು ನಮೂನೆಗಳನ್ನು ಸ್ವಕ್ರಿಯಾತ್ಮಕವಾಗಿ ಹೊಲಿಯುತ್ತವೆ.ಹೊಲಿಯುವವನಿಗೆ ಬಟ್ಟೆಯನ್ನು ಸರಿಸುವ ಕೆಲಸಮಾತ್ರ.ತೇಪೆ ಹಾಕುವ ಹೊಲಿಗೆ,ಅಂಚುಕಟ್ಟುವ ಹೊಲಿಗೆ,ಬಟ್ಟೆ ರಿಪೇರಿ ಹೊಲಿಗೆ,ಗುಂಡುಹಾಕುವುದು,ಟಿಬ್ಬಿ ಹೊಲಿಗೆ,ಕಾಜ ಹೊಲಿಗೆ-ಇವುಗಳನ್ನು ಮಾಡುವ ಯಂತ್ರಗಳಿವೆ.ತಾನಾಗಿಯೇ ಬಟ್ಟೆ ಮಡಿಸುವ,ನೆರಿಗೆಕೊಟ್ಟು ಹೊಲಿಯುವ ಯಂತ್ರಗಳೂ ಇವೆ. ಪುಸ್ತಕ, ಪರ್ಸ್, ಹಾಸಿಗೆ, ಒಳಉಡುಪುಗಳು,ಹ್ಯಾಟು,ಕಾಲ್ಚೀಲ,ಕೈಗವಸು,ಛತ್ರಿಗಳನ್ನು ಹೊಲಿಯುವುದಕ್ಕೆ ವಿಶೇಷ ಬಗೆಯ ಯಂತ್ರ ಬೇಕು.ವಿದೇಶಗಳಲ್ಲಿ ಪೊರಕೆ ಹೊಲಿಯುವುದಕ್ಕೂ ಯಂತ್ರವಿದೆ.ಜಮಖಾನ ಹೊಲಿಯುವ ಯಂತ್ರದಲ್ಲಿ ಜಮಖಾನವನ್ನು ಸರಿಸುವ ಬದಲಾಗಿ ಯಂತ್ರವೇ ಸರಿದಾಡುತ್ತದೆ.ಹಲವು ಸಾಲುಗಳ ಸೂಜಿಯಿದ್ದು ಒಂದೇ ಬಾರಿಗೆ ಸಮಾನಾಂತರವಾಗಿ ಹಲವು ಸಾಲುಗಳ ಹೊಲಿಗೆ ಮೂಡಿಸುವ ಹೊಲಿಗೆಯಂತ್ರಗಳಿವೆ.ಏಳು ಸಾಲುಗಳ ಸೂಜಿಯ ಒಂದು ಬಗೆಯ ಹೊಲಿಗೆಯಂತ್ರ ಮಿನಿಟಿಗೆ ೨೦,೦೦೦ ಹೊಲಿಗೆಗಳನ್ನು ಹಾಕುತ್ತದೆ. ಕಸೂತಿ ಹಾಕುವುದಕ್ಕೆ ಸಾಧಾರಣವಾಗಿ ಸರಪಳಿ ಹೊಲಿಗೆಯಂತ್ರ ಉಪಯೋಗಿಸುತ್ತಾರೆ.ಇಲ್ಲವೆ ಮನೆಗಳಲ್ಲಿ ಉಪಯೋಗಿಸುವ ಯಂತ್ರಕ್ಕೆ ಬಿಡಿಭಾಗಗಳನ್ನು ಹೊಂದಿಸಿ ಕಸೂತಿ,ಬಟ್ಟೆ ಮಡಚುವ,ನೆರಿಗೆ ಕೊಡುವ ಕಾರ್ಯಗಳನ್ನು ನಡೆಸಬಹುದು.ಸಾಧಾರಣ ಜಡೆಹೊಲಿಗೆಯಿಂದಲೇ ಬೇರೆ ಬೇರೆ ಬಣ್ಣದ ದಾರಗಳನ್ನು ಹಾಕಿ ಕಸೂತಿ ಮಾಡಬಹುದು. ಹೊಲಿಗೆಯಂತ್ರ ಬಳಕೆಗೆ ಬಂದ ಅನಂತರ ಅನೇಕಾನೇಕ ಬದಲಾವಣೆ,ಜೋಡಣೆ,ಸುಧಾರಣೆಗಳಾಗಿವೆ.ಸಿದ್ಥ ಉಡುಪುಗಳ ಉದ್ಯಮಕ್ಕೆ ಹೊಲಿಗೆಯಂತ್ರವೇ ಆಧಾರ.

ಉಲ್ಲೇಖನಗಳು

ಬದಲಾಯಿಸಿ

[] []

  1. ನಿರಂಜನ. ಜ್ಞಾನ ಗಂಗೊತ್ರಿ. Karnataka Co-operative Publishing House Ltd., 1972.
  2. https://en.wikipedia.org/wiki/Sewing_machine