Sandhya.s345
Joined ೯ ಜನವರಿ ೨೦೧೪
ಇವರು ಕ್ರೈಸ್ಟ್ ವಿಶ್ವವಿದ್ಯಾಲಯದ ವಿಕಿಪೀಡಿಯ ಶಿಕ್ಷಣ ಯೋಜನೆಯ ಸದಸ್ಯರಾಗಿದ್ದಾರೆ |
ಸಿರಿಗನ್ನಡ ಜಾನಪದ
ಬದಲಾಯಿಸಿ"ಆಡೀ ಬಾ ಎನಕಂದ ಅಂಗಾಲ ತೊಳೆದೇನ ತೆಂಗಿನಕಾಯಿ ಎಳನೀರ | ತಕ್ಕೊಂಡು ಬಂಗಾರ ಮೋರೆ ತೊಳದೇನ ||"
- ಹೀಗೆಂದು ಹಾಡಿರುವ ಅವ್ವ ಯಾವುದೇ ಶಾಲಾ-ಕಾಲೇಜಿಗೆ ಹೋಗಿ ಅಕ್ಷರ ಕಲಿತವರಲ್ಲ. ಸಾವಿಲ್ಲದ ಇಂತಹ ಸಹಸ್ರ ಹಾಡು, ಕಥೆ, ಒಗಟು, ಗಾದೆಗಳು, ಹಲವು ಕಲೆಗಳು - ಪೀಳಿಗೆಯಿಂದ ಪೀಳಿಗೆಗೆ ಮೌಖಿಕವಾಗಿ ಹರಿದು ಬಂದಂಥವುಗಳು. ಇವುಗಳನ್ನೇ ಜಾನಪದ ಎನ್ನುತ್ತೇವೆ. ಆದಿಮಾನವ, ಬುಡಕಟ್ಟು ಸಮುದಾಯಗಳಿಂದ ತಲೆತಲಾಂತರ ಹರಿಡು ಬಂದ, ಜೀವನ ಅನುಭವದ ರಸಗಟ್ಟಿಯೇ ಈ ಜಾನಪದ.ಇದು ಮನುಕುಲದ ಜೀವಂತ ಪಳೆಯುಳಿಕೆ. ಜಾನಪದವು ಜಗತ್ತಿನ ಸಾಂಸ್ಖೃತಿಕ ಪರಂಪರೆಯ ಅಕ್ಷಯ ಭಂಡಾರವಾಗಿದೆ.
- ಆಂಗ್ಲಭಾಷೆಯ 'FOLKLORE' ಎಂಬ ಶಬ್ಧವನ್ನು W.G.ಥಾಮಸ್ ರವರು ಕ್ರಿ.ಶ.೧೮೪೬ರಲ್ಲಿ ಮೊದಲ ಬಾರಿಗೆ ಬಳಕೆಗೆ ತಂದರು.ಇದಕ್ಕೆ ಸಂವಾದಿಯಾಗಿ ಡಾ.ಹಾ.ಮಾ.ನಾಯಕರವರು 'ಜಾನಪದ' ಎಂಬ ಪದವನ್ನು ಬಳಕೆಗೆ ತಂದರು. ಹಳೆಯ ಕಾಲದಿಂದ ಇಂದಿನವರೆಗೆ ಮನುಕುಲದ ಸಾಂಸ್ಖೃತಿಕ ಪರಂಪರೆಯ ಸಾರರೂಪವೇ ಜಾನಪದ. ಬ್ರಿಟೀಷರು ಹುಟ್ಟು ಹಾಕಿದ ಜಾನಪದ ಅಧ್ಯಯನವನ್ನು ಅಮೇರಿಕಾದವರು ಬೃಹದಾಕಾರವಾಗಿ ಬೆಳೆಸಿದರು. ತದನಂತರ ವಿಶ್ವರೂಪಿಯಾದ ಜಾನಪದದ ಅಧ್ಯಯನ ವಿಶ್ವವ್ಯಾಪಿಯಾಯಿತು.
- ಜನತೆಗೆ ಸಂಬಂಧಿಸಿದ್ದು ಜಾನಪದ. ಒಂದು ನಿರ್ದಿಷ್ಟ ಪ್ರದೇಶ, ಜನ ಸಮುದಾಯ, ಬಳಸುವ ಕ್ರಮವನ್ನು ಕುರಿತದ್ದು ಜಾನಪದ. ಜನರ ಭಾಷೆ, ನಡವಳಿಕೆ, ಕಲೆ, ಸಾಹಿತ್ಯಗಳೆಲ್ಲ ಜಾನಪದವಾಗಿವೆ.
ಸಿರಿಗನ್ನಡ ಜಾನಪದದ ಲಕ್ಷಣಗಳು
ಬದಲಾಯಿಸಿ- ಜಾನಪದವು ಸಮಸ್ತ ಜನತೆಯ ಸಂಸ್ಖೃತಿಗೆ ಸಂಬಂಧಿಸಿದ್ದಾಗಿದೆ. ಇದು ಮನುಕುಲದ ಪರಂಪರೆಯನ್ನು ಅಭಿವ್ಯಕ್ತಿಸುತ್ತದೆ, ಮೌಖಿಕವಾಗಿರುತ್ತದೆ. ವ್ಯಕ್ತಿ ಅಥವಾ ಸಮಾಜದಲ್ಲಿನ ಆಚಾರ-ವಿಚಾರಗಳಿಗೆ ಸಂಬಂಧಿಸಿರುತ್ತದೆ. ಬಹು ವ್ಯಾಪಕತೆಯನ್ನು ಹೊಂದಿರುತ್ತದೆ. ಆದರೆ ಆಕ್ರಮಣ ಶೀಲವಾಗಿರುವುದಿಲ್ಲ. ಜಾನಪದದ ಅಭಿವ್ಯಕ್ತಿ ಸರಳ ಮತ್ತು ಸ್ಪಷ್ಟತೆಯಿಂದ ಕೂಡಿರುತ್ತದೆ ಹಾಗೂ ಪರಿವರ್ತನ ಶೀಲವಾಗಿರುತ್ತದೆ. ತಲೆಮಾರಿನಿಂದ ತಲೆಮಾರಿಗೆ ವಿವಿಧ ರೀತಿಯಲ್ಲಿ ರೂಪಾಂತರಕ್ಕೆ ಒಳಪಡುತ್ತದೆ. ಈ ಮೊದಲಾದ ಲಕ್ಷಣಗಳನ್ನು ಸಿರಿಗನ್ನಡ ಜಾನಪದ ಹೊಂದಿದೆ.
ಸಿರಿಗನ್ನಡ ಜಾನಪದದ ಪ್ರಕಾರಗಳು
ಬದಲಾಯಿಸಿ- ಸಾವಿರಾರು ವರ್ಷಗಳ ಅನುಭವ ಮತ್ತು ಅನುಭಾವದ ರಸಪಾಕವಾಗಿದೆ ಈ ಸಿರಿಗನ್ನಡ ಜಾನಪದ. ಇದು ಜೀವನ ಸಂಜೀವಿನಿ. ಕನ್ನಡ ಕುಲವನ್ನು ಕಾಯುವ, ಹುರಿದುಂಬಿಸುವ ಸತ್ವ ಕನ್ನಡ ಜಾನಪದದಲ್ಲಿದೆ. ಬ್ರಹ್ಮಾಂಡದಂತಿರುವ ಈ ಜಾನಪದವನ್ನು ಅಧ್ಯಯನದ ಅನುಕೂಲಕ್ಕಾಗಿ ನಾಲ್ಕು ಪ್ರಕಾರಗಳಾಗಿ ವಿಭಾಗಿಸಲಾಗಿದೆ.
- ಜನಪದ ಸಾಹಿತ್ಯ (FOLK LITERATURE)
- ಜನಪದ ಕಲೆಗಳು (FOLK ARTS)
- ಜನಪದ ಸಂಪ್ರದಾಯಗಳು (FOLK CUSTOMS)
- ಜನಪದ ಭೌತಿಕ ಸಂಸ್ಕೃತಿ (FOLK MATERIAL CULTURE)
- ಬದುಕು ಭವ್ಯವಾಗಿ, ದಿವ್ಯವಾಗಿ, ವೇದೀಪ್ಯ ಮಾನವಾಗಿ ಹೊಳೆಯುವಂತೆ ಮಾಡುವ ಶಕ್ತಿ, ಯುಕ್ತಿ ಜಾನಪದಕ್ಕೆ ಇದೆ. ಇದರ ಅಧ್ಯಯನ ಮತ್ತು ಅನುಷ್ಠಾನ ಅಪರಿಮಿತ ಆನಂದವನ್ನು ನೀಡುವುದು.
ಜನಪದ ಸಾಹಿತ್ಯ
ಬದಲಾಯಿಸಿ- ಜನಪದ ಸಾಹಿತ್ಯವನ್ನ್ನು ಗೀತೆ, ಮಹಾಕಾವ್ಯ, ಖಂಡಕಾವ್ಯ, ಲಾವಣಿಗಳು, ಜನಪದ ಕಥನಗೀತೆ, ಗೀಗೀಪದ, ರಂಗದ ಪದ, ಕೋಲಾಟದ ಪದ, ಸೋಬಾನೆ ಪದ, ಕೊಂತಮ್ಮನ ಪದ, ಹಂತಿ ಪದ, ಕಪಿಲೆ ಪದ, ಸನ್ನೆ ಪದ, ಮದುವೆ ಪದ, ಅಂಟಿಗೆ-ಪೆಂಟಿಗೆ ಪದ, ಮಾಸ್ತಮ್ಮನ ಪದ, ಕೊಡವರ ಪದ, ಡೊಳ್ಳಿನ ಹಾಡು, ಜನಪದ ಕಥೆಗಳು, ಗಾದೆಗಳು, ಒಗಟುಗಳು - ಇತ್ಯಾದಿಯಾಗಿ ವಿಭಾಗಿಸಿಕೊಂಡು ಅಧ್ಯಯನ ಮಾಡುವುದು ಸೂಕ್ತವಾಗಿದೆ. ಈ ಪ್ರಕಾರಗಳಲ್ಲಿ ಕನ್ನಡ ನಾಡಿನ ಸಾಹಿತ್ಯ ಸಮೃದ್ಧವಾಗಿ ಅರಳಿದೆ. ಬದುಕನ್ನು ಆನಂದವಾಗಿ ಅರಳಿಸುತ್ತದೆ.
- ಜನಪದಗೀತೆ ಅನಕ್ಷರಸ್ಥರ ವಾಕ್ ಪರಂಪರೆಯಲ್ಲಿ ಸೃಷ್ಟಿಗೊಂಡು; ಬೆಳೆದು ಬಂದ ವ್ಯಕ್ತಿತ್ವ ವಿಕಾಸದ ಮಾಧ್ಯಮ. ಬದುಕಿನ ಗಟ್ಟಿ ಅನುಭವಗಳನ್ನು ಅಂತರಂಗದಲ್ಲಿ ಅನುಭವಿಸಿ, ಅಭಿವ್ಯಕ್ತಿಸಿರುವ ಜನಪದ ಗೀತೆಗಳಲ್ಲಿ ಬಾಳನ್ನು ಸ್ವಾದಗೊಳಿಸಿಕೊಳ್ಳುವ ಅರಿವು ಅಂತರ್ಗತವಾಗಿದೆ. ಜನಹಿತಕ್ಕೆ ಧಕ್ಕೆಯಾಗದಂತೆ, ಸಮಾಜಕ್ಕೆ ಸವಿಯಾಗುವಂತೆ ಬೆಳಗುವ ದರ್ಶನ ಜನಪದ ಗೀತೆಗಳಲ್ಲಿದೆ.
- ಮಾನಸಿಕ ತುಮುಲಗಳು, ಕುಟುಂಬ ಮತ್ತು ಸಮಾಜದೊಳಗೆ ಎದುರಾಗುವ ಕಷ್ಟ-ಸುಖಗಳು,ಶಾಂತಿ ಸಮಾಧಾನವನ್ನು ಧಾರೆ ಎರೆಯುವ ದೈವದ ಧ್ಯಾನ,ಪೂಜಾ ಭಕ್ತಿಯ ಬಂಧುರಗಲು, ಸಂಬಂಧಗಳು, ಒಡನಾಟಗಳು, ಪ್ರಕೃತಿಯ ಸಂಬಂಧಗಳು - ಮೊದಲಾದವುಗಳು ಜನಪದ ಗೀತೆಯ ವಸ್ತುಗಳಾಗಿವೆ. ಹಲವು ದೇವ-ದೇವತೆಗಳನ್ನು ಆರಾಧಿಸಿದರೂ ದೇವನೊಬ್ಬ ನಾಮ ಹಲವು ಎಂಬ ಸತ್ಯವನ್ನು ಅರಿತವರು ನಮ್ಮ ಜನಪದರು. ದೈವ ಭಕ್ತಿಯಿಂದ ಉತ್ತಮವಾಗಿ ಬಾಳಿ-ಬೆಳಗಲು ಸಾಧ್ಯವಿದೆ. ದೈವನಿದ್ದಾನೆ ಎಂಬ ನಂಬಿಕೆಯು ಸುಳ್ಳು, ಮೋಸ, ವಂಚನೆ, ಕಳ್ಳತನ, ಕೊಲೆ, ಸುಲಿಗೆಗಳಿಂದ ಮುಕ್ತಗೊಳಿಸುವ ಹಾಗೂ ಅಂತಹ ದುಷ್ಕೃತ್ಯಗಳಲ್ಲಿ ಭಾಗಿಯಾಗದಂತೆ ಬದುಕುವುದನ್ನು ಕಲಿಸಿ ಕೊಡುತ್ತಾರೆ. ಜನಪದ ಗೀತೆಗಳಲ್ಲಿ ಭಕ್ತಿಯು ಅಂತರಂಗದ ದರ್ಶನವಾಗಿದೆ. ಆತ್ಮ-ಪರಮಾತ್ಮನ ಶೋಧವಾಗಿದೆ.
- ಮಕ್ಕಳೆಂದರೆ ಮನೆಯ ಮುತ್ತು-ರತ್ನಗಳು. ಅವುಗಳ ಅಳು-ನಗು ಒಂದು ತರಹ ಮೋಡಿ ಮಾಡುತ್ತವೆ. ಅಸಾಧ್ಯವಾದ್ದನ್ನು ಬೇಕೆನ್ನುವ ಮಕ್ಕಳ ಹಟಮಾರಿತನಕ್ಕೆ ಸಿಡುಕದ ತಾಯಿ ಅದೆಷ್ಟೊಂದು ತಾಳ್ಮೆಯಿಂದ ಸಂತೈಸುವಳೆಂದರೆ ಅದನ್ನು ವರ್ಣಿಸಲು ಪದಗಳೇ ಸಾಲವು.
- ಮನೋರಂಜನೆಯ ಜೊತೆಯಲ್ಲಿಯೇ ಮನವನ್ನು ಅರಳಿಸುವ ಲಾವಣಿ, ಗೀಗೀಪದ, ರಂಗದ ಪದ, ಕೋಲಾಟದ ಪದ, ಸೋಬಾನೆ, ಡೊಳ್ಳಿನ ಹಾಡು, ಹಂಪಿ ಪದಗಳು - ಮೊದಲಾದ ಜನಪದ ಹಾಡುಗಳು ಸಹಸ್ರ ಸಹಸ್ರವಾಗಿ, ಕನ್ನಡದಲ್ಲಿ ಒಂದೊಂದು ಹಾಡೂ, ಒಂದೊಂದು ಸದ್ಗುಣವನ್ನು ಬಿತ್ತ್ತುತ್ತವೆ.
ಜನಪದ ಮಹಾಕಾವ್ಯಗಳು
ಬದಲಾಯಿಸಿ- ವೀರರ ಸಾಹಸ ಸಾಧನೆಗಳು ಬಾಯಿಂದ ಬಾಯಿಗೆ ಹರಿದುಕೊಂಡು ಬಂದ ದೀರ್ಘವಾದ ಹಾಡುಗಳ ಸಂಕುಲವೇ ಜನಪದ ಮಹಾಕಾವ್ಯಗಳು. ಇವುಗಳು ಹಲವಾರು ವ್ಯಕ್ತಿಗಳಿಂದ ಸೃಷ್ಟಿಯಾಗಿ; ಹಲವಾರು ರೀತಿ ವಿಕಾಸ ಹೊಂದುತ್ತಾ ಬರುತ್ತವೆ. ಪುರಾಣ, ಐತಿಹ್ಯ ಮತ್ತು ಇತಿಹಾಸ ಈ ಜನಪದ ಮಹಾಕಾವ್ಯಗಳಿರುತ್ತವೆ. ವೃತ್ತಿ ಕಾಯಕ ಮಾಡುವ ಗಾಯಕರು ಈ ಮಹಾಕಾವ್ಯವನ್ನು ಜೀವಂತವಾಗಿ ಇಡುವರು.
- ಮಾದೇಶ್ವರ ಗುಡ್ಡರು 'ಮಲೆಯ ಮಾದೇಶ್ವರ' ಮಹಾಕಾವ್ಯವನ್ನು, ನೀಲಗಾರರು 'ಮಂಟೆಸ್ವಾಮಿ' ಮಹಾಕಾವ್ಯವನ್ನು, ಮೈಲಾರ ಲಿಂಗನ ಗುಡ್ಡರು 'ಮೈಲಾರ ಲಿಂಗ'ನ ಮಹಾಕಾವ್ಯವನ್ನು, ಎಲ್ಲಮ್ಮನ ಗುಡ್ಡರು 'ಎಲ್ಲಮ್ಮ' ಮಹಾಕಾವ್ಯವನ್ನು, ಜುಂಜಪ್ಪನ ಕಾಣಿಕೆಯವರು 'ಜುಂಜಪ್ಪ' ಮಹಾಕಾವ್ಯವನ್ನು ಹಾಡುವರು. ಇವುಗಳು ವಿಶ್ವ ಜಾನಪದಕ್ಕೆ ಸಲ್ಲಿಸಿದ ಕಾಣಿಕೆಗಳು. ಈ ನಾಡಿನ ಸತ್ವವನ್ನು ಸವಿದು, ಸವಿಯಾಗಿರಲು ಈ ಮಹಾಕಾವ್ಯಗಳು ನೆರವಾಗುವವು.
ಜನಪದ ಕತೆಗಳು
ಬದಲಾಯಿಸಿ- ಕೊಟ್ಟರೆ ಕೊಡಲೇಳು ಇಟ್ಹಾಂಗ ಇರಬೇಕು ಎಂಬಂತೆಯೇ ಬಾಳಿ ಬೆಳಗಿದ ಭಾಗೀರಥಿ 'ಕೆರೆಗೆ ಹಾರ'ವಾದ ಕತೆಯನ್ನು, ಗಂಗೆ-ಗೌರಿಯ ಜಗಳದ ಕತೆಯನ್ನು, ಬಂಜೆ ಹೊನ್ನಮ್ಮನ ಕತೆಯನ್ನು, ಗಿರಿಮಲ್ಲಯ್ಯನ ಕತೆಯನ್ನು ಕೇಳಿದ್ದೇವೆ. ಇವುಗಳು ಯಾರೊಬ್ಬರೋ ಬರೆದಂಥವುಗಳಲ್ಲ. ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹಿಗ್ಗುತ್ತಾ, ಕುಗ್ಗುತ್ತ, ಸಾಗಿ ಬಂದವುಗಳು. ಇವುಗಳನ್ನು ಕಾಗಕ್ಕ-ಗುಬ್ಬಕ್ಕನ ಕಥೆ, ಕಟ್ಟುಕಥೆ, ಅಜ್ಜಿಕಥೆ, ಆಡುಗೋಲಜ್ಜಿ ಕಥೆ, ರಾಜಾರಾಣಿ ಕಥೆ - ಎಂದೆಲ್ಲಾ ಕರೆಯುತ್ತೇವೆ. ಈ ಜನಪದ ಕತೆಗಳಲ್ಲಿ ಪ್ರಾಣಿ-ಪಕ್ಷಿಗಳು ಮಾತಾಡುತ್ತವೆ, ನಿರ್ಜೀವಿಗಳು ನಲಿದಾಡುತ್ತವೆ. ಇಲ್ಲಿ ಕಲ್ಪನೆಯೇ ಬಹು ಪ್ರಧಾನವಾಗಿರುತ್ತದೆ.
- ದೇವರು, ದೆವ್ವ, ಕಿನ್ನರ, ಕಿಂಪುರುಷ, ರಾಕ್ಷಸರು, ಬೇತಾಳ ಮೊದಲಾದ ಅತಿಮಾನುಷರು, ಸಾಧು-ಸಂತರು, ಪವಾಡ ಪರುಷರು, ಮಾಟಗಾರರು, ಮೋಡಿಕಾರರು ಮೊದಲಾದವರು ಈ ಜನಪದ ಕಥೆಗಳಲ್ಲಿ ಬಂದು ಹೋಗುತ್ತಾರೆ.
- ಜನಪದ ಕಥೆಗಳನ್ನು ಪ್ರಾಣಿ ಕಥೆಗಳು, ರಮ್ಯ ಕಥೆಗಳು, ಕಟ್ಟು ಕಥೆಗಳು, ನೀತಿ ಕಥೆಗಳು, ಹಾಸ್ಯ ಕಥೆಗಳು, ಸೂತ್ರ ಕಥೆಗಳೆಂದು ವರ್ಗೀಕರಿಸಲಾಗಿದೆ. ಈ ಜನಪದ ಕಥೆಗಳು ಸಾಮಾಜಿಕ ಸೌಹಾರ್ದತೆಯನ್ನು ಮೂಡಿಸುತ್ತವೆ. ಸಂಸ್ಕಾರವಂತರಾಗಲು, ನಡೆ- ನುಡಿಯಲ್ಲಿ ಪರಿಶುದ್ಧರಾಗಿ ಬಾಳಲು, ಬದುಕಿನಲ್ಲಿ ತೊಡಕುಗಳು ಬರದಂತೆ ಜಾಗೃತರಾಗಿ ಜೀವಿಸಲು ಈ ಜನಪದ ಕತೆಗಳು ನೆರವಾಗುತ್ತವೆ.
- ಪ್ರೇಮಿಗಳಿಗೆ, ದಂಪತಿಗಳಿಗೆ, ತ್ಯಾಗ-ಬಲಿದಾನಕ್ಕೆ, ವಿಧೇಯತೆಗೆ, ಸತಿಯ ಸಾರ್ಥಕತೆಗೆ, ಪವಿತ್ರ ಕರ್ತವ್ಯಕ್ಕೆ, ಸಹಾಯ ಸಹಕಾರಕ್ಕೆ, ಬೌದ್ಧಿಕತೆಯ ಕೌಶಲ್ಯ ಪ್ರದರ್ಶನಕ್ಕೆ, ನ್ಯಾಯ ನೀತಿಯು ಜಯಗಳಿಸುವುದಕ್ಕೆ ಸಂಬಂಧಿಸಿದ ನಾನಾ ತರಹದ ವಸ್ತುಗಳನ್ನೊಂದಿರುವ ಜನಪದ ಕತೆಗಳಲ್ಲಿ ಹಾಸ್ಯದೊಂದಿಗೆ ಆನಂದವಿದೆ. ವಿನೋದದೊಂದಿಗೆ ವ್ಯಂಗ್ಯವಿದೆ. ವ್ಯಂಗ್ಯದೊಳಗೆ ನೀತಿಯೂ ಇದೆ. ಜನಪದ ಕತೆಗಳಲ್ಲಿ ಪ್ರೀತಿ-ನೀತಿ-ಭೀತಿಯಿದೆ. ಧೈರ್ಯ ಮತ್ತು ಸ್ಥೈರ್ಯಗಳೂ ಇವೆ. ಬದುಕು ಬರಡಾಗದಂತೆ, ಜೀವಂತವಾಗಿರಲು, ನಮ್ಮ ಬದುಕು ಹಸನಾಗಲು ಈ ಜನಪದ ಕತೆಗಳು ಪ್ರೇರಕವಾಗುತ್ತವೆ.
ಒಗಟುಗಳು
ಬದಲಾಯಿಸಿ- ಜನಪದ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ಒಗಟು ಒಂದು ಪ್ರಖರವಾದ ಪ್ರಕಾರವಾಗಿದೆ. ಎರಡು ಚಕ್ರವುಂಟು ಬಂಡಿಯಲ್ಲ, ಎರಡು ಕಣ್ಣುಂಟು ಮನುಷ್ಯನಲ್ಲ, ಅದ ಹೇಳಿದವನಿಗೆ ಒಂದುಂಡೆ ಬೆಲ್ಲ', 'ತಾಯಿ ಪಾತಾಳಕ್ಕೆ, ತಂದೆ ಆಕಾಶಕ್ಕೆ, ಮಗ ವ್ಯಾಪಾರಕ್ಕೆ, ಮಗಳು ಮದುವೆಗೆ', 'ಅಗಿದರೆ ಹಲ್ಲಿಗೆ ಸಿಗೋಲ್ಲ, ಹಿಡಿದರೆ ಕೈಗೆ ಸಿಗೋಲ್ಲ, ಬಿಟ್ಟರೆ ಬಿದ್ದು ಓಡ್ತದೆ', 'ಅಪ್ಪ ಅಂದರೆ ಹೊಡೆಯುತ್ತೆ, ಅವ್ವ ಅಂದರೆ ಹೊಡೆಯೋಲ್ಲ', ಒಂದು ಗುಡಾಣಕ್ಕೆ ಒಂಬತ್ತು ಬಾಯಿ' - ಎಂಬ ಒಗಟುಗಳು ಕ್ರಮವಾಗಿ ಬೀಸುವ ಕಲ್ಲು, ತೆಂಗಿನಮರ, ನೀರು, ತುಟಿ, ಹುತ್ತ - ಎಂಬರ್ಥಗಳನ್ನು ಸೂಚಿಸುತ್ತವೆ.
- ಒಗಟಿನಲ್ಲಿ ಬುದ್ಧಿ ಮತ್ತು ಪ್ರತಿಭೆಯ ಸಂಯೋಜನೆಯಿದೆ. ಒಗಟಿನಲ್ಲಿ ಪ್ರಾಕೃತಿಕ ಸೌಂದರ್ಯವಿದೆ. ಕೌಟುಂಬಿಕ, ಸಾಮಾಜಿಕ, ಧಾರ್ಮಿಕ, ಚಿಂತನ-ಮಂಥನಗಳು ಒಗಟಿನಲ್ಲಿವೆ. ಬದುಕಿನ ಮೌಲ್ಯಗಳು ಒಗಟುಗಳಲ್ಲಿ ಅಡಕವಾಗಿವೆ. ತರ್ಕ, ಚಿಂತನ-ಮಂಥನಗಳು ಈ ಒಗಟುಗಳಿಂದ ದ್ವಿಗುಣಗೊಳ್ಳುತ್ತವೆ.
- ರಚನೆಯ ದೃಷ್ಟಿಯಿಂದಲೂ ನಾನಾ ಬಗೆಗಳನ್ನು ಒಗಟುಗಳಲ್ಲಿ ಕಾಣುತ್ತೇವೆ. ತ್ರಿಪದಿ, ಚೌಪದಿಯಾಗಿ ಪದ್ಯ ರೂಪದಲ್ಲಿನ ಒಗಟುಗಳಿವೆ. ಜನಪದರ ಮತಿಗೆ ಹಿಡಿದ ಕನ್ನಡಿಯಾಗಿವೆ. ನಿಜವಾದ ಅರ್ಥವನ್ನು ಮುಚ್ಚಿಟ್ಟು, ಕೇಳುಗರನ್ನು ಕಲ್ಪನಾ ಲೋಕದಲ್ಲಿ ವಿಹರಿಸುವಂತೆ ಮಾಡುವ ಒಗಟುಗಳು ಬುದ್ಧಿಯನ್ನು ಒರೆಗಚ್ಚುತ್ತವೆ. ಧಾರ್ಮಿಕ ಒಗಟು, ಪ್ರಾಣಿ ಸಂಬಂಧೀ ಒಗಟು, ಸವಿನೋದಾತ್ಮಕ ಒಗಟು, ಗಣಿತಾತ್ಮಕ ಒಗಟು, ಪೌರಾಣಿಕ ಒಗಟು, ಪ್ರಾಕೃತಿಕ ಒಗಟು - ಎಂಬಿತ್ಯಾದಿ ಒಗಟುಗಳನ್ನು ಕಾಣಬಹುದಾಗಿದೆ. ಶಿಷ್ಟ ಸಾಹಿತ್ಯದಲ್ಲೂ ಒಗಟುಗಳು ಹಿರಿದಾದ ಸ್ಥಾನ ಪಡೆದಿವೆ.
ಗಾದೆಗಳು
ಬದಲಾಯಿಸಿ- ಗಾದೆಗಳು ನಮ್ಮ ಹಿರಿಯರು ನಮಗೆ ನೀಡಿದ ವರಗಳಾಗಿವೆ. ಹಿರಿಯರ ಜೀವನದಲ್ಲಿ ಆದ ಅನುಭವಗಳ ರಸಗಟ್ಟಿಯೇ ಈ ಗಾದೆಗಳು. ಜನಪದ ಸಾಹಿತ್ಯದ ಅಮೂಲ್ಯವಾದ ಪ್ರಕಾರಗಳಲ್ಲಿ ಗಾದೆಯೂ ಒಂದು. ಪ್ರಾಕೃತದ 'ಗಾಥಾ' ಎಂಬ ಪದದ ಅಪಭ್ರಂಶ ರೂಪವೇ 'ಗಾದೆ'. ಶ್ರೀ ಸಾಮಾನ್ಯರು ತಮ್ಮ ನಿತ್ಯ ಜೀವನದಲ್ಲಿ ಸ್ವಾಭಾವಿಕವಾಗಿ ಬಳಸುವ ಅಲಂಕಾರಿಕ ಮಾತುಗಳೇ ಗಾದೆಗಳು. ಜೀವನ ಅನುಭವದ ಕೆನೆಯಾದ ಗಾದೆಗಳು ಉತ್ತಮವಾಗಿ ಬಾಳಲು ಮಾರ್ಗದರ್ಶಿಯಾಗಿದೆ. ನಮ್ಮ ಮನಸ್ಸು ಮತ್ತು ಹೃದಯಕ್ಕೆ ಸಂಸ್ಕಾರವನ್ನು ಒದಗಿಸುವ ಗಾದೆಗಳಲ್ಲಿ ಆದರ್ಶ ಬದುಕಿನ ಸವಿವರವಿದೆ. ಜೀವನದ ಸತ್ವ-ತತ್ವ ಅಡಗಿದೆ.
ಜನಪದ ಕಲೆ
ಬದಲಾಯಿಸಿ- ಕಲೆ ಸಾರ್ವತ್ರಿಕ ಸಂಗತಿ. ವ್ಯಕ್ತಿಗೆ ತನ್ನ ಬದುಕಿನಲಿ ನೆಮ್ಮದಿ, ಸಂತಸ, ತೃಪ್ತಿಯನ್ನೊದಗಿಸುವ ಮನೋರಂಜನೆಯ ಮಾಧ್ಯಮವೇ ಕಲೆ. ದೇಶ, ಕಾಲವನ್ನು ಮೀರಿದ ಜನಪ್ರಿಯತೆ ಕಲೆಗಿದೆ. ಜನಸಾಮಾನ್ಯರ ಆಚಾರ-ವಿಚಾರ, ರೀತಿ-ನೀತಿ, ನಂಬಿಕೆ-ಸಂಪ್ರದಾಯಗಳ ಅಭಿವ್ಯಕ್ತಿಯೇ ಜನಪದ ಕಲೆ. ದೇವರ ಆರಾಧನೆಯಲ್ಲಿ ಜನಪದ ಕಲೆಗಳು ಸೃಷ್ಟಿಯಾಗಿವೆ. ವ್ಯಕ್ತಿಯ ಪ್ರತಿದಿನದ ದುಡಿಮೆಯ ಆಯಾಸ,ಆಸರಿಕೆ, ಬೇಸರಿಕೆಗಳನ್ನು ಜನಪದ ಕಲೆಗಳು ನಿವಾರಿಸುತ್ತವೆ. ಜನಪದ ಕಲೆಗಳನ್ನು ಪ್ರಮುಖವಾಗಿ ಚಿತ್ರಕಲೆ ಅಥವಾ ದೃಶ್ಯಕಲೆ ಮತ್ತು ಪ್ರದರ್ಶನ ಕಲೆ ಎಂದು ವಿಭಾಗಿಸಲಾಗಿದೆ.
ದೃಶ್ಯಕಲೆ ಅಥವಾ ಚಿತ್ರಕಲೆ
ಬದಲಾಯಿಸಿ- ಕಲ್ಲು ಬಂಡೆ, ಮನೆ-ಮರ, ಒಡವೆ-ಪರಿಕರಗಳು, ವಸ್ತ್ರಗಳು - ಹೀಗೇ ವಿವಿಧ ರೀತಿಯ ವಸ್ತುಗಳ ಮೇಲೆ ತನ್ನ ಇಷ್ಟ ದೈವ, ಇಷ್ಟ ವ್ಯಕ್ತಿ, ಪ್ರಾಕೃತಿಕ ಸೌಂದರ್ಯ, ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ಕೆತ್ತಲಾಗುತ್ತದೆ. ಜನಪದರ ಅಪಾರ ಆರಾಧನೆಯು, ಭಕ್ತಿ-ಭಾವವು ಅಲ್ಲಿ ಅಭಿವ್ಯಕ್ತವಾಗಿರುತ್ತದೆ. ಅಂಗಾಂಗಗಳ ಮೇಲೆಯೂ ತಮಗಿಷ್ಟವಾದ 'ಹಚ್ಚೆ'ಗಳನ್ನು ಬಿಡಿಸಿಕೊಂಡಿರುತ್ತಾರೆ. ರಂಗವಲ್ಲಿ ಕೂಡ ಮನವನ್ನು ಥಟ್ಟನೆ ಸೆಳೆಯುವ ದೃಶ್ಯಕಲೆ. ಜನಪದರ ಬೌದ್ಧಿಕತೆಯ, ಕೌಶಲ್ಯದ ಅಭಿವ್ಯಕ್ತಿ ಇಲ್ಲಿದೆ. ಇಲ್ಲಿ ಏಕಾಗ್ರತೆಯನ್ನು ಅಪೇಕ್ಷಿಸಲಾಗುತ್ತದೆ. ರಂಗವಲ್ಲಿಯ ಕೈಚಳಕ ಅಪೂರ್ವವಾದುದು.
- ಗೃಹೋಪಕರಣಗಳ ಮೇಲೆ ಬಿಡಿಸಿದ ಚಿತ್ತಾರಗಳು, ಮನೆಯ ಒಳ-ಹೊರಗೆ ಬಿಡಿಸಿದ ಚಿತ್ರಗಳು, ಕುಲದೇವತೆಗಳ ಚಿತ್ರಗಳು, ಆಚರಣೆ, ಆರಾಧನೆ, ಸಾಂಪ್ರದಾಯಿಕ ಚಿತ್ರಗಳನ್ನು ಬಿಡಿಸುವಲ್ಲಿನ ಜನಪದರ ಕೌಶಲ್ಯವು ಮೌಲ್ಯವನ್ನು ಮೀರಿದ್ದು, ಅಲ್ಲಿನ ಕಲಾತ್ಮಕತೆ ಅಪೂರ್ವವಾದುದು. ಇದು ಜನಪದರ ತೀಕ್ಷ್ಣ ಬುದ್ಧಿಗೆ ಸಾಕ್ಷಿಯಾಗಿದೆ.
ಪ್ರದರ್ಶನ ಕಲೆ
ಬದಲಾಯಿಸಿ- ಈ ನಮ್ಮ ನಾಡಿನಲ್ಲಿ ಮುನ್ನೂರಕ್ಕೂ ಹೆಚ್ಚು ಪ್ರದರ್ಶನ ಕಲೆಗಳಿವೆ. ಕುಣಿತ, ನಾಟಕ, ರಂಗಕಲೆಗಳು, ಮನರಂಜಕರು, ಸುಡುಗಾಡು ಸಿದ್ಧರ ಕೈಚಳಕದ ಆಟ, ಕೋಲೆ ಬಸವ, ಮೋಡಿ ಆಟ, ಕತ್ತಿವರಸೆ, ತಮಟೆವಾದನ, ಚಿಟ್ ಮೇಳ, ಮರಗಾಲು ಕುಣಿತ, ಕೊರವಂಜಿ, ಕೀಲು ಕುದುರೆ, ಬಹುರೂಪಿ ವೇಷಗಾರರು, ಯಕ್ಷಗಾನ, ಸೂತ್ರದ ಗೊಂಬೆಯಾಟ, ತೊಗಲು ಗೊಂಬೆಯಾಟ, ದೊಡ್ಡಾಟ, ಸಣ್ಣಾಟ - ಮೊದಲಾದವುಗಳು ಈ ಪ್ರದರ್ಶನ ಕಲೆಯಡಿಯಲ್ಲಿ ಬರುತ್ತವೆ. ಮಾನವನಿಗೆ ಸಾಂಸ್ಕೃತಿಕ ತಳಹದಿ ಇರುವುದರಿಂದ ಅವನ ಕುಣಿತಕ್ಕೆ ವಿಶಿಷ್ಟತೆಯಿದೆ. ಅಂತರಂಗದ ತೀವ್ರ ಭಾವನೆಗಳಿಗೆ ಬಹಿರಂಗದಲ್ಲಿ ದೇಹ ಪ್ರತಿಕ್ರಿಯಿಸುವುದೇ ಕುಣಿತ. ವ್ಯಕ್ತಿಗೆ ಅತಿ ಸಂತಸ, ದುಃಖವಾದಾಗ ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಕಂಡುಕೊಂಡ ಸಾಧನವೇ ಕುಣಿತ. ಅದು ಮಾನಸಿಕ ತುಡಿತಗಳನ್ನು ಅಭಿವ್ಯಕ್ತಿಸುವ ಮಾಧ್ಯಮವಾಗಿದೆ. ಕುಣಿತ ಜನಪದ ಕಲೆಗಳಲ್ಲಿಯೇ ಅತ್ಯಂತ ಪ್ರಾಚೀನ ಹಾಗೂ ಪ್ರಮುಖ ಕಲೆಯಾಗಿದೆ. ಸಂಗೀತ, ಸಾಹಿತ್ಯ, ಹೆಜ್ಜೆಗಾರಿಕೆ, ಹಿಮ್ಮೇಳ-ಮುಮ್ಮೇಳಗಳ ಸಮ್ಮಿಶ್ರಣವಾಗಿದ್ದು, ಈ ಕುಣಿತದಲ್ಲಿ ಅರಿವಿನ ಬೆಳಕನ್ನು ಹೃದಯದೊಳಗೆ ಬಿತ್ತುವ ಅಧಮ್ಯ ಶಕ್ತಿಯಿದೆ.
ಜನಪದ ಸಂಪ್ರದಾಯಗಳು
ಬದಲಾಯಿಸಿ- ಆಯಾ ಸಮಾಜದ ರೀತಿ-ನೀತಿಗಳನ್ನು, ಆಚಾರ-ವಿಚಾರಗಳನ್ನು, ವರ್ತನಾ ಪದ್ಧತಿಗಳನ್ನು, ನಡಾವಳಿಯ ರೂಪುರೇಷೆಗಳನ್ನೇ ಸಂಪ್ರದಾಯ ಎನ್ನುತ್ತೇವೆ. ಬಹುಕಾಲದಿಂದ ಬದಲಾಗದೆ ಉಳಿದು ಬಂದ ರೂಢಿಗಳನ್ನೇ ಸಂಪ್ರದಾಯ ಎಂದು ಕರೆಯುತ್ತೇವೆ. ಅತಿಥಿಗಳು ಮನೆಗೆ ಬಂದಾಗ ಅವರ ಕಾಲು ತೊಳೆಯಲು ನೀರನ್ನು ಕೊಡುವುದು, ಮನೆ ಮತ್ತು ಗುಡಿಯ ಒಳಗೆ ಪಾದರಕ್ಷೆಗಳನ್ನು ಬಳಸದೇ ಇರುವುದು, ಮುಂಜಾನೆ ಬಾಗಿಲಿಗೆ ನೀರು ಹಾಕುವುದು, ಹಬ್ಬ-ಹರಿದಿನಗಳಲ್ಲಿ ಮಾವಿನ ತೋರಣ ಕಟ್ಟುವುದು, ಬಾಳೆ ಗಿಡಗಳನ್ನು ಕಟ್ಟುವುದು, ಪೂಜಾ-ಕಾರ್ಯಕ್ರಮಗಳಿಗೆ ಮಡಕೆಗಳಲ್ಲಿ ನೀರು ತರುವುದು, ಗಿಡ-ಮರ, ಪ್ರಾಣಿ-ಪಕ್ಷಿಗಳನ್ನು ಪೂಜಿಸುವುದು, ಗ್ರಾಮ ದೇವತೆಗಳಿಗೆ ಬಲಿಕೊಡುವುದು - ಈ ಮೊದಲಾದ ಸಂಪ್ರದಾಯಗಳು ಜನಪದರ ಸಾಮಾಜಿಕ ಜೀವನದ ಮೇಲೆ ಅಪಾರ ಪ್ರಭಾವವನ್ನು ಬೀರಿವೆ.
ಜನಪದ ಭೌತಿಕ ಸಂಸ್ಕೃತಿ
ಬದಲಾಯಿಸಿ- ಜನಪದ ಕಸುಬುಗಳಲ್ಲಿ, ಜನಪದ ಕಲೆಗಳಲ್ಲಿ ಭೌತಿಕ ಸಂಸ್ಕೃತಿಯನ್ನು ಕಾಣುತ್ತೇವೆ. ಜನಪದರ ತಂತ್ರ, ಕೌಶಲ್ಯಗಳಲ್ಲಿ ಭೌತಿಕ ಸಂಸ್ಕೃತಿ ದೃಗ್ಗೋಚರವಾಗಿರುತ್ತದೆ. ಸಂಪ್ರದಾಯಕ್ಕನುಗುಣವಾಗಿರುವ ಉಡುಗೆ-ತೊಡುಗೆಗಳು, ಮನೆ-ಮಂದಿರಗಳು, ಮಡಿಕೆ-ಕುಡಿಕೆಗಳು, ಸಾಧನ-ಸಲಕರಣೆಗಳು, ಮನೆ ಬಳಕೆಯ ವಸ್ತುಗಳು, ಪೀಠೋಪಕರಣಗಳ - ಜನಪದರ ಸಂಪ್ರದಾಯ-ಸದಭಿರುಚಿಗೆ ಅನುಸಾರವಾಗಿ ನಿರ್ಮಾಣವಾಗಿರುತ್ತವೆ.
- ಚಾಪೆ, ಕೌದಿ, ಸೂತ್ರದ ಗೊಂಬೆಗಳು, ತೊಗಲು ಬೊಂಬೆಗಳು, ಆಯುಧಗಳು, ಯಕ್ಷಗಾನದ ವೇಷ-ಭೂಷಣಗಳು, ಮುಖವಾಡಗಳು, ಗಾಜು, ಬಟ್ಟೆಗಳ ಮೇಲಿನ ಚಿತ್ರಗಳು, ಒರಳುಕಲ್ಲು, ಕಡಗೋಲು, ಪಲ್ಲಕ್ಕಿ, ನಂದೀಧ್ವಜ, ಶಹನಾಯಿ, ಸಮಳ, ಕಿನ್ನರಿ, ತಂಬೂರಿ, ಏಕನಾದ, ಕೊಂಬು, ಕಹಳೆ, ತಮಟೆ, ಗುಮ್ಮಟ, ಚಂಡೆ, ಮದ್ದಳೆ, ಡೋಲು, ನಗಾರಿ, ಚಂದ್ರವಾದ್ಯ, ಚಕ್ರವಾದ್ಯ, ಗೆಜ್ಜೆ, ತಾಳ, ಜಾಗಟೆ, ಗಂಟೆ - ಮೊದಲಾದ ವಾದ್ಯಗಳು, ಹಣತೆ, ದೀವಟಿಗೆ, ಕತ್ತಿ, ಗುರಾಣಿ, ಕಠಾರಿ, ಈಟಿ, ಚಾಮರ, ಮಹಿಳೆಯರ ಆಭರಣಗಳು, ಅನೇಕ ಸಲಕರಣೆಗಳು ಜನಪದರ ಕುಶಲ ಭೌತಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ.
ಸೂಚನೆ
ಬದಲಾಯಿಸಿ- ಆಧಾರ / ಉಲ್ಲೇಖ (ಹಾಕಿ -- ಈ ತಾಣವನ್ನು ವ್ಯವಸ್ಥೆಗೊಳಿಸಿದೆ- (ಕ್ರಮ ನೋಡಿ)ಬೇರೆ ತಾಣ ನೋಡಿ.
- ಜನಪದ ಸಾಹಿತ್ಯ--: ಇದನ್ನು ಹುದುಕಿ -ಇಲ್ಲದಿದ್ದರೆ ಈ ಹೆಸರಿನಲ್ಲಿ ಹೊಸ ಪುಟ ತೆರೆಯಿರಿ.
ಸದಸ್ಯ:Sandhya.s345/sandbox ಇದನ್ನೂ ಅದೇ ರೀತಿ ಮಾಡಿ; ಆಧಾರ ಹಾಕಿ ; (ವರ್ಗ-category ಹಾಕಿ ; ಇಲ್ಲದಿದ್ದರೆ ಹುಡುಕಲು ಕಷ್ಟ (ಒಕೆ) Bschandrasgr ೧೨:೦೮, ೨೩ ಡಿಸೆಂಬರ್ ೨೦೧೪ (UTC)-ಸದಸ್ಯ:Bschandrasgr
ಹೆಚ್ಚಿನ ಮಾಹಿತಿಗೆ
ಸಿರಿಗನ್ನಡ ಜಾನಪದ (ಡಾ.ನೆಲ್ಲಿಕಟ್ಟೆ ಸಿದ್ಧೇಶ್)
--Sandhya.s345 (talk) ೧೧:೪೧, ೨೯ ಜನವರಿ ೨೦೧೪ (UTC)
This user is a member of WikiProject Education in India |