ಭಾರತದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಯಲ್ಲಿ ನಿಜವಾದ ಬಡತನ ಎಂದರೇನು? ಬಡವರು ಯಾರು? ಅವರ ಸಂಖ್ಯೆ ಎಷ್ಟು? ಎನ್ನುವ ವಿಶ್ಲೇಷಣೆ ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಅರ್ಥಶಾಸ್ತ್ರ- ಸಮಾಜಶಾಸ್ತ್ರ ತಜ್ಞರಿಗೆ, ಆಡಳಿತಗಾರರಿಗೆ ಚಿಂತನೆಗೆ ಸಾಕಾದಷ್ಟು ಗ್ರಾಸವನ್ನು ಒದಗಿಸಿದೆ. ವೈಜ್ಞಾನಿಕ- ಶಾಸ್ತ್ರೀಯ ಆಧಾರದ ಮೇಲೆ ಬಡತನದ ಅಧ್ಯಯನ ಆರಂಭವಾಗಿ ಆರು ದಶಕಗಳೇ ಕಳೆದಿದ್ದರೂ, ಪ್ರಮುಖ ಪ್ರಶ್ನೆಗಳಿಗೆ ಇನ್ನೂ ಖಚಿತವಾದ ಉತ್ತರ ಸಿಕ್ಕಿಲ್ಲ. ಅಸಲು ಬಡತನದ ಮಾನದಂಡ ಕುಟುಂಬದ ಆದಾಯದ ಲೆಕ್ಕ ಹಿಡಿಯಬೇಕೋ, ತಲಾವಾರು ವೆಚ್ಚದ ಲೆಕ್ಕ ಹಿಡಿಯಬೇಕೋ ಎನ್ನುವುದೇ ದೊಡ್ಡ ಜಿಜ್ಞಾಸೆಗೆ ಅವಕಾಶ ನೀಡಿತ್ತು. ಈಗಲೂ ಅದು ಇದ್ದೇ ಇದೆ. ಬಡತನದ ಅರ್ಥ ವಿವರಣೆ ಹಾಗೂ ಆ ವರ್ಗದ ಸಂಖ್ಯೆಯನ್ನು ಕುರಿತ ಮಾಹಿತಿ ಹೆಚ್ಚು ಹೆಚ್ಚು ಪ್ರಮುಖವಾಗಿದ್ದು ರಾಜಕೀಯವಾಗಿ ಕೊಡುಗೆ- ಉಡುಗೊರೆಗಳ ಹಂಚಿಕೆಯನ್ನು ಓಟು ಬ್ಯಾಂಕಿನ ರಾಜಕೀಯದ ಅಸ್ತ್ರವಾಗಿ ಬಳಸುವುದು ಆರಂಭವಾದಾಗ. ಈಗಾಗಲೇ ಈ ವಿಚಾರದಲ್ಲಿ ಹಲವಾರು ತಜ್ಞರ ಸಮಿತಿಗಳು, ಅಧ್ಯಯನ ತಂಡಗಳ ವರದಿಗಳಿವೆ. ಯೋಜನಾ ಆಯೋಗದ ಹಲವಾರು ಯೋಜನೆಗಳಿಗೆ ಬಡವರನ್ನು ಕುರಿತ ಅಂಕಿ- ಅಂಶಗಳು ಮುಖ್ಯ. ಈಚೆಗೆ ಸರ್ಕಾರದ ಬಜೆಟ್ ಅಂದಾಜುಗಳಿಗೆ ಆಧಾರವಾಗಿದ್ದು ಪ್ರಖ್ಯಾತ ಅರ್ಥಶಾಸ್ತ್ರ ತಜ್ಞ ತೆಂಡೂಲ್ಕರ್ ಅವರ ವರದಿ. ಆ ವರದಿ ಪ್ರಕಟವಾದಾಗ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಬೇಕೆಂತಲೇ ಬಡವರ ಸಂಖ್ಯೆ ಹಾಗೂ ಅವರ ಬವಣೆಯ ಬೇಗೆಯ ತೀವ್ರತೆಯನ್ನು ತಗ್ಗಿಸುವ ಪ್ರಯತ್ನ ನಡೆದಿದೆ ಎಂದು ಬೊಬ್ಬೆ ಹಾಕಿದವು. ಅನಂತರ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್, ದೀರ್ಘ ಕಾಲ ಸರ್ಕಾರದ ಸಲಹೆಗಾರರಾಗಿರುವ ಸಿ. ರಂಗರಾಜನ್ ಅವರ ನೇತೃತ್ವದ ಸಮಿತಿಯ ವರದಿಯನ್ನು ಈಗಷ್ಟೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ರಂಗರಾಜನ್ ಸಮಿತಿಯ ವರದಿಯ ಪ್ರಮುಖ ಅಂಶಗಳಲ್ಲಿ ಪ್ರಧಾನವಾಗಿ ಎದ್ದು ಕಾಣುವ ಸಂಖ್ಯೆ, "ಸರಾಸರಿಯ" ಲೆಕ್ಕ ಹಿಡಿದರೆ, ಮೂವರಲ್ಲಿ ಒಬ್ಬ ಭಾರತೀಯ ಬಡವ. ಆ ವರದಿಯ ಲೆಕ್ಕದಂತೆ, ಗ್ರಾಮೀಣ ಪ್ರದೇಶಗಳಲ್ಲಿ ದಿನಕ್ಕೆ 32 ರುಪಾಯಿಗಳನ್ನು ವೆಚ್ಚ ಮಾಡುವ ಶಕ್ತಿ ಇರುವವರು ಬಡವರಲ್ಲ. (ಇದು 2012ರ ಲೆಕ್ಕ). ನಗರ ಪ್ರದೇಶಗಳಲ್ಲಿ ಈ ಅಂಕಿ ದಿನಕ್ಕೆ 46 ರುಪಾಯಿಗಳು. ತೆಂಡೂಲ್ಕರ್ ಸಮಿತಿಯೂ ಇದೇ ರೀತಿಯ ಮಾನದಂಡವನ್ನೇ ಅನುಸರಿಸಿತ್ತು. ಆದರೆ ಆ ಸಮಿತಿಯ ಲೆಕ್ಕದಲ್ಲಿ ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 21 ರುಪಾಯಿ (ಅದಕ್ಕಿಂತ ಕಡಿಮೆ) ಹಾಗೂ ನಗರಗಳಲ್ಲಿ 33 ರುಪಾಯಿಗಳ ಗೆರೆಯ ಪ್ರಸ್ತಾಪವಿತ್ತು. ಈ ಲೆಕ್ಕಾಚಾರವನ್ನು ರಂಗರಾಜನ್ ಸಮಿತಿ ವಿಪರೀತವಾಗಿ ಬದಲಾಯಿಸಿಲ್ಲ. ಕಳೆದ ಮೂರು ವರ್ಷಗಳಲ್ಲಿ ಬಡತನದ ವಿರುದ್ಧದ ಕೇಂದ್ರೀಕೃತ ಹೋರಾಟ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿರುವುದಾಗಿ ವರದಿಯ ಅಂಕಿ-ಅಂಶಗಳು ತಿಳಿಸಿವೆ. ಆದರೂ, ಇನ್ನು ಭೀಕರ ಬಡತನ ವೈಯಕ್ತಿಕವಾಗಿ ಸಮುದಾಯಗಳ ರೂಪದಲ್ಲಿ ದೇಶದ ಅತಿ ದೊಡ್ಡ ಸಮಸ್ಯೆಯೇ. ಬಡವರಿಗೆ ನೀಡುವ ವಿಶೇಷ ನೆರವು ಸತ್ಪ್ರಾತ್ರರಿಗೆ ಮಾತ್ರ ಸಲ್ಲಬೇಕು. ಅಪಾತ್ರರಿಗೆ ಸಲ್ಲಬಾರದು ಎನ್ನುವ ನಿಯಮವನ್ನು ಜಾರಿಗೆ ತಂದರೆ ಈ ಸಮಸ್ಯೆಯ ಪರಿಹಾರದ ಪ್ರಯತ್ನಗಳಿಗೆ ಇನ್ನಷ್ಟು ಶಕ್ತಿ ಬಂದೀತು. ಬಡತನ ನಿವಾರಣೆಯ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. "ಅಕ್ರಮ ಕಾರ್ಡ್ಗಳು" ಈ ಸಮರದ ಬಹು ದೊಡ್ಡ ಲೋಪವನ್ನು ಗುರ್ತಿಸಿವೆ. ಅಕ್ರಮ ಕಾರ್ಡ್ಗಳನ್ನು ಹೊಂದಿರುವವರನ್ನು ಶಿಕ್ಷಿಸಬೇಕೆನ್ನುವ ಸಲಹೆ ಈ ಹಿನ್ನೆಲೆಯಲ್ಲಿ ಒಳ್ಳೆಯದೇ. ಅಕ್ರಮ ಕಾರ್ಡ್ಗಳನ್ನು ಕೊಟ್ಟವರು, ಕೊಡಿಸಿದವರನ್ನೂ ಅಪರಾಧಿಗಳೆಂದೇ ಭಾವಿಸಬೇಕಾದ ಪರಿಸ್ಥಿತಿ ಬಂದಿರುವಂತಿದೆ. ಅದು ಒಂದು ದುರಂತವೇ.