Prajwal B Mantanavar
ಪರಿಚಯ
ಬದಲಾಯಿಸಿಪ್ರಜ್ವಲ್ ಬಸವರಾಜ್ ಮಂಟಾನವರ ನನ್ನ ಹೆಸರು. ಸದ್ಯ, ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಏ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಮೂಲತಃ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದ ನಾನು, ನನ್ನ ಬಹುಕಾಲದ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೇ ಮಾಡಿದ್ದೇನೆ. ಅಪ್ಪಳಿಸುವ ಅಲೆಗಳ ಸಮುದ್ರ ಕಿನಾರೆಯಲಿದ್ದ ನನ್ನ ಶಾಲೆ, ಕರಾವಳಿಯ ಸೊಬಗನ್ನು ನನಗೆ ಬಾಲ್ಯದಿಂದಲೇ ಕಣ್ತುಂಬಿಸುತ್ತಾ ಬಂದಿತು. ತುಳುನಾಡ ಜನರ ಜನಪದ ಜೀವನದ ಸೊಗಸನ್ನು ಹತ್ತಿರದಿಂದ ಅರಿಯಲು ಈ ಮುಖೇನ ಲಭ್ಯವಾಯಿತು. ಹೆಚ್ಚಾಗಿ, ಯಕ್ಷಗಾನದಂತಹ ಸಾಂಸ್ಕೃತಿಕ-ಧಾರ್ಮಿಕ ಕಲಾಪ್ರಕಾರಗಳನ್ನು, ದೈವಾರಾಧನೆಗಾಗಿ ಆಚರಿಸುವ ಭೂತಕೋಲಗಳನ್ನು, ಕುದ್ರೊಳ್ಳಿ ದಸರೆಯ ವಿಜೃಂಭಣೆಯನ್ನು ವೀಕ್ಷಿಸಿ, ಕಲಾರಾಧನೆ ಎನ್ನುವುದು ನನ್ನಲಿ ರೂಢಿಗತವಾಗಿ ಬಂದಿದೆ. ಹಲವು ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಿತ ಕಾರಣ, ಸಿತಾರ್ ವಾದನದಲ್ಲೂ ಕುಶಲತೆಯನ್ನು ಪಡೆದುಕೊಂಡಿದ್ದೇನೆ. ಕನ್ನಡ, ಆಂಗ್ಲ, ಹಿಂದಿ, ಕೊಡವ ಭಾಷೆಗಳನ್ನು ಮಾತನಾಡಬಲ್ಲವನಾದ ನಾನು, ಸಂಸ್ಕೃತ ಮತ್ತು ಲ್ಯಾಟಿನ್ ಭಾಷೆಗಳನ್ನು ಕಲಿಯಲು ಬಹುಕಾಲದಿಂದ ಇಚ್ಛಿಸುತಿದ್ದೇನೆ. ಈಜಾಡುವುದು ಮತ್ತು ದಿನಪತ್ರಿಕೆಗಳನ್ನು ಓದುವುದು ನನ್ನ ನೆಚ್ಚಿನ ಹವ್ಯಾಸಗಳು. ಸಮಯಸಂದಾಗಲೆಲ್ಲ, ಶಾಸ್ತ್ರೀಯ ಸಂಗೀತ ಕಛೇರಿಗಳಿಗೆ ತೆರಳಿ ಸಂಗೀತವನ್ನಾಲಿಸುತ್ತೆನೆ. ಕಾಫಿ ಇಲ್ಲದಿದ್ದರೆ, ಮೆದುಳು ಸಂಪೂರ್ಣವಾಗಿ ಕಾರ್ಯಸ್ಥಗಿತವಾಗುವಷ್ಟು ಸೇವಿಸುತ್ತೇನೆ. ಸ್ವತಃ ಆಜ್ಞೇಯವಾದಿಯಾಗಿರುವ ನಾನು, ಕೆಲವೊಮ್ಮೆ ನಾಸ್ತಿಕವಾದದಕಡೆಯೂ ವಾಲುವುದುಂಟು. ಪಾಶ್ಚಾತ್ಯ-ಪೌರಾತ್ಯ ಧರ್ಮಗಳ ಪರಾಮರ್ಶೆ, ಸನಾತನ ಧರ್ಮದ ಅರ್ಥವಿಶ್ಲೇಷಣೆ ಮತ್ತು ಧರ್ಮ-ವಿಜ್ಞಾನಗಳ ಕುರಿತು ಚರ್ಚಿಸುವಲ್ಲಿ ಬಹಳ ಆಸಕ್ತಿ. ಪ್ರೊ| ರಿಚರ್ಡ್ ಡಾಕಿನ್ಸ್ ಅವರ ವೈಜ್ಞಾನಿಕ ಬರಹಗಳು, ಕ್ರಿಸ್ಟೋಫರ್ ರ್ಹಿಚ್ಚನ್ಸ್ ಅವರ ತರ್ಕಬದ್ಧ ಚಿಂತನೆಗಳು , ಸ್ಟೀಫನ್ ಫ್ರೈ ಅವರ ಗ್ರೀಕ್ ಪೌರಾಣಿಕ ಕಥೆಗಳು, ಸರ್ ಡೇವಿಡ್ ಅಟೆನ್ಬರೋ ಅವರ ವನ್ಯಜೀವದ ಕುರಿತಾದ ಸಾಕ್ಷ್ಯಚಿತ್ರಗಳು ಹಾಗು ರೋವನ್ ಅಟ್ಕಿನ್ಸನ್ ಅವರ ಹಾಸ್ಯ ಮತ್ತು ಅಭಿನಯ ನನ್ನ ಮೇಲೆ ಅಗಾಧ ಪರಿಣಾಮ ಬೀರಿದೆ. ವಿಲಿಯಂ ಶೇಕ್ಸಪಿಯರ್ ನ 'ಜೂಲಿಯಸ್ ಸೀಸರ್' ಮತ್ತವನ 'ಸೋನೆಟ್ ೧೩೦', ವಿಲಿಯಂ ವರ್ಡ್ಸ್‌ವರ್ತ್ ನ 'ಸೋಲಿಟರಿ ರೀಪರ್', ಡೇನಿಯಲ್ ಡೆಫೊವಿನ 'ರಾಬಿನ್ಸನ್ ಕ್ರೂಸೋ' ಹಾಗು ಸರ್ ಪಿ ಜಿ ವುಡ್ಹೌಸ[೧] ಸುಮಾರು ಆಂಗ್ಲ ಕಥೆಗಳು ನನ್ನ ಅಚ್ಚುಮೆಚ್ಚಿನದ್ದಾಗಿದೆ.
ಪ್ರವಾಸ
ಬದಲಾಯಿಸಿಮೊದಲಿನಿಂದಲೂ ಪ್ರವಾಸ-ಪರ್ಯಟನದಲ್ಲಿ ಅತೀವ ಆಸಕ್ತಿಯುಳ್ಳವನಾದ ಕಾರಣ, ರಾಜ್ಯ ಮತ್ತು ದೇಶದ ಉದ್ದಗಲಕ್ಕೂ ಸಂಚರಿಸಲು ಸಾಧ್ಯವಾಯಿತು. ಚಿಕ್ಕವನಿದ್ದಾಗಿನಿಂದಲೂ ತಂದೆತಾಯಿಯರೊಡನೆ ಮದುರೈ, ತಿರುವನಂತಪುರಂ, ಕಾಂಚಿ, ಮಹಾಬಲಿಪುರಂ, ಶ್ರೀಶೈಲ, ಕೊಲ್ಹಾಪುರ, ಉಜ್ಜೇನಿ, ಪುಷ್ಕರ ಮತ್ತು ಗೋಕರ್ಣದಂತಹ ಹತ್ತು-ಹಲವು ಪವಿತ್ರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತಿದ್ದೆ. ಇಂದಿಗೂ ಮನದಲ್ಲಿ ಅಚ್ಚೊತ್ತಿರುವಂತಿರುವ ಸ್ಮಾರಕವೆಂದರೆ, ನನ್ನೂರಾದ ವಿಜಯಪುರದ ವಿಶ್ವಪ್ರಸಿದ್ಧ ಗೋಲ ಗುಮ್ಮಟ. ಕಟ್ಟಡದ ಮಹಡಿಯ 'ವಿಸ್ಪರಿಂಗ್-ಗ್ಯಾಲರಿ' ಎಂಬ ಬೃಹತ್ ಹಜಾರದೊಳಗಡೆ, ಮಂದಸ್ವರದಲ್ಲಿ ಪಿಸುಗುಟ್ಟುವ ಶಬ್ಧವನ್ನು, ಅಷ್ಟೇ ಯಾಕೆ, ಸೂಜಿತೀಕ್ಷ್ಣದ ಹೃದಯಬಡಿತವನ್ನೂ, ನಿರರ್ಗಳವಾಗಿ ಏಳು ಬಾರಿ ಪ್ರತಿಧ್ವನಿಸಿ ತಟ್ಟನೆ ಮನಸ್ಸಿನಂಗಳದಲ್ಲಿ ಪುಳಕವನ್ನುಂಟುಮಾಡುತ್ತದೆ ಈ ದ್ಯತ್ಯ ಗೋರಿ. ಆಕಾಶದೆತ್ತರದ ಈ ಗುಮ್ಮಟದ ಶಿರ, ವರ್ಷಕಾಲದ ಕೃಷ್ಣವರ್ಣದ ಮೇಘಗಳಲ್ಲೊಂದೆಂಬಂತೆ ಲೀನವಾಗಿ, ನಾಡಿನ ಬರ-ಬಿಸಿಲನ್ನು ನೋಡಲಾಗದೆ ಕಂಬನಿ ಸುರಿಸುವಂತೆ ಮಳೆ ಬಂದಾಗ ಭಾಸವಾಗುತ್ತದೆ.
ಸಾಹಿತ್ಯ ಮತ್ತು ರಂಗಭೂಮಿ
ಬದಲಾಯಿಸಿಕೋಟ ಶಿವರಾಮ ಕಾರಂತರ'ಮೈಮನಗಳ ಸೂಳಿಯಲ್ಲಿ', ಎ. ಎನ್. ಮೂರ್ತಿರಾವ್ ಅವರ 'ದೇವರು', ಎಸ್.ಎಲ್. ಭ್ಯರಪ್ಪ ಅವರ 'ನಾಯಿ ನೆರಳು' ಹಾಗು ಬಿ ಜಿ ಎಲ್ ಸ್ವಾಮಿ ಅವರ 'ಹಸುರು ಹೊನ್ನು' ನನ್ನ ಕನ್ನಡದ ಅಭಿಮಾನವನ್ನು ಅಗಾಧಗೊಳಿಸಿದೆ. ಆಂಗ್ಲ ನಟರಾದ ಸರ್ ಕ್ರಿಸ್ಟೋಫರ್ ಲೀ ಹಾಗು ಆಲನ್ ರಿಕ್ಮನ್[೨] ಅವರ ಅಮೋಘ ಕಂಠ ಮತ್ತು ಅದ್ಭುತ ಅಭಿನಯ, ಅವರನ್ನು ಜಗತ್ತಿನ ಮೇರು ಕಲಾವಿದರ ಸಾಲಿನಲ್ಲಿ ಅಗ್ರಸ್ಥಾನಗಳಲ್ಲಿರಿಸಿದೆ. ಇಂತಹ ಕಲಾವಿದರ ಚಲನಚಿತ್ರಗಳನ್ನು ನೂಡುತ್ತ ಬೆಳದುಬಂದ ನಾನು, ಇಂಗ್ಲಿಷ್ ರಂಗಭೂಮಿಗಳಾದ 'ಓಲ್ಡ್ ವಿಕ್', 'ದಿ ರಾಯಲ್ ಷೇಕ್ಸ್ಪಿಯರ್ ಕಂಪೆನಿ' ಹಾಗು 'ಕ್ವೀನ್ ವಿಕ್ಟೋರಿಯಾ ಆಂಡ್ ಪ್ರಿನ್ಸ್ ಆಲ್ಬರ್ಟ್ ಡ್ರಾಮಾ ಸೊಸೈಟಿ' ಗಳಲ್ಲಿ ಅತೀವ ಆಸಕ್ತಿ ಹೊಂದಿರುವೆ. ಬಾಲ್ಯದಿಂದಲೂ 'ಜೇಮ್ಸ್ ಬಾಂಡ್' ಚಿತ್ರಗಳ ಅಭಿಮಾನಿಯಾಗಿರುವ ನಾನು, ಡೇಮ್ ಜೂಡಿ ಡೆಂಚ್ ಅವರನ್ನು ಜಗತ್ತಿನ ಅತ್ಯುತ್ತಮ ನಟಿಯೆಂದೇ ನಾನು ಪರಿಗಣಿಸುತ್ತೆನೆ. ಹಾಸ್ಯ, ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ಇತಿಹಾಸ, ಮನಃಶಾಸ್ತ್ರ, ಯೋಗ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ನಾನು, ಮುಂದೊಂದು ದಿನ ನನ್ನ ಎಲ್ಲ ಕಲಿಕೆ ಮತ್ತು ಶ್ರಮವನ್ನು ದೇಶಕಟ್ಟುವಲ್ಲಿ ಬಳಸಬೇಕೆಂದು ಬಯಸಿದ್ದೇನೆ. ಈ ಆಸೆಯನ್ನು ಈಡೇರಿಸುವುದಕ್ಕೆ ಅತೀವ ಪ್ರಯತ್ನ ಮತ್ತು ನಿರಂತರ ಅಭ್ಯಾಯಸದ ಅನಿವಾರ್ಯತೆಯಿದೆ ಎಂದು ಅರಿತಿದ್ದೇನೆ. ಎದುರಾದ ಎಲ್ಲ ಅಡ್ಡಿ-ಅಡೆತಡೆಗಳನ್ನೂ ಮೆಟ್ಟಿ, ಮುಂದೆ ಸಾಗಿ ಗುರಿಮುಟ್ಟುವ ಕನಸನ್ನು ಕಟ್ಟಿದ್ದೇನೆ.