ಪ್ರೀತಿಯು ಎಂದರೆ ಮೇಣದ ಮನೆಯಂತೆ

( ಮೂಲ: ಉರ್ದುವಿನಿಂದ ಅನುವಾದಿತ)

- ಲಕ್ಷ್ಮೀಕಾಂತ ಇಟ್ನಾಳ

ಪ್ರೀತಿಯು ಎಂದರೆ ಮೇಣದ ಮನೆಯಂತೆ ಸಂಶಯದ ಕಾವಿನಲಿ ಕರಗದಿರಲೆಂದಳು

ಆಡುಬಾಯಿಗಳಿಗೆÀ ಕಿವಿಗಳಿರುವಲ್ಲಿ ಸಂಶಯದ ಮನದಲ್ಲಿ ಪ್ರೇಮವರಳದು ಎಂದೆ


ಇಷ್ಟಪಟ್ಟು ಬಯಸಿ ನಾನಿರುವೆನೆಂದಳು ಪ್ರೀತಿಯಲಿ ಎಳ್ಳಷ್ಟೂ ಕಡಿಮೆಯಿರದಷ್ಟು

ಪ್ರೀತಿಯೇನೆಂದು ಅರಿತಿರುವೆ ನಿನ್ನಿಂದ ನಾನಂದೆ ಅದ ಹೊರತೇನು ಬರದು ನನಗೆಂದೆ


ಅಂಜುವುದು ವಿರಹಕೆ ಮನಸು ನಿನ್ನಿಂದ ಅಗಲಿಕೆಯ ಕಲ್ಪನೆಗೂ ನಿಲುಕದೀ ಮನಸೆಂದು

ಬಾಧಿಸಿದೆ ಅದೇ ನೋವು ನನಗೂ ನಾನೆಂದೆ ಅಹುದು ಪ್ರೀತಿಯ ಜೊತೆಗೆ ವಿರಹವೂ ಇಹುದು


ನಾನಿಲ್ಲದೇ ಬದುಕುವೆಯಾ ಕೇಳಿದಳು ನನಗೆ ನನ ಮಾತು ಆ ನೆನಪು ಕಣ್ಣುಗಳ ಮರೆಯುವೆಯಾ

ವಿಚಾರವೆಂದೂ ಹೊಳೆದಿಲ್ಲವೆನಗೆಂದೆ ಕ್ಷಣದ ಮರೆವದು ಕೂಡ ಉಸಿರು ನಿಲ್ಲುವುದು


ಅದು ಹೇಗೆ ನನಮೇಲೆ ಈ ಕುರುಡು ಪ್ರೇಮ ಸಾಮಾನ್ಯ ಹೆಣ್ಣಲ್ಲಿ ಕಂಡಿರುವೆಯೇನು

ಕಣ್ಣುಗಳ ನನ್ನಲ್ಲಿ ನಿನ್ನನ್ನು ಹುಡುಕೆಂದೆ ತಂತಾನೇ ತಿಳಿಯುವುದು ಏಕೆ ಈ ಭ್ರಮೆಯೆಂದು


ತಲ್ಲೀಣ ಪ್ರೀತಿಯಲಿ ನನ್ನ ನೀ ನೊಡುತಿರೆ ಬೆಲೆಕಟ್ಟದ ಹಾಗೆ ನನ್ನ ನಾ ಕಂಡಿಹೆನು

ದರುಶನವೇ ಪರಮ ಕೊಡುಗೆ ನಾ ಹೇಳುವೆ ನೋಡಿದಾಗೊಮ್ಮೆ ಜೀವನ ಸನ್ನಿಧಿಯ ಕಾಣುವೆ


ಸಿಗದೆನಗೆ ಮಿಂಚು ಹುಳುವಂಥ ಶಬ್ದಗಳು ಹುದುಗಿರುವ ಪ್ರೇಮದಾಳವನ್ನರುಹಲು

ಹಿತವಾದ ಕಣ್ಣೋಟದಿ ತುಂಬಿ ತುಳುಕಿದ ಪ್ರೇಮ ನಾನಂದೆ ಮೌನವದು ಮಾತಾಡುತಿಹುದು


ನನ್ನ ಕವನದ ಸಾಲು ನನ್ನ ಹೃದಯಗನ್ನಡಿಯು ನಾನೆಂದೆ ಹೇಳು ಕಾಣುವೆನೆ ನಾನು

ಹಿತ ಮಾತು ನೇಯುವರು ಕವಿಗಳು ಅಂದಳು ತುಂಬಿಹವು ಮಾತಲ್ಲಿ ಭಾವಗಳ ಸತ್ವಗಳು


ಈ ಮಾತೆಲ್ಲ ಈ ಕತೆಯೆಲ್ಲ ನೆಪವೆಂದೆ ಕೆಲ ಗಳಿಗೆ ನಿನ್ನೊಂದಿಗೆ ಹೀಗಾದರೂ ಕಳೆಯಲೆಂದೆ

ಆ ಮೇಲೆ ಈ ಮೌನÀ ಮನೋಹರ ನಾಟ್ಯದಲಿ ಕಣ್ಣೋಟವೇ ಮಾತುಗಳು ನಿಶ್ಯಬ್ದವೇ ಶಬ್ದಗಳು