ಸದಸ್ಯ:Avaneethga/ನನ್ನ ಪ್ರಯೋಗಪುಟ

ಚಿನ್ನ

ಚಿನ್ನ(Gold)ವು ಒಂದು ಮೂಲಧಾತುರಸಾಯನಶಾಸ್ತ್ರದಲ್ಲಿ ಇದರ ಚಿಹ್ನೆ Au ( ಲ್ಯಾಟಿನ್ಭಾಷೆಯ ಹೊಳೆಯುವ ಪ್ರಭಾತ ಎಂಬರ್ಥ ಕೊಡುವ ಆರಮ್ ಎಂಬ ಪದದಿಂದ ಆರಿಸಿಕೊಳ್ಳಲಾಗಿದೆ). ಚಿನ್ನದ ಪರಮಾಣು ಸಂಖ್ಯೆ ೭೯. ಬಹು ಜನಪ್ರಿಯರಾಜಲೋಹವಾಗಿರುವ ಚಿನ್ನವನ್ನು ಸಹಸ್ರಮಾನಗಳಿಂದಲೂ ಮಾನವನು ಮೋಹಿಸಿರುವನು. ಚಿನ್ನವನ್ನು ಹಿಂದಿನ ಕಾಲದಿಂದಲೂ ಹಣವಾಗಿ, ಆಭರಣಗಳಲ್ಲಿ ಮತ್ತು ಬಹುಮೂಲ್ಯ ವಸ್ತುವಾಗಿ ಮಾನವನು ಬಳಸುತ್ತಿರುವನು. ಚಿನ್ನವು ಭೂಮಿಯಲ್ಲಿ ತುಣುಕುಗಳಾಗಿ ಅಥವಾ ಕಾಳುಗಳಾಗಿ ಶಿಲೆಗಳಲ್ಲಿ ಹುದುಗಿರುತ್ತದೆ. ಚಿನ್ನವು ನಾಣ್ಯಗಳಲ್ಲಿ ಬಳಸಲ್ಪಡುವ ಒಂದು ಲೋಹ. ಚಿನ್ನವು ಮೃದು, ಸಾಂದ್ರ ಮತ್ತು ಹೊಳೆಯುವ ಲೋಹವಾಗಿದೆ. ಇದನ್ನು ತಗಡುಗಳನ್ನಾಗಿ ತಂತಿಯನ್ನಾಗಿ ರೂಪಿಸುವುದು ಬಲು ಸುಲಭ. ಎಲ್ಲಾ ಲೋಹಗಳ ಪೈಕಿ ಚಿನ್ನವು ಅತ್ಯಂತ ಮೃದು. ಶುದ್ಧ ಚಿನ್ನವು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿರುತ್ತದೆ.

ಅಂತಾರಾಷ್ಟ್ರೀಯ ಹಣಹಾಸು ನಿಧಿಯು ಚಿನ್ನವನ್ನು ಆರ್ಥಿಕ ಪ್ರಮಾಣವನ್ನಾಗಿ ಪರಿಗಣಿಸುತ್ತದೆ. ಚಿನ್ನವು ರಾಸಾಯನಿಕ ಕ್ರಿಯೆಗಳಿಗೆ ತೀವ್ರ ಪ್ರತಿರೋಧ ಒಡ್ಡುವುದರಿಂದಾಗಿ ಆಧುನಿಕ ಕೈಗಾರಿಕೆಗಳಲ್ಲಿ ದಂತಶಾಸ್ತ್ರದಲ್ಲಿ ಮತ್ತು ವಿದ್ಯುನ್ಮಾನ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿದೆ.

ಚಿನ್ನವು ಹೆಚ್ಚಿನ ರಾಸಾಯನಿಕಗಳೊಂದಿಗೆ ಪ್ರತಿಕ್ರಿಯೆ ನಡೆಸುವುದಿಲ್ಲ. ಆದರೆ ಕ್ಲೋರಿನ್,ಫ್ಲೂರೀನ್, ರಾಜೊಧಕ(ಅಕ್ವಾ ರೀಜಿಯ) ಮತ್ತು ಸಯನೈಡ್ ಗಳು ಚಿನ್ನದ ಮೇಲೆ ರಾಸಾಯನಿಕ ಪರಿಣಾಮವುಂಟುಮಾಡುತ್ತವೆ. ಚಿನ್ನವು ಪಾದರಸದಲ್ಲಿ ಕರಗಿ ಕೆಲಮಿಶ್ರಧಾತುಗಳನ್ನು ಸೃಷ್ಟಿಸುವುದಾದರೂ ಪಾದರಸದೊಂದಿಗೆ ರಾಸಾಯನಿಕ ಕ್ರಿಯೆ ಉಂಟಾಗುವುದಿಲ್ಲ. ಒಂದಕ್ಕೆ ಮೂರರ ಪ್ರಮಾಣದಲ್ಲಿರುವ ಸಾಂದ್ರ ನೈಟ್ರಿಕ್ ಆಮ್ಲ ಮತ್ತುಹೈಡ್ರೋಕ್ಲೋರಿಕ್ ಆಮ್ಲಗಳ ಮಿಶ್ರಣದಲ್ಲಿ ಮಾತ್ರ ಚಿನ್ನವು ಕರಗುವುದು. ಈ ದ್ರಾವಣವನ್ನು ಅಕ್ವಾ ರೀಜಿಯ ಎಂದು ಕರೆಯುವರು. ನೈಟ್ರಿಕ್ ಆಮ್ಲದಲ್ಲಿ ಚಿನ್ನವು ಕರಗಲಾರದು. ಈ ಗುಣವನ್ನು ವಸ್ತುಗಳಲ್ಲಿ ಚಿನ್ನದ ಇರುವಿಕೆಯನ್ನು ಕಂಡುಕೊಳ್ಳುವಲ್ಲಿ ಬಳಸಲಾಗುತ್ತದೆ. ಅಲ್ಲದೆ ಸಾಮಾನ್ಯವಾಗಿ ಚಿನ್ನವು ಪ್ರಕೃತಿಯಲ್ಲಿ ಬೆಳ್ಳಿಯೊಡನೆ ಬೆರೆತಿರುವುದರಿಂದಾಗಿ ಚಿನ್ನವನ್ನು ಶುದ್ಧೀಕರಿಸಿ ತೆಗೆಯುವಾಗ ನೈಟ್ರಿಕ್ ಆಮ್ಲದ ದ್ರಾವಣದ ಬಳಕೆಯಾಗುವುದು.ಬೆಳ್ಳಿಯು ನೈಟ್ರಿಕ್ ಆಮ್ಲದಲ್ಲಿ ಕರಗುತ್ತದೆ.

ಚಿನ್ನವು ಅತಿ ಮೃದುಲೋಹ. ಕೇವಲ ಒಂದು ಗ್ರಾಮಿನಷ್ಟು ಚಿನ್ನವನ್ನು ಒಂದು ಚದರ ಮೀಟರ್ ಅಗಲ ಹಾಳೆಯಾಗಿ ಬಡಿಯಬಹುದು. ಅರೆಪಾರದರ್ಶಕವಾಗುವಷ್ಟು ತೆಳು ಹಾಳೆಯಾಗಿ ಚಿನ್ನವನ್ನು ರೂಪಿಸಬಹುದಾಗಿದೆ. ಚಿನ್ನವು ಹಲವು ಲೋಹಗಳೊಂದಿಗೆ ಸುಲಭವಾಗಿ ಬೆರೆತು ಮಿಶ್ರಲೋಹಗಳನ್ನು ಸೃಷ್ಟಿಸುವುದು. ವಿಶಿಷ್ಟ ವರ್ಣದ ವಸ್ತುಗಳನ್ನು ತಯಾರಿಸುವಲ್ಲಿ ಇಂತಹ ಮಿಶ್ರಲೋಹಗಳ ಬಳಕೆಯಾಗುತ್ತದೆ. ಭೂಮಿಯಲ್ಲಿರುವ ಚಿನ್ನವು ಸಾಮಾನ್ಯವಾಗಿ ೮ ರಿಂದ ೧೦% ಬೆಳ್ಳಿಯೊಂದಿಗೆ ಮಿಶ್ರವಾಗಿರುತ್ತದೆ.

ಚಿನ್ನವು ವಿದ್ಯುತ್ ಮತ್ತು ಉಶ್ಣದ ಉತ್ತಮ ವಾಹಕವಾಗಿದೆ. ವಾತಾವರಣದ ಉಷ್ಣತೆ, ತೇವ,ಆಮ್ಲಜನಕ ಮತ್ತು ಇತರ ರಾಸಾಯನಿಕ ಅಂಶಗಳು ಚಿನ್ನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಗುಣಗಳು ಚಿನ್ನವನ್ನು ಆಭರಣ ಮತ್ತು ನಾಣ್ಯಗಳ ತಯಾರಿಕೆಯಲ್ಲಿ ಬಳಸಲು ಅತಿ ಸೂಕ್ತವಾಗಿಸಿವೆ. ಶುದ್ಧ ಚಿನ್ನವು ಯವುದೇ ರುಚಿಯನ್ನು ಹೊಂದಿರುವುದಿಲ್ಲ. ಚಿನ್ನವು ಅತಿ ಸಾಂದ್ರ ಲೋಹವಾಗಿದ್ದು ಒಂದು ಘನ ಮೀಟರ್ ಚಿನ್ನವು ೧೯೩೦೦ ಕಿ.ಗ್ರಾ. ಗಳಷ್ಟು ತೂಗುವುದು. ಇದು ಸೀಸಕ್ಕಿಂತ ಹೆಚ್ಚು ಸಾಂದ್ರತೆಯನ್ನು ಹೊಂದಿದೆ.

ಸಾಮಾನ್ಯವಾಗಿ ಅಲ್ಪಪ್ರಮಾಣದ ಚಿನ್ನದ ಸೇವನೆಯು ಶರೀರಕ್ಕೆ ಯಾವುದೇ ಹಾನಿಯುಂಟುಮಾಡುವುದಿಲ್ಲ. ಕೆಲವೊಮ್ಮೆ ಆಹಾರದಲ್ಲಿ ಮತ್ತು ಔಷಧಿಗಳಲ್ಲಿ ಅಲ್ಪಪ್ರಮಾಣದ ಚಿನ್ನವನ್ನು ಬಳಸಲಾಗುತ್ತದೆ. ಆದರೆ ಹೆಚ್ಚಿನ ಪ್ರಮಾಣದ ಚಿನ್ನದ ಸೇವನೆಯು ಇತರ ಭಾರಲೋಹಗಳಂತೆ ಶರೀರಕ್ಕೆ ವಿಷಕಾರಿಯಾಗುವುದೆಂದು ಹೇಳಲಾಗುತ್ತದೆ.