ಸದಸ್ಯರ ಚರ್ಚೆಪುಟ:Manasa Dindgur/ನನ್ನ ಪ್ರಯೋಗಪುಟ

ಹಣ್ಣು ಮತ್ತು ತರಕಾರಿಗಳ ಮಾರುಕಟ್ಟೆ

ಆರ್ಥಶಾಸ್ತ್ರದಲ್ಲಿರುವ ಮಾರುಕಟ್ಟೆಯ ಪ್ರಕಾರಗಳು

ಬದಲಾಯಿಸಿ

ಪೇಟೆ ಅಥವ ಮಾರುಕಟ್ಟೆ ಎಂಬ ಪದದ ಮೂಲವು ಲಾಟಿನ್ ಭಾಷೆಯ 'ಮರ್‍ಕಟಸ್' ಎಂಬ ಶಬ್ಧ. 'ಮರ್‍ಕಟಸ್' ಎಂದರೆ ವ್ಯಾಪಾರ ಎಂದರ್ಥ. ಮಾರುಕಟ್ಟೆಯೆಂದರೆ ವ್ಯಾಪಾರ ನಡೆಸುವ ಸ್ಥಳ ಅಥವ ವಸ್ತುಗಳನ್ನು ವಿನಿಮಯ ಮಾಡುವ ಸ್ಥಳ. ಅರ್ಥಶಾಸ್ತ್ರದಲ್ಲಿ ಮಾರುಕಟ್ಟೆ ಎನ್ನುವ ಪದಕ್ಕೆ ಸ್ವಲ್ಪ ವಿಶಾಲವಾದ ಅರ್ಥವಿದೆ. ಅದು ಕೇವಲ ವಿನಿಮಯದ ಸ್ಥಳವನ್ನು ಮಾತ್ರ ಸೂಚಿಸುವುದಿಲ್ಲ. ಮಾರುಕಟ್ಟೆಯು, ಒಂದು ವಸ್ತು, ಒಂದು ಸ್ಥಳ ಹ್ಹಗು ಕೊಡುವ ಮತ್ತು ಕೊಳ್ಳುವ ಜನ ಇದ್ದರೆ ಮಾತ್ರ ಮಾರುಕಟ್ಟೆಯೆಂದು ಕರೆಸಿಕೊಳ್ಳಲಾಗುತ್ತದೆ ಎಂದು ಅರ್ಥಶಾಸ್ತ್ರಜ್ಞರು ತಿಳಿದಿದ್ದಾರೆ. ಆದ್ದರಿಂದ, ಮಾರುಕಟ್ಟೆ ಎಂದರೆ ಒಂದು ನಿರ್ದಿಷ್ಟ ಸ್ಥಳ ಅಥವ ಪ್ರದೇಶವೇ ಆಗಬೇಕೆಂದಿಲ್ಲ. ಅದು ಒಂದು ದೇಶಕ್ಕೆ ಅಥವ ಇಡೀ ಜಗತ್ತಿಗೆ ಅನ್ವಯವಾಗುವ ಪದ. ಆಧುನಿಕ ಜಗತ್ತಿನಲ್ಲಿ ಮಾರುಕಟ್ಟೆಗೆ ಒಂದು ಭೌತಿಕ ರೂಪವಿರಬೇಕೆಂದಿಲ್ಲ. ವಿಜ್ಞಾನ ಹಾಗು ತಂತ್ರಜ್ಞಾನದ ವಿಸ್ತರಣೆ ಹಾಗು ಬೆಳವಣಿಗೆಯ ಕಾರಣ, ಮಾರುಕಟ್ಟೆಗಳು ತಮ್ಮ ಭೌತಿಕ ರೂಪವನ್ನು ಕಳೆದುಕೊಂಡು ತಾಂತ್ರಿಕ ಹಾಗು ವಸ್ತುತಃ ಜಗತ್ತಿನಲ್ಲಿ ಸೃಷ್ಟಿಗೊಳ್ಳುತ್ತಿವೆ.

ಮಾರುಕಟ್ಟೆಯ ಲಕ್ಷಣಗಳು

ಬದಲಾಯಿಸಿ

ಅರ್ಥಶಾಸ್ತ್ರದ ಪರಿಭಾಷೆಯಲ್ಲಿ ಒಂದು ಪ್ರದೇಶವು ಪೇಟೆಯೆಂದು ಕರೆಯಲ್ಪಡಬೇಕಾದರೆ, ಅದು ಕೆಳಗಿನ ಶರತ್ತುಗಳನ್ನು ಪೂರೈಸಬೇಕು

(೧) ಮಾರಾಟಕ್ಕೆ ವಸ್ತು ಇರಬೇಕು

(೨) ವಸ್ತುವನ್ನು ಮಾರಾಟ ಮಾಡುವವರು ಮತ್ತು ಕೊಳ್ಳುವವರು ಇರಬೇಕು

(೩) ಬೆಲೆಯ ಬಗ್ಗೆ ವ್ಯಾಪಾರಿಗಳ ಮತ್ತು ಗ್ರಾಹಕರ ನಡುವೆ ಒಪ್ಪಂದ ಇರಬೇಕು

(೪) ವ್ಯಾಪಾರ ವಸ್ತು ಒಂದೇ ರೀತಿಯದಾಗಿರಬಹುದು ಅಥವ ವೈವಿಧ್ಯತೆಯನ್ನು ಹೊಂದಿರಬಹುದು

(೫) ವಸ್ತುವಿಗೆ ಬೆಲೆ ಇರಬೇಕು, ಅಥವ, ವಸ್ತುವಿನ ಮೌಲ್ಯವನ್ನು ಹಣದ ಮೂಲಕ ನಿರ್ಧರಿಸಲು ಬರುವಂತಿರಬೇಕು.

ಮಾರುಕಟ್ಟೆಯ ವರ್ಗೀಕರಣ

ಬದಲಾಯಿಸಿ

ಮಾರುಕಟ್ಟೆಗಳನ್ನು ಮೂರು ರೀತಿಯಲ್ಲಿ ವರ್ಗೀಕರಿಸಬಹುದು

(೧) ಕ್ಷೇತ್ರದ ಆಧಾರದ ಮೇಲೆ

(೨) ಸಮಯದ ಆಧಾರದ ಮೇಲೆ

(೩) ವ್ಯಾಪಾರದ ಅಧಾರದ ಮೇಲೆ

ಕ್ಷೇತ್ರದ ಆಧಾರದ ಮೇಲೆ ಮಾರುಕಟ್ಟೆಗಳನ್ನು ಮೂರು ಬಗೆಯಾಗಿ ವರ್ಗೀಕರಿಸಬಹುದು. ಅವು, ಸ್ಥಳೀಯ, ದೇಶೀಯ ಹಾಗು ಅಂತರ್ದೇಶೀಯ ಮಾರುಕಟ್ಟೆಗಳು. ಸ್ಥಳೀಯ ಮಾರುಕಟ್ಟೆಗಳು ಒಂದು ಗ್ರಾಮ ಅಥವ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿರುತ್ತವೆ. ಈ ರೀತಿಯ ಮಾರುಕಟ್ಟೆಗಳಲ್ಲಿ, ವಸ್ತುಗಳ ಉತ್ಪಾದನೆ, ವಿನಿಮಯ ಹಾಗು ಮಾರಾಟ ಒಂದೇ ಪ್ರದೇಶದಲ್ಲಿ ನಡೆಯುತ್ತದೆ. ಆದರೆ, ಕೆಲವು ವಸ್ತುಗಳು ದೇಶದ ಮೂಲೆ-ಮೂಲೆಗಳಿಗೆ ಸಂಚಾರವಾಗಿ ಮಾರಾಟವಾಗುತ್ತವೆ. ಉದಾಹರಣೆಗೆ ಧವಸ-ಧಾನ್ಯಗಳು ಹಾಗು ಲೋಹಗಳು. ಈ ರೀತಿಯ ವಸ್ತುಗಳಿಗೆ, ಒಂದು ದೇಶವನ್ನೇ ಮಾರುಕಟ್ಟೆಯಾಗಿ ಪರಿಗಣಿಸಬೇಕಾಗುತ್ತದೆ. ಇಂತಹ ಮಾರುಕಟ್ಟೆಗಳನ್ನು ದೇಶೀಯ ಮಾರುಕಟ್ಟೆಯೆಂದು ವರ್ಗೀಕರಿಸಲಾಗುತ್ತದೆ. ಆದರೆ ಕೆಲವೊಮ್ಮೆ, ವಸ್ತುಗಳು ದೇಶದ ಗಡಿಯನ್ನೂ ಸಹ ದಾಟಿ ಸಂಚಾರ ಮಾಡಿದಾಗ, ಅವು ಅಂತರ್ದೇಶೀಯ ಮಾರುಕಟ್ಟೆಗಳಲ್ಲಿ ವಿನಿಮಯಗೊಳ್ಳುತ್ತವೆ. ಉದಾಹರಣೆಗೆ ಚಿನ್ನ ಹಾಗು ಬೆಳ್ಳಿಯಂತಹ ಲೋಹಗಳು, ಸಿಮೆಂಟು ಹಾಗು ಇನ್ನಿತರೆ ವಸ್ತುಗಳು ಅಂತರ್ದೇಶೀಯ ಮಾರುಕಟ್ಟೆಗಳಲ್ಲಿ, ಮಾರಾಟಗೊಳ್ಳುವಂತಹ ವಸ್ತುಗಳು.

ಸಮಯದ ಆಧಾರದ ಮೇಲೆ ಮಾರುಕಟ್ಟೆಗಳನ್ನು ಮಾರುಕಟ್ಟೆಯ ಅವಧಿ, ಅಲ್ಪಾವಧಿ, ದೀರ್ಘಾವಧಿ ಹಾಗು ಅತಿ ದೀರ್ಘಾವಧಿ ಎಂದು ವರ್ಗೀಕರಿಸಬಹುದು. ಮಾರುಕಟ್ಟೆಯ ವಸ್ತುಗಳು ಅತಿ ವೀಗವಾಗಿ ನಾಶವಾಗುವಲ್ಲಿ, ಅವುಗಳನ್ನು ಮಾರುಕಟ್ಟೆಯ ಅವಧಿಯ ಮಾರುಕಟ್ಟೆಗಳಲ್ಲಿ ಮಾರಲಾಗುತ್ತವೆ. ಉದಾಹರಣೆಗೆ ಹೂ, ಹಣ್ಣು, ತರಕಾರಿ, ಹಾಲು ಹಾಗು ಇತ್ಯಾದಿಗಳು. ವಸ್ತುಗಳು ಕೆಲವು ದಿನಗಳ ಮಟ್ಟಿಗೆ ಬಾಳಿಕೆ ಬರುವುದರಲ್ಲಿ, ಅವುಗಳನ್ನು ಅಲ್ಪಾವಧಿಯ ಮಾರುಕಟ್ಟೆಗಳಲ್ಲಿ ವಿನಿಮಯ ಮಾಡಲಾಗುತ್ತವೆ. ಉದಾಹರಣೆಗೆ, ಧವಸ-ಧಾನ್ಯಗಳನ್ನು ಅಲ್ಪಾವಧಿಯ ಮಾರುಕಟ್ಟೆಗಳಲ್ಲಿ ಮಾರಲಾಗುತ್ತದೆ. ಅಲ್ಪಾವಧಿಯ ಮಾರುಕಟ್ಟೆಯಲ್ಲಿ, ಉತ್ಪಾದನೆಯನ್ನು ಸ್ವಲ್ಪ ಮಟ್ಟಿಗೆ ಬದಲಾಯಿಸಬಹುದು. ಆದರೆ, ಸಂಪೂರ್ಣವಾಗಿ ಉತ್ಪಾದನೆಯ ಘಟಕವನ್ನು ಬದಲಾಯಿಸುವುದು ಅಸಾಧ್ಯ. ದೀರ್ಘಾವಧಿಯ ಮಾರುಕಟ್ಟೆಗಳಲ್ಲಿ, ದೀರ್ಘ ಕಾಲ ಬಾಳಿಕೆ ಬರುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ. ಉದಾಹರಣೆಗೆ, ಯಂತ್ರಗಳು, ಪೀಠೋಪಕರ್ಣಗಳು ಹಾಗು ವಾಹನಗಳನ್ನು ಇಲ್ಲಿ ಮಾರಾಟ ಮಾಡಬಹುದು. ಈ ರೀತಿಯ ಮಾರುಕಟ್ಟೆಗಳಲ್ಲಿ, ಉತ್ಪಾದನಾ ಘಟಕವನ್ನೇ ಬದಲಾಯಿಸಬಹುದು. ಮಾರುಕಟ್ಟೆಯ ಬೇಡಿಕೆಯನ್ನು ಪೂರೈಸಲು, ಕಾರ್ಖಾನೆ ಹಾಗು ಯಂತ್ರಗಳ ಬದಲಾವಣೆಯನ್ನು ಮಾಡಾಲು ಸಾಧ್ಯವಾಗುತ್ತದೆ. ಅತೀ ದೀರ್ಘಾವಧಿಯ ಮಾರುಕಟ್ಟೆಗಳಲ್ಲಿ ಉತ್ಪಾದನಾ ರೀತಿಗಳು ಹಾಗು ಜನರ ಅಭಿರುಚಿಗಳು ಬದಲಾಗುವ ಸಾಧ್ಯತೆಗಳಿರುತ್ತದೆ. ಆದರೆ, ಇಲ್ಲಿ ವಸ್ತುಗಳ ವಿನಿಮಯಕ್ಕೆ ಯಾವುದೇ ರೀತಿಯ ಪ್ರಾಮುಖ್ಯತೆ ಇರುವುದಿಲ್ಲ. ಈ ಮಾರುಕಟ್ಟೆಯು ಬರೀ ದೇಶದ ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವವಾದುದು.

ವ್ಯಾಪಾರದ ಆಧಾರದ ಮೇಲೆ ಮಾರುಕಟ್ಟೆಗಳನ್ನು ಎರಡು ಬಗೆಯಾಗಿ ವಿಂಗಡಿಸಬಹುದು. ಮೊದಲನೆಯದು, ಪೈಪೋಟಿಯ ಅಥವ ಸ್ಪರ್ಧೆಯ ಮಾರುಕಟ್ಟೆ ಮತ್ತು ಎರಡನೆಯದು ಏಕಸ್ವಾಮ್ಯದ ಮಾರುಕಟ್ಟೆ. ಸ್ಪರ್ಧೆಯಲ್ಲಿ ಪರಿಶುದ್ಧ ಸ್ಪರ್ಧೆ, ಪರಿಪೂರ್ಣ ಸ್ಪರ್ಧೆ ಹಾಗು ಅಪರಿಪೂರ್ಣ ಸ್ಪರ್ಧೆಯೆಂಬ ಪಂಗಡಗಳಿರುತ್ತವೆ. ಏಕಸ್ವಾಮ್ಯದಲ್ಲಿ, ಸರಳ ಏಕಸ್ವಾಮ್ಯ ಹಾಗು ತಾರತಮ್ಯದ ಏಕ್ಸ್ವಾಮ್ಯವೆಂದು ಬೇಧಗಳಿರುತ್ತವೆ.

ಸ್ಪರ್ಧೆಯ ಮಾರುಕಟ್ಟೆ

ಬದಲಾಯಿಸಿ

ಪರಿಷುದ್ಧ ಸ್ಪರ್ಧೆ

ಬದಲಾಯಿಸಿ

ಒಂದು ಮಾರುಕಟ್ಟೆಯನ್ನು ಪರಿಶುದ್ಧ ಮಾರುಕಟ್ಟೆಯೆಂದು ಪರಿಗಣಿಸಲು ಅದಕ್ಕೆ ಮೂರು ಲಕ್ಷಣಗಳಿರಬೇಕು.

(೧) ವ್ಯಾಪಾರಿಗಳು ಮತ್ತು ಗ್ರಾಹಕರು ಬಹು ಸಂಖ್ಯೆಯಲ್ಲಿರಬೇಕು

(೨) ಉತ್ಪನ್ನಗಳು ಒಂದೇ ರೀತಿಯಾಗಿರಬೇಕು

(೩) ಕಾರ್ಖಾನೆಗಳು ಸ್ವಚ್ಛಂದವಾಗಿ ಕೈಗಾರಿಕೆಯನ್ನು ಪ್ರವೇಶಿಸಲು ಹಾಗು ನಿರ್ಗಮಿಸಲು ಸಾಧ್ಯವಿರಬೇಕು

ಪರಿಪೂರ್ಣ ಸ್ಪರ್ಧೆ

ಬದಲಾಯಿಸಿ
 
ಅಲ್ಪಾವಧಿಯ ಪರಿಪೂರ್ಣ ಸ್ಪರ್ಧೆಯ ರೇಖಾನಕ್ಷೆ

ಪರಿಪೂರ್ಣ ಪೈಪೋಟಿಯು ಪರಿಶುದ್ಧ ಸ್ಪರ್ಧೆಯ[] ಒಂದು ವಿಸ್ತೃತ ರೂಪ. ಒಂದು ಮಾರುಕಟ್ಟೆಯನ್ನು ಪರಿಪೂರ್ಣ ಮಾರುಕಟ್ಟೆಯೆಂದು ವರ್ಗೀಕರಿಸಲು ಅದಕ್ಕೆ ಕೆಳಗಿನ ಲಕ್ಷಣಗಳಿರಬೇಕು.

(೧) ಬಹುಸಂಖ್ಯೆಯ ಮಾರಾಟಗಾರರು ಮತ್ತು ಗ್ರಾಹಕರು

(೨) ಏಕರೀತಿಯ ಉತ್ಪನ್ನಗಳು

(೩) ಕಾರ್ಖಾನೆಗಳ ಅಡೆ-ತಡೆಯಿಲ್ಲದ ಆಗಮನ ಮತ್ತು ನಿರ್ಗಮನ

(೪) ಮಾರುಕಟ್ಟೆಯ ಬಗ್ಗೆ ಮಾರಾಟಗಾರರಿಗೆ ಮತ್ತು ಕೊಳ್ಳುವವರಿಗೆ ಪರಿಪೂರ್ಣ ಪರಿಜ್ಞಾನ

(೫) ಸಾಗಾಟದ ವೆಚ್ಚ ಇಲ್ಲದಿರುವುದು

(೬) ಎಲ್ಲಾ ಉತ್ಪಾದನಾ ಘಟಕಗಳ ಪರಿಪೂರ್ಣ ಸಂಚಾರ

(೭) ಅನಿರ್ಬಂಧಿತ ವ್ಯಾಪಾರ

ನೈಜಿಕ ಜೀವನದಲ್ಲಿ, ಪರಿಶುದ್ಧ ಮಾರುಕಟ್ಟೆ ಅಥವ ಪರಿಪೂರ್ಣ ಮಾರುಕಟ್ಟೆಗಳನ್ನು ಕಾಣುವುದು ಬಹಳ ಕಷ್ಟ. ಆದರೆ, ಒಂದು ಮಟ್ಟಿಗೆ, ಕೃಷಿ ಮಾರುಕಟ್ಟೆಯನ್ನು ಈ ರೀತಿಯಾಗಿ ವರ್ಗೀಕರಿಸಲಾಗುತ್ತದೆ. ಕೃಷಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳು ಒಂದೇ ರೀತಿಯಿರುತ್ತವೆ. ಅಲ್ಲದೆ, ಭಾರತದಂತಹ ದೇಶಗಳಲ್ಲಿ ಇಡೀ ಜನಾಂಗದ ಒಂದು ಪ್ರಮುಖ ಭಾಗವು ಕೃಷಿ ಉದ್ಯಮದಲ್ಲಿ ತೊಡಗಿಕೊಂಡಿರುವ ಕಾರಣ, ಮಾರುಕಟ್ಟೆಯಲ್ಲಿ ಬಹಳಷ್ಟು ಜನರಿರುತ್ತಾರೆ. ಕೃಷಿ ಉದ್ಯಮವನ್ನು ಯಾರೇ ಆದರು ಆಗಮಿಸಬಹುದು, ಅಲ್ಲದೆ, ಈಗಾಗಲೇ ಇರುವವರು, ಈ ಉದ್ಯಮವನ್ನು ಬಿಟ್ಟು ಹೋಗಬಹುದು. ಇದಷ್ಟೇ ಅಲ್ಲದೆ, ಕೃಷಿ ಸಾಮಗ್ರಿಗಳ ಬಗ್ಗೆ ಎಲ್ಲರಿಗೂ ಪರಿಪೂರ್ಣ ಜ್ಞಾನವಿರುವ ಕಾರಣ, ಗ್ರಾಹಕರನ್ನು ಒಲಿಸಲು ಮಾರಾಟದ ವೆಚ್ಚ ಅಥವ ಸಾಗಾಟದ ವೆಚ್ಚ ಇಲ್ಲಿ ಕಂಡು ಬರುವುದಿಲ್ಲ. ಹೀಗಾಗಿ ಕೃಷಿ ಮಾರುಕಟ್ಟೆಯನ್ನು ಒಂದು ಮಟ್ಟಿಗೆ ಪರಿಶುದ್ಧ ಅಥವ ಪರಿಪೂರ್ಣ ಮಾರುಕಟ್ಟೆಯೆಂದು ಪರಿಗಣಿಸಬಹುದು.

ಅಪರಿಪೂರ್ಣ ಸ್ಪರ್ಧೆ

ಬದಲಾಯಿಸಿ
 
ಅಲ್ಪಾವಧಿಯ ಅಪರಿಪೂರ್ಣ ಸ್ಪರ್ಧೆಯ ರೇಖಾನಕ್ಷೆ

ಅರ್ಥಶಾಸ್ತ್ರದಲ್ಲಿ ಅಪರಿಪೂರ್ಣ ಸ್ಪರ್ದೆಯ[] ಮಾರುಕಟ್ಟೆ ಎನ್ನುವುದು ಒಂದು ವಿಶಾಲವಾದ ಪರಿಕಲ್ಪನೆ. ಅದನ್ನು ಪುನಹ ಕೆಳಗಿನ ಮೂರು ವಿಧವಾಗಿ ವರ್ಗೀಕರಿಸಬಹುದು.

ದ್ವಿಜನಸ್ವಾಮ್ಯದ ಮಾರುಕಟ್ಟೆ

ಬದಲಾಯಿಸಿ

ಈ ರೀತಿಯ ಮಾರುಕಟ್ಟೆಯಲ್ಲಿ ಕೇವಲ ಎರಡು ಉತ್ಪಾದಕರಿರುತ್ತರೆ. ಇಬ್ಬರೇ ಉತ್ಪಾದಕರಿರುವ ಕಾರಣ, ಅವರಿಬ್ಬರ ಮಧ್ಯೆ ನಿರಂತರ ಕಠಿಣ ಸ್ಪರ್ಧೆಯಿರುತ್ತದೆ. ಆದರೆ, ಕೆಲವವೊಮ್ಮೆ ಸ್ಪರ್ಧೆಯು ಹತೋಟಿ ಮೀರಿದಾಗ, ಇಬ್ಬರೂ ಒಂದಾಗಿ ಏಕಸ್ವಾಮ್ಯದಲ್ಲಿ ಉತ್ಪಾದನೆಯನ್ನು ನಡೆಸಬಹುದು. ಈ ರೀತಿಯ ಮಾರುಕಟ್ಟೆಯಲ್ಲಿ ಬೆಲೆಗಳ ಏರಳಿತವನ್ನು ಹೆಚ್ಚಾಗಿ ಕಾಣಲು ಸಾಧ್ಯವಿಲ್ಲ. ಮಾರಾಟಗಾರರು ವಸ್ತುಗಳ ಬೆಲೆ ಹಾಗು ಉತ್ಪನ್ನವನ್ನು ಪ್ರತಿಸ್ಪರ್ಧಿಗಳ ಬೆಲೆ ಹಾಗು ಉತ್ಪನ್ನದ ಮೇಲೆ ಆಧಾರಿತವಾಗಿಟ್ಟುಕೊಂಡು ಮಾರಾಟವನ್ನು ನಡೆಸುತ್ತಾರೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಬೆಲೆಗಳು ಹಚ್ಚು ಕಡಿಮೆ ಒಂದೇ ಇರುತ್ತದೆ. ಈ ರೀತಿಯ ಮಾರುಕಟ್ಟೆಗೆ ಅತಿ ಉತ್ತಮ ಉದಾಹರಣೆ ಕೊಕಾ-ಕೊಲಾ ಹಾಗು ಪೆಪ್ಸಿ ಕಂಪನಿಗಳು.

ಹಲಜನ ಸ್ವಾಮ್ಯದ ಮಾರುಕಟ್ಟೆ

ಬದಲಾಯಿಸಿ

ಹಲಜನಸ್ವಾಮ್ಯದ[] ಮಾರುಕಟ್ಟೆಯಲ್ಲಿ ಕೆಲವೇ ಕೆಲವು ಉತ್ಪಾದಕರಿದ್ದು ಹಲವಾರು ಗ್ರಾಹಕರಿರುತ್ತಾರೆ. ಹಲವಾರು ಮಾರಾಟಗಾರರಿಲ್ಲದಿರುವ ಕಾರಣ ಈ ರೀತಿಯ ಮಾರುಕಟ್ಟೆಯಲ್ಲಿಯೂ ಸಹ ಕಠಿಣ ಸ್ಪರ್ಧೆಯಿರುತ್ತದೆ. ಇಲ್ಲಿ ಬೆಲೆಗಳು ಮಾರಾಟಗಾರರ ಸಂಪೂರ್ಣ ಹತೋಟಿಯಲ್ಲಿ ಇರದೆ, ಇತರ ಪ್ರತಿಸ್ಪರ್ಧಿಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಮಾರುಕಟ್ಟೆಯ ಕೆಲವು ಲಕ್ಶಣಗಳು ಇಲ್ಲಿವೆ.

(೧) ಎರಡಕ್ಕಿಂತ ಹೆಚ್ಚು ಉತ್ಪಾದಕರ ಅಸ್ತಿತ್ವ

(೨) ಬೆಲೆ ಮತ್ತು ಉತ್ಪನ್ನಗಳ ಪ್ರಮಾಣಗಳಲ್ಲಿ ಪರಸ್ಪರ ಅವಲಂಬನೆ

(೩) ಬೇಡಿಕೆಯ ರೇಖೆಯು ಅನಿಶ್ಚಿತವಾದುದು

(೪) ಮಾರಾಟದ ಖರ್ಚಿಗೆ ಅತಿಯಾದ ಪ್ರಾಮುಖ್ಯತೆ

(೫) ಕಾರ್ಖಾನೆಗಳ ಗುಂಪು ವರ್ತನೆ

(೬) ಬೆಲೆಯ ಕಾಠಿಣ್ಯನಿದ್ದು (ಬೆಲೆಯಲ್ಲಿ ಸುಲಭವಾಗಿ ಬದಲಾವಣೆಯಾಗುವುದಿಲ್ಲ)

(೭) ಏಕಸ್ವಾಮ್ಯದ ಗುಣ

ಭಾರತ ದೇಶದಲ್ಲಿ ವಾಹನಗಳ ಮಾರುಕಟ್ಟೆ ಹಾಗು ಮೊಬೈಲ್ ಸರ್ವೀಸ್ ಕಂಪನಿಗಳು ಈ ರೀತಿಯ ಮಾರುಕಟ್ಟೆಗೆ ಉದಾಹರಣೆ. ಇಲ್ಲಿ ಕೆಲವರು ಮಾತ್ರ ವಸ್ತು ಅಥವ ಸೇವೆಯನ್ನು ಮಾರುವುದನ್ನು ಕಾಣಬಹುದು. ಆದರೆ, ಈ ಮಾರುಕಟ್ಟೆಗಳಲ್ಲಿ ಹಲವಾರು ಗ್ರಾಹಕರಿರುತ್ತಾರೆ. ಇಲ್ಲಿ, ಉತ್ಪನ್ನಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಆದರೆ, ಪೈಪೋಟಿಯ ಕಾರಣದಿಂದಾಗಿ ಬೆಲೆಗಳು ಸಮನಾಗಿರುತ್ತವೆ. ಪೈಪೋಟಿಯ ನೆಪವಾಗಿ ಮಾರಾಟಗಾರರು ಗ್ರಾಹಕರನ್ನು ಒಲಿಸಲು ಬಹಳಷ್ಟು ಜಾಹಿರಾತುಗಳನ್ನು ಕೊಡುವ ಕಾರಣ ಬೆಲೆಯಲ್ಲಿ ಮಾರಾಟದ ವೆಚ್ಚವೂ ಓಳಗೊಂಡಿರುತ್ತದೆ. ಇಲ್ಲಿ ಮಾರಾಟವಾಗುವ ವಸ್ತುಗಳಿಗೆ ವೈವಿಧ್ಯತೆಯಿದ್ದರೂ ಸಹ ಕೆಲವೇ ಕೆಲವು ಮರಾಟಗಾರರಿರುವ ಕಾರಣ, ಗ್ರಾಹಕರಿಗೆ ಹಲವಾರು ವಸ್ತುಗಳ ನಡುವೆ ಮೆಚ್ಚಿನ ವಸ್ತುವನ್ನು ಆಯ್ಕೆ ಮಾಡಲು ಹೆಚ್ಚು ಅವಕಾಶವಿರುವುದಿಲ್ಲ. ಈ ಅಂಶವನ್ನು ಉತ್ಪಾದಕರು ತಮ್ಮ ಲಾಭಕ್ಕೆ ಬಳಸಿಕೊಂಡು, ಗುಂಪು ವರ್ತನೆಯಿಂದಾಗಿ ಏಕಸ್ವಾಮ್ಯವನ್ನು ಸ್ಥಾಪಿಸುವುದನ್ನು ಕಾಣಬಹುದು. ಮಧ್ಯ-ಪೂರ್ವ ದೇಶಗಳು ವಿಶ್ವದ 'ಪೆಟ್ರೋಲಿನ' ಮಾರುಕಟ್ಟೆಯಲ್ಲಿ, ಗುಂಪು ವರ್ತನೆಯಿಂದಾಗಿ ಏಕಸ್ವಾಮ್ಯವನ್ನು ಸ್ಥಾಪಿಸಿ, ಬೆಲೆಯ ಸಂಪೂರ್ಣ ಹತೋಟಿಯನ್ನು ತೆಗೆದುಕೊಳ್ಳುವುದನ್ನು ಕಾಣಬಹುದು. ವಿಶ್ವದ 'ಪೆಟ್ರೊಲ್' ಬೆಲೆಯ ನಿರಂತರ ಏರಳಿತಕ್ಕೆ ಇದು ಮುಖ್ಯ ಕಾರಣ.

ಸ್ವಾಮ್ಯಯುತ ಸ್ಪರ್ಧೆ

ಬದಲಾಯಿಸಿ

ಸ್ವಾಮ್ಯಯುತ ಸ್ಪರ್ಧೆಯಲ್ಲಿ[] ಹಲವಾರು ಗ್ರಾಹಕರೊಂದಿಗೆ ಹಲವಾರು ಮಾರಾಟಗಾರರೂ ಇರುತ್ತಾರೆ. ಇಲ್ಲಿ ಪ್ರತಿಸ್ಪರ್ಧಿಗಳ ನಡುವೆ ಕಠಿಣ ಸ್ಪರ್ಧೆಯಿದ್ದರೂ, ಮಾರಾಟಾಗಾರರು ಹಾಗು ಗ್ರಾಹಕರ ನಡುವೆ ಹೆಚ್ಚಾದ ಅವಲಂಬನೆಯಿರುವುದಿಲ್ಲ. ಇಲ್ಲಿ ಪ್ರತಿಯೊಬ್ಬ ಮಾರಾಟಗಾರನಿಗೂ ಒಂದು ಮಟ್ಟಿಗೆ ತನ್ನದೇ ಆದ ಬೆಲೆ ಅಥವ ಉತ್ಪನ್ನವನ್ನು ನಿರ್ಧರಿಸಲು ಸ್ವಾತಂತ್ರ್ಯವಿರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಹಲವಾರು ಉತ್ಪಾದಕರು ಹಾಗು ಗ್ರಾಹಕರು ಇರುವ ಕಾರಣ, ತಮ್ಮ ಬೆಲೆ ಹಾಗು ಉತ್ಪಾದನೆಯಲ್ಲಿ ಅತಿಯಾದ ಮಟ್ಟಿಗೆ ಏರಿಳಿತ ಮಾಡಲು ಸಾಧ್ಯವಾಗುವುದಿಲ್ಲ. ಸ್ವಾಮ್ಯಯುತ ಮಾರುಕಟ್ಟೆಯ ಲಕ್ಷಣಗಳು ಇವು.

(೧) ಅನೇಕ ಜನ ಗ್ರಾಹಕರ ಹಾಗು ಮಾರಾಟಗಾರರ ಅಸ್ತಿತ್ವ

(೨) ಉತ್ಪನ್ನಗಳಲ್ಲಿ ವೈವಿಧ್ಯತೆಯಿರುತ್ತದೆ

(೩) ಗ್ರಾಹಕರಿಗೆ ಬೆಲೆ ಮತ್ತು ವಸ್ತುಗಳ ಬಗ್ಗೆ ಕಡಿಮೆ ಜ್ಞಾನ

(೪) ಬೆಲೆಯಲ್ಲಿ ಸಾಗಾಟದ ವೆಚ್ಚವೂ ಸೇರಿರುತ್ತದೆ

(೫) ಮಾರಾಟದ ವೆಚ್ಚವೂ ಬೆಲೆಯಲ್ಲಿ ಸೇರಿರುತ್ತದೆ

(೬) ಕಾರ್ಖಾನೆಗಳು ಸುಲಭವಾಗಿ ಕೈಗಾರಿಕೆಯನ್ನು ಪ್ರವೇಶಿಸಿ ಹಾಗು ನಿರ್ಗಮಿಸಬಹುದು

ಸ್ವಾಮ್ಯಯುತ ಸ್ಪರ್ಧೆಯ ಪ್ರಮುಖ ಉದಾಹರಣೆ ಹಲವು ರೀತಿಯ ಪೊಟ್ಟಣದ ತಿಂಡಿ-ತಿನಿಸುಗಳ ಹಾಗು ದೈನಂದಿನ ಬಳಕೆಯ ವಸ್ತುಗಳ ಮಾರುಕಟ್ಟೆ. ಈ ರೀತಿಯ ಮಾರುಕಟ್ಟೆಯಲ್ಲಿ ಹಲವಾರು ಮಾರಾಟಗಾರರು ಹಾಗು ಗ್ರಾಹಕರು ಇರುವ ಕಾರಣ ಉತ್ಪನ್ನಗಳಲ್ಲಿ ವೈವಿಧ್ಯತೆಯನ್ನು ಕಾಣಬಹುದು. ಇಲ್ಲಿ ಬೆಲೆ ಹಾಗು ಉತ್ಪನ್ನಗಳ ಮೇಲೆ ಕಠಿಣ ನಿರ್ಬಂಧಗಳಿರುವುದಿಲ್ಲ. ಅಲ್ಲದೆ ಗ್ರಾಹಕರಿಗೂ ಸಹ ವಿಧ-ವಿಧವಾದ ಉತ್ಪನ್ನಗಳ ನಡುವೆ ಮೆಚ್ಚಿನ ಆಯ್ಕೆಯನ್ನು ಮಾಡುವ ಸೌಲಭ್ಯವಿರುತ್ತದೆ. ಉತ್ಪಾದಕರಿಗೂ ತಮ್ಮ ವಸ್ತುವನ್ನು ತಮ್ಮದೇ ಆದ ಬೆಲೆಗೆ ಮಾರುವ ಸ್ವಾತಂತ್ರ್ಯವಿರುತ್ತದೆ. ಹಲವಾರು ಬದಲಿ ವಸ್ತುಗಳು ಲಭ್ಯವಿರುವುದರಿಂದ ಗ್ರಾಹಕರಿಗೆ ವಸ್ತುಗಳ ನಡುವೆ ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಆದ್ದರಿಂದಾಗಿ ಒಬ್ಬ ಗ್ರಾಹಕನಿಗೆ ಅಥವ ಒಬ್ಬ ಉತ್ಪಾದಕನಿಗೆ ಮಾರುಕಟ್ಟೆಯ ಸ್ಥಿತಿ-ಗತಿಗಳನ್ನು ಬದಲಾಯಿಸಲು ಸಾಧ್ಯವಾಗುವುದಿಲ್ಲ.

ಏಕಸ್ವಾಮ್ಯದ ಮಾರುಕಟ್ಟೆ

ಬದಲಾಯಿಸಿ
 
ಏಕಸ್ವಾಮ್ಯ ಮಾರುಕಟ್ಟೆಯ ರೇಖಾನಕ್ಷೆ

ಈ ರೀತಿಯ ಮಾರುಕಟ್ಟೆಯಲ್ಲಿ, ಕೇವಲ ಒಬ್ಬ ಉತ್ಪಾದಕ ಅಥವ ಮಾರಾಟಗಾರನಿರುತ್ತಾನೆ. ಅವನಿಗೆ ಉತ್ಪಾದನೆ ಮತ್ತು ವಿನಿಮಯದ ಮೇಲೆ ಸಂಪೂರ್ಣಾ ಹತೋಟಿಯಿರುತ್ತದೆ. ಈ ಮಾರುಕಟ್ಟೆಯ ಮೂಲ ಲಕ್ಷಣಗಳು ಹೀಗಿವೆ.

(೧) ಒಬ್ಬನೇ ಉತ್ಪಾದಕನ ಅಸ್ತಿತ್ವ

(೨) ಒಂದೇ ರೀತಿಯ ವಸ್ತುವಿನ ಉತ್ಪಾದನೆ (ಬದಲಿ ವಸ್ತುಗಳಿಲ್ಲದ ಉತ್ಪಾದನೆ)

(೩) ಇತರೆ ಕಾರ್ಖಾನೆಗಳಿಗೆ ಪ್ರವೇಶಕ್ಕೆ ಆಸ್ಪದವಿಲ್ಲ

(೪) ಮಾರುಕಟ್ಟೆಯಲ್ಲಿ ಒಂದೇ ರೀತಿಯ ಬೆಲೆ ಅಥವ ಬೆಲೆಯ ತಾರತಮ್ಯವಿರಬಹುದು

(೫) ಮಾರಾಟದ ವೆಚ್ಚವಿರುವುದಿಲ್ಲ

ಏಕಸ್ವಾಮ್ಯದ[] ಮಾರುಕಟ್ಟೆಯು ಅರ್ಥಶಾಸ್ತ್ರದಲ್ಲಿ ಒಂದು ಪ್ರಮುಖ ಪರಿಕಲ್ಪನೆ. ಈ ಮಾರುಕಟ್ಟೆಯ ವಿಶೇಷವೇನೆಂದರೆ ಇಲ್ಲಿ ಒಬ್ಬನೇ ಉತ್ಪಾದಕನಿರುತ್ತಾನೆ. ಆದರೆ ಉತ್ಪಾದನೆಯಾಗುವ ವಸ್ತುವಿಗೆ ಹಲವಾರು ಗ್ರಾಹಕರಿರುತ್ತರೆ. ಒಂದೇ ರೀತಿಯ ವಸ್ತುವಿಗೆ ಹಲವಾರು ಗ್ರಾಹಕರಿಂದ ಬೇಡಿಕೆಯಿರುವುದರ ಕಾರಣ, ವಸ್ತುಗಳನ್ನು ಈ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟ ಮಾಡುವುದನ್ನು ಕಾಣಬಹುದು. ಗ್ರಾಹಕರಿಗೆ ಬದಲಿ ವಸ್ತುಗಳ ಲಭ್ಯತೆ ಇಲ್ಲದಿರುವ ಕಾರಣ, ಉತ್ಪಾದಕರಿಗೆ ವಸ್ತುಗಳ ಬೆಲೆ ಹಾಗು ಉತ್ಪನ್ನದ ಮೇಲೆ ಸಂಪೂರ್ಣ ಹತೋಟಿಯಿರುತ್ತದೆ. ಈ ಕಾರಣದಿಂದಾಗಿ ಈ ಮಾರುಕಟ್ಟೆಯಲ್ಲಿ ಉತ್ಪಾದಕರಿಗೆ ಅಸಹಜ ಲಾಭ ದೊರೆಯುವುದನ್ನು ಕಾಣಬಹುದು. ಏಕಸ್ವಾಮ್ಯದ ಮಾರುಕಟ್ಟೆಯು ಅರ್ಥಶಾಸ್ತ್ರದ ಒಂದು ಬರಿಯ ಪರಿಕಲ್ಪನೆ. ನೈಜಿಕ ಜೀವನದಲ್ಲಿ ಈ ರೀತಿಯ ಮಾರುಕಟ್ಟೆಯನ್ನು ಕಾಣುವುದು ಬಹಳ ಅಪರೂಪದ ಸಂಗತಿ.


ಬೆಲೆಗಳ ಮೀಲೆ ಸಂಪೂರ್ಣ ಹತೋಟಿಯಿರುವ ಕಾರಣ, ಉತ್ಪಾದಕರು ವಸ್ತುಗಳಿಗೆ ಸಮನಾದ ಬೆಲೆ ಇಡದೆ, ಬೆಲೆಗಳಲ್ಲಿ ತಾರತಮ್ಯವನ್ನು ತೋರುವುದು ಸಹ ಉಂಟು. ಇದೇ ತಾರತಮ್ಯದ ಏಕಸ್ವಾಮ್ಯ. ಇಲ್ಲಿ ಉತ್ಪಾದಕರು ವಸ್ತುವನ್ನು ಕೆಲವು ಗ್ರಾಹಕರಿಗೆ ಒಂದು ಬೆಲೆಗೆ ಮಾರಿ ಇನ್ನಿತರ ಗ್ರಾಹಕರಿಗೆ ಮತ್ತೊಂದು ಬೆಲೆಗೆ ಮಾರಾಟ ಮಾಡುತ್ತಾರೆ. ಉದಾಹರಣೆಗೆ ರೊಟ್ಟಿನ ಪುಸ್ತಕಗಳನ್ನು ಮೊದಲು ಒಂದು ಬೆಲೆಗೆ ಮಾರಾಟ ಮಾಡಿ ನಂತರ ಅದೇ ಪುಸ್ತಕವನ್ನು ರೊಟ್ಟಿಲ್ಲದೆ ಕಡಿಮೆ ಬೆಲೆಗೆ ಮಾರಟ ಮಾಡುತ್ತಾರೆ. ಭಾರತದ ರೈಲು ವ್ಯವಸ್ಥೆಯು[] ಏಕಸ್ವಾಮ್ಯದ ಉದಾಹರಣೆ. ರೈಲು ವ್ಯವಸ್ಥೆಯು ಸರ್ಕಾರದ ಉದ್ಯಮವಾಗಿರುವ ಕಾರಣ ಬೆಲೆಯ ತಾರತಮ್ಯವನ್ನು ಇಲ್ಲಿ ಕಾನೂನುಬದ್ಧವಾಗಿ ಪಾಲಿಸಬಹುದು.

ಮುಕ್ತಾಯ

ಬದಲಾಯಿಸಿ

ಅರ್ಥಶಾಸ್ತ್ರದಲ್ಲಿ ಮಾರುಕಟ್ಟೆಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಿ ನಂತರ ಅದರ ಮೇಲೆ ಸಂಶೋಧನೆಯನ್ನು ನಡೆಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ, ವಿವಿಧ ರೀತಿಯ ಮಾರುಕಟ್ಟೆಗಳ ಅಸಮಾನ್ಯತೆ. ಓಂದು ಮಾರುಕಟ್ಟೆಯು ಮತ್ತೊಂದು ಮಾರುಕಟ್ಟೆಯಿಂದ ಅದರ ಮಾರಾಟಗಾರರನ್ನು ಕುರಿತು, ಗ್ರಾಹಕರನ್ನು ಕುರಿತು, ಉತ್ಪನ್ನಗಳನ್ನು ಕುರಿತು, ಬೆಲೆಯ ಕಠಿಣತೆಯನ್ನು ಕುರಿತು ಭಿನ್ನ್ವಾಗಿರುತ್ತದೆ. ಆದ್ದರಿಂದಾಗಿ ವಿವಿಧ ಮಾರುಕಟ್ಟೆಗಳಲ್ಲಿ ಜನರ ನಡುವಳಿಕೆಯು ಸಹ ವಿಭಿನ್ನವಾಗಿದ್ದು, ಬದಲಾಗುತ್ತಾ ಹೋಗುತ್ತದೆ. ಹೀಗಿರಬೇಕಾದ್ದಲ್ಲಿ, ಒಂದು ಮಾರುಕಟ್ಟೆಯ ನಿಯಮಗಳುನ್ನು ಮತ್ತೊಂದು ಮಾರುಕಟ್ಟೆಗೆ ಅನ್ವಯಿಸಲು ಆಗುವುದಿಲ್ಲ. ಪ್ರತಿಯೊಂದು ಮಾರುಕಟ್ಟೆಗೆ ತನ್ನದೇ ಆದ ಸಂದರ್ಭವಿದ್ದು, ತನ್ನದೆ ಆದ ನಿಯಮಗಳ ಅವಶ್ಯಕತೆ ಇರುತ್ತದೆ. ಈ ಕಾರಣದಿಂದಾಗಿ ಮಾರುಕಟ್ಟೆಗಳನ್ನು ವಿವಿಧ ವರ್ಗಗಳಾಗಿ ಗುಂಪು ಮಾಡಿ ಸಂಶೋಧಿಸುವುದು ಅಗತ್ಯ. ಈ ರೀತಿಯ ವರ್ಗೀಕರಣವು ಸೈದ್ಧಾಂತಿಕ ಪರಿಕಲ್ಪನೆಗಳನ್ನು ನೈಜಿಕ ಸಂದರ್ಭಗಳಿಗೆ ಅಳವಡಿಸಿಕೊಳ್ಳುವುದರಲ್ಲಿ ಸಹಕಾರಿಯಾಗುತ್ತವೆ. ಇದರಿಂದಾಗಿ ಮಾರುಕಟ್ಟೆಯ ಏರಳಿತಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನಿಖರವಾಗಿ ಸೂಚಿಸಲು ಸಾಧ್ಯವಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ


Return to the user page of "Manasa Dindgur/ನನ್ನ ಪ್ರಯೋಗಪುಟ".