ಸಿರಿಯ ಸಾರ್ಥಕತೆ

ನಾವು ಈ ಪ್ರಪಂಚದಲ್ಲಿ ಒಳಗೂ ಹೊರಗೂ ಸಿರಿವಂತರಾಗಿ ಬದುಕಬೇಕೆ ವಿನಾ ಬಡವರಾಗಿ ಅಲ್ಲ. “ಪುರುಷಸ್ಯ ಬಂಧುಃ ಸಂಪದಃ ಲೋಕೇ” ಈ ಜಗತ್ತಿನಲ್ಲಿ ಸಿರಿಯೇ ನಮ್ಮ ನೆರೆ-ಹೊರೆ, ಬಂಧು-ಬಳಗ ಎಂದು ಬಲ್ಲವರು ಹೇಳಿದರು. ನೀರಿಲ್ಲದಿದ್ದರೆ, ಸರೋವರವಿಲ್ಲ, ಪಕ್ಕವಿಲ್ಲದಿರೆ ಹಕ್ಕಿಯಿಲ್ಲ, ಹಸಿರಿಲ್ಲದಿದ್ದರೆ ಮರವಿಲ್ಲ, ಹಾಗೆಯೇ ಸಿರಿಯಿಲ್ಲದಿರೆ ಜೀವನವಿಲ್ಲ…!

ಯಾರಲ್ಲಿ ಸಂಪತ್ತಿದೆಯೋ ಅವನೇ ಉತ್ತಮ ಕುಲದವನು. ಪಂಡಿತನು, ಶಾಸ್ತ್ರಜ್ಞನು, ಗುಣವಂತನು, ಸುಂದರನು! ಎಲ್ಲ ಸುಗುಣಗಳು ಸಿರಿ-ಸಂಪದವನ್ನೇ ಆಶ್ರಯಿಸಿವೆ. ಮನುಷ್ಯ ಪ್ರಾಮಾಣಿಕವಾಗಿ ದುಡಿದು ಏನೆಲ್ಲ ಸಿರಿ-ಸಂಪದ ಗಳಿಸಬೇಕು. ಆದರೆ ಗಳಿಸಿದ ಸಿರಿ-ಸಂಪದವು ನಮಗೂ, ನಮ್ಮ ನೆರೆಹೊರೆಯವರ ಬದುಕಿಗೆ ಆಸರೆಯಾಗಬೇಕು, ಆನಂದ ತರಬೇಕು. ಯಾವುದು ನಮ್ಮ ಯೋಗ್ಯವಾದ ಬೇಡಿಕೆಗಳನ್ನು ಈಡೇರಿಸುತ್ತದೆಯೋ, ನಮ್ಮ ಹಸಿವೆ ತೃಷೆಗಳನ್ನೇ ಹಿಂಗಿಸುತ್ತದೆಯೋ ಅದುವೇ ನಿಜವಾದ ಸಂಪತ್ತು! ಎಂಬುದು ಅರ್ಥಶಾಸ್ತ್ರಜ್ಞರ ಅಭಿಪ್ರಾಯವಾಗಿದೆ.

ಒಂದು ಅರಮನೆಯ ಹಿಂದೆ ದೊಡ್ಡ ತಿಪ್ಪೆ, ಅರಮನೆಯ ತಿಪ್ಪೆ ಎಂದ ಮೇಲೆ ಹೇಳುವುದೇನಿದೆ? ಅದರಲ್ಲಿ ಏನೆಲ್ಲ ಇರಬಹುದು. ಒಂದು ಕೋಳಿಗೆ ಆ ತಿಪ್ಪೆ ಕೆದರುವಾಗ ರತ್ನದ ಹರಳೆ ದೊರೆಯಿತು. ‘ರಾಜ-ಮಹರಾಜರಲ್ಲಿ, ದೇಶ-ದೇಶಗಳಲ್ಲಿ ಹಗೆ-ಹೊಗೆಗಳನ್ನು ಎಬ್ಬಿಸಿ ಯುದ್ಧ-ಕಲಹಗಳಿಗೆ, ಸಾವು-ನೋವುಗಳಿಗೆ ಕಾರಣವಾದ ನೀನು ನನಗೆ ನಿರುಪಯಿಕ್ತ’ ದು ಕೋಳಿಯು ಆ ರತ್ನವನ್ನು ತಿಪ್ಪೆಯಿಂದ ದೂರ ಎಸೆಯಿತು. ಸ್ವಲ್ಪ ಸಮಯದಲ್ಲಿ ಕೋಳಿಗೆ ಜೋಳದ ಒಂದು ಕಾಳು ದೊರೆಯಿತು. .ನೀನೆ ನನ್ನ ಪ್ರಾಣದ ಪ್ರಾಣ’ ಎಂದು ಕೋಳಿಯು ಆ ಜೋಳದ ಕಾಳನ್ನು ತಿಂದು ಹಾಡುತ್ತಾ ಕುಣಿಯುತ್ತ ಹೊರಟಿತು. ‘ಈ ಕೋಳಿಗೆ ಬುದ್ದಿಯಿಲ್ಲ’ ಎಂದು ಒಬ್ಬ ಮನುಷ್ಯ ರತ್ನವನ್ನು ಎತ್ತಿಕೊಂಡು ಹೊರಟ. ಅಷ್ಟರಲ್ಲಿ ಅರಮನೆಯ ಸೈನಿಕರು ಬಂದು ಅವನನ್ನು ಎಳೆದು ಸೆರೆಮನೆಗೆ ಹಾಕಿದರು.

ನಾವು ಪ್ರಮಾಣಿಕವಾಗಿ ದುಡಿದು ಸಿರಿ-ಸಂಪತ್ತತನ್ನು ಗಳಿಸಬೇಕು ಮತ್ತು ಅದನ್ನು ಸತ್ಕಾರ್ಯಕ್ಕೆ ಬಳಸಬೇಕು. ಬಳಸಿದ್ದು ಬೆಳೆಯುತ್ತದೆ. ಕೊಟ್ಟಿದ್ದು ಮರಳಿ ಬರುತ್ತದೆ. ಆದರೆ ಕೂಡಿಟ್ಟದ್ದು ಪರರಿಗೆ ಸೇರುತ್ತದೆ. ಇದು ಅನುಭವಿಗಳ ಮಾತು. ಜಡ ಸಿರಿಯನ್ನು ಬಳಸುತ್ತಾ ಸದ್ಗುಣ ಸಿರಿಯನ್ನು ಬೆಳೆಸುತ್ತಾ ಬದುಕಬೇಕು. ಹೀಗೆ ಇದ್ದಾಗ ಮಾತ್ರ ನಮ್ಮ ಸಿರಿ-ಸಂಪದವು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಕಲ್ಲು ಮಣ್ಣಿನಂತೆ ಜಡವಾಗಿ ಅದು ನಿರರ್ಥಕವೆನಿಸುತ್ತದೆ.

Start a discussion with Bhagyashree456

Start a discussion