ಸಂತ ಜೋಸೆಫ್
ಪವಿತ್ರ ಬೈಬಲ್ನಲ್ಲಿ ಜೋಸೆಫ್ ಎಂಬ ಹೆಸರು ಹಲವು ಸಾರಿ ಪ್ರಸ್ತಾಪವಾಗುತ್ತದೆ. ಮೊತ್ತಮೊದಲಿಗೆ ಇದು ಕಾಣಿಸಿಕೊಳ್ಳುವುದು ಹಳೆಯ ಒಡಂಬಡಿಕೆಯಲ್ಲಿ. ದೇವರಿಂದ ಇಸ್ರೇಲ್ ಎಂದು ಕರೆಸಿಕೊಳ್ಳುವ ಜಾಕೋಬ್ ಎಂಬಾತನಿಗೆ ಮೊದಲ ಹೆಂಡತಿಯಿಂದ ಹತ್ತು ಮಕ್ಕಳು. ಆದರೆ ಮತ್ತೊಬ್ಬ ಹೆಂಡತಿ ರೇಚಲ್ ಗೆ ಮಕ್ಕಳೇ ಆಗಿರುವುದಿಲ್ಲ. ಆಗ ಅವಳು ಅಂದಿನ ಸಂಪ್ರದಾಯದಂತೆ ತನ್ನ ಜಾಗದಲ್ಲಿ ತನ್ನ ಆಪ್ತ ದಾಸಿಯನ್ನು ಬಿಮ್ಮನಸೆಯಾಗುವಂತೆ ಮಾಡಿ ಅವಳು ಹೆರುವ ವೇಳೆಗೆ ಕೂಸನ್ನು ತನ್ನ ಮಡಿಲಿಗೆ ಹಾಕಿಕೊಂಡು ತಾನು ತಾಯಿಯಾದೆ; ದೇವರು ನನ್ನ ಬಂಜೆತನವನ್ನು ನೀಗಿಸಿದರು ಎಂದು ಉದ್ಗರಿತ್ತಾಳೆ. ಅವಳ ಉದ್ಗಾರ ’ಯೋಸೆಫ್’ ಅಂದರೆ ’ನೀಗಿತು’ಎಂದರ್ಥ ಕೊಡುತ್ತದೆ. ಮಗುವನ್ನು ನೋಡಿ ಹಿರಿಯರು ಇಂಥ ಮಗು ಹತ್ತಾಗಲಿ ನೂರಾಗಲಿ ಎಂದು ಹರಸುತ್ತಾರೆ. ಅವರು ಆಗ ಹೇಳುವ ಮಾತು ’ಜೋ ಸೆಫ್’ ಅಂದರೆ ’ಇನ್ನೂ ಹೆಚ್ಚಲಿ’ ಆಮೇಲೆ ಜೋಸೆಫ್ ಬೆಳೆಯುತ್ತಾ ತನ್ನ ದಾಯಾದಿಗಳ ಅಸೂಯೆಗೊಳಗಾಗಿ ಈಜಿಪ್ಟ್ ದೇಶಕ್ಕೆ ಗುಲಾಮನಂತೆ ಮಾರಲ್ಪಟ್ಟು ಮುಂದೆ ಅದೇ ದೇಶದ ಪ್ರಧಾನಮಂತ್ರಿಯಾಗುತ್ತಾನೆ ಎನ್ನುವುದು ಕತೆ. ಹೊಸ ಒಡಂಬಡಿಕೆಯಲ್ಲಿ ಯೇಸುಕ್ರಿಸ್ತ ಶಿಲುಬೆಯ ಮೇಲೆ ಮೃತಿ ಹೊಂದಿದಾಗ ಅವನನ್ನು ಸಮಾಧಿ ಮಾಡಲು ಜೋಸೆಫ್ ಎಂಬ ಒಬ್ಬ ಕುಲೀನ ತನಗಾಗಿ ಕಾದಿರಿಸಿದ್ದ ಸಮಾಧಿಗುಹೆಯನ್ನು ಬಿಟ್ಟುಕೊಡುತ್ತಾನೆನ್ನುವುದು ಮತ್ತೊಂದು ಆಖ್ಯಾಯಿಕೆಯಾಗಿ ಮೂಡಿಬರುತ್ತದೆ. ಕ್ರೈಸ್ತರು ಎಲ್ಲಕ್ಕಿಂತಲೂ ಮುಖ್ಯವಾಗಿ ಪರಿಭಾವಿಸುವ ಜೋಸೆಫ್ ಸಂತ ಮೇರಿಯ ಪತಿ. ದೇವರಿಂದಲೇ ಅನುಗ್ರಹೀತಳಾಗುವ ಮರಿಯಳಿಗೆ ಸಂಗಾತಿಯಾಗಿ ದೇವಕುಮಾರನಿಗೆ ಸಾಕುತಂದೆಯಾಗುವ ಈ ಜೋಸೆಫ್ ಅತ್ಯಂತ ನೀತಿವಂತ. ಮದುವೆಗೆ ಮೊದಲೇ ಬಸುರಾದ ಮರಿಯಳನ್ನು ಅವಮಾನಕ್ಕೆ ಗುರಿಮಾಡದ ಸಜ್ಜನ. ಯೇಸುಕ್ರಿಸ್ತ ಜೆರುಸಲೇಮ್ ದೇವಾಲಯದಲ್ಲಿ ಕಳೆದುಹೋದಾಗ ಅತ್ಯಂತ ಅಕರಾಸ್ತೆಯಿಂದ ಹುಡುಕಿದಾತ. ಹೀಗೇಕೆ ಮಾಡಿದೆ ಎಂದು ದೇವಕುಮಾರನನ್ನು ಜಂಕಿಸಿ ಪ್ರಶ್ನಿಸಿದಾತ. ಯೇಸುವನ್ನು ಬಾಲ್ಯದಿಂದ ಯೌವನದವರೆಗೆ ಪೊರೆದು ಧಾರ್ಮಿಕ ಶಿಕ್ಷಣ, ವೃತ್ತಿ ಶಿಕ್ಷಣ ನೀಡಿದಾತ. ಪವಿತ್ರ ಬೈಬಲ್ ಹೇಳುವಂತೆ ಜೋಸೆಫ್ ಒಬ್ಬ ಬಡಗಿ. ಬಡಗಿಯೆಂದರೆ ಬರೀ ಮೇಜು ಕುರ್ಚಿ ಕಿಟಕಿ ಬಾಗಿಲು ಮಾತ್ರವಲ್ಲ ಮನೆಗಳನ್ನು ಕಟ್ಟುವಾತ ಎಂದು ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಯೇಸುಕ್ರಿಸ್ತನ ನಾಡಿನಲ್ಲಿ ಅಂದು ಮರದ ಮನೆಗಳೇ ರೂಢಿಯಲ್ಲಿತ್ತು. ಏನೇ ಆಗಲಿ ಜೋಸೆಫ್ ಒಬ್ಬ ಶ್ರಮಿಕ. ಕ್ರೈಸ್ತರು ಆತನನ್ನು ಸಂತನೆಂದು ಗೌರವಿಸಿ ವರ್ಷದಲ್ಲಿ ಎರಡು ಬಾರಿ ಆತನ ಹಬ್ಬವನ್ನು ಆಚರಿಸುತ್ತಾರೆ.