ಶ್ರೀ ಕ್ಷೇತ್ರ ಇಂಚಗೇರಿ ಮಠ
ಕರ್ನಾಟಕ - ಮಹಾರಾಷ್ಟ್ರ ಗಡಿ ಭಾಗದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿರುವ ಇಂಚಗೇರಿ ಗ್ರಾಮವು ಐತಿಹಾಸಿಕ ಶ್ರೀ ಕ್ಷೇತ್ರ ಇಡೀ ದಕ್ಷಿಣ ಭಾರತದ ಶ್ರೇಷ್ಟ ಭಕ್ತಿ ಪಂಥಗಳೊಲ್ಲೊಂದಾಗಿದೆ. ವಿಜಯಪುರ ಜಿಲ್ಲಾ ಕೇಂದ್ರದಿಂದ ಸೋಲ್ಲಾಪುರ ಮಾರ್ಗದಲ್ಲಿ ಸುಮಾರು 30 ಕಿ.ಮೀ. ದೂರದಲ್ಲಿರುವ ಹೊರ್ತಿ ಪಟ್ಟಣದಿಂದ 11 ಕಿ.ಮೀ.ದೂರದಲ್ಲಿರುವ ಈ ಸುಕ್ಷೇತ್ರ ಗುರು ಪರಂಪರೆಯ ವಿಚಾರದಲ್ಲಿ ಶತಮಾನಗಳ ಹಳೆಯ ಇತಿಹಾಸ ಹೊಂದಿದೆ.
ಶ್ರೀ ಕ್ಷೇತ್ರ ಇಂಚಗೇರಿ ಮಠ
ಶ್ರೀ ಕ್ಷೇತ್ರ ಇಂಚಗೇರಿ ಮಠ | |
---|---|
village |
ಇತಿಹಾಸ
ಬದಲಾಯಿಸಿನವಗಿರಗಳ ನಡುವೆ ನಳನಳಿಸುತ್ತಿರುವ ದೈವ ಭೂಮಿ ಇದು. ಈ ದೈವನ ದರುಶನ ಪಡೆಯಲು ನೂರಾರು ಮೈಲು ಕ್ರಮಿಸಿ ದಣಿದು ಬರುವವರಿಗೆ ನವಗಿರಿಗಳಲ್ಲೊಂದಾದ ಚಕ್ರ ಮಡ್ಡಿ ಎಂಬ ಗಿರಿ ತುದಿಗೆ ತಲುಪುತ್ತಿದ್ದಂತೆ ಮೈಲು ದೂರದಲ್ಲೊಂದು ಮಿನುಗುವ ತಾರೆ ಗೋಚರಿಸುತ್ತದೆ. ಆ ಮಿಣುಕು ಬೆಳಕು ಕಣ್ಸೆಳೆಯುತ್ತಿದ್ದಂತೆ ನೂರಾರು ಮೈಲಿನ ದಣಿವು ಕ್ಷಣಾರ್ಧದಲ್ಲಿ ಹಗುರಾಗುತ್ತದೆ. ಮನಸ್ಸು ಮಲ್ಲಿಗೆಯಾಗುತ್ತದೆ. ಧನ್ಯತಾ ಭಾವ, ಜೈಘೋಷಗಳು ಮೊಳಗುತ್ತವೆ.ಮುಂದಿನ ಪ್ರತಿಯೊಂದುಹೆಜ್ಜೆ ಭಕ್ತಿಯ ರಸದೌತಣ ಉಣಬಡಿಸುತ್ತದೆ, ಹಾಗೇಯೇ ಪುಟ್ಟಗ್ರಾಮವೊಂದನ್ನು ದಾಟಿ ಫರ್ಲಾಂಗ ಕ್ರಮಿಸುತ್ತಿದ್ದಂತೆ ಅಘಾಧವಾದ ಭಕ್ತಿಸಾಗರ ತನ್ನೆಡೆ ಸೆಳೆದೇ ಬಿಡುತ್ತದೆ, ಅದುವೇ ಶ್ರೀ ಕ್ಷೇತ್ರ ಇಂಚಗೇರಿ ಮಠ.
ಪುಣ್ಯಪುರುಷರ ಪಾದಸ್ಪರ್ಶದಿಂದ ಪುನೀತವಾದ ವಿಜಯಪುರ ಜಿಲ್ಲೆಯ ದೇವರನಿಂಬರಗಿ, ಇಂಚಗೇರಿ, ನಿಂಬಾಳ, ಮಹಾರಾಷ್ಟ್ರದ ಉಮದಿ, ಜತ್ತ, ಬಾಗಲಕೋಟ ಜಿಲ್ಲೆಯ ಜಮಖಂಡಿ, ಚಿಮ್ಮಡ ಮುಂತಾದ ಊರುಗಳು ಅಧ್ಯಾತ್ಮಲೋಕದ ಧ್ರುವತಾರೆಯಂತಿರುವ ಶ್ರೀ ಗುರುಲಿಂಗ ಜಂಗಮ ಮಹಾರಾಜರ ದಿವ್ಯಸಾನ್ನಿಧ್ಯದಿಂದ ಹೆಸರುವಾಸಿಯಾಗಿ ಸಪ್ತ ಮಹಾರಾಜರ ಪುಣ್ಯಧಾಮವಾಗಿದೆ.
ಕ್ಷೇತ್ರದ ಪರಂಪರೆ
ಬದಲಾಯಿಸಿಶ್ರೀಕ್ಷೇತ್ರ ಇಂಚಗೇರಿಮಠದ ಮೊದಲ ಗುರು ದೇವರನಿಂಬರಗಿಯ ಗುರುಲಿಂಗ ಜಂಗಮ ಮಹಾರಾಜರು. ಮಹಾರಾಷ್ಟ್ರದ ಉಮದಿಯ ಶ್ರೀ ಭಾವೂಸಾಹೇಬ ಮಹಾರಾಜರು, ಜಮಖಂಡಿಯ ಐನಾಥ ಪ್ರಭು ಹಾಗೂ ಗಿರಿಮಲ್ಲೇಶ್ವರ ಮಹಾರಾಜರು, ಹುಬ್ಬಳ್ಳಿಯ ಶಿವಪ್ರಭು ಮಹಾರಾಜರು, ಶ್ರೀ ಮಾಧವಾನಂದ ಪ್ರಭುಜಿ, ಶ್ರೀ ಗುರುಪುತ್ರೇಶ್ವರ ಮಹಾರಾಜರು, ಶ್ರೀ ಜಗನ್ನಾಥ ಮಹಾರಾಜರು, ಸದ್ಯದ ಶ್ರೀ ಸ. ಸ. ರೇವಣಸಿದ್ಧೇಶ್ವರ ಮಹಾರಾಜರು – ಹೀಗೆ ಗುರುಪರಂಪರೆ ಉತ್ತರೋತ್ತರವಾಗಿ ಸಾಗಿಬಂದಿದೆ.
ಅಧ್ಯಾತ್ಮ ಸಾಧನೆ
ಬದಲಾಯಿಸಿಮೊದಲ ಗುರು ಶ್ರೀ ಗುರುಲಿಂಗ ಜಂಗಮ ಮಹಾರಾಜರು ಜೀವಿತಾವಧಿಯಲ್ಲಿ ಕೇವಲ ನಾಮಸ್ಮರಣೆ, ನಾಮಸಾಧನದ ಬಲದಿಂದ ಆತ್ಮಸಾಕ್ಷಾತ್ಕಾರವನ್ನು ಸಂಪಾದಿಸಿದ ಮಹಾಮಹಿಮರು. ಅದ್ಭುತವಾಗಿ ಅತೀಂದ್ರಿಯ ಶಕ್ತಿಯನ್ನು ಮೆರೆದರೆಂದು ಪ್ರತೀತಿ ಇದೆ. ಅವರ ಶಿಷ್ಯ ಶ್ರೀ ಭಾವೂಸಾಹೇಬ ಮಹಾರಾಜರು ಇಂದ್ರಿಯಾತೀತ ಅನುಭವ ಸಂಪನ್ನರಾಗಿದ್ದರು. ಲೌಕಿಕ ಪರಮಾರ್ಥಗಳೆರಡನ್ನೂ ಸಮಾನವಾಗಿ ತೂಗಿ ತಮ್ಮ ಹಾಗೂ ಸುತ್ತಲಿನ ಜನರ ಬಾಳನ್ನು ಆಧ್ಯಾತ್ಮಿಕತೆಯ ಪ್ರಕಾಶದಿಂದ ಉಜ್ವಲಗೊಳಿಸಿದರು. ತಮ್ಮ ಬದುಕಿನಲ್ಲಿ ಎದುರಾದ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಅನೇಕರು ಅವರಲ್ಲಿಗೆ ಬರುತ್ತಿದ್ದರು. ಮೂಲತಃ ಉಮದಿಯ ಭಾವೂಸಾಹೇಬ ಮಹಾರಾಜರು ವೃತ್ತಿಯಿಂದ ಸ್ಟಾಂಪ್ ವೆಂಡರ್ ಆಗಿದ್ದರು. ಸರ್ಕಾರಿ ಕಾಗದಪತ್ರಗಳನ್ನು ಬರೆದುಕೊಟ್ಟು ಜನರಿಂದ ಅಲ್ಪಸಂಭಾವನೆ ಪಡೆಯುತ್ತಿದ್ದರು. ಒಮ್ಮೆ ತೀವ್ರವಾಗಿ ಕಜ್ಜಿಯ ರೋಗಕ್ಕೆ ಗುರಿಯಾಗಿ ಬಹಳ ಕಷ್ಟ ಅನುಭವಿಸಿದರು. ಆತ್ಮಾವಲೋಕನ ಮಾಡಿಕೊಂಡಾಗ ಗುರುಗಳಾದ ಗುರುಲಿಂಗಜಂಗಮ ಮಹಾರಾಜರು ಹೀಗೆ ಹೇಳಿದ್ದನ್ನು ಜ್ಞಾಪಿಸಿಕೊಂಡರು. ಅವರು, ‘ಒಂದು ಮುಳ್ಳು ನೆಟ್ಟರೂ ಅದು ನಿನ್ನ ಯಾವ್ಯಾವ ಗುಣಕ್ಕಾಗಿ ನೆಟ್ಟಿರಬಹುದು ಎಂದು ವಿಚಾರಿಸಿಕೋ’ ಎಂದಿದ್ದರು. ತಾನು ಯಾವುದೋ ಅಪಕೃತ್ಯವೆಸಗಿದುದ್ದಕ್ಕಾಗಿ ಈ ರೋಗ ತನ್ನನ್ನು ಕಾಡುತ್ತಿದೆ ಎಂಬುದು ಮನವರಿಕೆಯಾಯಿತು. ಅನಂತರದ ದಿನಗಳಲ್ಲಿ ಅವರು ತಮ್ಮ ವೃತ್ತಿಯನ್ನು ತ್ಯಜಿಸಿದರು. ಕಜ್ಜಿ ವಾಸಿಯಾಯಿತು.
1903ರಲ್ಲಿ ಗುಣವಾಗದ ಕಾಯಿಲೆ ಕಾಡಿತು. ನನ್ನ ಆಯಸ್ಸು ಅರವತ್ತು ವರ್ಷ. 1903ಕ್ಕೆ ಅರವತ್ತು ತುಂಬಿತು. ಇನ್ನು ದೇಹತ್ಯಾಗ ಮಾಡುವೆ ಎಂದರು. ಆಗ ಶಿಷ್ಯರು, ನೀವಿನ್ನೂ ದೀರ್ಘಕಾಲ ಬದುಕಬೇಕೆಂದು ಬೇಡಿಕೊಂಡರಂತೆ. ಅನಂತರ ಭಾವೂಸಾಹೇಬರು ತಮ್ಮ ಆಯುಷ್ಯವನ್ನು 10 ವರ್ಷ ವರ್ಧಿಸಿಕೊಂಡು 1913ರಲ್ಲಿ ದೇಹತ್ಯಾಗ ಮಾಡಿದರು. ಇವರ ತರುವಾಯ ಬಂದವರು ಶ್ರೀ ಗಿರಿಮಲ್ಲೇಶ್ವರ ಮಹಾರಾಜರು. ಜಮಖಂಡಿಯ ಇವರು ಹುಬ್ಬಳ್ಳಿ, ಜಮಖಂಡಿ, ಬನಹಟ್ಟಿ, ಹಿಪ್ಪರಗಿ, ಜತ್ತ, ಜುನೋನಿ, ನಂದೇಶ್ವರ, ಸಾಂಗಲಿ ಮುಂತಾದೆಡೆ ಸಂಚರಿಸಿ ಭಕ್ತಿಪ್ರಚಾರ ಕೈಕೊಂಡು 1934ರಲ್ಲಿ ಲಿಂಗೈಕ್ಯರಾದರು. ಶ್ರೀ ಗುರುಪುತ್ರೇಶ್ವರ ಮಹಾರಾಜರು ದೇಶ-ವಿದೇಶಗಳಲ್ಲೆಲ್ಲ ಅಧ್ಯಾತ್ಮ ತತ್ವಬೋಧನೆ ಮಾಡಿಸಿ 1996ರಲ್ಲಿ ಲಿಂಗೈಕ್ಯರಾದರು. ಶ್ರೀ ಜಗನ್ನಾಥ ಮಹಾರಾಜರು ಗುರುಪುತ್ರೇಶ್ವರ ಮಹಾರಾಜರ ಜತೆಗೂಡಿ ದೇಶಾದ್ಯಂತ ಸಂಚರಿಸಿ ಹಲವು ವಿಧಾಯಕ ಕಾರ್ಯಗಳನ್ನು ಪ್ರಚುರಪಡಿಸಿದ್ದಾರೆ.[೧]
ಗುರುಪರಂಪರೆ
ಬದಲಾಯಿಸಿಶ್ರೀ ಕ್ಷೇತ್ರ ಇಂಚಗೇರಿ ಮಠದ ಮೂಲ ಗುರುಗಳ ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರು, ಗಡಿಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ 1790 ರಲ್ಲಿ ಜನಿಸಿದರು. ಶ್ರೀ ಸದ್ಗುರು ಗುರುಲಿಂಗ ಜಂಗಮ ಮಹಾರಾಜರ ಆರಾಧನೆಗಾಗಿ ಶ್ರೀ ಸದ್ಗುರು ಸಮರ್ಥ ಬಾಹುಸಾಹೇಬ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಅಡಿಪಾಯ ಹಾಕಿದರು. ಅಂದು ಒಂದು ಗದ್ದುಗೆಯಾಗಿ ಸ್ಥಾಪಿತಗೊಂಡು, ಈ ಶ್ರೀ ಕ್ಷೇತ್ರ ಇಂದು ದಕ್ಷಿಣ ಹಾಗೂ ಮಧ್ಯಭಾರತದ ಭಕ್ತಿ ಪಂಥದ ಆಕರ್ಶಕ ಬಿಂದುವಾಗಿ ಪ್ರಜ್ವಲಿಸುತ್ತಿದೆ.
- ಶ್ರೀ ಸದ್ಗುರು ಸಮರ್ಥ ಗುರುಲಿಂಗ ಜಂಗಮ ಮಹಾರಾಜರು
ಶ್ರೀ ಕ್ಷೇತ್ರ ಇಂಚಗೇರಿ ಮಠದ ಮೂಲ ಸಂಪ್ರದಾಯವು ಸುಮಾರು 1200 ವರ್ಷಗಳ ಪುರಾತನ ನಾಥ ಸಂಪ್ರದಾಯಕ್ಕೆ ಸೇರಿದ್ದು. ಆ ಕಾಲದಲ್ಲಿ ನವನಾಥರು ಆಗಿಹೋಗಿದ್ದರು. ಆ ನವನಾಥರಿಗೆಲ್ಲ ಶ್ರೀ ದತ್ತಾತ್ರೇಯ ಸ್ವಾಮಿ ಗುರುವಾಗಿದ್ದರು . ಆ ನವನಾಥರಲ್ಲಿ ಶ್ರೀ ರೆವಣನಾಥರು ಒಬ್ಬರು. ಅವರ ಶಿಷ್ಯರಾಗಿ ಶ್ರೀ ಕಾಡಸಿದ್ದೇಶ್ವರರು ದೀಕ್ಷೆ ಪಡೆದು ಮಹಾರಾಷ್ಟ್ರದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಶ್ರೀ ಕ್ಷೇತ್ರ ಸಿದ್ದಗಿರಿ ಬೆಟ್ಟದಲ್ಲಿ ಅಖಂಡ ತಪಸ್ಸು ನಡೆಸಿ ಅಘಾದವಾದ ಆಧ್ಯಾತ್ಮಿಕ ಶಕ್ತಿಪಡೆದರು.ಇಂತಹ ತಪಸ್ವಿಯಿಂದ ದೀಕ್ಷೆ ಪಡೆದ ಶ್ರೀ ಸ.ಸ.ಗುರುಲಿಂಗ ಜಂಗಮ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಮೊಟ್ಟ ಮೊದಲ ಗುರುಗಳಾದರು. ಕುರಿ ಕಾಯುವ ಕಾಯಕವನ್ನು ಆಯ್ಧುಕೊಂಡ ಸದ್ಗುರುಗಳು ಸದಾ ಜ್ನಾನ ಮಗ್ನರಾಗಿರುತ್ತಿದ್ದರು. ತಮ್ಮ ಜ್ನಾನ ಶಕ್ತಿಯ ಮೂಲಕ ಆಧ್ಯಾತ್ಮ ಭೋದನೆ ಆರಂಬಿಸಿದ ಅವರು ಅಸಂಖ್ಯಾತರ ಭಕ್ತಿ ಸಮುಹವನ್ನುಹವನ್ನುಗಳಿಸಿದರು. ಕುರಿ ಹಾಲನ್ನೆ ಪ್ರಸಾದವನ್ನಾಗಿ ನೀಡುತ್ತ ರೋಗಗಳಿಂದ ನರಳುವ ರೋಗಿಗಳ ಕಾಯಿಲೆವಾಸಿ ಮಾಡುವ, ಅಜ್ಞಾನಿಗಳಿಗೆ ಜ್ಙಾನರ್ಜನೆ ಮಾಡುವ ಕಾಯಕದಲ್ಲಿ ತಮ್ಮನ್ನು ತಮ್ಮನ್ನು ತೊಡಗಿಸಿಕೊಂಡರು.ಈ ಸದ್ಗುರುಗಳ ಆಧ್ಯಾತ್ಮಸಶಕ್ತಿಯಿಂದ ಪ್ರೇರಣೆಗೊಳಗಾದ ಶ್ರೀ ಸದ್ಗುರು ಸಮರ್ಥ ಬಾಹುಸಾಹೇಬ ಮಹಾರಾಜರು ಅವರ ಶಿಷ್ಯರಾದರು.
ಶ್ರೀಗಳ ಸದ್ಗುರುಗಳಾದ ಶ್ರೀ ಸ.ಸ.ಗುರುಲಿಂಗ ಜಂಗಮ ಮಹಾರಾಜರು 1790ರಲ್ಲಿ ಕರ್ನಾಟಕ ಗಡಿಭಾಗವಾದ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಜನಿಸಿದರು. ಇವರ ಮೂಲ ಹೆಸರು ನಾರಾಯಣಪ್ಪ. ನಾರಾಯಣಪ್ಪನವರು ಅವರು ಚಿಕ್ಕವರಿದ್ದಾಗಿನಿಂದ ಆಧ್ಯಾತ್ಮಪ್ರವೃತ್ತಿ ಉಳ್ಳವರು. ಅವರು ಜ್ಞಾನ ದಾಹದ ನಿಮಿತ್ಯ ಶ್ರೀ ಫಂಡರಪೂರ ಕ್ಷೇತ್ರಕ್ಕೆ ಹೋದಾಗ ಅವರಿಗೆ ಪಂಡರಪೂರ ವಿಠ್ಠಲನು ನೀನು ಸಿದ್ದಗಿರಿಗೆ ಹೋಗಿ ಶ್ರೀ ಕಾಡಸಿದ್ಧೇಶ್ವರಿಂದ ಉಪದೇಶ ಪಡೆ ಎಂದು ವಾಣಿಯಾಯಿತ್ತು. ನಂತರ ಅವರು ಸಿದ್ದಗಿರಿಗೆ ಹೋದಾಗ ಅವರಿಗೆ ನೂರಾರು ವರ್ಷಗಳ ಹಿಂದೆ ಆಗಿಹೋದ ಕಾಡಸಿದ್ದನು ಸಾಕಾರ ರೂಪದಲ್ಲಿ ಪ್ರಕಟವಾಗಿ ತತ್ವಮಸಿ (ನೀನೆ ಪರಮಾತ್ಮ) ಅಂತ ಉಪದೇಶ ನೀಡಿದರೆಂದು ಹೇಳಲಾಗುತ್ತಾದೆ. ಶ್ರೀ ನಾರಾಯಣಪ್ಪನವರು ತಮ್ಮ ಕುರಿ ಕಾಯುವ ಉದ್ಯೋಗದಲ್ಲಿ 35 ವರ್ಷಗಳ ಕಾಲ ಅಖಂಡ ಧ್ಯಾನವನ್ನು ಮಾಡಿ ಆತ್ಮಸಾಕ್ಷಾತ್ಕಾರವನ್ನು ಪಡದರೆಂದು ಗುರುಪರಂಪರೆಯಿಂದ ತಿಳಿದುಬರುತ್ತದೆ. ಅವರು ಮುಂದೆ ಶ್ರೀ ಗುರುಲಿಂಗ ಜಂಗಮ ಮಹಾರಾಜರೆಂದು ಪ್ರಸಿದ್ದರಾದರು.
- ಶ್ರೀ ರಘುನಾಥಪ್ರಿಯ ಮಹಾರಾಜರು
ಅವರಿಗೆ ಶ್ರೀ ರಘುನಾಥಪ್ರಿಯ ಮಹಾರಾಜರು ಹಾಗೂ ಶ್ರೀ ಭಾವುಸಾಹೇಬ್ ಮಹಾರಾಜರು ಪ್ರಮುಖ ಶಿಷ್ಯಂದಿರು. ಶ್ರೀ ರಘುನಾಥಪ್ರಿಯ ಒಬ್ಬ ಮಂತ್ರವಾದಿ ಅಗಿದ್ದರು. ಆದರೆ ಅವರ ಯಾವ ವಿದ್ಯೆಗಳು ಶ್ರೀ ಗುರುಲಿಂಗ ಜಂಗಮ ಮಹಾರಾಜರ ಮುಂದೆ ನಡೆಯಲಿಲ್ಲ. ಆಗ ಅವರು ನೀನು ತೋರಿಸುವ ವಿದ್ಯೆ ತಂತ್ರಗಳು ಹೊಟ್ಟೆ ಹಸಿವು ನೀಗಿಸುವ ವಿದ್ಯೆಗಳಾಗಿವೆ ಎಂದು ರಘುನಾಥ ಪ್ರಿಯ ಮಹಾರಾಜರಿಗೆ ತಿಳಿಸಿಕೊಟ್ಟರು. ನಂತರ " ನಿತ್ಯ ನೂತನವು ಸತ್ಯವಾದ ಭಗವಂತನ ನಿಜರೂಪದ ಬಗ್ಗೆ ಅರಿವು ನೀಡಿದರು, ಅಲ್ಲದೇ ನೀನೇ ಭಗವಂತನದ್ದಿಯ ಎಂದು ತಿಳಿಸಿದರು. ನೀನು ಧ್ಯಾನ ಮಾಡಿ ನಿನ್ನನ್ನು ನೀನು ಅರಿ ಅಂತ ಹೇಳಿ ಉಪದೇಶ ನೀಡಿದರು". ರಘುನಾಥ ಪ್ರಿಯ ಮಹಾರಾಜರು ಅದನ್ನು ಒಪ್ಪಿಕೊಂಡರು. ನಂತರ ಅವರು ತಮ್ಮ ದೇಹವನ್ನು ಜಮಖಂಡಿ ತಾಲ್ಲೂಕಿನ ಚಿಮ್ಮಡ ಗ್ರಾಮದಲ್ಲಿ ಬಿಟ್ಟರು. ಈಗಲೂ ಪ್ರತಿವರ್ಷವೂ ಅಲ್ಲಿ ದೀಪಾವಳಿ ಕಡೆ ಪಾಡ್ಯೆ ದಿವಸ ರಥೋತ್ಸವ ನಡೆದು ಆಧಾತ್ಮಸಪ್ತಾಹ ಜರುಗುತ್ತದೆ.
- ಶ್ರೀ ಸ.ಸ.ಭಾವೂಸಾಹೇಬ್ ಮಹಾರಾಜರು
ಮಾನವ ಕುಲಕೋಟಿ ಉದ್ದರಿಸಲು ಭೂಮಿಯ ಮೇಲೆ ಮಾನವರೂಪಿ ಪರಮಾತ್ಮನು ಅವತರಿಸುವನು. ಅವನೇ ಸದ್ಗುರು. ಈ ಭೂಮಿ ಉದ್ದರಿಸಲು ಇಂಚಗೇರಿ ಆಧ್ಯಾತ್ಮಸಂಪ್ರಾಯದ ಸದ್ಗುರು ಪರಂಪರೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಇಂಚಗೇರಿ ಎಂಬ ಪುಟ್ಟಗ್ರಾಮದಲ್ಲಿದೆ. ಈ ಗ್ರಾಮ ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿದೆ. ಈ ಗ್ರಾಮದಿಂದ 25 ಕಿ.ಮೀ ದೂರದಲ್ಲಿ ಮಹಾರಾಷ್ಟ್ರ ರಾಜ್ಯದ ಜತ್ತ ತಾಲ್ಲೂಕಿನ ಉಮದಿ ಗ್ರಾಮದಲ್ಲಿ 1834ರ ರಾಮನವಮಿಯಂದು ಸದ್ಗುರು ಸಮರ್ಥ ಬಾವುಸಾಹೇಬ್ ಮಹಾರಾಜರು ಜನಿಸಿದರು.
ಶ್ರೀ ಸ.ಸ. ಭಾವೂಸಾಹೇಬ್ ಮಹಾರಾಜರು 30 ಹಳ್ಳಿ ಜಹಾಗಿರದಾರರಾಗಿದ್ದರು. ಉಮದಿ ದೇಶಪಾಂಡೆ ಮನೆತನದವರಾಗಿದ್ದ ಶ್ರೀ ಸ.ಸ. ಭಾವೂಸಾಹೇಬ್ ಮಹಾರಾಜರು ನಿಂಬರಗಿ ಶ್ರೀಗಳ (ಗುರುಲಿಂಗ ಜಂಗಮ ಮಹಾರಾಜರ) ನಿರ್ದೇಶನದಂತೆ ಶ್ರೀ ರಘುನಾಥಪ್ರಿಯ ಮಹಾರಾಜರಿಂದ ಜ್ಙಾನೋಪದೇಶ ಪಡೆದಿದ್ದರೆಂದು ಹೇಳಲಾಗುತ್ತದೆ. ನಿಂಬರಗಿ ಶ್ರೀಗಳು(ಗುರುಲಿಂಗ ಜಂಗಮ ಮಹಾರಾಜರ) ದೇಹಬಿಟ್ಟ ನಂತರ ಭಾವೂಸಾಹೇಬ್ ಮಹಾರಾಜರು ಆಧ್ಯಾತ್ಮಪ್ರಸಾರದ ಹೊಣೆ ಹೊತ್ತರು. ಸುಮಾರು 30ವರ್ಷಗಳ ಕಾಲ ಜ್ಞಾನಾಮೃತವನ್ನು ಜ್ಙಾನದಾಹಿಗಳಿಗೆ ಜಾತಿಭೇದವನ್ನು ಎಣಿಸದೆ ನೀಡಿದರು. ನಿಂಬರಗಿ ಶ್ರೀಗಳ (ಗುರುಲಿಂಗ ಜಂಗಮ ) ಸಮಾಧಿ ಮೇಲೆ ಅಂದು ಜಮೀನು ಮಾಲೀಕರು ಬಂದು ಒಡ್ಡನ್ನು ಹಾಕಿದಾಗ ಸಮಾಧಿಯು ಮುಚ್ಚಿದಾಗ ಉಮದಿಯ ಶ್ರೀಗಳು (ಭಾವೂಸಾಹೇಬ್ ಮಹಾರಾಜರು) ಬಹಳ ನೊಂದುಕೊಂಡರು. ನಿಂಬರಗಿ ಶ್ರೀಗಳ ಅಸ್ಥಿಗಳನ್ನು ತೆಗೆದುಕೊಂಡು 1903 ರ ರಾಮನವಮಿ ದಿನ ಇಂಚಗೇರಿ ಗ್ರಾಮದಲ್ಲಿ ಶ್ರೀ ಅಣ್ಣರಾಯ ಕುಲಕರ್ಣಿರವರಿಂದ 30 ಗುಂಟೆ ಜಮೀನನ್ನು ಪಡೆದುಕೊಂಡ ನಂತರ ಅಲ್ಲಿ ಶ್ರೀ ಗುರುಲಿಂಗ ಜಂಗಮ ಮಹಾರಾಜರ ಅಸ್ಢಿ ಪ್ರತಿಷ್ಠಾಪನೆ ಮಾಡಿದರು.
ಉಮದಿ ಶ್ರೀಗಳು(ಬಾವೂಸಾಹೇಬ್ ಮಹಾರಾಜರು) ವಿಜಯಪುರ ಜಿಲ್ಲೆ, ಬೆಳಗಾವಿ ಜಿಲ್ಲೆ, ಸಾಂಗ್ಲಿ ಜಿಲ್ಲೆ, ಪುಣೆ ಭಾಗದಲ್ಲಿ ಭಕ್ತಿ ಪ್ರಚಾರವನ್ನು ಮಾಡಿ ಭಕ್ತವೃಂದವನ್ನು ಬೆಳೆಸಿದರು. ಭಕ್ತಿ ಪ್ರಚಾರ ಕಾಲದಲ್ಲಿ ತಮ್ಮ ಎಲ್ಲಾ ಪ್ರವಾಸದ ಹಾಗೂ ಅವರು ಕೂಡ ಇದ್ದ ಶಿಷ್ಯ ವೃಂದದ ಖರ್ಚನ್ನು ಸಹ ಶ್ರೀ ಉಮದಿ ಶ್ರೀಗಳು(ಭಾವೂಸಾಹೇಬ್ ಮಹಾರಾಜರು) ವಹಿಸಿಕೊಳ್ಳುತ್ತಿದ್ದರು. ಅವರ ಶಿಷ್ಯರಲ್ಲಿ ಜಮಖಂಡಿಯ ಶ್ರೀ ಗಿರಿಮಲ್ಲೇಶ್ವರ ಮಹಾರಾಜರು, ಶ್ರೀ ಗುರುದೇವ ರಾನಡೆಯವರು, ಜಿಗಜೀವಣಿಯ ಅಂಬುರಾವ ಮಹರಾಜರು, ಸೋಲಾಪುರ ಸಿದ್ದರಾಮೇಶ್ವರ ಮಹಾರಾಜರು, ಕನ್ನೂರಿನ ಸಿದ್ದಲಿಂಗೇಶ್ವರ ಮಹಾರಾಜರು, ಬಾಗೇವಾಡಿಯ ನರಸಿಂಹೇಶ್ವರ ಮಹಾರಾಜರು, ಹೊರ್ತಿ ಶ್ರೀರಾಮರಾವ್ ಮಹಾರಾಜರು ಪ್ರಮುಖರು.
ಅಗರ್ಭ ಶ್ರೀಮಂತರಾಗಿದ್ದು, ಜಮಖಂಡಿಯ ಶ್ರೀ ಗಿರಿಮಲ್ಲೇಶ್ವರರು ಉಮದಿ ಶ್ರೀಗಳ(ಭಾವೂಸಾಹೇಬ್ ಮಹಾರಾಜರು) ಇಚ್ಚೆಯಂತೆ ಅವರಿಗೆ ಅರಿಯದಂತೆ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಶ್ರೀ ಗುರುಲಿಂಗ ಜಂಗಮ ಮಹಾರಾಜರ ಗದ್ದುಗೆಯ ಮೇಲೆ ಗರ್ಭಗುಡಿಯನ್ನು ನಿರ್ಮಿಸಿದರು. ಸಾಮಾನ್ಯವಾಗಿ ಇಂಚಗೇರಿ ಮಠದ ಖರ್ಚುವೆಚ್ಚಗಳನ್ನು ಶ್ರೀ ಗಿರಿಮಲ್ಲೇಶ್ವರರು ನೋಡಿಕೊಳ್ಳುತ್ತಿದ್ದರು. 1914 ರ ಮಾಘ ಶುದ್ದ ತೃತಿಯದಂದು ಶ್ರೀ ಭಾವುಸಾಹೇಬ್ ಮಹಾರಾಜರು ದೇಹಬಿಟ್ಟರು.
- ಶ್ರೀ ಸ.ಸ. ಗಿರಿಮಲ್ಲೇಶ್ವರರು ಮಹಾರಾಜರು
ಶ್ರೀ ಸ.ಸ.ಗಿರಿಮಲ್ಲೇಶ್ವರರು ಮಹಾರಾಜರು ಕರ್ನಾಟಕ-ಮಹಾರಾಷ್ಠ್ರ ಭಾಗದಲ್ಲಿ ಸಂಚರಿಸಿ ಬಡವ ಬಲ್ಲಿಗರೆನ್ನದೆ, ಜಾತಿಭೇಧವನ್ನು ಎಣಿಸದೆ ಎಲ್ಲಾ ಜ್ಙಾನದಾಹಿಗಳಿಗೆ ಜ್ಙಾನೋಪದೇಶವನ್ನು ನೀಡಿದರು. ಈ ಭಕ್ತಿ ಪ್ರಸಾರಕ್ಕೆ ಉಳಿದೆಲ್ಲಾ ಗುರುಗಳ ವೆಚ್ಚವನ್ನು ಸಹ ನೀಡುತ್ತಿದ್ದರು. ಘನವೆತ್ತಜ್ಙಾನಿ, ಬನಾರಸ್ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಶ್ರೀ ಗುರುದೇವ ರಾನಡೆಯವರು ಹಾಗೂ ಶ್ರೀ ಅಂಬುರಾವ್ ಮಹಾರಾಜರು ಉಮದಿ ಶ್ರೀಗಳ(ಭಾವೂಸಾಹೇಬ್ ಮಹಾರಾಜರು) ಇಚ್ಚೆಯಂತೆ ಭಕ್ತಿ ಪ್ರಚಾರ ಕಾರ್ಯಕೈಗೊಂಡರು. 19 ನೇ ಶತಮಾನದ ಅದಿಭಾಗದಲ್ಲಿ ದೇಶದ ಘನವೆತ್ತ ತತ್ವಜ್ಞಾನಿ ಹಾಗೂ ಮುಂದೆ ರಾಷ್ಟ್ರಪತಿಗಳಾದ ಶ್ರೀ ರಾಧಾಕೃಷ್ಣರ ಜೊತೆ ಸಂಪರ್ಕವಿದ್ದ ಶ್ರೀ ಗುರುದೇವ ರಾನಡೆಯವರು ಉಮದಿ ಶ್ರೀಗಳು (ಭಾವೂಸಾಹೇಬ್ ಮಹಾರಾಜರು) ಅವರೊಬ್ಬ ಭಗವಾನ್ ನಾರಾಯಣ ಅವತಾರವೆಂದು ಅವರಿಗೆ ಹೇಳಿದ್ದರು.
1911 ರಲ್ಲಿ ಶ್ರೀ ಗುರುದೇವ ಆರ್.ಡಿ.ರಾನಡೆಯವರು ಉಮದಿ ಶ್ರೀಗಳಿಗೆ ಬರೆದ ಪತ್ರದಲ್ಲಿ ಇಂಚಗೇರಿ ಸ್ಥಳದ ಬಗ್ಗೆ "ಪೃಥ್ವಿಯ ಮೇಲೆ ಭೂದೇವರಿರುವರೆಂದು ತಾವುಗಳು ಹೇಳಿದ್ದು ಉಂಟು. ಇಂತಹ ಭೂದೇವರು ಸಾಧನದಿಂದ ಆತ್ಮಸುಖವನ್ನು ಪಡೆದವರಲ್ಲದೆ ಇನ್ನಾರು ಇರಬಲ್ಲರು ? ಇಂಚಗೇರಿ ಇಂತಹ ಭೂದೇವರು ಸಭೆಯ ನಿಮ್ಮ ನೇತೃತ್ವದಲ್ಲಿ ನಡೆದು ಪರಸ್ಪರ ಅನಂದದಿಂದ ಬೆಳೆಯುತ್ತದೆ. ಇಂತಹ ಅನಂದದ ಲಾಭವು ಜಗತ್ತಿನಲ್ಲಿ ಇಂಚಗೇರಿ ಹೊರತು ಭೇರೆಡೆ ದೊರೆಯಲಾರದು". ಶ್ರೀ ಭಾವೂಸಾಹೇಬ್ ಮಹಾರಾಜರ ಕಾಲದಿಂದಲೂ ಶ್ರಾವಣ ಮಾಸದಲ್ಲಿ ನಡೆದುಕೊಂಡು ಬಂದ ಜ್ಙಾನ ಸಪ್ತಾಹವು ಇಂದಿನವರೆಗೂ ಇಂಚಗೇರಿಯಲ್ಲಿ ಪರಂಪರಾಗತವಾಗಿ ನಡೆದುಕೊಂಡು ಬಂದಿದೆ.
ಶ್ರೀ ಸ.ಸ. ಗಿರಿಮಲ್ಲೇಶ್ವರರು ಮಹಾರಾಜರು 1934 ರ ಮಾಘ ಶುದ್ದ ಚತುರ್ಥಿಯಂದು ಶ್ರೀ ಸ.ಸ. ಭಾವೂಸಾಹೇಬ್ ಮಹಾರಾಜರ ಪುಣ್ಯ ತಿಥಿಸಪ್ತಾಹ ಪೂರೈಸಿ ಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ದೇಹಬಿಟ್ಟರು. ಶ್ರೀ ಸ.ಸ. ಗಿರಿಮಲ್ಲೇಶ್ವರರು ಮಹಾರಾಜರ ಶಿಷ್ಯರಾದ ಶ್ರೀ ಸ.ಸ ಮಹಾದೇವರು 1915 ರ ನವೆಂಬರ್ 2 ರಂದು ಹುಬ್ಬಳ್ಳಿಯಲ್ಲಿ ಮುರುಗೋಡ ಮನೆತನದ ಶ್ರೀ ಸ.ಸ ಶಿವಪ್ರಭುಹಾಗೂ ಕಾಳಮ್ಮನವರ ಉದರಲ್ಲಿ ಮಾನವ ರೂಪಿ ವಿಷ್ಣುವಿನ ಅವತಾರದಲ್ಲಿ ಜನಿಸಿದರು.
- ಶ್ರೀ ಸ.ಸ ಶಿವಪ್ರಭು ಮಹಾರಾಜರು
ಶ್ರೀ ಸ.ಸ ಶಿವಪ್ರಭು ಮಹಾರಾಜರ ಅಖಂಡ ತಪಸ್ವಿ & ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಪರಮ ಅನುಯಾಯಿ. ಶ್ರೀ ಮಹಾದೇವರು ಶ್ರೀ ಗಿರಿಮಲ್ಲೇಶ್ವರ ಮಹಾರಾಜರಿಂದ ಉಪದೇಶ ಪಡೆದುಕೊಂಡು ಕರ್ನಾಟಕ-ಮಹಾರಾಷ್ಠ್ರ ಪ್ರಚಾರವನ್ನು ಕೈಗೊಂಡರು. ದೇಶದ ಸ್ವಾತಂತ್ರ್ಯ ಹೋರಾಟ, ಸಂಸ್ಢಾನಗಳ ವಿಲೀನಿಕರಣ, ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿ ಇಂಚಗೇರಿ ಮಠವನ್ನು ನಿಜವಾದ ಆಧ್ಯಾತ್ಮ ಶಕ್ತಿ ಕೇಂದ್ರ ಹಾಗೂ ಸರ್ವೋದಯದ ಕೇಂದ್ರವನ್ನಾಗಿ ಮಾರ್ಪಡಿಸಿದರು. . ಗಾಂಧೀಜಿಯವರ ಗ್ರಾಮಸ್ವರಾಜ್ಯ , ವಿನೋಬಾಜಿಯವರ ಸರ್ವೋದಯ ಕಲ್ಪನೆ ಹಾಗೂ ಶರಣ ಜ್ಙಾನ ಕ್ರಿಯೆಗಳ ಸಮನ್ವಯ ಮಹಾದೇವಪ್ಪನವರ ಮೂಲಸೂತ್ರಗಳಾಗಿದ್ದವು.
- ಶ್ರೀ ಮಾಧವಾನಂದ ಪ್ರಭುಜಿ
ಕ್ರಾಂತಿಕಾರಿ ಧ್ಯೇಯಗಳಿಂದ ರಾಷ್ಢ್ರಿಯ ಆಯಾಮವನ್ನು ಪಡೆದು ಕಟು ಸಂಪ್ರದಾಯ ಕಂದಾಚಾರಗಳನ್ನು ಖಂಡಿಸುತ್ತಾ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಹಾಗೂ ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿದ ಶ್ರೀ ಮಹಾದೇವಪ್ಪನವರಿಂದ ಶ್ರೀ ಕ್ಷೇತ್ರ ಇಂಚಗೇರಿ ಮಠ ದೀನದಲಿತರಿಗೆ ಆಶ್ರಯ ನೀಡಿದ ಆಶ್ರಮವಾಗಿ ಸ್ವತಂತ್ರ್ಯ ನ್ಯಾಯಲವಾಗಿ , ಉದ್ಯೋಗ ಕೇಂದ್ರವಾಗಿ ಕಾಯಕ ತತ್ವದ ಪ್ರತ್ಯೇಕ್ಷ ನಿದರ್ಶನವಾಗಿ ರೂಪುಗೊಂಡಿದ್ದು ಒಂದು ಅದ್ಭುತ ಸಾಧನೆ ಎಂದು ಹೇಳಬಹುದು. "ಯಾರು ಜನತಾ ಜನಾರ್ಧನ ಸೇವೆಯ ಮಡುವುನಲ್ಲಿ ದುಮುಕುವರೊ ಅವರ ಅಮೃತ ಪಾನ ಮಾಡಿ ಅಮರರಾಗುವರು "ಎಂಬುದು ಶ್ರೀ ಸ.ಸ.ಮಹಾದೇವರ ಅಮೃತವಾಣಿಯಾಗಿತ್ತು. ನಿಜವಾದ ಅರ್ಥದಲ್ಲಿ ಶ್ರಿ ಮಹಾದೇವರು ಅಮರ ಜೀವಿಗಳು. ಮಹಾತ್ಮಾಗಾಂಧೀಜಯವರ ಮೊಮ್ಮಗ ಅರುಣಗಾಂಧೀಯವರು ಇಂಪ್ರಿಂಟಿ ಎಂಬ ಪಾಕ್ಷಿಕ ಇಂಗ್ಲಿಷ್ ಪತ್ರಿಕೆಯಲ್ಲಿ ಇಂಚಗೇರಿ ಸಾಂಪ್ರದಾಯದ ಕುರಿತು ತತ್ವಗಳ ಈ ದಿಟ್ಟ ಪ್ರಯೋಗ ನಮ್ಮ ಭಾರತದಾದ್ಯಂತ ಅತಿ ಶೀಘ್ರವಾಗಿ ಕಾರ್ಯಗತವಾಗಲೆಂದು ಆಶಿಸಿ ಬರೆದಿದ್ದಾರೆ.
ಬಾಲ ಬ್ರಹ್ಮಚಾರಿಯಾಗದ್ದ ಮಹಾದೇವರು ತದನಂತರ ದಿನಗಳಲ್ಲಿ ದೇವರು ಹಾಗೂ ಶ್ರೀ ಮಾಧವಾನಂದ ಪ್ರಭುಜೀ ಎಂದೆ ಪ್ರಚಲಿತರಾಗಿ ಭಕ್ತಿ ಪ್ರಚಾರದ ಜತೆಗೆ ಶ್ರೀ ಗುರು ಪುತ್ರೇಶ್ವರ ಮಹಾರಾಜರನ್ನು ತಮ್ಮ ಆಧ್ಯಾತ್ಮದ ಗರಡಿಯಲ್ಲಿ ಪಳಗಿಸಿ, 1980 ರಲ್ಲಿ ದೈವಾದಿನರಾದರು .
- ಶ್ರೀ ಗುರು ಪುತ್ರೇಶ್ವರ ಮಹಾರಾಜರು
ಶ್ರೀ ಗುರು ಪುತ್ರೇಶ್ವರ ಮಹಾರಾಜರು ಶ್ರೀ ಕ್ಷೇತ್ರ ಇಂಚಗೇರಿ ಮಠದ ಜ್ಞಾನ ಪೀಠ ಅಲಂಕರಿಸಿ ಸುಮಾರು 15 ವರ್ಷಗಳ ಕಾಲ ಧರ್ಮ ಪ್ರಚಾರವನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸದೆ, ರಷ್ಯದ ಜಕೊಸ್ಲೊವಾಕಿಯಾದಲ್ಲಿ ಕೈಗೊಂಡರು. ಅಂತರರಾಷ್ಟ್ರಿಯ ಧಾರ್ಮಿಕ ಸಮ್ಮೇಳನದಲ್ಲಿ ಭಾಗವಹಿಸಿ ದೇಶದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪತಾಕೆಯನ್ನು ಹಾರಿಸಿದರು. ಸರ್ವೋದಯದ ಹರಿಕಾರ ಎಂಬ ಬಿರುದು ಗಳಿಸಿದ ಶ್ರೀ ಗುರು ಪುತ್ರೇಶ್ವರ ಮಹಾರಾಜರು ಇಡೀ ದೇಶಾದ್ಯಾಂತ ಸಂಚರಿಸಿ, ಪಾದಯಾತ್ರೆ ನಡೆಸಿ ಗೋ ಹತ್ಯೆ ವಿರುದ್ದ ಹಾಗೂ ಸರ್ವೋದಯದ ಕುರಿತು ತಮ್ಮ ಜ್ಞಾನದ ಬುತ್ತಿಯನ್ನು ಉಣಬಡಿಸಿದರು. ಸಾವಿರಾರು ಅಂತರ್ ಜಾತಿ, ಅಂತರ್ ಧಾರ್ಮೀಯ ಹಾಗೂ ವಿಧವಾ ಮದುವೆಗಳನ್ನು ಮಾಡಿಸಿ ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿದರು.
- ಶ್ರೀ ಜಗನ್ನಾಥ ಮಹಾರಾಜರು
ಶ್ರೀ ಗುರುಪುತ್ರೇಶ್ವರರ ತರುವಾಯ ಶ್ರೀ ಜಗನ್ನಾಥ ಮಹಾರಾಜರು 1996 ರಿಂದ ಮಠದ ದೈನಂದಿನ ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದರು. ಸುಮಾರು 15 ವರ್ಷಗಳ ಕಾಲ ಶ್ರೀ ಕ್ಷೇತ್ರದ ಗೌರವವನ್ನು ವೃಧ್ಧಿಸುತ್ತ ಆಧ್ಯಾತ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಅವರು 2011 ರ ನವೆಂಬರ್ ಮಾಸದಲ್ಲಿ ಲಿಂಗೈಕ್ಯರಾದರು.
- ಶ್ರೀ ರೇವಣಸಿದ್ದೇಶ್ವರ ಮಹಾರಾಜರು
ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಮಠದ ಧರ್ಮ ಪೀಠವನ್ನು ಅಲಂಕರಿಸಿದರು. ಹುಟ್ಟಿನಿಂದಲ್ಲೇ ನಿತ್ಯ ಕೃಷಿ ಹೈನುಗಾರಿಕೆ , ತೋಟಗಾರಿಕೆ ಕಾಯಕದ ಜತೆಗೆ ಆಧ್ಯಾತ್ಮದಲ್ಲಿ ತೊಡಗಿಸಿಕೊಂಡಿರುವ ಶ್ರೀ ರೇವಣಸಿದ್ದೇಶ್ವರ ಮಹಾರಾಜರು ಕಾಯಕ ತಪ್ಪಸ್ವಿಗಳು. ಶ್ರೀ ಮಹಾದೇವರ ಹಾಗೆ ಸ್ಥೂಲ ದೇಹ ಹೊಂದಿದ್ದರೂ ದಣಿವು ಎಂಬುದು ಅವರ ಶಬ್ಧಕೋಶದಲ್ಲಿ ಸಿಗದ ಶಬ್ಧವಾಗಿದೆ. ಸದಾ ಕಾಯಕದಲ್ಲಿ ಸಕ್ರಿಯವಾಗಿರುವ ಅವರು ಕಳೆದು ಎರಡೇ ವರ್ಷಗಳಲ್ಲಿ ಶ್ರೀ ಇಂಚಗೇರಿ ಮಠದ ಅಭಿವೃದ್ಧಿಗೆ ಚಿತ್ರಣವನ್ನು ಬದಲಾಯಿಸಿದ್ದಾರೆ. ಸುಮಾರು 3 ಕೋಟಿಗೂ ಅಧಿಕ ವೆಚ್ಚದಲ್ಲಿ ಕ್ಷೇತ್ರವನ್ನು ನಾನಾ ಹಂತದಲ್ಲಿ ಅಭಿವೃದಿ ಪಡಿಸುವ ಮೂಲಕ "ಕಾಯಕಯೋಗಿ" ಎಂಬ ಬಿರುದು ಪಡೆದಿದ್ದಾರೆ.
ಸಾವಿರಾರು ಅಂತರ್ ಜಾತಿ, ಅಂತರ್ ಧಾರ್ಮೀಯ ಹಾಗೂ ವಿಧವಾ ಮದುವೆಗಳನ್ನು ಮಾಡಿಸಿ ಮಾನವೀಯತೆಯ ಮೌಲ್ಯಗಳನ್ನು ಎತ್ತಿಹಿಡಿದರು. ಭಕ್ತರು ಸೇರಿ ಕುಳಿತು ಕೊಳ್ಳಬಹುದಾದ ಬೃಹತ್ ಸಭಾ ಭವನ, ಎಕಕಾಲಕ್ಕೆ ಸಾವಿರಾರು ಜನ ಕುಳಿತು ಪ್ರಸಾದ ಸ್ವೀಕರಿಸಲು ಬೃಹದಾಕಾರವಾದ ಪ್ರಸಾದ ನಿಲಯ, ಅಡುಗೆ ಮನೆ, ಕುಡಿಯುವ ನೀರಿನ ವ್ಯವಸ್ಥೆ ಹೀಗೆ ಅನೇಕ ಕಾಮಗಾರಿಗಳನ್ನು ಕೈಗೊಂಡಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ ಶ್ರೀ ಮಾಧವಾನಂದ ಪ್ರಭುಜೀ ಅವರ ಭವ್ಯ ಮಂದಿರದ ಕಟ್ಟಡ ಕಾಮಗಾರಿ ಸಹ ಎಕಕಾಲಕ್ಕೆ ಕೈಗೊಂಡಿದ್ದು, ಶೀಘ್ರವೇ ಪೂರ್ಣಗೊಳಿಸುವ ಪಣ ಅವರದಾಗಿದೆ. ಕರ್ನಾಟಕ ಸರ್ಕಾರದ ಸಹಾಯದೊಂದಿಗೆ ಸುಮಾರು ರೂ 88 ಲಕ್ಷ ವೆಚ್ಚದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸ ಕಟ್ಟಡದ ನಿರ್ಮಾಣದ ಕಾರಣೀಭೂತರಾಗಿದ್ದಾರೆ. ಬಿರುದು - ಬಾವುಲಿಗಳು, ಮೆರವಣಿಗೆ, ಆಡಂಬರದ ಸಿಂಹಾಸನ ಸನ್ಮಾನಗಳಿಂದ ಸದಾ ದೂರವಿರುವ ಶ್ರೀ.ಸ.ಸ.ರೇವಣಸಿದ್ದೇಶ್ವರ ಮಹಾರಾಜರು ಅತ್ಯಂತ ಸರಳ ಜೀವನಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ದೇಶದ ಅನೇಕ ಮಠಗಳಿಗೆ ಭೇಟಿ ನೀಡಿದರೂ ತಮ್ಮನ್ನು ಮಠಾಧೀಶರೆಂದು ಗುರುತಿಸಿಕೊಳ್ಳಲು ಇಷ್ಟ ಪಡದ ಇವರು ಒಬ್ಬ ಸಾಮಾನ್ಯ ಆಸ್ಥಿಕನಂತೆ ಹೋಗಿ ದರುಶನ ಪಡೆಯುತ್ತಾರೆ. ಅಲ್ಲದೇ ಆಯಾ ಮಠದ ರೀತಿ ನೀತಿಗಳನ್ನು ಗೌರವಿಸುವುದು ಅವರ ವಿಶಿಷ್ಟ ಗುಣವಾಗಿದೆ.[೨]
ಸಪ್ತಾಹಗಳು
ಬದಲಾಯಿಸಿನಿತ್ಯ ನಾಲ್ಕು ಬಾರಿ ಭಜನೆ ಹಾಗೂ ಎರಡು ಬಾರಿ ಪೂಜೆ ನಡೆಯುತ್ತದೆ. ವರ್ಷಕ್ಕೆ 6 ಪ್ರಮುಖ ಸಪ್ತಾಹಗಳು ನಡೆಯುತ್ತವೆ. ವರ್ಷಕ್ಕೆ ಎರಡು ಬಾರಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ ನಡೆಯತ್ತದೆ.
- ಜನವರಿ-ಫೆಬ್ರವರಿ ಅಲ್ಲಿ 4 ದಿನಗಳ ಕಾಲ ಶ್ರೀ ಸದ್ಗುರು ಸಮರ್ಥ ಭಾವುಸಾಹೇಬ ಮಹಾರಾಜರ, ಶ್ರೀ ಸದ್ಗುರು ಸಮರ್ಥ ಗಿರಿಮಲ್ಲೇಶ್ವರ ಮಹಾರಾಜರ, ಶ್ರೀ ಸದ್ಗುರು ಸಮರ್ಥ ಗುರುಪುತ್ರೇಶ್ವರ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಜಗನ್ನಾಥ ಮಹಾರಾಜರ ಪುಣ್ಯತಿಥಿ ಅಂಗವಾಗಿ ಮಾಘ ಸಪ್ತಾಹ ಆಗಿರುತ್ತದೆ.
- ಜೂನ ತಿಂಗಳಲ್ಲಿ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಅವರ ಪುಣ್ಯತಿಥಿ ಸಪ್ತಾಹ ನಡೆಯುತ್ತದೆ.
- ಜುಲೈ ತಿಂಗಳಲ್ಲಿ ಹುತಾತ್ಮರ ಸಪ್ತಾಹ ನಡೆಯುತ್ತದೆ.
- ಪ್ರತಿ ವರ್ಷ ಶ್ರಾವಣ ಮಾಸದಲ್ಲಿ 1 ತಿಂಗಳ ಕಾಲ ಸಾಧನ ಸಪ್ತಾಹ ನಡೆಯುತ್ತದೆ.
- ಪ್ರತಿ ವರ್ಷ ಅಕ್ಟೋಬರ್ 2 ಗಾಂಧೀ ಜಯಂತಿ ದಿನದಂದು ಶ್ರೀ ಕ್ಷೇತ್ರ ಇಂಚಗೇರಿ ಮಠದಿಂದ ಪಾದಯಾತ್ರೆ ಆರಂಭಿಸಿ ನವೆಂಬರ್ 2 ರಂದು ಹುಬ್ಬಳ್ಳಿಯಲ್ಲಿ ನಡೆಯುವ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿ ಅವರ ಜನ್ಮದಿನದಂದು ಮಂಗಳಗೊಳ್ಳುತ್ತದೆ.
- ಡಿಸೆಂಬರ್ ತಿಂಗಳಲ್ಲಿ ದತ್ತ ಜಯಂತಿ ಸಪ್ತಾಹ ನಡೆಯುತ್ತದೆ.
ದೇವಾಲಯಗಳು
ಬದಲಾಯಿಸಿಶ್ರೀ ಕ್ಷೇತ್ರ ಇಂಚಗೇರಿ ಮಠದಲ್ಲಿ ಒಟ್ಟು ನಾಲ್ಕು ಬೃಹದಾಕಾರದ ದೇವಾಲಯಗಳಿವೆ. ಶ್ರೀ ಗುರುಲಿಂಗ ಜಂಗಮ ಮಹಾರಾಜರ ಹಾಗೂ ಶ್ರೀ ಭಾವೂಸಾಹೇಬ ಮಹಾರಾಜರ ಎರಡು ಪ್ರತೇಕ ಗೋಪುರಗಳುಳ್ಳ ದೊಡ್ಡ ದೇವಸ್ಥಾನವಿದೆ. ಈ ಎರಡು ಗೋಪುರಗಳುಳ್ಳ ಗರ್ಭಗುಡಿಯ ಮಧ್ಯೆಶ್ರೀ ಐನಾಥ ಪ್ರಭು ಮಹಾರಾಜರ ಗದ್ದುಗೆ ಇದೆ. ಸುಮಾರು 80 ವರ್ಷಗಳ ಪುರಾತನ ಕಟ್ಟಡವಾಗಿದೆ.
ಶ್ರೀ ಸ.ಸ.ಗಿರಿಮಲ್ಲೇಶ್ವರ ಮಹಾರಾಜ ಹಾಗೂ ಶ್ರೀ ಸ.ಸ.ಶಿವಪ್ರಭು ಮಹಾರಾಜರ ಎರಡು ಪ್ರತ್ಯೇಕ ಮಂದಿರ ಹಾಗೂ ಗೋಪುರಗಳಿವೆ.
ಈ ಎರಡು ಮಂದಿರಗಳ ನಡುವಿನ ಭವ್ಯ ಪ್ರಾಂಗಣದಲ್ಲಿ ಮಾರ್ಬಲ್ನಲ್ಲಿ ನಿರ್ಮಿಸಿರುವ ಶ್ರೀ ಗುರುಪುತ್ರೇಶ್ವರ ಮಹಾರಾಜರ ಮಂದಿರವಿದೆ.
ಶ್ರೀ ಶಿವಪ್ರಭು ಮಹಾರಾಜರ ಮಂದಿರದ ಒಳಾಂಗಣದಲ್ಲಿ ಶ್ರೀ ಜಗನ್ನಾಥ ಮಹಾರಾಜರ ಗದ್ದುಗೆ ಇದೆ. ಶ್ರೀ ಸ.ಸ.ಮಾಧವಾನಂದ ಪ್ರಭುಜೀ ಅವರ ಭವ್ಯ ದೇವಾಲಯ ನಿರ್ಮಾಣ ಹಂತದಲ್ಲಿದ್ದು, ಇದನ್ನು ಕೆಂಪು ಕಲ್ಲಿನಲ್ಲಿ ನಿರ್ಮಿಸಲಾಗಿದೆ.
ನೂರಾರು ಹಸುಗಳನ್ನು ಸಾಕಬಲ್ಲ ದೊಡ್ಡ ಗೋಶಾಲೆಯೂ ಈ ಮಠದಲ್ಲಿದೆ. ಸಾವಿರಾರು ಭಕ್ತರು ಸೇರಿ ಪ್ರಸಾದ ಸ್ವೀಕರಿಸುವ ದಾಸೋಹ ನಿಲಯವು ಇದೆ. ಭಕ್ತರ ಆಶ್ರಯಕ್ಕಾಗಿ ನೂತನ ಯಾತ್ರಿ ನಿವಾಸ ನಿರ್ಮಾಣ ಗೊಂಡಿದೆ.
ಶಾಖಾ ಮಠಗಳು
ಬದಲಾಯಿಸಿಶ್ರೀ ಕ್ಷೇತ್ರ ಇಂಚಗೇರಿ ಮಠದ ಶಾಖಾ ಮಠಗಳು ಹಾಗೂ ಭಜನಾ ಮನೆಗಳು ಅಸಂಖ್ಯಾತ. ಉತ್ತರ ಕರ್ನಾಟಕದ ಸುಮಾರು 100ಕ್ಕೂ ಹೆಚ್ಚು ಗ್ರಾಮ ಪಟ್ಟಣಗಳಲ್ಲಿ ಶ್ರೀ ಕ್ಷೇತ್ರದ ಶಾಖಾ ಮಠಗಳಿವೆ. ಸುಮಾರು 300 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಭಜನಾ ಮನೆಗಳಿವೆ.ಈ ಎಲ್ಲಾ ಶಾಖಾ ಮಠಗಳಲ್ಲಿ ದಿನ ನಿತ್ಯ ಪೂಜೆ -ಭಜನೆ -ನಿತ್ಯ ನಿಯಮಗಳು ನಡೆಯುತ್ತವೆ.
- ಶ್ರೀ ಕ್ಷೇತ್ರ ಹಿಪ್ಪರಗಿ ಮಠ
ಇದು ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲ್ಲೂಕು ಕೇಂದ್ರದಿಂದ ಸುಮಾರು 13 ಕಿ.ಮೀ. ದೂರದಲ್ಲಿರುವ ಕೃಷ್ಣಾ ನದಿ ದಡದಲ್ಲಿದೆ ಶ್ರೀ ಸದ್ಗುರು ಸಮರ್ಥ ಸಂಗಮೇಶ್ವರ ಮಹಾರಾಜರ ಗದ್ದುಗೆ ಇದೆ.ಈ ಶಾಖಾ ಮಠದಲ್ಲಿ ಶ್ರೀ ಸದ್ಗುರು ಸಂಗಮೇಶ್ವರ ಮಹಾರಾಜರ ಭವ್ಯ ಮಂದಿರವಿದ್ದು, ಇಲ್ಲಿ ನಿತ್ಯ ದಾಸೋಹ, ಭಜನೆ ನಡೆಯುತ್ತದೆ. ಪ್ರತಿ ವರ್ಷ ಇಲ್ಲಿ ಸಪ್ತಾಹ ನಡೆಯುತ್ತದೆ ಈ ಸಂದರ್ಭದಲ್ಲಿ ದೊಡ್ಡ ಜಾತ್ರೆಯೂ ನಡೆಯುತ್ತದೆ. ಇಲ್ಲಿ ಶ್ರೀ ಕಾಡಸಿದ್ದೇಶ್ವರ ದೇವಾಲಯವೂ ಇದ್ದು, ಶ್ರೀ ಶಿವಲಿಂಗಪ್ಪ ಮಹಾರಾಜರು ಗದ್ದುಗೆ ಇದೆ.
- ಗಿರೀಶ ಆಶ್ರಮ, ಹುಬ್ಬಳ್ಳಿ
ನಗರದ ಹೃದಯ ಭಾಗದಲ್ಲಿರುವ ಕಿಮ್ಸ್ ಆಸ್ಪತ್ರೆ ಆವರಣಕ್ಕೆ ಹೊಂದಿಕೊಂಡಂತೆ ವಿಶಾಲವಾದ,ಹಚ್ಚಹಸುರಿನ ಗಿಡ-ಮರಗಳ ನಡುವೆ ಶ್ರೀ ಗಿರೀಶ ಆಶ್ರಮ ಕಂಗೊಳಿಸುತ್ತದೆ. ಶ್ರೀ ಸ.ಸ.ಮಾಧವಾನಂದ ಪ್ರಭುಜೀಗಳು ಲಿಂಗೈಕ್ಯರಾದ ಪುಣ್ಯ ಕ್ಷೇತ್ರವಿದು. ಇಲ್ಲಿ ಎತ್ತರದ ಮೇಲೆ ದ್ಯಾನಾಶ್ರಮವಿದ್ದು, ಕೆಳಗೆ ಶ್ರೀ ಮಾಧವಾನಂದ ಪ್ರಭುಜೀ ಅವರ ಗದ್ದುಗೆ ಇದೆ. ದಾಸೋಹ ಗೃಹವೂ ಇದ್ದು ನಿತ್ಯ ಪೂಜೆ-ಭಜನೆ-ದಾಸೋಹ ನಡೆಯುತ್ತದೆ. ಪ್ರತಿ ವರ್ಷ ನವೆಂಬರ್ 2ರಂದು ಶ್ರೀಮಾಧವಾನಂದ ಪ್ರಭುಜೀ ಅವರ ಜನ್ಮದಿನ ದಿನಾಚರಣೆಯನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಒಂದು ತಿಂಗಳ ಪಾದಯಾತ್ರೆ ಕ್ರಮಿಸಿ, ಅಂದರೆ ಅಕ್ಟೋಬರ್2 ರಂದು ಮಹಾತ್ಮಾಗಾಂಧಿ ಜಯಂತಿ ದಿನದಂದು ಶ್ರೀಕ್ಷೇತ್ರ ಇಂಚಗೇರಿ ಮಠದಿಂದ ಆರಂಭವಾಗುವ ಪಾದಯಾತ್ರೆ ನವೆಂಬರ್ 2 ರಂದು ಇಲ್ಲಿ ಸಮಾರೋಪಗೊಳ್ಳುತ್ತದೆ ಬೃಹತ್ ಸಾರ್ವಜನಿಕ ಸಮಾರಂಭ ನಡೆಯುತ್ತದೆ. ಮಠದ ಎಲ್ಲಾ ಶಾಖಾ ಮಠಗಳಲ್ಲಿ ಪ್ರತಿ ವರ್ಷ ಸಪ್ತಾಹಗಳು ನಡೆಯುತ್ತಿದ್ದು, ಕೆಲ ಸಪ್ತಾಹಗಳ ಮಾಹಿತಿ ಈ ಕೆಳಗಿನಂತಿವೆ.
- ಕೊಟ್ಟಲಗಿ ಗ್ರಾಮದ ಶಾಖಾ ಮಠದಲ್ಲಿ ಪ್ರತಿ ಜನವರಿಯಲ್ಲಿ ಶ್ರೀ ಮಾಧವಾನಂದ ಪ್ರಭುಜೀ ಅವರ ಪುಣ್ಯತಿಥಿ ಸಪ್ತಾಹ.
- ಯಲ್ಲಾರಟ್ಟಿ ಗ್ರಾಮದ ಶಾಖಾ ಮಠದಲ್ಲಿ ಪ್ರತಿ ಜನವರಿಯಲ್ಲಿ ಶ್ರೀ ಸ.ಸ.ಗಿರಿಮಲ್ಲೇಶ್ವರ ಮಹಾರಾಜರ ಹಾಗೂ ಅವರ ಶಿಷ್ಯ ಬಸೆಟ್ಟೆಪ್ಪ ಮಹಾರಜರ ಸಪ್ತಾಹ.
- ನಾಗನೂರು ಗ್ರಾಮದಲ್ಲಿ ಜನವರಿಯಲ್ಲಿ ಶ್ರೀ ಮಾಧವಾನಂದರ ಸಪ್ತಾಹ.
- ಶಿವಾಪುರ ಗ್ರಾಮದಲ್ಲಿ ಶ್ರೀ ಸ.ಸ.ಶಿವಪ್ರಭು ಮಹಾರಾಜರ ಸಪ್ತಾಹ (ಜನವರಿಯಲ್ಲಿ).
- ಕುಡಚಿ ಗ್ರಾಮದಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾ ಸಪ್ತಾಹ ಫೆಭ್ರವರಿಯಲ್ಲಿ ನಡೆಯುತ್ತದೆ.
- ಪಾಮಲದಿನ್ನಿ ಗ್ರಾಮದಲ್ಲಿ ಶ್ರೀ ಸ.ಸ. ಸಂಗಮೇಶ್ವರ ಮಹಾರಾಜರ ಸಪ್ತಾಹ ಮಾರ್ಚ ತಿಂಗಳಲ್ಲಿ ನಡೆಯುತ್ತದೆ.
- ಹಿರೇಬೆಳ್ಳಿ ಕಟ್ಟಿ (ಬೈಲಹೊಂಗಲ ತಾಲ್ಲೂಕಿ) ನಲ್ಲಿ ಪ್ರತಿ ಮಾರ್ಚ ತಿಂಗಳಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಸಪ್ತಾಹ
- ವೆಂಕಟಾಪುರ (ಗೋಕಾಕ .ತಾಲ್ಲೂಕಿನಲ್ಲಿ) ಶ್ರೀ ಮಾಧವಾನಂದ ಪ್ರಭುಜೀ ಸಪ್ತಾಹ ಏಪ್ರಿಲ್ ಮಾಸದಲ್ಲಿ ನಡೆಯುತ್ತದೆ.
- ಖವಟಕೊಪ್ಪ (ತಾ.ಅಥಣಿಯಲ್ಲಿ) ಪ್ರತಿ ಏಪ್ರಿಲ್ ಮಾಸದಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಸಪ್ತಾಹ.
- ಖೋಜನವಾಡಿ (ಜತ್ ತಾಲ್ಲೂಕು , ಮಹಾರಾಷ್ಟ್ರ) ನಲ್ಲಿ ಸಪ್ತಾಹ ಮೇ ನಲ್ಲಿ ನಡೆಯುತ್ತದೆ.
- ಸಾವಳಗಿ (ತಾಲ್ಲೂಕು ಜಮಖಂಡಿ ) ಹಾಗೂ ಸಂಕೋನಟಿ ( ತಾಲ್ಲೂಕು ಅಧಣಿ )ಯಲ್ಲಿ ಮೇ ತಿಂಗಳಿನಲ್ಲಿ ಶ್ರೀ ಸ.ಸ. ಸಂಗಮೇಶ್ವರ ಮಹಾರಾಜರ ಸಪ್ತಾಹ ನಡೆಯುತ್ತದೆ.
- ಸಾವಳಗಿಯಲ್ಲಿ ಜೂನ್ ತಿಂಗಳಲ್ಲಿ ಶ್ರೀ ಸ.ಸ. ಗಿರಿಮಲ್ಲೇಶ್ವರ ಮಹಾರಾಜರ ಪರಮ ಶಿಷ್ಯ ಶ್ರೀ ರಾಯಪ್ಪ ಮಹಾರಾಜರು ಬೆಳಗಲಿ ಅವರ ಪುಣ್ಯತಿಥಿ ಸಪ್ತಾಹ ನಡೆಯುತ್ತದೆ.
- ಹಿಡಕಲ್ (ತಾಲ್ಲೂಕು ರಾಯಭಾಗ)ನಲ್ಲಿ ಸಪ್ತಾಹ.
- ಖೋಜನಟ್ಟಿ ಯಲ್ಲಿ ರಾಮಗೊಂಡಪ್ಪ ಬಸರಿ ಅವರ ಸಪ್ತಾಹ ಜೂನ್ ನಲ್ಲಿ ನಡೆಯುತ್ತದೆ.
- ರೆಡ್ಡೆರಟ್ಟಿ (ತಾಲ್ಲೂಕು ಅಥಣಿ) ಯಲ್ಲಿ ಆಗಸ್ಟ್ ತಿಂಗಳಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಸಪ್ತಾಹ.
- ಮಹಾಲಿಂಗಪೂರ (ತಾಲ್ಲೂಕು ಜಮಖಂಡಿ) ಯಲ್ಲಿ ಶ್ರೀ ಗಿರಿಮಲ್ಲೇಶ್ವರ ಮಹಾರಾಜರ ಸಪ್ತಾಹ.
- ಗುಲ್ಬರ್ಗಾದಲ್ಲಿ ಸಪ್ತಾಹ ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ.
- ಗುಜನಟ್ಟಿ (ತಾ.ಮೂಡಲಗಿ )ಶ್ರೀ ಮಾಧವಾನಂದ ಆಶ್ರಮ.
ಗಣ್ಯರ ಭೇಟಿ
ಬದಲಾಯಿಸಿಸ್ವಾತಂತ್ರ್ಯ ಸಂಗ್ರಾಮ, ಗೋರಕ್ಷಾ ಹೋರಾಟ, ಸರ್ವೋದಯ ಭಕ್ತಿ-ಧರ್ಮ ಪ್ರಚಾರದ ಕೇಂದ್ರ ಬಿಂದುವಾಗಿರುವ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ಅನೇಕ ಧಾರ್ಮಿಕ ಗುರುಗಳು, ಹಿರಿಯರು,ರಾಜಕೀಯ ಮುಖಂಡರು, ತಜ್ಞರು, ವಿದ್ವಾಂಸರು ಭೇಟಿ ನೀಡಿದ್ದಾರೆ.
ಅವರಲ್ಲಿ ಪ್ರಮುಖರೆಂದರೆ ಅಂದಿನ ಕೇಂದ್ರ ಗೃಹ ಖಾತೆ ಸಚಿವರಾದ ಶ್ರೀ ಸರ್ದಾರ ಬೂಟಾ ಸಿಂಗ್, ಅಂದಿನ ಮುಖ್ಯ ಮಂತ್ರಿಗಳಾದ ಎಸ್. ಎಮ್ .ಕೃಷ್ಣ, ಶ್ರೀ ಎನ್. ಧರ್ಮಸಿಂಗ್, ಶ್ರೀ ಎಸ್. ಬಂಗಾರಪ್ಪನವರು.
ವಿಧಾನಪರಿಷತ್ ಸಭಾಪತಿಗಳಾಗಿದ್ದ ಶ್ರೀ ಟಿ. ಬಿ. ಕಲ್ಮಣಕರ, ಸಚಿವರಾಗಿದ್ದ ಶ್ರೀ ಕೆ. ಹೆಚ್ . ಪಾಟೀಲ, ಶ್ರೀ ಬಿ. ಬಸವಲಿಂಗಪ್ಪ, ಶ್ರೀ ಸಿ. ಎಸ್. ನಾಡಗೌಡ, ಶ್ರೀ ಎಂ. ಎಲ್. ಉಸ್ತಾದ ಸೇರಿದಂತೆ ಅನೇಕ ಸಚಿವರು, ಶಾಸಕರುಗಳು ಭೇಟಿ ನೀಡಿದ್ದಾರೆ.
ಸರ್ವೋದಯದ ಶ್ರೀ ಸಿದ್ಧರಾಮ ಗುರುಜೀ, ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು (ವಿಜಾಪುರ), ಶ್ರೀ ರಾಧಕೃಷ್ಣಬಜಾಜ, ಸಂತ ವಿನೋಭಾ ಬಾವೆ ಅವರು ಭೇಟಿ ನಿಡಿದ್ದರು.
ಪ್ರಶಸ್ತಿ
ಬದಲಾಯಿಸಿಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಶ್ರೀ ಮಹದೇವಪ್ಪನವರಿಗೆ ಗೌರವವಾಗಿ ಮರಣೋತ್ತರ "ಕರ್ನಾಟಕ ಏಕೀಕರಣ ಪ್ರಶಸ್ತಿ"ಯನ್ನು ರಾಜ್ಯ ಸರ್ಕಾರ ಶ್ರೀ ಕ್ಷೇತ್ರ ಇಂಚಗೇರಿ ಮಠಕ್ಕೆ ನೀಡಿ ಗೌರವಿಸಿತ್ತು.
ಚಲನಚಿತ್ರ
ಬದಲಾಯಿಸಿಗಾಂಧೀಜಿ ನೇತಾಜಿ ಅವರ ಜೊತೆ ಸ್ವಾತಂತ್ರ್ಯಕ್ಕೆ ಹೋರಾಡಿದ ಕ್ರಾಂತಿಯೋಗಿಯಾಗಿರುವ ಹುಬ್ಬಳ್ಳಿಯ ಮಹಾದೇವಪ್ಪ ಅವರ ಜೀವನಕಥನ ಇದೀಗ ಸಿನಿಮಾವಾಗುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ.
ಕ್ರಾಂತಿಯೋಗಿ ಮಹಾದೇವರು ಸ್ವಾತಂತ್ರ್ಯಕ್ಕಾಗಿ ಭಾರತದ ಹೋರಾಟದ ಅಳಿಸಲಾಗದ ನಾಯಕರಾಗಿದ್ದು, ಬ್ರಿಟಿಷರ ವಿರುದ್ಧ ಹೋರಾಡಿದ ಮಾಧವಾನಂದ ಪ್ರಭುಜಿ(ಮಹದೇವಪ್ಪ ಮುರಗೋಡ) ಅವರ ಜೀವನದ ಪ್ರತಿಯೊಂದು ನಿಮಿಷವೂ ಸಾಮಾಜಿಕ ಉತ್ತಮತೆಗೆ ಸಮರ್ಪಿಸಿದರು , ಧೈರ್ಯ ಮತ್ತು ನಿರ್ಣಯದ ಅವರ ಸ್ಫೂರ್ತಿದಾಯಕವು ಇದೀಗ ಸಿನಿಮಾವಾಗುತ್ತಿದೆ.
ರಾಮ್ ಕುಮಾರ್ ಅವರು ಬಹಳ ವರ್ಷಗಳ ನಂತರ ಈ ಚಿತ್ರದ ಮೂಲಕ ಬಣ್ಣ ಹಚ್ಚುವ ಮೂಲಕ ಚಿತ್ರರಂಗಕ್ಕೆ ವಾಪಸ್ಸಾಗಿದ್ದು, ಈ ಬಾರಿ ಅವರು ಐತಿಹಾಸಿಕ ಪಾತ್ರವೊಂದಕ್ಕೆ ಜೀವ ತುಂಬುವ ಕೆಲಸವನ್ನು ಒಪ್ಪಿಕೊಂಡಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾದ ಹೆಸರು 'ಕ್ರಾಂತಿಯೋಗಿ ಮಹಾದೇವರು'. ಇದರ ನಿರ್ದೇಶನ ಮಾಡುತ್ತಿರುವವರು ಸಾಯಿಪ್ರಕಾಶ್. ಈ ಕಥೆಯ ನಾಯಕನನ್ನು ದೇವರು ಎಂದು ನಂಬಿದವರೂ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಇದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಷ್ಟೇ ಅಲ್ಲ, ಇವರು ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಟ ನಡೆಸಿದ ಕ್ರಾಂತಿಕಾರಿ ಕೂಡ ಹೌದು.
ನಿರ್ದೇಶಕ ಓಂ ಸಾಯಿಪ್ರಕಾಶ್ ಅವರ 101ನೇ ಸಿನಿಮಾ ಕ್ರಾಂತಿಕಾರಿ ಹಾಗೂ ಪವಾಡ ಪುರುಷ ಕುರಿತಾದ ಸಿನಿಮಾವಾಗಿರುವುದು ವಿಶೇಷವಾಗಿದ್ದು ಚಿತ್ರದಲ್ಲಿ ರಮೇಶ್ ಭಟ್, ಶಿವಕುಮಾರ್, ಸಿಹಿಕಹಿ ಚಂದ್ರು, ಗಣೇಶ್ ರಾವ್, ಡಿಂಗ್ರಿ ನಾಗರಾಜ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಮಾಧವನಂದ ಶೇಗುಣಸಿ ಕಥೆ, ಸಂಭಾಷಣೆ, ರಾಜ ರವಿಶಂಕರ್ ಸಹ ನಿರ್ದೇಶನ, ಜೆ ಜಿ ಕೃಷ್ಣ ಛಾಯಾಗ್ರಹಣ, ಬಿ ಬಲರಾಮ್ ಸಂಗೀತ, ಕೆ ಈಶ್ವರ್ ಸಾಹಸ ಈ ಚಿತ್ರಕ್ಕೆ ಒದಗಿಸಿದ್ದಾರೆ. ಮಹಾದೇವರ ಪರಮ ಭಕ್ತ ಶ್ರೀ ಶೈಲಗಾಣಿಗೇರ (ರಬಕವಿ) ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.[೩]
ಉಲ್ಲೇಖಗಳು
ಬದಲಾಯಿಸಿ- ↑ http://vijayavani.net/%E0%B2%B8%E0%B2%AA%E0%B3%8D%E0%B2%A4-%E0%B2%AE%E0%B2%B9%E0%B2%BE%E0%B2%B0%E0%B2%BE%E0%B2%9C%E0%B2%B0-%E0%B2%AA%E0%B3%81%E0%B2%A3%E0%B3%8D%E0%B2%AF%E0%B2%A7%E0%B2%BE%E0%B2%AE/
- ↑ "ಆರ್ಕೈವ್ ನಕಲು". Archived from the original on 2018-01-18. Retrieved 2018-07-27.
- ↑ https://m.dailyhunt.in/news/india/kannada/balkani+news-epaper-balnews/kraantiyogiya+jivanacharitre+eega+sinima-newsid-89317436