ಶ್ರೀ ಕ್ರಿಸ್ತಶರಣ ಸಮಾಜ ವಿಕಾಸ ಕೇಂದ್ರ

ಕಡೂರು ತಾಲೂಕಿನ ಬೀರೂರು ಹೋಬಳಿಯ ರೈಲ್ವೆ ನಿಲ್ದಾಣದ ಬಳಿ ಇರುವ 'ಶ್ರೀ ಕ್ರಿಸ್ತ ಶರಣ ಸಮಾಜ ವಿಕಾಸ ಕೇಂದ್ರ', ಸ್ವಾಮಿ ಜೋ ಮೇರಿ ಲೋಬೊರವರಿಂದ ಸ್ಥಾಪಿಸಲ್ಪಟ್ಟ ಒಂದು ಮಹೋನ್ನತ ಸಂಸ್ಥೆ. ಇದರ ಸ್ಥಾಪನೆಯಾದದ್ದು, ೧೯೭೮, ಅಕ್ಟೋಬರ್ ೧೩ರಂದು. ಆರಂಭದಲ್ಲಿ ಈ ಸಂಸ್ಥೆಗಿದ್ದುದು ಒಂದು ಬಾಡಿಗೆಯ ಕಟ್ಟಡ ಮಾತ್ರ. ಇಂದು ಇದು ತನ್ನದೇ ಆದ ಸ್ವಂತ ಕಟ್ಟಡವನ್ನು ಹೊಂದಿ ಆಳವಾಗಿ ಬೇರು ಬಿಟ್ಟು ನಿಂತಿದೆ.

ಮೊದಲು ಕಡೂರಿನ ನಿತ್ಯಾಧಾರ ಮಾತೆಯ ದೇವಾಲಯದ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿ ಜೋ ಮೇರಿ ಲೋಬೊರವರು ಅಲ್ಲಿಯ ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಬೀರೂರಿಗೆ ಬಂದು ಸಮಾಜ ಸೇವೆಗೆ ನಿಂತರು, ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಲಂಬಾಣಿಗಳ ಜೀವನ ಮಟ್ಟವನ್ನು ಸುಧಾರಿಸುವ ಮತ್ತು ಅವರನ್ನು ಮುಖ್ಯವಾಹಿನಿಗೆ ತರುವ ಮಹತ್ವಾಕಾಂಕ್ಷೆಯೊಂದಿಗೆ ತಮ್ಮ ಸಂಸ್ಥೆಯನ್ನು ಸಿದ್ಧಪಡಿಸಿದರು. ಓದು ಬರಹ ಗೊತ್ತಿಲ್ಲದ, ಶುಚಿತ್ವದ ಅರಿವೇ ಇಲ್ಲದ, ಅಜ್ಞಾನ,ಮೌಢ್ಯಗಳ ತವರಾದ ಇವರ ಅಭಿವೃದ್ಧಿಗಾಗಿ ಯಾರು ಶ್ರಮಿಸದಿರುವುದನ್ನು ಕಂಡು ಸ್ವಾಮಿ ಜೋರವರು, ಇವರ ಬದುಕಿಗೆ ಒಂದು ಆಧಾರವಾಗಲೇಬೇಕೆಂಬ ಛಲದಿಂದ ಈ ಸಂಸ್ಥೆಯನ್ನು ತಮ್ಮ ಸಂಗಡಿಗರೊಂದಿಗೆ ಸೇರಿ ಹುಟ್ಟು ಹಾಕಿದರು. ಓರ್ವ ಮಹಿಳೆಯನ್ನು ಜಾಗೃತಗೊಳಿಸಬೇಕಾದರೆ, ಅದು ಇನ್ನೋರ್ವ ಮಹಿಳೆಯಿಂದಲೇ ಸಾಧ್ಯ ಎನ್ನುವುದನ್ನು ಅರಿತ ಗುರು ಜೋ ಮೇರಿ ಲೋಬೊ ರವರು 'ಮಹಿಳೆಯರಿಂದ ಮಹಿಳೆಯರಿಗಾಗಿಯೆ...' ಎನ್ನುವ ಘೋಷಣೆಯೊಂದಿಗೆ ತಮ್ಮ ಕಾರ್ಯಕ್ಷೇತ್ರವನ್ನು ಮಹಿಳೆಯರತ್ತ ಕೊಂಡೊಯ್ದರು. ಅದಕ್ಕಾಗಿ ಮಹಿಳಾಮಣಿಗಳನ್ನು ಆಯ್ದು ಅವರಿಗೆ ವಿಶೇಷ ತರಬೇತಿಯನ್ನು ನೀಡಿ ಸಮಾಜ ಸೇವಾ ಕ್ಷೇತ್ರಕ್ಕೆ ಅವರನ್ನು ಇಳಿಸಿದರು. ಮೊದಮೊದಲು ಸಹಜವಾದ ಏಳುಬೀಳು, ಹಿನ್ನಡೆಗಳೂ ಸಂಭವಿಸಿದರೂ ಹಿಂಜರಿಯದೇ ಮುನ್ನಡಿಯಿಟ್ಟು ನಡೆದರು. ಅದರ ಪ್ರತಿಫಲ ಅವರ ಮುಖದಲ್ಲಿ ಗೋಚರಿಸಿದ ಗೆಲುವಿನ ನಗೆ. ಆ ಗೆಲುವಿನ ನಗೆಯ ಹಿಂದೆ ಅದೆಷ್ಟೋ ನೋವು, ಸಂಕಟ, ಅವಮಾನಗಳ ಹಿನ್ನಲೆಯಿದೆ ಎಂಬುದು ಅವರಿಗಷ್ಟೇ ಗೊತ್ತು.

ಕ್ರಿಸ್ತಶರಣವು ಮೊದಲು ೫ ಹಳ್ಳಿಗಳಲ್ಲಿ ಸೇವಾ ಚಟುವಟಿಕೆಗಳನ್ನು ಆರಂಭಿಸಿತು. ನಂತರ ಅದು ತನ್ನ ಕಾರ್ಯಕ್ಷೇತ್ರವನ್ನು ೨೧ ಹಳ್ಳಿಗಳಿಗೆ ವಿಸ್ತರಿಸಿಕೊಂಡಿತು. ಪ್ರತಿ ಗ್ರಾಮದ ಜನತೆಗೆ ಅದು ಕಲಿಸಿಕೊಡುವ ನಾಲ್ಕು ಮಂತ್ರಗಳು; ಸ್ವಾಭಿಮಾನ(Self Respect), ಸ್ವಚಿಂತನೆ(Self Thinking),ಸ್ವನಿರ್ವಹಣೆ(Self Governing) ಮತ್ತು ಸ್ವಾವಲಂಬನ(Self Reliance).

ಇವರ ಸೇವಾಕೈಂಕರ್ಯದಲ್ಲಿ ದೇವರು, ಧರ್ಮ, ಜಾತಿ, ಮತ ಇತ್ಯಾದಿ ಮಾತುಗಳಿಗೆ ಅವಕಾಶವಿಲ್ಲ. 'ಎಲ್ಲರೂ ಮಾನವರು' ಎಂಬುದಷ್ಟೇ ಅಲ್ಲಿಯ ಚಿಂತನೆ. "ಸರ್ವೇ ಜನಾಃ ಸುಖಿನೋಭವಂತು" -ಇದಷ್ಟೇ ಅವರ ಧ್ಯೇಯ ವಾಕ್ಯ.

"ಮಾನವನ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣಕ್ಕಿಂತ ಶ್ರೇಷ್ಟ ದಾನ ಇನ್ನೊಂದಿಲ್ಲ. ಅನ್ನದಾನಕ್ಕಿಂತಲೂ ಮಿಗಿಲಾದ ದಾನ ಶಿಕ್ಷಣದಾನ; Give a man a fish, he will be satisfied for a day. Teach him to fish, and he will be satisfied all his life" ಎಂಬ ದೃಷ್ಟಿಕೋನದಿಂದ ಸಮಾಜ ವಿಕಾಸ ಕೇಂದ್ರವು ಮಾನವನ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ.