ಶಂಕರನಾರಾಯಣರ ಪುಣ್ಯಕ್ಷೇತ್ರ

ದಾವಣಗೆರೆ ಜಿಲ್ಲೆಯಲ್ಲಿರುವ ಹರಿಹರ ಪ್ರಮುಖ ಪಟ್ಟಣ. ಬೆಂಗಳೂರಿಗೆ 227 ಕಿಲೋ ಮೀಟರ್ ದೂರದಲ್ಲಿರುವ ಈ ಪಟ್ಟಣದಲ್ಲಿ 1223ರಲ್ಲಿ ನಿರ್ಮಿಸಿದರೆನ್ನಲಾದ ಹೊಯ್ಸಳ ಶೈಲಿಯ ಅತ್ಯಂತ ಪ್ರಾಚೀನವಾದ ಹರಿಹರೇಶ್ವರ ಅಥವಾ ಶಂಕರನಾರಾಯಣ ದೇವಾಲಯವಿದೆ. ಈ ದೇವಾಲಯ ಸಹ ಮಿಕ್ಕೆಲ್ಲ ಹೊಯ್ಸಳ ದೇವಾಲಯಗಳಂತೆಯೇ ಪ್ರವೇಶದ್ವಾರ, ಮುಖಮಂಟಪ, ಗರುಡಗಂಬ, ಸುಕನಾಸಿ, ಭುವನೇಶ್ವರಿ, ಜಾಲಂದ್ರಗಳನ್ನು ಒಳಗೊಂಡಿದೆ.

ಗರ್ಭಗುಡಿಯಲ್ಲಿ ಹರಿಹರರ ಸುಂದರ ಮೂರ್ತಿಯಿದೆ. ಅರ್ಧ ಹರನ ರೂಪ, ಇನ್ನರ್ಧ ಹರಿಯ ರೂಪವಿರುವ ಈ ಸುಂದರ ಮೂರ್ತಿಯ ನಾಲ್ಕು ಕೈಗಳ ಪೈಕಿ ಎರಡರಲ್ಲಿ ತ್ರಿಶೂಲ ಹಾಗೂ ಚಕ್ರವಿದೆ. ಇನ್ನೆರೆಡು ಕೈಗಳ ಪೈಕಿ ಒಂದರಲ್ಲಿ ಶಂಖು ಹಾಗೂ ಅಭಯ ಮುದ್ರೆಯಿದೆ. ದೇವಾಲಯದ ಭುವನೇಶ್ವರಿಗಳಲ್ಲಿನ ಕಲಾಶ್ರೀಮಂತಿಕೆ ಮನಸೆಳೆಯುತ್ತದೆ. ಗರ್ಭಗೃಹದ ಮುಂದಿನ ಹಜಾರದಲ್ಲಿರುವ ನುಣುಪಾದ ಕಂಬಗಳು ಮನಮೋಹಕವಾಗಿವೆ.

ದೇವಾಲಯದ ಭಿತ್ತಿಗಳ ಪಟ್ಟಿಕೆಗಳಲ್ಲಿ ಸೂಕ್ಷ್ಮ ಕಲಾಕೆತ್ತನೆಯಿದೆ. ದೇವಾಲಯ ಗೋಪುರಗಳ ಸಾಲು, ನೃತ್ಯಭಂಗಿಯಲ್ಲಿರುವ ಮದನಿಕೆಯರು, ಹೂಬಳ್ಳಿಗಳಿವೆ. ದೇವಾಲಯದ ಒಳಗೆ ನುಣುಪಾದ ಕಂಬಗಳಿವೆ. ಇಲ್ಲಿ ಹರಿಹರ ರೂಪದಲ್ಲಿ ಶಂಕರನಾರಾಣರು ಬಂದು ನೆಲೆಸಿದ್ದೇಕೆ ಎಂಬ ಬಗ್ಗೆ ಸ್ಥಳಪುರಾಣ ಹೀಗೆ ಸಾರುತ್ತದೆ.

ತುಂಗಭದ್ರಾ ನದಿ ದಂಡೆಯ ಮೇಲಿರುವ ಈ ಊರಿನಲ್ಲಿ ಹಿಂದೆ ಇಲ್ಲಿ ಗುಹಾಸುರನೆಂಬ ರಾಕ್ಷಸನಿದ್ದ. ಆತ ತನ್ನದೇ ಆದ ಸಾಮ್ರಾಜ್ಯ ಸ್ಥಾಪಿಸಿ ಈ ಪಟ್ಟಣವನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡಿದ್ದ. ಗುಹಾಸುರ ಬ್ರಹ್ಮನನ್ನು ಕುರಿತು ದೀರ್ಘ ತಪವನ್ನಾಚರಿಸಿ ತನಗೆ ಸಾವೇ ಬಾರದಂತೆ ವರ ನೀಡೆಂದು ಬೇಡಿದ. ನರರಿಗೆ ಅಮರತ್ವವು ಸಲ್ಲ. ಬೇರೇನಾದರೂ ವರ ಕೇಳಿಕೋ ಎಂದಾಗ, ಗುಹಾಸುರ ತನಗೆ ಪ್ರತ್ಯೇಕವಾಗಿ ಹರಿಯಿಂದಲಾಗಲೀ, ಹರನಿಂದಲಾಗಲೀ ಸಾವು ಬಾರದಂತೆ ವರ ನೀಡೆಂದ. ಬ್ರಹ್ಮ ತಥಾಸ್ತು ಎಂದ.

ಹೀಗೆ ವರದ ಬಲದಿಂದ ಮದೋನ್ಮತ್ತನಾದ ಆ ಅಸುರ, ತನಗಿನ್ನು ಅಳಿವಿಲ್ಲವೆಂದು ನರರನ್ನೂ, ದೇವಾನು ದೇವತೆಗಳನ್ನೂ ಪರಿಪರಿಯಾಗಿ ಹಿಂಸಿಸತೊಡಗಿದ. ಗುಹಾಸುರನ ಉಪಟಳ ವಿಪರೀತವಾದಾಗ ಶಿಷ್ಟರಕ್ಷಣೆ ಹಾಗೂ ದುಷ್ಟ ಶಿಕ್ಷಣೆಗಾಗಿ ಶಿವ ಮತ್ತು ವಿಷ್ಣು ಇಬ್ಬರೂ ಒಂದುಗೂಡಿ ಹರಿಹರ ರೂಪತಾಳಿ ರಾಕ್ಷಸನನ್ನು ಕೊಂದು ಹಾಕಿದರು. ಗುಹಾಸುರ ಶಂಕರನಾರಾಯಣರಿಂದ ಸಾಯುವ ಮುನ್ನ ಕ್ಷೇತ್ರಕ್ಕೆ ತನ್ನ ಹೆಸರನ್ನು ಇಡಬೇಕೆಂದು ಕೇಳಿಕೊಂಡದ್ದರಿಂದ ಇದಕ್ಕೆ ಗುಹಾರಣ್ಯಕ್ಷೇತ್ರ ವೆಂಬ ಹೆಸರು ಬಂದಿತ್ತು. ಆದರೆ, ಶಂಕರ ನಾರಾಯಣರು ಹರಿಹರರೂಪ ತಾಳಿದ ಈ ಕ್ಷೇತ್ರ ಹರಿಹರವೆಂದೇ ಖ್ಯಾತವಾಗಿದೆ.

ಇಲ್ಲಿರುವ ದೇವಾಲಯದಲ್ಲಿ ಅನೇಕ ಶಾಸನಗಳೂ ದೊರೆತಿವೆ. ಈ ಪುಣ್ಯಕ್ಷೇತ್ರದಲ್ಲಿರುವ ದೇವಾಲಯಕ್ಕೆ ಚಾಳುಕ್ಯರು, ಹೊಯ್ಸಳರು, ವಿಜಯನಗರದ ರಾಜರು, ಸೇವುಣರು ಭಕ್ತಿಯಿಂದ ನಡೆದುಕೊಂಡು ಧರ್ಮ ದತ್ತಿಗಳನ್ನು ಬಿಟ್ಟರೆಂದು ಶಾಸನಗಳು ಸಾರುತ್ತವೆ.

ಶಿವ -ವಿಷ್ಣುವಿನ ನಡುವೆ ಯಾವುದೇ ಭೇದವಿಲ್ಲ. ಶಂಕರ ನಾರಾಯಣರಿಬ್ಬರೂ ಒಬ್ಬರೇ ಎಂದು ಸಾರುತ್ತಿದೆ.