ವಿಶಾಖಪಟ್ಟಣ ಅನಿಲ ದುರಂತ

ಅನಿಲ‌ ಸೋರಿಕೆ ಅಪಘಾತ

ವಿಶಾಖಪಟ್ಟಣಂ ಅನಿಲ ಸೋರಿಕೆ ಕೈಗಾರಿಕಾ ಸ್ಥಾವರದಲ್ಲಿ ನಡೆದ ಆಕಸ್ಮಿಕ ಅಪಘಾತವಾಗಿದ್ದು, ಭಾರತದ ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣಂ(ವಿಝಾಗ್ ಎಂದೂ ಹೆಸರಿದೆ) ಹೊರವಲಯದಲ್ಲಿರುವ, ಗೋಪಾಲಪಟ್ಟಣಂ ಬಳಿಯ ಆರ್.ಆರ್.ವೆಂಕಟಪುರಂ ಗ್ರಾಮದ ಎಲ್.ಜಿ. ಪಾಲಿಮರ್ಸ್ ರಾಸಾಯನಿಕ ಸ್ಥಾವರದಲ್ಲಿ ಮೇ ೭, ೨೦೨೦ರ ಮುಂಜಾನೆ ಸಂಭವಿಸಿತು. ಸೋರಿಕೆಯಾದ ಅನಿಲವು ಸುತ್ತಲಿನ ಸುಮಾರು ೩ ಕಿಲೋಮೀಟರ್ (೧.೯ ಮೈಲಿ) ವ್ಯಾಪ್ತಿಯಲ್ಲಿನ ಪ್ರದೇಶಗಳು ಮತ್ತು ಹಳ್ಳಿಗಳಿಗೆ ಹರಡಿತು. ಮೇ ೮ ರ ಸಂಜೆ ೫ ರ ಹೊತ್ತಿಗೆ ಸಿಕ್ಕ ಮಾಹಿತಿಯ ಪ್ರಕಾರ, ೧೩ ಮಂದಿ ಮೃತಪಟ್ಟಿದ್ದು, ೧೦೦೦ಕ್ಕೂ ಅಧಿಕ ಮಂದಿ ಅನಿಲದ ದುಷ್ಪರಿಣಾಮಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ದುರ್ಘಟನೆಗೆ ಸ್ಟೆರೈನ್ ಅನಿಲವೇ ಕಾರಣ ಎಂದು ತಿಳಿದುಬಂದಿದೆ[].

ವಿಶಾಖಪಟ್ಟಣ ಅನಿಲ ದುರಂತ
ದಿನಾಂಕ೭ನೇ ಮೇ ೨೦೨೦
ಸಮಯಮುಂಜಾನೆ ೩.೦೦ (ಸ್ಥಳೀಯ ಕಾಲಮಾನ)
ಸ್ಥಳಆರ್ ಆರ್ ವೆಂಕಟಾಪುರಂ, ವಿಶಾಖಪಟ್ಟಣ, ಆಂಧ್ರಪ್ರದೇಶ.
ಭೌಗೋಳಿಕ ನಿರ್ದೇಶಾಂಕಗಳು17°45′19″N 83°12′32″E / 17.75528°N 83.20889°E / 17.75528; 83.20889
ಕಾರಣಸ್ಟೈರಿನ್ ರಾಸಾಯನಿಕ
ಮರಣ೧೩
ಸಾಮಾನ್ಯ ಗಾಯ೧೦೦೦ಕ್ಕಿಂತ ಹೆಚ್ಚು

ಸಂಸ್ಥೆ

ಬದಲಾಯಿಸಿ

೧೯೬೧ರಲ್ಲಿ ಸ್ಥಾಪಿಸಲಾದ ಎಲ್‌ಜಿ ಪಾಲಿಮರ್ಸ್ ಸ್ಥಾವರಕ್ಕೆ ಪ್ರಾರಂಭದಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಎಂದು ಹೆಸರಿತ್ತು. ೧೯೭೮ರಲ್ಲಿ, ಇದನ್ನು ಮೆಕ್‌ಡೊವೆಲ್ & ಕಂ.ನೊಂದಿಗೆ ವಿಲೀನಗೊಳಿಸಲಾಯಿತು. ೧೯೯೭ನೇ ಇಸವಿಯಲ್ಲಿ ಈ ಸಂಸ್ಥೆಯನ್ನು ದಕ್ಷಿಣ ಕೊರಿಯಾ ಮೂಲದ ಎಲ್‌ಜಿ ಕೆಮ್ ಸ್ವಾಧೀನಪಡಿಸಿಕೊಂಡು, ಎಲ್‌ಜಿ ಪಾಲಿಮರ್ಸ್ ಇಂಡಿಯಾ ಎಂದು ಮರುನಾಮಕರಣ ಮಾಡಿತು[].

ಘಟನೆಯ ಹಿನ್ನೆಲೆ

ಬದಲಾಯಿಸಿ

ಕೋವಿಡ್ ೧೯ ಸಾಂಕ್ರಾಮಿಕದ ಕಾರಣದಿಂದ ಮುಚ್ಚಲಾಗಿದ್ದ ಈ ಸ್ಥಾವರವನ್ನು ೭ನೇ ಮೇಯಂದು ಮತ್ತೆ ತೆರೆಯಲಾಯಿತು. ಸುಮಾರು ೨೦೦೦ ಮೆಟ್ರಿಕ್ ಟನ್‌ನಷ್ಟು ಸ್ಟೆರೈನ್ ರಾಸಾಯನಿಕವನ್ನು ಲಾಕ್‌ಡೌನ್‌ ಆಗುವ ಮುನ್ನವೇ ಸಂಗ್ರಹಿಸಿ ಇಡಲಾಗಿತ್ತು. ಮುಂಜಾನೆ ಸುಮಾರು ೨.೩೦-೩.೦೦ ರ ಸಮಯದಲ್ಲಿ ಅಲ್ಲಿ ನಿರ್ವಹಣಾ ಚಟುವಟಿಕೆಗಳು ನಡೆಯುತ್ತಿತ್ತು. ಟ್ಯಾಂಕ್‌ಗಳ ಶೈತ್ಯೀಕರಣ ಘಟಕದಲ್ಲಿನ ತಾಂತ್ರಿಕ ದೋಷದಿಂದಾಗಿ ಉಷ್ಣಾಂಶವು ಏರಿತು. ಇದರಿಂದಾಗಿ ದ್ರವ ರಾಸಾಯನಿಕವು ಅನಿಲರೂಪಕ್ಕೆ ತಿರುಗಿ ಟ್ಯಾಕ್‌ನೊಳಗೆ ಉತ್ಪತ್ತಿಯಾದ ಅಧಿಕ ಒತ್ತಡದಿಂದಾಗಿ ಸೋರಲು ಆರಂಭವಾಯಿತು ಮತ್ತು ಹತ್ತಿರದ ಪ್ರದೇಶಗಳಿಗೆ ಹರಡಲು ಪ್ರಾರಂಭವಾಯಿತು[].

ರಾಸಾಯನಿಕ ಪದಾರ್ಥ

ಬದಲಾಯಿಸಿ

ಸ್ಟೆರೈನ್ ಒಂದು ಬಣ್ಣರಹಿತ ರಾಸಾಯನಿಕವಾಗಿದ್ದು, ಇದನ್ನು ಪಾಲಿಸ್ಟೆರೈನ್ ಪ್ಲಾಸ್ಟಿಕ್, ರೆಗ್ಸಿನ್, ಫೈಬರ್ ಗಾಜು, ರಬ್ಬರ್ ಮತ್ತಿತರ ಉತ್ಪನ್ನಗಳಲ್ಲಿ ಬಳಸುತ್ತಾರೆ. ಅಲ್ಲದೆ ಪ್ಯಾಕೇಜಿಂಗ್ ಸಾಮಾಗ್ರಿ, ಪ್ಲಾಸ್ಟಿಕ್ ಪೈಪು, ಅಟೊಮೊಬೈಲ್ ಬಿಡಿಭಾಗಗಳು- ಇವುಗಳ ತಯಾರಿಕೆಯಲ್ಲಿಯೂ ಸ್ಟೆರೈನ್ ಅನ್ನು ಬಳಸಲಾಗುತ್ತದೆ.

ಸಾಮಾನ್ಯ ಕೊಠಡಿ ಉಷ್ಣತೆಯಲ್ಲಿ (೨೦-೨೨ ಡಿಗ್ರಿ ಸೆಲ್ಷಿಯಸ್ ಅಥವಾ ೬೮-೭೨ ಡಿಗ್ರಿ ಫ಼್ಯಾರನ್‌ಹೈಟ್) ಈ ರಾಸಾಯನಿಕವು ದ್ರವರೂಪದಲ್ಲಿ ಇರುತ್ತದೆ. ಈ ಉಷ್ಣತೆಯಲ್ಲಿ ಸ್ವಲ್ಪಮಟ್ಟಿನ ಹೆಚ್ಚಳವಾದರೂ ಸಹ ಈ ರಾಸಾಯನಿಕವು ಅನಿಲರೂಪಕ್ಕೆ ತಿರುಗುತ್ತದೆ.

ದುಷ್ಪರಿಣಾಮ

ಬದಲಾಯಿಸಿ

ಸೋರಿಕೆಯಾದ ಸ್ಟೈರೀನ್ ರಾಸಾಯನಿಕವು, ಸುತ್ತಲಿನ ಸುಮಾರು ೩ ಕಿಲೋಮೀಟರ್ (೧.೯ ಮೈಲಿ) ವ್ಯಾಪ್ತಿಯಲ್ಲಿನ ಐದು ಹಳ್ಳಿಗಳ(ಆರ್ ಆರ್. ವೆಂಕಟಪುರಂ, ಪದ್ಮಪುರಂ, ಬಿಸಿ ಕಾಲೋನಿ, ಗೋಪಾಲಪಟ್ಟಣಂ ಮತ್ತು ಕಂಪಾರಪಾಳ್ಯಂ) ಜನರು ಮತ್ತು ಪ್ರಾಣಿಗಳ ಮೇಲೆ ತೀವ್ರತರವಾದ ದುಷ್ಪರಿಣಾಮವನ್ನು ಉಂಟುಮಾಡಿತು. ನೂರಾರು ಜನರಿಗೆ ಉಸಿರಾಟದ ತೊಂದರೆ ಮತ್ತು ಕಣ್ಣು ಸುಡುವ ಅನುಭವವಾಯಿತು. ಅನಿಲದ ಪರಿಣಾಮದಿಂದಾಗಿ ಅನೇಕರು, ಪ್ರಜ್ಞಾಹೀನವಾಗಿ ನೆಲದ ಮೇಲೆ ಬಿದ್ದಿರುವುದು ಕಂಡುಬಂತು. ಆರಂಭಿಕ ಅಂದಾಜಿನ ಪ್ರಕಾರ, ಕನಿಷ್ಠ ೧೧ ಮಂದಿ ಸಾವನ್ನಪ್ಪಿದ್ದಾರೆ ಮತ್ತು ೨೦-೨೫ ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಮೇ ೫ರ ಸಂಜೆ ೫ರ ಹೊತ್ತಿಗೆ (ಸ್ಥಳೀಯ ಕಾಲಮಾನ), ಸಾವಿನ ಸಂಖ್ಯೆ ೧೩ಕ್ಕೆ ಏರಿತು. ಸುಮಾರು ೧೦೦೦ಕ್ಕೂ ಅಧಿಕ ಮಂದಿ ಅನಿಲದ ದುಷ್ಪ್ರಭಾವಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ[].

ಮುಂಜಾಗರೂಕತಾ ಕ್ರಮಗಳು

ಬದಲಾಯಿಸಿ

ಅನಿಲವು ಇನ್ನಷ್ಟು ದೂರದವರೆಗೆ ಹರಡುವುದನ್ನು ನಿಯಂತ್ರಿಸಲು ಕೇಂದ್ರ ಸರಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ದುರ್ಘಟನಾ ಸ್ಥಳಕ್ಕೆ ರವಾನಿಸಿತು. ಜೊತೆಗೆ ಅನಿಲವನ್ನು ನಿಷ್ಕ್ರಿಯಗೊಳಿಸಲು ಸುಮಾರು ೫೦೦ ಕೆಜಿಯಷ್ಟು ಪ್ಯಾರಾ ಟರ್ಟಿಯರಿ ಬ್ಯೂಟೆಲ್ ಕ್ಯಾಟೆಕಾಲ್ ರಾಸಾಯನಿಕವನ್ನು ಗುಜರಾತಿನ ವಾಪಿಯಿಂದ ದಾಮನ್‍ಗೆ, ಅಲ್ಲಿಂದ ದುರ್ಘಟನಾ ಸ್ಥಳಕ್ಕೆ ರವಾನಿಸಲಾಯಿತು[].

ಮುಂಜಾಗರೂಕತಾ ಕ್ರಮವಾಗಿ ೩ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸವಾಗಿರುವ ಸುಮಾರು ೨೦೦-೨೫೦ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ಮಾಧ್ಯಮದಲ್ಲಿ ವರದಿಯಾದಂತೆ, ಅಸ್ವಸ್ಥರಾಗಿರುವ ೩೦೦ ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ[]..

ಪರಿಹಾರ

ಬದಲಾಯಿಸಿ

ದುರ್ಘಟನೆಯಿಂದ ತೊಂದರೆಗೆ ಒಳಗಾದವರಿಗೆ ಆಂಧ್ರಪ್ರದೇಶ ರಾಜ್ಯದ ಮುಖ್ಯಮಂತ್ರಿ ವೈ ಎಸ್ ಜಗಮೋಹನ್ ರೆಡ್ಡಿಯವರು ಪರಿಹಾರ ಮೊತ್ತವನ್ನು ಘೋಷಿಸಿದ್ದು, ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ೧ ಕೋಟಿ ರೂ., ಗಂಭೀರ ಅಸ್ವಸ್ಥರಾಗಿ ವೆಂಟಿಲೇಟರ್‌ನಲ್ಲಿರುವವರಿಗೆ ೧೦ ಲಕ್ಷ ರೂ., ಸಾಮಾನ್ಯ ಚಿಕಿತ್ಸೆ ಪಡೆಯುತ್ತಿರುವವರಿಗೆ ೧ ಲಕ್ಷ ರೂ., ಪರಿಹಾರಮೊತ್ತವನ್ನು ನೀಡಲಾಗುತ್ತದೆ[].

ಕಾನೂನು ಕ್ರಮ

ಬದಲಾಯಿಸಿ

ಸ್ಥಳೀಯ ಗೋಪಾಲಪಟ್ಟಣಂ ಪೋಲಿಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ಭಾರತೀಯ ದಂಡಸಂಹಿತೆಯ

  • ಸೆಕ್ಷನ್ ೨೭೮(ವಾತಾವರಣವನ್ನು ಕಲುಷಿತಗೊಳಿಸಿ ಆರೋಗ್ಯಕ್ಕೆ ಹಾನಿ ಮಾಡಿದ್ದು),
  • ಸೆಕ್ಷನ್ ೨೮೪(ವಿಷಕಾರಿ ವಸ್ತುಗಳ ಬಗ್ಗೆ ನಿರ್ಲಕ್ಷ್ಯ),
  • ಸೆಕ್ಷನ್ ೩೩೭(ಬೆಂಕಿ ಮತ್ತು ಬೆಂಕಿ ಹರಡುವ ವಸ್ತುವಿನ ಬಗ್ಗೆ ನಿರ್ಲಕ್ಷ್ಯ),
  • ಸೆಕ್ಷನ್ ೩೩೭(ಔದಾಸೀನ್ಯದಿಂದಾಗಿ ಸಾರ್ವಜನಿಕರ ಜೀವಹಾನಿ),
  • ಸೆಕ್ಷನ್ ೩೦೪-೨(ಅಪರಾಧವಾಗಬಹುದಾದ ಆದರೆ ಕೊಲೆಗೆ ಸಮನಾದುದಲ್ಲದ ನರಹತ್ಯೆ)-

ಇವಿಷ್ಟು ಸೆಕ್ಷನ್‌ಗಳ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ[]. ಅಲ್ಲದೆ, ದೇಶದ ಹಸಿರು ನ್ಯಾಯಾಧಿಕರಣವು ೫೦ ಕೋಟಿ ಮಧ್ಯಂತರ ಜುಲ್ಮಾನೆಯನ್ನು ವಿಧಿಸಿದೆ[].

ಅಪಘಾತದ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ಜಾರಿಮಾಡಿತು. ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಮತ್ತು ದುರ್ಘಟನಾ ಪೀಡಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆಗಳ ಕುರಿತು ವಿವರವಾದ ವರದಿಯನ್ನು ತನಗೆ ಸಲ್ಲಿಸಬೇಕೆಂದು ಒತ್ತಾಯಿಸಿತು.

ಉಲ್ಲೇಖಗಳು

ಬದಲಾಯಿಸಿ
  1. ಉದಯವಾಣಿ, ದೈನಿಕ. "ವಿಷಾನಿಲ ಸೋರಿಕೆ: ಮಗು ಸೇರಿದಂತೆ ಐವರು ಸಾವು: 200ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು". udayavani.com. Retrieved 10 May 2020.
  2. ವಿಜಯವಾಣಿ, ದೈನಿಕ. "ವಿಷಾನಿಲ ದುರಂತ ಸಂಭವಿಸಿದ ಬಹುರಾಷ್ಟ್ರೀಯ ಕಂಪನಿ ಎಲ್‌ಜಿ ಪಾಲಿಮರ್ಸ್ ಕಾರ್ಖಾನೆಯ ಇತಿಹಾಸ ಗೊತ್ತಾ?". vijayavani.net. Retrieved 10 May 2020.
  3. Times Of India, Daily. "Glitch in refrigeration unit led to Vizag gas leak: Official". timesofindia.indiatimes.com.
  4. news, Vijayavani. "Vijayavani". ವಿಜಯವಾಣಿ.ನೆಟ್. ವಿಜಯವಾಣಿ. Retrieved 10 May 2020. {{cite web}}: |last1= has generic name (help)
  5. First Post, First Post. "Vizag gas leak Updates: Andhra govt to airlift 500 kgs of PTBC from Daman to neutralise chemical; special NDRF team to fly in from Pune". firstpost.com. Retrieved 10 May 2020.
  6. First Post, First Post. "Vizag gas leak Updates: Andhra govt to airlift 500 kgs of PTBC from Daman to neutralise chemical; special NDRF team to fly in from Pune". firstpost.com. Retrieved 10 May 2020.
  7. ವಿಜಯವಾಣಿ, ದೈನಿಕ. "ವಿಷಾನಿಲ ದುರಂತ: ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ". vijayavani.net.
  8. ವಿಜಯವಾಣಿ, ದೈನಿಕ. "ವೈಜಾಗ್ ಅನಿಲ ಸೋರಿಕೆ: ಎಲ್‌ಜಿ ಪಾಲಿಮರ್ಸ್ ವಿರುದ್ಧ ದಾಖಲಾಯಿತು ಎಫ್‌ಐಆರ್". vijayavani.net. Retrieved 10 May 2020.
  9. ಉದಯವಾಣಿ, ದೈನಿಕ. "ಎಲ್‌ಜಿ ಪಾಲಿಮರ್ಸ್‌ಗೆ 50 ಕೋಟಿ ದಂಡ". udayavani.com. Retrieved 10 May 2020.