ಸರ್ ವಿಲಿಯಮ್ ಜೋನ್ಸ್‌ (1746-1794). ಆಂಗ್ಲ ವಿದ್ವಾಂಸ. ಬಾಲ್ಯದಿಂದಲೂ ಭಾಷೆ ಸಾಹಿತ್ಯಗಳಲ್ಲಿ ಅಭಿರುಚಿ ತೋರಿ ಇಂಗ್ಲಿಷ್, ಫ್ರೆಂಚ್, ಲ್ಯಾಟಿನ್, ಗ್ರೀಕ್, ಪರ್ಷಿಯನ್ ಮತ್ತು ಸಂಸ್ಕೃತ ವಾಙ್ಮಯಗಳಲ್ಲಿ ಪಾಂಡಿತ್ಯ ಗಳಿಸಿದ. ನ್ಯಾಯಾಂಗದ ಅಧ್ಯಯನ ಇವನಿಗೆ ಪ್ರಿಯವಾಗಿತ್ತು. ಸಸ್ಯಶಾಸ್ತ್ರ ಗಣಿತಶಾಸ್ತ್ರಗಳ ಜ್ಞಾನವನ್ನೂ ವಿಶೇಷವಾಗಿ ಪಡೆದಿದ್ದ. ಅಷ್ಟೇ ಅಲ್ಲದೆ ಭಾರತೀಯ ಪಾಶ್ಚಾತ್ಯ ಸಂಗೀತಗಳ ತುಲನಾತ್ಮಕ ಅಧ್ಯಯನ ಕ್ಷೇತ್ರದಲ್ಲಿ ಅಗ್ರೇಸರನೆನಿಸಿಕೊಂಡಿದ್ದ.

ಆರಂಭಿಕ ಬದುಕು

ಬದಲಾಯಿಸಿ

ಜೋನ್ಸನ ಬಾಲ್ಯದ ವಿದ್ಯಾಭ್ಯಾಸ ಹ್ಯಾರೋದ ಲೋಯರ್ ಸ್ಕೂಲಿನಲ್ಲೂ ಅನಂತರ ಆಕ್ಸ್‍ಫರ್ಡಿನ ಯೂನಿವರ್ಸಿಟಿ ಕಾಲೇಜಿನಲ್ಲೂ ನಡೆಯಿತು. 1766ರಲ್ಲಿ ಆ ಕಾಲೇಜಿನ ಫಲೋಷಿಷ್ ಇವನಿಗೆ ದೊರಕಿತು. ಲಂಡನಿನ ರಾಯಲ್ ಸೊಸೈಟಿಯ ಫೆಲೋ ಪದವಿ 1772ರಲ್ಲೂ ಸುಪ್ರಸಿದ್ಧ ಆಂಗ್ಲ ಸಾಹಿತಿ ಸ್ಯಾಮುಯಲ್ ಜಾನ್ಸನನ ಖ್ಯಾತ ಕ್ಲಬ್ಬಿನ ಸದಸ್ಯತ್ವ ಹಾಗೂ ಆಕ್ಸ್‍ಫರ್ಡಿನ ಎಂ.ಎ. ಪದವಿಯುವು 1773ರಲ್ಲೂ ಲಭಿಸಿದುವು. ಈ ಅವಧಿಯಲ್ಲಿ ನ್ಯಾಯಾಂಗ ಶಿಕ್ಷಣಪಡೆದು 1774ರಲ್ಲಿ ವಕೀಲಿವೃತ್ತಿಯನ್ನು ಸ್ವಲ್ಪಕಾಲ ಕೈಗೊಂಡ. 1780ರಲ್ಲಿ ರಾಜಕೀಯವನ್ನು ಪ್ರವೇಶಿಸಿ ಕಾರಣಾಂತರಗಳಿಂದ ಅಲ್ಲಿ ಸೋಲನ್ನನುಭವಿಸಿದರೂ ತನ್ನ ವಿದ್ವತ್ತೆಯನ್ನು ಮುಂದುವರಿಸಿಕೊಂಡು ಬಂದ.

ಭಾರತಕ್ಕೆ ಬಂದ ಮೇಲೆ

ಬದಲಾಯಿಸಿ

ಭಾರತಕ್ಕೆ ಬಂದು ಅಲ್ಲಿನ ಭಾಷೆ, ಸಾಹಿತ್ಯ, ಸಂಸ್ಕೃತಿ ಮುಂತಾದವನ್ನು ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳಬೇಕೆಂಬ ಹಂಬಲ ಜೋನ್ಸ್‍ಗೆ ಉತ್ಕಟವಾತಿತ್ತು. ಅದಕ್ಕೆ ತಕ್ಕಂತೆ 1783ರಲ್ಲಿ ಬಂಗಾಳದ ಸುಪ್ರೀಮ್ ಕೋರ್ಟಿನ ನ್ಯಾಯಾಧೀಶನಾಗಿ ನೇಮಕಗೊಂಡ, ಆ ಸಮಯದಲ್ಲೇ ಇವನಿಗೆ ನೈಟ್ ಪದವಿ ದೊರಕಿ, ಆ್ಯನ ಮೇರಿಯ ಷಿಪ್ಲೆಯೊಡನೆ ವಿವಾಹವೂ ಆಯಿತು. 1783ರಿಂದ 1794ರ ವರೆಗೆ ನ್ಯಾಯಾಧೀಶನ ಸ್ಥಾನವನ್ನಲಂಕರಿಸಿದ್ದ ಅವಧಿಯಲ್ಲಿ ಈತ ಏಷ್ಯಾಟಿಕ್ ಸೊಸೈಟಿ ಆಫ್ ಬೆಂಗಾಲ್ ಎಂಬ ಒಂದು ಮಹಾ ಅಧ್ಯಯನ ಸಂಸ್ಥೆಯನ್ನು ಕಲ್ಕತ್ತದಲ್ಲಿ ಸ್ಥಾಪಿಸಿ ಅಂದಿನ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್‍ನನ್ನು ಆ ಸಂಸ್ಥೆಗೆ ಅಧ್ಯಕ್ಷನಾಗಬೇಕೆಂದು ಪ್ರಾರ್ಥಿಸಿದ್ದ. ಆದರೆ ಹೇಸ್ಟಿಂಗ್ಸ್ ನು ಜೋನ್ಸನೇ ಅದಕ್ಕೆ ಅತ್ಯಂತ ಅರ್ಹನಾದ ವ್ಯಕ್ತಿಯೆಂದು ಹೇಳಿ, ಅವನೇ ಆ ಸಂಸ್ಥೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವಂತೆ ಮಾಡಿದ. ಜೋನ್ಸ್ ತಾನು ಜೀವಿಸಿರುವವರೆಗೂ ಅದರ ಅಧ್ಯಕ್ಷನಾಗಿದ್ದು ಏಷ್ಯದ ಚರಿತ್ರೆಯ, ಪ್ರಾಚೀನ ವಿಷಯಗಳ, ಕಲೆಗಳ ವಿಜ್ಞಾನಾದಿ ಶಾಸ್ತ್ರಗಳ ಮತ್ತು ಸಾಹಿತ್ಯದ ಅಧ್ಯಯನದ ಗುರಿಯನ್ನು ಸಂಸ್ಥೆ ಬಹುಮಟ್ಟಿಗೆ ಸಾಧಿಸುವಂತೆ ಶ್ರಮಿಸಿದ. ಆ ಸಂಸ್ಥೆಯ ಆಶ್ರಯದಲ್ಲಿ ಏಷ್ಯಾಟಿಕ್ ರಿಸರ್ಚಸ್ ಎಂಬ ವಿದ್ವತ್ ಪತ್ರಿಕೆಯ ಸಂಪಾದಕನಾಗಿದ್ದು, 1789ರಲ್ಲಿ ಅದರ ಮೊದಲನೆಯ ಸಂಪುಟವನ್ನು ಹೊರತಂದ, ಅದು ಈತ ಪಟ್ಟಿ ಶ್ರಮದ ಒಂದು ಸೂಚಕ. ಇಂಥ ಮಹತ್ತ್ವಪೂರ್ಣ ಜೀವನ ನಡೆಸಿದ ಜೋನ್ಸ್ ಕಾಲವಾದಾಗ ವಿದ್ವತ್ಪ್ರಪಂಚಕ್ಕೆ ತುಂಬಲಾರದ ನಷ್ಟವಾಯಿತು.

ಈತನ ಗ್ರಂಥಗಳು

ಬದಲಾಯಿಸಿ

ತನ್ನ 48 ವರ್ಷಗಳ ಜೀವಿತಾವಧಿಯಲ್ಲಿ ಜೋನ್ಸ್ ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದ. ಅವುಗಳಲ್ಲಿ ಮುಖ್ಯವಾದ ಕಲವೆಂದರೆ : ಏಷ್ಯಾಟಿಕ್ ಭಾಷೆಗಳಿಂದ ತರ್ಜುಮೆಗೊಂಡ ಪದ್ಯಕಾವ್ಯಗಳು; ಪರ್ಷಿಯನ್ ವ್ಯಾಕರಣ; ಎಸ್ಸೆ ಆನ್ ದಿ ಲಾ ಆಫ್ ಬೇಲ್ ಮೆಂಟ್ಸ್; ಹಿತೋಪದೇಶ, ಗೀತಗೋವಿಂದ, ಶಾಕುಂತಲ ಇವುಗಳ ಇಂಗ್ಲಿಷ್ ಅನುವಾದಗಳು; ವಿಮರ್ಶಾತ್ಮಕಾಗಿ ಸಂಪಾದಿತವಾಗಿರುವ ಕಾಳಿದಾಸಕೃತ ಋತುಸಂಹಾರ; ತಾನೇ ಉದ್ದೇಶಪಟ್ಟಂತೆ, ಎಲ್ಲಕ್ಕಿಂತಲೂ ಮಿಗಿಲಾಗಿ, ಸಂಪೂರ್ಣ ಹಿಂದೂ ಮತ್ತು ಇಸ್ಲಾಮಿ ನ್ಯಾಯಾಂಗಗಳ ಸಮಗ್ರ ಕೈಪಿಡಿಯ ಅಂಗವಾಗಿ ರಚಿತವಾಗಿರುವ ದಿ ಆರ್ಡಿನೆನ್ಸಸ್ ಆಫ್ ಮನು ಎಂಬ ಮನುಸ್ಮೃತಿಯ ಭಾಷಾಂತರ. 1794ರಲ್ಲಿ ಈತನ ಮರಣದ ಸಮಯಕ್ಕೆ ಈ ಕೈಪಿಡಿಯ ಕೆಲಸ ಮುಗಿದಿರಲಿಲ್ಲವೆಂದು ಗಮನಾರ್ಹ.

ಮೌಲ್ಯಮಾಪನ

ಬದಲಾಯಿಸಿ

ಯೂರೋಪಿಯನ್ ಮತ್ತು ಭಾರತೀಯ ಭಾಷೆಗಳಿಗೂ ಸಂಬಂಧವಿದೆ ಎಂದು ಪ್ರತಿಪಾದಿಸಿ ಇಂಡೋ ಯುರೋಪಿಯನ್ ಭಾಷೆಗಳು ಎಂಬ ಶಬ್ದವನ್ನು ಬಳಕೆಗೆ ತಂದವನು ಈತನೇ.

ಜೋನ್ಸನ ವೈವಿಧ್ಯಮಯ ಜೀವನ ಸಾರ್ಥಕ ಕಾರ್ಯಗಳಿಂದ ತುಂಬಿತ್ತು. ಭಾಷಾಶಾಸ್ತ್ರವನ್ನೂ ನಾನಾ ಭಾಷೆಗಳನ್ನೂ ಅವುಗಳಲ್ಲಿನ ಸಾಹಿತ್ಯವನ್ನೂ ಮಾನವರ ಐಕ್ಯದ ದೃಷ್ಟಿಯಿಂದ ಆಳವಾಗಿ ವ್ಯಾಸಂಗಮಾಡಿ ಜ್ಞಾನದ ಮೇರೆಗಳನ್ನು ವಿಸ್ತರಿಸುವ ಮಹಾಕಾರ್ಯವನ್ನು ಕೈಗೊಂಡು ಅದರಲ್ಲಿ ಈತ ಯಶಸ್ಸು ಪಡೆದ. ಪೌರಸ್ತ್ಯ ಭಾಷೆ ಸಂಸ್ಕೃತಿಗಳಲ್ಲಿ ಆಸಕ್ತಿಯುಳ್ಳವನಾಗಿ ಪಾರಸಿ, ಸಂಸ್ಕೃತಗಳ ವಿಶೇಷ ಅಧ್ಯಯನದ ಮೂಲಕ ಪ್ರಾಚ್ಯವಿದ್ಯೆಗಳಲ್ಲಿ ನೈಪುಣ್ಯಗಳಿಸಿದ ಈತ ವಿಶ್ವಸಾಹಿತ್ಯಸೃಷ್ಟಿಯನ್ನು ಮನಗಂಡ ದಾರ್ಶನಿಕನಾಗಿದ್ದ. ಭಾಷೆಗಳು ವಿದ್ವತ್ತೆಗೆ ಕೇವಲ ಸಾಧನಗಳು ಅನೇಕ ಸಂದರ್ಭಗಳಲ್ಲಿ ಅನುಚಿತವಾಗಿ ಅವೇ ವಿದ್ವತ್ತೆಂಬ ಕಲ್ಪನೆಗೆ ವಿಷಯಗಳಾಗಿವೆ ಎಂಬ ಅಭಿಪ್ರಾಯವುಳ್ಳ ಇವನ ಸಾರಸ್ವತ ಸೇವೆ ಔನ್ನತ್ಯ ಹಾಗೂ ವೈಸಾಲ್ಯಗಳಿಂದ ಕೂಡಿದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: