ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೫೭
ಸಾಗರ ಅಥವಾ ಇನ್ನಿತರ ಜಲರಾಶಿಯಲ್ಲಿ ಅಗಾಧ ಪ್ರಮಾಣದ ಚಲನೆಯುಂಟಾದಾಗ ಜನಿಸುವ ಸಾಗರದ ತರಂಗಗಳ ಸರಣಿಗೆ ಸುನಾಮಿ (ತ್ಸುನಾಮಿ) ಎಂದು ಕರೆಯಲಾಗುತ್ತದೆ. ಭೂಕಂಪ, ಜ್ವಾಲಾಮುಖಿ, ಬಾಹ್ಯಾಕಾಶದ ಬೃಹತ್ ಗಾತ್ರದ ವಸ್ತುವಿನ ಅಪ್ಪಳಿಕೆ ಇತ್ಯಾದಿ ಸುನಾಮಿ ಅಲೆಗಳನ್ನು ಹುಟ್ಟುಹಾಕುವ ಸಾಮರ್ಥ್ಯ ಪಡೆದಿವೆ. ಸುನಾಮಿಯು, ಗಮನಕ್ಕೇ ಬಾರದಷ್ಟು ಸಣ್ಣ ಪ್ರಮಾಣದಿಂದ ಹಿಡಿದು ಅತ್ಯಂತ ಹಾನಿಕರವಾದ ನೈಸರ್ಗಿಕ ವಿಕೋಪದವರೆಗೂ ತನ್ನ ಪ್ರಭಾವ ಬೀರಬಲ್ಲುದಾಗಿದೆ.
ತ್ಸುನಾಮಿ ಎಂಬ ಪದ ಮೂಲತಃ ಜಪಾನಿ ಭಾಷೆಯಿಂದ ಬಂದದ್ದು. ಇಲ್ಲಿ "ತ್ಸು"(津) ಅಂದರೆ "ಬಂದರು" ಹಾಗು "ನಾಮಿ"( 波) ಎಂದರೆ "ಅಲೆ" ಎಂಬ ಅರ್ಥ ಕೊಡುತ್ತದೆ. ಜಪಾನಿ ಭಾಷೆಯಲ್ಲಿ ಸುನಾಮಿ ಪದವನ್ನು ಏಕವಚನ ಹಾಗು ಬಹುವಚನ ಎರಡಕ್ಕೂ ಬಳಸುತ್ತಾರೆ, ಆದರೆ ಕನ್ನಡದಲ್ಲಿ ಬಹುವಚನವಾಗಿ "ಸುನಾಮಿಗಳು" ಎಂದೂ ಇಂಗ್ಲಿಷಿನಲ್ಲಿ "tsunamis" ಕರೆಯುತ್ತಾರೆ. ಅಲ್ಲಿಯ ಮೀನುಗಾರರು ಅಲೆಗಳ ಬಗ್ಗೆ ಹೆಚ್ಚೇನು ಗೊತ್ತಿಲ್ಲದಿದ್ದರೂ "ಸುನಾಮಿ" ಪದವನ್ನು ಅವರೇ ಹುಟ್ಟಿಹಾಕಿದ್ದಂತೆ. ಸುನಾಮಿಯು ಸಾಗರದ ತೀರಾ ಒಳ-ಮೇಲ್ಮೈನಲ್ಲಿ ಘಟಿಸುವಂತಹದಲ್ಲ; ಇದು ಅತಿ ದೂರದಲ್ಲಿ ತುಂಬಾ ಚಿಕ್ಕ ವಿಸ್ತಾರವುಳ್ಳ (ಅಲೆಗಳ ಎತ್ತರ) ಹಾಗೂ ತೀರ ಉದ್ದವಾದ ತರಂಗಗಳನ್ನು ಹೊಂದಿರುತ್ತದೆ (ಬಹಳಷ್ಟು ಬಾರಿ ನೂರಾರು ಕಿಲೋಮೀಟರ್ ಉದ್ದವುಳ್ಳದಾಗಿರುತ್ತದೆ). ಇದೇ ಕಾರಣಕ್ಕೆ ಸಮುದ್ರದಲ್ಲಿ ಬಹಳಷ್ಟು ಬಾರಿ ಇದನ್ನು ಯಾರೂ ಗಮನಿಸುವುದೇ ಇಲ್ಲ.