ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೪೯

ಪಶ್ಚಿಮ ಘಟ್ಟಗಳ ಒಂದು ನೋಟ

ಪಶ್ಚಿಮ ಘಟ್ಟಗಳು ಭಾರತ ಜಂಬೂದ್ವೀಪದ ಪಶ್ಚಿಮ ಭಾಗದಲ್ಲಿರುವ ಒಂದು ಪರ್ವತ ಶ್ರೇಣಿ. ಈ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಎಂಬ ಹೆಸರು ಸಹ ಇದೆ. ದಖ್ಖನ್ ಪೀಠಭೂಮಿಯ ಪಶ್ಚಿಮದ ಅಂಚಿನ ಉದ್ದಕ್ಕೂ ಹಬ್ಬಿರುವ ಪಶ್ಚಿಮ ಘಟ್ಟಗಳು ಪೀಠಭೂಮಿಯನ್ನು ಅರಬ್ಬೀ ಸಮುದ್ರದ ಕಿರಿದಾದ ಕರಾವಳಿ ಪ್ರದೇಶದಿಂದ ಬೇರ್ಪಡಿಸುತ್ತವೆ. ಮಹಾರಾಷ್ಟ್ರ-ಗುಜರಾತ್‌ಗಳ ಗಡಿಪ್ರದೇಶದಲ್ಲಿ ತಾಪ್ತಿ ನದಿಯ ದಕ್ಷಿಣದಲ್ಲಿ ಆರಂಭವಾಗುವ ಈ ಶ್ರೇಣಿಯು ದಕ್ಷಿಣಾಭಿಮುಖವಾಗಿ ಹಬ್ಬಿ ಕನ್ಯಾಕುಮಾರಿಯವರೆಗೆ ಇರುವುದು. ಒಟ್ಟು ಸುಮಾರು ೧೬೦೦ ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ. ಒಟ್ಟು ಶ್ರೇಣಿಯ ಅರ್ಧಕ್ಕಿಂತ ಹೆಚ್ಚು ಭಾಗವು ಕರ್ಣಾಟಕದಲ್ಲಿಯೇ ಇದೆ. ಪಶ್ಚಿಮ ಘಟ್ಟಗಳು ಒಟ್ಟು ೬೦೦೦೦ ಚದರ ಕಿ.ಮೀ. ಪ್ರದೇಶವನ್ನು ಆವರಿಸಿವೆ. ಇಲ್ಲಿಂದ ಹೊರಡುವ ನದಿಗಳು ಭಾರತದ ಒಟ್ಟು ಜಲಾನಯನ ಪ್ರದೇಶದ ೪೦% ಭಾಗವನ್ನು ಆವರಿಸಿವೆ. ಪಶ್ಚಿಮ ಘಟ್ಟಗಳ ಸರಾಸರಿ ಎತ್ತರ ಸುಮಾರು ೧೨೦೦ ಮೀಟರ್. ಈ ಪ್ರದೇಶವು ವಿಶ್ವದ ಅತ್ಯಂತ ಸಕ್ರಿಯ ಜೀವವೈವಿಧ್ಯದ ನೆಲೆಗಳಲ್ಲಿ ಒಂದಾಗಿದ್ದು ೫೦೦೦ಕ್ಕೂ ಹೆಚ್ಚಿನ ತಳಿಯ ಗಿಡಮರಗಳು, ೧೩೯ ಬಗೆಯ ಸಸ್ತನಿಗಳು, ೫೦೮ ಪ್ರಭೇದದ ಪಕ್ಷಿಗಳು ಮತ್ತು ೧೭೯ ಪ್ರಕಾರದ ದ್ವಿಚರಿಗಳಿಗೆ ನೆಲೆಯಾಗಿವೆ. ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ ೩೨೫ ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ.