ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೩೮
ಗಂಗೂಬಾಯಿ ಹಾನಗಲ್ ಅವರು ಹುಟ್ಟಿದ್ದು ಹಾನಗಲ್ಲಿನಲ್ಲಿ, ೧೯೧೩ ಮಾರ್ಚ ೫ರಂದು.ಆದರೆ ಬಾಲ್ಯದಿಂದಲೆ ಬೆಳೆದಿದ್ದೆಲ್ಲ ಧಾರವಾಡದಲ್ಲಿ.ಇವರ ತಂದೆ ಚಿಕ್ಕೂರಾವ್ ನಾಡಗೀರ,ತಾಯಿ ಅಂಬಾಬಾಯಿ. ಗಂಗೂಬಾಯಿಯವರ ಪ್ರಾಥಮಿಕ ಶಿಕ್ಷಣ ಧಾರವಾಡದಲ್ಲಿ ಆಲೂರು ವೆಂಕಟರಾಯರು ಸ್ಥಾಪಿಸಿದ ರಾಷ್ಟ್ರೀಯ ಶಾಲೆಯಲ್ಲಿ ಐದನೆಯ ಇಯತ್ತೆಯವರೆಗೆ ಆಯಿತು. ೧೯೨೪ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ, ಗಂಗೂಬಾಯಿಯವರು ಮಹಾತ್ಮಾ ಗಾಂಧೀಜಿಯವರೆದುರಿಗೆ “ಸ್ವಾಗತವು ಸ್ವಾಗತವು ಸಕಲ ಜನ ಸಂಕುಲಕೆ” ಎಂದು ಸ್ವಾಗತಗೀತೆಯನ್ನು ಹಾಡಿ ಗಾಂಧೀಜಿಯವರ ಹಾಗೂ ಸಭಿಕರ ಮೆಚ್ಚುಗೆ ಗಳಿಸಿದ್ದರು. ಗಂಗೂಬಾಯಿಯವರ ತಾಯಿ ಅಂಬಾಬಾಯಿಯವರು ಸ್ವತಃ ಕರ್ನಾಟಕ ಸಂಗೀತದ ಗಾಯಕಿ. ಹಿಂದುಸ್ತಾನಿ ಸಂಗೀತ ಗಾಯಕರಾದ ಹೀರಾಬಾಯಿ ಬಡೋದೆಕರ, ಅಬ್ದುಲ್ ಕರೀಮ ಖಾನರು ಧಾರವಾಡ, ಹುಬ್ಬಳ್ಳಿಗಳಿಗೆ ಬಂದಾಗಲೊಮ್ಮೆ ಅಂಬಾಬಾಯಿಯವರ ಮನೆಗೆ ಹೋಗಿ ಅವರ ಹಾಡುಗಾರಿಕೆ ಕೇಳುತ್ತಿದ್ದರು. ಬಾಲಿಕೆ ಗಂಗೂಬಾಯಿಯ ಹಾಡುಗಾರಿಕೆಯನ್ನೂ ಅವರು ಮೆಚ್ಚಿದ್ದರು. ಇವೆಲ್ಲ ಕಾರಣವಾಗಿ ಅಂಬಾಬಾಯಿಯವರಿಗೆ ತಮ್ಮ ಮಗಳಿಗೆ ಹಿಂದುಸ್ತಾನಿ ಸಂಗೀತ ಕಲಿಸುವ ಆಸೆಯಿತ್ತು. ಈ ಕಾರಣದಿಂದ ಮನೆಯನ್ನು ಧಾರವಾಡದಿಂದ ಹುಬ್ಬಳ್ಳಿಗೆ ಸ್ಥಳಾಂತರಿಸಿದರು. ಮೊದಲಲ್ಲಿ ದತ್ತೋಪಂತ ದೇಸಾಯಿ, ಕೃಷ್ಣಾಚಾರ್ಯ ಹುಲಗೂರ ಇವರಿಂದ ಸಂಗೀತ ಶಿಕ್ಷಣ ಪಡೆದ ಗಂಗೂಬಾಯಿ, ಬಳಿಕ ಸುಪ್ರಸಿದ್ಧ ಕಿರಾನಾ ಘರಾನಾ ಗಾಯಕರಾದ ಸವಾಯಿ ಗಂಧರ್ವ ಯಾನೆ ರಾಮಭಾವು ಕುಂದಗೋಳಕರ ಅವರ ಶಿಷ್ಯೆಯಾದರು. ತನ್ನ ಕರ್ನಾಟಕ ಸಂಗೀತ ಪದ್ಧತಿಯು ಮಗಳ ಮೇಲೆ ವಿಪರೀತ ಪರಿಣಾಮ ಬೀರಬಾರದೆನ್ನುವ ಉದ್ದೇಶದಿಂದ ಅಂಬಾಬಾಯಿಯವರು ಹಾಡುವದನ್ನೇ ನಿಲ್ಲಿಸಿಬಿಟ್ಟರು!