ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨೮

ಹಬಲ್ ದೂರದರ್ಶಕ ಕಂಡಂತೆ ಮಂಗಳ

ಮಂಗಳ - ಸೂರ್ಯಸೌರಮಂಡಲದಲ್ಲಿನ ನಾಲ್ಕನೆಯ ಗ್ರಹ. ಸೂರ್ಯನಿಗೆ ಭೂಮಿಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ. ಮಂಗಳ ಗ್ರಹ ಸೌರಮಂಡಲದ ಎರಡನೆಯ ಅತಿ ಸಣ್ಣ ಗ್ರಹವಾಗಿದ್ದು ತೆಳುವಾದ ಗಾಳಿಗೋಳವನ್ನು ಹೊಂದಿದೆ. ಆಂಗ್ಲ ಭಾಷೆಯಲ್ಲಿ 'ಮಾರ್ಸ್' (Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು ೨೪ ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೬೮೬.೯೮ ದಿನಗಳೇ ಬೇಕಾಗುತ್ತದೆ.

ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ, ಇದನ್ನು 'ಕೆಂಪು ಗ್ರಹ' ಅಥವಾ 'ಅಂಗಾರಕ' (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ೨ ನೈಸರ್ಗಿಕ ಉಪಗ್ರಹಗಳಿವೆ.

ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಈ ಗ್ರಹದ ಅನ್ವೇಷಣೆಗೆ ಹಲವಾರು ಬಾಹ್ಯಾಕಾಶ ನೌಕೆಗಳನ್ನು ಭೂಮಿಯಿಂದ ಕಳುಹಿಸಲಾಗಿದೆ. ಮಂಗಳದ ಸಮೀಪದಲ್ಲಿ ಹಾದುಹೋದ ಮೊಟ್ಟಮೊದಲ ನೌಕೆ ೧೯೬೪ರಲ್ಲಿ ನಾಸಾ ಉಡಾಯಿಸಿದ ಮ್ಯಾರಿನರ್ ೪. ಪ್ರಸ್ತುತದಲ್ಲಿ ಮಂಗಳದ ಸುತ್ತ ೪ ಗಗನನೌಕೆಗಳು ಪರಿಭ್ರಮಿಸುತ್ತಿವೆ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತುಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೊ ೫ ನವೆಂಬರ್ ೨೦೧೩ರಲ್ಲಿ ಹಾರಿಬಿಟ್ಟ ಮಂಗಳಯಾನ ಉಪಗ್ರಹ ೨೯೮ ದಿನಗಳು ಸಾಗಿದ ನಂತರ ೨೪ ಸೆಪ್ಟಂಬರ್ ೨೦೧೪ ರಂದು ಮಂಗಳನ ಕಕ್ಷೆಗೆ ಸೇರಿದ್ದು, ತನ್ನ ಕೆಲಸವನ್ನ ಆರಂಭಿಸಿದೆ.