ಮಂಗಳ ಗ್ರಹದ ಅನ್ವೇಷಣೆ

ಗ್ರಹದ ಮೇಲ್ಮೈ, ಹವಾಮಾನ ಮತ್ತು ಒಳಭಾಗಗಳನ್ನು ಅಧ್ಯಯನ ಮಾಡಲು ಸೋವಿಯೆತ್ ರಷ್ಯಾ,ಅಮೆರಿಕಾ ಸಂಯುಕ್ತ ಸಂಸ್ಥಾನ, ಯೂರೋಪ್, ಮತ್ತು ಜಪಾನ್ನಿಂದ, ಅನ್ವೇಷಕಗಳು, ಪರ್ಯಟಕಗಳು, ಪರಿಭ್ರಮಕಗಳು ಸೇರಿದಂತೆ ಹಲವಾರು ಬಾಹ್ಯಾಕಾಶ ನೌಕೆಗಳನ್ನು ಭೂಮಿಯಿಂದ ಮಂಗಳದತ್ತ ಕಳುಹಿಸಲಾಗಿದೆ.

ವೈಕಿಂಗ್ ಲ್ಯಾಂಡರ್ 1ರ ತಾಣ

ಇವುಗಳಲ್ಲಿ ಸುಮಾರು 3ನೇ 2ರಷ್ಟು ನೌಕೆಗಳು ತಮ್ಮ ಉದ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ಮುನ್ನ ಅಥವಾ ಆರಂಭಿಸುವುದಕ್ಕೆ ಮುನ್ನವೇ ವಿಫಲವಾಗಿ ಹೋಗಿವೆ. ಈ ವೈಫಲ್ಯತೆಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಉಂಟಾದುವು. ಆದರೆ, ಇನ್ನು ಹಲವು ನೌಕೆಗಳು ಅರ್ಥವಾಗದ ಯಾವುದೋ ಕಾರಣದಿಂದ ವಿಫಲವಾಗಿಯೋ,ಭೂಮಿಯ ಜೊತೆ ಸಂಪರ್ಕ ಕಡಿದುಕೊಂಡೋ ಬಾಹ್ಯಾಕಾಶದಲ್ಲಿ ಕಳೆದುಹೋಗಿವೆ. ಈ ರೀತಿ ಸಾಕಷ್ಟು ನೌಕೆಗಳು ಕಳೆದು ಹೋಗಿರುವುದರಿಂದ ಕೆಲವು ಸಂಶೋಧಕರು ತಮಾಷೆಯಾಗಿ ಭೂಮಿ-ಮಂಗಳದ ನಡುವೆ "ಬರ್ಮುಡಾ ತ್ರಿಕೋಣ", ಅಥವಾ ಅಂಗಾರಕ ಶಾಪದ ಬಗ್ಗೆ ಮಾತಾಡುತ್ತಾರೆ ಮತ್ತು ಮಂಗಳಕ್ಕೆ ಹೊರಟ ನೌಕೆಗಳನ್ನು ತಿನ್ನುವ ಒಂದು "ಬೃಹತ್ ಬ್ರಹ್ಮಾಂಡ ಪಿಶಾಚಿ"ಯನ್ನು ಉಲ್ಲೇಖಿಸುತ್ತಾರೆ.[]

ಹಿಂದಿನ ಅನ್ವೇಷಣಾ ಯಾತ್ರೆಗಳು

ಬದಲಾಯಿಸಿ

ಮಂಗಳದ ಸಮೀಪದಲ್ಲಿ ಹಾದುಹೋದ ಮೊಟ್ಟಮೊದಲ ನೌಕೆಯೆಂದರೆ 1964ರಲ್ಲಿ ನಾಸಾ ಉಡಾಯಿಸಿದ ಮ್ಯಾರಿನರ್ 4. ಮಂಗಳದ ನೆಲವನ್ನು ಮುಟ್ಟಿದ ಮೊದಲ ಮಾನವ ನಿರ್ಮಿತ ವಸ್ತುಗಳೆಂದರೆ ರಷ್ಯಾ ಮಂಗಳ ಅನ್ವೇಷಣಾ ಕಾರ್ಯಕ್ರಮದ ಮೂಲಕ 1971ರಲ್ಲಿ ಉಡಾಯಿಸಲಾದ Mars 2 ಮತ್ತು Mars 3 ಎಂಬ ಹೆಸರಿನ ಎರಡು ಅನ್ವೇಷಕಗಳು. ಆದರೆ ಮಂಗಳದ ಮೇಲ್ಮೈ ತಲುಪಿದ ಕೆಲವೇ ಕ್ಷಣಗಳಲ್ಲಿ ಭೂಮಿಯ ಜೊತೆ ಈ ಎರಡೂ ಅನ್ವೇಷಕಗಳ ಸಂಪರ್ಕ ಕಡಿದುಹೋಯಿತು. ನಂತರ 1975ರಲ್ಲಿ ನಾಸಾ ವೈಕಿಂಗ್ ಕಾರ್ಯಕ್ರಮದ ಉಡಾವಣೆಗಳು ಶುರುವಾದವು.

ಈ ಉಡಾವಣೆಗಳಲ್ಲಿ ಇಳಿಯುವ ಭಾಗಗಳುಳ್ಳ ಎರಡು ಪರಿಭ್ರಮಕಗಳು ಸೇರಿದ್ದವು. ಈ ಎರಡು ಪರಿಭ್ರಮಕಗಳ ಇಳಿಯುವ ಭಾಗಗಳೂ 1976ರಲ್ಲಿ ಯಶಸ್ವಿಯಾಗಿ ಮಂಗಳದ ಮೇಲಿಳಿದು 6 ವರ್ಷ (Viking 1) ಮತ್ತು 3 ವರ್ಷಗಳವರೆಗೆ (Viking 2) ಕೆಲಸ ಮಾಡಿದವು. ಇದಲ್ಲದೆ ಮೊದಲನೇ ಬಾರಿಗೆ ಈ ವೈಕಿಂಗ್ ಇಳಿಭಾಗಗಳು ಮಂಗಳದ ಬಣ್ಣದ ಛಾಯಾಚಿತ್ರಗಳನ್ನು ಭೂಮಿಗೆ ಕಳಿಸಿದವು.[]

ಇವು ಮಂಗಳದ ಮೇಲ್ಮೈ ಸಮೀಕ್ಷೆ ಮಾಡಿ ಮೇಲ್ಮೈ ನಕ್ಷೆಯನ್ನು ತಯಾರು ಮಾಡಿದವು. ಈ ತಯಾರಿಕೆಗಳು ಎಷ್ಟು ಸ್ಫುಟವಾಗಿದ್ದವೆಂದರೆ, ಇಂದಿಗೂ ಈ ಚಿತ್ರ ಮತ್ತು ನಕ್ಷೆಗಳನ್ನು ಒಮ್ಮೊಮ್ಮೆ ಉಪಯೋಗಿಸಲಾಗುತ್ತಿದೆ. ಮಂಗಳ ಮತ್ತದರ ಎರಡು ಉಪಗ್ರಹಗಳನ್ನು ಅಧ್ಯಯನ ಮಾಡಲೆಂದು 1988ರಲ್ಲಿ ರಷ್ಯಾದಿಂದ Phobos 1 ಮತ್ತು 2 ಅನ್ವೇಷಕಗಳನ್ನು ಕಳಿಸಲಾಯಿತು. ದುರದೃಷ್ಟವಶಾತ್, Phobos 1ರ ಮಾರ್ಗಮಧ್ಯದಲ್ಲೇ ಅದರ ಜೊತೆ ಸಂಪರ್ಕ ಕಡಿದುಹೋಯಿತು. Phobos 2 ಯಶಸ್ವಿಯಾಗಿ ಮಂಗಳ ಮತ್ತು ಗಳ ಛಾಯಾಚಿತ್ರಗಳನ್ನು ತೆಗೆಯಿತಾದರೂ, ಫೋಬೋಸ್‌ನ ಮೇಲೆ ತನ್ನ ಒಂದು ಭಾಗವನ್ನು ಇಳಿಸುವುದಕ್ಕೆ ಸ್ವಲ್ಪವೇ ಮುಂಚೆ ವಿಫಲವಾಯಿತು.

ಈಗಿನ ಅನ್ವೇಷಣಾ ಯಾತ್ರೆಗಳು

ಬದಲಾಯಿಸಿ

1992ರಲ್ಲಿ Mars Observer ಪರಿಭ್ರಮಕವು ವಿಫಲವಾದ ಬಳಿಕ, 1996ರಲ್ಲಿ ನಾಸಾ Mars Global Surveyorನ್ನು ಉಡಾಯಿಸಿತು. ತನ್ನ ಮುಖ್ಯ ಧ್ಯೇಯವಾದ ಸಮೀಕ್ಷಾಕಾರ್ಯವನ್ನು 2001ರ ಪ್ರಾರಂಭದ ಹೊತ್ತಿಗೆ ಮುಗಿಸಿದ ಈ ಯಾತ್ರೆಯು ಸಂಪೂರ್ಣವಾಗಿ ಯಶಸ್ವಿಯಾಯಿತು. Surveyor ಉಡಾವಣೆಯ ಒಂದೇ ತಿಂಗಳ ತರುವಾಯ, ನಾಸಾ Mars Pathfinderನ್ನು ಉಡಾಯಿಸಿತು. Pathfinder ಕೊಂಡೊಯ್ದಿದ್ದ ಯಂತ್ರಮಾನವಯುಕ್ತ ಅನ್ವೇಷಣಾ ವಾಹನವೊಂದು ಮಂಗಳದ Ares Vallisನಲ್ಲಿ ಇಳಿಯಿತು. ಅತ್ಯಂತ ಯಶಸ್ವಿಯಾದ ಈ ಯಾತ್ರೆಗೆ ಬಹಳ ಪ್ರಸಿದ್ಧಿ ಮತ್ತು ಪ್ರಚಾರಗಳು ಸಿಕ್ಕವು. ಈ ಅನ್ವೇಷಕವು ಭೂಮಿಗೆ ಕಳುಹಿಸಿದ ಹಲವು ಅದ್ಭುತ ಛಾಯಚಿತ್ರಗಳೂ ಈ ಪ್ರಸಿದ್ಧಿಗೆ ಒಂದು ಕಾರಣ.[]

ಕಲಾವಿದನೊಬ್ಬ ಊಹೆಯ ಮೇರೆಗೆ ನಿರ್ಮಿಸಿದ 2001 Mars Odysseyಯ ಚಿತ್ರ

2001ರಲ್ಲಿ ನಾಸಾ, ಯಶಸ್ವಿಯಾದ Mars Odyssey ಪರಿಭ್ರಮಕವನ್ನು ಉಡಾಯಿಸಿತು. ಇದು ಆಗಸ್ಟ್ 2006ರಲ್ಲಿ ಸಿಕ್ಕಿದ ಮಾಹಿತಿಯ ಪ್ರಕಾರ ಇನ್ನೂ ಮಂಗಳವನ್ನು ಪರಿಭ್ರಮಿಸುತ್ತಿದೆ. Odysseyಯ ಗಾಮಾ ಕಿರಣ ವರ್ಣಪಟಲಮಾಪಕವು ಮಂಗಳದ ಬಾಹ್ಯ ಶಿಲಾಪದರವಾದ regolithನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮೂಲರೂಪಿ ಜಲಜನಕವನ್ನು ಪತ್ತೆಹಚ್ಚಿದೆ. ಘನೀಕೃತ ನೀರಿನ ದೊಡ್ಡ ಶೇಖರಣೆಗಳು ಈ ಜಲಜನಕದ ಇರುವಿಕೆಗೆ ಕಾರಣ ಎಂದು ನಂಬಲಾಗಿದೆ.[] 2003ರಲ್ಲಿ ಮಂಗಳ ಎಕ್ಸ್‌ಪ್ರೆಸ್ ಪರಿಭ್ರಮಕ ಮತ್ತು Beagle 2 ಎಂಬ ಹೆಸರಿನ ಇಳಿಯುವ ಭಾಗವನ್ನೊಳಗೊಂಡ ಮಂಗಳ ಎಕ್ಸ್‌ಪ್ರೆಸ್ ನೌಕೆಯನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಉಡಾಯಿಸಿತು. ಇಳಿಯುತ್ತಿರುವಾಗ ವಿಫಲವಾದಂತೆ ಕಂಡುಬಂದ Beagle 2 ವನ್ನು 2004ದ ಫೆಬ್ರವರಿಯಲ್ಲಿ ಕಳೆದುಹೋಯಿತೆಂದು ಘೋಷಿಸಲಾಯಿತು.[] 2004ರ ಪ್ರಾರಂಭದಲ್ಲಿ Planetary Fourier Spectrometer ತಂಡವು ಮಂಗಳದ ವಾಯುಮಂಡಲದಲ್ಲಿ ಮೀಥೇನ್ ವಾಯುವನ್ನು ಪತ್ತೆಹಚ್ಚಲಾಗಿರುವುದೆಂದು ಘೋಷಿಸಿತು. ಜೂನ್ 2006ರಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಮಂಗಳದಲ್ಲಿ ಧ್ರುವಾರುಣ ಜ್ಯೋತಿಯ ಅರಿವನ್ನು ಘೋಷಿಸಿತು.[]

ಇದಲ್ಲದೆ 2003ರಲ್ಲಿ ನಾಸಾ Spirit (MER-A) ಮತ್ತು Opportunity (MER-B) ಎಂಬ ಹೆಸರಿನ ಅವಳಿ ಮಂಗಳಾನ್ವೇಷಣ ಪರ್ಯಟಕಗಳನ್ನು ಉಡಾಯಿಸಿತು. ಯಶಸ್ವಿಯಾಗಿ ಜನವರಿ 2004ರಲ್ಲಿ ಮಂಗಳವನ್ನು ತಲುಪಿದ ಈ ಎರಡೂ ತಮ್ಮ ಯಾತ್ರೆಯ ಎಲ್ಲ ನಿರೀಕ್ಷೆಗಳನ್ನೂ ಮುಟ್ಟಿವೆ ಅಥವಾ ನಿರೀಕ್ಷೆ ಮೀರಿ ಕಾರ್ಯ ನಿರ್ವಹಿಸಿವೆ.

ಈ ಅನ್ವೇಷಕಗಳಿಂದ ಹೊರಬಂದ ಪ್ರಮುಖ ವೈಜ್ಞಾನಿಕ ಫಲಿತಾಂಶಗಳಲ್ಲಿ ಒಂದೆಂದರೆ: ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ದ್ರವರೂಪದಲ್ಲಿತ್ತು ಎಂಬುದರ ಬಗ್ಗೆ ನಿರ್ಣಾಯಕವಾದ ಸಾಕ್ಷಿ. ಧೂಳಿನ ಮಾರುತಗಳು ಈ ಎರಡು ಅನ್ವೇಷಕಗಳ ಸೌರಫಲಕಗಳನ್ನು ಒಮ್ಮೊಮ್ಮೆ ಶುಚಿಗೊಳಿಸಿ ಫಲಕಗಳ ಆಯಸ್ಸನ್ನು ಹೆಚ್ಚಿಸಿವೆ.[] ಎರಡು ವರ್ಷಗಳ ಕಾಲ ವೈಜ್ಞಾನಿಕ ಸಮೀಕ್ಷೆಯೊಂದನ್ನು ನಿರ್ವಹಿಸಲು ಆಗಸ್ಟ್ 12, 2005ರಂದು ನಾಸಾ ಮಂಗಳ ಬೇಹುಗಾರಿಕಾ ಪರಿಭ್ರಮಕವನ್ನು ಮಂಗಳದತ್ತ ಹಾರಿಸಲಾಯಿತು. ಮಂಗಳದ ಮೇಲ್ಮೈ ನಕ್ಷಾ ತಯಾರಿಕೆ ಮತ್ತು ಮುಂಬರುವ ಯಾತ್ರೆಗಳಿಗೆ ಸೂಕ್ತವಾದ ಇಳಿಯುವ ತಾಣಗಳನ್ನು ಕಂಡುಹಿಡಿಯುವುದು ಈ ಪರಿಭ್ರಮಕದ ಉದ್ದೇಶಗಳು. ಇದು ಮಾರ್ಚ್ 10, 2006ರಂದು ತನ್ನ ಪರಿಭ್ರಮಣೆಯನ್ನು ಶುರುಮಾಡಿತು. 2007ರಲ್ಲಿ ಉಡಾವಣೆಯ ನಿರೀಕ್ಷೆಯಲ್ಲಿರುವ ನಾಸಾ ಫೀನಿಕ್ಸ್ನೌಕೆಯು ಮುಂದಿನ ನಿಗದಿತ ಮಂಗಳಯಾನ.[]

ಮುಂದಿನ ಅನ್ವೇಷಣಾ ಯೋಜನೆಗಳು

ಬದಲಾಯಿಸಿ

ಭವಿಷ್ಯದಲ್ಲಿ ಮಾನವರಹಿತ ಮಂಗಳಯಾನದ ಯೋಜನೆಗಳಲ್ಲಿ ಈ ಕೆಳಗಿನವು ಸೇರಿವೆ: 2007ರಲ್ಲಿ ಫೀನಿಕ್ಸ್ ನೌಕೆ, ನಂತರ 2009ರಲ್ಲಿ ಮಂಗಳ ವಿಜ್ಞಾನ ಪ್ರಯೋಗಶಾಲೆ, ಫೋಬೋಸ್‌ನಿಂದ ಮಣ್ಣು-ಕಲ್ಲುಗಳ ಮಾದರಿಗಳನ್ನು ಭೂಮಿಗೆ ಮರಳಿ ತರುವ ಉದ್ದೇಶವಿರುವ Phobos-Grunt ಯಾನ. ಇವಲ್ಲದೆ ಇತರ ಯಾನಗಳನ್ನು ಪ್ರಸ್ತಾಪಿಸಲಾಗಿದ್ದರೂ, ಇವು ಯಾವುದನ್ನೂ ಇದುವರೆಗೆ ದೃಢಪಡಿಸಲಾಗಿಲ್ಲ.

2004ರಲ್ಲಿ ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್‌ರವರು ಘೋಷಿಸಿದ ಬಾಹ್ಯಾಕಾಶ ಅನ್ವೇಷಣಾ ಆಕಾಂಕ್ಷೆಯಲ್ಲಿ ಮಾನವಸಹಿತ ಮಂಗಳಯಾನಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.[] 2030 ಮತ್ತು 2035ರ ನಡುವೆ ಮಂಗಳದ ಮೇಲೆ ಮಾನವರನ್ನು ತಲುಪಿಸಬಹುದೆಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಆಶಾದಾಯಕವಾಗಿದೆ. ಇದಕ್ಕಿಂತ ಮೊದಲು ಒಂದಕ್ಕಿಂತ ಒಂದು ದೊಡ್ಡ ಅನ್ವೇಷಕಗಳನ್ನು ಹಾರಿಸಲಾಗುತ್ತದೆ. ಇವುಗಳಲ್ಲಿ ಮೊದಲನೆಯದು 2013ರಲ್ಲಿ ಹಾರಿಸಲಾಗುವ ExoMars ಅನ್ವೇಷಕ.[೧೦][೧೧] ಇದರ ನಂತರ 'ಮಂಗಳ ಶಿಲಾಮಾದರಿ ಮರಳುವಿಕೆ ಯಾನ'ಗಳು ಶುರುವಾಗುತ್ತವೆ. ಇದೇರೀತಿಯಲ್ಲಿ, ಈ ಯಾನದ ಪೂರ್ವಸಿದ್ಧತೆಯ ಉದ್ದೇಶದಿಂದಾಗಿ 2020 ಮತ್ತು 2025ರ ನಡುವೆ ಗಗನಯಾತ್ರಿಗಳನ್ನು ಚಂದ್ರನತ್ತ ಕಳುಹಿಸಲಾಗುವುದು.

ನಾಸಾ ಕಳಿಸಿದ ಅಪಾರ್ಚುನಿಟಿ ರೋವರ್‌ ನೌಕೆ ಸ್ಥಗಿತ

ಬದಲಾಯಿಸಿ
 
NASA Mars Rover: ರೋವರ್ನ ಮಾರ್ಸ್‍ನ- ಕಲಾವಿದನ ಕಲ್ಪನೆ ಚಿತ್ರ

ಅಮೆರಿಕದ ಬಾಹ್ಯಾಕಾಶ ಸಂಸ್ಥೆ (ನಾಸಾ)ಯು, ಮಂಗಳ ಗ್ರಹದ ಮೇಲ್ಮೈ ಅಧ್ಯಯನಕ್ಕಾಗಿ ಅಪಾರ್ಚುನಿಟಿ ರೋವರ್‌ ನೌಕೆಯನ್ನು 2004ರ ಜನವರಿ 24 ರಂದು ಮಳಿಸಿತ್ತು. ಅದು 15 ವರ್ಷಗಳನ್ನು ಪೂರೈಸಿ ಸ್ತಗಿತಗೊಂಡಿದೆ. ಅದು 6 ಚಕ್ರಗಳನ್ನು ಹೊಂದಿದೆ. ಆ ನೌಕೆಯು 2004ರ ಜನವರಿ 24ರಂದು ಮಂಗಳ ಗ್ರಹದ ಮೆರಿಡಿಯೆನಿ ಪ್ಲೇನಮ್‌ ಎಂದು ಕರೆಯಲಾಗುವ ಭಾಗದಲ್ಲಿ ಇಳಿದಿತ್ತು. ಕೆಂಪು ಗ್ರಹವಾದ ಕುಜದಿಂದ ತನ್ನ ಮೊದಲ ಸಂದೇಶವನ್ನು ಭೂಮಿಗೆ ರವಾನಿಸಿತ್ತು. 2018ರ ಫೆಬ್ರುವರಿಗೂ ಮೊದಲು "ಅಪಾರ್ಚುನಿಟಿ ರೋವರ್" ಮಂಗಳನದ ಅಂಗಳದಲ್ಲಿ 45 ಕಿ.ಮೀ ಪ್ರಯಾಣ ಮಾಡಿದೆ. ಈ ಕೆಂಪು ಗ್ರಹದಲ್ಲಿರುವ ಅಪಾರ ದೂಳಿನಿಂದ ‘ಅಪಾರ್ಚುನಿಟಿ ರೋವರ್‌’ 2018ರ ಜೂನ್‌ನಲ್ಲಿ ಭೂಮಿಯೊಂದಿಗೆ ಸಂಪರ್ಕ ಕಳೆದುಕೊಂಡು, ಕಾರ್ಯ ಸ್ಥಗಿತಗೊಳಿಸಿದೆ ಎಂದು ನಾಸಾ ಹೇಳಿದೆ.[೧೨]

ಉಲ್ಲೇಖಗಳು

ಬದಲಾಯಿಸಿ
  1. ಬೃಹತ್ ಬ್ರಹ್ಮಾಂಡ ಪಿಶಾಚಿಯ ಹಸಿವು ಕಡಿಮೆಯಾಯಿತೇ?
  2. "ಮಂಗಳಕ್ಕೆ ಇತರ ಯಾತ್ರೆಗಳು". Archived from the original on 2012-05-30. Retrieved 2006-12-31.
  3. Mars Global Surveyor
  4. Odyssey Spacecraft Generates New Mars Mysteries
  5. Europe's Beagle 2 Mars Probe Stays Ominously Silent
  6. http://www.esa.int/SPECIALS/Mars_Express/SEMLQ71DU8E_0.html
  7. Mars Exploration Rovers- Science
  8. MRO: Science
  9. When do we get to Mars?
  10. "ExoMars". Archived from the original on 2006-10-13. Retrieved 2006-12-31.
  11. European Mars launch pushed back
  12. ಮಂಗಳದಲ್ಲಿ 15 ವರ್ಷ ಪೂರೈಸಿದ ಅಪಾರ್ಚುನಿಟಿ ರೋವರ್‌;ಪಿಟಿಐ;: 25 ಜನವರಿ 2019,