ವಿಕಿಪೀಡಿಯ:ವಿಶೇಷ ಬರಹ/ಸಂಚಿಕೆ - ೨೩

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ (ಅಥವಾ ಅಮೃತಸರ ಹತ್ಯಾಹಾಂಡ) - ಅಮೃತಸರದಲ್ಲಿರುವ ಜಲಿಯನ್‍ವಾಲಾ ಬಾಗ್ ಉದ್ಯಾನದಲ್ಲಿ ಏಪ್ರಿಲ್ ೧೩, ೧೯೧೯ರಂದು ಬ್ರಿಟೀಷ್ ಭಾರತ ಸೇನೆಯಿಂದ ಅಲ್ಲಿ ನೆರೆದಿದ್ದ ಜನರ ಮೇಲೆ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ನಡೆದ ಮಾರಣಹೋಮ.

ಅಂದು ಪಂಜಾಬ್ ರಾಜ್ಯದ ಅಮೃತಸರದಲ್ಲಿನ ಹೃದಯಭಾಗದಲ್ಲಿರುವ ಜಲಿಯನ್‍ವಾಲ ಬಾಗ್ ಉದ್ಯಾನದಲ್ಲಿ ಸಹಸ್ರಾರು ಮಂದಿ ಭಾರತೀಯರು, ಮುಖ್ಯವಾಗಿ ಪಂಜಾಬಿ ನಾಗರೀಕರು, ಸಮಾವೇಶಗೊಂಡಿದ್ದರು.

ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್, ಉದ್ಯಾನದೊಳಗೆ ಕಾಲಿಡುತ್ತಲೇ, ಅಲ್ಲಿ ನೆರೆದಿದ್ದವರಿಗೆ ಯಾವೊಂದು ಎಚ್ಚರಿಕೆಯನ್ನೂ ಕೊಡದೆ, ಹಠಾತ್ತಾಗಿ ಗುಂಡಿನ ಮಳೆಗರೆವಂತೆ ತಮ್ಮ ತುಕಡಿಗೆ ಆದೇಶವನ್ನಿತ್ತ. ಗುಂಡಿನ ದಾಳಿಯು ಸಂಜೆ ೧೭:೧೫ಕ್ಕೆ ಪ್ರಾರಂಭವಾದದ್ದು ಸುಮಾರು ಹತ್ತರಿಂದ ಹದಿನೈದು ನಿಮಿಷಗಳ ಕಾಲ, ಸತತವಾಗಿ ನಡೆಯಿತು. ಅಧಿಕೃತ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ೩೭೯. ಖಾಸಗಿ ಮೂಲಗಳ ಪ್ರಕಾರ ಸಾವಿಗೀಡಾದವರ ಸಂಖ್ಯೆ ಸಾವಿರಕ್ಕೂ ಹೆಚ್ಚು, ಹಾಗು ಗಾಯಗೊಂಡವರ ಸಂಖ್ಯೆ ೧೨೦೦ಕ್ಕೂ ಹೆಚ್ಚು.

ಮಾರ್ಚ್ ೧೩ ೧೯೪೦ರಂದು ಸಿಖ್ಖರ ಕ್ರಾಂತಿಕಾರಿ ಎಂದು ಹೇಳಲಾಗುವ, ಹತ್ಯಾಕಾಂಡದ ಪ್ರತ್ಯಕ್ಷದರ್ಶಿ ಹಾಗು ಸ್ವತಃ ಗಾಯಗೊಂಡ ಉಧಮ್ ಸಿಂಗ್ ಲಂಡನ್ನಿನ ಕ್ಯಾಕ್‍ಸ್ಟನ್ ಹಾಲ್ ನಲ್ಲಿ ರೆಜಿನಾಲ್ಡ್ ಡೈಯರ್ಅನ್ನು ಹತ್ಯೆಗೈದರು.