ಉಪಾಧ್ಯಾಯ ಶ್ರೀನಿವಾಸ ವಾದಿರಾಜ್‌ (೧೯೨೭-ಫೆಬ್ರುವರಿ ೫, ೨೦೦೪) ಕನ್ನಡದ ಪ್ರಸಿದ್ಧ ರಂಗಭೂಮಿ, ಚಲನಚಿತ್ರ ನಟ, ನಿರ್ಮಾಪಕ ಮತ್ತು ನಿರ್ದೇಶಕರು.

ವಾದಿರಾಜ್
ಜನನ೧೯೨೭
ಉಡುಪಿ ಜಿಲ್ಲೆಯ ಪಣಿಯಾಡಿ
ಮರಣಫೆಬ್ರುವರಿ ೫, ೨೦೦೪
ವೃತ್ತಿ(ಗಳು)ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ

ಕಲೆಯಲ್ಲೇ ಅರಳಿದ ಜೀವನ

ಬದಲಾಯಿಸಿ

ವಾದಿರಾಜ್ ಅವರು ಜನಿಸಿದ್ದು ೧೯೨೭ರ ವರ್ಷದಲ್ಲಿ. ಉಡುಪಿ ಜಿಲ್ಲೆಯ ಪಣಿಯಾಡಿ ಇವರ ಹುಟ್ಟೂರು. ಬಾಲ್ಯದಲ್ಲೇ ಕಲೆ ಅವರನ್ನು ಆಪ್ತವಾಗಿ ತನ್ನವನನ್ನಾಗಿಸಿಕೊಂಡಿಸಿತು. “ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು” ಎಂಬ ಮಾತನ್ನು ಚಿತ್ರರಂಗಕ್ಕೆ ಅನ್ವಯಿಸಿದಾಗ ನೆನಪಾಗುವ ಪ್ರಮುಖ ಹೆಸರು ವಾದಿರಾಜ್. ‘ಅಪ್ಪ, ಅಮ್ಮ ಜಗಳದಲಿ ಕೂಸು ಬಡವಾಯ್ತು’ ಎಂಬಂತಹ ನೆನಪಿನಲ್ಲುಳಿಯುವ ಅಭಿನಯ, ಅವರ ಕುಳ್ಳಗಿನ ದುಂಡು ದುಂಡಾದ ಆಕೃತಿ ಇವುಗಳೆಲ್ಲದರ ಜೊತೆಗೆ ಅವರು ಕನ್ನಡದಲ್ಲಿ ನಿರ್ಮಿಸಿದ ಶ್ರೇಷ್ಠ ಚಿತ್ರಗಳಾದ ನಾಂದಿ, ನಂದಾದೀಪ, ಸೀತಾ, ನಮ್ಮ ಮಕ್ಕಳು, ದಂಗೆ ಎದ್ದ ಮಕ್ಕಳು ಮುಂತಾದ ಮಹತ್ವಪೂರ್ಣ ಚಿತ್ರಗಳಿಂದ ಅವರು ಅಜರಾಮರರಾಗಿದ್ದಾರೆ. ಕನ್ನಡ ಚಿತ್ರರಂಗದ ಮಹಾನ್ ಹಾಸ್ಯ ನಟರಾದ ನರಸಿಂಹ ರಾಜು, ಬಾಲಕೃಷ್ಣ, ದ್ವಾರಕೀಶರ ಸಾಲಿನಲ್ಲಿ ವಾದಿರಾಜ್ ಅವರ ಹೆಸರೂ ಚಿರಸ್ಮರಣೀಯ. ನಿರ್ದೇಶನದಲ್ಲೂ ಅವರದ್ದು ಎತ್ತಿದ ಕೈ.

ರಂಗಭೂಮಿ ಮತ್ತು ಚಿತ್ರರಂಗದಲ್ಲಿ

ಬದಲಾಯಿಸಿ

ಅಭಿನಯ ಕಲೆಯಲ್ಲಿ ತೊಡಗಿದ್ದ ತಮ್ಮ ತಂದೆಯವರಿಂದ ಪ್ರಭಾವಿತರಾದ ವಾದಿರಾಜ್‌ ಕೇವಲ ಚಲನಚಿತ್ರಗಳಲ್ಲಷ್ಟೇ ಅಲ್ಲದೆ ಸಹಸ್ರಾರು ನಾಟಕಗಳಲ್ಲೂ ಅಭಿನಯಿಸಿದ್ದರು. 1954ರಲ್ಲಿ ‘ಕೋಕಿಲವಾಣಿ’ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಾದಿರಾಜ್‌ ನಟಿಸಿದ ಚಿತ್ರಗಳ ಸಂಖ್ಯೆ ನೂರಕ್ಕೂ ಹೆಚ್ಚಿನದು. 1958ರ ವರ್ಷದಲ್ಲಿ ತೆರೆಕಂಡ ಕೃಷ್ಣಗಾರುಡಿ ಚಿತ್ರ ಅವರನ್ನು ಪ್ರಖ್ಯಾತರನ್ನಾಗಿಸಿತು. ಮುಂದೆ ಕಂಡ ‘ಧರ್ಮ ವಿಜಯ’, ‘ಸ್ವರ್ಣ ಗೌರಿ’ ಮುಂತಾದ ಚಿತ್ರಗಳಲ್ಲಿನ ಅವರ ಹಾಸ್ಯನಟನೆ ಅಪಾರ ಜನಮೆಚ್ಚುಗೆ ಪಡೆಯಿತು.

ಶ್ರೇಷ್ಠ ಚಿತ್ರಗಳ ನಿರ್ಮಾಪಕ

ಬದಲಾಯಿಸಿ

ಹೀಗೆ ನಟನೆಯಲ್ಲಿ ಪ್ರಸಿದ್ಧಿ ಪಡೆಯುತ್ತಿದ್ದ ವಾದಿರಾಜ್, ಪ್ರಸಿದ್ಧ ಹಿಂದಿ ಚಿತ್ರಗಳ ನಿರ್ದೇಶಕ ವಿ. ಶಾಂತಾರಾಂ ಅವರ ಚಿತ್ರಗಳಿಂದ ಪ್ರೇರಿತರಾಗಿ ‘ನಂದಾ ದೀಪ’ ಚಿತ್ರಕಥೆ ಬರೆದು, ಶ್ರೀಭಾರತಿ ಲಾಂಛನದಲ್ಲಿ ನಿರ್ಮಿಸಿದರು. ಈ ಚಿತ್ರದ ಮೂಲಕ ಕನ್ನಡದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ ಎಂ. ಆರ್. ವಿಠ್ಠಲರನ್ನು ಪರಿಚಯಿಸಿದರು. ಈ ಚಿತ್ರ ರಾಷ್ಟ್ರಪ್ರಶಸ್ತಿ ಗಳಿಸಿತು. 1964ರ ವರ್ಷದಲ್ಲಿ ಅವರು ನಿರ್ಮಿಸಿದ ನವಜೀವನ ಮತ್ತು ನಾಂದಿ ಕೂಡಾ ರಾಷ್ಟ್ರ ಪ್ರಶಸ್ತಿ ಗಳಿಸಿದವು. ‘ನಾಂದಿ’ ಚಿತ್ರವನ್ನು ನಿರ್ದೇಶಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ನಿರ್ದೇಶಕ ಎನ್. ಲಕ್ಷ್ಮೀನಾರಾಯಣ್ ಅವರು. ವಿದೇಶಿ ನೆಲಕ್ಕೆ ಪಾದಾರ್ಪಣೆ ಮಾಡಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ ಪ್ರಪ್ರಥಮ ಕನ್ನಡ ಚಿತ್ರ ಎಂಬ ಹೆಗ್ಗಳಿಕೆ ‘ನಾಂದಿ’ ಚಿತ್ರದ್ದು. ಇದು ಕನ್ನಡದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದು ಎಂದು ಚಿತ್ರವಿದ್ವಾಂಸರಿಂದ ಪರಿಗಣಿತವಾಗಿದೆ.

1967ರ ವರ್ಷದಲ್ಲಿ ತಮ್ಮ ಚಿತ್ರಸಂಸ್ಥೆಯನ್ನು ವಿಜಯ ಭಾರತಿ ಎಂದು ಪುನರ್ನಾಮಕರಣ ಮಾಡಿದ ವಾದಿರಾಜ್, ಪ್ರೇಮಕ್ಕೂ ಪರ್ಮಿಟ್ಟೆ, ನಮ್ಮ ಮಕ್ಕಳು, ಸೀತಾ, ನಾ ಮೆಚ್ಚಿದ ಹುಡುಗ, ಸೀತೆಯಲ್ಲ ಸಾವಿತ್ರಿ, ನಮ್ಮಮ್ಮನ ಸೊಸೆ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದರು.

ಎಂಭತ್ತರ ದಶಕದಲ್ಲಿ ಮೂಡಿ ಬಂದ ವಾದಿರಾಜರ ದಂಗೆ ಎದ್ದ ಮಕ್ಕಳು ಚಿತ್ರ ರಜತ ಕಮಲ ಪ್ರಶಸ್ತಿ ಗಳಿಸಿತು. ರಾಜ್ ಕುಮಾರ್ ಅವರ ‘ಅದೇ ಕಣ್ಣು’ ಚಿತ್ರ ವಾದಿರಾಜ್ ನಿರ್ಮಾಣದ ಕಡೆಯ ಚಿತ್ರ.

ಚಲನಚಿತ್ರ ನಿರ್ಮಾಣದ ಜೊತೆಗೆ ವಾದಿರಾಜ್ ಅವರು ಹಲವಾರು ವಾರ್ತಾ ಚಿತ್ರ, ದೂರದರ್ಶನ ಚಿತ್ರಗಳನ್ನೂ ನಿರ್ಮಿಸಿ ನಿರ್ದೇಶಿಸಿದ್ದರು. ಶ್ರೇಷ್ಠ ನಿರ್ದೇಶಕರನ್ನು ಚಿತ್ರರಂಗಕ್ಕೆ ಕೊಡುವುದರ ಜೊತೆಗೆ ವಾದಿರಾಜ್ ಅವರು ಹಲವಾರು ಪ್ರತಿಭೆಗಳನ್ನು ಸಹಾ ಚಿತ್ರರಂಗಕ್ಕೆ ನೀಡಿದ್ದಾರೆ. ವಾದಿರಾಜ್ ಅವರ ಸಹೋದರಿ ಹರಿಣಿ ಅವರು ಕನ್ನಡ ಚಿತ್ರರಂಗದ ಪ್ರಸಿದ್ಧ ನಾಯಕಿಯರಲ್ಲಿ ಒಬ್ಬರು. ಅವರ ಸಹೋದರ ಜವಹರಲಾಲ್ ಹಲವಾರು ವಾದಿರಾಜ್ ಚಿತ್ರಗಳ ಸಹನಿರ್ಮಾಪಕರಾಗಿದ್ದರು.

ವಾದಿರಾಜ್ ಅವರ ಚಿತ್ರಗಳೆಲ್ಲಾ ಸಂಗೀತ ಮಾಧುರ್ಯಕ್ಕೆ ಹೆಸರಾಗಿದ್ದವು. ಅವರ ಚಿತ್ರಗಳಿಗೆಲ್ಲ ವಿಜಯಭಾಸ್ಕರ್ ಅವರ ಸಂಗೀತವಿತ್ತು. ಕನ್ನಡವಲ್ಲದೆ ಇತರ ಭಾಷೆಯ ಹಲವಾರು ಚಿತ್ರಗಳಲ್ಲಿ ಸಹಾ ಅವರು ನಟಿಸಿದ್ದರು.

ಪ್ರಶಸ್ತಿ ಗೌರವ

ಬದಲಾಯಿಸಿ

ವಾದಿರಾಜ್ ಅವರಿಗೆ ಡಾ. ರಾಜ್ ಕುಮಾರ್ ಪ್ರಶಸ್ತಿ ಸಂದಿತ್ತು.

ಬ್ರಹ್ಮಚಾರಿಗಳಾಗಿದ್ದ ವಾದಿರಾಜ್ ಫೆಬ್ರುವರಿ ೨೦೦೪ರಲ್ಲಿ ಈ ಲೋಕವನ್ನಗಲಿದರು. ತಮ್ಮ ಪ್ರತಿಭೆ, ಸಜ್ಜನಿಕೆ, ಸಾಂಸ್ಕೃತಿಕ ಆಸಕ್ತಿ ಮತ್ತು ಶ್ರೇಷ್ಠ ಕೊಡುಗೆಗಳಿಂದ ಕನ್ನಡ ನಾಡಿನ ಜನರ ಮನದಲ್ಲಿ ಅವರು ನಿತ್ಯ ವಿರಾಜಿತರಾಗಿದ್ದಾರೆ.

ಹೊರಕೊಂಡಿಗಳು

ಬದಲಾಯಿಸಿ

ಹಿಂದೂ ಪತ್ರಿಕೆಯಲ್ಲಿ ಲೇಖನ Archived 2004-03-16 ವೇಬ್ಯಾಕ್ ಮೆಷಿನ್ ನಲ್ಲಿ.