ವರ್ಮನ್ ರಾಜವಂಶ (350-650) ಕಾಮರೂಪದ ಮೊದಲ ಐತಿಹಾಸಿಕ ರಾಜವಂಶ. ಇದನ್ನು ಸಮುದ್ರಗುಪ್ತನ ಸಮಕಾಲೀನನಾದ ಪುಷ್ಯ ವರ್ಮನ್ ಸ್ಥಾಪಿಸಿದನು.[೧] ಈ ರಾಜವಂಶ ಗುಪ್ತ ಸಾಮ್ರಾಜ್ಯದ ಸಾಮಂತವಾಯಿತು, ಆದರೆ ಗುಪ್ತರ ಅಧಿಕಾರ ಕ್ಷೀಣಿಸಿದಂತೆ, ಮಹೇಂದ್ರ ವರ್ಮನ್ (470-494) ಎರಡು ಅಶ್ವಮೇಧ ಯಾಗಗಳನ್ನು ಮಾಡಿ ಸಾಮ್ರಾಜ್ಯಶಾಹಿ ನೊಗವನ್ನು ಕಿತ್ತೆಸೆದನು. ಕಾಮರೂಪದ ಮೂರು ರಾಜವಂಶಗಳ ಪೈಕಿ ಮೊದಲನೆಯದಾದ ವರ್ಮನ್ ರಾಜವಂಶದ ನಂತರ ಮ್ಲೇಚ್ಛ ರಾಜವಂಶ ಮತ್ತು ಪಾಲ ರಾಜವಂಶಗಳು ಅಸ್ತಿತ್ವಕ್ಕೆ ಬಂದವು.

ವರ್ಮನ್ ರಾಜವಂಶದ ವಂಶಾವಳಿ ಅತ್ಯಂತ ಪೂರ್ಣವಾಗಿ ಕೊನೆಯ ವರ್ಮನ್ ರಾಜನಾದ ಭಾಸ್ಕರ ವರ್ಮನ್‍ನ (೬೫೦-೬೫೫) ಡೂಬಿ ಮತ್ತು ನಿಧಾನ್‍ಪುರ್ ತಾಮ್ರಫಲಕ ಶಾಸನಗಳಲ್ಲಿ ಕಾಣಿಸುತ್ತದೆ, ಮತ್ತು ಇದರಲ್ಲಿ ಪುಷ್ಯ ವರ್ಮನ್ ಅನ್ನು ಸ್ಥಾಪಕನೆಂದು ಹೆಸರಿಸಲಾಗಿದೆ. ಪುಷ್ಯ ವರ್ಮನ್ ನರಕ, ಭಗದತ್ತ ಮತ್ತು ವಜ್ರದತ್ತನ ಕುಟುಂಬದಲ್ಲಿ ಈ ಪೌರಾಣಿಕ ಪೂರ್ವಜರ ಮೂರು ಸಾವಿರ ವರ್ಷಗಳ ನಂತರ ಜನಿಸಿದ್ದನು ಎಂದು ಭಾಸ್ಕರ ವರ್ಮನ್‍ನ ಡೂಬಿ ತಾಮ್ರಫಲಕ ಶಾಸನ ಪ್ರತಿಪಾದಿಸುತ್ತದೆ. ಮ್ಲೇಚ್ಛ ರಾಜವಂಶವು, ಇದೇ ಮೂಲವನ್ನು ಸಾಧಿಸುತ್ತಾರಾದರೂ, ಅವರು ಸ್ಥಳೀಯ ಬುಡಕಟ್ಟು ದೊರೆಗಳು. ಒಬ್ಬ ಇತಿಹಾಸಕಾರನ ಪ್ರಕಾರ, ಕಾಮರೂಪ ಮತ್ತು ಶಲಸ್ತಂಭದಲ್ಲಿ ಮ್ಲೇಚ್ಛ ದಂಗೆಯಾಯಿತು, ಮತ್ತು ಮ್ಲೇಚ್ಛರ ನಾಯಕ ಅಥವಾ ರಾಜ್ಯಪಾಲನು ಭಾಸ್ಕರ ವರ್ಮನ್‍ನ ತಕ್ಷಣದ ಉತ್ತರಾಧಿಕಾರಿ ಅವಂತಿ ವರ್ಮನ್ ಅನ್ನು ಕೆಳಗಿಳಿಸಿ ಸಿಂಹಾಸನವನ್ನು ಕಿತ್ತುಕೊಂಡನು.

ಕೊನೆಯವನಾದ ಭಾಸ್ಕರ ವರ್ಮನ್ ಈ ರಾಜವಂಶದ ಅತ್ಯಂತ ಸುಪ್ರಸಿದ್ಧ ದೊರೆಯಾಗಿದ್ದನು, ಮತ್ತು ವಿಷ್ಣುವಿನ ವಂಶಸ್ಥನೆಂದು ಸಾಧಿಸಿದ್ದನು. ಇವನು ಹರ್ಷವರ್ಧನನನ್ನು ಪಾಟಲಿಪುತ್ರದಿಂದ ಕನ್ನೌಜ್‍ವರೆಗಿನ ಧಾರ್ಮಿಕ ಮೆರವಣಿಗೆಗಳಿಗೆ ಜೊತೆಗೂಡಿದನು. ವರ್ಮನ್ ರಾಜವಂಶದ ರಾಜರು ಆರ್ಯಾವರ್ತದ ಇತರ ದೇಶಗಳೊಡನೆ ರಾಜತಾಂತ್ರಿಕ ಮತ್ತು ವೈವಾಹಿಕ ಎರಡೂ ಸಂಬಂಧಗಳನ್ನು ಕಾಪಾಡಿಕೊಂಡರು. ಪುಷ್ಯ ವರ್ಮನ್‍ನಿಗೆ ರಾಜ ಪುಷ್ಯಮಿತ್ರ ಶುಂಗನ ಹೆಸರಿಡಲಾಯಿತು, ಮತ್ತು ಇವನು ತನ್ನ ಮಗ ಸಮುದ್ರ ವರ್ಮನ್‍ನಿಗೆ ಆರ್ಯಾವರ್ತದ ರಾಜರ ಪ್ರಶಂಸೆಯಲ್ಲಿ ಸಮುದ್ರಗುಪ್ತನ ಹೆಸರಿಟ್ಟನು. ರಾಜ ಬಾಲ ವರ್ಮನ್ ತನ್ನ ಪುತ್ರಿ ಅಮೃತ ಪ್ರಭಾಳಿಗಾಗಿ ಸ್ವಯಂವರವನ್ನು ಏರ್ಪಡಿಸಿದನು; ಮತ್ತು ಇದಕ್ಕೆ ವಿಭಿನ್ನ ದೇಶಗಳ ರಾಜಕುಮಾರರು ಬಂದಿದ್ದರು. ಈ ರಾಜಕುಮಾರಿಯು ಅಂತಿಮವಾಗಿ ಕಾಶ್ಮೀರದ ರಾಜಕುಮಾರ ಮೇಘವಾಹನನನ್ನು ತನ್ನ ಪತಿಯಾಗಿ ಆಯ್ಕೆಮಾಡಿದಳು. ಥಾನೇಸರ್‍ನ ರಾಜ ಹರ್ಷ ಮತ್ತು ಭಾಸ್ಕರ ವರ್ಮನ್ ನಡುವಿನ ಮೈತ್ರಿಯು ಸಂಪೂರ್ಣ ಪೂರ್ವ ಭಾರತಕ್ಕೆ ವರ್ಮನ್ ರಾಜವಂಶದ ರಾಜಕೀಯ ಪ್ರಭಾವದ ಹರಡಿಕೆಗೆ ಕಾರಣವಾಯಿತು.

ಉಲ್ಲೇಖಗಳು ಬದಲಾಯಿಸಿ

  1. Arun Bhattacharjee (1993), Assam in Indian Independence, Page 143 While Pushyavarman was the contemporary of the Gupta Emperor Samudra Gupta, Bhaskaravarman was the contemporary of Harshavardhana of Kanauj.