ಬಿಸಿರಕ್ತವಿರುವ ಮಾನವರು ಮತ್ತು ಇತರ ಪ್ರಾಣಿಗಳಲ್ಲಿ ತೀವ್ರವಾದ ಮಿದುಳಿನ ಉರಿಯೂತ ಉಂಟು ಮಾಡುವ ರೇಬೀಸ್, ಒಂದು ವೈರಸ್‍ನಿಂದುಂಟಾಗುವ ರೋಗ.[] ಹುಚ್ಚುನಾಯಿ ರೋಗ ಎಂದೂ ಹೇಳವುದುಂಟು.

Rabies
Classification and external resources
ರೇಬೀಸ್ ಹೊಂದಿರುವ ಒಂದು ನಾಯಿ ಶಕ್ತಿಹೀನ (ಉದ್ರೇಕ ನಂತರ) ಸ್ಥಿತಿಯಲ್ಲಿ
ICD-10A82
DiseasesDB11148
MedlinePlus001334
eMedicinemed/1374 eerg/493 ped/1974
MeSHD011818

ರೋಗಲಕ್ಷಣಗಳು

ಬದಲಾಯಿಸಿ

ಆರಂಭಿಕ ರೋಗಲಕ್ಷಣಗಳು ಜ್ವರ ಮತ್ತು ಕಚ್ಚಲಾದ ಜಾಗದಲ್ಲಿ ಜುಮುಗುಟ್ಟುವಿಕೆಯನ್ನು ಒಳಗೊಳ್ಳಬಹುದು.[] ಈ ರೋಗಲಕ್ಷಣಗಳನ್ನು ಈ ಕೆಳಗಿನ ಒಂದು ಅಥವಾ ಹೆಚ್ಚಿನ ರೋಗಲಕ್ಷಣಗಳು ಅನುಸರಿಸಬಹುದು: ರಭಸದ ಚಲನವಲನಗಳು, ಅನಿಯಂತ್ರಿತ ಉದ್ವೇಗ, ನೀರಿನ ಭಯ, ದೇಹದ ಅಂಗಗಳನ್ನು ಚಲಿಸುವಲ್ಲಿ ಅಸಾಮರ್ಥ್ಯ, ಗೊಂದಲ, ಮತ್ತು ಪ್ರಜ್ಞೆ ಕಳೆದುಕೊಳ್ಳುವುದು.[] ರೋಗಲಕ್ಷಣಗಳು ಕಂಡುಬಂದ ನಂತರ ರೇಬೀಸ್ ಬಹುಮಟ್ಟಿಗೆ ಸಾವನ್ನುಂಟು ಮಾಡುತ್ತದೆ.[] ರೋಗ ತಗಲುವಿಕೆ ಮತ್ತು ರೋಗಲಕ್ಷಣಗಳ ಆರಂಭವಾಗುವಿಕೆಯ ನಡುವಿನ ಅವಧಿ ಸಾಮಾನ್ಯವಾಗಿ ಒಂದರಿಂದ ಮೂರು ತಿಂಗಳುಗಳಾಗಿರುತ್ತದೆ. ಕೆಲವೊಮ್ಮೆ, ಈ ಕಾಲಾವಧಿಯು ವಿಭಿನ್ನವಾಗಿ ಅಂದರೆ ಒಂದು ವಾರಕ್ಕಿಂತ ಕಡಿಮೆ ಸಮಯದಿಂದ ಹಿಡಿದು ಒಂದು ವರ್ಷಕ್ಕಿಂತ ಹೆಚ್ಚೂ ಇರಬಹುದು.[] ಕಾಲಾವಧಿಯು, ವೈರಸ್ ಕೇಂದ್ರ ನರಮಂಡಲವನ್ನು ತಲುಪಲು ಸಾಗಬೇಕಾದ ದೂರವನ್ನು ಆಧರಿಸಿರುತ್ತದೆ.[]

ಹುಚ್ಚುನಾಯಿ ಕಡಿತ ಅತಿ ಅಪಾಯಕಾರಿ. ಇದರ ಸೋಂಕಿನಿAದ ರೋಗಪೀಡಿತ ಮನುಷ್ಯರಲ್ಲಿ ಇಲ್ಲವೆ ಪ್ರಾಣಿಗಳಲ್ಲಿ ಕಂಡುಬರುವ ಮುಖ್ಯ ಲಕ್ಷಣಗಳಿವು; ಕಡಿದ ಜಾಗದಲ್ಲಿ ನೋವು ಮತ್ತು ನರಗಳ ಅದಿರಿಕೆ, ನೀರು ಕುಡಿಯಲು ಪ್ರಯತ್ನಿಸಿದಾಗ ಗಂಟಲ ನಾಳದಲ್ಲಿ ನೋವು ಮತ್ತು ಮಾಂಸಖಂಡಗಳ ಸಂಕೋಚನ. ಇದರಿಂದ ರೋಗಿಯಲ್ಲಿ ಜಲಭಯ ಮತ್ತು ವಾಯುಭಯ ಕಂಡುಬರುತ್ತವೆ. ಚಿತ್ತಚಾಂಚಲ್ಯ, ಹದಗೆಟ್ಟ ವರ್ತನೆ, ಅಸ್ಥಿರತೆ ಮುಂತಾದವು ಬಾಧಿಸತೊಡಗುತ್ತವೆ. ಈ ಲಕ್ಷಣಗಳೊಡನೆ ಅಪಸ್ಮಾರ ವ್ಯಾಧಿಯೂ ಬರಬಹುದು. ಕತ್ತಿನ ಹಿಂಭಾಗದಲ್ಲಿ ಊತ ಕಾಣಿಸಿಕೊಳ್ಳುವುದರಿಂದ ವ್ಯಾಧಿ ಬಲು ತ್ವರೆಯಿಂದ ಉಲ್ಬಣಿಸುತ್ತದೆ. ಹೆಚ್ಚು ಗಟ್ಟಿ ಮತ್ತು ಅಂಟಂಟಾದ ಜೊಲ್ಲು ಉತ್ಪತ್ತಿಯಾಗುತ್ತದೆ.

ರೇಬಿಸ್ ರೋಗಕ್ಕೆ ಈಡಾದವರ ಲಕ್ಷಣಗಳನ್ನು ತಿಳಿದುಕೊಳ್ಳುವುದರ ಜೊತೆಗೆ ಕಡಿದ ಪ್ರಾಣಿಯ ಆರೋಗ್ಯದ ಬಗ್ಗೆಯೂ ಅತ್ಯಂತ ಎಚ್ಚರ ವಹಿಸಬೇಕಾಗುತ್ತದೆ. ಅದು ಸತ್ತಿರಲಿ ಅಥವಾ ಬದುಕಿರಲಿ ಅದರಲ್ಲಿ ರೇಬಿಸ್ ವೈರಸುಗಳು ನೆಲೆಗೊಂಡಿವೆಯೇ ಎಂಬುದನ್ನು ಪರೀಕ್ಷಿಸಬೇಕು. ಈ ಪ್ರಾಣಿಗಳ ಮಿದುಳನ್ನು ಪ್ರತಿದೀಪ್ತಿರೋಧವಸ್ತು ತಂತ್ರಕ್ಕೆ (ಫ್ಲೂರೋಸೆಂಟ್ ಆಂಟಿಬಾಡಿ ಟೆಕ್ನೀಕ್) ಈಡುಮಾಡುವುದರಿಂದ ವ್ಯಾಧಿ ಪರೀಕ್ಷೆಯನ್ನು ನಡೆಸಬಹುದು.

ರೋಗದ ಹರಡುವಿಕೆ

ಬದಲಾಯಿಸಿ

ಮಾನವರಿಗೆ ರೇಬೀಸ್ ಇತರ ಪ್ರಾಣಿಗಳ (ಮುಖ್ಯವಾಗಿ ನಾಯಿ, ಬೆಕ್ಕು, ತೋಳಗಳಂತಹ ಕೆಲವೊಂದು ಪ್ರಾಣಿಗಳು) ಮೂಲಕ ಬರುತ್ತದೆ. ಸೋಂಕು ತಗಲಿದ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಅಥವಾ ಮನುಷ್ಯರನ್ನು ಪರಚಿದಾಗ ಅಥವಾ ಕಚ್ಚಿದಾಗ ರೇಬೀಸ್ ವರ್ಗಾಂತರಗೊಳ್ಳಬಲ್ಲದು.[] ಸೋಂಕು ತಗಲಿದ ಪ್ರಾಣಿಯ ಜೊಲ್ಲು, ಮತ್ತೊಂದು ಪ್ರಾಣಿ ಅಥವಾ ಮನುಷ್ಯರ ಲೋಳೆ ಪೊರೆಯೊಡನೆ ಸಂಪರ್ಕಕ್ಕೆ ಬಂದರೆ, ಅಂತಹ ಜೊಲ್ಲು ಸಹ ರೇಬೀಸ್ ಅನ್ನು ವರ್ಗಾಂತರಿಸಬಲ್ಲದು.[] ಮನುಷ್ಯರಲ್ಲಿನ ರೇಬೀಸ್ ಪ್ರಸಂಗಗಳಲ್ಲಿ ಬಹಳಷ್ಟು ನಾಯಿಕಡಿತದಿಂದ ಉಂಟಾದುವು.[] ಸಾಮಾನ್ಯವಾಗಿ ರೇಬೀಸ್ ನಾಯಿಗಳನ್ನು ಹೊಂದಿರುವ ದೇಶಗಳಲ್ಲಿ 99%ಕ್ಕಿಂತ ಹೆಚ್ಚು ರೇಬೀಸ್ ಪ್ರಸಂಗಗಳು ನಾಯಿಕಡಿತದಿಂದ ಉಂಟಾದವುಗಳಾಗಿರುತ್ತವೆ. [] ನಾಯಿ ಬೆಕ್ಕುಗಳಲ್ಲಿ ಮಾತ್ರವಲ್ಲ ಹುಲಿ, ಚಿರತೆ, ಕಿರುಬ, ಕೋತಿ, ಮುಂಗಸಿ, ಒಂಟೆ, ಕುದುರೆ, ಹೇಸರಗತ್ತೆ, ಇಲಿ ಮುಂತಾದ ಪ್ರಾಣಿಗಳಲ್ಲೂ ಈ ವೈರಸಿನ ಸೋಂಕು ಇರುತ್ತದೆ. ಅಮೇರಿಕಾ ರಾಷ್ಟ್ರಗಳಲ್ಲಿ, ರೇಬೀಸ್ ಉಂಟಾಗುವುದಕ್ಕೆ ಬಹಳ ಹೆಚ್ಚಿನ ಸಾಮಾನ್ಯ ಕಾರಣ ಬಾವಲಿಗಳು, ಮತ್ತು ಮನುಷ್ಯರಲ್ಲಿ ಕಂಡುಬರುವ ರೇಬೀಸ್‍ನಲ್ಲಿ 5%ಕ್ಕಿಂತ ಕಡಿಮೆ ನಾಯಿಗಳಿಂದ ಉಂಟಾದವು.[][] ದಂಶಕ ಅಥವಾ ಹೆಗ್ಗಣಗಳು ರೇಬೀಸ್ ಸೋಂಕಿಗೆ ಒಳಗಾಗುವುದು ಬಹಳ ಅಪರೂಪ.[] ರೇಬೀಸ್ ವೈರಸ್ ಹೊರಮೈ ನರಗಳನ್ನು ಅನುಸರಿಸುತ್ತಾ ಮಿದುಳಿನೆಡೆ ಸಾಗುತ್ತವೆ. ರೋಗಲಕ್ಷಣಗಳು ಆರಂಭವಾದ ನಂತರ ಮಾತ್ರ ರೋಗದ ಪತ್ತೆ ಸಾಧ್ಯವಾಗುವುದು.[]

ಚಿಕಿತ್ಸೆ

ಬದಲಾಯಿಸಿ

ಸಾಕು ಪ್ರಾಣಿಗಳಾದ ನಾಯಿ, ಬೆಕ್ಕು ಮುಂತಾದವಕ್ಕೆ ಅವು ಈ ರೋಗಕ್ಕೆ ಬಲಿಯಾಗದಂತೆ ನಿರ್ದಿಷ್ಟ ಅವಧಿಗಳಲ್ಲಿ ಪ್ರತಿರೋಧದ ಚುಚ್ಚುಮದ್ದು ಕೊಡಿಸಿ ರಕ್ಷಿಸುವುದಲ್ಲದೆ ಅವು ಮನುಷ್ಯನನ್ನು ಕಡಿದು ಗಾಯ ಮಾಡದಂತೆಯೂ ನೋಡಿಕೊಳ್ಳಬೇಕು. ಅಕಸ್ಮಾತ್ತಾಗಿ ಕಡಿದಾಗ ಆ ವ್ಯಕ್ತಿಗೆ ಒಡನೆ ಒದಗಿಸಬೇಕಾದ ರಕ್ಷಣೆ ಕ್ರಮಗಳಿವು:

  1. ಪ್ರಾಣಿ ಕಡಿದ ಅಥವಾ ಪರಚಿದ ಎಡೆಗಳಲ್ಲಿರುವ ಕಲ್ಮಷಗಳನ್ನು ಚೆನ್ನಾಗಿ ತೊಳೆದು ಶುಚಿಗೊಳಿಸಬೇಕು. ತೊಳೆದ ಗಾಯದ ಸುತ್ತ ಕಾರ್ಬಾಲಿಕ್ ಆಮ್ಲ ಹಚ್ಚಿ ಅನಂತರ ಅಬ್ಸೊಲ್ಯೂಟ್ ಸ್ಪಿರಿಟ್‌ನಿಂದ ಹೆಚ್ಚಿನ ಕಾರ್ಬಾಲಿಕ್ ಆಮ್ಲವನ್ನು ಲೇಪಿಸಬೇಕು. ಈ ಆಮ್ಲದ ಬದಲಾಗಿ ಅಯೋಡಿನ್‌ನ ಉಪಯೋಗ ಹೆಚ್ಚು ಉಪಯುಕ್ತವೆನಿಸಿದೆ. ರೇಬಿಸ್‌ನ ನಿರೋಧಕ ರಕ್ತಲಸಿಕೆಯನ್ನು (ಅ್ಯಂಟಿಸೀರಮ್) ಕೊಡಬೇಕು. ಜೊತೆಗೆ ಕುದುರೆ ರಕ್ತಲಸಿಕೆಯನ್ನೂ ಕೊಡಬೇಕು. ಪ್ರಾಣಿಗಳಿಂದ ಉಂಟಾದ ಗಾಯಗಳನ್ನು ಹೊಲಿಗೆ ಹಾಕಿ ಮುಚ್ಚಬಾರದು.
  2. ಕಡಿದ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳನ್ನು ಬಂಧಿಸಿ ಪಶುವೈದ್ಯರಿಂದ ಪರೀಕ್ಷೆ ಮಾಡಿಸಬೇಕು. ಅವನ್ನು 7-10 ದಿವಸ ಕಾಲ ಚೆನ್ನಾಗಿ ಅವಲೋಕಿಸಬೇಕು. ತೋಳ, ನರಿ ಮುಂತಾದ ಕ್ರೂರ ಪ್ರಾಣಿಗಳಾಗಿದ್ದರೆ ಅವನ್ನು ಕೊಂದು ಮಿದುಳನ್ನು ರೇಬಿಸ್ ವೈರಸ್ ಪರೀಕ್ಷಣೆಗೆ ಒಳಪಡಿಸಬೇಕು. ಸಾಕು ಪ್ರಾಣಿಯಾಗಿದ್ದರೆ ಅದನ್ನು 10 ದಿವಸ ಕಾಲ ತಪಾಸಣೆ ಮಾಡಬೇಕು. ಅಷ್ಟರಲ್ಲಿ ಅದು ಸತ್ತರೆ ರೋಗಿ ಪೂರ್ಣಾವಧಿ ಚುಚ್ಚುಮದ್ದು ತೆಗೆದುಕೊಳ್ಳಲೇಬೇಕು.

ಪ್ರಾಣಿ ನಿಯಂತ್ರಣ ಮತ್ತು ಲಸಿಕೆ ನೀಡುವಿಕೆ ಕಾರ್ಯಕ್ರಮಗಳು ಜಗತ್ತಿನ ಸಾಕಷ್ಟು ಪ್ರಾಂತ್ಯಗಳಲ್ಲಿ ರೇಬೀಸ್ ಅಪಾಯವನ್ನು ಕಡಿಮೆ ಮಾಡಿದೆ.[] ರೇಬೀಸ್ ಅಪಾಯ ಅತ್ಯಂತ ಹೆಚ್ಚು ಸಂಭವನೀಯವಾಗಿರುವ ಮಂದಿಗೆ ಮುಂಚಿತವಾಗಿಯೇ ರೋಗ-ನಿರೋಧಕ ಲಸಿಕೆ ನೀಡುವುದನ್ನು ಶಿಫಾರಸು ಮಾಡಲಾಗುತ್ತದೆ. ಅತ್ಯಂತ ಹೆಚ್ಚು ಅಪಾಯವುಳ್ಳ ಗುಂಪು, ಬಾವಲಿಗಳೊಂದಿಗೆ ಕೆಲಸ ಮಾಡುವವರನ್ನು ಅಥವಾ ರೇಬೀಸ್ ಸಾಮಾನ್ಯವಾಗಿರುವಂತೆ ಕಂಡುಬರುವ ಜಗತ್ತಿನ ಪ್ರದೇಶಗಳಲ್ಲಿ ದೀರ್ಘ ಸಮಯವನ್ನು ಕಳೆಯುವ ಜನರನ್ನು ಒಳಗೊಳ್ಳುತ್ತದೆ.[] ಈಗಾಗಲೇ ರೇಬೀಸ್‍ಗೆ ಒಡ್ಡಲ್ಪಟ್ಟ ಜನರಿಗೆ ರೇಬೀಸ್ ಲಸಿಕೆ ಮತ್ತು ಕೆಲವೊಮ್ಮೆ ರೇಬೀಸ್ ಇಮ್ಯುನೊಗ್ಲಾಬ್ಯುಲಿನ್ ಚಿಕಿತ್ಸೆಯನ್ನು ರೋಗಲಕ್ಷಣಗಳು ಆರಂಭವಾಗುವ ಮೊದಲೇ ನೀಡಲಾದರೆ, ಅಂತಹ ಚಿಕಿತ್ಸೆಯು ರೋಗವನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗುತ್ತದೆ.[] ಕಚ್ಚಲ್ಪಟ್ಟ ಮತ್ತು ತರಚಿರುವ ಜಾಗವನ್ನು 15 ನಿಮಿಷಗಳ ಕಾಲ ಸೋಪ್ ಮತ್ತು ನೀರಿನೊಂದಿಗೆ ಪೋವಿಡೊನ್ ಅಯೋಡಿನ್, ಅಥವಾ ಡಿಟರ್ಜೆಂಟ್‍ನಿಂದ ತೊಳೆಯುವುದರಿಂದ ವೈರಸ್‍ಗಳನ್ನು ಕೊಲ್ಲಬಹುದು ಮತ್ತು ಈ ಕ್ರಮವು ರೇಬೀಸ್ ವರ್ಗಾಂತರಗೊಳ್ಳುವುದನ್ನು ತಡೆಯುವಲ್ಲಿ ಸ್ವಲ್ಪ ಪರಿಣಾಮಕಾರಿಯಾಗಿರುವಂತೆ ಕಂಡುಬರುತ್ತದೆ.[] ರೇಬೀಸ್ ಸೋಂಕಿಗೊಳಗಾದ ನಂತರ ಬದುಕುಳಿದವರು ಕೇವಲ ಕೆಲವೇ ಮಂದಿ ಮತ್ತು ಇದು ಸಾಧ್ಯವಾದುದು ಮಿಲ್ವಾಕೀ ಪ್ರೊಟೊಕಾಲ್ ಎಂದು ಕರೆಯಲಾಗುವ ಒಂದು ವಿಸ್ತೃತ ಚಿಕಿತ್ಸೆಯಿಂದ.[]

ರೇಬೀಸ್ ಒಂದು ವರ್ಷಕ್ಕೆ ಇಡೀ ಜಗತ್ತಿನಲ್ಲಿ ಸುಮಾರು 26,000ದಿಂದ 55,000 ಸಾವುಗಳನ್ನುಂಟು ಮಾಡುತ್ತದೆ.[][] ಈ ಸಾವುಗಳಲ್ಲಿ 95%ಕ್ಕಿಂತ ಹೆಚ್ಚಿನವು ಏಷ್ಯಾ ಮತ್ತು ಆಫ್ರಿಕಾದಲ್ಲಿ ಉಂಟಾಗುತ್ತವೆ.[] ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಉಳಿದೆಲ್ಲಾ ಖಂಡಗಳಲ್ಲಿ, 150ಕ್ಕೂ ಹೆಚ್ಚಿನ ದೇಶಗಳಲ್ಲಿ ರೇಬೀಸ್ ಇದೆ.[] ಜಗತ್ತಿನಲ್ಲಿ 3 ಬಿಲಿಯನ್‍ಗಿಂತ ಹೆಚ್ಚು ಜನರು ರೇಬೀಸ್ ಆಗಬಹುದಾದ ಪ್ರಾಂತ್ಯಗಳಲ್ಲಿ ವಾಸಿಸುತ್ತಾರೆ.[] ಯೂರೋಪ್‍ನ ಬಹಳಷ್ಟು ಭಾಗಗಳಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ, ರೇಬೀಸ್ ಬಾವಲಿಗಳಲ್ಲಿ ಮಾತ್ರ ಕಂಡುಬರುತ್ತದೆ.[] ಹಲವು ಚಿಕ್ಕ ದ್ವೀಪ ರಾಷ್ಟ್ರಗಳಲ್ಲಿ ರೇಬೀಸ್ ಇಲ್ಲವೇ ಇಲ್ಲ.[]

ಉಲ್ಲೇಖಗಳು

ಬದಲಾಯಿಸಿ
  1. ೧.೦೦ ೧.೦೧ ೧.೦೨ ೧.೦೩ ೧.೦೪ ೧.೦೫ ೧.೦೬ ೧.೦೭ ೧.೦೮ ೧.೦೯ ೧.೧೦ ೧.೧೧ ೧.೧೨ ೧.೧೩ ೧.೧೪ ೧.೧೫ ೧.೧೬ ೧.೧೭ "Rabies Fact Sheet N°99". World Health Organization. July 2013. Retrieved 28 February 2014.
  2. Cotran RS; Kumar V; Fausto N (2005). Robbins and Cotran Pathologic Basis of Disease (7th ed.). Elsevier/Saunders. p. 1375. ISBN 0-7216-0187-1. {{cite book}}: Invalid |display-authors=3 (help); Unknown parameter |author-separator= ignored (help)
  3. ೩.೦ ೩.೧ ೩.೨ Tintinalli, Judith E. (2010). Emergency Medicine: A Comprehensive Study Guide (Emergency Medicine (Tintinalli)). McGraw-Hill. pp. Chapter 152. ISBN 0-07-148480-9.
  4. Hemachudha T, Ugolini G, Wacharapluesadee S, Sungkarat W, Shuangshoti S, Laothamatas J (May 2013). "Human rabies: neuropathogenesis, diagnosis, and management". Lancet neurology. 12 (5): 498–513. doi:10.1016/s1474-4422(13)70038-3. PMID 23602163.{{cite journal}}: CS1 maint: multiple names: authors list (link)
  5. Lozano R, Naghavi M, Foreman K, Lim S, Shibuya K, Aboyans V, Abraham J, Adair T, Aggarwal R; et al. (Dec 15, 2012). "Global and regional mortality from 235 causes of death for 20 age groups in 1990 and 2010: a systematic analysis for the Global Burden of Disease Study 2010". Lancet. 380 (9859): 2095–128. doi:10.1016/S0140-6736(12)61728-0. PMID 23245604. {{cite journal}}: Explicit use of et al. in: |author= (help)CS1 maint: multiple names: authors list (link)
  6. "Presence / absence of rabies in 2007". World Health Organization. 2007. Retrieved 1 March 2014.
  7. "Rabies-Free Countries and Political Units". CDC. Retrieved 1 March 2014.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರೇಬೀಸ್&oldid=1204334" ಇಂದ ಪಡೆಯಲ್ಪಟ್ಟಿದೆ