ರಾಘವೇಂದ್ರ ಇಟಗಿ
ರಾಘವೇಂದ್ರ ಇಟಗಿ | |
---|---|
ಜನನ | ಏಪ್ರಿಲ್ ೬. ೧೯೨೬ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿ |
ಮರಣ | ಡಿಸೆಂಬರ್ ೮, ೧೯೯೭ |
ವೃತ್ತಿ | ಆಕಾಶವಾಣಿ ಅಧಿಕಾರಿಗಳು, ಕನ್ನಡ ಕವಿಗಳು |
ವಿಷಯ | ಕನ್ನಡ ಸಾಹಿತ್ಯ |
- ರಾಘವೇಂದ್ರ ಇಟಗಿ (ಮಾರ್ಚ್ ೬, ೧೯೨೬ – ಡಿಸೆಂಬರ್ ೮, ೧೯೯೭) ಕನ್ನಡದ ಪ್ರಖ್ಯಾತ ಕವಿಗಳಲ್ಲೊಬ್ಬರು.
ಜೀವನ
ಬದಲಾಯಿಸಿಕವಿ ರಾಘವೇಂದ್ರ ಇಟಗಿಯವರು ೧೯೨೬ರ ಏಪ್ರಿಲ್ ೬ರಂದು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಇಟಗಿಯಲ್ಲಿ ಜನಿಸಿದರು. ತಂದೆ ಪ್ರಹ್ಲಾದಾಚಾರ್ಯರು, ತಾಯಿ ಸೀತಮ್ಮನವರು.
ರಾಘವೇಂದ್ರ ಇಟಗಿಯವರ ಹೆಚ್ಚಿನ ಶಾಲಾ ವಿದ್ಯಾರ್ಜನೆ ನಡೆದದ್ದು ಕೊಪ್ಪಳದಲ್ಲಿ. ಕಷ್ಟಪಟ್ಟು ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದ ಇಟಗಿಯವರು ಹೈದರಾಬಾದ್ ಆಕಾಶವಾಣಿಯಲ್ಲಿ ತಮ್ಮ ಉದ್ಯೋಗವನ್ನು ಪ್ರಾರಂಭಿಸಿ ಕನ್ನಡ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದ ರಾಘವೇಂದ್ರ ಇಟಗಿಯವರು, ಖಾಸಗಿಯಾಗಿ ಕುಳಿತು ಮಾನ್ವಿ ನರಸಿಂಗರಾಯರ ಸಹಾಯದಿಂದ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಹಾಗೂ ಎಂ.ಎ. (ಕನ್ನಡ) ಪದವಿಗಳನ್ನು ಪಡೆದರು. ಇವರಿಗೆ ಗುರುಗಳಾಗಿ ದೊರೆತಿದ್ದವರು ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಡಿ.ಕೆ. ಭೀಮಸೇನರಾಯರು
ಪ್ರಸಿದ್ಧ ಕವಿತೆ
ಬದಲಾಯಿಸಿಬೆಳಕು ಬಂದಿದೆ ಮನೆಯ ಹೊಸ್ತಿಲವರೆಗೆ ಕಿಟಕಿ ಬಾಗಿಲು ತೆರೆದು ಬರಮಾಡು ಒಳಗೆ ಎಲ್ಲಿಂದ ಬಂದಿಹುದು? ಏನೆಂದು ಒರೆಯುತಿದೆ? ಯಾರನ್ನು ಹಂಬಲಿಸಿ ಏಕಿಂತು ಕರೆಯುತಿದೆ? ಎಂಬ ಪ್ರಶ್ನೆಯ ಕೆದಕಿ ಮರುಗುಳಿಯದಿರು ಮತ್ತೆ ಇದೊ ಬಂದೆ ಎನ್ನುತ್ತಾ ಎದ್ದೇಳು ಸ್ವಾಗತಕೆ
ಹೀಗೊಂದು ಗೀತೆ ನಮ್ಮನ್ನು ಪ್ರಾತಃಕಾಲದಲ್ಲಿ ರೇಡಿಯೋ ಮುಖಾಂತರವಾಗಿ ದೂರದರ್ಶನದ ಮುಖಾಂತರವಾಗಿ ಹಲವಾರು ದಶಕಗಳ ಕಾಲ ಫುಳಕಿಸುತ್ತಿದ್ದುದು ನೆನಪಾಗುತ್ತದೆ. ಇದು ಕನ್ನಡದ ಪ್ರಖ್ಯಾತ ಕವಿ ರಾಘವೇಂದ್ರ ಇಟಗಿಯವರ ಕವಿತೆ. ರಾಘವೇಂದ್ರ ಇಟಗಿಯವರು ಇಂತಹ ಅನೇಕ ಸುಮಧುರ ಭಾವಗೀತೆ, ಹಲವಾರು ದೇಶ ಭಕ್ತಿಗೀತೆಗಳನ್ನು ರಚಿಸಿದವರು, ರಾಘವೇಂದ್ರ ಇಟಗಿಯವರು, ೧೯೫೦ರ ಸುಮಾರಿನಲ್ಲಿ ಹೈದರಾಬಾದ್ ಸಂಸ್ಥಾನದಲ್ಲಿ ಸರ್ಕಾರಿ ಸೇವೆಯಲ್ಲಿದ್ದ ಸಿದ್ಧಯ್ಯ ಪುರಾಣಿಕರ ಜೊತೆ ಜೊತೆಯಾಗಿಯೇ ತಮ್ಮ ಕಾವ್ಯಕೃಷಿಯನ್ನಾರಂಭಿಸಿದರು. ಹೈದರಾಬಾದಿನಲ್ಲಿದ್ದಾಗ ಉರ್ದುಭಾಷೆಯನ್ನು ಕಲಿತು, ಉರ್ದು ಕಾವ್ಯದ ಸೊಗಡನ್ನು ಅರ್ಥಮಾಡಿಕೊಂಡಿದ್ದರಿಂದ ಅವರ ಕನ್ನಡ ಕಾವ್ಯರಚನೆಗೆ ಬಹಳಷ್ಟು ಸಹಕಾರಿಯಾಯಿತು.
ಆಕಾಶವಾಣಿಯಲ್ಲಿ
ಬದಲಾಯಿಸಿಇಟಗಿಯವರು ಹೈದರಾಬಾದು ಆಕಾಶವಾಣಿ ಕೇಂದ್ರವೇ ಅಲ್ಲದೆ ಮೈಸೂರು, ಬೆಂಗಳೂರು, ಧಾರವಾಡ, ಗುಲಬರ್ಗಾ ಆಕಾಶವಾಣಿ ಮತ್ತು ಪಣಜಿ, ಶ್ರೀನಗರ ಕೇಂದ್ರಗಳಲ್ಲಿಯೂ ಸೇವೆ ಸಲ್ಲಿಸಿದರು. ಶ್ರೀನಗರ ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿಯೂ ಅವರಲ್ಲಿ ಕನ್ನಡದ ಪ್ರೇಮ ತುಂಬಿ ತುಳುಕುತ್ತಿತ್ತು. “ಕನ್ನಡದ ಶ್ರೀಗಂಧದಲ್ಲಿ ಕಾಶ್ಮೀರದ ಕೇಸರಿಯನ್ನು ಬೆರೆಸಿದರೆ ಭಾರತದ ಪರಿಮಳ ಕಾಂತಿ ಪ್ರಜ್ವಲಿಸುವುದು”. ಇದು ಇಟಗಿಯವರು ಅಂದಿನ ದಿನಗಳಲ್ಲಿ ಹೇಳುತ್ತಿದ್ದ ಮಾತುಗಳು.
ರಾಘವೇಂದ್ರ ಇಟಗಿಯವರು ಬೆಂಗಳೂರು ಆಕಾಶವಾಣಿ ಕೇಂದ್ರದಲ್ಲಿ ‘ನವಸುಮ’ ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿ ಹಲವಾರು ಕವಿಗಳ ಕವನಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸಾರ ಮಾಡಿದರು. ಈ ಕಾರ್ಯಕ್ರಮಕ್ಕಾಗಿ ಇವರು ಬರೆದ ಮೊದಲ ಗೀತೆ “ನುಡಿಸು ವೀಣೆಯ ವೈಣಿಕ-ನಾದಸುಖಕರ ಪ್ರಿಯಸಖ”. ಈ ಹಾಡಿಗೆ ಪ್ರಖ್ಯಾತ ವೀಣಾ ವಿದ್ವಾಂಸರಾಗಿದ್ದ ದೊರೆಸ್ವಾಮಿ ಅಯ್ಯಂಗಾರ್ಯರೇ ರಾಗ ಸಂಯೋಜನೆ ಮಾಡಿದ್ದರು. ನವಸುಮ ಕಾರ್ಯಕ್ರಮದಲ್ಲಿ ಅನೇಕ ಕವಿಗಳ ಹಾಡುಗಳು ರಾಗ ಸಂಯೋಜನೆಗೊಂಡು ಜನಸಮುದಾಯವನ್ನು ತಲುಪುವಂತಾದವು. .
ಕವನ ಸಂಕಲನಗಳು
ಬದಲಾಯಿಸಿರಾಘವೇಂದ್ರ ಇಟಗಿಯವರು ಅನೇಕ ಕವನ ಸಂಕಲನಗಳನ್ನು ಹೊರತಂದರು. ಇವುಗಳಲ್ಲಿ ಕ್ಷಿತಿಜಕೋದಂಡ, ದೇಶಭಕ್ತಿ ಗೀತೆಗಳ ಸಂಕಲನ ‘ಸನ್ನದ್ಧ ಭಾರತ’, ಕರುಳಿನ ಕಥೆ, ‘ಆಗಸತೊಳೆದ ಹೂಗಳು’, ‘ಬೆಳಕು ತುಂಬಿದ ಬಲ್ಬು’, ‘ಬಸವಗೀತೆ’ ಮುಂತಾದವು ಪ್ರಮುಖವಾದವು. ಜೊತೆಗೆ ಎರಡು ಕಥನ ಕವನಗಳಾದ ‘ನುಡಿಗೊಂಬೆ’ ಮತ್ತು ‘ಅಂಗುಲಿಮಾಲ’ ಕೂಡ ಪ್ರಕಟಗೊಂಡವು. ‘ವಸುಂದರ ಗೀತೆಗಳು’ ಎಂಬುದು ಮಕ್ಕಳಿಗಾಗಿ ಮೂಡಿಬಂದ ಕವನ ಸಂಕಲನ.
ಪ್ರಸಿದ್ಧ ಅನುವಾದ
ಬದಲಾಯಿಸಿರಾಘವೇಂದ್ರ ಇಟಗಿಯವರು ಹೈದರಾಬಾದಿನಲ್ಲಿದ್ದ ಸಂದರ್ಭದಲ್ಲಿ ಉರ್ದು ಭಾಷೆಯ ಕಲಿಕೆಯ ಸಹಾಯದಿಂದ ಹಲವಾರು ಕನ್ನಡದ ಗಝಲ್ ಹಾಡುಗಳನ್ನು ರಚಿಸಿದ್ದರು. ಚೀನಾ-ಭಾರತ ಯದ್ಧದ ಸಮಯದಲ್ಲಿ ಹಿಂದಿಕವಿ ಪ್ರದೀಪರವರು ಬರೆದು ಲತಾ ಮಂಗೇಶ್ಕರ್ ಅವರ ಧ್ವನಿಮಾಧುರ್ಯದಲ್ಲಿ ಪ್ರಖ್ಯಾತವಾದ ‘ಎ ಮೇರೆ ವತನಕೆ ಲೋಗೋ ಜರಾ ಆಂಖ ಮೆ ಭರಲೋ ಪಾನಿ’ ದೇಶಭಕ್ತಿ ಗೀತೆಯನ್ನು, “ಓ ನನ್ನ ದೇಶ ಬಾಂಧವರೇ…. ಕಣ್ಣೀರ ಹನಿಗಳ ಚಿಮ್ಮಿ….” ಎಂದು ಕನ್ನಡಕ್ಕೆ ಅನುವಾದಿಸಿದ್ದರು. ಈ ಗೀತೆಯನ್ನು ಅನುರಾಧಾ ಧಾರೇಶ್ವರ್‌ರವರು ಹಾಡಿದ್ದು, ಧಾರವಾಡದ ಆಕಾಶವಾಣಿ ಕೇಂದ್ರದಿಂದ ಮೊಟ್ಟ ಮೊದಲ ಬಾರಿಗೆ ಪ್ರಸಾರವಾದಾಗ ಶೋತೃಗಳ ಅಪಾರ ಮೆಚ್ಚುಗೆ ಗಳಿಸಿತು.
ಸಾಹಿತ್ಯ ವೈವಿಧ್ಯ
ಬದಲಾಯಿಸಿರಾಘವೇಂದ್ರ ಇಟಗಿಯವರು ಹಲವಾರು ರೇಡಿಯೋ ನಾಟಕಗಳನ್ನು ಬರೆದಿದ್ದರು. ಅವುಗಳಲ್ಲಿ ಬಿಳಿಯ ಗಡ್ಡ ಕೆಂಪಾಯಿತು, ವಾಲ್ಮೀಕಿ, ಜಟಕಾ ಸಾಬಿ ಮತ್ತು ಇತರ ಹರಟೆಗಳು, ಬ್ರೆಯನ್ ಎಕ್ಸ್‌ಚೇಂಜ್ (ಮಕ್ಕಳ ನಾಟಕ) ಮುಖ್ಯವಾದವುಗಳು.
ರಾಘವೇಂದ್ರ ಇಟಗಿಯವರ ಕಾವ್ಯಪ್ರಕಾರದ ಮತ್ತೊಂದು ಸಾಧನೆ ಎಂದರೆ ಹನಿಗವನಗಳ ರಚನೆ. ‘ಮಿನಿಮಿಂಚು’ ಎಂದು ಅವರು ಬರೆದ ಹನಿಗವಿತೆಗಳು ‘ಬೆನ್ನ ಹಿಂದಿನ ಬೆಳಕು’ ಎಂಬ ಸಂಗ್ರಹದಲ್ಲಿ ಮೂಡಿಬಂದಿವೆ.
ಇಟಗಿಯವರು ರವೀಂದ್ರರ ಬದುಕನ್ನು ‘ಕವೀಂದ್ರ-ರವೀಂದ್ರ’ ಎಂಬ ಜೀವನ ಚರಿತ್ರೆಯಾಗಿ ಮನೋಜ್ಞವಾಗಿ ರೂಪಿಸಿದ್ದಾರೆ. ಇದಲ್ಲದೆ ಕಾವ್ಯಾನಂದರೊಡನೆ ‘ಶ್ರೀಕಾರ’ ಮತ್ತು ‘ಪ್ರಬಂಧ ಮಾಲೆ’ಯ ಸಂಪಾದಕರಾಗಿದ್ದರು. ಚನ್ನವೀರ ಕಣವಿಯವರೊಡನೆ ‘ನಮ್ಮೆಲ್ಲರ ನೆಹರು’ ಎಂಬ ಕವನ ಸಂಕಲನವನ್ನು ಸಂಪಾದಿಸಿದರು. ರಾಘವೇಂದ್ರ ಇಟಗಿಯವರ ಪ್ರಸಿದ್ಧ ಕವಿತೆಗಳ ಗಾಯನವನ್ನು ಒಳಗೊಂಡ ‘ಕಳೆದಿಲ್ಲ ನಿಮ್ಮ ಹಾಡು’ ಎಂಬ ಧ್ವನಿ ಸುರುಳಿ ಕೂಡಾ ಹೊರಬಂದಿದೆ..
ವಿದಾಯ
ಬದಲಾಯಿಸಿಈ ಮಹಾನ್ ಕವಿ ರಾಘವೇಂದ್ರ ಇಟಗಿಯವರು ೧೯೯೭ರ ಡಿಸೆಂಬರ್ ೮ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
ಮಾಹಿತಿ ಆಧಾರ
ಬದಲಾಯಿಸಿಕಣಜ Archived 2016-05-20 ವೇಬ್ಯಾಕ್ ಮೆಷಿನ್ ನಲ್ಲಿ.