ರಥ ಯಾತ್ರೆ

ಹಿಂದೂ ಧಾರ್ಮಿಕ ಆಚರಣೆ

ರಥ ಜಾತ್ರಾ (Oriya: [] Error: {{Lang}}: no text (help)ରଥଯାତ୍ରା, ಬಂಗಾಳಿ:রথযাত্রা) ಎಂಬುದು ಭಾರತಒಡಿಶಾ ರಾಜ್ಯದಲ್ಲಿರುವ ಪುರಿ ಎಂಬಲ್ಲಿ ಜೂನ್‌ ತಿಂಗಳಿನ ಅವಧಿಯಲ್ಲಿ ಆಯೋಜಿಸಲ್ಪಡುವ ಸ್ವಾಮಿ ಜಗನ್ನಾಥನಿಗೆ ಸಂಬಂಧಿಸಿದ ಒಂದು ಬೃಹತ್‌‌ ಹಿಂದೂ ಉತ್ಸವವಾಗಿದೆ. ನಗರದ ಸಮಾಜದ ಬಹುಭಾಗವು ಜಗನ್ನಾಥನ (ಕೃಷ್ಣ) ಪೂಜೆಯ ಸುತ್ತಲೂ ಆಧರಿಸಿದ್ದು, ಇಲ್ಲಿರುವ ಜಗನ್ನಾಥನ ಪ್ರಾಚೀನ ದೇವಸ್ಥಾನವು ಈ ಪ್ರದೇಶದ ಪ್ರಭಾವೀ ಅಂಶವಾಗಿ ರೂಪುಗೊಂಡಿದೆ. ಜಗನ್ನಾಥ ಸ್ವಾಮಿಯು ತನ್ನ ಚಿಕ್ಕಮ್ಮನ ಮನೆಯ (ಇದಕ್ಕೆ ಮೌಸಿಮಾ ದೇವಸ್ಥಾನ ಎಂದು ಕರೆಯಲಾಗುತ್ತದೆ ಮತ್ತು ಇದು ಪುರಿಯಲ್ಲಿನ ಬಾಲಗಂಡಿ ಚಾಕದ ಸಮೀಪವಿದೆ) ಮಾರ್ಗವಾಗಿ ಗುಂಡಿಚಾ ರಾಣಿಯ ದೇವಸ್ಥಾನಕ್ಕೆ ನೀಡುವ ವಾರ್ಷಿಕ ಭೇಟಿಯನ್ನು ಈ ಉತ್ಸವವು ನೆನಪಿಗೆ ತರುತ್ತದೆ.

ಭಾರತದ ಪುರಿಯಲ್ಲಿನ ರಥ ಜಾತ್ರಾ ಉತ್ಸವ.ಜೇಮ್ಸ್‌ ಫರ್ಗ್ಯೂಸನ್‌ ರಚಿಸಿರುವ ವರ್ಣಚಿತ್ರ
 
2007ರಲ್ಲಿ ಪುರಿಯ ಜಗನ್ನಾಥ ದೇವಸ್ಥಾನದ ಬಳಿಯ ಭವ್ಯ ಹೆಬ್ಬೀದಿಯಲ್ಲಿ ಕಂಡುಬಂದ ರಥ ಜಾತ್ರಾ
 
ಆಧುನಿಕ ಕಾಲದಲ್ಲಿ ಪುರಿಯಲ್ಲಿ ನಡೆಯುವ ರಥ ಯಾತ್ರೆಯು ದೇವರುಗಳ ಮೂರು ರಥಗಳನ್ನು ತೋರಿಸುತ್ತಿರುವುದು; ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಕಾಣಬಹುದು.

ಈ ಉತ್ಸವವನ್ನು ನೋಡುವುದೇ ಒಂದು ಸುಯೋಗ. ದೇವಸ್ಥಾನ ರಚನೆಗಳನ್ನು ಹೋಲುವಂತೆ ಭವ್ಯವಾಗಿ ಅಲಂಕರಿಸಲ್ಪಟ್ಟ ಮೂರು ರಥಗಳನ್ನು ಪುರಿಯ ಬೀದಿಗಳ ಮೂಲಕ ಎಳೆಯಲಾಗುತ್ತದೆ. ಸ್ವಾಮಿ ಜಗನ್ನಾಥ, ಸ್ವಾಮಿ ಬಲರಾಮ, ಮತ್ತು ಅವರ ಸೋದರಿ ಸುಭದ್ರಾ ತಮ್ಮ ಚಿಕ್ಕಮ್ಮನ ದೇವಸ್ಥಾನದೆಡೆಗೆ ಮಾಡುವ ವಾರ್ಷಿಕ ಪರ್ಯಟನೆಯನ್ನು ಇದು ನೆನಪಿಗೆ ತರುತ್ತದೆ; ಸದರಿ ದೇವಸ್ಥಾನಕ್ಕೆ ಗುಂಡಿಚಾ ದೇವಸ್ಥಾನ ಎಂಬ ಹೆಸರಿದ್ದು, ಇದು ಈ ಮೂವರ ದೇವಸ್ಥಾನದಿಂದ ೨ ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿದೆ. ಹೊಸ ರಥಗಳನ್ನು ಪ್ರತಿ ವರ್ಷವೂ ನಿರ್ಮಿಸಲಾಗುತ್ತದೆ. ದೇವಸ್ಥಾನ ಆವರಣದೊಳಗೆ ಪ್ರವೇಶಾವಕಾಶವಿಲ್ಲದ ಹಿಂದೂಗಳಲ್ಲದವರು ಮತ್ತು ವಿದೇಶಿಯರಂಥ ಭಕ್ತರಿಗೆ ಈ ದಿನದಂದು ಮಾತ್ರವೇ ದೇವರುಗಳ ಕ್ಷಣದರ್ಶನವನ್ನು ಪಡೆಯಲು ಅವಕಾಶ ದೊರೆಯುತ್ತದೆ. ಉತ್ಸವದ ಸಂದರ್ಭದಲ್ಲಿ ದೇವರುಗಳ ರಥವನ್ನು ಎಳೆಯುವ ಒಂದು ಶ್ರದ್ಧಾಪೂರ್ವಕವಾದ ಬಯಕೆಯೊಂದಿಗೆ ಪ್ರಪಂಚದ ಎಲ್ಲ ಭಾಗಗಳಿಂದ ಪುರಿಗೆ ಬರುವ ಭಕ್ತರು, ಇತರ ಪೂಜಾರಿಗಳ ನೆರವಿನೊಂದಿಗೆ ಹಗ್ಗಗಳನ್ನು ಹಿಡಿದು ರಥಗಳನ್ನು ಎಳೆಯುತ್ತಾರೆ. ಇದನ್ನೊಂದು ಶ್ರದ್ಧಾಭಕ್ತಿಯ ಆಚರಣೆಯಾಗಿ ಪರಿಗಣಿಸುವ ಅವರು ಬೃಹತ್‌‌ ಜನಜಂಗುಳಿಯಲ್ಲಿ ತಮ್ಮ ಜೀವವನ್ನು ಅಪಾಯಕ್ಕೆ ಈಡುಮಾಡಲೂ ಹಿಂದೆ-ಮುಂದೆ ನೋಡುವುದಿಲ್ಲ. ರಥಗಳ ಜತೆಗೂಡುವ ಬೃಹತ್‌‌ ಮೆರವಣಿಗೆಗಳಲ್ಲಿರುವ ಜನರು ತಮಟೆಗಳು, ಖಂಜರಿಗಳು, ತುತ್ತೂರಿಗಳು ಇತ್ಯಾದಿಗಳನ್ನು ಬಳಸಿಕೊಂಡು ಭಕ್ತಿಗೀತೆಗಳನ್ನು ನುಡಿಸುತ್ತಾರೆ. ಬೀದಿಗಳಲ್ಲಿ ಸಾಲುಗಟ್ಟಿ ನಿಂತಿರುವ ಮಕ್ಕಳ ಮಧ್ಯೆಯಲ್ಲಿ ರಥವು ಸಾಗುವಾಗ ಅವರ ಧ್ವನಿಯು ವೃಂದಗಾನದೊಂದಿಗೆ ಸೇರಿಕೊಳ್ಳುತ್ತದೆ. ರಥದ ಗಾಡಿಗಳು ಸ್ವತಃ ಸರಿಸುಮಾರಾಗಿ 45 feet (14 m)ನಷ್ಟು ಎತ್ತರವಿರುತ್ತವೆ ಮತ್ತು ಈ ಕಾರ್ಯಕ್ರಮಕ್ಕೆಂದೇ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಂದ ಅವು ಎಳೆಯಲ್ಪಡುತ್ತವೆ. ಈ ವಾರ್ಷಿಕ ಕಾರ್ಯಕ್ರಮಕ್ಕೆಂದೇ ದೇಶದೆಲ್ಲೆಡೆಯಿಂದ ಮತ್ತು ವಿದೇಶಗಳಿಂದ ಬರುವ ಲಕ್ಷಗಟ್ಟಲೆ ಭಕ್ತರು ಪುರಿಯಲ್ಲಿ ಜಮಾವಣೆಯಾಗುತ್ತಾರೆ. ಅನೇಕ ಭಾರತೀಯ ವಾಹಿನಿಗಳು ಮತ್ತು ಅಂತರರಾಷ್ಟ್ರೀಯ ವಾಹಿನಿಗಳಲ್ಲಿ ಈ ಉತ್ಸವದ ನೇರಪ್ರಸಾರವನ್ನೂ ಮಾಡಲಾಗುತ್ತದೆ.

ವಿವರಣೆ

ಬದಲಾಯಿಸಿ
 
ಬಡಾ ದಂಡ ಅಥವಾ ಭವ್ಯ ಹೆಬ್ಬೀದಿ

ಸ್ವಾಮಿ ಜಗನ್ನಾಥನ ರಥಗಳ ಉತ್ಸವವಾಗಿರುವ ರಥ ಯಾತ್ರೆಯನ್ನು ಒಡಿಶಾದಲ್ಲಿನ ದೇವಸ್ಥಾನ ಪಟ್ಟಣವಾದ ಪುರಿಯಲ್ಲಿ ಪ್ರತಿ ವರ್ಷವೂ ಆಚರಿಸಲಾಗುತ್ತದೆ. ಈ ಪಟ್ಟಣವು ಭಾರತದ ಪೂರ್ವ ತೀರದಲ್ಲಿ ನೆಲೆಗೊಂಡಿದ್ದು, ಆಷಾಢ ಮಾಸದ (ମାସ) (ಚಾಂದ್ರಮಾನ ಪಂಚಾಂಗದಲ್ಲಿ ೪ನೇ ತಿಂಗಳು) ಶುಕ್ಲ ಪಕ್ಷದ (ಚಂದ್ರನ ಕಳೆಯೇರುವ ಚಕ್ರ) ಎರಡನೇ (ದ್ವಿತೀಯ) ದಿನದಂದು ಈ ಉತ್ಸವವು ಆಚರಿಸಲ್ಪಡುತ್ತದೆ. ಮುಖ್ಯ ದೇವಸ್ಥಾನದ ಅಗ್ರಪೀಠದಲ್ಲಿರುವ ದೇವರುಗಳಾದ ಸ್ವಾಮಿ ಜಗನ್ನಾಥ, ಸ್ವಾಮಿ ಬಲರಾಮ ಮತ್ತು ದೇವತೆ ಸುಭದ್ರಾರನ್ನು ದಿವ್ಯ ಚಕ್ರವಾದ ಸುದರ್ಶನದೊಂದಿಗೆ ದೇವಸ್ಥಾನ ಪ್ರಾಕಾರಗಳಿಂದ ಹೊರತೆಗೆದುಕೊಂಡು ಬಂದು, ಒಂದು ಸುದೀರ್ಘವಾದ ವಾಡಿಕೆಯ ಮೆರವಣಿಗೆಯಲ್ಲಿ ಅವರ ಸಂಬಂಧಿತ ರಥಗಳಲ್ಲಿ ಕೂರಿಸಲಾಗುತ್ತದೆ. ವರ್ಣರಂಜಿತವಾಗಿ ಅಲಂಕರಿಸಲ್ಪಟ್ಟ ಬೃಹತ್ತಾದ ರಥಗಳನ್ನು ನೂರಾರು-ಸಾವಿರಾರು ಭಕ್ತರು ಬಡಾ ದಂಡ ಎಂಬ ಭವ್ಯ ಹೆಬ್ಬೀದಿಯ ಮೇಲೆ ಎಳೆದುಕೊಂಡು ಹೋಗುತ್ತಾರೆ; ಬಡಾ ದಂಡ ಎಂಬ ಹೆಬ್ಬೀದಿಯು ಗುಂಡಿಚಾ (ರಾಜ ಇಂದ್ರದ್ಯುಮ್ನನ ರಾಣಿ) ದೇವಸ್ಥಾನಕ್ಕಿರುವ ಮಾರ್ಗವಾಗಿದ್ದು, ಈ ದೇವಸ್ಥಾನವು ಉತ್ತರ ದಿಕ್ಕಿಗೆ ಸುಮಾರು ಎರಡು ಮೈಲುಗಳಷ್ಟು ದೂರದಲ್ಲಿದೆ. ಮೂರೂ ದೇವರುಗಳು ಗುಂಡಿಚಾ ದೇವಸ್ಥಾನದೆಡೆಗೆ ಸಾಗುವ ಮಾರ್ಗದಲ್ಲಿ ಮೌಸಿಮಾ ದೇವಸ್ಥಾನದ (ಚಿಕ್ಕಮ್ಮನ ನೆಲೆ) ಸಮೀಪದಲ್ಲಿ ಒಂದಷ್ಟು ಹೊತ್ತು ತಂಗುತ್ತಾರೆ ಎಂದು ನಂಬಲಾಗುತ್ತದೆ. ಅಷ್ಟೇ ಅಲ್ಲ, ಸ್ವಾಮಿಯ ಅಚ್ಚುಮೆಚ್ಚಿನ ಭಕ್ಷ್ಯ ಎಂದು ಭಾವಿಸಲಾಗಿರುವ ಪೊಡ ಪೀಥ ಎಂದು ಕರೆಯಲ್ಪಡುವ ಒಂದು ವಿಶೇಷ ಬಗೆಯ ತೆಳುದೋಸೆಯನ್ನು ಅವರಿಗೆ ಅಲ್ಲಿ ಅರ್ಪಿಸಲಾಗುತ್ತದೆ. ಏಳು ದಿನಗಳವರೆಗಿನ ಒಂದು ತಂಗುವಿಕೆಯ ನಂತರ, ದೇವರುಗಳು ತಮ್ಮ ನೆಲೆಗೆ ಹಿಂದಿರುಗುತ್ತಾರೆ.

ಪವಿತ್ರತೆ ಮತ್ತು ಅದರ ಮಹತ್ವ

ಬದಲಾಯಿಸಿ
 
ಪುರಿಯಲ್ಲಿ ನಡೆಯುವ ರಥ ಜಾತ್ರಾಕ್ಕಾಗಿ ರಥ/ರಥಗಳು ನಿರ್ಮಾಣದ ಹಂತದಲ್ಲಿರುವುದು

ಈ ಉತ್ಸವವನ್ನು ಗುಂಡಿಚಾ ಜಾತ್ರಾ, ಘೋಸಾ ಜಾತ್ರಾ, ನವದಿನ ಜಾತ್ರಾ, ದಶಾವತಾರ ಜಾತ್ರಾ ಮತ್ತು ಇನ್ನೂ ವೈವಿಧ್ಯಮಯವಾಗಿರುವ ಇತರ ಹೆಸರುಗಳಿಂದ ಕರೆಯಲಾಗುತ್ತದೆ. ಭಕ್ತಿಯುಳ್ಳವರ ಮತ್ತು ನಂಬುವವರ ದೃಷ್ಟಿಯಲ್ಲಿ ಇದು ಅತ್ಯಂತ ಮಂಗಳಕರ ಸಂದರ್ಭ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. "ರಥೇ ತು ವಾಮನಂ ದೃಷ್ಟ್ವ ಪುನರ್ಜನ್ಮಂ ನ ವಿದ್ಯತೇ"- ಅಂದರೆ, ಸ್ವಾಮಿ ಜಗನ್ನಾಥನ ಒಂದು ಅವತಾರವಾಗಿರುವ ಕುಳ್ಳಗಿನ ಸ್ವರೂಪದ ವಾಮನನ ಒಂದು ಕ್ಷಣದರ್ಶನವನ್ನು ಮಾಡಿದರೆ, ಜನನ ಮತ್ತು ಮರಣಗಳ ಚಕ್ರದಿಂದ ಬಿಡುಗಡೆಯಾಗಿ ಮೋಕ್ಷ ಸಿಗುವುದು ಖಂಡಿತ ಎಂಬುದು ಇದರರ್ಥ. ಜಾತ್ರಾ ಎಂಬುದು ಹಿಂದೂಗಳ ಪೂಜಾಪದ್ಧತಿಯ ಧಾರ್ಮಿಕ ಆಚರಣೆಯ ಒಂದು ಅತ್ಯಾವಶ್ಯಕ ಭಾಗವಾಗಿದೆ. ಪ್ರಯಾಣ ಅಥವಾ ಪರ್ಯಟನೆ ಎಂಬುದು ಜಾತ್ರಾ ಎಂಬುದರ ಅಕ್ಷರಶಃ ಅರ್ಥವಾಗಿದೆ. ದಕ್ಷಿಣ ಭಾರತದಲ್ಲಿ ಉತ್ಸವಮೂರ್ತಿ ಎಂಬುದಾಗಿಯೂ ಒಡಿಶಾದಲ್ಲಿ ಚಲಂತಿ ಪ್ರತಿಮಾ ಅಥವಾ ಬಿಜೆ ಪ್ರತಿಮಾ ಎಂಬುದಾಗಿಯೂ ಹೆಚ್ಚು ಜನಪ್ರಿಯವಾಗಿರುವ, ದೇವಸ್ಥಾನಗಳ ಪ್ರಾತಿನಿಧಿಕ ದೇವರ ಮೂರ್ತಿಗಳು ಈ ಪರ್ಯಟನೆಗಳಲ್ಲಿ ಸಾಮಾನ್ಯವಾಗಿ ಪಾಲ್ಗೊಳ್ಳುತ್ತವೆ. ಧಾರ್ಮಿಕ ಆಚರಣೆಯ ಪರ್ಯಟನೆಗೆ ಸಂಬಂಧಿಸಿದಂತಿರುವ ಜಾತ್ರಾ ಎರಡು ಸ್ವರೂಪಗಳನ್ನು ತಳೆಯುತ್ತದೆ: ದೇವಸ್ಥಾನದ ಸುತ್ತಲಿನ ಕಿರು ಪ್ರದಕ್ಷಿಣೆಯನ್ನು ಒಳಗೊಂಡಿರುವುದು ಒಂದು ಸ್ವರೂಪವಾದರೆ, ದೇವಸ್ಥಾನದಿಂದ ಮೊದಲ್ಗೊಂಡು ಬೇರೊಂದು ಗಮ್ಯಸ್ಥಾನದೆಡೆಗೆ ತೆರಳುವ ಒಂದು ಸುದೀರ್ಘ ಪರ್ಯಟನೆಯನ್ನು ಒಳಗೊಂಡಿರುವುದು ಮತ್ತೊಂದು ಸ್ವರೂಪವಾಗಿದೆ. ಪ್ರತಿ ದೇವಸ್ಥಾನದ ಹಬ್ಬಗಳು ಮತ್ತು ಉತ್ಸವಾಚರಣೆಗಳ ಒಂದು ಪ್ರಮುಖ ಭಾಗವಾಗಿ ಜಾತ್ರಾ ಪರಿಗಣಿಸಲ್ಪಡುತ್ತದೆ ಮತ್ತು ಒಂದು ವಿಶೇಷ ಹಾಗೂ ಪವಿತ್ರ ಸಂದರ್ಭವಾಗಿಯೂ ಇದು ಪರಿಗಣಿಸಲ್ಪಡುತ್ತದೆ. ಎಲ್ಲಾ ಜಾತ್ರಾಗಳ ಪೈಕಿ ಅನನ್ಯವಾಗಿರುವ ರಥ ಜಾತ್ರಾವು ಪರಮೋಚ್ಚ ದೈವತ್ವದ ಅತ್ಯಂತ ಭವ್ಯವಾದ ಉತ್ಸವವಾಗಿದ್ದು, ಮಾನವಕುಲವನ್ನು ವಿಮೋಚಿಸಲೆಂದು ಹಾಗೂ ಮಾನವರನ್ನು ಅವರ ನೋವುಗಳಿಂದ ಬಿಡುಗಡೆ ಮಾಡಲೆಂದು ಈ ದೇವರು ಕಲಿಯುಗದಲ್ಲಿ ಸ್ವತಃ ಪ್ರಕಟಗೊಂಡಿರುತ್ತಾನೆ ಎಂಬುದು ಇದರ ಹಿಂದಿರುವ ಒಂದು ನಂಬಿಕೆಯಾಗಿದೆ. ಸ್ವಾಮಿ ಜಗನ್ನಾಥನನ್ನು ಕೃಷ್ಣನೊಂದಿಗೆ ಸಂಪೂರ್ಣವಾಗಿ ಗುರುತಿಸಲಾಗುತ್ತದೆ. ನೀಲಮಾಧವನಾಗಿ ಕಾಣಿಸಿಕೊಂಡಿದ್ದ ಅವನ ಮೂಲ ಪ್ರಕಟಣೆಯಲ್ಲಿ ಒಂದು ಪವಿತ್ರವಾದ ನ್ಯಗ್ರೋಧ ಬೃಕ್ಷ ಅಥವಾ ಆಲದ ಮರದಲ್ಲಿ ಅವನನ್ನು ಪೂಜಿಸಲಾಗುತ್ತಿತ್ತು. ಸದರಿ ಮರದ ಕವಲುಗಳು ಹಲವಾರು ಮೈಲುಗಳವರೆಗೆ ಹರಡಿಕೊಂಡಿದ್ದವು ಮತ್ತು ಈ ಪ್ರದೇಶವನ್ನು ಪ್ರವೇಶಿಸುವ ಯಾರಿಗೇ ಆಗಲಿ ತತ್‌‌ಕ್ಷಣವೇ ವಿಮೋಚನೆಯು ದೊರೆಯುತ್ತಿತ್ತು. ಅಷ್ಟೇ ಅಲ್ಲ, ಜನನ ಮತ್ತು ಪುನರ್ಜನ್ಮದ ಕ್ಲೇಶಗಳಿಂದ ಅಂಥವರು ಬಿಡುಗಡೆ ಮಾಡಲ್ಪಡುತ್ತಿದ್ದರು. ವಾಸ್ತವವಾಗಿ ಹೇಳಬೇಕೆಂದರೆ, ಪವಿತ್ರ ಪುರಿ ನಗರದ ಶ್ರೀಕ್ಷೇತ್ರದಲ್ಲಿ ಸ್ವಾಮಿ ಜಗನ್ನಾಥನ ಹಾಜರಿಯಿರುವ ಕಾರಣದಿಂದಾಗಿ ಸಾವಿನ ದೇವರಾದ ಯಮನ ಪ್ರಭಾವವು ಇಲ್ಲಿ ಮೊಟಕುಗೊಳಿಸಲ್ಪಟ್ಟಿದೆ ಎಂದು ಭಾವಿಸಲಾಗುತ್ತದೆ. ಈ ಕಾರಣದಿಂದಲೇ ಈ ಕ್ಷೇತ್ರವನ್ನು ಯಮನಿಕಾ ತೀರ್ಥ ಎಂಬುದಾಗಿಯೂ ಕರೆಯಲಾಗುತ್ತದೆ.

ರಥದ ಮೇಲಿರುವ ಸ್ವಾಮಿ ಜಗನ್ನಾಥನ ಕ್ಷಣದರ್ಶನವನ್ನು ಒಮ್ಮೆ ಮಾಡಿದರೆ ಅದು ಅತ್ಯಂತ ಮಂಗಳಕರವಾಗಿರುತ್ತದೆ ಎಂದು ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲ, ಸಂತರು, ಕವಿಗಳು ಮತ್ತು ಪವಿತ್ರ ಗ್ರಂಥಗಳ ವತಿಯಿಂದ ಈ ವಿಶೇಷ ಉತ್ಸವದ ಪವಿತ್ರತೆಯು ಪದೇ ಪದೇ ವೈಭವೀಕರಿಸಲ್ಪಟ್ಟಿದೆ. ಈ ಉತ್ಸವದ ಪವಿತ್ರತೆಯು ಎಷ್ಟರಮಟ್ಟಿಗೆ ಇದೆಯೆಂದರೆ, ರಥವನ್ನು ಅಥವಾ ಅದನ್ನು ಎಳೆಯಲು ಬಳಸುವ ಹಗ್ಗಗಳನ್ನು ಕೇವಲ ಸ್ಪರ್ಶಿಸುವುದರಿಂದಲೂ ಸಹ ಹಲವಾರು ಶ್ರದ್ಧಾಭಕ್ತಿಯ ಆಚರಣೆಗಳು ನೀಡುವ ಫಲವನ್ನು ಪಡೆಯಲು ಸಾಧ್ಯವಿದೆ; ವರ್ಷಾನುಗಟ್ಟಲೆ ಮಾಡಿದ ತಪಸ್ಸಿನಿಂದ ಸಿಗುವ ಫಲವು, ಸದರಿ ರಥದ ಅಥವಾ ಅದರ ಹಗ್ಗಗಳ ಸ್ಪರ್ಶಮಾತ್ರದಿಂದಲೇ ಸಿಗುತ್ತದೆ ಎಂಬುದು ಪ್ರತೀತಿ. ವಾಸ್ತವವಾಗಿ, ಈ ಸಂದರ್ಭದ ಕುರಿತಾಗಿ ವಿವರಿಸುವ ಪ್ರಸಿದ್ಧ ಒರಿಯಾ ಗೀತೆಯೊಂದಿದೆ; ರಥ, ಅದರ ಚಕ್ರಗಳು, ಅದು ಸಾಗುವ ಭವ್ಯ ಹೆಬ್ಬೀದಿ ಇವೆಲ್ಲವೂ ಈ ಸಂದರ್ಭದಲ್ಲಿ ಸ್ವತಃ ಸ್ವಾಮಿ ಜಗನ್ನಾಥನೊಂದಿಗೆ ಒಂದೆನಿಸಿಕೊಂಡು ಮಿಳಿತವಾಗುತ್ತವೆ ಎಂಬ ಭಾವಾರ್ಥವನ್ನು ಈ ಗೀತೆಯು ಹೊಂದಿದೆ.

ರಥದ ಪರಿಕಲ್ಪನೆಯನ್ನು ಕಠೋಪನಿಷತ್‌ನಲ್ಲಿ ಈ ಕೆಳಕಂಡಂತೆ ವಿವರಿಸಲಾಗಿದೆ-

ಆತ್ಮಾನಂ ರಥಿನಾಂ ವಿಧಿ ಶರೀರಂ ರಥಮೇವತು ಬುದ್ಧಿಂ ತು ಸಾರಥಿಂ ವಿಧಿ ಮನಃ ಪ್ರಗ್ರಹಮೇವ ಚ. ' ಶರೀರವೆಂಬುದೇ ರಥ ಮತ್ತು ಆತ್ಮವೆಂಬುದು ಆ ರಥದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ದೇವರ ಮೂರ್ತಿ. ಮನಸ್ಸು ಮತ್ತು ಆಲೋಚನೆಗಳನ್ನು ನಿಯಂತ್ರಿಸುವ ಸಾರಥಿಯಾಗಿ ಬುದ್ಧಿಯು ಕಾರ್ಯನಿರ್ವಹಿಸುತ್ತದೆ.

ರಥ ಜಾತ್ರಾದ ಪವಿತ್ರತೆಯನ್ನು ಸ್ಕಂದ ಪುರಾಣವು ಈ ಕೆಳಕಂಡ ರೀತಿಯಲ್ಲಿ ಕೊಂಡಾಡುತ್ತದೆ-

ಗುಂಡಿಚಾ ಮಂಡಪಂ ನಾಮಂ ಜಾತ್ರಹಾಮಾಜನಂ ಪುರ ಅಶ್ವಮೇಧ ಸಹಸ್ರಾಯ ಮಹಾಬೇಡಿ ತದದ್ವಬಾತ್‌. ' ರಥಗಳ ಮೆರವಣಿಗೆಯ ಅಂತಿಮ ಗಮ್ಯಸ್ಥಾನವಾಗಿರುವ ಗುಂಡಿಚಾ ದೇವಸ್ಥಾನದಲ್ಲಿ ಶ್ರೀಮಂದಿರದ ದೇವರ ಮೂರ್ತಿಗಳನ್ನು ನೋಡುವ ಅದೃಷ್ಟ ಯಾರಿಗೆ ಲಭ್ಯವಾಗುತ್ತದೆಯೋ, ಅವರಿಗೆ ಅಗಾಧವಾಗಿ ಶ್ರದ್ಧಾಭಕ್ತಿಯ ಆಚರಣೆಯೆನಿಸಿಕೊಂಡಿರುವ ಒಂದು ಸಾವಿರ ಅಶ್ವಮೇಧಗಳ ಫಲಗಳು ದೊರೆಯುತ್ತವೆ. ಉಪೇಂದ್ರ ಭಾಂಜಾ ಎಂಬ ಕವಿ ಸಾಮ್ರಾಟನು ತನ್ನ ಪ್ರಸಿದ್ಧ ವೈದೇಹಿಸ ವಿಲಾಸ ಕೃತಿಯಲ್ಲಿ ಈ ಕುರಿತು ಉಲ್ಲೇಖಿಸುತ್ತಾ, ರಥಗಳ ಉತ್ಸವಕ್ಕಿರುವ ಮತ್ತೊಂದು ಹೆಸರಾದ ಗುಂಡಿಚಾ ಜಾತ್ರಾದಲ್ಲಿ ಭಾಗವಹಿಸಲೆಂದು ಸ್ವಾಮಿ ಜಗನ್ನಾಥನು ತನ್ನ ಗರ್ಭಗುಡಿಯಿಂದ ಹೊರಗೆ ಬರುತ್ತಾನೆ; ಅವನತಿಗೊಂಡಿರುವ ಪತಿತ ಜನರನ್ನು ಪುನೀತಗೊಳಿಸುವುದಕ್ಕಾಗಿಯೇ ಹೀಗೆ ಬರುವ ತಮ್ಮ ಅತ್ಯಂತ ಪ್ರೀತಿಯ ದೇವರನ್ನು ಜನರು ಈ ಸಂದರ್ಭದಲ್ಲಿ ಅತಿ ನಿಕಟವಾಗಿ ಅವಲೋಕಿಸಲು ಅವಕಾಶ ದೊರೆಯುತ್ತದೆ ಎಂದು ಹೇಳುತ್ತಾನೆ. ಇದೇ ರೀತಿಯಲ್ಲಿ, ಸಂತ ಕವಿ ಸಾಲಬೇಗ ಎಂಬಾತ ಕಡುಬಣ್ಣದ ಸ್ವಾಮಿ ಜಗನ್ನಾಥನ ಹೊಗಳಿಕೆಯಲ್ಲಿ ವಾಗ್ಝರಿಯ ಕಳೆಯೇರಿಸುತ್ತಾ, ಒಂದು ಕಾಡಾನೆಯ ರೀತಿಯಲ್ಲಿ ಓಲಾಡುತ್ತಾ ಸಾಗುತ್ತಿರುವ ಸ್ವಾಮಿಯು ಭವ್ಯ ಹೆಬ್ಬೀದಿಯ ಮೇಲೆ ಆಗಮಿಸುತ್ತಾನೆ; ತನ್ನ ರಥದ ಮೇಲೆ ಸವಾರಿಮಾಡಿಕೊಂಡು ಬರುವ ಈತ ತನ್ನ ಭಕ್ತರ ಪಾಪಗಳೆಲ್ಲವನ್ನೂ, ಅವು ಗುರುತರವಾದ ಪಾಪಗಳೇ ಆಗಿರಲಿ ಅಥವಾ ಅಕ್ಷಮ್ಯ ಪಾಪಗಳೇ ಆಗಿರಲಿ, ಕ್ಷಣಮಾತ್ರದಲ್ಲಿ ನಾಶಮಾಡುತ್ತಾನೆ ಎಂದು ವರ್ಣಿಸುತ್ತಾನೆ.

 
ಭಾರತದ ತಿರುವನಂತಪುರಂನಲ್ಲಿನ ISKCON ರಥ ಜಾತ್ರಾ

ಬಲರಾಮ, ಸುಭದ್ರ ಮತ್ತು ಜಗನ್ನಾಥ ದೇವರುಗಳ ಮೂರು ರಥಗಳನ್ನು ಪ್ರತಿವರ್ಷವೂ ಹೊಸದಾಗಿ ನಿರ್ಮಿಸಲಾಗುತ್ತದೆ. ಫಸ್ಸಿ, ಧೌಸಾ, ಇತ್ಯಾದಿಗಳಂಥ ಇದಕ್ಕೆಂದೇ ನಿರ್ದಿಷ್ಟಗೊಳಿಸಲಾದ ಜಾತಿಯ ಮರಗಳಿಂದ ಸಂಗ್ರಹಿಸಿದ ಮರ-ಮುಟ್ಟುಗಳನ್ನು ಬಳಸಿಕೊಂಡು ರಥನಿರ್ಮಾಣವನ್ನು ಮಾಡಲಾಗುತ್ತದೆ. ಹಿಂದೆ ದಾಸಪಲ್ಲ ಎಂದು ಕರೆಯಲ್ಪಡುತ್ತಿದ್ದ ವೈಭವಪೂರ್ಣ ಸಂಸ್ಥಾನದಿಂದ ಬಡಗಿಗಳ ಒಂದು ಪರಿಣಿತ ತಂಡವು ವಾಡಿಕೆಯಂತೆ ಈ ಮರ-ಮುಟ್ಟುಗಳನ್ನು ತರುತ್ತದೆ. ಸದರಿ ರಥನಿರ್ಮಾಣಕ್ಕೆ ಸಂಬಂಧಿಸಿದಂತೆ ಈ ಬಡಗಿಗಳು ಆನುವಂಶಿಕ ಹಕ್ಕುಗಳು ಮತ್ತು ವಿಶೇಷ ಗೌರವಗಳನ್ನು ಹೊಂದಿರುತ್ತಾರೆ. ಸದರಿ ಮರದ ದಿಮ್ಮಿಗಳನ್ನು ಮಹಾನದಿ ಎಂಬ ನದಿಯಲ್ಲಿ ತೆಪ್ಪಗಳ (ಕಟ್ಟುಮರಗಳ) ರೀತಿಯಲ್ಲಿ ಸಾಂಪ್ರದಾಯಿಕವಾಗಿ ತೇಲಿಬಿಡಲಾಗುತ್ತದೆ. ಇವುಗಳನ್ನು ಪುರಿಯ ಸಮೀಪ ಸಂಗ್ರಹಿಸಲಾಗುತ್ತದೆ ಮತ್ತು ನಂತರದಲ್ಲಿ ರಸ್ತೆಯ ಮಾರ್ಗವಾಗಿ ಸಾಗಣೆ ಮಾಡಲಾಗುತ್ತದೆ.

ಶತಶತಮಾನಗಳಿಂದಲೂ ಅನುಸರಿಸಿಕೊಂಡು ಬಂದಿರುವ ಮತ್ತು ಶಿಫಾರಸು ಮಾಡಲ್ಪಟ್ಟಿರುವ ಅನನ್ಯ ಯೋಜನೆಯ ಅನುಸಾರ ಅಲಂಕರಿಸಲ್ಪಟ್ಟ ಮೂರು ರಥಗಳು, ಬಡಾ ದಂಡ ಎಂದು ಕರೆಯಲ್ಪಡುವ ಭವ್ಯ ಹೆಬ್ಬೀದಿಯಲ್ಲಿ ನಿಲ್ಲುತ್ತವೆ. ಕೆಂಪು ಬಟ್ಟೆಯ ಪಟ್ಟೆಗಳಿಂದ ಮಾಡಲ್ಪಟ್ಟಿರುವ ಮತ್ತು ಕಪ್ಪು, ಹಳದಿ ಹಾಗೂ ನೀಲಿ ಬಣ್ಣಗಳೊಂದಿಗೆ ಸಂಯೋಜಿಸಲ್ಪಟ್ಟಿರುವ ಉಜ್ಜ್ವಲ ಮೇಲಾವರಣಗಳಿಂದ ಹೊದಿಸಲ್ಪಟ್ಟಿರುವ ಬೃಹತ್‌‌ ರಥಗಳು ಭವ್ಯ ದೇವಸ್ಥಾನದ ಮುಂಭಾಗದಲ್ಲಿ ಅದರ ಪೂರ್ವಭಾಗದ ಪ್ರವೇಶದ್ವಾರಕ್ಕೆ ನಿಕಟವಾಗಿರುವ ರೀತಿಯಲ್ಲಿ ವಿಶಾಲ ಹೆಬ್ಬೀದಿಯಲ್ಲಿ ಸಾಲಾಗಿ ನಿಲ್ಲುತ್ತವೆ. ಪೂರ್ವಭಾಗದ ಪ್ರವೇಶದ್ವಾರವನ್ನು ಸಿಂಹದ್ವಾರ ಅಥವಾ ಸಿಂಹದ ಹೆಬ್ಬಾಗಿಲು ಎಂಬುದಾಗಿಯೂ ಕರೆಯಲಾಗುತ್ತದೆ.

ಸ್ವಾಮಿ ಜಗನ್ನಾಥನ ರಥವನ್ನು ನಂದಿಘೋಸಾ ಎಂಬುದಾಗಿ ಕರೆಯಲಾಗುತ್ತದೆ. ಇದು ನಲವತ್ತೈದು ಅಡಿಗಳಷ್ಟು ಎತ್ತರವಿದ್ದು, ಚಕ್ರದ ಮಟ್ಟದಲ್ಲಿ ನಲವತ್ತೈದು ಅಡಿಗಳಷ್ಟು ಚಚ್ಚೌಕವಾಗಿರುತ್ತದೆ. ಇದು ಹದಿನಾರು ಚಕ್ರಗಳನ್ನು ಹೊಂದಿದ್ದು, ಪ್ರತಿ ಚಕ್ರವೂ ಏಳು-ಅಡಿ ವ್ಯಾಸದ್ದಾಗಿರುತ್ತದೆ, ಮತ್ತು ಕೆಂಪು ಹಾಗೂ ಹಳದಿ ಬಟ್ಟೆಯಿಂದ ಮಾಡಲ್ಪಟ್ಟಿರುವ ಒಂದು ಹೊದಿಕೆಯಿಂದ ಅಲಂಕರಿಸಲ್ಪಟ್ಟಿರುತ್ತದೆ. ಪೀತಾಂಬರ ಎಂಬುದಾಗಿಯೂ ಕರೆಯಲ್ಪಡುವ ಕೃಷ್ಣನೊಂದಿಗೆ ಸ್ವಾಮಿ ಜಗನ್ನಾಥನನ್ನು ಗುರುತಿಸಲಾಗುತ್ತದೆ; ಬಂಗಾರದ ಹಳದಿಯ ನಿಲುವಂಗಿಗಳಿಂದ ವೇಷಭೂಷಿತನಾಗಿರುವವನಿಗೆ ಪೀತಾಂಬರ ಎಂದು ಕರೆಯಲಾಗುವುದರಿಂದ, ಈ ರಥದ ಮೇಲಾವರಣದ ಮೇಲೆ ಈ ವೈಲಕ್ಷಣ್ಯವನ್ನು ತೋರಿಸುವ ಹಳದಿ ಪಟ್ಟೆಗಳು ಇರುತ್ತವೆ.

ತಲಧ್ವಜ ಎಂಬುದಾಗಿ ಕರೆಯಲ್ಪಡುವ ಸ್ವಾಮಿ ಬಲರಾಮನ ರಥವು ತನ್ನ ಪತಾಕೆಯ ಮೇಲೆ ತಾಳೆ ಮರವನ್ನು ಹೊಂದಿರುತ್ತದೆ. ಈ ರಥವು ಹದಿನಾಲ್ಕು ಚಕ್ರಗಳನ್ನು ಹೊಂದಿದ್ದು, ಅವುಗಳಲ್ಲಿ ಪ್ರತಿಯೊಂದೂ ಸಹ ಏಳು-ಅಡಿ ವ್ಯಾಸದ್ದಾಗಿರುತ್ತದೆ ಮತ್ತು ಅದಕ್ಕೆ ಕೆಂಪು ಮತ್ತು ನೀಲಿ ಬಟ್ಟೆಯನ್ನು ಹೊದಿಸಲಾಗಿರುತ್ತದೆ. ಇದು ನಲವತ್ನಾಲ್ಕು ಅಡಿಯಷ್ಟು ಎತ್ತರವಿರುತ್ತದೆ.

"ಅಹಂಕಾರವನ್ನು ತುಳಿಯುವವ" ಎಂಬ ಅಕ್ಷರಶಃ ಅರ್ಥವನ್ನು ಹೊಂದಿರುವ, ದ್ವಾರ್ಪಾದಾಲನ ಎಂದು ಕರೆಯಲ್ಪಡುವ ಸುಭದ್ರಾ ದೇವತೆಯ ರಥವು, ನಲವತ್ಮೂರು ಅಡಿಯಷ್ಟು ಎತ್ತರವಿದ್ದು ಹನ್ನೆರಡು ಚಕ್ರಗಳನ್ನು ಹೊಂದಿರುತ್ತದೆ. ಇದರ ಪ್ರತಿಯೊಂದು ಚಕ್ರವೂ ಏಳು-ಅಡಿ ವ್ಯಾಸದ್ದಾಗಿರುತ್ತದೆ. ಕೆಂಪು ಮತ್ತು ಕಪ್ಪು ಬಟ್ಟೆಯ ಒಂದು ಹೊದಿಕೆಯೊಂದಿಗೆ ಈ ರಥವು ಅಲಂಕರಿಸಲ್ಪಟ್ಟಿರುತ್ತದೆ; ಕಪ್ಪು ಬಟ್ಟೆಯು ಶಕ್ತಿಯೊಂದಿಗೆ ಹಾಗೂ ಮಾತೆ ದೇವತೆಯೊಂದಿಗೆ ಸಾಂಪ್ರದಾಯಿಕವಾಗಿ ಸಂಬಂಧವನ್ನು ಹೊಂದಿರುತ್ತದೆ.

ರಥಗಳ ಪೈಕಿ ಪ್ರತಿಯೊಂದರ ಸುತ್ತಲೂ ಒಂಬತ್ತು ಪಾರ್ಶ್ವ ದೇವತೆಗಳು ಇರುತ್ತವೆ; ಇವು ಬಣ್ಣ ಬಳಿಯಲಾದ ಮರದ ಬಿಂಬಗಳಾಗಿದ್ದು, ರಥಗಳ ಪಾರ್ಶ್ವಗಳ ಮೇಲಿನ ವಿಭಿನ್ನ ದೇವರುಗಳನ್ನು ಅವು ಪ್ರತಿನಿಧಿಸುತ್ತವೆ. ರಥಗಳ ಪೈಕಿ ಪ್ರತಿಯೊಂದಕ್ಕೂ ನಾಲ್ಕು ಕುದುರೆಗಳನ್ನು ಜೋಡಿಸಲಾಗಿರುತ್ತದೆ. ಇವು ವಿಭಿನ್ನ ಬಣ್ಣಗಳಿಂದ ಕೂಡಿದ್ದು, ಬಿಳಿ ಕುದುರೆಗಳು ಬಲರಾಮನಿಗೂ, ಗಾಢವರ್ಣದವು ಜಗನ್ನಾಥನಿಗೂ, ಮತ್ತು ಕೆಂಪು ಬಣ್ಣದವು ಸುಭದ್ರಾ ದೇವಿಗೂ ಮೀಸಲಾಗಿರುತ್ತವೆ. ಪ್ರತಿ ರಥಕ್ಕೂ ಸಾರಥಿ ಎಂದು ಕರೆಯಲ್ಪಡುವ ಓರ್ವ ರಥ ನಡೆಸುವವನಿರುತ್ತಾನೆ. ಜಗನ್ನಾಥ, ಬಲರಾಮ ಮತ್ತು ಸುಭದ್ರಾರ ರಥಗಳಿಗೆ ಜೋಡಿಸಲಾದ ಮೂವರು ಸಾರಥಿಗಳನ್ನು ಕ್ರಮವಾಗಿ ಮಾತಲಿ, ದಾರುಕ ಮತ್ತು ಅರ್ಜುನ ಎಂದು ಕರೆಯಲಾಗುತ್ತದೆ.

ಚಂದನ ಜಾತ್ರಾ: ಶ್ರೀಗಂಧದ ಮರದ ಲೇಪದ ಉತ್ಸವ

ಬದಲಾಯಿಸಿ
 
ಭಾರತದ ಬೆಂಗಳೂರಿನಲ್ಲಿನ ರಥ ಜಾತ್ರಾ.

ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನವಾದ ಅಕ್ಷಯ ತೃತೀಯದಂದು, ಧಾರ್ಮಿಕ ಸಂಸ್ಕಾರದಿಂದ ಕೂಡಿದ ಅಗ್ನಿಪೂಜೆಯೊಂದಿಗೆ ರಥಗಳ ನಿರ್ಮಾಣವು ಆರಂಭವಾಗುತ್ತದೆ. ಪುರಿಯ ರಾಜನ ಅರಮನೆಯ ಮುಂಭಾಗದಲ್ಲಿ ಮತ್ತು ಪುರಿ ದೇವಸ್ಥಾನದ ಮುಖ್ಯ ಕಚೇರಿಯ ಎದುರಿಗೆ ಇದು ನೆರವೇರಿಸಲ್ಪಡುತ್ತದೆ. ಈ ದಿನದಂದು ವ್ಯವಸಾಯದ ಹೊಸ ಋತುವು ಆರಂಭವಾಗುತ್ತದೆ ಮತ್ತು ರೈತರು ತಮ್ಮ ಹೊಲಗಳನ್ನು ಉಳುವುದಕ್ಕೆ ಆರಂಭಿಸುತ್ತಾರೆ. ಮೂರು ವಾರಗಳವರೆಗೆ ನಡೆಯುವ ಹಾಗೂ ಶ್ರೀಗಂಧದ ಮರದ ಉತ್ಸವ ಅಥವಾ ಚಂದನ ಜಾತ್ರಾ ಎಂದೂ ಕರೆಯಲ್ಪಡುವ ದೇವರುಗಳ ಬೇಸಿಗೆ ಉತ್ಸವದ ಆರಂಭಕ್ಕೂ ಈ ದಿನವು ಅಂಕಿತ ಹಾಕುತ್ತದೆ. ಈ ಉತ್ಸವದಲ್ಲಿ, ಅಗ್ರಪೀಠದಲ್ಲಿರುವ ದೇವರುಗಳ ಪ್ರಾತಿನಿಧಿಕ ಮೂರ್ತಿಗಳನ್ನು ವರ್ಣರಂಜಿತ ಮೆರವಣಿಗೆಗಳಲ್ಲಿ ಹೊರಗೆ ತರಲಾಗುತ್ತದೆ ಹಾಗೂ ಪ್ರತಿದಿನವೂ ನರೇಂದ್ರ ಕೊಳದಲ್ಲಿ ಅವುಗಳಿಗೆ ಒಂದು ವಿಧ್ಯುಕ್ತವಾದ ತೆಪ್ಪೋತ್ಸವ ಸೇವೆಯನ್ನು ಸಲ್ಲಿಸಲಾಗುತ್ತದೆ. ಜಗನ್ನಾಥ ಪಂಥದ ಸಮೀಕೃತವಾಗಬಲ್ಲ ಪಾತ್ರದ ಅಥವಾ ಲಕ್ಷಣದ ಒಂದು ಸ್ವಾರಸ್ಯಕರ ನಿರೂಪಣೆಯಲ್ಲಿ, ಜಗನ್ನಾಥ ಹಾಗೂ ಬಲರಾಮರನ್ನು ಪ್ರತಿನಿಧಿಸುವ ಮದನಮೋಹನ ಮತ್ತು ರಾಮ ಕೃಷ್ಣ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ; ಇವರ ಜೊತೆಯಲ್ಲಿ ಪುರಿಯ ಐದು ಮುಖ್ಯ ಶಿವ ದೇವಸ್ಥಾನಗಳ ಅಗ್ರಪೀಠದಲ್ಲಿರುವ ದೇವರುಗಳ ಪ್ರಾತಿನಿಧಿಕ ಮೂರ್ತಿಗಳೂ ಸೇರಿಕೊಳ್ಳುತ್ತವೆ. ಕುತೂಹಲಕರವೆಂಬಂತೆ ಈ ಮೂರ್ತಿಗಳನ್ನು ಮಹಾಭಾರತ ಕಥೆಯ ಐವರು ಸೋದರರಾದ ಪಂಚ ಪಾಂಡವರು ಎಂದು ಕರೆಯಲಾಗುತ್ತದೆ. ನಂತರದಲ್ಲಿ, ಕೊಳದ ಮಧ್ಯದಲ್ಲಿನ ಸಣ್ಣ ದೇವಸ್ಥಾನವೊಂದರಲ್ಲಿ ಈ ದೇವರುಗಳಿಗೆ ಧಾರ್ಮಿಕ ಸಂಸ್ಕಾರದಿಂದ ಕೂಡಿದ ಸ್ನಾನವನ್ನು ಮಾಡಿಸಲಾಗುತ್ತದೆ; ಇದಕ್ಕಾಗಿ ಸಜ್ಜುಗೊಳಿಸಲಾಗುವ ಕಲ್ಲಿನ ತೊಟ್ಟಿಗಳಲ್ಲಿ ನೀರು, ಶ್ರೀಗಂಧದ ಮರದ ಲೇಪ, ಸುಗಂಧ ದ್ರವ್ಯಗಳು ಮತ್ತು ಹೂವುಗಳನ್ನು ತುಂಬಿಸಲಾಗಿರುತ್ತದೆ.

ಈ ಶ್ರೀಗಂಧದ ಮರದ ಉತ್ಸವವು ಸ್ನಾನ ಜಾತ್ರಾ ಎಂಬ ಆಚರಣೆಯಲ್ಲಿ ಸಮಾಪ್ತಿಗೊಳ್ಳುತ್ತದೆ; ಸ್ನಾನ ಜಾತ್ರಾ ಎಂಬುದು ಜೇಷ್ಠ ಮಾಸದ ಹುಣ್ಣಿಮೆಯ ದಿನದಂದು ಆಯೋಜಿಸಲ್ಪಡುವ ಸ್ನಾನದ ಉತ್ಸವವಾಗಿರುತ್ತದೆ. ಈ ದಿನದಂದು, ಅಗ್ರಪೀಠದಲ್ಲಿರುವ ದೇವರ ಮೂರ್ತಿಗಳು ತಮ್ಮ ಆಸನಗಳಿಂದ ಇಳಿದು, ಗರ್ಭಗುಡಿಯಲ್ಲಿನ ಒಂದು ಎತ್ತರಿಸಲಾದ ವೇದಿಕೆಯಾದ ಆಭರಣ ಭೂಷಿತ ಸಿಂಹಾಸನದ ಮೇಲೆ ವಿರಾಜಮಾನವಾಗುತ್ತವೆ. ಬಂಗಾರದ ಬಾವಿ ಎಂಬ ಅರ್ಥಕೊಡುವ ಸುನಾ ಕುವಾದಿಂದ ತಂದ ೧೦೮ ಕಲಶಗಳಷ್ಟು ನೀರಿನಿಂದ ಮೂರ್ತಿಗಳಿಗೆ ಸ್ನಾನಮಾಡಿಸಲಾಗುತ್ತದೆ ಹಾಗೂ ದೇವಸ್ಥಾನದ ಪೂರ್ವಭಾಗದ ಎಲ್ಲೆಗೋಡೆಗೆ ನಿಕಟವಾಗಿರುವ ವಿಶೇಷವಾದ ಸ್ನಾನದ ವೇದಿಕೆಯ ಮೇಲೆ ಮೂರ್ತಿಗಳು ಆನೆಯ ಸ್ವರೂಪವನ್ನು ಧರಿಸುತ್ತವೆ. ಆ ದಿನದಿಂದ ಮೊದಲ್ಗೊಂಡು ಸುಮಾರು ಎರಡು ವಾರಗಳವರೆಗೆ ದೇವರ ಮೂರ್ತಿಗಳು ಸಾಂಕೇತಿಕವಾದ ಮತ್ತು ಧಾರ್ಮಿಕ ಸಂಸ್ಕಾರದಿಂದ ಕೂಡಿದ ಚೇತರಿಕೆಯಲ್ಲಿ ಉಳಿದುಕೊಳ್ಳುತ್ತವೆ. ಸಾಮಾನ್ಯ ಭಕ್ತರು ಅವುಗಳನ್ನು ನೋಡುವುದಕ್ಕೆ ನಿಷೇಧ ಹೇರಲಾಗುತ್ತದೆ. ಅನ್ನಸಾರ ಪಟ್ಟಿಗಳು ಎಂದು ಕರೆಯಲ್ಪಡುವ ಕೇವಲ ಮೂರು ವಿಶೇಷವಾದ ಪಟ್ಟಾ ಚಿತ್ರಗಳನ್ನಷ್ಟೇ ಸಾರ್ವಜನಿಕರು ನೋಡಬಹುದಾಗಿರುತ್ತದೆ; ಗಂಜಿಯನ್ನು ಬಳಸಿಕೊಂಡು ಬಿಗಿಗೊಳಿಸಿದ ಬಟ್ಟೆಯ ಮೇಲೆ ನೈಸರ್ಗಿಕ ಬಣ್ಣಗಳನ್ನು ಬಳಸಿಕೊಂಡು ಚಿತ್ರಿಸಲಾದ ಒಡಿಶಾದ ಸಾಂಪ್ರದಾಯಿಕ ವರ್ಣಚಿತ್ರಗಳು ಇವಾಗಿದ್ದು, ಸಾರ್ವಜನಿಕರ ನೋಟದಿಂದ ದೇವರ ಮೂರ್ತಿಗಳನ್ನು ಮರೆಮಾಡಿರುವ ಬಿದಿರಿನ ಪರದೆಯೊಂದರ ಮೇಲೆ ಇವನ್ನು ತೂಗುಹಾಕಲಾಗಿರುತ್ತದೆ. ಈ ಅವಧಿಯ ಸಂದರ್ಭದಲ್ಲಿ, ದೇವರ ಮೂರ್ತಿಗಳಿಗೆ ಕೇವಲ ಕಂದಮೂಲಗಳು, ಎಲೆಗಳು, ಓಟೆಯಿಲ್ಲದ ರಸಭರಿತ ದುಂಡುಹಣ್ಣುಗಳು ಮತ್ತು ಹಣ್ಣುಗಳನ್ನು ನೀಡಲಾಗುತ್ತದೆ; ಅವುಗಳ ಅಸ್ವಸ್ಥತೆಯನ್ನು ವಾಸಿಮಾಡಲು ಇವನ್ನು ನೀಡಲಾಗುತ್ತದೆ ಎಂಬುದು ಪ್ರತೀತಿ. ಜಗನ್ನಾಥ ಪಂಥದ ಉಗಮ ಮತ್ತು ವಿಕಸನದಲ್ಲಿರುವ ಬುಡಕಟ್ಟಿನ ಪ್ರಬಲವಾದ ಅಂಶಗಳನ್ನು ಈ ಧಾರ್ಮಿಕ ಆಚರಣೆಯು ನೆನಪಿಸುತ್ತದೆ. ಲಲಿತಾಳ ಸಂತತಿ, ಮೂಲ ಬುಡಕಟ್ಟಿನ ಆರಾಧಕ ಬಿಶ್ವಬಸುವಿನ ಮಗಳು, ಬೇಟೆಗಾರರ ಮುಖ್ಯಸ್ಥ ಮತ್ತು ಬ್ರಾಹ್ಮಣ ಪೂಜಾರಿ ವಿದ್ಯಾಪತಿ ಇವರನ್ನು ದೈತಪತಿಗಳು ಅಥವಾ ದೈತರು ಎಂದು ಕರೆಯಲಾಗುತ್ತದೆ. ದೇವರುಗಳ ಚೇತರಿಕೆಯ ಅವಧಿಯಲ್ಲಿ ಹಾಗೂ ರಥ ಜಾತ್ರಾ ಅಥವಾ ರಥಗಳ ಉತ್ಸವದ ಸಂಪೂರ್ಣ ಅವಧಿಯ ಉದ್ದಕ್ಕೂ ಸ್ವಾಮಿಗೆ ಸೇವೆ ಸಲ್ಲಿಸುವಂಥ ಬಹುತೇಕ ಏಕಮಾತ್ರ ವಿಶೇಷ ಗೌರವವನ್ನು ಅವರು ಹೊಂದಿರುತ್ತಾರೆ.

ಅಂತರರಾಷ್ಟ್ರೀಯ ರಥ ಜಾತ್ರಾಗಳು

ಬದಲಾಯಿಸಿ
 
ISKCON ವತಿಯಿಂದ ನ್ಯೂಯಾರ್ಕ್‌ ನಗರದಲ್ಲಿ ಆಯೋಜಿಸಲ್ಪಟ್ಟ ರಥ ಜಾತ್ರಾ ಉತ್ಸವ

ISKCON ಹರೇ ಕೃಷ್ಣ ಆಂದೋಲನದ ದೆಸೆಯಿಂದಾಗಿ ರಥ ಜಾತ್ರಾ ಉತ್ಸವವು ೧೯೬೮ರಿಂದಲೂ ಪ್ರಪಂಚದ ಬಹುಪಾಲು ಪ್ರಮುಖ ನಗರಗಳಲ್ಲಿ ಒಂದು ಸಾಮಾನ್ಯ ದೃಶ್ಯವಾಗಿ ಮಾರ್ಪಟ್ಟಿದೆ. ಇದರ ಮುಖ್ಯಸ್ಥರಾಗಿದ್ದ A.C ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಸದರಿ ಉತ್ಸವವನ್ನು ಹಲವೆಡೆ ಯಶಸ್ವಿಯಾಗಿ ಸ್ಥಾಪಿಸಿದ್ದು, ಅದೀಗ ಪ್ರಪಂಚದೆಲ್ಲೆಡೆಯ ೧೦೦ಕ್ಕೂ ಹೆಚ್ಚಿನ ನಗರಗಳಲ್ಲಿನ ಸ್ಥಳಗಳಲ್ಲಿ ವಾರ್ಷಿಕ ಆಧಾರವೊಂದರ ಮೇಲೆ ಈಗ ಜರುಗುತ್ತಿವೆ. ಆ ನಗರಗಳೆಂದರೆ: ಡಬ್ಲಿನ್‌, ಬೆಲ್‌ಫಾಸ್ಟ್‌, ಬರ್ಮಿಂಗ್‌ಹ್ಯಾಂ, ಲಂಡನ್‌, ಬುಡಾಪೆಸ್ಟ್‌, ಮೆಲ್ಬೋರ್ನ್‌, ಮಾಂಟ್ರಿಯಲ್‌, ಪ್ಯಾರಿಸ್‌, ನ್ಯೂಯಾರ್ಕ್‌, ಸಿಂಗಪೂರ್‌, ಟೊರೊಂಟೊ, ಆಂಟ್‌ವೆರ್ಪ್‌, ಕೌಲಾಲಂಪುರ್‌‌ ಮತ್ತು ವೆನಿಸ್‌, CA.[] ಬಾಂಗ್ಲಾದೇಶದ ಧಮ್ರಾಯ್‌ ಎಂಬಲ್ಲಿ ನಡೆಯುವ ರಥಜಾತ್ರಾ ಉತ್ಸವವು, ಬಾಂಗ್ಲಾದೇಶದಲ್ಲಿನ ಅತ್ಯಂತ ಪ್ರಮುಖ ಆಚರಣೆಗಳ ಪೈಕಿ ಒಂದೆನಿಸಿದೆ.

ಇವನ್ನೂ ಗಮನಿಸಿ

ಬದಲಾಯಿಸಿ
  • ಜಗನ್ನಾಥ
  • ಜಗನ್ನಾಥ ದೇವಸ್ಥಾನ
  • ಪುರಿ
  • ಜಗ್ಗರ್‌‌ನಾಟ್‌‌‌
  • ತಿರುವರೂರ್‌ ರಥ ಉತ್ಸವ

ಉಲ್ಲೇಖಗಳು

ಬದಲಾಯಿಸಿ
  1. "ಭಾರತದ ಉತ್ಸವ". Archived from the original on 2009-02-25. Retrieved 2010-12-10.

http://www.rathjatra.nic.in

ಬಾಹ್ಯ ಕೊಂಡಿಗಳು

ಬದಲಾಯಿಸಿ