ಮೋಹನ್ ವರ್ಣೇಕರ್ (ಜೂನ್ ೨೨, ೧೯೫೦}} ಚುಕ್ಕೀ ಚಿತ್ರಗಾರರಾಗಿ ಮತ್ತು ಕನ್ನಡ ಬರಹಗಾರರಾಗಿ ಸುಪರಿಚಿತರಾಗಿದ್ದಾರೆ.

ಮೋಹನ್ ವರ್ಣೇಕರ್
Bornಜೂನ್ ೨೨, ೧೯೫೦
ಹೊನ್ನಾವರ ತಾಲ್ಲೂಕಿನ ಹೊಸಪಟ್ಟಣ
Occupation(s)ಚುಕ್ಕೀ ಚಿತ್ರ ಕಲಾವಿದರು, ಕಥೆಗಾರರು, ಕರ್ನಾಟಕ ವಿಧಾನಸಭೆಯ ಸಚಿವಾಲಯದ ನಿವೃತ್ತ ಅಧಿಕಾರಿಗಳು

ಪ್ರಖ್ಯಾತ ಚುಕ್ಕಿ ಚಿತ್ರ ಕಲಾವಿದ, ಬರಹಗಾರ ಮೋಹನ್ ವರ್ಣೇಕರ್ ಅವರು ಹುಟ್ಟಿದ ದಿನ ಜೂನ್ ೨೨, ೧೯೫೦. ಚುಕ್ಕಿ ಚಿತ್ರಕಲೆ ಮತ್ತು ಸಾಹಿತ್ಯ ಎರಡೂ ಪ್ರಕಾರಗಳಲ್ಲಿ ಅಪಾರ ಪರಿಣತಿ ಹೊಂದಿರುವ ಮೋಹನ್ ವೆರ್ಣೇಕರ್ ಅವರು ವಾಸುದೇವ ಶೇಟ್ ತುಳಸೀಬಾಯಿ ದಂಪತಿಗಳ ಮಗನಾಗಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಹೊಸ ಪಟ್ಟಣದಲ್ಲಿ ಜನಿಸಿದರು.

ಮೋಹನ್ ವರ್ಣೇಕರರ ಪ್ರಾರಂಭಿಕ ಶಿಕ್ಷಣ ಹೊಸಪಟ್ಟಣದಲ್ಲಿ ನಡೆಯಿತು. ಮುಂದೆ ವಿರಾಜಪೇಟೆಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನೂ, ಬೆಂಗಳೂರಿನ ಆಚಾರ್ಯ ಪಾಠ ಶಾಲಾ ಕಾಲೇಜಿನಲ್ಲಿ ಬಿ.ಎ. ಪದವಿ ವಿದ್ಯಾಭ್ಯಾಸವನ್ನೂ ನಡೆಸಿದ ಅವರು ಬೆರಳಚ್ಚು ಮತ್ತು ಶೀಘ್ರಲಿಪಿಯಲ್ಲಿ ಶ್ರೇಷ್ಠ ಶ್ರೇಣಿಯ ಸಾಧನೆ ಮಾಡಿದರು.

ಮೋಹನ್ ವರ್ಣೇಕರರು ಶಾಲೆಯಲ್ಲಿದ್ದಾಗಲೇ ತಮ್ಮ ಬರವಣಿಗೆಯನ್ನು ಪ್ರಾರಂಭಿಸಿದರು. ಅವರು ಹೈಸ್ಕೂಲಿನಲ್ಲಿದ್ದಾಗ ಹಿಂದಿ ಉಪಾಧ್ಯಾಯಿನಿಯೊಬ್ಬರು ಹಿಂದಿಯಿಂದ ಕನ್ನಡಕ್ಕೆ ಮಕ್ಕಳ ಕತೆಗಳನ್ನು ಅನುವಾದಿಸಲು ಉತ್ತೇಜಿಸುತ್ತಿದ್ದರಂತೆ. ಹೀಗೆ ಅವರು ಹಲವಾರು ಕತೆಗಳ ಅನುವಾದಗಳಿಂದ ತಮ್ಮ ಬರಹವನ್ನು ಪ್ರಾರಂಭಿಸಿದರು. ಒಮ್ಮೆ ತಾವು ಬರೆದ ಕತೆಯನ್ನು ವಿರಾಜಪೇಟೆಯಿಂದ ಪ್ರಕಟವಾಗುತ್ತಿದ್ದ ‘ಹಿತವಾಣಿ’ ಪತ್ರಿಕೆಗೆ ಕೊಟ್ಟು, ಅದು ಪ್ರಕಟಗೊಂಡಾಗ ಇವರ ಆನಂದಕ್ಕೆ ಪಾರವೇ ಇರಲಿಲ್ಲ. ನಂತರ ಬೆಂಗಳೂರಿಗೆ ಬಂದಾಗ ಪ್ರಜಾಮತ ಪತ್ರಿಕೆಗೂ ಹಲವಾರು ಮಕ್ಕಳ ಕತೆಗಳನ್ನು ಮೂಡಿಸಿದರು. ಹೀಗೆ ಮಕ್ಕಳ ಕತೆಯಿಂದಾರಂಭಿಸಿ ಕಾಲೇಜಿಗೆ ಬರುವ ವೇಳೆಗೆ ಅವರು ಹಲವಾರು ಪ್ರಬುದ್ಧ ಕತೆಗಳನ್ನು ಮೂಡಿಸಿದ್ದರು.

ಮುಂದೆ ವರ್ಣೇಕರರು ಕರ್ನಾಟಕ ವಿಧಾನ ಸಭೆಯ ಸಚಿವಾಲಯದಲ್ಲಿ ಅಭಿಲೇಖನಾಧಿಕಾರಿ (RECORDING OFFICER)ಗಳಾಗಿ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ತಮ್ಮ ಉದ್ಯೋಗದ ಜೊತೆ ಜೊತೆಗೆ ಅವರು ತಮ್ಮ ಬರವಣಿಗೆ ಹವ್ಯಾಸವನ್ನೂ ಮುಂದುವರೆಸಿದರು.

ಕಥೆ, ಕಾದಂಬರಿಗಾರರಾಗಿ

ಬದಲಾಯಿಸಿ

ತಮ್ಮ ಹಲವಾರು ಕತೆಗಳು ಪ್ರಕಟಗೊಂಡ ನಂತರದಲ್ಲಿ ಮೋಹನ್ ವರ್ಣೇಕರ್ ಅವರು ಬರೆದ ಮೊದಲ ಕಾದಂಬರಿ ‘ದಿಕ್ಕು’. ಆ ನಂತರದಲ್ಲಿ ಪ್ರೀತಿ-ಪ್ರೇಮಗಳ ನಡುವೆ, ಸ್ವರ್ಣ ಮಂದಾರ, ಕಪ್ಪುಬಾನಲ್ಲಿ ಚಂದಿರ ಮುಂತಾದ ಹಲವಾರು ಕಾದಂಬರಿಗಳು ಹೊರಬಂದವು. ಪ್ರಶಸ್ತಿ, ಪ್ರಾಪ್ತಿ, ಪ್ರೇಮಿಸಿದವರು, ಅವಳು ಕ್ಷಮಾತೀತಳು, ನರಸಿಂಹ ದೇವರಿಗಿಟ್ಟ ಚಿನ್ನದ ಕಿರೀಟ ಮುಂತಾದವು ಇವರ ಕಥಾ ಸಂಕಲನಗಳಾಗಿ ಹೊರಹೊಮ್ಮಿವೆ.

ಮಕ್ಕಳ ಸಾಹಿತ್ಯದಲ್ಲಿ

ಬದಲಾಯಿಸಿ

ಮಕ್ಕಳ ಸಾಹಿತ್ಯಕ್ಕೂ ವಿಶಿಷ್ಟ ಕೊಡುಗೆ ನೀಡಿರುವ ವರ್ಣೇಕರರು ನಮ್ಮ ಅಕ್ಕ, ಆದರ್ಶ ಗೆಳೆಯ, ಬಹುಮಾನ, ದಶಾವತಾರಗಳು, ಪ್ರಚಂಡ ಚೋರರು, ಧೀರ ಪುಟಾಣಿ, ಮೂರು ಮಕ್ಕಳ ನಾಟಕಗಳು ಮುಂತಾದ ಮಕ್ಕಳ ನಾಟಕಗಳನ್ನೂ; ಬಂಗಾರದ ಪೆಟ್ಟಿಗೆ, ನೀತಿ ಬೋಧಕ ಮಕ್ಕಳ ರಾಮಾಯಣ ಮೊದಲಾದ ಮಕ್ಕಳ ಕಥಾ ಸಂಕಲನಗಳನ್ನೂ; ಜಾಣಮರಿ; ಮೊಗ್ಗು ಮೊದಲಾದ ಶಿಶುಗೀತೆಗಳ ಸಂಗ್ರಹಗಳನ್ನೂ ಪ್ರಕಟಿಸಿದ್ದಾರೆ. ಅವರ ಮತ್ತೊಂದು ಮಕ್ಕಳ ಕಥಾನಕ ಸದ್ಯದಲ್ಲೇ ಹೊರಹೊಮ್ಮಲಿದೆ.

ವೈವಿಧ್ಯಪೂರ್ಣ ಬರಹಗಳು

ಬದಲಾಯಿಸಿ

ಮೋಹನ್ ವರ್ಣೇಕರರು ತಮ್ಮ ಕಥೆ, ಕಾದಂಬರಿಗಳಂತಹ ಗಂಭೀರ ಸಾಹಿತ್ಯದ ಜೊತೆಗೆ ನಗೆಲೇಖನ ಸಂಗ್ರಹಗಳು, ವ್ಯಕ್ತಿತ್ವ ವಿಕಸನ ಪುಸ್ತಕಗಳು ಮತ್ತು ದೈನಂದಿನ ಒತ್ತಡದ ನಡುವೆಯೂ ಆರೋಗ್ಯದತ್ತ ಎಚ್ಚರಿಸಲು ಸಹಾಯವಾಗುವಂತಹ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ವ್ಯಕ್ತಿತ್ವ ವಿಕಸನದ ಕೃತಿಗಳಾದ – ಆಕರ್ಷಕ ವ್ಯಕ್ತಿತ್ವವನ್ನೂ ಬೆಳೆಸಿಕೊಳ್ಳುವುದು ಹೇಗೆ?, ವ್ಯಕ್ತಿತ್ವ ವಿಕಸನ ಮಾರ್ಗದರ್ಶಿ, ಆಕರ್ಷಕ ವ್ಯಕ್ತಿತ್ವ ನಿಮ್ಮದಾಗಲಿ ಮುಂತಾದ ಕೃತಿಗಳ ಜೊತೆಗೆ ಮಾನಸಿಕ ಆರೋಗ್ಯ ಮತ್ತು ಸುಖೀ ದಾಂಪತ್ಯ ಜೀವನದ ಸಹಬಾಳ್ವೆಗೆ ಸಂಬಂಧಿಸಿದ ಕೃತಿಗಳಾದ ಮಾನಸಿಕ ಒತ್ತಡ-ನಿವಾರಣೋಪಾಯಗಳು, ಮಾನಸಿಕ ಒತ್ತಡ ಕಾಡುತ್ತಿದೆಯೇ? ಮನೋಖಿನ್ನತೆ, ನಿರ್ಲಕ್ಷ್ಯಬೇಡ, ಆತಂಕದಿಂದ ಹೊರಬನ್ನಿ, ಡಿಪ್ರೆಷನ್‌ ನಿವಾರಣೆಗೆ 108 ಸಲಹೆಗಳು, ವಾಕಿಂಗ್‌ಮಾಡಿ, ಗೀಳು ಮನೋರೋಗ, ಥೈರಾಯ್ಡ್‌ ತೊಂದರೆ, ಧೂಮಪಾನದಿಂದ ಮುಕ್ತರಾಗಬೇಕೆ?, ಅಂತಃಪುರದ ಅಂತರಂಗದ ಮಾತು, ಪತಿ-ಪತ್ನಿ ಸುಖವಾಗಿರಬೇಕು ಮುಂತಾದ ಅನೇಕ ಕೃತಿಗಳನ್ನೂ ಅವರು ಹೊರತಂದಿದ್ದಾರೆ.

ಹನ್ನೆರಡು ಕಥೆಗಾರರ ಕಥಾಸಂಗ್ರಹ ‘ವರ್ಷ, ನೂರು ಕವಿಗಳ ನೂರು ಕವನಗಳ ಸಂಗ್ರಹ ‘ಶತಮಾನ’, ಐವತ್ತು ಕವಿಗಳ ಕವನ ಸಂಗ್ರಹ ‘ಗುಚ್ಛ’ ಜೊತೆಗೆ ತಜ್ಞ ವೈದ್ಯರುಗಳು ಬರೆದ ಆರೋಗ್ಯಕ್ಕೆ ಸಂಬಂಧಿಸಿದ ಲೇಖನಗಳ ಕೃತಿ ‘ಆರೋಗ್ಯಸಂಜೀವಿನಿ’, ಎಸ್‌... ಡಿ. ಗಾಂವ್‌ಕರ್ ವ್ಯಕ್ತಿ ಪರಿಚಯದ ಗ್ರಂಥ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ತಿಂಗಳ ಕಾರ್ಯಕ್ರಮವಾದ ‘ಮನೆಯಂಗಳದಲ್ಲಿ ಮಾತುಕತೆ’ಯ ಕೃತಿ ರೂಪದ ಪುಸ್ತಕ ಮುಂತಾದವುಗಳನ್ನೂ ಮೋಹನ ವರ್ಣೇಕರರು ಸಂಪಾದಿಸಿದ್ದಾರೆ.

ಚುಕ್ಕೀ ಚಿತ್ರಗಾರರಾಗಿ

ಬದಲಾಯಿಸಿ

ಮೋಹನ ವರ್ಣೇಕರರ ಬರಹದ ಸಾಧನೆ ಒಂದು ಕಡೆಯಾದರೆ ಅವರ ಚಿತ್ತಾರದ ಮೋಹಕತೆ ಮತ್ತಷ್ಟು ಮಹತ್ತಿನದು. ಮೋಹನ ವರ್ಣೇಕರರಿಗೆ ಚಿತ್ರಕಲೆಯಲ್ಲಿ ಆಸಕ್ತಿ ಬೆಳೆದದ್ದು ಅವರ ತಾಯಿಯಿಂದಲೇ. ತಾಯಿ ಬಿಡಿಸುತ್ತಿದ್ದ ಕೃಷ್ಣನ ರೇಖಾಚಿತ್ರದಲ್ಲಿ ಪ್ರತಿರೇಖೆಯೂ ಜೀವತುಂಬಿ ನಿಂತಿರುತ್ತಿದ್ದ ಭವ್ಯತೆಯನ್ನು ಕಂಡು ಅವರಲ್ಲಿ ಚಿತ್ರಕಲೆಯಲ್ಲಿ ಅಪಾರ ಅಭಿರುಚಿ ಮೂಡಿಬಂತು. ಇದರ ಜೊತೆಗೆ ಒಮ್ಮೆ ಇವರ ಸ್ನೇಹಿತರ ಮನೆಯಲ್ಲಿ ಕಟ್ಟು ಹಾಕಿಸಿಟ್ಟಿದ್ದ ಪೆನ್ಸಿಲಿನ ವಿನ್ಯಾಸದಿಂದ ರೂಪುಗೊಂಡ ನಿಜಲಿಂಗಪ್ಪನವರ ಚಿತ್ರ ಇವರನ್ನು ಅಪಾರವಾಗಿ ಸೆಳೆದಿತ್ತು. ಹೀಗೆ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ತಳೆದ ಮೋಹನ ವರ್ಣೇಕರರು ಅ.ನ. ಸುಬ್ಬರಾಯರ ಕಲಾಮಂದಿರದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡಿದರು.

ಹೀಗೆ ಚಿತ್ರಕಲೆಯಲ್ಲಿ ಆಸಕ್ತಿಯನ್ನು ತಾಳಿ ಅದರಲ್ಲಿ ವಿಶಿಷ್ಟತೆಯನ್ನೇನಾದರೂ ಸಾಧಿಸಬೇಕು ಎಂದು ಮೋಹನ್ ವರ್ಣೇಕರರು ಆಯ್ಕೆಮಾಡಿಕೊಂಡ ಹಾದಿ ‘ಚುಕ್ಕಿ ಚಿತ್ರಕಲೆ’. ಇದು ತಾಳ್ಮೆ, ಏಕಾಗ್ರತೆ ಮತ್ತು ದೃಢಸಂಕಲ್ಪಗಳನ್ನು ಬೇಡುವ ಕಲೆಯಾಗಿದ್ದು ಸತತ ಆರೇಳು ಗಂಟೆಗಳ ಕಾಲ ಒಂದೆಡೆಯಲ್ಲೇ ಕುಳಿತು ಚಿತ್ರ ರಚಿಸಬೇಕಾದ ಶ್ರಮದಾಯಕ ಕಲೆ. ಇಂತಹ ಕಠಿಣ ಪರಿಶ್ರಮದಿಂದ ಈ ಕಲೆಯನ್ನು ಕರಗತ ಮಾಡಿಕೊಂಡಿರುವ ಮೋಹನ ವರ್ಣೇಕರರು ರೂಪಿಸಿದ ಮೋಹಕ ಚುಕ್ಕಿಚಿತ್ರಗಳು ಕನ್ನಡದ ಬಹುತೇಕ ಮಹತ್ವದ ಸಾಹಿತಿಗಳನ್ನು ಬಿಂಬಿಸಿವೆ. ತಮ್ಮ ಚಿತ್ರಗಳನ್ನು ಮೋಹನ ವರ್ಣೇಕರರ ಚುಕ್ಕಿ ಚಿತ್ರಣಗಳಲ್ಲಿ ಕಂಡ ಈ ಮಹನೀಯರೆಲ್ಲಾ ಸಂತಸಪಟ್ಟು ಹೃತ್ಪೂರ್ವಕವಾಗಿ ಇವರನ್ನು ಆಶೀರ್ವದಿಸಿದ್ದಾರೆ.

ಮೋಹನ್ ವರ್ಣೇಕರರು ಬಿಡಿಸಿದ ಇಂತಹ ಚಿತ್ರಗಳು ನಾಡಿನ ಪ್ರಮುಖ ಪತ್ರಿಕೆಗಳ ಉಗಾದಿ, ದೀಪಾವಳಿ ವಿಶೇಷಾಂಕಗಳಲ್ಲಿ ಮೂಡಿಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡಮಿ ಹೊರ ತಂದಿರುವ ‘ಸಾಲು ದೀಪಗಳು’ ಪರಿಷ್ಕೃತ (2001) ಆವೃತ್ತಿಯಲ್ಲಿ ಚುಕ್ಕಿ ಚಿತ್ರಗಳು, ಕನಕಪುರದಲ್ಲಿ ನಡೆದ 68ನೆಯ ಕನ್ನಡ ಸಾಹಿತ್ಯ ಸಮ್ಮೇಳನದ (1998) ಸಂದರ್ಭಕ್ಕಾಗಿ ಕಾರ್ಡ್ ರೂಪದಲ್ಲಿ ಕನ್ನಡ ಸಾಹಿತ್ಯ ಪರಷತ್ತಿಗಾಗಿ ಚುಕ್ಕಿಚಿತ್ರಗಳ ರಚನೆಯಲ್ಲಿ ಇವರ ಕಾಯಕ ವಿಶಿಷ್ಟವಾಗಿ ಹೊರಹೊಮ್ಮಿದೆ. ಇವರ ಕನ್ನಡ ಪ್ರಸಿದ್ಧ ನೂರು ಸಾಹಿತಿಗಳ ಚುಕ್ಕಿ ಭಾವಚಿತ್ರ ಮತ್ತು ಪರಿಚಯವನ್ನೊಳಗೊಂಡ ಗ್ರಂಥ “ಚುಕ್ಕಿಚಿತ್ರದಲ್ಲಿ ಶತಸಾಹಿತ್ಯ ಪ್ರತಿಭೆ” ಮೊದಲಿಗೆ 1999ರಲ್ಲಿ ಪ್ರಕಟಗೊಂಡು ಇದೀಗ ಮೂರನೆಯ ಮರುಮುದ್ರಣವನ್ನು ಕಾಣುತ್ತಿದೆ. ಇದಲ್ಲದೆ ‘ರಾಷ್ಟ್ರಚೇತನಗಳು’ ಎಂಬ ಚುಕ್ಕಿ ಚಿತ್ರ ಸಹಿತವಾದ ನಮ್ಮ ರಾಷ್ಟ್ರದ ಎಲ್ಲಾ ಮಹಾನ್ ಚೇತನಗಳನ್ನು ನಿರೂಪಿಸುತ್ತಿರುವ ಇವರ ಕಾಯಕ ಬರುವ ಸೆಪ್ಟೆಂಬರ್ ವೇಳೆಗೆ ಹೊರಹೊಮ್ಮಲಿದೆ.

ಸಂದ ಗೌರವಗಳು

ಬದಲಾಯಿಸಿ

ಹಲವಾರು ಪತ್ರಿಕೆಗಳಲ್ಲಿ, ಆಕಾಶವಾಣಿ, ವಿವಿಧ ದೂರದರ್ಶನ ಚಾನೆಲ್ಲುಗಳಲ್ಲಿ ಅವರ ಕುರಿತಾದ ಕಾರ್ಯಕ್ರಮ, ಸಂದರ್ಶನಗಳು ಹಲವು ದಶಕಗಳಿಂದ ಮೂಡಿಬಂದಿವೆ. ಹಲವಾರು ಪ್ರಶಸ್ತಿ ಗೌರವಗಳು ಅವರನ್ನರಸಿ ಬಂದಿವೆ. ಕನ್ನಡದ ಶ್ರೇಷ್ಠ ವ್ಯಕ್ತಿಗಳ ಸಾಹಚರ್ಯ ಪ್ರೀತಿ ಅವರ ಮೇಲೆ ವರ್ಷಿಸಿದೆ. ಇವರು ತಮ್ಮ ವಿವಿಧ ಪ್ರಕಾರದ ಚಟುವಟಿಕೆಗಳಿಗಾಗಿ ಗೊರೂರು ಸಾಹಿತ್ಯ ಪ್ರಶಸ್ತಿ, ಕನ್ನಡಸಿರಿ, ರಾಜಕುಮಾರ್ ಸದ್ಭಾವನಾ ಪುರಸ್ಕಾರ, ಬಸವನಗುಡಿ ರತ್ನ, ದೈವಜ್ಞ ಭೂಷಣ ಮುಂತಾದ ಪ್ರಶಸ್ತಿ ಪುರಸ್ಕಾರಗಳನ್ನು ಸ್ವೀಕರಿಸಿರುವುದಲ್ಲದೆ ಹಲವಾರು ಸಂಘ-ಸಂಸ್ಥೆಗಳಿಂದಲೂ ಗೌರವಿಸಲ್ಪಟ್ಟಿದ್ದಾರೆ.