ಮಿಲ್ಖಾ ಸಿಂಗ್‌ (ಹಿಂದಿ:मिलखा सिंह) (ಜನನ: 1929ರ ಅಕ್ಟೋಬರ್‌20 ರಂದು-ಮರಣ: ೨೦೨೧ ರ ಜೂನ್ ೧೮ ರಂದು) ಭಾರತೀಯ ಕ್ರೀಡಾಪಟು ಮತ್ತು ಅಥ್ಲೀಟ್‌. ಇವರು ಭಾರತದ ಪರವಾಗಿ, 1960ರಲ್ಲಿ ರೋಮ್ ಹಾಗೂ‌ 1964ರಲ್ಲಿ ಟೋಕಿಯೋ ಸಮ್ಮರ್ ಒಲಿಂಪಿಕ್‌ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿದರು. ಅವರಿಗೆ ಫ್ಲೈಯಿಂಗ್‌ ಸಿಖ್‌ ಎಂಬ ಸಂಕ್ಷಿಪ್ತ ಉಪಾಧಿ ಇದೆ. ಭಾರತ ಕಂಡ ಮಹಾನ್‌ ಅಥ್ಹೀಟ್‌ಗಳಲ್ಲಿ ಇವರೂ ಒಬ್ಬರು ಎನ್ನಲಾಗಿದೆ. ಜೊತೆಗೆ, ಇಂದು ವೃತ್ತಿಪರ ಗಾಲ್ಫ್‌ನಲ್ಲಿ ಸಾಧನೆಗೈಯುತ್ತಿರುವ ಜೀವ್‌ ಮಿಲ್ಖಾ ಸಿಂಗ್‌ ಮಿಲ್ಖಾರ ಪುತ್ರ.

ಮಿಲ್ಖಾ ಸಿಂಗ್
೨೦೧೨ ರಲ್ಲಿ ಚಂಢಿಗಢದಲ್ಲಿ ಮಿಲ್ಕಾ ಸಿಂಗ್
ಜನನ೧೯೩೫
ಗೋವಿಂದಪುರಾ, ಪಂಜಾಬ್,
ಮರಣ೨೦೨೧, ಜೂನ್, ೧೮, ಶುಕ್ರವಾರ
ಚಂಧೀಗಡ್
ರಾಷ್ಟ್ರೀಯತೆಭಾರತಿಯ
ಇತರೆ ಹೆಸರುಗಳುಫ್ಲೈಯಿಂಗ್ ಸಿಖ್
ಉದ್ಯೋಗಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾಪಟು
ಉದ್ಯೋಗದಾತರುನಿವೃತ್ತ; ಹಿಂದೆ ಭಾರತೀಯ ಸೇನೆಯ ಮತ್ತು ಪಂಜಾಬ್ ಸರ್ಕಾರ,
ಜೀವನ ಸಂಗಾತಿನಿರ್ಮಲ್ ಕೌರ್
ಮಕ್ಕಳು3 ಹೆಣ್ಣು ಮಕ್ಕಳು; 1 ಮಗ; 1 ದತ್ತು ಮಗ

ಬಾಲ್ಯದಿನಗಳು ಬದಲಾಯಿಸಿ

ಮಿಲ್ಖಾ ಸಿಂಗ್‌ ಲ್ಯಾಲ್ಪುರದಲ್ಲಿ ಜನಿಸಿದರು. 1947ರಲ್ಲಿ ಭಾರತದ ಇಬ್ಭಾಗದೊಂದಿಗೆ ಸಂಭವಿಸಿದ ನರಮೇಧದಲ್ಲಿ ಅವರ ಹೆತ್ತವರನ್ನು ಕಳೆದುಕೊಂಡರು. ಭಾರತ ಇಬ್ಭಾಗವಾದ ಕಾಲದಲ್ಲಿ 12ರ ವಯಸ್ಸಿನ ಬಾಲಕ ಮಿಲ್ಖಾನ ಕಣ್ಣೆದುರಿಗೇ ಆತನ ಹೆತ್ತವರ ಹತ್ಯೆ ಮಾಡಲಾಗಿತ್ತು.

ವೃತ್ತಿಜೀವನ ಬದಲಾಯಿಸಿ

ಅವರು ದೈವದತ್ತ ಪ್ರತಿಭಾಶಾಲಿ, ಅಥ್ಲೀಟ್‌ ಎನಿಸಿಕೊಂಡ ಮಿಲ್ಖಾ ಸಿಂಗ್‌, 200 ಮೀಟರ್‌ ಹಾಗೂ 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಗೆದ್ದು, ಭಾರತದ ಬಹು ಯಶಸ್ವಿ ಅಥ್ಲೀಟ್ ಎನಿಸಿಕೊಂಡರು.

ಅಂತಾರಾಷ್ಟ್ರೀಯ ವೃತ್ತಿಜೀವನ ಬದಲಾಯಿಸಿ

  • 1956ರಲ್ಲಿ ನಡೆದ ಮೆಲ್ಬೊರ್ನ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಮಿಲ್ಖಾ ಸಿಂಗ್‌ ಭಾರತ ತಂಡದ ಅಥ್ಲೀಟ್‌ ಆಗಿ ಸ್ಪರ್ಧಿಸಿದರು. ಇದರೊಂದಿಗೆ ಅವರು ಮೊದಲ ಬಾರಿಗೆ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದರು. ಸಾಕಷ್ಟು ಅನುಭವವಿಲ್ಲದ ಕಾರಣ ಮಿಲ್ಖಾ ಸಿಂಗ್‌ ಉತ್ತಮವಾಗಿ ಸ್ಪರ್ಧಿಸಲಾಗಲಿಲ್ಲ. ಈ ಸ್ಪರ್ಧೆಯಿಂದ ಅವರು ಸಾಕಷ್ಟು ಕಲಿತು, ಮುಂಬರುವ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಪೈಪೋಟಿ ನೀಡಲು ಬಹಳಷ್ಟು ಪೂರ್ವಸಿದ್ಧತೆ ನಡೆಸಲು ಉಪಯುಕ್ತವಾಯಿತು.
  • 1958ರಲ್ಲಿ ಯುನೈಟೆಡ್‌ ಕಿಂಗ್ಡಮ್‌ನ ವೇಲ್ಸ್‌ ರಾಜಧಾನಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ ಗೆದ್ದು ಅದನ್ನು ಸ್ವೀಕರಿಸುವಾಗ, ಸಿಖ್ ಧರ್ಮದ ಪ್ರಕಾರ ವಸ್ತ್ರ ಆಚ್ಛಾದಿತ ಅವರ ತಲೆಟೋಪಿಯಿಂದಾಗಿ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ಸಾಕಷ್ಟು ಗಮನ ಸೆಳೆದರು. 1960 ಸಮಯದಲ್ಲಿ, ಪಾಕಿಸ್ತಾನದಲ್ಲಿ ನಡೆಯಲಿದ್ದ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು ಮಿಲ್ಖಾ ಅಮಂತ್ರಣ ಬಂದಿತ್ತಾದರೂ, ಭಾರತ ಇಬ್ಭಾಗದ ನಂತರದ ದಾರುಣ ಬಾಲ್ಯದ ನೆನಪುಗಳು ಮರುಕಳಿಸುತ್ತಿದ್ದ ಕಾರಣ, ಅವರು ಅಲ್ಲಿ ಭಾಗವಹಿಸುವ ಆಸಕ್ತಿ ತೋರಲಿಲ್ಲ.
  • ಈ ಕಾರಣಗಳಿಂದಾಗಿ ಅವರು ಸ್ಪರ್ಧಿಸಲು ಹಿಂಜರಿದಲ್ಲಿ, ರಾಜಕೀಯ ಪರಿಣಾಮಗಳ ಕುರಿತು ಜನರಿಗೆ ತಳಮಳವಿತ್ತು. ಇದರಿಂದಾಗಿ, ಪಾಕಿಸ್ಥಾನ ಅತಿಥ್ಯ ವಹಿಸಿದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವಂತೆ ಮಿಲ್ಖಾ ಸಿಂಗ್‌ರನ್ನು ಒತ್ತಾಯಿಸಲಾಯಿತು. ನಂತರ ಅವರು ಸ್ಪರ್ಧೆಯಲ್ಲಿ ಓಡಲು ನಿರ್ಧರಿಸಿದರು.ಓಟದಲ್ಲಿ ಮಿಲ್ಖಾ ಸಿಂಗ್‌ ತಮ್ಮ ಎಲ್ಲ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ, ಬಹಳ ಸುಲಭವಾಗಿ ಜಯಗಳಿಸಿದರು. ಇದರಿಂದಾಗಿ ಅವರಿಗೆ (ಫ್ಲೈಯಿಂಗ್ ಸಿಖ್) ವೇಗವಾಗಿ ಚಲಿಸುವ,ಹಾರುವ ಸಿಖ್ ‌ಎನ್ನಲಾಯಿತು.

ಸ್ವರ್ಣಯುಗ ಬದಲಾಯಿಸಿ

  • ಒಬ್ಬ ಅಥ್ಲೀಟ್‌ ಆಗಿ ಮಿಲ್ಖಾ ಸಿಂಗ್‌ರ ಪಾಲಿಗೆ 1958ರಿಂದ 1960ರ ತನಕದ ಅವಧಿಯು ಸ್ವರ್ಣಯುಗ ಎನ್ನಬಹುದು. 1958ರಲ್ಲಿ ಟೋಕಿಯೋದಲ್ಲಿ ನಡೆದ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ ಮಿಲ್ಖಾ ಸಿಂಗ್‌, 200 ಮೀಟರ್‌ ಮತ್ತು 400 ಮೀಟರ್‌ ಓಟ ಸ್ಪರ್ಧೆ ಗಳಲ್ಲಿ ಕ್ರಮವಾಗಿ 21.6 ಸೆಕೆಂಡ್‌ಗಳು ಹಾಗೂ 47 ಸೆಕೆಂಡ್‌ಗಳಲ್ಲಿ ಓಡಿ, ಸ್ವರ್ಣ ಪದಕ ಗಳಿಸಿದರು.
  • 1958ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ, ಮಿಲ್ಖಾ ಸಿಂಗ್ ತಮ್ಮ 400 ಮೀಟರ್ ಓಟದ ದಾಖಲೆಯನ್ನು ಉತ್ತಮಗೊಳಿಸಿದರು. 46.16 ಸೆಕೆಂಡ್‌ಗಳಲ್ಲಿ 400 ಮೀಟರ್‌ ಓಟ ಮುಗಿಸಿ ಪುನಃ ಸ್ವರ್ಣ ಪದಕ ಗಳಿಸಿದರು. ಇದರೊಂದಿಗೆ, ಮಿಲ್ಖಾ ಸಿಂಗ್ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ‌, ಸ್ವತಂತ್ರ ಭಾರತದ ಮೊಟ್ಟಮೊದಲ ಸ್ವರ್ಣ ಪದಕ ವಿಜೇತ ಎಂಬ ಕೀರ್ತಿ ಪಡೆದರು.

ಒಲಿಂಪಿಕ್‌ ದಿಗ್ಗಜ ಬದಲಾಯಿಸಿ

  • 1960ರಲ್ಲಿ ರೋಮ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟವು ಮಿಲ್ಖಾ ಸಿಂಗ್‌ರಿಗೆ ಬಹಳ ಮುಖ್ಯ ಘಟನೆಯಾಗಿತ್ತು. ರೋಮ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ 400 ಮೀಟರ್‌ ಓಟದ ಆರಂಭಿಕ ಸುತ್ತಿನಲ್ಲಿ ಮಿಲ್ಖಾ 400 ಮೀಟರ್‌ ಓಟವನ್ನು 47.6 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ, ಎರಡನೆ ಯ ಸ್ಥಾನ ಗಳಿಸಿದರು. ಎರಡನೆಯ ಸುತ್ತಿನಲ್ಲಿ ಅವರು ಪುನಃ ತಮ್ಮ ದಾಖಲೆಯನ್ನು ಉತ್ತಮಗೊಳಿಸಿ, 46.5 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೆಯ ಸ್ಥಾನ ಗಳಿಸಿದರು. ಈ ಬಾರಿ ಜರ್ಮನಿಯ ಕಾರ್ಲ್‌ ಕೌಫ್ಮನ್ ಮಿಲ್ಖಾಗಿಂತಲೂ ವೇಗವಾಗಿ ಓಡಿದ್ದರು. ‌
  • ಸೆಮಿಫೈನಲ್‌ ಸುತ್ತಿನಲ್ಲಿ ಮಿಲ್ಖಾ ಸಿಂಗ್‌ ಮತ್ತೊಮ್ಮೆ ಎರಡನೆಯ ಸ್ಥಾನ ಗಳಿಸಿದರು. ಈ ಸಲ ಅವರು ತಮ್ಮ ಓಟದ ಅವಧಿಯನ್ನು 45.9 ಸೆಕೆಂಡ್‌ಗಳಿಗೆ ಉತ್ತಮಗೊಳಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ಒಟಿಸ್‌ ಡೇವಿಸ್‌ ಮಾತ್ರ ಮಿಲ್ಖಾಗಿಂತಲೂ ವೇಗವಾಗಿದ್ದರು. ಅಂತಿಮ ಸುತ್ತಿನಲ್ಲಿ, ಮಿಲ್ಖಾ ಸಿಂಗ್‌ ಇತರೆ ಪ್ರತಿಸ್ಪರ್ಧಿಗಳಿಗಿಂತಲೂ ಶರವೇಗದಲ್ಲಿ ಓಡಿ, ಸುಮಾರು 250 ಮೀಟರ್ ದೂರದ ತನಕ ಅಗ್ರಸ್ಥಾನದಲ್ಲಿದ್ದರು.
  • ಆಗ ಅವರು ತಮ್ಮ ವೇಗವನ್ನು ತಪ್ಪಾಗಿ ಲೆಕ್ಕಿಸಿ, ಓಡುವ ಗತಿಯನ್ನು ತುಸು ನಿಧಾನಿಸುವುದರ ಮೂಲಕ ತಮ್ಮ ಜೀವಾವಧಿಯ ಹಾಗೂ ಭಾರತದ ಅಥ್ಲೆಟಿಕ್ಸ್‌ ಇತಿಹಾಸದ ದೃಷ್ಟಿಯಿಂದ, ಅಪಾರ ತಪ್ಪೆಸಗಿದರು. ಉಳಿದ ದೂರವನ್ನು ಕ್ರಮಿಸಲು ತಮ್ಮ ಜೀವಾವಧಿಯಲ್ಲೇ ಶತಪ್ರಯತ್ನ ಮಾಡಿದರೂ, ಇತರೆ ಪ್ರತಿಸ್ಪರ್ಧಿಗಳು ಮಿಲ್ಖಾ ಸಿಂಗ್‌ರನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಧಾವಿಸಿದ್ದರು.
  • ಈ ಸ್ಪರ್ಧೆಯು ಅದೆಷ್ಟು ಜಟಿಲವಾಗಿತ್ತೆಂದರೆ ಒಟಿಸ್‌ ಡೇವಿಸ್‌ ಮತ್ತು ಕಾರ್ಲ್‌ ಕೌಫ್ಮನ್‌ 44.9 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ 45.5 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ಅಂತಿಮ ಸುತ್ತಿನ ಆರಂಭ ಹಂತದಲ್ಲಿ ಎಲ್ಲರಿಗಿಂತಲೂ ಮುಂದಿದ್ದ ಮಿಲ್ಖಾ ಸಿಂಗ್‌, ಮಾಲ್ಕಮ್‌ ಸ್ಪೆನ್ಸ್‌ಗಿಂತ ಕೇವಲ 0.1 ಸೆಕೆಂಡಷ್ಟು ತಡವಾಗಿ, ಅಂದರೆ, 45.6 ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ವ್ಯತ್ಯಾಸವು ನಗಣ್ಯ ಎನ್ನುವಷ್ಟು ಕಡಿಮೆಯಿತ್ತು.
  • ಮೊದಲ ಮೂರು ಸ್ಥಾನ ಪ್ರಕಟಿಸುವುದನ್ನು ವಿಳಂಬಿತಗೊಳಿಸಲಾಯಿತು. ಈ ಓಟವನ್ನು ಬಹಳಷ್ಟು ಬಾರಿ ವೀಡಿಯೊ ಚಿತ್ರಣವನ್ನು ಗಮನಿಸಿ ನಿರ್ಣಯಿಸಲಾಯಿತು. ಇದರಿಂದಾಗಿ, ಸ್ವರ್ಣಪದಕ ಗೆಲ್ಲಬಹುದೆಂಬ ನಿರೀಕ್ಷೆ ಹೊತ್ತಿದ್ದ ಮಿಲ್ಖಾ ಸಿಂಗ್‌ಗೆ ಕಂಚಿನ ಪದಕವು ಸೂಜಿನ ಮೊನಚಿನ ಷ್ಟು ಅಂತರದಲ್ಲಿ ಕೈತಪ್ಪಿತು.

ನಿವೃತ್ತಿಯ ನಂತರದ ಜೀವನ ಬದಲಾಯಿಸಿ

ನಿವೃತ್ತಿಯ ನಂತರ ಮಿಲ್ಖಾ ಸಿಂಗ್‌ ಪಂಜಾಬ್‌ ರಾಜ್ಯದಲ್ಲಿ ಕ್ರೀಡಾ ಇಲಾಖೆಯ ನಿರ್ದೇಶಕರ ಹುದ್ದೆಯಲ್ಲಿದ್ದರು. ಮಿಲ್ಖಾ ಸಿಂಗ್‌ರ ಜೀವಗಾಥೆಯನ್ನು ಹಿಂದಿ ಚಲನಚಿತ್ರ 'ಭಾಗ್‌ ಮಿಲ್ಖಾ ಭಾಗ್‌ (भाग मिलखा भाग) 'ನಲ್ಲಿ ನಿರೂಪಿಸಲಾಗಿದೆ. ಖ್ಯಾತ ಹಿಂದಿ ಚಲನಚಿತ್ರ ನಿರ್ದೇಶಕ ರಾಕೇಶ್‌ ಒಂಪ್ರಕಾಶ್‌ ಮೆಹ್ರಾ ಈ ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ.[೧]

ಪ್ರಶಸ್ತಿಗಳು ಮತ್ತು ಸಾಧನೆಗಳು ಬದಲಾಯಿಸಿ

  • 1958 ಏಷ್ಯನ್‌ ಕ್ರೀಡಾಕೂಟದಲ್ಲಿ 200 ಮೀಟರ್‌ ಹಾಗೂ 400 ಮೀಟರ್‌ ಓಟ ಸ್ಪರ್ಧೆಯಲ್ಲಿ ಸ್ವರ್ಣ ಪದಕ.
  • 1962ರ ಏಷ್ಯನ್‌ ಕ್ರೀಡಾಕೂಟದಲ್ಲಿ ಸ್ವರ್ಣ ಪದಕ.
  • 1959ರಲ್ಲಿ ಪದ್ಮಶ್ರೀ ಪ್ರಶಸ್ತಿ

ನಿಧನ ಬದಲಾಯಿಸಿ

ಮಿಲ್ಖಾ ಸಿಂಗ್ ಅವರು, (೯೧) ತಮ್ಮ ಚಂದೀಘಡ್ ನ ಸ್ಥಾನೀಯ ಆಸ್ಪತ್ರೆಯಲ್ಲಿ ೨೦೨೧ ರ, ಜೂನ್, ೧೮ ರ ರಾತ್ರಿ ನಿಧನರಾದರು.[೨],[೩]

ಉಲ್ಲೇಖಗಳು ಬದಲಾಯಿಸಿ

  1. "Rakeysh Mehra to bring Milkha Singh's life on screens". India Glitz.
  2. Milkha Singh passes away due to Covid-19 complications; PM Modi says ‘we have lost a colossal sportsperson- Nitin sharma,The Indian express June, 19, 2021, June 19, 2021
  3. Obituary|Milkha Singh, name synonymous with running to survive and succeed, has moved to a better world, Rakesh Rao,thehindu.com, June 19,2021

ಬಾಹ್ಯ ಕೊಂಡಿಗಳು ಬದಲಾಯಿಸಿ

ಅಡಿ ಟಿಪ್ಪಣಿ ಬದಲಾಯಿಸಿ

[ಸೂಕ್ತ ಉಲ್ಲೇಖನ ಬೇಕು]

  • 'ಮಿಲ್ಖಾಸಿಂಗ್' ಅವರ ಜನನದ ತಾರೀಖಿನ ಬಗ್ಗೆ ವಿವಾದಗಳಿವೆ. ಹಿಂದೆ ಪಾಕೀಸ್ಥಾನದ ಭಾಗವಾಗಿದ್ದ ಅವರ ಜನ್ಮಸ್ಥಳದ ದಸ್ತಾವೇಜಿನ ಪ್ರಕಾರ, ೨೦, ನವೆಂಬರ್ ೧೯೨೯ ಎಂದೂ, ಇತರ ರೆಕಾರ್ಡ್ಸ್ ಪ್ರಕಾರ ೧೭, ಅಕ್ಟೋಬರ್ ೧೯೩೫ ಎಂದೂ, ಮತ್ತು ಅವರ ಪಾಸ್ಪೋರ್ಟ್ ನಲ್ಲಿ ದಾಖಲಿಸಿರುವ ಮಾಹಿತಿಯಂತೆ ೨೦, ನವೆಂಬರ್ ೧೯೩೨ ಎಂದೂ ವರದಿಗಳಲ್ಲಿ ದಾಖಲಾಗಿದೆ.