ಮಿರ್ಜಾ ಮುಳ್ಳು
Alternanthera pungens | |
---|---|
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಗಣ: | ಕ್ಯಾರ್ಯೋಫಿಲಾಲೀಸ್ |
ಕುಟುಂಬ: | ಅಮರ್‍ಯಾಂತೇಸೀ |
ಕುಲ: | ಆಲ್ಟರ್‌ನ್ಯಾಂತೆರಾ |
ಪ್ರಜಾತಿ: | A. pungens
|
Binomial name | |
Alternanthera pungens | |
Synonyms | |
Alternanthera achyrantha R.Br. ex Sweet |
ಮಿರ್ಜಾ ಮುಳ್ಳು ಅಮರ‍್ಯಾಂತೇಸೀ ಕುಟುಂಬಕ್ಕೆ ಸೇರಿದ ಕಳೆಗಿಡ (ಖಾಕಿವೀಡ್).[೧][೨] ಮುಳ್ಳು ಹೊನಗೊನ್ನೆ ಸೊಪ್ಪು ಪರ್ಯಾಯನಾಮ. ಆಲ್ಟರ್‌ನ್ಯಾಂತೆರ ಪಂಜೆನ್ಸ್ ಇದರ ಸಸ್ಯ ವೈಜ್ಞಾನಿಕ ಹೆಸರು. ಇದು ಭಾರತದ ಸ್ಥಾನಿಕ ಸಸ್ಯವಲ್ಲ. ಉಷ್ಣವಲಯ ಅಮೆರಿಕ ಇದರ ತವರು ಎನ್ನಲಾಗಿದ್ದು ಈ ಶತಮಾನದ ಆದಿಯಲ್ಲಿ ಭಾರತಕ್ಕೆ ಬಂದಿರಬೇಕು ಎಂದು ಬರೆಯಲಾಗಿದೆ. ಪಾಳು ನೆಲಗಳಲ್ಲಿ, ಆಟದ ಮೈದಾನಗಳಲ್ಲಿ, ರಸ್ತೆ ಅಂಚುಗಳಲ್ಲಿ, ಮನೆಹಿತ್ತಲುಗಳಲ್ಲಿ ಕಳೆಗಿಡವಾಗಿ ಬೆಳೆಯುತ್ತದೆ.
ಬೆಳವಣಿಗೆ
ಬದಲಾಯಿಸಿಇದೊಂದು ದ್ವೈವಾರ್ಷಿಕ ಸಸ್ಯ. ನೆಲದ ಮೇಲೆ ಹಬ್ಬಿಕೊಂಡು ಬೆಳೆಯುತ್ತದೆ. ರೆಂಬೆಗಳು ಸುಮಾರು 0.70ಮೀ ಉದ್ದ ಇರುವುವು. ಗೆಣ್ಣುಗಳ ಬಳಿ ಬೇರೊಡೆಯುತ್ತ ಬಲುಬೇಗ ವಿಸ್ತರಿಸಿ ಬೆಳೆಯುವ ಈ ಗಿಡಕ್ಕೆ ಎಂಥ ಮಣ್ಣಾದರೂ ಸರಿಯೆ. ನೀರಿನ ಬರ ಇದ್ದರೂ ಅಥವಾ ನೀರು ಹೆಚ್ಚಾದರೂ ಇದರ ಬೆಳೆವಣಿಗೆ ಕುಂಠಿತವಾಗದು. ಬೇರು ಸಮೂಹ ಹೆಚ್ಚು ಆಳಕ್ಕೆ ಇಳಿಯುವುದಿಲ್ಲ.
ಸಸ್ಯ ವಿವರಣೆ
ಬದಲಾಯಿಸಿಕಾಂಡ ಉರುಳೆಯಂತಿದೆ. ಅದರ ಮೇಲೆ ಮೃದು ರೋಮಗಳುಂಟು. ಎಲೆಗಳು ಸರಳ ರೀತಿಯವು. ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿದೆ. ಅನನುಪರ್ಣಿ ಮಾದರಿಯವು. ಹೂಗಳು ಚಿಕ್ಕಗಾತ್ರದವು; ಎಲೆಗಳ ಕಕ್ಷಗಳಲ್ಲಿ ಸ್ಥಿರವಾಗಿರುವ ಅಸೀಮಾಕ್ಷಿ ರೀತಿಯ ಸ್ಪೈಕ್ ಹೂಗೊಂಚಲುಗಳಲ್ಲಿ ಅರಳುವುವು. ಪ್ರತಿಯೊಂದು ಹೂವಿನಲ್ಲಿ 5 ಪೇರಿಯಾಂತ್ ಹಾಲೆಗಳೂ 5 ಪುಂಕೇಸರಗಳೂ ಒಂಟಿ ಕಾರ್ಪೆಲಿನ ಅಂಡಾಶಯವೂ ಇದೆ. ಪ್ರತಿಯೊಂದು ಪೆರಿಯಾಂತ್ ಹಾಲೆಯ ತುದಿಯಲ್ಲೂ ಚೂಪಾದ ಮುಳ್ಳಿದೆ. ಕಾಯಿ ರೂಪುಗೊಂಡಾಗಲೂ ಈ ಹಾಲೆಗಳು ಉಳಿದಿದ್ದು ಫಲ ಪ್ರಸಾರಕ್ಕೆ ನೆರವಾಗುತ್ತದೆ. ಚಪ್ಪಟೆ ಅಟ್ಟೆಗಳಿಗೆ ಗಾಡಿಗಳ ರಬ್ಬರ್ ಚಕ್ರಗಳಿಗೆ ಅಂಟಿಕೊಂಡು ಬೀಜ ದೂರದೂರ ಪ್ರಸರಿಸಲು ಸಹಾಯಕವಾಗಿದೆ.
ಕಳೆ ನಿರ್ಮೂಲನೆ
ಬದಲಾಯಿಸಿಕಳೆಗಿಡವಾಗಿ ಬೆಳೆಯುವ ಮಿರ್ಜಾಮುಳ್ಳನ್ನು ತಡೆಗಟ್ಟುವ ಉಪಾಯವೆಂದರೆ ಗಿಡಗಳನ್ನು ಸಮೂಲವಾಗಿ ಕಿತ್ತೆಸೆದು, ಬೀಜಗಳು ಪಸರಿಸದಂತೆ ನೋಡಿಕೊಳ್ಳುವುದು.