ಮಾಸೂರು
ಮಾಸೂರು - ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕಿನ ಒಂದು ದೊಡ್ಡಗ್ರಾಮ. ಹಿರೇಕೆರೂರಿಗೆ ಆಗ್ನೇಯ ದಿಕ್ಕಿನಲ್ಲಿ 11 ಕಿಮೀ ದೂರದಲ್ಲಿ ರಾಣೆಬೆನ್ನೂರು ರೈಲು ನಿಲ್ದಾಣದಿಂದ ನೈರುತ್ಯಕ್ಕೆ 37 ಕಿಮೀ ದೂರದಲ್ಲಿದೆ.
ಇಲ್ಲಿ ಹಳೆಯ ಕೋಟೆಯೊಂದಿದೆ. ಇದನ್ನು ಮಹಮ್ಮದ್ ಆದಿಲ್‍ಷಾನ ಕಾಲದಲ್ಲಿ ಇಲ್ಲಿ ಅಧಿಕಾರಿಯಾಗಿದ್ದ ಮಹಮ್ಮದ್ ಖಾನ್ ಬಿನ್ ರಾಜಾಫರೀದ ಎಂಬವನು ಕಟ್ಟಿಸಿದ್ದೆಂದು (1635) ಒಂದು ಶಿಲಾಶಾಸನ ತಿಳಿಸುತ್ತದೆ.
ಮಾಸೂರಿನಿಂದ ದಕ್ಷಿಣಕ್ಕೆ 3 ಕಿಮೀ ದೂರದಲ್ಲಿ ಶಿಕಾರಿಪುರ ತಾಲ್ಲೂಕಿನ ಎಲ್ಲೆಗೆ ಸೇರಿದಂತೆ ಇರುವ ಮದಗದ ಈ ಭಾಗದ ದೊಡ್ಡ ಕೆರೆ. ಬಹುಶಃ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕಟ್ಟಿದ್ದು. ಮಾಸೂರಿನ ಮದಗದಕೆರೆಯ ಬಳಿ ಕೆಂಚವ್ವನ ಗುಡಿ ಇದೆ. ಶಿಕಾರಿಪುರ ಭಾಗದಲ್ಲಿ ಮಳೆ ಬಾರದಿದ್ದರೆ ಜನ ಮಾಸೂರಿನ ಕೆರೆಗೆ ಬಂದು ಕೆರೆಯ ಕೆಂಚವ್ವನನ್ನು ಪೂಜಿಸಿ ಮಳೆ ಕೊಡು ಎಂದು ಬೇಡಿಕೊಳ್ಳುವುದುಂಟು. ಮದಗದಕೆರೆ ಮತ್ತು ಅದಕ್ಕೆ ಸಂಬಂಧಿಸಿದ ಬಲಿದಾನ ಕುರಿತ ಜನಪದ ಗೀತೆಗಳು ಈ ಸುತ್ತಿನಲ್ಲಿ ಪ್ರಚಾರದಲ್ಲಿವೆ.
ಸರ್ವಜ್ಞನ ತಂದೆಯ ಊರು ಮಾಸೂರು ಎಂದು ಪ್ರತೀತಿ. ಸರ್ವಜ್ಞ ಮಾಸೂರಿನ ಅಂಬಲೂರಿನಲ್ಲಿ ಹುಟ್ಟಿ ಮಾಸೂರು ಮದಗದ ಕೆರೆಯ ಬಳಿ ಅಡ್ಡಾಡಿದ್ದನೆಂದು ಅವನ ತ್ರಿಪದಿಗಳಿಂದ ತಿಳಿದು ಬರುತ್ತದೆ