ಆದಿಲ್‌ ಶಾಹಿ ವಂಶ ೧೪೯೦ ರಿಂದ ೧೬೮೬ರ ವರೆಗೆ ಉತ್ತರ ಕರ್ನಾಟಕ ಮತ್ತು ದಖನ್ನಿನ ಬಹುಭಾಗದಲ್ಲಿ ಆಳ್ವಿಕೆ ನಡೆಸಿದ ರಾಜವಂಶ. ಬಿಜಾಪುರ ಇವರ ರಾಜಧಾನಿಯಾಗಿತ್ತು. ಬಹಮನಿ ರಾಜ್ಯ ನಾಶವಾದ ಬಳಿಕೆ ಹುಟ್ಟಿಕೊಂಡ ಶಾಹಿ ರಾಜ್ಯಗಳಲ್ಲಿ ಇದೂ ಒಂದು. ಯೂಸುಫ್ ಆದಿಲ್ ಶಾ ಈ ವಂಶದ ಸ್ಥಾಪಕ.[][][]

ಆದಿಲ್ ಶಾಹಿ ಸಾಮ್ರ್ಯಾಜ್ಯದ ನಕ್ಷೆ

ಹಿನ್ನಲೆ

ಬದಲಾಯಿಸಿ

ಆದಿಲ್‌ಶಾಹಿ ವಂಶ ಬಹುಮನಿ ಸಾಮ್ರಾಜ್ಯದ ಪತನಾನಂತರ ದಖನ್ನಿನಲ್ಲಿ ಸ್ಥಾಪಿತವಾದ ಐದು ಮುಸ್ಲಿಂ ರಾಜ್ಯಗಳಲ್ಲಿ ಒಂದು(1489). ಯೂಸುಫ್ ಆದಿಲ್‍‌‌ ಷಾ ಸ್ಥಾಪಕ. ಈತ ತುರ್ಕಿಯ ಸುಲ್ತಾನನ ಮಗ. ಅಣ್ಣನೊಂದಿಗೆ ವಿರೋಧ ಬೆಳೆದುದರಿಂದ ಭಾರತಕ್ಕೆ ಬಂದು ಬಹುಮನಿ ರಾಜ್ಯದ ವಝೀರ್ ಮಹಮ್ಮದ್ ಗವಾನನ ಹತ್ತಿರ ಕೆಲಸಕ್ಕೆ ಸೇರಿದ. ಹೀಗೆಂದು ಪ್ರಸಿದ್ಧ ಮುಸ್ಲಿಂ ಇತಿಹಾಸಕಾರ ಫೆರಿಸ್ತ ಬರೆದಿದ್ದಾನೆ. ಇದಕ್ಕೆ ಸರಿಯಾದ ಸಮರ್ಥನೆ ದೊರೆತಿಲ್ಲ. ಷಾ ಮತವಿಚಾರದಲ್ಲಿ ಅಂಧಾಭಿಮಾನಿಯಾಗಿರಲಿಲ್ಲ. ಆಗಿನ ಕಾಲಕ್ಕೆ ತಕ್ಕಂತೆ ಸುಖಲೋಲುಪನಾಗಿದ್ದರೂ ಅವನ ಕರ್ತವ್ಯನಿಷ್ಠೆ, ಅನ್ಯ ಧರ್ಮಸಹಿಷ್ಣುತೆ, ನ್ಯಾಯಪರತೆ-ಈ ಗುಣಗಳು ಎಲ್ಲರಿಗೂ ಮೇಲ್ಪಂಕ್ತಿಯಾಗಿದ್ದವು. ಬಿಜಾಪುರದ ದುರ್ಗನಿರ್ಮಾಣ ಇವನ ಕಾಲದಲ್ಲೇ ಆಯಿತು. ಪಾಂಡಿತ್ಯದಲ್ಲಿ, ಲಲಿತಕಲೆಗಳಲ್ಲಿ ಆಸಕ್ತಿ ಹೊಂದಿದ್ದ ಷಾ ನಾನಾದೇಶಗಳಿಂದ ವಿದ್ವಾಂಸರನ್ನೂ ಕಲಾಭಿಜ್ಞರನ್ನೂ ತನ್ನ ಆಸ್ಥಾನಕ್ಕೆ ಬರಮಾಡಿಕೊಂಡು ಅವರನ್ನೆಲ್ಲ ಗೌರವಿಸಿದ. ಮುಸ್ಲಿಂ ರಾಜ್ಯಗಳಾದ ಅಹಮದ್ ನಗರ, ಗೋಲ್ಕೊಂಡ, ಬೀದರ್, ಬಿಹಾರ್‍ಗಳೊಂದಿಗೆ ಸಖ್ಯವೇರ್ಪಡದೆ ಸ್ಪರ್ಧೆಯೇ ಹೆಚ್ಚಾಗಿ ಬೆಳೆದ ಪರಿಸ್ಥಿತಿಯನ್ನು ದಕ್ಷಿಣ ಪ್ರಬಲ ಹಿಂದೂ ಸಾಮ್ರಾಟರಾದ ವಿಜಯನಗರದ ರಾಜರು ತಮ್ಮ ಉತ್ಕರ್ಷಕ್ಕೆ ಉಪಯೋಗಿಸಿಕೊಂಡರಾದರೂ 1565ರಲ್ಲಿ ಈ ಐದು ಸುಲ್ತಾನರೂ ಕಲೆತು ರಕ್ಕಸತಂಗಡಿ ಕದನದಲ್ಲಿ ವಿಜಯನಗರದ ಪತನಕ್ಕೆ ಕಾರಣರಾದರು. ವಿಜಯನಗರದಂಥ ಬಲಿಷ್ಠ ಸಾಮ್ರಾಜ್ಯದಿಂದ ತಮಗೆ ಗಂಡಾಂತರವಿದೆಯೆಂದೂ, ಮುಸ್ಲಿಂ ಧರ್ಮದ ರಕ್ಷಣೆಗಾಗಿ ಧರ್ಮಯುದ್ಧ ಸಾರಬೇಕೆಂದೂ ಅವರೆಲ್ಲ ಒಟ್ಟಾದರು. ಬಹುಮನಿ ರಾಜರಂತೆ ಆದಿಲ್‍‌ಷಾಹಿಗಳು ಹಿಂದೂ ದ್ವೇಷಿಗಳಾಗಿರಲಿಲ್ಲ. ಎಷ್ಟೋ ಮರಾಠರು ಅವರ ಮಂತ್ರಿಗಳಾಗಿ, ರಾಜ್ಯದ ಆಡಳಿತದಲ್ಲಿ ಮುಖ್ಯಸ್ಥರಾಗಿದ್ದರು; ರಾಜ್ಯದ ಲೆಕ್ಕಗಳೆಲ್ಲವನ್ನೂ ಮರಾಠಿ ಭಾಷೆಯಲ್ಲಿ ಬರೆಸಲಾಯಿತು. ಈ ಸುಲ್ತಾನರ ಕಲಾಭಿಜ್ಞತೆಗೆ ಸಾಕ್ಷಿಯಾಗಿ ಬಿಜಾಪುರದಲ್ಲಿ ಇಂದಿಗೂ ಇರುವ ಕುರುಹುಗಳು:

 
ಗೋಲ್ ಗುಂಬಜ್
  1. ಗೋಳಗುಮ್ಮಟ ಅಥವಾ ಗೋಲ್‍‌ಗುಂಬಜ಼್
  2. ಜಾಮಿಯಾ ಮಸೀದಿ (ಅಸಂಪೂರ್ಣ)
  3. ಸುಭದ್ರವಾದ ಕೋಟೆಗೋಡೆಗಳು
  4. ಅಂತಃಪುರಗಳು ಮತ್ತು ಟಂಕಸಾಲೆಗಳು
  5. ಮೂರನೆಯ ಸುಲ್ತಾನ್ ಇಬ್ರಾಹಿಂನ ಗೋರಿಯಲ್ಲಿನ ಚಿತ್ರಾಲಂಕಾರ

ಇವು ಅವರ ಕಲಾ ವೈಭವವನ್ನು ನೆನಪಿಗೆ ತರುವುದಲ್ಲದೇ ಕಲಾದೃಷ್ಟಿಯಲ್ಲಿ ಹಿಂದೂ ಇಸ್ಲಾಮಿ ಸಂಯೋಗದ ವಾಸ್ತುಶಿಲ್ಪ ಸೌಂದರ್ಯವನ್ನು ಸಾರುತ್ತವೆ. ಆದಿಲ್‍‌ಷಾಹಿ ರಾಜಮನೆತನದಲ್ಲಿ ಯೂಸುಫ್ ಆದಿಲ್‍ ಷಾನಷ್ಟೇ ಪ್ರಸಿದ್ಧಿ ಪಡೆದ ಇನ್ನೊಬ್ಬ ಸುಲ್ತಾನ, 1579 ರಿಂದ 1626ರವರೆಗೆ ಆಳಿದ ಎರಡನೆಯ ಇಬ್ರಾಹಿಂ ಆದಿಲ್‍ ಷಾ, ಈ ಸುಲ್ತಾನರು ಔರಂಗಜೇಬ್ 1686ರಲ್ಲಿ ಬಿಜಾಪುರವನ್ನು ಸ್ವಾಧೀನಪಡಿಸಿಕೊಳ್ಳುವವರೆಗೂ ಸ್ವತಂತ್ರರಾಗಿ ಆಳಿದರು.

ಉಲ್ಲೇಖಗಳು

ಬದಲಾಯಿಸಿ