ಭಾರತವು ವಿಶ್ವದಲ್ಲಿ ಎಂಜಿನಿಯರ್‍ಗಳ ಅತ್ಯಂತ ದೊಡ್ಡ ಉತ್ಪಾದಕ ದೇಶವಾಗಿದೆ. ಆದರೆ ಇನ್ನೂ ಎಂಜಿನಿಯರ್‍ಗಳ ಗುಣಮಟ್ಟ ವಿಶ್ವ ಮಟ್ಟದಲ್ಲಿ ಕಳಪೆಯಾಗಿದ್ದು, ಸಾಕಷ್ಟು ಉತ್ತಮಗೊಳ್ಳಬೇಕಿದೆ.[ಸೂಕ್ತ ಉಲ್ಲೇಖನ ಬೇಕು] ಕೆಲವು ಅಂದಾಜಿನ ಪ್ರಕಾರ ಎಂಜಿನಿಯರಿಂಗ್ ಪದವೀಧರರು 7-8% ಮಾತ್ರ ಉತ್ತಮ ಉದ್ಯೋಗಕ್ಕೆ ತಕ್ಕುದಾದ ಅರ್ಹತೆ ಉಳ್ಳವರೆಂಬ ಅಭಿಪ್ರಾಯವಿದೆ.[ಸೂಕ್ತ ಉಲ್ಲೇಖನ ಬೇಕು][೧] ಭಾರತದಲ್ಲಿ, ಎಂಜಿನಿಯರಿಂಗ್ ಪದವಿಪೂರ್ವ ಮತ್ತು ಪದವಿ ಶಿಕ್ಷಣ, ಎಂಜಿನಿಯರಿಂಗ್ ಮತ್ತು ಅನ್ವಯಿಕ ವಿಜ್ಞಾನದಲ್ಲಿ ಶಿಕ್ಷಣ ಕೊಡುವ ಹಲವಾರು ಇಂಜಿನಿಯರಿಂಗ್ ಕಾಲೇಜುಗಳು ಇವೆ.
ಭಾರತದಲ್ಲಿ ತಾಂತ್ರಿಕ ತರಬೇತಿ ಕೇಂದ್ರಗಳ ಸೃಷ್ಟಿಯ ಅಗತ್ಯ ಬ್ರಿಟಿಷ್ ಆಳ್ವಿಕೆಯು ಆಡಳಿತಗಾರರ ಕಾಲದಲ್ಲಿ ಬಂದಿತು. ಆದರೆ ಮೇಲ್ವಿಚಾರಕ ಮುಖ್ಯ ಇಂಜಿನಿಯರ್‍ಗಳು ಹೆಚ್ಚಾಗಿ ಬ್ರಿಟನ್ನಿಂದ ನೇಮಿಸಲ್ಪಡುತ್ತಿದ್ದರು. ಕಡಿಮೆ ಶ್ರೇಣಿಗಳ ಉದಾಹರಣೆಗೆ ಕುಶಲಕರ್ಮಿಗಳು,ಕುಶಲಕಲಾವಿದರು ಮತ್ತು ಉಪ ತಾಂತ್ರಿಕ ಮೇಲ್ವಿಚಾರಕರು, ಇವರನ್ನು ಸ್ಥಳೀಯವಾಗಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಹೆಚ್ಚು ಭಾರತೀಯ ಕೆಲಸಗಾರರ ಅವಶ್ಯಕತೆಯು, ಸಶಸ್ತ್ರ ಸೇನಾ ಪಡೆಯ ಕಾರ್ಖಾನೆಗಳು ಮತ್ತು ಇತರ ಇಂಜಿನಿಯರಿಂಗ್ ಸಂಸ್ಥೆಗಳಿಗೆ ಜೋಡಿಸಲಾದ ಕೈಗಾರಿಕಾ ಶಾಲೆಗಳ ಸ್ಥಾಪನೆಗೆ ಕಾರಣವಾಯಿತು.
ಪ್ರಥಮ ಇಂಜಿನಿಯರಿಂಗ್ ಕಾಲೇಜನ್ನು 1847 ರಲ್ಲಿ ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಯಿತು. ಅದು ರೂರ್ಕಿಯಲ್ಲಿದ್ದ ಥಾಂಸನ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರ್ಸ್ ತರಬೇತಿ ಕೊಡುತ್ತಿತ್ತು. ಅದು ನಂತರ ಐಐಟಿ ರೂರ್ಕಿ ಆಗಲು ಕಾರಣವಾಯಿತು. ಅಲ್ಲಿ ದೊಡ್ಡ ಕಾರ್ಯಾಗಾರಗಳು ಮತ್ತು ಸಾರ್ವಜನಿಕ ಕಟ್ಟಡಗಳು ಕಟ್ಟಲ್ಪಟ್ಟವು. ಇವುಗಳ ಮೂಲಕ ಮೇಲು-ಗಂಗಾ ಕಾಲುವೆ ನಿರ್ಮಾಣವಾಯತು.[೨]
ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಭುವನೇಶ್ವರ, ಮುಂಬಯಿ, ದೆಹಲಿ, ಗಾಂಧಿನಗರ, ಗೌಹಾತಿ, ಹೈದರಾಬಾದ್, ಇಂದೂರ್, ಜೋದಪುರ, ಕಾನ್ಪುರ್, ಖರಗ್ ಪುರ್, ಮದ್ರಾಸ್, ಮಂಡಿ, ಪಟ್ನಾ, ರೂರ್ಕಿ, ರೋಪರ್ ಮತ್ತು ವಾರಣಾಸಿ, ಹೀಗೆ ಹದಿನಾರು ಕೇಂದ್ರಗಳಲ್ಲಿವೆ. ಎಲ್ಲಾ ಐಐಟಿಗಳು ರಾಷ್ಟ್ರೀಯ ಪ್ರಮುಖ ಶಿಕ್ಷಣ ಸಂಸ್ಥೆಗಳ ಸ್ಥಾನಮಾನ ಹೊಂದಿವೆ ಮತ್ತು ತಮ್ಮ ಪಠ್ಯಕ್ರಮವನ್ನು ನಿರ್ಧರಿಸುವ ಸ್ವಾಯತ್ತ ವಿಶ್ವವಿದ್ಯಾಲಯಗಳು. ಅನೇಕ ಐಐಟಿ ಗಳು ಯುರೋಪ್ ಮತ್ತು ಏಷ್ಯಾ ವಿಶ್ವವಿದ್ಯಾಲಯಗಳ ಅಂತಾರಾಷ್ಟ್ರೀಯ ಎಲ್.ಎ.ಒ.ಟಿ.ಎಸ್.ಇ. (LAOTSE), ನೆಟ್ವರ್ಕ್ ಸದಸ್ಯರು. ಎಲ್.ಎ.ಒ.ಟಿ.ಎಸ್.ಇ. ಸದಸ್ಯತ್ವ ಹೊಂದಿದ ಐಐಟಿಗಳು ಇತರ ದೇಶಗಳ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಹಿರಿಯ ವಿದ್ವಾಂಸರು ವಿನಿಮಯ ಮಾಡಿಕೊಳ್ಳಲು ಅನುಮತಿಸುತ್ತದೆ.[೨]
2014-2015ರಲ್ಲಿ ಭಾರತದಲ್ಲಿ ಎಂಜಿನಿಯರಿಂಗ್ ಶಿಕ್ಷಣದ ಸ್ಥಿತಿ
ಎಂಜಿನಿಯರಿಂಗ್ ಪದವಿಯ ಪ್ರವೇಶ ಪರೀಕ್ಷೆಗಳ ಕ್ಷಣಗಣನೆ ಆರಂಭವಾಗುತ್ತಿರುವ ಹೊತ್ತಿನಲ್ಲೇ ಬೃಹತ್ ತಂತ್ರಜ್ಞಾನ ಕಂಪೆನಿ ಎಚ್‌ಸಿಎಲ್ ಹೊಸತೊಂದು ಯೋಜನೆಯನ್ನು ಘೋಷಿಸಿದೆ. ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಈ ಯೋಜನೆಯಂತೆ ಕಂಪೆನಿ ಪದವಿ ಪೂರ್ವ ತರಗತಿ ಅಥವಾ ಹನ್ನೆರಡನೇ ತರಗತಿಯಲ್ಲಿ ಶೇಕಡಾ 85ರಷ್ಟು ಅಂಕ ಪಡೆದ 200 ವಿದ್ಯಾರ್ಥಿಗಳನ್ನು ನೇರವಾಗಿ ಕೆಲಸಕ್ಕೆ ನೇಮಿಸಿಕೊಳ್ಳಲಿದೆ. ಇವರು ಒಂಬತ್ತು ತಿಂಗಳ ಅವಧಿಯ ಶೈಕ್ಷಣಿಕ ತರಬೇತಿ ಮತ್ತು ಮೂರು ತಿಂಗಳ ಅವಧಿಯ ಪ್ರಾಯೋಗಿಕ ತರಬೇತಿಯ ನಂತರ ಕೆಲಸವಾರಂಭಿಸಲಿದ್ದಾರೆ. ಸಾಫ್ಟ್‌ವೇರ್ ಉದ್ಯಮದ ಆರಂಭಿಕ ಹಂತದ ಉದ್ಯೋಗಗಳಿಗೆ ಇವರನ್ನು ನೇಮಿಸಿಕೊಳ್ಳಲಾಗುವುದು. ಇವರು ವಾರ್ಷಿಕ ಸಂಬಳ ಕನಿಷ್ಠ 1.8 ಲಕ್ಷ ರೂಪಾಯಿಗಳಷ್ಟಿರುತ್ತದೆ ಎಂದು ಕಂಪೆನಿ ಹೇಳಿದೆ. ಒಂದು ವರ್ಷದ ಅವಧಿಯ ತರಬೇತಿಗೆ ಈ ವಿದ್ಯಾರ್ಥಿಗಳಿಗೆ ಶಿವನಾಡಾರ್ ವಿಶ್ವವಿದ್ಯಾಲಯದಿಂದ ಒಂದು ಪ್ರಮಾಣ ಪತ್ರ ದೊರೆಯಲಿದೆ. ಈ ವಿದ್ಯಾರ್ಥಿಗಳು ವಾರಾಂತ್ಯಗಳಲ್ಲಿ ಅಭ್ಯಾಸ ಮಾಡಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆಯುವುದಕ್ಕೂ ಸಂಸ್ಥೆ ಸಹಕರಿಸುತ್ತದೆಯಂತೆ.
2015–16ರ ಶೈಕ್ಷಣಿಕ ವರ್ಷದಲ್ಲಿ ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಭರ್ತಿಯಾಗದೆ ಉಳಿದ ಸೀಟುಗಳ ಸಂಖ್ಯೆ 14.97 ಲಕ್ಷ. ಈ ಅವಧಿಯಲ್ಲಿ ಕರ್ನಾಟಕದಲ್ಲಿರುವ 506 ಎಂಜಿನಿಯರಿಂಗ್ ಕಾಲೇಜುಗಳ ಒಟ್ಟು ಸೀಟುಗಳಲ್ಲಿ ಶೇಕಡ 33.24ರಷ್ಟು ಸೀಟುಗಳು ಭರ್ತಿಯಾಗಿರಲಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡುವ ಅಂಕಿ ಅಂಶಗಳು ಹೇಳುತ್ತವೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮತ್ತು ಪದವಿ ನೀಡುವ ವಿಶ್ವವಿದ್ಯಾನಿಲಯಗಳೆರಡೂ ನಮ್ಮ ಎಂಜಿನಿಯರಿಂಗ್ ಶಿಕ್ಷಣಕ್ಕೊಂದು ಸರಿಯಾದ ದಿಕ್ಕು ತೋರುವ ಕೆಲಸವನ್ನೂ ಮಾಡಲಿಲ್ಲ. ಕೆಲಮಟ್ಟಿಗೆ ಶೈಕ್ಷಣಿಕ ಗುಣಮಟ್ಟಕ್ಕೂ ಮಹತ್ವ ನೀಡಿದ ಕೆಲ ಕಾಲೇಜುಗಳಿಗೆ ಈಗಲೂ ವಿದ್ಯಾರ್ಥಿಗಳಿದ್ದಾರೆ. ಇದರ ಹೊರತಾದ ಎಲ್ಲ ಕಾಲೇಜುಗಳೂ ಮುಚ್ಚಿ ಹೋಗುತ್ತಿವೆ. ಕಳೆದ ವರ್ಷ ಅಧಿಕೃತವಾಗಿ ಮುಚ್ಚಿಹೋದ ಕಾಲೇಜುಗಳ ಸಂಖ್ಯೆ 52. ಈ ಸಂಖ್ಯೆ ಈ ವರ್ಷ ಮತ್ತಷ್ಟು ಹೆಚ್ಚುವ ಸಾಧ್ಯತೆಗಳು ಗೋಚರಿಸುತ್ತಿವೆ.
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ದೆಹಲಿ ಮೂಲದ ಆಸ್ಪೈರಿಂಗ್ ಮೈಂಡ್ಸ್ ಎಂಬ ಮಾನವ ಸಂಪನ್ಮೂಲ ಪೂರೈಕೆ ಸಂಸ್ಥೆ ದೇಶದ ಒಂದೂವರೆ ಲಕ್ಷ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಿತ್ತು. ಇದರ ಫಲಿತಾಂಶಗಳು ಹೇಳುವಂತೆ ಭಾರತದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವಿ ಪಡೆದವರಲ್ಲಿ ಶೇಕಡಾ 7ರಷ್ಟು ವಿದ್ಯಾರ್ಥಿಗಳು ಮಾತ್ರ ಅವರು ಕಲಿತ ಕ್ಷೇತ್ರದಲ್ಲಿ ಉದ್ಯೋಗ ಮಾಡಬಹುದಾದ ಕೌಶಲ ಮತ್ತು ಅರಿವನ್ನು ಹೊಂದಿದ್ದಾರೆ. [೫]